ಕಥೆ

ಬಿಗ್ ಬಿಲ್ ಭಾಗ-3

ಮೂಲ: ಸತ್ಯಜಿತ್ ರೇ

(Different Cultures: A collection of short stories by Pearson Longman UK)

ಅನುವಾದ: ಜಯಶ್ರೀ ಭಟ್

ಸಿಂಗಾಪುರ

ಮರುದಿನ   ಕಛೇರಿಯಲ್ಲಿ ಒಂದುಗಂಟೆ ಬಿಡುವು ಮಾಡಿಕೊಂಡು ರೈಲ್ವೇ ಸ್ಟೇಶನ್’ಗೆ ಹೋದ ತುಳಸಿ ಬಾಬು. ಅಲ್ಲಿ ಅವನ ಗುರುತಿನವನೇ ಇದ್ದಿದ್ದರಿಂದ ಟಿಕೆಟ್ ಬುಕ್ ಮಾಡಿಸುವುದು ಕಷ್ಟವಾಗಲಿಲ್ಲ. ಬಿಲ್ ಹೇಗಿದೆ ಎಂದು ಪ್ರದ್ಯೋತ್ ಬಾಬು ಕೇಳಿದ್ದಕ್ಕೆ ”ಚೆನ್ನಾಗಿದೆ” ಎಂದಷ್ಟೇ ಹೇಳಿ ”ನೀನು ಕೊಟ್ಟ ಫೋಟೋಗೆ ಫ್ರೇಮ್ ಹಾಕಿಸಬೇಕೆಂದಿದ್ದೇನೆ” ಎಂದ.

ಫೆಬ್ರವರಿ ಇಪ್ಪತ್ನಾಲ್ಕಕ್ಕೆ ಹಕ್ಕಿಯನ್ನು ಬಾಕ್ಸಿನಲ್ಲಿ ತುಂಬಿಸಿಕೊಂಡು ತುಲಸಿ ಬಾಬು ಜಗದಾಳ್ಪುರಕ್ಕೆ ಬಂದಿಳಿದ. ಎರಡು ಆಳುಗಳನ್ನು ಗೊತ್ತು ಮಾಡಿಕೊಂಡು ತನ್ನ ಲಗ್ಗೇಜ್ ಹೊರಿಸಿಕೊಂಡು ವ್ಯಾನೊಂದರಲ್ಲಿ ಮತ್ತದೇ ಕಾಡಿನ ಜಾಗಕ್ಕೆ ಬಂದ. ವ್ಯಾನ್ ನಿಲ್ಲಿಸಿ ಕೂಲಿಗಳು ಬಾಕ್ಸನ್ನು ಹೊತ್ತು ಇವನ ಹಿಂದೆ ಕಾಡಿನಲ್ಲಿ ಅರ್ಧ ನಡೆಯುತ್ತಾ ಬಂದರು. ಅಂತೂ ಆ ಜಾಗ ಸಿಕ್ಕಿತು. ಅಲ್ಲೇ ಬಿಲ್’ನ್ನು ಮೊದಲಬಾರಿ ನೋಡಿದ್ದು. ಕೂಲಿಗಳು ಬಾಕ್ಸನ್ನು ಇಳಿಸಿ ಮುಚ್ಚಳ ತೆಗೆದವರು ಹಕ್ಕಿಯನ್ನು ನೋಡಿ ಹೌಹಾರಿದರು. ತುಳಸಿ ಬಾಬು ಅದಕ್ಕೆ ಯಾವತ್ತಿನಂತೆ ನಿರ್ಲಕ್ಷ್ಯ ತೋರಿದ. ಹೇಗೂ ಚೆನ್ನಾಗೇ ಹಣತೆತ್ತು ಅವರನ್ನು ಸಂತೃಪ್ತಗೊಳಿಸಿದ್ದ. ನಾಲ್ಕೂವರೆ ಅಡಿ ಎತ್ತರದ ಗೂಡಿನಷ್ಟೇ ಎತ್ತರಕ್ಕಿದ್ದ ಬಿಲ್ ಇವನನ್ನೇ ನೋಡಿತು.

”ಗುಡ್ ಬೈ ಬಿಲ್”

ಎಂದವನೇ ತಕ್ಷಣ ಅಲ್ಲಿಂದ ಹೊರಟೇ ಬಿಟ್ಟ. ಟೆಂಪೋ ಅವರಿಗಾಗಿ ಕಾಯುತ್ತಿತ್ತು.

ಈ ವಿಷಯದ ಬಗ್ಗೆ ತನ್ನ ಸ್ನೇಹಿತ  ಪ್ರದ್ಯೋತ್ ಬಾಬುಗೆ ಕೂಡಾ ಹೇಳಿರಲಿಲ್ಲ ತುಳಸಿ ಬಾಬು. ಸೋಮವಾರ ಆಫೀಸಿಗೆ ಬರುತ್ತಲೇ ಭಾನುವಾರ ಎಲ್ಲಿಗೆ ಹೋಗಿದ್ದೆ ಎಂದು ಕೇಳಿದ ಅವನ ಗೆಳೆಯ. ನೈಹಾತಿಯಲ್ಲಿ ಅಕ್ಕನ ಮಗಳ ಮದುವೆಗೆ ಹೋಗಿದ್ದೆ ಎಂದು ಸುಳ್ಳು ಹೇಳಿದ ತುಳಸಿ ಬಾಬು.

ಒಂದು ಹದಿನೈದು ದಿನ ಕಳೆದ ಮೇಲೆ ಒಂದು ಭಾನುವಾರ ಪ್ರದ್ಯೋತ್ ಬಾಬು ತುಳಸಿ ಬಾಬುವಿನ ಮನೆಯಲ್ಲಿ ಖಾಲಿ ಗೂಡನ್ನು ನೋಡಿ ಚಕಿತನಾದ. ”ಬಿಲ್’ ಎಲ್ಲಿ ಎಂದಿದ್ದಕ್ಕೆ ಅದು ಸತ್ತು ಹೋಯಿತು ಎಂಬ ಉತ್ತರ ಬಂತು.

ಅದನ್ನು ಕೇಳಿ ಪ್ರದ್ಯೋತ್ ಬಾಬುವಿಗೆ ಪಿಚ್ಚೆನ್ನಿಸಿತು. ಆ ಫೋಟೋ ಕೊಡುವಾಗ ಅವನು ಹಾಗೆ ಹೇಳಿದ್ದರೂ ಬಿಲ್ ಸತ್ತು ಹೋಗಲಿ ಎಂದು ಅವನೇನೂ ಬಯಸಿರಲಿಲ್ಲ. ಅವನು ಕೊಟ್ಟ ಫೋಟೋ ಫ್ರೇಮ್’ನಲ್ಲಿ ಕುಳಿತು ಗೋಡೆಯಲ್ಲಿ ತೂಗುಹಾಕಲ್ಪಟ್ಟಿತ್ತು. ತುಳಸಿ ಬಾಬು ಎಲ್ಲೋ ಕಳೆದು ಹೋದವನಂತಿದ್ದ. ಒಟ್ಟಿನಲ್ಲಿ ಇಡೀ ವಾತಾವರಣ ಬಿಗಿಯಾಗಿತ್ತು. ಒಟ್ಟಿನಲ್ಲಿ ಇಲ್ಲಿನ ಬಿಗಿಯನ್ನು ಸಡಿಲಿಸಲು “ತುಂಬಾ ದಿನಗಳಾಯಿತು ಮನ್ಸೂರ್ ಹತ್ತಿರ ಹೋಗದೆ, ಇವತ್ತು ಹೋಗೋಣವೇ, ಕಬಾಬ್ ಮತ್ತು ಪರಾಠ ತಿನ್ನಲು?” ಎಂದ ಪ್ರದ್ಯೋತ್.

”ನನಗ್ಯಾಕೋ ಈಗ ಮೊದಲಿನಂತೆ ಅವು ಸೇರುತ್ತಿಲ್ಲ” ಎಂದ ತುಳಸಿ.

ಪ್ರದ್ಯೋತ್ ಬಾಬುಗೆ ಅವನ ಕಿವಿಗಳನ್ನೇ ನಂಬಲಾಗಲಿಲ್ಲ.

”ನಿನ್ನ ಆರೋಗ್ಯ ಸರಿಯಿದೆಯಾ? ಆ ಸಾಧು ಕೊಟ್ಟ ಔಷಧಿ ತಗೊಳ್ತಾ ಇದೀಯಾ?” ಕಾಳಜಿಯಿಂದ ಕೇಳಿದ ತುಳಸಿಯನ್ನು.

ತಾನೀಗ ಔಷಧಿ ತೆಗೆದುಕೊಳ್ಳುತ್ತಿರುವೆನೆಂದೂ, ತನ್ನ ಬಿ.ಪಿ. ಕಡಿಮೆಯಾಗಿದೆಯೆಂದೂ ಹೇಳಿದ ತುಳಸಿ ಬಾಬು ಅದನ್ನು ಕೇವಲ ಹದಿನೈದು ದಿನಗಳಿಂದ ತೆಗೆದುಕೊಳ್ಳುತ್ತಿರುವುದನ್ನು ಮಾತ್ರ ಹೇಳಲಿಲ್ಲ. ಬಿಲ್ ಬಂದಾಗಿನಿಂದ ಅವನಿಗೆ ಈ ಔಷಧಿಯ ಬಗ್ಗೆ ಪೂರ್ತಿ ಮರೆತೇ ಹೋಗಿತ್ತು.

” ಔಷಧಿ ಎನ್ನುತ್ತಲೇ ನೆನಪಾಯಿತು, ಇವತ್ತು ಪೇಪರಿನಲ್ಲಿ ದಂಡಕಾರಣ್ಯದ ಬಗ್ಗೆ ಬಂದಿದೆ. ಓದಿದೆಯಾ?” ಪ್ರದ್ಯೋತ್ ಬಾಬು ಕೇಳಿದ.

ತುಳಸಿ ಬಾಬು ನ್ಯೂಸ್ ಪೇಪರ್ ತರಿಸಿದರೂ ಮೊದಲ ಪುಟಕ್ಕಿಂತ ಜಾಸ್ತಿ ಓದುತ್ತಿರಲಿಲ್ಲ ಅವನು. ”ದಂಡಕಾರಣ್ಯದ ಅನಾಹುತ” ಎಂಬ ತಲೆ ಬರಹವಿದ್ದ ಲೇಖನ ತೋರಿಸಿದ ಪ್ರದ್ಯೋತ್ ಬಾಬು.

ಆ ಬರಹದಲ್ಲಿ ಹೇಗೆ ಇದ್ದಕ್ಕಿದ್ದಂತೆ ಕಾಡಿನ ಸುತ್ತ ಮುತ್ತ ಇದ್ದ ಹಳ್ಳಿಯ ಸಾಕು ಪ್ರಾಣಿಗಳೂ, ಕೋಳಿಗಳೂ ಯಾವುದೋ ಅನಾಮಧೇಯ ಪ್ರಾಣಿಯ ಬಾಯಿಗೆ ಸಿಕ್ಕಿ ಸತ್ತು ಹೋಗುತ್ತಿವೆ ಎಂದು ವರ್ಣಿಸಲಾಗಿತ್ತು. ಅಲ್ಲೆಲ್ಲೂ ಹುಲಿ ಇರಲಿಲ್ಲ. ಅದೂ ಅಲ್ಲದೆ ಹುಲಿಗಳು ತಮ್ಮ ಬೇಟೆಯನ್ನು ಎಳೆದೊಯ್ಯುತ್ತವೆ. ಆದರೆ ಇಲ್ಲಿ ಹಾಗೇನೂ ಆಗಿರಲಿಲ್ಲ. ಮಧ್ಯ ಪ್ರದೇಶ ಸರ್ಕಾರ ಕಳಿಸಿದ ಬೇಟೆಗಾರರು ಹುಡುಕಿದರೂ ಅವರಿಗಲ್ಲೇನೂ ಸಿಕ್ಕಿರಲಿಲ್ಲ. ಯಾರೋ ಹಳ್ಳಿಯವನೊಬ್ಬ ಹೇಳಿದ್ದ, ಎರಡು ಕಾಲಿನ ವಿಚಿತ್ರ ಪ್ರಾಣಿಯೊಂದನ್ನು ಆತ ನೋಡಿದ್ದನೆಂದು. ಅದು ಎಮ್ಮೆಯೊಂದನ್ನು ಅಟ್ಟಿಸಿಕೊಂಡು ಹೋಗಿತ್ತು. ಹೋಗಿ ನೋಡುವಷ್ಟರಲ್ಲಿ ಎಮ್ಮೆಯ ಕರುಳು ಬಗೆದು ತಿಂದು ಆ ಪ್ರಾಣಿ ಓಡಿಹೋಗಿತ್ತು.

ಓದಿ ಮುಗಿಸಿದ ತುಳಸಿಯನ್ನೇ ನೋಡುತ್ತಾ ಪ್ರದ್ಯೋತ್ ಬಾಬು ಕೇಳಿದ ”ಇದೂ ನಿನಗೆ ಆಶ್ಚರ್ಯದ ವಿಷಯ ಅಲ್ಲ ಅಂತ ಹೇಳುತ್ತೀಯಾ?” ಎಂದು. ಹೌದೆಂದು ತಲೆಯಲ್ಲಾಡಿಸಿದ ತುಳಸಿ ಬಾಬು. ಅಂದರೆ ಈಗಲೂ ಅವನಿಗದರಲ್ಲಿ ಚಿದಂಬರ ರಹಸ್ಯವೇನೂ ಕಂಡಿರಲಿಲ್ಲ.

ಇದಾಗಿ ಮೂರು ದಿನ ಕಳೆದ ಮೇಲೆ ಪ್ರದ್ಯೋತ್ ಬಾಬು ಹೆಂಡತಿ ಕೊಟ್ಟ ಚಹಾ ಹೀರುತ್ತಾ ಕೂತಿದ್ದ. ಅವಳು ಡೈಜಸ್ಟಿವ್ ಬಿಸ್ಕತ್ತಿನ ಟಿನ್ ತೆರೆದು ಅವನಿಗೆ ಬಿಸ್ಕತ್ ಕೊಡುತ್ತಿದ್ದಂತೆಯೇ ಏನೋ ನೆನಪಾಗಿ ಅಲ್ಲಿಂದೆದ್ದು ನಡೆದೇ ಬಿಟ್ಟ ಆತ. ಎಕ್ದಾಲಿಯ ರಸ್ತೆಯಲ್ಲಿದ್ದ ಸ್ನೇಹಿತ ಅನಿಮೇಶನ ಫ್ಲ್ಯಾಟಿಗೆ ಬರುವಷ್ಟರಲ್ಲಿ ಅವನಿಗೆ ತಡೆಯಲಾರದ ಚಡಪಡಿಕೆ ಶುರುವಾಗಿತ್ತು.

ಪೇಪರ್ ಓದುತ್ತಿದ್ದವನ ಕೈಲಿದ್ದ ಪತ್ರಿಕೆ ಕಸಿದು ”ನಿನ್ನ ರೀಡರ್ಸ್ ಡೈಜೆಸ್ಟ್ ಪುಸ್ತಕಗಳ ಸಂಗ್ರಹ ಎಲ್ಲಿದೆ, ಬೇಗ ತೋರಿಸು” ಎಂದು ಬಡಬಡಿಸಿದ. ತನ್ನ ಕಪಾಟಿನಲ್ಲಿಟ್ಟಿದ್ದ ರೀಡರ್ಸ್ ಡೈಜೆಸ್ಟ್ ತೋರಿಸುತ್ತಾ ಯಾವುದು ಬೇಕೆಂದು ಕೇಳಿದ ಅನಿಮೇಶನಿಗೆ ಪ್ರದ್ಯೋತ್ ಬಾಬುನ ನಡವಳಿಕೆ ವಿಚಿತ್ರವಾಗಿ ತೋರಿತು. ಒಮ್ಮೆಲೇ ಎಲ್ಲಾ ಪುಸ್ತಕಗಳನ್ನೂ ಹರಡಿಕೊಂಡು ಕುಳಿತ ಪ್ರದ್ಯೋತ್ ಬಾಬು ಒಂದೊಂದೇ ಪುಟ ತಿರುವುತ್ತಾ ಪ್ರತೀ ಪತ್ರಿಕೆಯ ಮೇಲೂ ಕಣ್ಣಾಡಿಸತೊಡಗಿದ್ದ. ಕೊನೆಗೂ ಅವನಿಗೆ ಹುಡುಕುತ್ತಿದ್ದುದು ಸಿಕ್ಕಿಯೇ ಬಿಟ್ಟಿತು.

”ಹಾಂ, ಇದೇ, ಇದೇ ಆ ಹಕ್ಕಿ, ಸಂಶಯವೇ ಇಲ್ಲ” ಎಂದು ಕೂಗಿದ. ಚಿಕಾಗೋದಲ್ಲಿರುವ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಸಂಗ್ರಹದಲ್ಲಿರುವ ”ಅಂಡಾಲ್ಗಲೋರ್ನಿಸ್” ಎಂಬ ಆ ಹಕ್ಕಿಯ ಪುತ್ಥಳಿಯನ್ನು ಒಬ್ಬ ಸ್ವಚ್ಚಗೊಳಿಸುತ್ತಿದ್ದ ಚಿತ್ರವಾಗಿತ್ತದು. ಆ ಹೆಸರಿನ ಅರ್ಥ ”ಭಯಾನಕ ಪಕ್ಷಿ” ಎಂದು. ಪುರಾತನವಾದ ಆ ಹಕ್ಕಿ ಕುದುರೆಗಿಂತ ಚುರುಕು ನಡೆಯ, ಅತ್ಯಂತ ಕ್ರೂರವಾದ ಮಾಂಸಾಹಾರಿ ಪಕ್ಷಿ ಎಂದು ಅಲ್ಲಿ ಉಲ್ಲೇಖಿಸಲಾಗಿತ್ತು.

ಪ್ರದ್ಯೋತ್ ಬಾಬು ಊಹಿಸಿದಂತೆಯೇ ಮರುದಿನ ಕಛೇರಿಯಲ್ಲಿ ಅವನನ್ನು ಹುಡುಕಿಕೊಂಡು ಬಂದ ತುಳಸಿ ಬಾಬು ತಾನು ಮತ್ತೆ ದಂಡಕಾರಣ್ಯಕ್ಕೆ ಹೋಗಬೇಕಾಗಿರುವುದಾಗಿಯೂ, ಅವನೂ ಬಂದರೆ ಒಳ್ಳೆಯ ಕಂಪೆನಿಯಾಗುತ್ತಿತ್ತೆಂತಲೂ ತಿಳಿಸಿದ. ಅವನ ಗನ್ ಕೂಡಾ ತರುವಂತೆ ಸೂಚಿಸಿದ ತುಳಸಿ ಬಾಬು. ರೈಲಿನಲ್ಲಿ ಮಲಗಲು ಸೀಟ್ ಸಿಗದಿದ್ದರೂ ಕೆಲಸ ತುಂಬಾ ತುರ್ತಿನದ್ದಾದರಿಂದ ಅದಕ್ಕೆಲ್ಲ ಯೋಚಿಸಿದೇ ಇಬ್ಬರೂ ಕಾಡಿನ ದಾರಿಯಲ್ಲಿ ಹೊರಡಲು ಸಜ್ಜಾದರು.

ತುಳಸಿ ಬಾಬು ಅವನಿಗೆಲ್ಲವನ್ನೂ ವಿವರಿಸಿದ. ಆದರೂ ಗನ್ ಬರೀ ಒಂದು ಮುಂಜಾಗ್ರತೆ ಅಷ್ಟೇ ಹೊರತು ಅದನ್ನು ಬಳಸುವ ಪ್ರಮೇಯ ಬರಲಾರದು ಎಂದ. ಪ್ರದ್ಯೋತ್ ಬಾಬು ತಾನು ಪುಸ್ತಕದಲ್ಲಿ ಓದಿ ತಿಳಿದುಕೊಂಡದ್ದನ್ನು ಹೇಳಲಿಲ್ಲ, ಹೇಗೂ ದಾರಿಯಲ್ಲಿ ಮಾತಾಡಲು ಅಷ್ಟೆಲ್ಲಾ ಸಮಯವಿರುವುದಲ್ಲ ಎಂದು. ಆದರೂ ಗನ್ ಬೇಕೇ ಬೇಕಾಗುತ್ತದೆಂದು ಅವನಿಗನ್ನಿಸಿತ್ತು. ಎಂತಹ ಅವಘಡವನ್ನಾದರೂ ಎದುರಿಸಲು ಮಾನಸಿಕವಾಗಿ ಅವನು ಸಜ್ಜಾಗಿದ್ದ. ಮರ ಕಡಿಯುವವನ ಮಗನೊಬ್ಬ ಈ ಹಕ್ಕಿಯ ದಾಳಿಗೆ ಬಲಿಯಾದ ಮೇಲೆ ಮಧ್ಯ ಪ್ರದೇಶ ಸರ್ಕಾರ ಈ ನರಹಂತಕ ಪ್ರಾಣಿಯನ್ನು ಹಿಡಿದು ಕೊಟ್ಟ ಅಥವಾ ಕೊಂದವರಿಗೆ ಐದು ಸಾವಿರ ರೂಪಾಯಿ ಬಹುಮಾನವನ್ನು ಘೋಷಿಸಿದ್ದು ಅವತ್ತಿನ ಪತ್ರಿಕೆಯಲ್ಲಿ ಬಂದಿತ್ತು.

ಜಗದಾಳ್ಪುರದ ಫಾರೆಸ್ಟ್ ಆಫೀಸರ್ ತಿರುಮಲೈ ಅವರಿಂದ ಈ ಪ್ರಾಣಿಯನ್ನು ಕೊಲ್ಲಲು ಪರ್ಮಿಟ್ ಪಡೆದ ಗೆಳೆಯರಿಬ್ಬರೂ ಕಾಡಿಗೆ ಹೊರಟರು. ಅವರ ಜೊತೆ ಹೋಗಲು ಯಾರೊಬ್ಬರೂ ತಯಾರಿರಲಿಲ್ಲ.  ಈಗಾಗಲೇ ನಾಲ್ವರು ಬೇಟೆಗಾರರು ಆ ನರಹಂತಕನ ಬೇಟೆಯಾಡಲು ಹೋಗಿ ಬರಿಗೈಯಲ್ಲಿ ಬಂದಿದ್ದಾರೆಂದೂ ಅದರಲ್ಲೂ ಒಬ್ಬನು ಅಲ್ಲೇ ನಾಪತ್ತೆಯಾಗಿದ್ದಾನೆಂದೂ ಹೇಳಿದ ತಿರುಮಲೈ ಇವರಿಬ್ಬರಿಗೂ ಎಚ್ಚರಿಕೆ ಹೇಳಲು ಮರೆಯಲಿಲ್ಲ. ಪ್ರದ್ಯೋತ್ ಬಾಬು ಹೆದರಿದರೂ ತುಳಸಿ ಬಾಬುನ ಧೈರ್ಯ ಅವನನ್ನು ಮುಂದಡಿಯಿಡಲು ಪ್ರೇರೇಪಿಸಿತು.

ಈ ಸಾರಿ ಟ್ಯಾಕ್ಸಿ ಮಣ್ಣು ರಸ್ತೆಯವರೆಗೂ ಬರಲಿಲ್ಲ. ಹಾಗಾಗಿ ಹೆಚ್ಚೇ ನಡೇಯಬೇಕಾಯಿತು ಇಬ್ಬರಿಗೂ. ವಸಂತಕ್ಕೆ ಕಾಲಿಡುತ್ತಿದ್ದ ಕಾಡು ಈಗ ಬೇರೆಯದೇ ರೀತಿ ಕಂಡಿತು. ಪ್ರಕೃತಿ ಹೊಸತನ್ನು ಹೊಸೆಯುತ್ತಿದ್ದರೂ ಅಲ್ಲೆಲ್ಲಾ ಅನೂಹ್ಯ ನೀರವತೆ ಕವಿದಿತ್ತು. ಒಂದೂ ಹಕ್ಕಿ ಪಿಕ್ಕಿಗಳು ಕಾಣಲಿಲ್ಲ. ಪ್ರಾಣಿಗಳ ಸದ್ದಿಲ್ಲ. ಪ್ರದ್ಯೋತ್ ಬಾಬು ಹೆಗಲಲ್ಲಿ ಗನ್ ನೇತಾಡುತ್ತಿದ್ದರೆ ತುಳಸಿ ಬಾಬು ತನ್ನ ಮಾಮೂಲಿ ಚೀಲ ಹಿಡಿದಿದ್ದ. ಅದರೊಳಗೆ ಏನಿದೆ ಎಂದು ಅವನಿಗೆ ಮಾತ್ರ ತಿಳಿದಿತ್ತು.

ದೂರದಲ್ಲೇನೋ ಕಂಡಂತಾಗಿ ಪರೀಕ್ಷಿಸಿ ನೋಡಿದರೆ ಅದೊಂದು ಶವ. ಭಯಭೀತನಾದ ಗೆಳೆಯನನ್ನು ”ಅದು ಆ ಕಳೆದು ಹೋದ ಬೇಟೆಗಾರನದ್ದೇ ಎಂದು ಯೋಚಿಸುತ್ತಿರುವೆಯಾ?” ಎಂದು ಕೇಳಿದ ತುಳಸಿ ಬಾಬು ಮುಂದುವರೆಯುತ್ತಾ ಹೇಳಿದ ”ರುಂಡವಿಲ್ಲದೆ ಶವದ ಗುರುತು ಹಿಡಿಯುವುದು ಕಷ್ಟ”

ಮುಂದೆ ಮೂರು ಮೈಲಿಯಷ್ಟು ದೂರ ಅವರಿಬ್ಬರೂ ಮಾತಿಲ್ಲದೇ ನಡೆದರು. ಮುರಿದ ಬೇವಿನ ಮರದ ಹತ್ತಿರ ಬರುತ್ತಿದ್ದಂತೆ ಚಕ್ರ ಪರ್ಣ ಗಿಡಗಳು ಮತ್ತೆ ಚಿಗುರಿ ಮೊದಲಿನಂತಾಗಿದ್ದುದು ಕಂಡಿತು. ”ಬಿಲ್, ಬಿಲ್…, ಬಿಲ್ಲೀ…” ಎಂದು ತುಳಸಿ ಬಾಬು ತನ್ನ ಸಾಕು ಪ್ರಾಣಿಯನ್ನು ಕರೆದ. ಅವನು ಆ ಕ್ರೂರ ಪಕ್ಷಿಯನ್ನು ಈಗಾಗಲೇ ಪಳಗಿಸಿಟ್ಟಿದ್ದು ಹೌದೆಂದು ಹೇಳುವಂತೆ ಹೆಜ್ಜೆಯ ಸಪ್ಪಳ ಕೇಳಿಬರತೊಡಗಿತು.

”ಅಂಡಾಲ್ಗಲೋರ್ನಿಸ್” ಈ ಹೆಸರು ಪ್ರದ್ಯೋತ್ ಬಾಬು ಮರೆಯಲೇ ಸಾಧ್ಯವಿರಲಿಲ್ಲ. ಎದುರಿಗೆ ಬಂದು ನಿಂತ ಆಳೆತ್ತರದ ಬಿಲ್ ಈಗ ಇನ್ನೂ ಒಂದೂವರೆ ಅಡಿ ಎತ್ತರ ಬೇಳೆದಿತ್ತು. ಅದರ ನೇರಳೆ ಗರಿಗಳ ಮೇಲೆ ಕಪ್ಪು ದೊಡ್ಡ ದೊಡ್ಡ ಚುಕ್ಕೆಗಳೂ ಮೂಡಿದ್ದವು. ಭಯಾನಕವಾಗಿದ್ದ ಅದರ ತೀಕ್ಷ್ಣ ನೋಟವನ್ನು ತನ್ನ ಯಜಮಾನನ ಮೇಲೇ ನೆಟ್ಟು ನಿಂತ ಬಿಲ್ ಪ್ರದ್ಯೋತ್’ನ ಹೆಗಲ ಮೇಲಿದ್ದ ಬಂದೂಕನ್ನು ಇನ್ನೂ ಭಾರವಾಗಿಸಿತ್ತು. ಇದನ್ನು ಉಪಯೋಗಿಸಲು ತನ್ನಿಂದ ಸಾಧ್ಯವೇ ಎಂದು ಅವನು ಒಳಗೇ ಚಿಂತಿಸಿದ. ಅನಾಯಾಸವಾಗಿ ಅವನ ಕೈಯಿ ಬಂದೂಕನ್ನು ಹಿಡಿಯುತ್ತಿದ್ದಂತೆ ಹಕ್ಕಿಯ ದೃಷ್ಟಿ ಇವನೆಡೆ ಹೊರಳಿತು. ಆಸ್ಟ್ರಿಚ್’ಗಳೂ ಎತ್ತರ ಇರುತ್ತವೆಯಾದರೂ ಅವುಗಳ ಕತ್ತೇ ಉದ್ದಕ್ಕಿರುತ್ತದೆ. ಆದರೆ ಈ ಹಕ್ಕಿಯ ಮೈಯೇ ಅಷ್ಟೆತ್ತರ. ಅದರ ಕಣ್ಣು ನೇರವಾಗಿ ಇವನ ಕಣ್ಣಲ್ಲೇ ನೆಟ್ಟಿತ್ತು. ”ಬಂದೂಕಿಂದ ಕೈ ತೆಗಿ” ಮೆಲ್ಲನುಸುರಿದ ತುಳಸಿ ಬಾಬು ತನ್ನ ಚೀಲದಿಂದ ಒಂದು ಪ್ಯಾಕೆಟ್ ಹೊರತೆಗೆದ. ಬಿಲ್ ಅವನತ್ತ ದೃಷ್ಟಿ ಹೊರಳಿಸಿತು.

”ಬಿಲ್ ನಿನಗೆ ಹಸಿವೆದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ನಿನಗೆ ಈ ತಿಂಡಿ ತಂದಿದ್ದೇನೆ ತಗೋ..” ಎನ್ನುತ್ತಾ ದೊಡ್ಡ ಮಾಂಸದ ತುಣುಕನ್ನು ಅದರತ್ತ ಎಸೆದ. ”ಇದನ್ನು ತಿಂದು ಸರಿಯಾಗಿ ವರ್ತಿಸು, ನಿನ್ನಿಂದಾಗಿ ನನಗೆ ತಲೆ ತಗ್ಗಿಸುವಂತಾಗಿದೆ” ಎಂದು ತನ್ನಷ್ಟಕ್ಕೇ ಗೊಣಗಿಕೊಂಡ.

ತನ್ನ ಬಲಿಷ್ಠವಾದ ಕೊಕ್ಕಿನಿಂದ ಅದು ಮಾಂಸವನ್ನು ತಿನ್ನಲು ತೊಡಗುತ್ತಿದ್ದಂತೆ ”ಕೊನೆಯ ವಿದಾಯ” ಹೇಳಿ ತುಳಸಿ ಬಾಬು ಅಲ್ಲಿಂದ ಹೊರಟೇ ಬಿಟ್ಟ.  ಅವನ ಗೆಳೆಯನಿಗೆ ಮಾತ್ರ ಅಲ್ಲಿಂದ ಹಿಂದಿರುಗಿ ಹೆಜ್ಜೆ ಹಾಕಲು ಭಯವಾಗಿ ಹಕ್ಕಿಯನ್ನೇ ನೋಡುತ್ತಾ ಹಿಂದೆ ಹಿಂದೆ ಹೆಜ್ಜೆ ಹಾಕಿದ. ಕೊನೆಗೂ ಹಕ್ಕಿ ತಮ್ಮನ್ನು ಹಿಂಬಾಲಿಸುತ್ತಿಲ್ಲ ಎಂದು ಖಾತ್ರಿಯಾದಮೇಲೆ ಸರಿಯಾಗಿ ನಡೆದು ಗೆಳೆಯನನ್ನು ಸೇರಿಕೊಂಡ.

ಒಂದು ವಾರ ಕಳೆದ ಮೇಲೆ ಪತ್ರಿಕೆಯಲ್ಲಿ ದಂಡಕಾರಣ್ಯದ ಅನಾಹುತಗಳೆಲ್ಲ ನಿಂತಿವೆ ಎಂಬ ಸುದ್ದಿ ವರದಿಯಾಗಿತ್ತು. ಪ್ರದ್ಯೋತ್ ಬಾಬು ಮೂರು ಮಿಲಿಯನ್ ವರ್ಷಗಳ ಹಿಂದೆ ಕಣ್ಮರೆಯಾದ ಪಕ್ಷಿ ಇದೆಂದು ಕೊನೆಗೂ ತುಳಸಿ ಬಾಬುಗೆ ಹೇಳಲೇ ಇಲ್ಲ. ಆದರೂ ಅದೇಕೆ ಇದ್ದಕ್ಕಿದ್ದಂತೆ ಈ ಅವಾಂತರಗಳೆಲ್ಲ ನಿಂತಿದ್ದೇಕೆ ಎಂದು ತಿಳಿಯದೇ ಸ್ನೇಹಿತನಿಗೇನಾದರೂ ಗೊತ್ತಿರಬಹುದೆಂದು ಅವನನ್ನೇ ಕೇಳಿದ.

”ಇದರಲ್ಲಿ ಅಂತಾ ರಹಸ್ಯವೇನೂ ಇಲ್ಲ. ನಾನು ಕೊಟ್ಟ ಮಾಂಸದಲ್ಲಿ ನನ್ನ ಔಷಧಿಯನ್ನು ಸೇರಿಸಿದ್ದೆ ಅಷ್ಟೇ” ಎಂದ ತುಳಸಿ ಬಾಬು.

ಯಾವ ಔಷಧಿ ಎಂಬ ಪ್ರದ್ಯೋತ್’ನ ಪ್ರಶ್ನೆಗೆ ”ಚಕ್ರಪರ್ಣದ ರಸ, ”ಇದನ್ನು ಸೇವಿಸಿದವರು ಸಸ್ಯಾಹಾರಿಯಾಗುತ್ತಾರೆ. ಈಗ ನಾನು ಬದಲಾದಂತೆಯೇ” ಎಂದ.

****************** ಮುಕ್ತಾಯ*******************

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!