ಕಥೆ

ಬಿಗ್ ಬಿಲ್ ಭಾಗ-2

ಮೂಲ: ಸತ್ಯಜಿತ್ ರೇ

(Different Cultures: A collection of short stories by Pearson Longman UK)

ಅನುವಾದ: ಜಯಶ್ರೀ ಭಟ್

ಸಿಂಗಾಪುರ

ಮಸ್ಜಿದ್ಬರಿ ರಸ್ತೆಯ ಪ್ಲಾಟೊಂದರ ಎರಡನೆ ಅಂತಸ್ತಿನ ಮನೆಯೊಂದರಲ್ಲಿ ವಾಸವಾಗಿದ್ದ ತುಳಸಿ ಬಾಬು. ಅವಿವಾಹಿತನಾದ ಅವನ ಮನೆಯಲ್ಲಿ ಕೆಲಸದ ಆಳು ನಾತೋಬಾರ್ ಹಾಗೂ ಅಡುಗೆಯ ಜೋಯ್ಕೆಸ್ತೋ ಮಾತ್ರ ಇದ್ದರು. ಅದೇ ಅಂತಸ್ತಿನಲ್ಲಿರುವ ಇನ್ನೊಂದು ಮನೆಯಲ್ಲಿ ತಾರಿತ್ ಸನ್ಯಾಲ್ ಎಂಬಾತ ಇದ್ದ. ಅವನು ‘ನಬರುನ್‘ ಪ್ರೆಸ್ಸಿನ ಮಾಲೀಕನಾಗಿದ್ದ. ಬಹಳ ಸಿಡುಕು ಸ್ವಭಾವದ ಅವನಿಗೆ ಈ ನಗರದ ಪದೇ ಪದೇ ಕೈ ಕೊಡುವ ಕರೆಂಟಿನಿಂದಾಗಿ ಪ್ರೆಸ್ಸಿನ ಕೆಲಸ ಸಾಗದೆ ಮತ್ತಷ್ಟು ಅಸಹನೆ ಹೆಚ್ಚಾಗಿತ್ತು.

ತುಳಸಿ ಬಾಬು ದಂಡಕಾರಣ್ಯದಿಂದ ಬಂದು ಎರಡು ತಿಂಗಳ ಮೇಲಾಗಿತ್ತು. ಅಲ್ಲಿಂದ ಬಂದ ತಕ್ಷಣ ಆತ ಅಳತೆ ಕೊಟ್ಟು ಮಾಡಿಸಿದ್ದ ಒಂದು ಪಂಜರದಲ್ಲಿ ಹಕ್ಕಿ ಮರಿಯನ್ನು ಇಟ್ಟಿದ್ದ. ಮನೆಯ ಒಳಗಡೆಯ ವೆರಾಂಡದಲ್ಲಿ ಅದನ್ನು ಇಟ್ಟಿದ್ದ. ಅದಕ್ಕೊಂದು ಹೆಸರನ್ನೂ ಹುಡುಕಿದ್ದ. ”ಬ್ರಹತ್ ಚಂಚು” ಎನ್ನುವ ಸಂಸ್ಕ್ರತ ಹೆಸರಿಗೆ ”ಬಿಗ್ ಬಿಲ್” ಅಂತ ಇಂಗ್ಲಿಷ್ ನಾಮಧೇಯ ಕೊಟ್ಟಿದ್ದ. ಬರಬರುತ್ತಾ ’ಬಿಗ್’ ಬಿಟ್ಟು ಹೋಗಿ ಬರೀ ’ಬಿಲ್’ ಎಂದು ಕರೆಯತೊಡಗಿದ್ದ.

ಹಕ್ಕಿ ಮರಿಯನ್ನು ತಂದ ಮೊದಲ ದಿನ ಅದಕ್ಕೆ ಕಾಳು ತಿನ್ನಿಸಲು ಹೋಗಿದ್ದ. ಆದರದು ಕಾಳು ತಿಂದಿರಲಿಲ್ಲ.  ತುಳಸಿ ಬಾಬು ಸರಿಯಾಗೇ ಅಂದಾಜು ಮಾಡಿದ್ದ, ಅದೊಂದು ಮಾಂಸಾಹಾರಿ ಪಕ್ಷಿ ಎಂದು. ಹುಳ ಹುಪ್ಪಟೆ ತಿನ್ನಿಸ ತೊಡಗಿದ ಮೇಲಿಂದ ಅದರ ಹಸಿವೂ ಜಾಸ್ತಿಯಾಗತೊಡಗಿದಂತಿತ್ತು. ನಾತೋಬಾರ್ ಮಾರ್ಕೆಟ್’ನಿಂದ ಅದಕ್ಕೆ ಮಾಂಸವನ್ನೂ ತರತೊಡಗಿದ್ದ. ಆವಾಗಿಂದ ಅದು ದಿನದಿನಕ್ಕೂ ದೊಡ್ಡ ದೊಡ್ಡದಾಗಿ ಬೆಳೆಯತೊಡಗಿತ್ತು.

ತುಳಸಿ ಬಾಬು ಮೊದಲೇ ಲೆಕ್ಕ ಹಾಕಿ ಅದಕ್ಕೆ ದೊಡ್ಡದಾದ ಪಂಜರವನ್ನೇ ಮಾಡಿಸಿ ತಂದಿದ್ದ. ನೆಲದಿಂದ ಎರಡೂವರೆ ಅಡಿ ಎತ್ತರಕ್ಕಿದ್ದ ಆ ಗೂಡಿನ ಛಾವಣಿಗೆ ಬಿಲ್’ನ ತಲೆ ತಾಗುತ್ತಿರುವುದನ್ನು ನೋಡಿ ಅವನಿಗನ್ನಿಸಿತು ಇದನ್ನೂ ಬದಲಾಯಿಸಬೇಕಾಯಿತಿನ್ನು ಎಂದು. ಹಕ್ಕಿಗಿನ್ನೂ ಎರಡು ತಿಂಗಳಾಗಿತ್ತು ಅಷ್ಟೇ. ಹಕ್ಕಿಯ ಕೂಗಿನ ಬಗ್ಗೆ ಇನ್ನೂ ಏನೂ ಹೇಳಿಲ್ಲ ಅಲ್ಲವೇ? ಒಂದು ಬೆಳಿಗ್ಗೆ ಪಕ್ಕದ ಪ್ಲ್ಯಾಟಿನ ಮಿಸ್ಟರ್ ಸನ್ಯಾಲ್ ಟೀ ಕುಡಿಯುವಾಗ ಹಕ್ಕಿಯ ಕೂಗಿಗೆ ಹಾಗೇ ಒಮ್ಮೆಲೇ ಬೆಚ್ಚಿಬಿದ್ದು ಕೆಮ್ಮಿದ್ದಕ್ಕೆ ಟೀ ಗಂಟಲಲ್ಲೇ ನಿಂತುಬಿಟ್ಟಿತ್ತು. ಸಾಮಾನ್ಯವಾಗಿ ಇಬ್ಬರೂ ಒಬ್ಬರನ್ನೊಬ್ಬರು ಮಾತಾಡಿಸುತ್ತಿದ್ದುದು ಅಷ್ಟಕ್ಕಷ್ಟೇ. ಆದರಿವತ್ತು ಸನ್ಯಾಲ್ ಬಾಬು ತುಳಸಿ ಬಾಬುನನ್ನು ಕರೆದು ಅವರ ಮನೆಯಲ್ಲಿರುವ ಸಾಕು ಪ್ರಾಣಿ ಯಾವುದೆಂದು ಕೇಳಿದ. ಅದರ ಕೂಗು ಹಕ್ಕಿಯಂತಿರದೆ, ಪ್ರಾಣಿಯಂತೇ ಇದ್ದಿದ್ದರಿಂದ ಅವನು ಹಾಗೆ ಕೇಳಿದ್ದು ತಪ್ಪೇನೂ ಆಗಿರಲಿಲ್ಲ.

ಹೊರಗೆಲ್ಲೋ ಹೊರಡಲಣಿಯಾಗುತ್ತಿದ್ದ ತುಳಸಿ ಬಾಬು ಬಂದು ಬಾಗಿಲ ಹತ್ತಿರ ನಿಂತು ”ಅದೊಂದು ಪ್ರಾಣಿಯಲ್ಲ, ಹಕ್ಕಿ, ಅದು ಹೇಗೆ ಬೇಕಾದರೂ ಕೂಗಲಿ, ಆದರೆ ನಿಮ್ಮ ಬೆಕ್ಕಿನ ಹಾಗೆ ರಾತ್ರಿಯೆಲ್ಲ ನಿದ್ರೆಗೆಡಿಸುವುದಿಲ್ಲ ” ಎಂದ.

ಅವನ ಉತ್ತರ ಕೇಳಿ ಸನ್ಯಾಲ್ ಬಾಬು ಸುಮ್ಮನಾದರೂ ಅವನ ಗೊಣಗಾಟ ನಿಲ್ಲಲಿಲ್ಲ. ಹಕ್ಕಿಯ ಗೂಡು ಒಳಗಡೆ ಇದ್ದಿದ್ದು ಒಳ್ಳೆಯದೇ ಆಗಿತ್ತು. ಸನ್ಯಾಲ್ ಬಾಬು ಆ ಹಕ್ಕಿಯನ್ನೆಂದೂ ನೋಡಿರಲಿಲ್ಲ. ಅವನೇನಾದರೂ ಅದನ್ನು ನೋಡಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು.

ಹಕ್ಕಿಯ ದೈತ್ಯ ಗಾತ್ರ ತುಳಸಿ ಬಾಬುಗೆ ಯಾವ ತಲೆಬಿಸಿ ಹುಟ್ಟಿಸದಿದ್ದರೂ ಪ್ರದ್ಯೋತ್ ಬಾಬು ಮಾತ್ರ ಗಾಬರಿಯಾಗಿದ್ದ. ಗೆಳೆಯರಿಬ್ಬರೂ ವಾರಕ್ಕೊಮ್ಮೆ ಮನ್ಸೂರ್’ನ ಕಬಾಬ್ ಮತ್ತು ಪರಾಠ ತಿನ್ನಲು ಜೊತೆಯಾಗುತ್ತಿದ್ದರೆ ಹೊರತು ಉಳಿದಂತೆ ಅವರಿಬ್ಬರ ಭೇಟಿ ತೀರಾ ಕಮ್ಮಿ. ಆದರೆ ದಂಡಕಾರಣ್ಯದಿಂದ ಬಂದ ಮೇಲೆ ಹಕ್ಕಿಯನ್ನು ನೋಡುವ ಸಲುವಾಗಿ ಪ್ರದ್ಯೋತ್ ಬಾಬು ಸ್ನೇಹಿತನಲ್ಲಿಗೆ ಬರುವುದು ಜಾಸ್ತಿಯಾಗಿತ್ತು. ಅದರ ಅದ್ಭುತ ಬೆಳವಣಿಗೆ, ದೈತ್ಯಾಕಾರ ಎಲ್ಲವೂ ಪ್ರದ್ಯೋತ್ ಬಾಬುಗೆ ವಿಸ್ಮಯಕಾರಿಯಾಗಿತ್ತು. ಆದರೂ ತುಳಸಿ ಬಾಬುಗೆ ಯಾಕೆ ಏನೂ ಅನ್ನಿಸುವುದಿಲ್ಲ ಎಂದು ಅವನಿಗಚ್ಚರಿಯಾಗಿತ್ತು. ಆ ಹಕ್ಕಿಯ ನೋಟವಂತೂ ಹೆದರಿಕೆ ಹುಟ್ಟಿಸುವಂತಿತ್ತು. ಕಪ್ಪು ಗೋಲದಲ್ಲಿ ಕಂದು ಬಣ್ಣದ ಚುಕ್ಕಿಗಳಿರುವ ಅದರ ಕಣ್ಣಿನ ನೆಟ್ಟ ದೃಷ್ಟಿ ಒಮ್ಮೆ ಇವನತ್ತ ಬಿತ್ತೆಂದರೆ ಅತ್ತಿತ್ತಲುಗುತ್ತಿರಲಿಲ್ಲ. ಅದರ ದೇಹಕ್ಕೆ ತಕ್ಕನಾಗಿ ಬೆಳೆದ ಅದರ ಕೊಕ್ಕು ಹೊಳೆಯುವ ಕಪ್ಪು ಬಣ್ಣದ್ದಾಗಿತ್ತು. ಹದ್ದಿನ ಕೊಕ್ಕಿನ ಹಾಗೇ ಕಂಡರೂ ಅದಕ್ಕಿಂತ ಎಷ್ಟೋ ದೊಡ್ಡಕ್ಕಿತ್ತು. ಅದರ ಬಲಿಷ್ಠ ಕಾಲುಗಳು, ಚೂಪಾದ ಉಗುರುಗಳು, ಗಿಡ್ಡನೆ ರೆಕ್ಕೆಗಳು ಅದೊಂದು ಹಾರಲು ಬಾರದ ಪಕ್ಷಿ ಎಂದು ಸಾರುವಂತಿದ್ದವು. ಈ ಹಕ್ಕಿಯ ವರ್ಣನೆಯನ್ನು ಪ್ರದ್ಯೋತ್ ಬಾಬು ಎಷ್ಟೋ ಜನರಲ್ಲಿ ಹೇಳಿ ನೋಡಿದ. ಯಾರಿಗೂ ಅದು ಯಾವ ಹಕ್ಕಿ ಎಂದು ತಿಳಿಯಲಿಲ್ಲ.

ಒಂದು ಭಾನುವಾರ ಪ್ರದ್ಯೋತ್ ಬಾಬು ಯಾರದ್ದೋ ಕ್ಯಾಮೆರಾ ಕೇಳಿ ಪಡೆದು ತುಳಸಿ ಬಾಬು ಮನೆಗೆ ಬಂದ. ಫೋಟೋಗ್ರಫಿ ಅವನ ಹವ್ಯಾಸವಾಗಿತ್ತು. ಅವನು ಗೂಡಿನೊಳಗಿದ್ದ ಹಕ್ಕಿಯನ್ನು ಇದ್ದ ಬದ್ದ ಧೈರ್ಯ ಒಗ್ಗೂಡಿಸಿ ಫೋಟೋ ತೆಗೆಯಲು ಅಣಿಯಾದ. ಒಮ್ಮೆ ಅವನ ಕ್ಯಾಮೆರಾದ ಫ್ಲ್ಯಾಶ್ ಲೈಟ್ ಬೆಳಗುತ್ತಿದ್ದಂತೆ ಕಿಟಾರೆಂದು ಹಕ್ಕಿ ಕಿರುಚಲು ಶುರುಮಾಡುತ್ತಿದ್ದಂತೆ, ಮಾರುದೂರ ಹೋಗಿ ಬಿದ್ದಿದ್ದ ಬಡಪಾಯಿ. ಆಮೇಲೆ ಅವನಿಗನ್ನಿಸಿತು, ಇದರ ಫೋಟೋ ಜೊತೆಗೇ ಕೂಗನ್ನೂ ರೆಕಾರ್ಡ್ ಮಾಡಿಕೊಂಡರೆ ಯಾರಾದರೂ ಈ ಹಕ್ಕಿಯ ಗುರುತು ಪತ್ತೆ ಹಚ್ಚಬಹುದೆಂದು. ಎಲ್ಲೋ ಒಂದು ಕಡೆ ಇಂಥದ್ದೇ ಹಕ್ಕಿಯೊಂದರ ಚಿತ್ರವನ್ನು ನೋಡಿದಂತೆ ನೆನಪಾಯಿತು ಅವನಿಗೆ. ಆದರೆ ಆ ಪುಸ್ತಕ ಯಾವುದು ಎಂದು ಎಷ್ಟು ಯೋಚಿಸಿದರೂ ತಿಳಿಯಲಿಲ್ಲ.

ಹಾಗೇ ಮಾತಾಡುತ್ತಾ ತುಳಸಿ ಬಾಬು ಹೇಳಿದ ಕೆಲವೊಂದು ವಿಷಯಗಳು ಅವನನ್ನು ಮತ್ತಷ್ಟು ಆಶ್ಚರ್ಯಕ್ಕೀಡು ಮಾಡಿದವು. ಈ ಹಕ್ಕಿ ಬಂದಾಗಿನಿಂದ ಕಾಗೆ ಹಾಗೂ ಗುಬ್ಬಿಯ ಕಾಟವೇ ತಪ್ಪಿ ಹೋಗಿತ್ತು. ಎಲ್ಲೆಂದರಲ್ಲಿ ಗೂಡು ಕಟ್ಟುವ ಗುಬ್ಬಿ ಹಾಗೂ ಅಡುಗೆ ಮನೆಯಿಂದ ಆಹಾರ ಕಬಳಿಸುವ ಕಾಗೆ ಇಲ್ಲದಿದ್ದರೆ ಅದೊಂದು ವರ ಎನ್ನಬಹುದು. ಈಗ ಹಕ್ಕಿಯ ದೆಸೆಯಿಂದ ಅದು ಲಭ್ಯವಾಗಿತ್ತು. ”ಹೌದಾ?” ಎನ್ನುತ್ತ ಮತ್ತೆ ಆಶ್ಚರ್ಯಚಕಿತನಾದ ಈ ವಿಷಯ ಕೇಳಿದ ಪ್ರದ್ಯೋತ್ ಬಾಬು.

”ನೀನೇ ನೋಡಿದೆಯಲ್ಲ. ಇಷ್ಟೋತ್ತಾದರೂ ಒಂದಾದರೂ ಹಕ್ಕಿ ಇತ್ತ ಸುಳಿಯಿತಾ?” ತುಳಸಿ ಬಾಬು ಕೇಳಿದಾಗ ಹೌದೆನಿಸಿತು ಅವನಿಗೆ. ”ನಿನ್ನ ಕೆಲಸದವರಿಗೆ ಈ ಹಕ್ಕಿ ಹೇಗೆನಿಸುತ್ತಿದೆ? ಅವರಿದಕ್ಕೆ ಹೊಂದಿಕೊಂಡಿದ್ದಾರೆಯೇ?” ಪ್ರದ್ಯೋತ್ ಬಾಬು ಕೇಳಿದ.

”ಅಡುಗೆಯವ ಈ ಪಂಜರದ ಹತ್ತಿರವೂ ಹೋಗುವುದಿಲ್ಲ. ನಾತೋಬಾರ್’ನೇ ಅದಕ್ಕೆ ಆಹಾರ ಕೊಡುವುದು. ಅವನಿಗೇನನಿಸುವುದೋ ಏನೋ, ಇದುವರೆಗೂ ಏನೂ ಕಂಪ್ಲೇಂಟ್ ಬಂದಿಲ್ಲ ಅವನಕಡೆಯಿಂದ, ಅಷ್ಟಕ್ಕೂ ಅದು ಕೆಟ್ಟದಾಗಿ ನಡೆದುಕೊಂಡರೆ ನಾನು ಒಂದು ಸಾರಿ ನೋಡಿದರೆ ಸಾಕು ತೆಪ್ಪಗಾಗುತ್ತದೆ, ಅದು ಸರಿ, ಈ ಫೋಟೋ ಯಾಕೆ ತೆಗೆದಿದ್ದು ನೀನು?”  ತುಳಸಿ ಬಾಬುನ ಪ್ರಶ್ನೆಗೆ ಜಾರಿಕೊಳ್ಳುವ ಯತ್ನ ಮಾಡುತ್ತಾ ಹೇಳಿದ ಪ್ರದ್ಯೋತ್ ” ಅಕಸ್ಮಾತ್ ಅದು ಸತ್ತು ಹೋದರೆ ನಿನಗೆ ಅದರ ನೆನಪಿಗೆ ಒಂದು ಫೋಟೋ ಆದರೂ ಇರಲಿ ” ಎಂದು.

ಮರುದಿನ ಪ್ರದ್ಯೋತ್ ಆ ಹಕ್ಕಿಯ ಫೋಟೋ ಡೆವೆಲಪ್ ಮಾಡಿ, ಪ್ರಿಂಟ್ ಹಾಕಿ ಎರಡು ಎನ್ಲಾರ್ಜ್ ಮೆಂಟ್ ಮಾಡಿಸಿ ಒಂದನ್ನು ತಾನಿಟ್ಟುಕೊಂಡು, ಇನ್ನೊಂದನ್ನು ತುಳಸಿ ಬಾಬುಗೆ ಕೊಟ್ಟ. ತನ್ನ ಹತ್ತಿರವಿದ್ದ ಫೋಟೋವನ್ನು ರನೊಜೋಯ್ ಶೋಮ್ ಎನ್ನುವ ಪಕ್ಷಿ ಪರಿಣಿತನ ಹತ್ತಿರ ತೆಗೆದುಕೊಂಡು ಹೋದ. ಸಿಕ್ಕಿಂ ಹಕ್ಕಿಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದ ಅವರ ಲೇಖನ ದೇಶ್ ಪತ್ರಿಕೆಗಳಲ್ಲಿ ಇವನು ಓದಿದ್ದ.

ಆದರೆ ಈ ಹಕ್ಕಿಯ ಬಗ್ಗೆ ತಮಗೇನೂ ತಿಳಿಯದು ಎಂದರು ಅವರು. ಆ ಫೋಟೋ ಎಲ್ಲಿ ಸಿಕ್ಕಿತು ಎಂಬುದಕ್ಕೆ ಪ್ರದ್ಯೋತ್ ಬಾಬು ಸುಳ್ಳೇ ಅದು ತನ್ನ ಸ್ನೇಹಿತನೊಬ್ಬ ಒಸಾಕದಿಂದ ಕಳಿಸಿದ್ದು ಎಂದು ಹೇಳಿದ.

ತುಳಸಿ ಬಾಬು ತನ್ನ ಡೈರಿಯಲ್ಲಿ ಗುರುತು ಹಾಕಿಕೊಂಡ: ಫೆಬ್ರವರಿ ಹದಿನಾಲ್ಕು, 1980. ಬಿಗ್ ಬಿಲ್’ನ್ನು ಮೂರೂವರೆ ಅಡಿ ಗೂಡಿನಿಂದ ನಾಲ್ಕೂವರೆ ಅಡಿ ಗೂಡಿಗೆ ವರ್ಗಾಯಿಸಲಾಗಿದೆ. ಬಿಲ್ ಹಿಂದಿನ ರಾತ್ರಿ ಒಂದು ಘೋರ ಕೃತ್ಯ ಎಸಗಿಬಿಟ್ಟಿತ್ತು.

ತುಳಸಿ ಬಾಬುಗೆ ರಾತ್ರಿ ಏನೋ ಅನುಮಾನವಾಗಿ ಎದ್ದು ಬಂದರೆ ಯಾವುದೋ ಕಬ್ಬಿಣದ ಸರಳುಗಳ ಕೊಯ್ಯುತ್ತಿರುವ ಶಬ್ಧ ಕೇಳಿ ಬರತೊಡಗಿತ್ತು. ನಂತರ ಎಲ್ಲ ನಿಶ್ಶಬ್ಧವಾಗಿಬಿಟ್ಟಿತು.

ಆದರೂ ಎಲ್ಲೋ ಏನೋ ಎಡವಟ್ಟಾಗಿದೆ ಎಂಬ ಸಂಶಯ ಮಾತ್ರ ತುಳಸಿ ಬಾಬುನ ಮನಸ್ಸಿನಲ್ಲಿ ಮೂಡಿಬಿಟ್ಟಿತು. ಹಾಲಿನಲ್ಲಿ ಚಂದ್ರನ ಬೆಳಕು ಚೆಲ್ಲಿತ್ತು. ಚಪ್ಪಲಿ ಮೆಟ್ಟಿ, ಕೈಯಲ್ಲಿ ಟಾರ್ಚ್ ಹಿಡಿದು ವೆರಾಂಡದ ಕಡೆಗೆ ನಡೆದ. ಗೂಡಿನ ಸರಳುಗಳು ಮುರಿದು ಹಕ್ಕಿ ಹೊರಹೋಗಲು ಬೇಕಾದಷ್ಟು ದೊಡ್ಡ ಕಿಂಡಿ ಕಂಡಿತು. ಬಿಲ್ ಮಾತ್ರ ಅಲ್ಲೆಲ್ಲೂ ಕಾಣಲಿಲ್ಲ!

ತುಳಸಿ ಬಾಬು ಟಾರ್ಚ್ ಬೆಳಕಿನಲ್ಲಿ ಆಚೆ ಬದಿಯ ವೆರಾಂಡದಲ್ಲಿ ಏನೋ ಇರುವುದನ್ನು ಗಮನಿಸಿದ. ಅದು ಮಿಸ್ಟರ್ ಸನ್ಯಾಲ್ ಅವರ ಮನೆಗೆ ಹೊಂದಿಕೊಂಡಿತ್ತು. ಸನ್ಯಾಲ್ ಅವರ ಬೆಕ್ಕು ಬಿಲ್’ನ ಕೊಕ್ಕಿನಲ್ಲಿ ಸಿಕ್ಕಿ ಒದ್ದಾಡುತ್ತಿತ್ತು. ಅಲ್ಲೆಲ್ಲಾ ಬಿದ್ದ ರಕ್ತದ ಹನಿಗಳು ಟಾರ್ಚ್ ಬೆಳಕಿನಲ್ಲಿ ಹೊಳೆದವು. ಕಾಲು ಬಡಿಯುತ್ತಿದ್ದ ಬೆಕ್ಕಿನ ಜೀವ ಇನ್ನೂ ಹೋಗಿರಲಿಲ್ಲ. ಅಂಥಾ ಸಮಯದಲ್ಲೂ ಸನ್ಯಾಲ್ ಅವರ ಮನೆಯ ಬೀಗ ನೋಡಿ ’ಸದ್ಯ’ ಅವರು ಮನೆಯಲ್ಲಿಲ್ಲವಲ್ಲ ಎಂದು ನೆಮ್ಮದಿಯಾಯ್ತು ತುಳಸಿ ಬಾಬುಗೆ. ಅವರು ಡಿಸೆಂಬರ್, ಜನವರಿಯಲ್ಲೆಲ್ಲಾ ಶಾಲಾ ಪುಸ್ತಕಗಳ ಪ್ರಿಂಟಿಂಗ್ ಕೆಲಸ ಮಾಡಿ ಸುಸ್ತಾಗಿ ಈಗ ಮೂರು ದಿನಗಳ ಹಿಂದೆ ರಜೆಯ ಮೇಲೆ ಹೋಗಿದ್ದರು.

’ಬಿಲ್’ ಎಂದು ಜೋರಾಗಿ ಕೂಗಿದ ಕೂಡಲೇ ಬಾಯಲ್ಲಿದ್ದ ಬೆಕ್ಕನ್ನು ಅಲ್ಲಿಯೇ ಬಿಟ್ಟು ತನ್ನ ಗೂಡಿಗೆ ಹೋಯಿತು ಗಂಭೀರವಾಗಿ. ಅರೆಜೀವವಾಗಿದ್ದ ಬೆಕ್ಕನ್ನು ಎತ್ತಿ ಕೆಳಗೆ ರಸ್ತೆ ಬದಿಗೆ ಬಿಸಾಕಿದ ತುಳಸಿ ಬಾಬು. ಅಷ್ಟಕ್ಕೂ ಅಲ್ಲಿ ದಿನವೂ ಬೀದಿ ನಾಯಿಗಳು, ಬೆಕ್ಕುಗಳೂ ಅದೆಷ್ಟು ಸತ್ತು ಬಿದ್ದಿರುತ್ತದೆಯೋ ಏನೋ? ಇದೊಂದು ಬೆಕ್ಕು ಹೆಚ್ಚೇನೂ ಅಲ್ಲವಲ್ಲ.

ಆದರೆ ಅಂದು ರಾತ್ರಿ ಅವನಿಗೆ ನಿದ್ರೆ ಮಾತ್ರ ಎಡಬಲ ಸುಳಿಯಲಿಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!