ಕಥೆ

ಬಿಗ್ ಬಿಲ್ ಭಾಗ-೧

ಮೂಲ: ಸತ್ಯಜಿತ್ ರೇ

(Different Cultures: A collection of short stories by Pearson Longman UK)

ಅನುವಾದ: ಜಯಶ್ರೀ ಭಟ್

ಸಿಂಗಾಪುರ

ಹಳೇ ಕೋರ್ಟ್ ರಸ್ತೆಯ ಒಂಭತ್ತನೇ ಮಹಡಿಯಲ್ಲಿರುವ ತುಳಸಿ ಬಾಬುನ ಕಛೇರಿಯಯಲ್ಲೊಂದು ಪಶ್ಚಿಮಕ್ಕೆ ಮುಖಮಾಡಿರುವ ಕಿಟಕಿಯಿದೆ. ಅವನ ನೆರೆಯ ಟೇಬಲ್ಲಿನ ಜಗಮೋಹನ್ ದತ್ ಕವಳ ಉಗಿಯಲೆಂದು ಒಂದು ಬೆಳಿಗ್ಗೆ ಆ ಕಿಟಕಿಯ ಬಳಿ ಹೋದಾಗ ಆಕಾಶದಲ್ಲಿ ಎರಡು ಕಾಮನಬಿಲ್ಲುಗಳು ಒಟ್ಟಿಗೇ ಮೂಡಿರುವುದು ಕಂಡಿತು. ”ಇಲ್ಲಿ ಬನ್ನಿ ಸಾರ್, ಇಂತಾ ದೃಶ್ಯ ದಿನವೂ ಸಿಗುವಂತದ್ದಲ್ಲ..” ಎಂದು ಆಶ್ಚರ್ಯಭರಿತ ಧ್ವನಿಯಲ್ಲಿ ತುಳಸಿ ಬಾಬುವನ್ನು ಕರೆದ.

ತನ್ನ ಡೆಸ್ಕ್ ಬಿಟ್ಟು ಎದ್ದು ಬಂದ ತುಳಸಿ ಬಾಬು ಕಿಟಕಿಯತ್ತ ಹೋಗಿ ಹೊರಗೆ ಇಣುಕಿ ನೋಡಿದ “ಏನು ನೀವು ನೋಡಲು ಹೇಳಿದ್ದು?’ ಎಂದು ಪ್ರಶ್ನಿಸಿದ ಜಗಮೋಹನ್’ನನ್ನು.

”ಯಾಕೆ, ಆ ಎರಡು ಕಾಮನ ಬಿಲ್ಲುಗಳು ಕಾಣುತ್ತಿಲ್ಲವೇ? ನಿಮಗೇನು ಬಣ್ಣಗುರುಡೇ?” ಜಗಮೋಹನ್ ನಂಬಲಾರದವನಂತೆ ಉದ್ಗರಿಸಿದ.

ತುಳಸಿ ಬಾಬು ಮತ್ತೆ ತನ್ನ ಡೆಸ್ಕ್ ಕಡೆ ತೆರಳುತ್ತಾ ”ಅದರಲ್ಲಿ ಅಂಥಾದ್ದೇನು ವಿಶೇಷವಿದೆ ಎಂದು ನನಗರ್ಥವಾಗುವುದಿಲ್ಲ” ಎಂದ. ಅವನಿಗೆ ಅಲ್ಲಿ ಎರಡಲ್ಲ ಇಪ್ಪತ್ತು ಕಾಮನಬಿಲ್ಲುಗಳು ಒಟ್ಟಿಗೇ ಮೂಡಿದ್ದರೂ ಅದರಲ್ಲಿ ಅಂಥಾ ಆಶ್ಚರ್ಯ ಪಡುವಂಥದ್ದೇನೂ ಇರಲಿಲ್ಲ. ಕಮಾನೇ ಬೇಕಾದರೆ ಕೆಳಗಿನ ಸರ್ಕ್ಯುಲರ್ ರಸ್ತೆಯ ಎರಡು ಕಮಾನಿನ ಚರ್ಚ್ ನೋಡಿ ಬಂದರೂ ಸಾಕಪ್ಪ ಎನ್ನುವ ಅಸಾಮಿ ಆತ!

ಎಲ್ಲರಿಗೂ ಒಂದೇತೆರನಾದ ಆಶ್ಚರ್ಯಭಾವ ಇರುತ್ತೆ ಎನ್ನಲಾಗದು. ಆದರೆ ತುಳಸಿ ಬಾಬುಗೆ ಕುತೂಹಲ ಎನ್ನುವುದು ಆಗುವುದೇ ಇಲ್ಲವೇನೋ ಎಂದು ಯಾರಿಗಾದರೂ ಅನುಮಾನವಾದರೆ ಆಶ್ಚರ್ಯವಿಲ್ಲ ಎಂಬಂತಿದ್ದ. ಆದರೂ ಮನ್ಸೂರ್ ಮಾಡುವ ಮಟನ್ ಕಬಾಬ್ ಒಂದೇ ಅವನಲ್ಲಿ ಸದಾ ಆಶ್ಚರ್ಯ ಹುಟ್ಟಿಸುತ್ತಿದ್ದ ವಸ್ತು, ವಿಷಯವಾಗಿತ್ತು. ಅವನ ಗೆಳೆಯ ಪ್ರದ್ಯೋತ್ ಚಂದನೊಬ್ಬನಿಗೇ ಈ ಗುಟ್ಟು ಗೊತ್ತಿತ್ತು.

ಇಂಥಾ ವಿಚಿತ್ರ ಸ್ವಭಾವದ ತುಳಸಿ ಬಾಬುವಿಗೆ ಒಮ್ಮೆ ಔಷಧಿ ಸಸ್ಯ ಹುಡುಕುವಾಗ ದಂಡಕಾರಣ್ಯದಲ್ಲಿ ಅತ್ಯಂತ ದೊಡ್ಡ ಗಾತ್ರದ ಮೊಟ್ಟೆಯೊಂದು ಸಿಕ್ಕಾಗಲೂ ಅವನಿಗೆ ಆಶ್ಚರ್ಯವೇನೂ ಆಗಲಿಲ್ಲ. ಈಗೊಂದು ಹದಿನೈದು ವರ್ಷಗಳಿಂದ ತುಳಸಿ ಬಾಬು ತನ್ನ ಪೂರ್ವಜರು ಮಾಡುತ್ತಿದ್ದ ಗಿಡ ಮೂಲಿಕೆ ವೈದ್ಯವನ್ನು ಮುಂದುವರಿಸಿಕೊಂಡು ಹೋಗಲು ಪ್ರಯತ್ನಿಸತೊಡಗಿದ್ದ. ಅವನ ತಂದೆ ಪ್ರಸಿದ್ಧ ನಾಟಿ ವೈದ್ಯನಾಗಿದ್ದ.  ತುಳಸಿ ಬಾಬುನ ಮೂಲ ಸಂಪಾದನೆ ಏನಿದ್ದರೂ ಆರ್ಬುಥ್ನಾಟ್ ಮತ್ತು ಕಂಪೆನಿಯಲ್ಲಿನ ಮೇಲ್ದರ್ಜೆ ಕ್ಲರ್ಕನಾಗಿ ಗಳಿಸುತ್ತಿದ್ದ ಸಂಬಳವೇ ಆಗಿತ್ತು. ಆದರೂ ತನ್ನ ಮೂಲ ವೃತ್ತಿಯನ್ನು ಪೂರ್ತಿಯಾಗಿ ತ್ಯಜಿಸಿಬಿಡಲು ಅವನಿಂದಾಗಿರಲಿಲ್ಲ. ಇತ್ತೀಚೆಗೆ ಕೊಲ್ಕೊತ್ತಾದ ಎರಡು ಸುಮಾರು ಪ್ರತಿಷ್ಠಿತ ಎನ್ನಬಹುದಾದ ಮನೆತನದವರು ಇವನ ಗಿಡಮೂಲಿಕೆಯಿಂದ ಯಾವ್ಯಾವುದೋ ಖಾಯಿಲೆಯಿಂದ ಬಚಾವ್ ಆಗಿದ್ದರೆಂಬುದು ಅವನ ಈ ಕ್ಷೇತ್ರದಲ್ಲಿನ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಅವನ ಪಾರ್ಟ್ ಟೈಂ ವೈದ್ಯಕೀಯದ ಪ್ರತಿಷ್ಠೆಯೂ ಇದರಿಂದಾಗಿ ಹೆಚ್ಚಾಗಿತ್ತು.

ಈ ಗಿಡಮೂಲಿಕೆಗಳೇ ಮತ್ತೆ ಅವನನ್ನು ದಂಡಕಾರಣ್ಯಕ್ಕೆ ಬರುವಂತೆ ಮಾಡಿದ್ದವು. ಜಗದಾಳ್ಪುರದ ಉತ್ತರಕ್ಕೆ ಸುಮಾರು ಮೂವತ್ತು ಮೈಲಿ ದೂರದಲ್ಲಿ ಗುಹೆಯೊಂದರಲ್ಲಿ ಸಾಧುವೊಬ್ಬರು ಇದ್ದಾರೆಂದೂ, ಅವರು ರಕ್ತದೊತ್ತಡಕ್ಕೆ ರವೊಲ್ಫ಼ಾ ಸರ್ಪೆಂಟಿನಾಗಿಂತಲೂ ಉತ್ತಮ ಔಷಧಿ ಕೊಡುತ್ತಾರೆಂದೂ ಕೇಳಿ ತಿಳಿದಿದ್ದ ತುಳಸಿ ಬಾಬು. ತುಳಸಿ ಬಾಬುನ ಬಿ.ಪಿಗೆ ಸರ್ಪೆಂಟಿನಾ ಕೆಲಸ ಮಾಡಿರಲಿಲ್ಲ. ಅವನಿಗೆ ಅಲೋಪತಿ, ಹೋಮಿಯೋಪತಿಗಳಲ್ಲಿ ನಂಬಿಕೆ ಇರಲಿಲ್ಲ.

ತುಳಸಿ ಬಾಬು ತನ್ನ ಜೊತೆ ಗೆಳೆಯ ಪ್ರದ್ಯೋತ್ ಬಾಬುವನ್ನೂ ಕರೆದುಕೊಂಡು ಹೋಗಿದ್ದ ಈ ಜಗದಾಳ್ಪುರ ಯಾತ್ರೆಗೆ. ತುಳಸಿ ಬಾಬುನ ಆಶ್ಚರ್ಯ ವಿಹೀನತೆ ಬಗ್ಗೆ ಪ್ರದ್ಯೋತ್ ಬಾಬುಗೆ ಯಾವಾಗಲೂ ಕಸಿವಿಸಿಯಾಗುತ್ತಿತ್ತು. ಒಂದು ದಿನ ಅವನು ತಡೆಯಲಾರದೆ ಹೇಳಿಬಿಟ್ಟಿದ್ದ ”ಸ್ವಲ್ಪ ಕಲ್ಪನಾ ಶಕ್ತಿ ಇದ್ದರೆ ಎಂಥವರಿಗೂ ಆಶ್ಚರ್ಯ ಎನ್ನುವುದು ಆಗೇ ಆಗುತ್ತದೆ, ಆದರೆ ನಿನಗೆ ಮಾತ್ರ ಒಂದು ಭೂತವೇ ಬಂದು ಎದುರು ನಿಂತರೂ ಏನೂ ಅನಿಸುವುದಿಲ್ಲ” ಅಂತ. ಅದಕ್ಕೆ ತುಳಸಿ ಬಾಬು ತಣ್ಣಗೆ ಪ್ರತಿಕ್ರಿಯಿಸಿದ್ದ ” ಒಬ್ಬ, ಅವನಿಗೆ ಆಶ್ಚರ್ಯವಾಗದಿದ್ದಾಗಲೂ ಹಾಗೆ ನಟಿಸುವುದು ತೋರುಗಾಣಿಕೆಯಾಗುತ್ತದೆ. ನಾನದನ್ನು ಒಪ್ಪುವುದಿಲ್ಲ” ಅಂತ.

ಆದರೆ ಇದೆಲ್ಲ ಅವರಿಬ್ಬರ ನಡುವಿನ ಗೆಳೆತನಕ್ಕೇನೂ ಅಡ್ಡಿಯಾಗಿರಲಿಲ್ಲ.

ಚಳಿಗಾಲದ ರಜೆಯಲ್ಲಿ ಇಬ್ಬರು ಮಿತ್ರರೂ ಜಗದಾಳ್ಪುರದಲ್ಲಿ  ಹೋಟೆಲೊಂದರಲ್ಲಿ ಒಂದು ರೂಮು ಬಾಡಿಗೆ ಪಡೆದರು. ಇಲ್ಲಿಗೆ ಬರುವಾಗ ಮದ್ರಾಸ್ ಮೈಲ್ ರೈಲಿನಲ್ಲಿ ಇಬ್ಬರು ವಿದೇಶಿ ಪ್ರಯಾಣಿಕರು ಇವರ ಕಂಪಾರ್ಟ್’ಮೆಂಟಿಗೆ ಬಂದು ಕೂತರು. ಅವರಿಬ್ಬರೂ ಸ್ವೀಡಿಶ್ ಪ್ರಜೆಗಳು. ಅವರಲ್ಲಿ ಒಬ್ಬ ಅದೆಷ್ಟು ಉದ್ದವಿದ್ದನೆಂದರೆ ಅವನ ತಲೆ ರೈಲಿನ ಛಾವಣಿ ಮುಟ್ಟುತ್ತಿತ್ತು. ಪ್ರದ್ಯೋತ್ ಬಾಬು ಅವನ ಎತ್ತರ ಎಷ್ಟೆಂದು ಕೇಳಿದ. ಅದಕ್ಕೆ ಆ ಉದ್ದನೆ ಸ್ವೀಡಿಶ್ ವ್ಯಕ್ತಿ ”ಎರಡು ಮೀಟರ್ ಹಾಗೂ ಏಳು ಸೆಂಟಿ ಮೀಟರ್” ಎಂದುತ್ತರಿಸಿದ. ಹಾಗೆಂದರೆ ಸುಮಾರು ಏಳಡಿ ಎತ್ತರವಾಯ್ತು. ಅಲ್ಲಿಂದ ಮುಂದೆ ಪ್ರಯಾಣದುದ್ದಕ್ಕೂ ಪ್ರದ್ಯೋತ್ ಬಾಬುವಿಗೆ ಅವನ ಕಣ್ಣನ್ನು ಈ ಮಾರುದ್ದದ ಯುವಕನ ಮೇಲಿಂದ ತೆಗೆಯಲೇ ಆಗಿರಲಿಲ್ಲ. ಆದರೂ ತುಳಸಿ ಬಾಬುಗೆ ಒಂದಿನಿತೂ ಆಶ್ಚರ್ಯವೆನಿಸಲಿಲ್ಲ ಈ ಲಂಬೂನನ್ನು ನೋಡಿ. ”ಇದಕ್ಕೆಲ್ಲ ಕಾರಣ ಸ್ವೀಡಿಶ್ ಜನಗಳ ಆಹಾರ ಪದ್ಧತಿಯೇ ಕಾರಣ, ಅದರಲ್ಲಿ ಚಕಿತರಾಗುವಂತದ್ದೇನೂ ಇಲ್ಲ” ಎಂದು ಹೇಳಿ ಪ್ರದ್ಯೋತ್ ಬಾಬುನ ಕುತೂಹಲವನ್ನು ಚಿವುಟಿ ಹಾಕಿದ್ದ.

ಕಾಡಿನಲ್ಲಿ ಸುಮಾರು ಒಂದು ಮೈಲಿ ದೂರ ನಡೆದು, ಐನೂರು ಮೀಟರ್’ನಷ್ಟು ಎತ್ತರ ಏರಿ ಕೊನೆಗೂ ಧುಮಾಯಿ ಬಾಬಾನ ಗುಹೆಗೆ ಬಂದು ತಲುಪಿದ್ದರು ಅವರಿಬ್ಬರು. ಗುಹೆಯೇನೋ ದೊಡ್ಡದಿತ್ತು. ಆದರೆ ಸೂರ್ಯನ ಪ್ರವೇಶವನ್ನೇ ಕಾಣದ ಆ ಗುಹೆಯಲ್ಲಿ ಹತ್ತಡಿ ಇಡುವಷ್ಟರಲ್ಲೇ ಕಾರ್ಗತ್ತಲು ಅವರನ್ನು ನುಂಗಿಹಾಕಿತ್ತು. ಅಲ್ಲಿ ಬಾಬಾನ ಒಲೆಯಿಂದೆದ್ದ ಹೊಗೆ ಬೇರೆ ಕವಿದಿತ್ತು. ಆ ಗುಹೆಯೊಳಗಿನ ಸುಣ್ಣದ ಕಲ್ಲಿನಲ್ಲಿ ಮೂಡಿದ್ದ, ಮೇಲೆ ಕೆಳಗೆ ಜೋತುಬಿದ್ದ ಆಕೃತಿಗಳನ್ನೇ ತನ್ನ ಟಾರ್ಚ್ ಬೆಳಕಿನಲ್ಲಿ ನೋಡುವುದರಲ್ಲಿ ತಲ್ಲೀನನಾಗಿಬಿಟ್ಟಿದ್ದ ಪ್ರದ್ಯೋತ್ ಬಾಬು. ತುಳಸಿ ಬಾಬು ಮಾತ್ರ ಸಾಧುವಿನ ಬಳಿ ತನಗೆ ಬೇಕಾದ ಬೇರು, ನಾರಿನ ಚರ್ಚೆ ನಡೆಸಿದ್ದ. ಧುಮಾಯಿ ಬಾಬಾ ಹೇಳಿದ ಆ ಔಷಧಿ ಸಸ್ಯದ ಹೆಸರು ’ಚಕ್ರ ಪರ್ಣ’ ಎಂದಾಗಿತ್ತು. ಈ ಸಂಸ್ಕ್ರುತ ಪದದ ಅರ್ಥ ’ದುಂಡನೆ ಎಲೆಯುಳ್ಳ ಸಸ್ಯ’ ಎಂದು. ತುಳಸಿ ಬಾಬು ಈ ಹೆಸರನ್ನು ಇದುವರೆಗೂ ಕೇಳಿರಲಿಲ್ಲ. ಅವನು ಓದಿದ ಅರ್ಧ ಡಜನ್ ಪುಸ್ತಕಗಳಲ್ಲೂ ಈ ಹೆಸರಿನ ಪ್ರಸ್ತಾಪವೇ ಇರಲಿಲ್ಲ. ಇದೊಂದು ದೊಡ್ಡ ಮರದಂತಿರದೆ ಚಿಕ್ಕ ಗಿಡವಾಗಿತ್ತು. ದಂಡಕಾರಣ್ಯದ ಒಂದು ಭಾಗದಲ್ಲಿ ಮಾತ್ರ ಈ ಸಸ್ಯ ಸಿಗುತ್ತಿತ್ತು ಹೊರತು ಇನ್ನೆಲ್ಲೂ ಇದು ಸಿಗುತ್ತಿರಲಿಲ್ಲ. ಬಾಬಾ ಇದು ಎಲ್ಲಿ ಸಿಗುತ್ತದೆ ಎಂಬೆಲ್ಲ ಮಾಹಿತಿಯನ್ನೂ ಬಹಳ ಚೆನ್ನಾಗಿ ವಿವರಿಸಿ ಹೇಳಿದ. ಅದನ್ನೆಲ್ಲ ತುಳಸಿ ಬಾಬು ಒಂದು ಕಾಗದದಲ್ಲಿ ಬರೆದಿಟ್ಟುಕೊಂಡ.

ಅಲ್ಲಿಂದ ಹೊರಟಮೇಲೆ ತುಳಸಿ ಬಾಬು ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಆ ಸಸ್ಯ ಇರುವ ದಿಕ್ಕಿನಲ್ಲಿ ನಡೆಯತೊಡಗಿದ. ಪ್ರದ್ಯೋತ್ ಬಾಬುವಿಗೆ ಈ ಕಾಡಿನಲ್ಲಿ, ಗೆಳೆಯನ ಜೊತೆ ನಡೆಯುವುದೇ ಸಂತಸದ ವಿಷಯವಾಗಿತ್ತು. ಹಿಂದೆಲ್ಲಾ ಅವನು ದೊಡ್ಡ ದೊಡ್ಡ ಶಿಕಾರಿ ಮಾಡಿದವನೇ. ಆದರೀಗ ವನ್ಯಜೀವಿ ಸಂರಕ್ಷಣೆ ಎನ್ನುವ ಕಾನೂನಿಂದಾಗಿ ಅದೆಲ್ಲ ಸಾಧ್ಯವಿರಲಿಲ್ಲ. ಆದರೂ ಕಾಡಿನ ಜಾಡೇ ಅವನಿಗೆ ಮುದ ನೀಡುತ್ತಿತ್ತು.

ಆ ಸಾಧು ಹೇಳಿದ ಮಾಹಿತಿ ಅತ್ಯಂತ ಕರಾರುವಕ್ಕಾಗಿತ್ತು. ಅರ್ಧ ಗಂಟೆ ಕಳೆಯುವಷ್ಟರಲ್ಲಿ ಅವರೊಂದು ಸಣ್ಣ ಕೊಳ್ಳದ ಹತ್ತಿರ ಬಂದಿದ್ದರು. ಅದನ್ನು ದಾಟುತ್ತಿದ್ದಂತೆ ಈ ಪುಟ್ಟ ಸಸ್ಯಗಳು ಕಾಣಸಿಕ್ಕವು. ಸುಮಾರು ಎದೆಯೆತ್ತರ ಬರುವ ಈ ಗಿಡಗಳಲ್ಲಿ ವೃತ್ತಾಕಾರದ ಎಲೆಗಳೂ, ಆ ಎಲೆಗಳ ಮಧ್ಯೆ ಗುಲಾಬಿ ಬಣ್ಣದ ಚುಕ್ಕಿಗಳೂ ಕಂಡವು. ಅಲ್ಲೇ ಸಮೀಪದಲ್ಲಿ ಒಂದು ಬೇವಿನ ಮರವು ಸಿಡಿಲಿನ ಹೊಡೆತಕ್ಕೆ ಉರುಳಿ ಬಿದ್ದಿರುವುದೂ ಕಂಡಿತು.

”ಇದೆಂತಹಾ ಜಾಗ?” ಪ್ರದ್ಯೋತ್ ಬಾಬು ಸುತ್ತಲೂ ನೋಡುತ್ತಾ ವಿಸ್ಮಿತನಾಗಿ ಕೇಳಿದ.

”ಯಾಕೆ, ಇಲ್ಲಿ ಅಂತದ್ದೇನಿದೆ?” ತುಳಸಿ ಬಾಬು ಸಹಜವಾಗಿ ಹೇಳಿದ.

”ಈ ಬೇವಿನ ಮರ ಬಿಟ್ಟರೆ ಇಲ್ಲಿನ್ನೊಂದು ಮರವೂ ಇಲ್ಲ. ಹಾಗೂ ಕಾಡಿನ ಬೇರೆ ಜಾಗಕ್ಕಿಂತ ಇಲ್ಲಿ ಅದೆಷ್ಟು ತೇವ ಇದೆ ನೋಡು” ಎನ್ನುತ್ತಾ ಜೌಗು ನೆಲವನ್ನು ಕಾಲಿನಲ್ಲಿ ಅದುಮಿದ ಪ್ರದ್ಯೋತ್ ಬಾಬು.

ಅದು ತೇವಾಂಶದಿಂದ ಕೂಡಿತ್ತಾದರೂ ಅದರಲ್ಲಿ ವಿಶೇಷವೇನಿದೆ ಎಂದು ತುಳಸಿ ಬಾಬುಗೆ ಅರ್ಥವಾಗಲಿಲ್ಲ. ಕೊಲ್ಕೊತ್ತಾದಲ್ಲೇ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋದರೆ ತೇವಾಂಶದಲ್ಲಿ ವ್ಯತ್ಯಾಸವಾಗುವುದನ್ನು ಕಾಣಬಹುದು. ದಕ್ಷಿಣಕ್ಕಿರುವ ತೋಲಿಗುಂಗೆಯು ಉತ್ತರಕ್ಕಿರುವ ಶ್ಯಾಮ್’ಬಜಾರ್’ಗಿಂತ ತುಂಬಾ ತಂಪು. ಅಂಥಾದ್ದರಲ್ಲಿ ಕಾಡಿನ ಒಂದು ಭಾಗ ಸ್ವಲ್ಪ ಬೇರೆಯಾಗಿದ್ದರೆ ಅದಕ್ಕೇಕೆ ಆಶ್ಚರ್ಯವಾಗಬೇಕು? ಇದು ಪ್ರಕೃತಿಯ ವೈಚಿತ್ರ್ಯವಷ್ಟೇ ಹೊರತು ಇನ್ನೇನಲ್ಲ.

ತುಳಸಿ ಬಾಬು ತನ್ನ ಚೀಲ ಕೆಳಗಿಳಿಸುತ್ತ ಬಗ್ಗಿ ಚಕ್ರಪರ್ಣ ಗಿಡದತ್ತ ನೋಡುತ್ತಿರುವಾಗ ಪ್ರದ್ಯೋತ್ ಬಾಬು ಅವನನ್ನು ತಡೆದು ಏನೋ ಹೇಳಲೆತ್ನಿಸಿದ.

”ಅದೇನದು ಮತ್ತೆ?” ತುಳಸಿ ಬಾಬು ಕೂಡ ಅದನ್ನು ಗಮನಿಸಿದ್ದ. ಆದರೆ ಅವನಿಗದೇನೂ ವಿಶೇಷವೆನಿಸಿರಲಿಲ್ಲ. ”ಅದೇನೋ ಮೊಟ್ಟೆ ಇರಬೇಕು” ಎಂದು ನಿರ್ಲಕ್ಷ್ಯದಿಂದ ಉತ್ತರಿಸಿದ ಸ್ನೇಹಿತ ಕೇಳಬೇಕೆಂದಿದ್ದ ಪ್ರಶ್ನೆಗೆ.

ಪ್ರದ್ಯೋತ್ ಬಾಬು ಅದೊಂದು ಮೊಟ್ಟೆಯಾಕಾರಾದ ಕಲ್ಲು ಎಂದೇ ತಿಳಿದಿದ್ದ. ಆದರದು ಹಳದಿ, ಕಂದು ಗೆರೆ, ನೀಲಿ ಚುಕ್ಕಿಗಳಿರುವ ನಿಜವಾದ ಮೊಟ್ಟೆಯೇ ಆಗಿತ್ತು. ಹೆಬ್ಬಾವಿನ ಮೊಟ್ಟೆ ಇರಬಹುದೇ ಎಂದು ಯೋಚಿಸಿದ ಅದರ ದೈತ್ಯ ಗಾತ್ರವನ್ನು ನೋಡುತ್ತ.

ಅಷ್ಟರಲ್ಲಿ ತುಳಸಿ ಬಾಬು ಒಂದಷ್ಟು ಎಲೆಗಳಿರುವ ರೆಂಬೆಗಳನ್ನು ಕೊಯ್ದು ಚೀಲಕ್ಕೆ ತುಂಬಿಸಿಕೊಂಡಿದ್ದ. ಅವನು ಇನ್ನಷ್ಟು ಎಲೆ ಸಂಗ್ರಹಿಸಬೇಕೆಂದುಕೊಳ್ಳುವಾಗಲೇ ಏನೋ ತಡೆಯುಂಟಾಗಿ ಅವನ ಕೆಲಸ ಅಷ್ಟಕ್ಕೇ ನಿಂತಿತು. ಆ ಮೊಟ್ಟೆ ಇದೇ ಹೊತ್ತಿಗೇ ಒಡೆದು ಮರಿಯೊಂದು ಹೊರಬರಬೇಕೇ?

ತಲೆ ಮಾತ್ರ ಮೊಟ್ಟೆಯಿಂದ ಹೊರಗೆ ಇಣುಕಿತ್ತು. ಅದೊಂದು ಹಾವೂ ಅಲ್ಲ, ಮೊಸಳೆಯೂ ಅಲ್ಲ, ಆಮೆಯೂ ಅಲ್ಲ, ಆದರದೊಂದು ಹಕ್ಕಿಯಾಗಿತ್ತು!

ಬೇಗನೇ ಇಡೀ ಪಕ್ಷಿಯ ದೇಹ ಮೊಟ್ಟೆಯಿಂದ ಹೊರಗೆ ಬಂದಿತ್ತು. ತನ್ನ ಕಾಲಿನ ಮೇಲೆ ನಿಂತು ಸುತ್ತಲೂ ನೋಡ ತೊಡಗಿತ್ತು ಆ ನವಜಾತ ಹಕ್ಕಿ. ಅದು ಈಗಾಗಲೇ ಒಂದು ಕೋಳಿಯಷ್ಟು ದೊಡ್ದ ಗಾತ್ರದ್ದಾಗಿತ್ತು. ಪ್ರದ್ಯೋತ್ ಬಾಬುವಿಗೆ ಹಕ್ಕಿಗಳೆಂದರೆ ಬಲು ಇಷ್ಟ. ಅವನೊಂದು ಬುಲ್ ಬುಲ್ ಅನ್ನೂ, ಮೈನಾವನ್ನೂ ಸಾಕಿಕೊಂಡಿದ್ದ. ಆದರೆ ಇಷ್ಟೊಂದು ದೊಡ್ಡ ಗಾತ್ರದ ಹಕ್ಕಿ ಮರಿ, ಅದರ ಬಲಿಷ್ಠ ಕೊಕ್ಕು, ಉದ್ದನೆ ಕಾಲು, ನೇರಳೆ ಬಣ್ಣದ ರೆಕ್ಕೆ ಹಾಗೂ ಹುಟ್ಟುತ್ತಲೇ ಕಂಡ ಚುರುಕಾದ ತೀಕ್ಷ್ಣ ನೋಟ ಅವನು ಈ ಹಿಂದೆ ಎಲ್ಲೂ ನೋಡಿರಲಿಲ್ಲ.

 ತುಳಸಿ ಬಾಬುಗೆ ಮಾತ್ರ ಈ ಹಕ್ಕಿ ಪಿಕ್ಕಿಯಲ್ಲೆಲ್ಲ ಏನೇನೂ ಆಸಕ್ತಿ ಇರಲಿಲ್ಲ. ಅವನು ತನ್ನ ಚೀಲದಲ್ಲಿ ಸೊಪ್ಪನ್ನು ತುಂಬಿಸುವುದರಲ್ಲೇ ಮಗ್ನನಾಗಿದ್ದ.

”ಎಂಥಾ ವಿಚಿತ್ರ! ಇಲ್ಲಿ ಎಲ್ಲೂ ಈ ಹಕ್ಕಿಯ ತಂದೆ, ತಾಯಿಯ ಪತ್ತೆಯೇ ಇಲ್ಲ. ಸುತ್ತ ಮುತ್ತ ಕೂಡ ಎಲ್ಲೂ ಯಾವ ಹಕ್ಕಿಯೂ ಕಾಣುತ್ತಿಲ್ಲ” ಪ್ರದ್ಯೋತ್ ಬಾಬು ಎಲ್ಲೆಡೆ ಕಣ್ಣು ಹಾಯಿಸುತ್ತಾ ಹೇಳಿದ.

”ನನಗನಿಸುತ್ತೆ, ಒಂದು ದಿನಕ್ಕೆ ಇಷ್ಟು ವಿಚಿತ್ರಗಳು ಸಾಕು“ ಎಂದು ಹೆಗಲಿಗೆ ಸೊಪ್ಪು ತುಂಬಿದ ಚೀಲ ಏರಿಸುತ್ತಾ ಹೇಳಿದ ತುಳಸಿ ಬಾಬು. “ ಈಗಾಗಲೇ ಗಂಟೆ ನಾಲ್ಕಾಯಿತು, ಕತ್ತಲಾಗುವುದರೊಳಗೆ ಈ ಕಾಡಿಂದ ಹೊರಹೋಗಬೇಕು“

ಮನಸ್ಸಿಲ್ಲದ ಮನಸ್ಸಿಂದ ಪ್ರದ್ಯೋತ್ ಬಾಬು ಆ ಹಕ್ಕಿ ಮರಿಯಿಂದ ತನ್ನ ಗಮನ ಇತ್ತ ತಿರುಗಿಸಿ ತುಳಸಿ ಬಾಬುನ ಜೊತೆ ಹೊರಡಲಣಿಯಾದ. ಸುಮಾರು ಅರ್ಧ ಗಂಟೆಯಷ್ಟಾದರೂ ನಡೆಯ ಬೇಕಿತ್ತು, ಕಾಯಿತ್ತಿರುವ ಟ್ಯಾಕ್ಸಿಯನ್ನು ತಲುಪಲು.

ಪುಟ್ಟ ಪುಟ್ಟ ಹೆಜ್ಜೆ ಸಪ್ಪಳ ಕೇಳಿ ಪ್ರದ್ಯೋತ್ ಬಾಬು ಹಿಂದಿರುಗಿ ನೋಡಿದ.

“ನೋಡಿಲ್ಲಿ..“ ಪ್ರದ್ಯೋತ್ ಬಾಬು ತನ್ನ ಸ್ನೇಹಿತನನ್ನು ಕರೆದ.

ತುಳಸಿ ಬಾಬು ಹಿಂದಿರುಗಿ ನೋಡುತ್ತಾ ನಿಂತ. ಹಕ್ಕಿ ಮರಿ ಅವನನ್ನೇ ನೇರವಾಗಿ ನೋಡತೊಡಗಿತ್ತು. ಹಾಗೇ ಹೆಜ್ಜೆ ಹಾಕುತ್ತಾ ಅವನ ಮುಂದೇ ನಿಂತು ತನ್ನ ಕೊಕ್ಕಿನಿಂದ ಅವನ ಧೋತಿಯನ್ನು ಕಚ್ಚಿ ಎಳೆಯಿತು.

ಪ್ರದ್ಯೋತ್ ಬಾಬು ಅವಕ್ಕಾಗಿ ನೋಡುತ್ತಿರುವಂತೆಯೇ ತುಳಸಿ ಬಾಬು ಆ ಹಕ್ಕಿ ಮರಿಯನ್ನು ಎತ್ತಿ ತನ್ನ ಚೀಲದಲ್ಲಿ ಹಾಕಿಕೊಂಡ. “ಏಯ್, ಏನು ಮಾಡುತ್ತಿದ್ದೀಯಾ? ಆ ಹೆಸರಿಲ್ಲದ ಹಕ್ಕಿಯನ್ನು ನಿನ್ನ ಚೀಲಕ್ಕೇ ಹಾಕಿಕೊಂಡುಬಿಟ್ಟೆಯಲ್ಲ?“ ಕೂಗಿ ಕೇಳಿದ ಆತ.

“ನನಗೆ ಯಾವಾಗಲೂ ಏನಾದರೂ ಪ್ರಾಣಿಯನ್ನು ಸಾಕಿಕೊಳ್ಳಬೇಕು ಅಂತಿತ್ತು. ಬೀದಿ ನಾಯಿಯನ್ನೇ ಸಾಕಿಕೊಳ್ಳುತ್ತಾರಂತೆ, ಅಂಥಾದ್ದರಲ್ಲಿ ಒಂದು ಹೆಸರಿಲ್ಲದ ಹಕ್ಕಿ ಸಾಕಿಕೊಂಡರೆ ತಪ್ಪೇನು?“ ನಡೆಯುತ್ತಲೇ ಉತ್ತರಿಸಿದ ತುಳಸಿ ಬಾಬು.

ಆ ಹಕ್ಕಿಮರಿ ತೂಗುತ್ತಿದ್ದ ಚೀಲದಲ್ಲಿ ಕೂತು ಕತ್ತು ಹೊರಹಾಕಿ ಸುತ್ತಲೂ ನೋಡುತ್ತಿದಿದ್ದನ್ನು ಪ್ರದ್ಯೋತ್ ಬಾಬು ನೋಡುತ್ತಾ ನಡೆದ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!