ಕಥೆ

ಕಾಮಿತಾರ್ಥ – 1

ಜಪಾನೀ ಮೂಲ: ಹರುಕಿ ಮುರಕಾಮಿ

ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ

ಭಾಗ 1

ಕೊಯಿಂಜಿ ಸ್ಟೇಷನ್‍ನಲ್ಲಿ ಟೆಂಗೊ, ಟ್ರೇನು ಹತ್ತಿದ. ಟ್ರೇನು ಬಹುತೇಕ ಖಾಲಿಯಾಗಿತ್ತು. ಟೆಂಗೊನಿಗೆ ಅವೊತ್ತು ಹೇಳಿಕೊಳ್ಳುವಂಥಾ ವಿಶೇಷ ಕೆಲಸಗಳೇನೂ ಇರಲಿಲ್ಲ. ಇಡೀ ದಿನವೇ ಅವನ ದಿನ. ಎಲ್ಲಿಗೆ ಬೇಕಾದರೂ ಹೋಗುವ, ಬೇಕೆನ್ನಿಸಿದ್ದನ್ನು ಮಾಡುವ – ಅಥವಾ ಏನೂ ಮಾಡುವ ಮನಸ್ಸಿಲ್ಲದಿದ್ದರೆ ಏನೂ ಮಾಡದೆ ಸುಮ್ಮನಿದ್ದುಬಿಡುವ ಎಲ್ಲ ಸ್ವಾತಂತ್ರ್ಯ ಅವನಿಗಿತ್ತು. ಬೇಸಗೆಯ ಬಿಸಿಲು ಹತ್ತು ಗಂಟೆಯ ಹೊತ್ತಿಗೇ ನಗರದ ಮೇಲೆ ಇಳಿಯತೊಡಗಿತ್ತು. ಟ್ರೇನು ಶಿಂಜುಕು, ಯಾಟ್ಸುಯ, ಒಷನೊಮಿಝು ಸ್ಟೇಶನ್ನುಗಳನ್ನು ದಾಟಿ ಟೋಕಿಯೋ ಮುಖ್ಯ ನಿಲ್ದಾಣಕ್ಕೆ ಬಂತು. ಅದೇ ಕೊನೆಯ ನಿಲ್ದಾಣವಾದ್ದರಿಂದ ಉಳಿದುಕೊಂಡಿದ್ದ ಪ್ರಯಾಣಿಕರೆಲ್ಲ ಇಳಿದರು. ಟೆಂಗೊ ಕೂಡ ಆ ಸರತಿ ಅನುಸರಿಸಿ ಹೊರಗೆ ಕಾಲಿಟ್ಟ. ಏನು ಮಾಡೋದೊಳ್ಳೇದು ಎಂದು ಯೋಚಿಸುತ್ತ ಸ್ಟೇಷನ್ನಲ್ಲಿದ್ದ ಬೆಂಚ್ ಮೇಲೆ ಕೂತು ಯೋಚಿಸಿದ. ಒಳ್ಳೇ ಬಿಸಿಲು ಕಾರುವ ದಿನ ಇದ್ದಹಾಗಿದೆ. ಸಮುದ್ರ ದಂಡೆಗೆ ಹೋಗಿಕೂತರೆ ಹೇಗೆ, ಆಹ್ಲಾದಕರವಾಗಿರುತ್ತೆ ಅನ್ನಿಸಿತು. ಕತ್ತೆತ್ತಿ ಅಲ್ಲಿ ಹಾಕಿದ್ದ ಮ್ಯಾಪನ್ನು ತದೇಕಚಿತ್ತದಿಂದ ನೋಡಿದ.

ಎಲ್ಲೊ ಕಾಣುವ ಹುಲ್ಲು ಮೇಯಲು ಬೇಲಿ ಹಾರುವ ತುಡುಗು ದನವನ್ನು ಎಳೆದುಕಟ್ಟುವ ಹಗ್ಗದಂತೆ ಮನಸ್ಸು ಅವನ ಯೋಚನೆಗಳನ್ನು ಎಳೆದುತಂದು ಹಳೆ ಗೂಟಕ್ಕೆ ಸುತ್ತಿತು.

ತಲೆಯನ್ನು ಅತ್ತಿತ್ತ ಲಡಬಡ ಅಲ್ಲಾಡಿಸಿದರೂ ಅವನ ಮನಸ್ಸಿನಲ್ಲಿ ನೆಟ್ಟುಕೂತ ಯೋಚನೆ ಅಲ್ಲಾಡಲಿಲ್ಲ. ಬಹುಶಃ ಕೊಯಿಂಜಿಯಲ್ಲಿ ಟ್ರೇನು ಹತ್ತುವಾಗಲೇ ಮನಸ್ಸು ಈ ಯೋಚನೆಯನ್ನು ಗುಟ್ಟಾಗಿ ಗಟ್ಟಿ ಮಾಡಿಕೊಂಡಿತ್ತೆಂದು ಕಾಣುತ್ತದೆ. ಸರಿ, ಹಾಗೇ ಮಾಡೋಣ ಅಂದುಕೊಂಡವನೇ ಸ್ಟೇಷನ್ನಿನಲ್ಲಿ ವಿಚಾರಣೆ ವಿಭಾಗಕ್ಕೆ ಹೋಗಿ ಚಿಕುರಕ್ಕೆ ಹೋಗುವ ಅತಿವೇಗದ ಟ್ರೇನು ಯಾವುದು ಅಂತ ಕೇಳಿದ. ಅಲ್ಲಿದ್ದ ಅಧಿಕಾರಿ ಸಾವಿರ ಪುಟಗಳಿದ್ದಂತಿದ್ದ ಟ್ರೇನ್ ಡೈರೆಕ್ಟರಿ ತೆಗೆದು ಪುಟಗಳನ್ನು ಅಸಡಾಬಸಡಾ ತಿರುಗಿಸಿ ಕೊನೆಗೊಂದು ಪುಟ ನೋಡಿ, ಹನ್ನೊಂದೂವರೆಗೆ ತತಿಯಾಮಕ್ಕೆ ಒಂದು ಟ್ರೇನ್ ಹೋಗುತ್ತದೆಂದೂ, ಅಲ್ಲಿಳಿದುಕೊಂಡು ಯಾವುದಾದರೂ ಲೋಕಲ್ ಟ್ರೇನ್ ಹತ್ತಿದರೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಚಿಕುರ ಮುಟ್ಟಬಹುದೆಂದೂ ಹೇಳಿದ. ಟೆಂಗೊ ಟಿಕೇಟು ಪಡೆದ. ಪಕ್ಕದಲ್ಲೇ ಇದ್ದ ಹೋಟೇಲಲ್ಲಿ ಊಟ ಮುಗಿಸಿಕೊಂಡು ಹೊರಟ.

ತಂದೆಯನ್ನು ನೋಡಲು ಹೋಗುವುದು ಅವನಿಗೇನೂ ಸಂತೋಷದ ಸಂಗತಿಯಾಗಿರಲಿಲ್ಲ. ತಂದೆಯನ್ನು ಅವನೆಂದೂ ಅಷ್ಟೊಂದು ಇಷ್ಟ ಪಟ್ಟವನಲ್ಲ. ತಂದೆಯೂ ಮಗನ ಮೇಲೆ ಆಸಕ್ತಿ ಇಟ್ಟವನಲ್ಲ. ನಾಲ್ಕು ವರ್ಷದ ಹಿಂದೆ ಕೆಲಸದಿಂದ ನಿವೃತ್ತನಾದ ಈ ಅಪ್ಪ, ಆಮೇಲೆ ಸ್ವಲ್ಪ ಮಾನಸಿಕ ಸಮಸ್ಯೆ ಬಂತು ಅನ್ನುವ ಕಾರಣಕ್ಕೆ ಚಿಕುರದ ಆಸ್ಪತ್ರೆ ಸೇರಿದ್ದ. ಆ ಆಸ್ಪತ್ರೆಯಲ್ಲಿ ಪ್ರಾಯವಾದವರನ್ನು ನೋಡಿಕೊಳ್ಳುವ ವ್ಯವಸ್ಥೆ ಕೂಡ ಇತ್ತು. ಅಪ್ಪ ಅಲ್ಲಿ ಅಡ್ಮಿಟ್ ಆದಮೇಲೆ ಟೆಂಗೊ ಎರಡು ಸಲ ಅಲ್ಲಿಗೆ ಹೋಗಿದ್ದ. ಅದ್ಯಾವುದೋ ಪೇಪರುಗಳಿಗೆ ಸಹಿ ಹಾಕಬೇಕಾಗಿ ಬಂದದ್ದರಿಂದ, ಆ ವೃದ್ಧನಿಗೆ ಗೊತ್ತಿರುವ ಏಕೈಕ ಸಂಬಂಧಿ ಅನ್ನುವ ಕಾರಣಕ್ಕೆ ಟೆಂಗೊನನ್ನು ಕರೆಸಿಕೊಂಡಿದ್ದರು ಅಷ್ಟೆ.

ಆ ಆಸ್ಪತ್ರೆ – ಆಸ್ಪತ್ರೆ ಅನ್ನುವುದಕ್ಕಿಂತಲೂ ವೃದ್ಧಾಶ್ರಮ ಅನ್ನಬಹುದೇನೋ – ಒಂದು ದೊಡ್ಡ ಜಾಗದಲ್ಲಿ ಎದ್ದಿದ್ದ ಕಟ್ಟಡ. ಹಳೇ ಜಪಾನಿ ಶೈಲಿಯಲ್ಲಿ ಕಟ್ಟಿದ ಮರದ ಮನೆಗಳ ಮಾದರಿಯಲ್ಲಿ ಅಲ್ಲಿ ಕೆಲ ಕಟ್ಟಡಗಳಿದ್ದವು. ಮುಖ್ಯ ಕಛೇರಿಯ ಮೂರಂತಸ್ತಿನ ಕಟ್ಟಡವನ್ನು ಆಧುನಿಕ ರೀತಿಯಲ್ಲಿ ಕಟ್ಟಿದ್ದರು. ದೊಡ್ಡ ಕಿಟಕಿಗಳು. ತೆರೆದರೆ ಸಮುದ್ರದ ಮೇಲಿಂದ ಹಾದುಬರುವ ತಣ್ಣನೆ ಗಾಳಿ ಕೋಣೆಗಳನ್ನು ತುಂಬುವಂತಿತ್ತು. ಜಲದೇವತೆಯ ಮೊರೆತ ಬಿಟ್ಟರೆ ಅಲ್ಲಿ ಬೇರಾವ ಸದ್ದುಗದ್ದಲವೂ ಇರುತ್ತಿರಲಿಲ್ಲ. ಆಸ್ಪತ್ರೆಯ ಕಂಪೌಂಡಿನ ಸುತ್ತಲೂ ಎತ್ತರವಾಗಿ ಬೆಳೆದು ನಿಂತ ಗಾಳಿಮರಗಳು ಸಮುದ್ರದ ಕಡೆಯಿಂದ ಬೀಸಿಬರುವ ಗಾಳಿಗೆ ತಲೆಯಾಡಿಸುತ್ತಾ ನಿಂತಿರುತ್ತಿದ್ದವು. ಆಸ್ಪತ್ರೆಯಲ್ಲಿ ಒದಗಿಸುವ ಸೌಕರ್ಯಗಳ ಬಗ್ಗೆ ಎರಡು ಮಾತಿರಲಿಲ್ಲ. ಜೀವವಿಮೆ, ನಿವೃತ್ತಿಯ ಸಮಯದಲ್ಲಿ ಸಿಕ್ಕಿದ ಬೋನಸ್ ದುಡ್ಡು, ಉಳಿತಾಯ ಖಾತೆಯಲ್ಲಿದ್ದ ಒಂದಷ್ಟು ಹಣ, ನಿವೃತ್ತಿವೇತನ ಇತ್ಯಾದಿ ಎಲ್ಲ ಅನುಕೂಲ ಇದ್ದದ್ದರಿಂದ ಟೆಂಗೊನ ಅಪ್ಪನಿಗೆ ಜೀವನ ಮುಗಿಯುವವರೆಗೂ ದುಡ್ಡಿನ ಅವಶ್ಯಕತೆ ಎದುರಾಗುವ ಸಮಸ್ಯೆಯಿರಲಿಲ್ಲ. ಅವನು ಬೇರೆಯವರಿಗಾಗಿ ಉಳಿಸಿಹೋಗುವ ಮೊತ್ತ ದೊಡ್ಡದಿರಲಿಕ್ಕಿಲ್ಲ; ಆದರೆ ತಾನು ಬದುಕಿರುವವರೆಗೆ ಬೇರೆಯವರಿಗೆ ಭಾರವಾಗಿರುತ್ತಿರಲಿಲ್ಲ. ಅಂತಹದೊಂದು ಹೊಣೆಯನ್ನು ಅಪ್ಪ ತನ್ನ ಮೇಲೆ ಹೊರಿಸಲಿಲ್ಲ ಎನ್ನುವ ವಿಷಯದಲ್ಲಿ ಟೆಂಗೊನಿಗೆ ತೃಪ್ತಿಯಿತ್ತು. ಅಪ್ಪನಿಂದ ಯಾವುದನ್ನೂ ಕಿತ್ತುಕೊಳ್ಳಲು ಟೆಂಗೊ ಹವಣಿಸಿದವನಲ್ಲ. ಅಪ್ಪನಿಗಾಗಿ ಏನನ್ನಾದರೂ ಕೊಡಬೇಕೆಂದೂ ಅವನಿಗೆ ಅನಿಸಿದ್ದಿಲ್ಲ. ಎಲ್ಲಿಂದಲೋ ಬಂದು ಎಲ್ಲೋ ಹೋಗುವ ಇಬ್ಬರು ಅಪರಿಚಿತ ವ್ಯಕ್ತಿಗಳು ನಡುಮಧ್ಯದ ನಿಲ್ದಾಣದಲ್ಲಿ ಒಂದಷ್ಟು ಹೊತ್ತು ಕಳೆಯುವಂತೆ ಅವರಿಬ್ಬರು ಹಲವು ವರ್ಷ ಜೊತೆಯಾಗಿ ಬದುಕಿದ್ದರು. ಸಂಬಂಧಗಳ ಎಳೆ ಅಷ್ಟು ತೆಳುವಾಗಿ ಹೋದದ್ದಕ್ಕೆ ಟೆಂಗೊನಿಗೆ ಬೇಸರವಿದೆ ನಿಜ, ಆದರೆ ಪರಿಸ್ಥಿತಿ ಅವನ ಕೈಯಲ್ಲಿರಲಿಲ್ಲವಲ್ಲ.

***

ಟೆಂಗೊ ಇನ್ನೇನು ಟ್ರೇನು ಬರುವ ಹೊತ್ತಾಯಿತೆಂದು ಪ್ಲಾಟ್‍ಫಾರ್ಮಿಗೆ ಬಂದು ನಿಂತ. ಕಡಲ ಕಡೆ ಹೋಗುವ ಉತ್ಸಾಹದಲ್ಲಿ ಹಲವು ಕುಟುಂಬಗಳು ಅಲ್ಲಿ ಟ್ರೇನು ಹತ್ತಲು ಕಾಯುತ್ತಿದ್ದವು.

ಜಗತ್ತಿನ ಬಹುತೇಕ ಜನರಿಗೆ ಭಾನುವಾರ ಎಂದರೆ ವಿರಾಮದ ದಿನ. ಆದರೆ ಟೆಂಗೊನ ಬದುಕಿನಲ್ಲಿ ಅಂತಹದೊಂದು ವಿರಾಮದ ಭಾನುವಾರ ಬರಲೇ ಇಲ್ಲ. ವಾರಾಂತ್ಯ ಬಂದರೆ ಸಾಕು ಅವನಿಗೆ ಮೈಕೈಯೆಲ್ಲ ನೋವೆದ್ದಂತೆ, ಹೊಟ್ಟೆ ತೊಳೆಸಿದಂತೆ, ಹಸಿವೆ ಇಂಗಿಹೋದಂತೆ ಅನ್ನಿಸುತ್ತಿತ್ತು. ಇದೊಂದು ಸಂಡೆಯನ್ನಾದರೂ ತಪ್ಪಿಸು ದೇವರೇ ಅಂತ ಅವನು ದೇವರಿಗೆ ಬಾರಿಬಾರಿ ಬೇಡಿಕೊಂಡದ್ದಿದೆ. ಒಮ್ಮೆಯಾದರೂ ದೇವರಿಗೆ ಅವನ ಮೊರೆ ಕೇಳಿದ್ದರೆ ತಾನೆ! ಟೆಂಗೊ ಚಿಕ್ಕವನಿದ್ದಾಗ ಅವನ ಅಪ್ಪ ಜಪಾನಿನ ಎನ್‍ಎಚ್ಕೆ ಎಂಬ ಸರಕಾರಿ ಕಂಪೆನಿಯಲ್ಲಿ ನೌಕರಿ ಮಾಡುತ್ತಿದ್ದ. ಆ ಕಂಪೆನಿ  ಜಪಾನ್  ದೇಶದಲ್ಲಿ ರೇಡಿಯೋ ಮತ್ತು ಟಿವಿ ಚಾನೆಲುಗಳನ್ನು ನಿರ್ವಹಿಸುತ್ತಿತ್ತು. ರೇಡಿಯೋ-ಟಿವಿಗಳ ಬಳಕೆದಾರರು ತಿಂಗಳಿಗೆ ಇಂತಿಷ್ಟು ಎಂದು ಸರಕಾರಕ್ಕೆ ದುಡ್ಡು ಪಾವತಿ ಮಾಡಬೇಕಾಗಿತ್ತು. ಹಾಗೆ ದುಡ್ಡು ಸಂಗ್ರಹಿಸುವ ಕಲೆಕ್ಟರುಗಳಲ್ಲಿ ಟೆಂಗೊನ ಅಪ್ಪ ಕೂಡ ಒಬ್ಬನಾಗಿದ್ದ. ಪ್ರತಿ ಭಾನುವಾರವೂ ಅವನು ಟೆಂಗೊನನ್ನು ಕರೆದುಕೊಂಡು ಮನೆಮನೆಗಳಿಗೆ ಹೋಗಿ ಟಿವಿ-ರೇಡಿಯೋಗಳ ಮಾಸಿಕಶುಲ್ಕ ವಸೂಲಿ ಮಾಡುವುದಕ್ಕೆ ನಿಲ್ಲುತ್ತಿದ್ದ. ಎಲ್’ಕೆ’ಜಿಗೆ ಹೋಗುವ ಮೊದಲೇ ಶುರುವಾಗಿದ್ದ ಈ ಪದ್ಧತಿ, ಟೆಂಗೊ ಐದನೇ ಕ್ಲಾಸಿಗೆ ಬರುವವರೆಗೂ ಒಂದೇ ಒಂದು ಭಾನುವಾರವೂ ತಪ್ಪದಂತೆ ನಡೆದುಕೊಂಡು ಬಂದಿತ್ತು. ಬೇರೆ ಕಲೆಕ್ಟರುಗಳು ಭಾನುವಾರ ಕೆಲಸ ಮಾಡುತ್ತಾರೋ ಇಲ್ಲವೋ ಟೆಂಗೊನಿಗೆ ಗೊತ್ತಿರಲಿಲ್ಲ. ಆದರೆ, ತನ್ನಪ್ಪ ಮಾತ್ರ ಒಂದು ಭಾನುವಾರವನ್ನೂ ತಪ್ಪಿಸಿದ ನೆನಪಿಲ್ಲ. ಉಳಿದ ದಿನ ದುಡ್ಡು ಕೊಡದೆ ತಪ್ಪಿಸಿಕೊಳ್ಳುವವರನ್ನು ಭಾನುವಾರದ ದಿನ ಅವರವರ ಮನೆಗಳಲ್ಲೇ ಹಿಡಿದುಹಾಕುತ್ತೇನೆಂಬ ಖುಷಿಯಲ್ಲಿ ಈ ಮನುಷ್ಯ ಆ ದಿನ ಮಾತ್ರ ವಾರದ ಉಳಿದ ದಿನಗಳಿಗಿಂತಲೂ ಹೆಚ್ಚು ಉತ್ಸಾಹದಲ್ಲಿ ಕೆಲಸ ಮಾಡಿದಂತೆ ಟೆಂಗೊನಿಗೆ ಅನಿಸುತ್ತಿತ್ತು.

ಟೆಂಗೊನ ಅಪ್ಪನಿಗೆ ತನ್ನ ಮಗನನ್ನು ಹೀಗೆ ಭಾನುವಾರ ಸುತ್ತಾಡಿಸುವುದಕ್ಕೆ ಕೆಲವು ಕಾರಣಗಳಿದ್ದವು. ಮೊದಲನೆಯದಾಗಿ ಈ ಚಿಕ್ಕ ಹುಡುಗನನ್ನು ಮನೆಯಲ್ಲಿ ಒಂಟಿ ಕೂರಿಸಿ ಹೋಗುವುದು ಸಾಧ್ಯವಿರಲಿಲ್ಲ. ವಾರದ ಉಳಿದ ದಿನಗಳಲ್ಲಿ ಟೆಂಗೊ ಶಾಲೆಗೆ ಹೋಗುತ್ತಿದ್ದ. ಶಾಲೆ ಇಲ್ಲದ ಶನಿವಾರಗಳಂದು ಡೇಕೇರ್‍ನಲ್ಲಿ ಇಡೀ ದಿನ ಕಳೆದು ಸಂಜೆ ಕರೆದೊಯ್ಯಲು ಬರುವ ಅಪ್ಪನ ಜೊತೆ ಮನೆಗೆ ಬರುತ್ತಿದ್ದ. ಆದರೆ ಶಾಲೆ ಮತ್ತು ಡೇಕೇರ್‍ಗಳು ಭಾನುವಾರ ತೆರೆದಿರುತ್ತಿರಲಿಲ್ಲ. ಇನ್ನು ಎರಡನೆ ಕಾರಣವೆಂದರೆ, ತಾನು ಎಂತಹ ಉದ್ಯೋಗ ಮಾಡಿ ಮನೆಗೆ ಸಂಪಾದಿಸಿ ತಂದುಹಾಕ್ತೇನೆ ಅನ್ನೋದನ್ನು ಮಗ ನೋಡಬೇಕು; ನೋಡಿ ಕಲಿಯಬೇಕು ಎನ್ನುವುದು ಅಪ್ಪನ ಸಿದ್ಧಾಂತವಾಗಿತ್ತು. ಮನೆಯನ್ನು ನಡೆಸುವ ನೌಕರಿ ಯಾವುದು ಅನ್ನುವುದು ಮಗನಾದವನಿಗೆ ಗೊತ್ತಿರಬೇಕು. ಹಾಗಿದ್ದರೆ ಮಾತ್ರ ಕೆಲಸದಲ್ಲಿ ಪ್ರೀತಿ-ಶ್ರದ್ಧೆ ಬರೋದು ಎನ್ನುತ್ತಿದ್ದ. ಅವನೂ ಒಂದಾನೊಂದು ಕಾಲದಲ್ಲಿ ತನ್ನ ಅಪ್ಪನ ಹೊಲದಲ್ಲಿ ದುಡಿದವನಂತೆ. ಬಿತ್ತನೆ, ಕಟಾವು ಅಂತೆಲ್ಲ ತುಂಬ ಕೆಲಸ ಇದ್ದ ದಿನಗಳಲ್ಲಂತೂ ಅವನಪ್ಪ – ಅಂದರೆ ಟೆಂಗೊನ ಅಜ್ಜ, ತನ್ನ ಮಕ್ಕಳನ್ನು ಶಾಲೆ ತಪ್ಪಿಸಿ ಹೊಲದ ಕೆಲಸಕ್ಕೆ ಹಚ್ಚುತ್ತಿದ್ದನಂತೆ. ಇನ್ನು, ಟೆಂಗೊನ ಅಪ್ಪನ ಮೂರನೇ ಕಾರಣ ಮಾತ್ರ ತುಂಬಾ ಲೆಕ್ಕಾಚಾರದ್ದಾಗಿತ್ತು. ಮಗನ ಮೇಲೆ ಅದು ಅಳಿಸಲಾಗದ ಗಾಯವನ್ನೇ ಮಾಡಿಹಾಕಿತು ಎನ್ನಬೇಕು. ತನ್ನ ಜೊತೆ ಚಿಕ್ಕ ಹುಡುಗ ಬಂದರೆ ಕೆಲಸ ಸಲೀಸಾಗಿ ನಡೆಯುತ್ತದೆ ಎನ್ನುವುದು ಟೆಂಗೊನ ಅಪ್ಪನಿಗೆ ಗೊತ್ತಿತ್ತು. ದುಡ್ಡು ಕೊಡದೆ ತಪ್ಪಿಸಿಕೊಳ್ಳಬೇಕು ಅಂತ ನಿರ್ಧಾರ ಮಾಡಿಬಿಟ್ಟವರೂ ಚೋಟುದ್ದ ಹುಡುಗ ತಮ್ಮನ್ನೇ ಎವೆಯಿಕ್ಕದೆ ನೋಡುತ್ತಿದ್ದಾನೆಂದು ತಿಳಿದಾಗ ಮೆತ್ತಗಾಗುತ್ತಿದ್ದರು; ಕೊಡಬೇಕಾದಷ್ಟನ್ನು ಕೊಟ್ಟು ಹೇಗೋ ಸಾಗಹಾಕಿ ಬಿಡುತ್ತಿದ್ದರು. ಅದಕ್ಕೆಂದೇ ದುಡ್ಡು ಕೊಡಲು ಮೊಂಡು ಹೂಡುವವರನ್ನು ಭೇಟಿ ಮಾಡಲು ಆತ ಭಾನುವಾರವನ್ನೇ ನಿಕ್ಕಿ ಮಾಡಿಕೊಳ್ಳುತ್ತಿದ್ದ. ಪ್ರತೀ ಭಾನುವಾರವೂ ಅಪ್ಪ ತನ್ನನ್ನು ಸಂಗಡ ಒಯ್ಯುವ ಉದ್ದೇಶ ಇದೇ ಇದ್ದೀತೇ ಎನ್ನುವ ಸಣ್ಣ ಸಂಶಯ ಟೆಂಗೊನಿಗೆ ಮೊದಲಿಂದಲೂ ಇತ್ತು. ಹಾಗೆ ಯೋಚಿಸಿದಾಗೆಲ್ಲ ಅವನಿಗೆ ಅಸಹ್ಯವಾಗುತ್ತಿತ್ತು. ಆದರೂ ತಾನು ಅಸಹ್ಯ ಪಡುತ್ತಿದ್ದೇನೆನ್ನುವುದು ಅಪ್ಪನಿಗೆ ಗೊತ್ತಾಗದ ಹಾಗೆ ನಾಟಕ ಮಾಡಬೇಕಾದ ಅನಿವಾರ್ಯತೆ ಅವನಿಗೆ ಸೃಷ್ಟಿಯಾಗುತ್ತಿತ್ತು. ಅಯ್ಯೋ ನನ್ನ ಜೀವನ ಸರ್ಕಸ್ ಕೋತಿಯ ಹಾಗಾಯ್ತಲ್ಲ ಎಂದು ಒಳಗೊಳಗೆ ಪರಿಸತಪಿಸುತ್ತಿದ್ದ ಎಷ್ಟೋ ಸಲ.

ಟೆಂಗೊನಿಗಿದ್ದ ಒಂದೇ ಸಮಾಧಾನವೆಂದರೆ ಅವನ ಅಪ್ಪನ ವಸೂಲಿ ಕೆಲಸ ಇರುತ್ತಿದ್ದದ್ದು ಮನೆಯಿಂದ ದೂರದ ಊರಲ್ಲಿ. ಅವರು ವಾಸವಿದ್ದದ್ದು ಇಚಿಕಾವ ನಗರದ ಹೊರವಲಯದಲ್ಲಿದ್ದ ಒಂದು ಗಲ್ಲಿಯಲ್ಲಾದರೆ, ಅಪ್ಪನ ರೌಂಡುಗಳಿದ್ದದ್ದು ನಗರದ ಕೇಂದ್ರಭಾಗದಲ್ಲಿ. ಹಾಗಾಗಿ ಅವನು ಅಪ್ಪನ ಜೊತೆ ಕ್ಲಾಸ್‍ಮೇಟುಗಳ ಮನೆಗೆ ಹೋಗಿ ಬಾಗಿಲು ಬಡಿಯುವ ಪ್ರಸಂಗ ಬರುತ್ತಿರಲಿಲ್ಲ. ನಗರ ಪ್ರದಕ್ಷಿಣೆ ಮಾಡುವಾಗ ಹಾಗೇನಾದರೂ ಅಕಸ್ಮಾತ್ತಾಗಿ ಕ್ಲಾಸ್‍ಮೇಟುಗಳನ್ನು ಕಂಡರೆ ಟೆಂಗೊ ತಾನಾಗಿ ಗುಬ್ಬಚ್ಚಿಯಂತೆ ಅಪ್ಪನ ಕಾಲ ಹಿಂದೆ ಮರೆಯಾಗಿ ನಿಲ್ಲುತ್ತಿದ್ದ. ಸೋಮವಾರ ಬೆಳಗ್ಗೆ ಶಾಲೆಯಲ್ಲಿ ಉಳಿದ ಹುಡುಗರು ಖುಷಿಯಿಂದ ತಮ್ಮ ಸಂಡೆ ಪರಾಕ್ರಮಗಳನ್ನು ಕೊಚ್ಚಿಕೊಳ್ಳುತ್ತಿದ್ದರೆ ಟೆಂಗೊ ಮಾತ್ರ ಮೌನವಾಗುತ್ತಿದ್ದ. ವಾಟರ್ ಪಾರ್ಕಿಗೆ ಹೋದೆ, ಮೃಗಾಲಯಕ್ಕೆ ಹೋದೆ, ಸ್ವಿಮ್ಮಿಂಗ್ ಕ್ಲಾಸ್ ಇತ್ತು, ಸ್ಕೀಯಿಂಗ್ ಕಲಿತೆ ಎಂದೆಲ್ಲ ಉಳಿದವರು ಬೊಂಬಡಾ ಹೊಡೆಯುವಾಗ ಟೆಂಗೊನಿಗೆ ಹೇಳಿಕೊಳ್ಳಲು ಏನೂ ಇರುತ್ತಿರಲಿಲ್ಲ. ಮನೆಮನೆಗೆ ಹೋಗಿ ಬೆಲ್ಲು ಬಜಾಯಿಸಿ ಟಿವಿ ಬಿಲ್ಲು ಕಟ್ಟಿ ಎಂದು ಗೋಗರೆದು ದುಡ್ಡು ಸಂಗ್ರಹಿಸುವ ಆಟ ಇಡೀ ಭಾನುವಾರವನ್ನೇ ನುಂಗಿಬಿಡುತ್ತಿತ್ತು. ದುಡ್ಡು ಕಟ್ಟದವರ ಮನೆಗಳಲ್ಲಿ ಕೆಲವು ಸಲ ಅಪ್ಪ ಕೆಟ್ಟದಾಗಿ ಕಿರುಚಾಡುತ್ತಿದ್ದ. ಬೀದಿನಾಯಿಯ ಜೊತೆ ಜಗಳಕ್ಕಿಳಿದಷ್ಟು ಒರಟನಾಗಿಬಿಡುತ್ತಿದ್ದ. ಅವೆಲ್ಲ ಅನುಭವಗಳನ್ನು ಟೆಂಗೊ ತನ್ನ ಯಾವ ಸಹಪಾಠಿಗಳೊಂದಿಗೂ ಹಂಚಿಕೊಳ್ಳುವುದು ಸಾಧ್ಯವಿರಲಿಲ್ಲ. ಈ ಸಮಾಜದ ಉಳಿದ ಮಕ್ಕಳಿಗಿಂತ ಬೇರೆಯಾಗಿ ಪರಕೀಯ ಕೀಟದಂತೆ ಬದುಕುತ್ತಿದ್ದೇನೆಂದು ಅವನಿಗೆ ತೀವ್ರವಾಗಿ ಅನ್ನಿಸುತ್ತಿತ್ತು. ಅವನ ಜಗತ್ತು, ಅವನ ಬದುಕು ಉಳಿದವರದ್ದಕ್ಕಿಂತ ಸಂಪೂರ್ಣ ಬೇರೆಯೇ ಆಗಿಬಿಟ್ಟಿತ್ತು. ಆದರೆ, ಅದೃಷ್ಟ ಎಲ್ಲ ವಿಷಯದಲ್ಲಿ ಅವನ ಕೈಬಿಟ್ಟಿರಲಿಲ್ಲ. ಟೆಂಗೊ ಓದಿನಲ್ಲಿ, ಆಟೋಟಗಳಲ್ಲಿ ಮುಂದಿದ್ದ. ಕ್ಲಾಸಿನ ಪರೀಕ್ಷೆಗಳಲ್ಲೆಲ್ಲ ಒಳ್ಳೆಯ ಮಾರ್ಕು ಸಿಗುತ್ತಿತ್ತು. ಹಾಗಾಗಿ, ತಾನು ಪರಕೀಯನೆಂದು ಅವನು ಭಾವಿಸಿದರೂ ಕ್ಲಾಸಿನ ಹುಡುಗರು, ಟೀಚರುಗಳು ಅವನನ್ನು ಮೆಚ್ಚುತ್ತಿದ್ದರು. ಆಗಾಗ ಯಥೇಚ್ಛ ಹೊಗಳಿಕೆಯೂ ಸಿಗುತ್ತಿತ್ತು. ಇದೇ ಸಲಿಗೆಯಲ್ಲಿ ಗೆಳೆಯರು ಭಾನುವಾರದ ಯಾವುದಾದರೂ ಕಾರ್ಯಕ್ರಮಕ್ಕೆ ಅವನನ್ನು ಕರೆದರೆ ಮಾತ್ರ ಟೆಂಗೊ, ಇಲ್ಲ ಕಣ್ರೊ ಸ್ಸಾರಿ ಬರೋಲ್ಲ ಎನ್ನುತ್ತಿದ್ದ. ಒಮ್ಮೆಯಾದರೂ ಅವನು ಇಂತಹ ಆಮಂತ್ರಣಗಳನ್ನು ಒಪ್ಪಿದ್ದಿಲ್ಲ. ಕೊನೆಗೆ ಆ ಹುಡುಗರು ಇವನನ್ನು ಕೇಳುವುದನ್ನೇ ಬಿಟ್ಟುಬಿಟ್ಟರು.

***

ತೊಹೊಕು ಪ್ರಾಂತ್ಯದಲ್ಲಿ ಕುಟುಂಬದ ಮೂರನೇ ಮಗನಾಗಿ ಹುಟ್ಟಿದ ಟೆಂಗೊನ ಅಪ್ಪ ಚಿಕ್ಕವನಾಗಿದ್ದಾಗಲೇ ಮನೆಬಿಟ್ಟು ಓಡಿಹೋಗಿ ಯಾವಾವುದೋ ಪುಡಿಗೆಲಸ ಮಾಡಿಕೊಂಡು ಕೊನೆಗೆ ಮಂಚೂರಿಯಕ್ಕೆ ಹೋಗಿಬಿಟ್ಟಿದ್ದ. ಉತ್ತರ ಕೊರಿಯದ ಹಳೆ ಹೆಸರು ಮಂಚೂರಿಯ; ಆಗ ಅದು ಜಪಾನ್ ದೇಶದ ಸುಪರ್ದಿಯಲ್ಲಿತ್ತು. ಮನೆಯಲ್ಲೇ ಉಳಕೊಂಡಿದ್ದರೆ ಹಸಿವೆಯಿಂದ ಸಾಯಬೇಕೆಂದು ಬಗೆದು ಧೈರ್ಯ ಮಾಡಿ ಅವನು ಮಂಚೂರಿಯಕ್ಕೆ ಬಂದಿದ್ದ. ಆ ಜಾಗ ಸ್ವರ್ಗಸಮಾನ ಎಂದು ಸರಕಾರ ಹೇಳಿದ್ದನ್ನೇನೂ ಅವನು ಪೂರ್ತಿ ನಂಬಿರಲಿಲ್ಲ. ಸರಕಾರದವರು ಸ್ವರ್ಗ ತೋರಿಸುವುದು ಅಷ್ಟರಲ್ಲೇ ಇದೆ ಎನ್ನುವುದು ಅವನಿಗಾಗಲೇ ಅರ್ಥವಾಗಿತ್ತು. ಮಂಚೂರಿಯಕ್ಕೆ ಬಂದ ಜಪಾನೀಯರಿಗೆ ಸರಕಾರವೇ ಮುಂದೆ ನಿಂತು ಒಂದಷ್ಟು ಜಾಗ ಒಕ್ಕಲು ಬಿಟ್ಟಿತ್ತು. ಕಲ್ಲುಮುಳ್ಳಿನ ಬಂಜರು ಭೂಮಿ ಅದು. ಅಲ್ಲಿ ಒಂದಷ್ಟು ಜನ ಸೇರಿ ಉತ್ತುಬಿತ್ತರೂ ಬೆಳೆ ತೆಗೆಯುವುದು ಅಷ್ಟರಲ್ಲೇ ಇತ್ತು. ಚಳಿಗಾಲದಲ್ಲಂತೂ ತಿನ್ನಲಿಕ್ಕೆ ಏನೂ ಸಿಗದೆ ಕೊನೆಗೆ ಬೀದಿನಾಯಿಗಳನ್ನು ತಿಂದು ಹೇಗೋ ಜೀವ ಉಳಿಸಿಕೊಳ್ಳಬೇಕಾಗಿತ್ತು. 1945ರ ಆಗಸ್ಟ್ ತಿಂಗಳಲ್ಲಿ ರಷ್ಯದ ಸೇನೆ ಮಂಚೂರಿಯಕ್ಕೆ ಬರತಾ ಇದೆಯಂತೆ ಎಂಬ ಸುದ್ದಿ ಸಿಕ್ಕಿದಾಗ ಟೆಂಗೊನ ತಂದೆ ಉಳಿದ ಒಂದಿಷ್ಟು ಧೈರ್ಯವಂತರ ಜೊತೆ ಸೇರಿ ಟ್ರೇನ್ ಹತ್ತಿ ಡಾಲಿಯೆನ್ ಎಂಬ ಜಾಗಕ್ಕೆ ಓಡಿಹೋಗಿದ್ದ. ಅಂತೂ ಏನೇನೋ ಸಾಹಸಗಳನ್ನು ಮಾಡಿಕೊಂಡು ರಷ್ಯನ್ನರಿಂದ ತಪ್ಪಿಸಿಕೊಂಡು ಜಪಾನ್ ದೇಶದೊಳಗೆ ಹೋಗಿ ಬೀಳಬೇಕಾದರೆ ವರ್ಷಾಂತ್ಯವಾಗಿತ್ತು.

ಎರಡನೆ ಮಹಾಯುದ್ಧ ಮುಗಿದ ಮೇಲೆ ಟೆಂಗೊನ ಅಪ್ಪ ಬದುಕು ಕಟ್ಟಿಕೊಳ್ಳಲು ಟೋಕಿಯೊ ನಗರಕ್ಕೆ ಬಂದ. ಕಾಳಸಂತೆ ವ್ಯವಹಾರ ಮಾಡಿದ. ಬಡಗಿಯಾಗಿ ಒಂದಷ್ಟು ದಿನ ಉಳಿ-ಸುತ್ತಿಗೆ ಹಿಡಿದ. ಆಮೇಲೆ ಅಸಾಕುಸದಲ್ಲಿ ಮದ್ಯ ಮಾರಾಟದ ಕೆಲಸದಲ್ಲಿ ಕಾರ್ಮಿಕನಾಗಿ ಸೇರಿದ. ಅಲ್ಲಿ ಅವನಿಗೆ ಹಿಂದೆ ಮಂಚೂರಿಯದಲ್ಲಿ ಪರಿಚಯವಾಗಿದ್ದ ಅಧಿಕಾರಿಯೊಬ್ಬರ ಭೇಟಿಯಾಯಿತು. ಅವರು ಇನ್ಯಾರೋ ಗುರುತಿನವರಿಗೆ ಈ ಮನುಷ್ಯನ ವೃತ್ತಿನಿಷ್ಠೆಯ ಬಗ್ಗೆ ಹೇಳಿ ಎನ್‍ಎಚ್ಕೆಯಲ್ಲಿ ಕೆಲಸಕ್ಕೆ ಸೇರಲು ಸಹಾಯ ಮಾಡಿದರು. ಸೇರುವ ಹೊತ್ತಲ್ಲಿ ಅವನಿಗೆ ಎನ್‍ಎಚ್ಕೆ ಎಂದರೆ ಏನೆಂದು ನಯಾಪೈಸೆ ತಿಳಿದಿರಲಿಲ್ಲ! ಆದರೆ ಕೆಲಸಕ್ಕೆ ಸೇರಿದ ಮೇಲೆ ರಾಕ್ಷಸನಂತೆ ಹತ್ತಾರು ಕೆಲಸಗಳನ್ನು ಮೈಮೇಲೆಳೆದುಕೊಂಡು ಮಾಡತೊಡಗಿದ. ಅಲ್ಲಿ ಅವನಿಗೆ ರೇಡಿಯೋ ಮತ್ತು ಟಿವಿ ಚಂದಾದಾರರಿಂದ ಮಾಸಿಕ ಶುಲ್ಕ ವಸೂಲಿ ಮಾಡುವ ಕೆಲಸ ಕೊಟ್ಟರು. ಜೀವನದಲ್ಲಿ ಸತ್ತ ಇಲಿಯನ್ನೂ ತಿಂದು ಬದುಕುವೆ ಎಂಬಂಥ ಸನ್ನಿವೇಶಗಳನ್ನು ನೋಡಿಬಂದಿದ್ದ ಈ ಗಡಸು ಗಂಡಸಿಗೆ ಈಗ ಶುಲ್ಕ ವಸೂಲಾತಿ ಯಾವ ದೊಡ್ಡ ಚಾಲೆಂಜೆಂದು ಅನ್ನಿಸಲಿಲ್ಲ. ಇಷ್ಟು ದಿನ ಗಮಾರನಂತೆ ತಿರುಗಾಡಿದ್ದವನಿಗೆ ಈಗ ತಾನೂ ಒಂದು ಪ್ರತಿಷ್ಠಿತ ಸಂಸ್ಥೆಯ ಉದ್ಯೋಗಿ ಎನ್ನುವುದೇ ದೊಡ್ಡ ಖುಷಿಯ ಸಂಗತಿಯಾಗಿತ್ತು. ಅವನ ಕೆಲಸ ಎಷ್ಟೊಂದು ಚೆನ್ನಾಗಿತ್ತೆಂದರೆ ಒಂದೇ ವರ್ಷದಲ್ಲಿ ಅವನಿಗೆ ದೊಡ್ಡ ಭಡ್ತಿ ಕೊಟ್ಟು ಸಂಸ್ಥೆಯ ಪಿಂಚಣಿ ಸೌಲಭ್ಯ ಪಡೆಯುವ ನೌಕರ ಎಂಬ ಸ್ಥಾನಮಾನ ಕೊಟ್ಟರು. ಕಡಿಮೆ ಬಾಡಿಗೆಗೆ ಒಳ್ಳೆಯ ಮನೆ ಕೂಡ ಸಿಕ್ಕಿತು. ಕಂಪೆನಿಯ ಆರೋಗ್ಯ ವಿಮೆಯ ಸ್ಕೀಮಿನಲ್ಲಿ ಅವನ ಹೆಸರನ್ನೂ ಬರೆದುಕೊಂಡರು. ಜೀವನದಲ್ಲಿ ಇಷ್ಟೊಂದು ದೊಡ್ಡ ಭಾಗ್ಯ ತನ್ನ ತಲೆ ಮೇಲೆ ಮಳೆಯಂತೆ ಸುರಿಯುತ್ತದೆ ಎಂದವನು ಕಲ್ಪಿಸಿದವನೇ ಅಲ್ಲ.

ಈ ತಂದೆ ಟೆಂಗೊನಿಗೆ ಯಾವತ್ತೂ ಜೋಗುಳ ಹಾಡಲಿಲ್ಲ. ಮಲಗುವ ಮುನ್ನ ಹಾಸಿಗೆಯ ಪಕ್ಕದಲ್ಲಿ ಕೂತು ತಲೆ ನೇವರಿಸುತ್ತ ಕತೆ ಪುಸ್ತಕ ಓದಲಿಲ್ಲ. ಆದರೂ ಅವನೊಬ್ಬ ಅದ್ಭುತ ಕತೆಗಾರನಾಗಿದ್ದ. ತನ್ನ ಬಾಲ್ಯದ ಪರಾಕ್ರಮಗಳನ್ನೇ ಅವನು ಅದೆಷ್ಟೊಂದು ವರ್ಣವಿನ್ಯಾಸಗಳಲ್ಲಿ ಹೇಳುತ್ತಿದ್ದನೆಂದರೆ ಪ್ರತಿ ಸಲವೂ ಅವನ್ನು ಟೆಂಗೊ ಆಸಕ್ತಿಯಿಂದ ಮೈ ಮರೆತು ಕೇಳುತ್ತಿದ್ದ. ಅವೆಲ್ಲ ನಿಗೂಢಾರ್ಥಗಳನ್ನು ಗರ್ಭಿಸಿಕೊಂಡಿರುತ್ತಿದ್ದವು ಎಂದೇನಲ್ಲ. ಆದರೂ ಆ ಕತೆಗಳು ವಿವರಗಳಿಂದ ನಿಬಿಡವಾಗಿರುತ್ತಿದ್ದವು. ಹಾಸ್ಯ, ಕ್ರೂರತೆ, ಭಾವನಾ ವಿವಶತೆಗಳೆಲ್ಲ ಉಸಿರಾಡುತ್ತಿದ್ದ ಜೀವಂತ ಕತೆಗಳವು. ಜೀವನದ ಸಾರ್ಥಕ್ಯವನ್ನು ಅದರ ಬಣ್ಣ-ವೈವಿಧ್ಯಗಳಿಂದ ಅಳೆಯುವುದಾಗಿದ್ದರೆ ಟೆಂಗೊನ ಅಪ್ಪನ ಬದುಕು ಹೋಳಿ ಹಬ್ಬದಂತಿತ್ತು ಎನ್ನಬಹುದು. ಆದರೆ, ಅವನು ಎನ್‍ಎಚ್ಕೆಯಲ್ಲಿ ಕೆಲಸಕ್ಕೆ ಸೇರಿದ ನಂತರದ ಭಾಗ ಮಾತ್ರ ಸಪ್ಪೆಯಾಗಿತ್ತು. ನೌಕರಿ ಸಿಕ್ಕಿದ ಸ್ವಲ್ಪ ಸಮಯಕ್ಕೆ ಅವನು ಒಂದು ಹೆಂಗಸನ್ನು ಭೆಟ್ಟಿಯಾದ; ಮದುವೆಯಾಯಿತು; ಟೆಂಗೊ ಹುಟ್ಟಿದ. ಟೆಂಗೊ ಹುಟ್ಟಿದ ಕೆಲ ಸಮಯಕ್ಕೇ ಆ ಹೆಂಗಸು ಕಾಯಿಲೆ ಬಿದ್ದು ತೀರಿಕೊಂಡಳು. ಆಮೇಲೆ ಈ ಮಗುವಿನ ಲಾಲನೆಪಾಲನೆ ಮಾಡಿ ಬೆಳೆಸಿದ್ದೆಲ್ಲ; ನೌಕರಿಗೂ ಹೋಗಿಬರುತ್ತಿದ್ದ ಇವನೇ. ಅಲ್ಲಿಗೆ – ಶುಭಂ. ಟೆಂಗೊನ ಅಪ್ಪನ ಕತೆಗೆ ದೀರ್ಘಮುಕ್ತಾಯ! ಆಕೆಯನ್ನು ಈತ ನೋಡಿದ್ದು ಹೇಗೆ, ಎಲ್ಲಿ? ಅವಳೆಂತಹ ಹೆಂಗಸಾಗಿದ್ದಳು? ಅವಳು ಸಾಯೋದಕ್ಕೆ ಕಾರಣವಾದ ಕಾಯಿಲೆ ಯಾವುದು? ತುಂಬ ನೋವು ತಿಂದಳಾ ಅಥವಾ ನೆಮ್ಮದಿಯಿಂದ ಕಣ್ಣುಮುಚ್ಚಿದಳಾ? ಟೆಂಗೊನ ಅಪ್ಪ ಇವಕ್ಕೆಲ್ಲ ಉತ್ತರ ಕೊಟ್ಟಿದ್ದಿಲ್ಲ. ಟೆಂಗೊ ಕೇಳಿದಾಗೆಲ್ಲ ಅವನು ಆ ಪ್ರಶ್ನೆಗಳನ್ನೇ ಒರೆಸಿಹಾಕಿ ಮಾತು ಮರೆಸುತ್ತಿದ್ದ. ಇನ್ನು ಕೆಲವೊಮ್ಮೆ ಈಗ ಆ ವಿಷ್ಯಾ ಎಲ್ಲಾ ಬೇಕಾ ಎಂದು ಕೆಟ್ಟದಾಗಿ ರೇಗುತ್ತಿದ್ದ. ಹೆಂಡತಿಯ ನೆನಪಿಗೆಂದು ಒಂದು ಫೋಟೋ ಕೂಡ ಅವನು ಇಟ್ಟುಕೊಂಡವನಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!