ಕಥೆ

ನೆರಳು

ಅದು ಬಿರು ಬಿಸಿಲು ಕಾಲ. ಏನೊ ಕೆಲಸದ ನಿಮಿತ್ತ ಕಂಡವರ ಕಾಲಿಡಿದು ಹಳೆಯ ಪಳಯುಳಿಕೆಗಳ ಛಾಪು ತೊಳೆದುಬಿಡುವ ಹಂಬಲದಲ್ಲಿ ಹೊರ ನಡೆದ ಗಾಯಿತ್ರಿ  ಮಧ್ಯಾಹ್ನದ ಉರಿ ಬಿಸಿಲಲ್ಲಿ ಮನೆಗೆ ಬಂದವಳೇ ಬ್ಯಾಗು ಬಿಸಾಕಿ ಅದುವರೆಗೂ ಹಿಡಿದಿಟ್ಟುಕೊಂಡ ಅಳು ತಡೆಯಲಾರದೆ ಜೋರಾಗಿ ಒಮ್ಮೆ ರೋದಿಸಿಬಿಡುತ್ತಾಳೆ.  ಅದು ಅವಳ ಸ್ವಭಾವವೂ ಹೌದು.  ಕೇಳುವ ಮನಸ್ಸಿನ ಪ್ರಶ್ನಗಳಿಗೆಲ್ಲ ಉತ್ತರಿಸಲಾಗದೆ ತನ್ನ ಅಸಹಾಯಕಥೆಗೆ ತಾನೇ ಮರುಗುವ ಜೀವನ ಅವಳದಾಗಿಬಿಟ್ಟಿದೆ.

ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು.  ಕಂಡವರ ಮುಂದೆ ಸ್ವಾಭಿಮಾನವನ್ನು ಅದುಮಿ ಹಿಡಿದು ಕೊಲ್ಲುವ ಶರಣಾಗತಿ.  ಆಗಾಗ ಮನಸ್ಸಿನ ಪುಟಗಳ ಮೇಲೆ ಹರಿದಾಡುವ ಯೋಚನಾಲಹರಿಗಳು ತನ್ನಷ್ಟಕ್ಕೆ ಮಂಜಂತೆ ಕರಗಿ, ತೊಟ್ಟಿಕ್ಕುವ ಕಣ್ಣೀರಿನ ಬಿಂದುಗಳ ತುದಿಯಂಚಿನಲ್ಲಿ ತಡೆದುನಿಂತು, ನಾ ಜಾರಲೇ ಬೇಕಾ ಎಂದು, ಕತ್ತು ತಿರುಗಿಸಿ ದೈನ್ಯತಾ ಬಾವನೆಯಲ್ಲಿ ನನ್ನ ಕಳುಹಿಸಿ ಬಿಡುವೆಯಾ ಎಂದುಸುರುವಾಗ ಹೃದಯದ ಕವಾಟದಿಂದ ಹೇಗೆ ಕಳಿಸಲಿ?  ಮೃದು ಹೃದಯ ಚೀರಿತೊಮ್ಮೆ ಇಲ್ಲದ ಅಮ್ಮನನ್ನು ಕೂಗಿ ಮಮ್ಮಲ ಮರುಗಿ ಜಾರಿತರಿವಾಗಲಿಲ್ಲ ಕಳೆದು ಹೋದ ಕಣ್ಣೀರಿನ ಬಿಂದು.

ಅತ್ತು ಅತ್ತು ಸಮಾಧಾನ ಕಂಡ ಮನಸ್ಸು ಸೆಕೆಯಲ್ಲೂ ಒಂದು ಕಪ್ ಬಿಸಿ ಚಾ ಕುಡಿದು  ಮನೆಗೆಲಸದಲ್ಲಿ ಮಗ್ನಳಾಗುತ್ತಾಳೆ.  ಆದರು ದೇಹ ಬಸವಳಿದಂತಿದೆ.  ಯಾವ ಕೆಲಸನೂ ಬೇಡ ಕಾರ್ಯನೂ ಬೇಡ.  ಯಾವುದಾದರು ಮೂಲೆ ಸೇರಿ ಮಲಗಿಬಿಡಲೆ ಅನಿಸುತ್ತಿದೆ. ವಯಸ್ಸು ,ಅಂಟಿಕೊಂಡ ರೋಗ, ತಲೆ ಕೊರೆಯುವ ಚಿಂತೆ ಹೀಗೆ ಮಾಡಿದೆ. ಹಾಗಂತ ಖಾಲಿ ಕುಳಿತುಕೊಳ್ಳುವ ಹಾಗಿಲ್ಲ.  ಎಲ್ಲದಕ್ಕೂ ಹೆಗಲು ಕೊಟ್ಟು ಒಬ್ಬಳೇ ಜವಾಬ್ದಾರಿ ನಿಭಾಯಿಸಬೇಕು.

ಸ್ವಾತಿ ಮನೆಯಲ್ಲಿಯೇ ಇದ್ದಾಳೆ.  ಸ್ವಲ್ಪ ಅವಳ ಕರೆದು  ಮ್ಯಾಟ್ರಿಮೋನಿಯೆಲ್ಲ ಚೆಕ್ ಮಾಡಬೇಕು.  “ಏ ಸ್ವಾತಿ ಬಾರೆ ಇಲ್ಲಿ.  ಲ್ಯಾಪ್ ಟಾಪ್ ತಗೋಂಡ್ ಬಾ.”

“ಬಂದೆ ಇರಮ್ಮ.”

ಒಂದು ಗಂಟೆ ಇರೊ ಬರೋದೆಲ್ಲ ತಡಕಾಡಿ ಇಂಟರೆಸ್ಟ್ ಕಳಿಸಿ “ಅಯ್ಯೋ ಸಾಕು ಬಿಡಮ್ಮ, ನನಗೆ ಬೇರೆ ಕೆಲಸವಿದೆ ಬೈ” ಎಂದು ಹೇಳಿ ಹೊರಟಾಗ ನಾನೂ ಸಣ್ದದಾಗಿ ನಿಟ್ಟುಸಿರು ಬಿಟ್ಟೆ..  ರಾತ್ರಿ ಬೇಗ ಊಟ ಮುಗಿಸಿ, ಮಗಳು ಮಲಗಿದಾಗ, ಮಗನ ರೂಮಿನ ಲೈಟು ಉರಿಯುತ್ತಿರುವುದು ಗಮನಿಸಿ, ಹುಚ್ ಮುಂಡೇದು  ಅದೆಷ್ಟು ಓದುತ್ತಾನೊ ಏನೊ.  ದಿನ ಮಲಗೋದು ಲೇಟು.  ಆದರೆ ಬೆಳಿಗ್ಗೆ ಅವಳಿಗಿಂತ ಬೇಗ ಎದ್ದು ಬಿಡುತ್ತಾನೆ.  ಇಬ್ಬರ ಸ್ವಭಾವದಲ್ಲೂ ಅದೆಷ್ಟು ಅಂತರ.?  ಮಲಗಿದರೂ ತಲೆ ತುಂಬ ಯೋಚನೆಗಳ ಸರಮಾಲೆ ಬಿಡುತ್ತಿಲ್ಲ ನಿದ್ದೆಗೆ ಜಾರಲು. ಒಂಟಿತನ ಬೆನ್ನಟ್ಟಿದ ಭೂತದಂತೆ ಕಾಡುತ್ತಿದೆ. ಅವಳಿಗಿಷ್ಟವಿಲ್ಲದ ಒಂಟಿತನದ ಜೀವನ ಕಷ್ಟಪಟ್ಟು ಅನುಭವಿಸುತ್ತಿದ್ದಾಳೆ.  ನೆನಪುಗಳು ಜಾಡಿಸಿ ಒದ್ದರೂ ಬೆನ್ನಟ್ಟಿ ಬರುವಾಗ ಶರಣಾಗಿ ಮನಸ್ಸು ಯೋಚನೆಯಲ್ಲಿ ಮುಳುಗುತ್ತದೆ.

ಎಲ್ಲಿ ಹೋದೆ ಬರಿ ಕಲೆಯನುಳಿಸಿ?  ಎಲ್ಲಿ ಕಾಲಿಕ್ಕಲಿ ಅಲ್ಲೊಂದು ಭದ್ರ ಕೋಟೆ ಕಟ್ಟಿಬಿಡುವ ರುದ್ರ ಮನಸ್ಸು ಅದು ಹೇಗೆ ಬಂತು? ಉಡುಗಿ ಹೋಗಿಬಿಡಲೆ ಬದುಕಿನ ಹೆಬ್ಬಾಗಿಲಿಗೆ ಕದವಿಕ್ಕಿ ಬೀಗ ಜಡಿದು?  ಮರುಗುವ ಜೀವ ಹಿಡಿದು ನಿಲ್ಲಿಸುವುದೆನ್ನ ಬೇಡಾ ನೀ ಹೋಗ ಬೇಡಾ.  ಅತ್ತ ದರಿ ಇತ್ತಪುಲಿ.  ದಿನ ದಿನವೂ ಕುಬ್ಜವಾಗುತ್ತಿದೆ ಮನಸ್ಸು.  ಬೆಂಬಿಡದ ನನ್ನೊಳಗಿನ ಯೋಚನೆ ಕಂಡವರೆದುರು ಕೈ ಚಾಚುವ ದುಷ್ಟ ಘಳಿಗೆ ಹಿಂಡಿ ಹಿಪ್ಪೆ ಮಾಡುತ್ತಿದೆ.  ಹೇಗೆ ಬದುಕು ಸಾಗಿಸಲಿ?  ದಿನ ದೂಡುವುದೇ ದುಸ್ತರವಾಗಿರುವಾಗ ಬದುಕಿನ ಜಂಜಾಟಕ್ಕೆಲ್ಲ ಮುಖ ಕೊಟ್ಟು  ಸರಿದೂಗಿಸುವ ಕಲೆ ಸತ್ತೇ ಹೋಯಿತೆ ಅನಿಸುತ್ತಿದೆ.

ನಾನೊಂದು ಬಗೆದರೆ ಆ ದೈವವೊಂದು ಬಗೆಯಿತು.  ಕಿಂಚಿತ್ತೂ ವಂಚನೆ, ಮೋಸ ಅರಿಯದ ಮನಸ್ಸು ಇರುವ ವಾಸ್ತವ ಅರಗಿಸಿಕೊಳ್ಳಲಾಗದೆ ಚಡಪಡಿಸುತ್ತಿದೆ.  ನಿಜ ಈಗ ನೀನಿಲ್ಲ ನನ್ನ ಮಾತುಗಳಿಗೆ ಉತ್ತರಿಸಲು.  ಆದರೆ ಮನಸೆಂಬ ಮಂಟಪದಲ್ಲಿ ಭದ್ರವಾಗಿ ತಳ ಊರಿ ಬಿಟ್ಟಿರುವೆಯಲ್ಲ,. ಅದೂ ನೀನಾಗೆ ಹಂತ ಹಂತವಾಗಿ ಒಂದೊಂದೇ ಮೆಟ್ಟಿಲೇರಿ ಇನ್ನಿಲ್ಲದ ಆಸೆ ಬಯಕೆಗಳ ಗರಿಗೆದರಿಸಿ, ನಿಂತ ನೀರು ಅಲುಗಾಡದಂತೆ ಸುತ್ತ ಕಟ್ಟೆಯ ಕಟ್ಟಿ, ಸ್ನೇಹವೆಂಬ ಬೆಸುಗೆ ಹಾಕಿ, ನೆನೆ ನೆನೆದು ದಿನದ ಗಳಿಗೆಗಳು ಹಸಿರಾಗಿರುವಂತೆ ಮಾಡಿ ಒಂದು ಮಾತೂ ಹೇಳದೆ ಹೋಗೇ ಬಿಟ್ಟೆಯಲ್ಲ.?  ಇದು ಸರಿಯಾ?  ಹೇಳಿಕೊಳ್ಳಲು ನನ್ನೊಳಗೊಂದಾಗಿ ಸಂತೈಸುವ ಏಕೈಕ ವ್ಯಕ್ತಿ ನೀನೊಬ್ಬನೆ.  ಅದು ನಿನಗೂ ಗೊತ್ತು..  ನೀನಿಲ್ಲದ ದಿನಗಳು ಬರೀ ಕಣ್ಣೀರು ತೊಟ್ಟಿಕ್ಕುವ ಘಳಿಗೆಗಳೇ. ನಿನ್ನ ಸ್ನೇಹ ಮಾತುಗಳ ಬೇಡುವ ನಾನೊಂದು ಭಿಕ್ಷಾ ಪಾತ್ರೆ ಅದೂ ಗೊತ್ತು ನಿನಗೆ.  ಹೇಗಿರಲಿ ಹೇಳು ನನ್ನ ಗೆಳೆಯಾ? ಇನ್ನೂ ಮಾಡಬೇಕಾದ ಕರ್ತವ್ಯವೊಂದು ಹಾಗೆ ಉಳಿದುಕೊಂಡುಬಿಟ್ಟಿದೆಯಲ್ಲ.  ಅದನ್ನು ಮರೆತು ಹೇಗೆ ಹೊರ ನಡೆಯಲಿ ಹೇಳು.?

ಯೋಚನಾ ಲಹರಿ ಸಾಗುತ್ತಲೆ ಇತ್ತು. ಬಸವಳಿದ ಶರೀರ ಅದ್ಯಾವಾಗ ನಿದ್ದೆಗೆ ಜಾರಿತೊ ಗೊತ್ತಾಗಲಿಲ್ಲ.

ನೀರು ಕುಡಿಯಲು ಕೆಳಗೆ ಬಂದ ಮಗ ಅಮ್ಮ ಗೊರಕೆಹೊಡೆಯುತ್ತಿರುವುದು ನೋಡಿ ಮನದಲ್ಲೆ ನಕ್ಕು ಪಾಪ ಬಹಳ ಸುಸ್ತಾಗಿರಬೇಕು ಮೆಲ್ಲನೆ ಬೆಕ್ಕಿನ ಹೆಜ್ಜೆ ಇಟ್ಟು ಹಣೆಗೆ ಹೂ ಮುತ್ತನಿಟ್ಟು ಬಾಗಿಲು ಮುಂದೆ ಮಾಡಿ ಹೊರಬರುತ್ತಾನೆ.

ಅರೆ ಇದೇನಿದು ಇವಳೂ ಕೂಡ ಮಲಗಿದ್ದಾಳೆ.  ಬಾಗಿಲು ಬೇರೆ ತೆರೆದೆ ಇದೆ.  ಈಗಿನ್ನೂ ಹತ್ತು ಗಂಟೆ.  ಇವತ್ತೀಡಿ ದಿನ ಮಾತಾಡೋಕೂ ಸಿಕ್ಕಿಲ್ಲ.  ಮಲಗು ಬೆಳಗ್ಗೆ ಬರ್ತೀನಿ. ಚಾದರದ ಮರೆಯಿಂದ ಅಣ್ಣನನ್ನು ನೋಡಿದ ಸ್ವಾತಿ ನಿದ್ದೆ ಬಂದವಳಂತೆ ನಟಿಸುತ್ತಾಳೆ.  ಕಾರಣ ಅವಳಿಗೆ ಮಾತಾಡೊ ಮೂಡಿಲ್ಲ. ಬೇಜಾರಲ್ಲೆ ಮಲಗಿದಾಳೆ. ಅವಳಲ್ಲೊಂದು ಕಥೆಯ ವ್ಯಥೆ.

ಅದೊಂದು ದಿನ ಮುಸ್ಸಂಜೆಯ ಹೊತ್ತು ತಡಕಾಡುವ ಮ್ಯಾಟ್ರಿಮೋನಿಯೊಳಗೆ ಮುದ್ದಾದ ಮುಖ ಹೇಳುವುದಕ್ಕಿಂತ ಏನೊ ವಿಶೇಷ ಅಡಗಿದೆಯಲ್ಲ ಅನಿಸಿತೊಮ್ಮೆ ಕಂಡ ಕ್ಷಣ. ಒಳಗುಟ್ಟು ಅರಿವಾಗಲಿಲ್ಲ, ಮನದ ಮೂಲೆಯಲ್ಲಿ ತಿಳಿಯುವ ಕುತೂಹಲ..  ಯಾವುದಕ್ಕೂ ಇರಲಿ, ಒಮ್ಮೆ ಮಾತಾಡಿಸಿದರೆ ತಪ್ಪೇನು?  ದಿನಗಳು ಉರುಳುವ ಹೊತ್ತಲ್ಲಿ ಹುಡುಕಾಡಿ, ಸಿಕ್ಕ ಮೊಬೈಲಿಗೆ ರಿಂಗಣಿಸಿ ಕಂಡು ಹಿಡಿದೆ ನನ್ನ ಫೋನ್ ನಂಬರ್ ಅಂತ ನೀನೆ ತಾನೆ ಹೇಳಿದ್ದು.?  ಆದರೆ ನೀನು ಹಾಕಿದ ಮೊದಲ ಕಂಡೀಷನ್ “ಗುಟ್ಟಾಗಿಡು ನಮ್ಮ ಮಾತು”. ನಾ ಹೇಗೆ ನಂಬಿದೆ ನಿನ್ನ ಮಾತು?  ಅದೆ ದೊಡ್ಡ ತಪ್ಪು ನಾನು ಮಾಡಿದ್ದು.  “ಶನಿ ವಕ್ಕರಿಸಿಕೊಂಡಾಗ ಪಾಪಿ ಸಮುದ್ರಕ್ಕೆ ಹೋದರೂ ಮೊಳಕಾಲು ನೀರೆ”  ಅಂದಾಂಗಾಯಿತು. ಅವಳ ಪರಿಸ್ಥಿತಿ ಕೂಡ ಒಂಥರಾ ಹಪಹಪಿಸುವ ಮಟ್ಟಕ್ಕೆ ಬಂದಿತ್ತು.  ಜೊತೆಗಿರುವ ಗೆಳತಿಯರ ಮದುವೆಯ ವಾಲಗ ಊದುತ್ತಿದೆ.  ಒಬ್ಬಂಟಿ ಭಾವ ಮನಸ್ಸು ಹೊಕ್ಕಿದೆ.  ಕಂಡವರ ನೋಟ ಮಾತು ಎದುರಿಸುವ ಮನೆಯವರೆಲ್ಲರ ಮಾತುಗಳು ಆಗಾಗ ಕಾದ ಸೀಸದಂತೆ ಕಿವಿಗೆ ಬೀಳುತ್ತಿದೆ.  ಬರುವ ಗಂಡುಗಳ ಹೆತ್ತವರ ಒಂದೊಂದೇ ಮೀಟುವ ವಾಖ್ಯಗಳು ಫೋನಿನ ಸಂಭಾಷಣೆ ಮನೆಯಲ್ಲಿ ಆಗಾಗ ಮೊಳಗುತ್ತಿದೆ. ಇದರ ಮಧ್ಯೆ ನೀ ಸಿಕ್ಕಾಗ ಯೋಚಿಸುವ ಹಂತ ದಾಟಿದ್ದೆ ಅನಿಸುತ್ತದೆ.

ಮೊದ  ಮೊದಲು ಅದೇನು ಮಾತು, ಪ್ರೀತಿ.  ಮ್ಯಾಟ್ರಮೊನಿ ಸೈಟು ಒಂದು ಮಾಂತ್ರಿಕ ಜಾಲ.  ಅಲ್ಲಿ ಕಂಡವನಲ್ಲವೆ ನೀನು.  ಮಾತಿಗೇನು ಬರ.  ಹೊತ್ತಿಲ್ಲ ಗೊತ್ತಿಲ್ಲ, ಮನಸ್ಸಿಗೆ ಬಂದಂತೆ ಇಬ್ಬರೂ ಹರಟಿದ್ದು ಸುಳ್ಳಾ ಹೇಳು ನೋಡೋಣ?  ನಮ್ಮಿಬ್ಬರ ಮಾತು ಗುಟ್ಟಾಗಿತ್ತಲ್ಲ  ಅದನ್ನು ಆಗಾಗ ಕೇಳಿ ಕನ್ಫರ್ಮ್ ಮಾಡಿಕೊಳ್ಳುವ ನಿನ್ನ ನಡೆ, ಈಗ ಎಲ್ಲ ಅರ್ಥ ಆಗುತ್ತಿದೆ.  ಹೀಗೆ ಅದೆಷ್ಟು ಹುಡುಗಿಯರ ಜೊತೆ ನಿನ್ನ ಸರಸ ಸಲ್ಲಾಪ.  ಬೇಕಾದಷ್ಟು ಹುಡುಗಿಯರು ಅನಾಯಾಸವಾಗಿ ಹಗಲುಗನಸು ಕಾಣುತ್ತ ಬಲೆಗೆ ಬೀಳುತ್ತಾರೆ.  ಅದಕ್ಕೆ ಸರಿಯಾಗಿ ಪ್ರೊಫೈಲ್ ಕ್ರಿಯೇಟಾಗಿದೆಯಲ್ಲ.  ಇರಬಹುದು ಓದು, ಪ್ರತಿಭೆ.  ಆದರೆ ಏನು ಬಂತು ಮಣ್ಣು.  “ಸರ್ವಗುಣ ಮಷಿ ನುಂಗಿತ್ತು ” ಅನ್ನುವ ಗಾದೆಗೆ ತಕ್ಕ ವ್ಯಕ್ತಿ ನೀನು.  ಇದರಲ್ಲಿ ಯಾವ ಡೌಟಿಲ್ಲ. ಹೀಗೆ ಅಂತ ಗೊತ್ತಿದ್ದೂ ಯಾಕೆ ನಿನ್ನ ಇಷ್ಟ ಪಡ್ತೀನಿ ಅಂತ ಅನಿಸೋದು ಸ್ವಾಭಾವಿಕ.  ಅದೆ ಕಣೊ ನಿನ್ನ  ನೇರ ನುಡಿ, ನಿನ್ನ ಬರಹಗಳ ಒಕ್ಕಣೆ ಹೀಗೆ ಕೆಲವು ಅಪರೂಪದ ಲಕ್ಷಣಗಳು.  “ಯಾರ ಜೊತೆ ಹೇಗಿರ್ತೀನೊ ಗೊತ್ತಿಲ್ಲ ಆದರೆ ನಿನ್ನ ಜೊತೆ ನಾನು ತುಂಬಾ ಹಾನೆಸ್ಟ್, ನಿಜ ಕಣೆ ”  ಅಂತ ಉಸಿರಿದ್ದು ನಾನು ಈಗಲೂ ನಂಬಿದಿನಿ.  ಇದಕ್ಕೆ ಹಲವಾರು ಆಧಾರಗಳಿವೆ.  ಅದಕ್ಕೇ ನನಗೊಂದು ಥರ ಹೆಮ್ಮೆ.  ಯಾವತ್ತೂ ನಿನ್ನ ಮನಸ್ಸಿನಲ್ಲಿ ನಾನಿದ್ದೀನಿ.  ನನ್ನ ಪ್ರೀತಿಸುವ ಜೀವ ನೀನು.  ನೀನು ನನ್ನ ಮರೆಯಲ್ಲ.  ಆದರೆ ಯಾವುದೋ ಬಲವಾದ ಕಾರಣದಿಂದ ದೂರ ಆಗಿದ್ದೀಯಾ.  ಇರಲಿ, ಉಳಿಸಿಹೋದ ನಿನ್ನ ನೆನಪಿಗೆ, ಪ್ರೀತಿಗೆ  ಸದಾ ಹಸನ್ಮುಖಿಯಾಗಿ ಇರ್ತೀನಿ. ತನ್ನಲ್ಲೆ ಸಮಾಧಾನ ಮಾಡಿಕೊಂಡು ಮಲಗಿದ್ದೊಂದೆ ನೆನಪು.

ವಿಶಾಲವಾದ ಕಲ್ಲಿನ ಚಪ್ಪಡಿ.  ಹರಿಯುವ ನೀರು.  ಮತ್ತೆ ಅದೆ ಹುಡುಗ.  ಕೈ ಕೈ ಹಿಡಿದು  ಸುತ್ತೆಲ್ಲ ಸುತ್ತಾಡಿ ಬೆಳದಿಂಗಳ ಬೆಳಕಲ್ಲಿ ಅಲ್ಲಿ ಬಂದು ಕೂತವರ ಮಧ್ಯೆ ನೂರೆಂಟು ಮಾತುಗಳು.  ಕಲ್ಲಿನ ಗುಹೆ.  ಹುಲ್ಲಿನ ಹಾಸು. ಊಳಿಡುವ ನರಿ.  ಪಕ್ಕದಲ್ಲಿ ಇವನು.  ಏನೇನ್ ಮಾತಾಡುತ್ತಿದ್ದಾಳೆ ಫುಲ್ ಧಿಲ್ ಖುಷ್.  ನಗುತ್ತಿದ್ದಾಳೆ……! ಬೆಳಗಾದರೂ ನಿದ್ದೆ ಗಣ್ಣಿನಲ್ಲಿ ಬಡಬಡಿಸುವ ತಂಗಿಯ ಅವಸ್ಥೆ ನೋಡಿ ಕನಸಾ? ಇರು ಮಾಡ್ತೀನಿ. “ಏಳೆ, ಆಫೀಸಿಗೆ ಹೋಗಲ್ವೇನೆ ತರಲೆ ಅಂತ  ಗುದ್ದಿ ಎಬ್ಬಿಸಿದಾಗಲೆ ಗೊತ್ತಾಗಿದ್ದು. ಓ…… ಇದುವರೆಗೆ ಕಂಡದ್ದು ಕನಸು.  ಛೆ ಎಂತ ಒಳ್ಳೆ ಕನಸು ಬಿದ್ದಿತ್ತು.  ಯಾಕಣ್ಣ ಎಬ್ಬಿಸಿದೆ.  ಕನಸಲ್ಲಿ ಒಬ್ಬ ಹುಡುಗ ಬಂದಿದ್ದ, ಮಾತಾಡಿಸುತ್ತಿದ್ದೆ.  ಎಲ್ಲ ಹಾಳು ಮಾಡಿದೆ.  ಹೋಗೊ.

“ಬರ್ತಾನೆ ಬರ್ತಾನೆ.  ಇನ್ನೇನಾಗುತ್ತೆ ಅಮ್ಮನಿಗೆ ಮೂರೊತ್ತೂ ನಿನ್ನ ಮದುವೆ ಚಿಂತೆ.  ನಿನಗೊ ಫೋಟೋ ನೋಡ್ತೀಯಾ ಕನಸು ಕಾಣ್ತೀಯಾ.  ಹಾ ಹೇಳೆ ಅದೆಂಥ ಕನಸೆ?”

ಮುನಿಸಿಕೊಂಡು ಎದ್ದು ಬಾತರೂಮಿಗೆ ಹೋದಾದ ಮೇಲೆ ಅಣ್ಣ ನಕ್ಕು ರೂಮಿನಿಂದ ಹೊರಗೆ ಹೋಗಿದ್ದು. ಅವನಿಗೆ ಗೊತ್ತು ನಾನೆಷ್ಟು ಪಾಕಡಾ ಅಂತ.  ಮತ್ತೆ ಹೊದ್ದು ಮಲಗಿದರೆ?  ಬೆಳಗ್ಗೆ ಏಳೋದೆ ಕಷ್ಟ.  ಯಾಕಾದರೂ ಬೆಳಗಾಯಿತೊ ಅಂತ ದಿನಾ ಆ ಸೂರ್ಯನ ಬಯ್ಕೊತೀನಿ.

“ತಿಂಡಿ ತಟ್ಟೆ ಎದುರಿಗೆ ಇಟ್ಟುಕೊಂಡು ಅದೆಂತ ಕಥೆನೆ ನಿಂದು.  ಬೇಗ ತಿಂಡಿ ತಿಂದು ಎದ್ದೇಳಿ.”

” ಇರಮ್ಮ ಅದೇನೊ ದೊಡ್ಡ ಕನಸಂತೆ.  ಅವಳು ಹೇಳ್ತಿದ್ದಾಳೆ.  ಒಂದಕ್ಕೊಂದು ತಾಳೆ ಇಲ್ಲ..  ಆದರೂ ಒಂತರ ಇಂಟರೆಸ್ಟಿಂಗ ಇದೆ.  ಹೇಳೆ ಆಮೇಲೆ….”

“ಅದೆ ಆ ಹುಡುಗನಿಗೆ ಮರುಳಾಗಿ ನಾನು ಫುಲ್ ಫೀದಾ ಆಗೋಗಿದ್ದೆ ಕಣೊ.  ನಿಜವಾಗಲೂ ದಿಂಬೆಲ್ಲ ಒದ್ದೆ ಆಗಿತ್ತು.  ಅತ್ತಿದ್ದೆ ಅನಿಸುತ್ತೆ..  ಅಮ್ಮ ದಿಂಬಿನ ಕವರ ತೊಳೆಯಲು ಹಾಕಿದೀನಿ.  ನೋಡಮ್ಮ ಇನ್ಮೇಲೆ ರಾತ್ರಿ ಮಲಗೊ ಟೈಮಲ್ಲಿ ಮ್ಯಾಟ್ರಿಮೋನಿ ನೋಡಬೇಕು ಹೇಳಬೇಡಾ.  ಎಂತ ಇರಿಟೇಷನ್ ಛೆ.  ನನಗೆ ತಿಂಡಿ ಬೇಡಾ.  ಚಾ ಮಾತ್ರ ಕೊಡು.”

“ಏಯ್ ಬಿಟ್ಟಾಕು.  ಕನಸು ಕಂಡಿದ್ದಕ್ಕೆಲ್ಲ ಅಪಸೆಟ್ ಆಗ್ತಾರೆನೆ.  ನೀನು ನಿಧಾನವಾಗಿ ತಿಂಡಿ ತಿನ್ನು.  ನಾ ಇವತ್ತು ಆಫೀಸಿಗೆ ಡ್ರಾಪ್ ಮಾಡ್ತೀನಿ ಆಯ್ತಾ.  ಕಮಾನ್ ಚಿಯರಪ್ಪ್. “

ಅಣ್ಣನ ಮಾತು ಖುಷಿ ತರಿಸಿತವಳಿಗೆ “ಸರಿ ಕಣೋ ನೀನಿರುವಾಗ ನಾ ತಲೆಸಕೆಡಿಸಿಕೊಳ್ಳೋದಿಲ್ಲ.  ಅಮ್ಮ ಒಂದು ಕಪ್ ಸ್ಟ್ರಾಂಗ ಟೀ ಇಬ್ಬರಿಗೂ.  ಬಾ ನೀನೂ ತಿಂಡಿ ತಿನ್ನು.  ಆಮೇಲೆ ಟೀ ಮಾಡುವಂತೆ.  ಅಲ್ಲೊ ಅಣ್ಣಾ…………….”   ಅಣ್ಣ ತಂಗಿಯರ ಹರಟೆಗೆ ಕೊನೆಯಿಲ್ಲ.

“ಕಾಣದ ಕಡಲಿಗೆ ಹಂಬಲಿಸುತಿದೆ ಮನ, ಕಾಣಬಲ್ಲೆನೆ ಒಂದು ದಿನಾ………..” ವಾವ್ ಮಗಳ ಬಾಯಲ್ಲಿ ಇಂಥ ಒಂದು ಒಳ್ಳೆ ಭಾವಗೀತೆ.  ಪರವಾಗಿಲ್ವೆ ಕನ್ನಡ ಹಾಡು ಗುಣ ಗುಣಿಸುವ ತನ್ನ ಮಗಳ ಬಗ್ಗೆ ಹೆಮ್ಮೆಯಾಗುತ್ತದೆ.

“ಏನು ಮಗಳೆ ಇಷ್ಟೊಂದು ಒಳ್ಳೆ ಕನ್ನಡ ಹಾಡು, ಅದೂ ನಿನ್ನ ಬಾಯಲ್ಲಿ.”

“ಹೂ ಕಣಮ್ಮ.  ಸದಾ ನೀ ಒಂದಿಲ್ಲೊಂದು ಕನ್ನಡ ಹಾಡು ಮನೆಯಲ್ಲಿ ಹಾಡೋದರಿಂದ ಹೀಗೆ ಸುಮಾರು ಹಾಡು ಅರ್ಧಂಬರ್ಧ ಬರುತ್ತೆ.  ಅಂದರು ಕೆಲವು ಹಾಡುಗಳು ಮನಮುಟ್ಟುವಂಥವುಗಳು.”

ಅದು ಹಾಗೆ ಮನೆಯ ವಾತಾವರಣಕ್ಕೆ ತಕ್ಕಂತೆ ಮಕ್ಕಳೂ.  ನೀರಿಗೂ ಮಕ್ಕಳ ಮನಸ್ಸಿಗೂ ಯಾವ ವ್ಯತ್ಯಾಸ  ಇಲ್ಲ.

ಇಬ್ಬರೂ ಹೊರಟು ನಿಂತಾಗ ನಗುಮುಖದಿಂದ ಕಳಿಸಿ ತನ್ನ ಮನೆಗೆಲಸದಲ್ಲಿ ಮಗ್ನವಾಗುತ್ತಾಳೆ.

ಜೀವನ ಅಂದರೆ ಹೀಗೆ ಇರಬೇಕು, ಇರುತ್ತದೆ ಅಂತ ಹೇಳುವುದಕ್ಕೆ ಆಗುವುದಿಲ್ಲ.  ಸಮಯ ಸಂದರ್ಭ ಹೇಗೆ ಬರುತ್ತೊ ಹಾಗೆ ಹೊಂದಿಕೊಂಡು ಹೋಗಬೇಕು.  ಕಾಲ ಎಲ್ಲವನ್ನೂ ಕಲಿಸುತ್ತದೆ.  ಯಾರಿರಲಿ ಇಲ್ಲದಿರಲಿ ದಿನಗಳು ತನ್ನಷ್ಟಕ್ಕೆ ಕಳೆಯುತ್ತದೆ.  ಆದರೆ ಅವಗಡಗಳು ಘಟಿಸಲು ಒಂದಲ್ಲಾ ಒಂದು ಕಡೆ  ದಾರಿಯಲ್ಲಿ ಹೊಂಚು ಹಾಕಿ ಕಾದುಕೊಂಡೇ ಕುಳಿತಿರುತ್ತದೆ.  ಎಲ್ಲವನ್ನು ನುಂಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕಷ್ಟೆ.

ಗೀತಾ ಹೆಗಡೆ,ಕಲ್ಮನೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!