ಕಥೆ

ಕಲ್ಲು ಮಂಟಪ

“ನಾನು ಯಾವ ಕಾರಣಕ್ಕೆ ಇಲ್ಲಿಗೆ ಬರಲು ಶುರು ಮಾಡಿದೆ ..? ,

ಅದೆಷ್ಟೋ ದೂರದಿಂದ ಊರು ಬಿಟ್ಟು, ಈ ಕಾಡಿನಲ್ಲಿ ಏದುಸಿರು ಬಿಡುತ್ತಾ, ಐದಾರು ಕಿಲೋಮೀಟರ್ ಬೆಟ್ಟ ಹತ್ತಿ, ಅಷ್ಟು ಚೆನ್ನಾಗಿರುತ್ತಿದ್ದ ಮನೆ ಊಟ ಬಿಟ್ಟು, ಈ ಭಟ್ಟರ ಮನೆಯ ಬಣ್ಣದ ಸೌತೇಕಾಯಿ ಸಾರು, ನೀರೋ.. ಮಜ್ಜಿಗೆಯೋ.. ಗೊತ್ತಾಗದ ಮಜ್ಜಿಗೆ ಅನ್ನ ತಿಂದು, ಮತ್ತೆರಡು ಕಿಲೋಮೀಟರ್ ಗುಡ್ಡ ಹತ್ತಿ ಬಂದು ಈ ಕಂಬಕ್ಕೊರಗಿ ಕೂರೋ ದರ್ದಾದರೂ ಏನಿತ್ತು..?”.

ಮೇಲೆ ನಾಲ್ಕು ಗುಡ್ಡ ಹತ್ತಿದರೆ ಶೇಷ ಪರ್ವತ, ಇನ್ನೂ ಮುಂದಕ್ಕೆ ಕುಮಾರ ಪರ್ವತ, ಎಡಗಡೆಗೆ ನೋಡಿದಷ್ಟುದ್ದಕ್ಕೂ ಪರ್ವತಗಳ ಸಾಲು, ಬಲಗಡೆಗೆ ನಾಲ್ಕು ಗುಡ್ಡ ಹತ್ತಿ ಇಳಿದರೆ, ಗುಡ್ಡ ಮತ್ತು ಕಾಡನ್ನು ಬೇರ್ಪಡಿಸುವ  ಭಟ್ಟರ ಒಂಟಿ ಮನೆ. ಇವೆಲ್ಲದರ ನಡುವೆ ಒಂಟಿಯಾಗಿ ನಿಂತಿರುವ ಕಲ್ಲು ಮಂಟಪ.

“ಮನೆಯ ಎಲ್ಲಾ ಸುಖ ನೆಮ್ಮದಿಗಳನ್ನು ಬಿಟ್ಟು, ಇಲ್ಲಿ ಬಂದು  ಈ ಕಂಬಕ್ಕೊರಗಬೇಕಾಗಿತ್ತಾ..? ಒಂದೆರಡು ಬಾರಿಯಾದರೆ  ಸರಿ, ಅದೆಷ್ಟು ಬಾರಿ… ಲೆಕ್ಕವಿಲ್ಲದಷ್ಟು… ದಿನಗಟ್ಟಲೇ.. ಒಮ್ಮೊಮ್ಮೆ ವಾರಗಟ್ಟಲೆ…”.

“ಯಾಕೆ ಬರೋಕೆ ಶುರು ಮಾಡಿದೆ  ಅಂತ ಮಾತ್ರ ಗೊತ್ತಿಲ್ಲ, ಆದರೆ ಈ ಕಲ್ಲು ಮಂಟಪದ ಕಂಬಕ್ಕೊರಗಿ, ಒಂದು ನಿಮಿಷ ಕಣ್ಣು ಮುಚ್ಚಿದರೆ ಸಾಕು, ಮನಸ್ಸಿಗೆ ಅದೆಂತಾ ನೆಮ್ಮದಿ. ಮನಸ್ಸಿನಲ್ಲಿ ಅದೆಷ್ಟು ತಳಮಳವಿದ್ದರೂ, ಅದೇನು ಮಾಯೆಯೋ, ಇಲ್ಲಿಗೆ ಬಂದೊಡನೆ ಪ್ರಶಾಂತವಾಗಿಬಿಡುತ್ತಿತ್ತು.  ಮೊದಲೆರಡು ಬಾರಿ ಪೂರ್ತಿಯಾಗಿ ಕುಮಾರ ಪರ್ವತದ ತುದಿಯವರೆಗೂ ಹತ್ತಿದ್ದು ಬಿಟ್ಟರೆ, ಆಮೇಲೆ ಇಲ್ಲಿಂದ ಮುಂದೆ ಹೋಗಲೇ ಇಲ್ಲ… “

“ಈಗ  ಅನ್ನಿಸುತ್ತಿದೆ, ಅಂದು ನಾನು ಇಲ್ಲಿಗೆ ಬರದೇ ಹೋಗಿದ್ದಿದ್ದರೇ ಚೆನ್ನಾಗಿರುತ್ತಿತ್ತೇನೋ …”.

“ಇಲ್ಲೇ ತಾನೇ ಅವಳು ನನಗೆ ಸಿಕ್ಕಿದ್ದು, ಇದೇ ಕಲ್ಲು ಮಂಟಪದ ಕಂಬಕ್ಕೊರಗಿದ್ದಾಗಲೇ ತಾನೆ  ಅವಳು ಏದುಸಿರು ಬಿಡುತ್ತಾ ಬಂದು, ನನ್ನ ಇರುವಿಕೆಯನ್ನು ಗಮನಿಸದೇ ಕಂಬದ ಇನ್ನೊಂದು ಬದಿಗೊರಗಿದ್ದು.. ಆ ತಂಪಾದ ಗಾಳಿಗೆ ಅವಳ ಕೂದಲು ನನ್ನ ಮುಖಕ್ಕೆ ಕಚಗುಳಿಯಿಟ್ಟಿದ್ದು.. ಹೆಸರಿಗೆ ತಕ್ಕ ಬಿಳಿ ಮೈಬಣ್ಣ ಎಂತಹವರನ್ನು ಮೋಡಿ ಮಾಡುವ ಕೆನ್ನೆಗುಳಿ ಮುಖ….  ಅವತ್ತೇ  ಅಲ್ಲವೇ ನನ್ನ ನೆಮ್ಮದಿ ಕವಲೊಡಿದಿದ್ದು.. ಶಾಂತ ಸರೋವರದಂತಿದ್ದ ನನ್ನ ಮನಸ್ಸಿನಲ್ಲಿ ಪ್ರೀತಿಯ  ಅಲೆ  ಮೂಡಿದ್ದು..”.

“ಎಷ್ಟೋ ವರ್ಷದ ಹಿಂದೆ ಕುಮಾರ ಪರ್ವತದ ತುದಿಯವರೆಗೂ ಹೋದ ನಾನು, ಅಂದು ಮಂತ್ರಮುಗ್ಧನಾಗಿ ಅವಳ ಹಿಂದೆ  ಹೋಗಿದ್ದೆ.   ಅವಳು ಟ್ರೆಕ್ಕಿಂಗ್ ಗೆ ಬಂದವಳು ,  ಶೇಷ ಪರ್ವತದ ತುದಿಯಲ್ಲಿ ಮೋಡಗಳ ನಡುವೆ ನಿಂತು “ಹಾಯ್”,  ಎಂದು ಶುರುವಾದ ಗೆಳೆತನ, ಕುಮಾರ ಪರ್ವತವನ್ನು ಹತ್ತಿ ಮತ್ತೆ ಕಲ್ಲು ಮಂಟಪದ ಬಳಿ ಬರುವುದರೊಳಗೆ ನಾನು  ನನ್ನ  ಮನಸ್ಸನ್ನು ಅವಳಿಗೆ ಕೊಟ್ಟಿದ್ದೆ, ಅವಳ ಫೋನ್ ನಂಬರ್ ಅನ್ನು ನನಗೆ ಕೊಟ್ಟಿದ್ದಳು.”

“ಮುಂದೆ ಇದೇ ಗೆಳೆತನ ಪ್ರೀತಿಯಾಗಿ ಬೆಳೆಯಲು ಹೆಚ್ಚೇನು ಸಮಯ ಬೇಕಾಗಲಿಲ್ಲ,  ನನ್ನ ಈ ಹುಚ್ಚಾಟಗಳಿಗೆ  ಅವಳನ್ನು ಪಾಲುಗಾರ್ತಿಯನ್ನಾಗಿ ಮಾಡಿಕೊಂಡು , ಮತ್ತೊಮ್ಮೆ ಅವಳನ್ನು ಕಾಡು ಅಲೆಸಿ , ತಲೆನೋವೆಂದದ್ದಕ್ಕೆ   ಭಟ್ಟರ ಮನೆಯಲ್ಲಿ ಕಷಾಯ ಮಾಡಿಸಿಕೊಟ್ಟು , ಇದೇ ಕಲ್ಲು ಮಂಟಪದ ಕಂಬಕ್ಕೊರಗಿ , ನಾನು ಪೂರ್ವದ ದಿಗಂತವನ್ನು ನೋಡುತ್ತಾ , ಅವಳು ದಕ್ಷಿಣದ ಪರ್ವತ ಶ್ರೇಣಿಗಳನ್ನು ನೋಡುತ್ತಾ , ನಮ್ಮ ಜೀವನದ ಕನಸು ಕಟ್ಟಿದ್ದು. ನನ್ನ ಹೆಸರನ್ನು ಅವಳು, ಅವಳ ಹೆಸರನ್ನು  ನಾನು ಅದೆಷ್ಟು ಬಾರಿ ಕೂಗಿ ಈ ಪರ್ವತ ರಾಶಿಗಳ ಮಧ್ಯೆ  ಅದರ  ಪ್ರತಿಧ್ವನಿಯನ್ನು ಕೇಳಿದ್ದು”.

“ಅವತ್ತೇ ನನ್ನ ಪ್ರಶಾಂತವಾದ ಮನಸ್ಸಿನಲ್ಲಿ ಆ ಪ್ರತಿಧ್ವನಿಯ  ಅಲೆಗಳ  ಅಬ್ಭರ ಹೆಚ್ಚಾದ ಸುಳಿವು ಸಿಕ್ಕಿತ್ತು”.

” ಮುಂದೆ, ಮತ್ತೆ ಮತ್ತೆ  ಮನಸ್ಸಿನ ತಲ್ಲಣ ಹೆಚ್ಚುತ್ತಲೇ ಹೋಯಿತು. ಆದರೆ ಅವತ್ತು ಮಾತ್ರ , ಅದೇನಾಯಿತೋ …  ಇದ್ದಕ್ಕಿದ್ದಂತೆ  ಇಲ್ಲಿಗೆ ಹೊರಟೆ , ಯಾವತ್ತೂ ಬೇಡವೆನ್ನದಿದ್ದ  ಅಮ್ಮ  ಅಂದು  ಅದೆಷ್ಟು ಬೇಡವೆಂದರೂ ಇಲ್ಲಿಗೆ ಬಂದೆ , ನನ್ನವಳನ್ನೂ ಕರೆದೆ, ಮತ್ತೆ ತಲೆ ನೋವು ಹೆಚ್ಚಾಗಿದೆಯೆಂದು ಬರುವುದಿಲ್ಲವೆಂದಳು”.

“ಆದರೆ , ಮೊದಲ ಬಾರಿ ಬಂದು ಕಂಬಕ್ಕೊರಗಿ ಪ್ರಶಾಂತವಾಗಿ ಕುಳಿತಂತೆ  ಅಂದು ಕುಳಿತುಕೊಳ್ಳಲಾಗಲಿಲ್ಲ.”

“ಸರೋವರ  ಸಮುದ್ರದಂತಾಗಿ ಅಲೆಗಳು ತೀರದ ಬಂಡೆಗಪ್ಪಳಿಸಿದ್ದವು. ಮನಸ್ಸಿನಲ್ಲಿ ನಡುಕ ಶುರುವಾಗಿತ್ತು.  ಅದೇಕೋ  ಒಂದು ನಿಮಿಷವೂ  ಅಲ್ಲಿರಲಾಗಲಿಲ್ಲ, ಹೊರಟೇಬಿಟ್ಟೆ”.

“ಅವಳ ಸಣ್ಣ ತಲೆನೋವು ಕೇವಲ ತಲೆನೋವಾಗಿ ಉಳಿದಿರಲಿಲ್ಲ. ಮೆದುಳಿನ ಕ್ಯಾನ್ಸರ್ ಆಗಿ ಅವಳನ್ನೇ ಆಹುತಿ ತೆಗೆದುಕೊಂಡಿತ್ತು”.

“ಶಾಂತ ಸರೋವರದಂತಿದ್ದ ಮನಸ್ಸನ್ನು , ಇನ್ನೆಂದೂ ಶಾಂತವಾಗದಂತೆ ಮಾಡಿ ಹೋಗಿದ್ದಳು”.

“ಈಗ ಮತ್ತದೇ ನೆಮ್ಮದಿಯನ್ನು ಹುಡುಕುತ್ತಾ ಕಂಬಕ್ಕೊರಗಿ ಕುಳಿತಿದ್ದೇನೆ… “

ದಿಗಂತದಲ್ಲಿ ಸೂರ್ಯ ಮುಳುಗುತ್ತಿದ್ದಾನೆ. ಕಡಲು ಭೋರ್ಗರೆಯುತ್ತಿದೆ.  ಇವೆಲ್ಲವನ್ನು ನೋಡುತ್ತಾ ಶಾಂತವಾಗಿ ನಿರ್ಲಿಪ್ತತೆಯಿಂದ ನಿಂತಿದೆ ಕಲ್ಲು ಮಂಟಪ.

– ಫಣೀಶ್ ದುದ್ದ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!