ಅಂಕಣ

ಸಂಜೆಗಡಲು-2

ಸಂಜೆಗಡಲು-1

ನನ್ನ ಅವನ ಬಾಂಧವ್ಯದಂತೆ ಈ ಕಡಲಿನೊಂದಿಗಿನ ಸಂಬಂಧ.. ಹಠಮಾಡಿ ಕಡಲ ತಡಿಯಲ್ಲೇ ಮಲಗಿದ ದಿನಗಳೆಷ್ಟಿಲ್ಲ?ನಾವು ಮೂವರೂ ಒಟ್ಟಾಗಿ ಕಳೆದ ಚಣಗಳೆಷ್ಟಿಲ್ಲ? ಈ ಕಡಲ ಮಡಿಲಲ್ಲಿ..! ಎಂದು ಅಂದುಕೊಳ್ಳುತ್ತಾ ಇರುವ ಸಮಯದಲ್ಲೇ,ಅಲ್ಲಿಗೆ ಒಬ್ಬ ಸಣ್ಣ ಹುಡುಗ ಬಲೂನುಗಳನ್ನು ಮಾರುತ್ತಾ ಬಂದ. ಕಡಲಿನ ಪ್ರಕ್ಷುಬ್ಧತೆ ಈಗ ಮಾಯವಾಗಿತ್ತು. ಸೂರಿ ಪಡುವಣದಿ ತನ್ನ ನಿರ್ಗಮನದ ಕೊನೆಯ ಅಂಚಿನಲ್ಲಿದ್ದ.. ಕಡಲದಂಡೆಯಲ್ಲಿ ಮತ್ತೆ ಜನ ತುಂಬಿಕೊಂಡಿದ್ದರು. ಬಲೂನು ಮಾರುವ ಆ ಹುಡುಗ ನಡೆಯುತ್ತಾ ನಡೆಯುತ್ತಾ ಈಕೆಯಲ್ಲಿಗೆ ಬಂದ.ಅಕ್ಕಾ,ಬಲೂನು ಬೇಕಾ?…ಎಂದ. ಆಕೆ ಉತ್ತರಿಸಲಿಲ್ಲ. ಮತ್ತೆ ಮತ್ತೆ ಕೇಳತೊಡಗಿದ. ಆಕೆ ಉತ್ತರಿಸದೇ ಹಾಗೇ ಕುಳಿತಿದ್ದಳು. ತನ್ನ ಪುಟ್ಟ ಕೈಯಿಂದ ಅವಳ ಹೆಗಲನ್ನು ಅಲುಗಿಸಿದ.ಆತ ಹಾಗೆ ಸ್ಪರ್ಶಿಸಿದ ಮರುಕ್ಷಣವೇ ಆಕೆಯಲ್ಲಿ ಯಾಕೋ ಮಾತೃವಾತ್ಸಲ್ಯ ಉಕ್ಕಿ ಹರಿಯತೊಡಗಿತು. ಆತನನ್ನು ನೋಡಿದಳು. ಮುಗ್ಧತೆ ತುಂಬಿದ ಆ ಮುಖ ಎಷ್ಟು ಚೆಂದವಿತ್ತು ಎಂದರೆ,ಅವಳಿಗೆ ಕೂಡಲೇ ತನ್ನಿನಿಯನ ಮಾಸದ ಆ ನಗು ಇವನ ಮುಖದಲ್ಲಿ ಕಾಣತೊಡಗಿತ್ತು. ದಂತದ ಗೊಂಬೆಯಂತಿದ್ದ. ಅವನನ್ನೇ ನೋಡತೊಡಗಿದಳು. ನಿನ್ನೆಯ ನೆನಪಿರದ,ನಾಳೆಯ ಚಿಂತೆಯಿರದ,ಇಂದಿನ ಹಂಗಿರದ ಆ ಮುಖ ಪ್ರಶಾಂತವಾಗಿ ಕಂಡಿತು. ಹಳೆಯ ಅಂಗಿಯನ್ನು ಧರಿಸಿದ್ದರೂ ಸೌಂದರ್ಯ ಎದ್ದು ನಲಿಯುತ್ತಿತ್ತು. ತೀಕ್ಷ್ಣ ಕಣ್ಣುಗಳು ಕಾಂತಿಯುತವಾಗಿದ್ದವು.ಜೀವನೋತ್ಸಾಹ ತುಂಬಿತುಳುಕುತ್ತಿತ್ತು. ಆತ ಮತ್ತೆ ಮತ್ತೆ ಅಕ್ಕಾ ಅಕ್ಕಾ ಎಂದು ಕರೆಯುತ್ತಿದ್ದ. ಆತನ ಹೆಗಲ ಮೇಲೆ ಕೈಯಿಟ್ಟ ಆಕೆ,ಕುಳಿತಲ್ಲಿಂದಲೇ,ಕುಳಿತುಕೋ ಎಂದು ಸನ್ನೆ ಮಾಡಿದಳು. ಆತ ಕುಳಿತ ತಕ್ಷಣ,ಆತನನ್ನು ಬರಸೆಳೆದು ಬಿಗಿದಪ್ಪಿ,ಹಣೆಯ ಮೇಲೆ ಮುತ್ತಿಟ್ಟಳು. ಅವಳು ಹಾಗೆ ಮಾಡಿದ ತಕ್ಷಣ ಆತನಲ್ಲಿ ಏನಾಯಿತೋ ಏನೋ ಕಣ್ಣಿಂದ ಭಾಷ್ಪಗಳು ಉದುರತೊಡಗಿದವು.ಆತನ ಕಣ್ಣೀರನ್ನು ತನ್ನ ಬೆರಳುಗಳಿಂದ ಒರೆಸಿದಳು.ಆತನನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡಳು. ಆತನಿಗೆ ಇದ್ಯಾವುದರ ಅರಿವೂ ಇಲ್ಲ. ಯಾವುದೋ ಒಂದು ಅಮೂರ್ತ ಲೋಕದೊಳಗೆ ಆತ ಜಾರಿಹೋಗಿದ್ದ. ಅವಳ ಪ್ರೀತಿಯ ಒಂದು ನೇವರಿಕೆ ಆತನಿಗೆ ಅಷ್ಟೊಂದು ಅಪ್ಯಾಯಮಾನವಾಗಿತ್ತು. ಆತನಿಗೆ ಅರಿವಿಲ್ಲದೇ ,ಅಯಾಚಿತವಾಗಿ ಜಗದ ಶ್ರೇಷ್ಠ ಪದ ‘ಅಮ್ಮಾ’ ಎಂಬ ಉದ್ಘಾರ ಆತನ ಬಾಯಿಂದ ಹೊರಬಂತು. ದನಿಯಲ್ಲಿ ಉತ್ಕಟ ಪ್ರೀತಿಯಿತ್ತು. ಕರೆದ ಆ ಬಗೆಯಲ್ಲಿ ಮೊಟ್ಟಮೊದಲು ಅಮ್ಮಾ ಎಂದು ಕರೆದ ಮಿಡಿತವಿತ್ತು. ಆ ನುಡಿಯನ್ನು ಕೇಳಿದ ಕೂಡಲೇ ಆಕೆಯ ಕಣ್ಣುಗಳಲ್ಲಿ ಅದೆಂಥದೋ ಉತ್ಸಾಹ. ಅವರ್ಣನೀಯವಾದಂತಹ ಅತಿಮಧುರ ಸಿಹಿಸ್ವಪ್ನ ನಗು..ಕಣ್ಣುಗಳು ಸುಮ್ಮನಿರಬೇಕಲ್ಲ;ಯಾರನ್ನೂ,ಯಾವುದನ್ನೂ ಕೇಳದೆಯೇ ಸಂತೃಪ್ತಿಯ ಒಂದೆರಡು ಬಿಂದುಗಳು ಆಕೆಯ ಕೆನ್ನೆ ಮೇಲಿಂದ ಹಾಗೇ ಜಾರಿಹೋಗಿ ಆತನ ಕಪೋಲಗಳ ಮೇಲೆ ಬಿತ್ತು. ಆಗ ಆತ ಅವಳೆಡೆಗೆ ನೋಡಿದ.ತನ್ನ ಕೈಗೆ ಮುತ್ತಿಕ್ಕಿಕೊಂಡ.ತನ್ನ ಪುಟ್ಟ ಪುಟ್ಟ ಬೆರಳುಗಳಿಂದ ಅವಳ ಕಣ್ಣೀರೊರೆಸುವ ಪ್ರಯತ್ನ ಮಾಡಿದ. ಇಬ್ಬರೂ ಮಾತನಾಡುತ್ತಿಲ್ಲ. ಆದರೂ ಅದೊಂದು ಅಭೂತಪೂರ್ವ ಅನುಭೂತಿ!ಮಾತಿಲ್ಲದ ಆ ಸಂವಹನದ ಸಂವೇದನೆಯೇ ಅದೆಷ್ಟು ಚೆಂದ!ಇದ್ದಕ್ಕಿದ್ದಂತೆ,ಅವಳು ಕುಳಿತ ಆ ಬಂಡೆಯ ಮೇಲೆ ಒಂದು ಚಿಟ್ಟೆ ಹಾರಿಬಂದು ಕುಳಿತಿತು.ಆಕೆ ಒಂದು ಕೈಯಿಂದ ಆತನ ತಲೆಯನ್ನು ನೇವರಿಸುತ್ತಾ,ಇನ್ನೊಂದು ಕೈಯನ್ನು ಬಂಡೆಯ ಮೇಲಿಟ್ಟಳು.ಆದರೆ, ಆಕೆಯ ಕೈ ಆ ಚಿಟ್ಟೆಯ ಮೇಲೆ ಬಿದ್ದಾಗ,ಚಿಟ್ಟೆ ವಿಲವಿಲನೆ ಒದ್ದಾಡಿದಾಗ,ಆಕೆ ಕುಳಿತಲ್ಲಿಯೇ ಚಡಪಡಿಸಿದಳು. ರಂಗುರಂಗಿನ ಆ ಚಿಟ್ಟೆಯ ವಯಸ್ಸು ಕೇವಲ ಹದಿನಾಲ್ಕು ದಿನಗಳು. ಆದರೆ,ಅದರ ಚೈತನ್ಯಕ್ಕೆ ಅದಕ್ಕದು ಮಾತ್ರವೇ ಸಾಟಿ ಅಲ್ಲವೇ?ಪತಂಗದ ಮೇಲೆ ಕೈಬಿದ್ದಾಗ,ಆ ಪುಟ್ಟ ಜೀವ ಎಷ್ಟೊಂದು ಚಡಪಡಿಸಿರಬೇಕು ಎಂದು ಈಕೆಯ ಮನಸ್ಸು ಕೊರಗತೊಡಗಿತ್ತು.ಮತ್ತೆ ಮತ್ತೆ ಕುಳಿತಲ್ಲಿಯೇ ಚಡಪಡಿಸುತ್ತಿದ್ದಳು.ಆ ಚಿಟ್ಟೆಯು ಸತ್ತಂತೆ ಬಿದ್ದುಕೊಂಡಿತ್ತು. ಸತ್ತಿತ್ತೇ?ಅಥವಾ ಬದುಕಿಯೇ ಇತ್ತೇ?ಒಂದೆರಡು ಕ್ಷಣ ರೆಕ್ಕೆ ಬಡಿದಾಡಿತ್ತು. ಒಂದೇ ಸಮನೆ ಜೋರಾಗಿ ಗಾಳಿ ಬೀಸತೊಡಗಿತು.ಜೊತೆಗೆ ಧೋಧೋ ಎಂದು ಮಳೆ ಸುರಿಯತೊಡಗಿತು.ಆ ಹುಡುಗ ಆಕೆಯ ಮಡಿಲಿನಿಂದ ಎದ್ದ. ಎದ್ದವನೇ ತನ್ನ ಬಲೂನುಗಳನ್ನು ನೋಡಿದ. ಈಕೆಯನ್ನು ನೋಡಿ,ಯಾವುದೋ ಅರ್ಥವಾಗದ ಭಾವದ ನೋಟವೊಂದನ್ನು ಬೀರಿದ.. ಆದರೆ, ಆ ನೋಟ ನಿರ್ವಿಕಲ್ಪ ನಿರ್ಭರ ನಿಸ್ತುಲ ಭಾವದ ಹೃದಯಪದ್ಮದ ಕುಸುಮವಾಗಿತ್ತು. ತನ್ನ ಬಲೂನುಗಳೊಂದಿಗೆ ಆತ ನಡೆಯತೊಡಗಿದ. ಆಕೆ ಮತ್ತೆ ಮಾತನಾಡಲಿಲ್ಲ. ಆತನೂ ಕೂಡಾ! ಆಕೆ ಹೋಗಬೇಡವೆಂದು ಹೇಳಲಿಲ್ಲ. ಆತನೂ ಹೋಗುತ್ತೇನೆ ಅನ್ನಲೇ ಇಲ್ಲ. ಆತ ದೂರ ದೂರ ನಡೆದುಹೋಗುತ್ತಿದ್ದ. ಈಕೆ ನೋಡುತ್ತಿದ್ದಾಳೆ. ಆತನ ಬಲೂನುಗಳ ರಾಶಿಯಲ್ಲಿ ಒಂದು ಬಲೂನಿನ ತುತ್ತತುದಿಯಲ್ಲಿ ಆ ಚಿಟ್ಟೆ ನಾಟ್ಯವಾಡುತ್ತಿತ್ತು.ವ್ಹಾ! ಬದುಕು ಅದೆಷ್ಟು ಸುಂದರ. ಮುಗ್ಧ ಮನೋಹರ.. ಆ ಹುಡುಗ ಎಲ್ಲಿಂದ ಬಂದ, ಹೇಗೆ ಬಂದ ಮತ್ತು ಯಾಕಾಗಿ ಬಂದ? ಈಗ ಆಗಂತುಕನಂತೆ ಮಾಯವಾದ.. ಪರಿಚಿತನಾಗುವ ಮುನ್ನವೇ ಮತ್ತೆ ಅನಾಮಿಕನಾಗಿ ಹೋದನಲ್ಲವೇ? ಆಕೆ ಯೋಚಿಸುತ್ತಲೇ ಇದ್ದಾಳೆ. ಬಲೂನು ಮಾರುವ ಆ ಹುಡುಗ ಒಂದು ನೆಪವೇ?ಹೃದಯ ಬಯಸುವುದು ಎಂದೂ ಒಂದು ಹಿಡಿ ಪ್ರೀತಿಯನ್ನು ಅಲ್ಲವೇ? ಬೇಸರವಾದಾಗ ಸಾಂತ್ವನದ ಒಂದು ಮೃದುಲ ಸ್ಪರ್ಶಕ್ಕಾಗಿ ಮನಸ್ಸು ಹಂಬಲಿಸುತ್ತದಲ್ಲವೇ?ಯಾಕೆ ಪ್ರೀತಿ ಪ್ರೀತಿ ಪ್ರೀತಿ..!ಈ ಥರದ ರೀತಿ? ಅದನ್ನು ಬಿಟ್ಟು ಮನುಷ್ಯ ಬದುಕಲಾರನೇ ನೆರಳು,ಸಾವುಗಳಂತೆಯೇ ಈ ಪ್ರೀತಿಯೇ? ಸಾವನ್ನು ಯಾರೂ ಬಯಸದಿದ್ದರೂ ಅದು ನಮ್ಮನ್ನು ಬಯಸುತ್ತದಲ್ಲವೇ?ನೆರಳೂ ಕೂಡ ಹಾಗೇ.. ನಾನು ನಿನ್ನವನು,ನೀನು ನನ್ನವನು ಎನ್ನುತ್ತಲೇ ಕತ್ತಲಲ್ಲಿ ಕರಗಿಹೋಗುತ್ತದೆ, ಕಳೆದುಹೋಗುತ್ತದೆ… ಈ ಹುಡುಗನಂತೆಯೇ! ಆದರೆ,ಜೊತೆಗಿದ್ದಷ್ಟು ಕಾಲ ಒಂಟಿತನದ ಏಕಾಂತದಲ್ಲೂ ಜಂಟಿಯಾಗುತ್ತದೆ.ಅಮೃತತ್ವದ ಸಿಂಚನದ ಕಾಲವದು!.. ಬಾಂಧವ್ಯದ ಹಾದಿಯಲ್ಲಿ ಕ್ರಮಿಸಿದ ಹೆಜ್ಜೆ ಸುಳಿವೂ ಕೂಡಾ ಎಷ್ಟೊಂದು ಚೆಂದ ಅಲ್ಲವೇ?ಈಗ ಅಳುತ್ತಿದೆ ಮುಗಿಲು;ನನ್ನ ಬದಲು.. ಆದರೆ ತಂಪಾಗಿದೆ ನನ್ನೊಡಲು.. ಹಿತವಾಗಿದೆ ಅಲೆಯ ಕಡಲು.. ಕ್ಷಿತಿ ಮತ್ತು ವಿಹಗಳು ಎಂದಿಗೂ ಒಂದಾಗಲು ಸಾಧ್ಯವೇ ಇಲ್ಲವೇ? ದಿಗಂತದಲ್ಲಿ ಸೇರುತ್ತವಲ್ಲವೇ?ಅಥವಾ ಸೇರಿದಂತೆ ಅನಿಸುತ್ತದೆಯೇ?ಭ್ರಮೆಯ ಮಗ್ನತೆಯಲ್ಲಿ,ಭಗ್ನಗೊಂಡ ಮುಗಿಲ ಕನಸುಗಳು ಕಾಣುವುದೇ ಇಲ್ಲವಲ್ಲ..ಒಬ್ಬರನ್ನೊಬ್ಬರು ಕೇವಲ ನೋಡುತ್ತಲೇ ಕಾಲ ನೂಕುವ, ಗಗನ ಮತ್ತು ಧರಣಿಗಳ ಪ್ರೀತಿ ಚಿರಂತನ ಅಲ್ಲವೇ?..ಮಿಲನದ ಸುಳಿವುಗಳಲ್ಲಿ ಮಲಿನ ಮನಸುಗಳಿಲ್ಲ.. ಪ್ರತಿಸಲವೂ ಆಕಾಶ ಮತ್ತು ಭುವಿಯು ವರಿಸುತ್ತಲೇ ಇರುತ್ತವಲ್ಲವೇ?ಪ್ರತೀ ಬಾರಿಯೂ ಕಂಬನಿಯ ಮಾಲೆ!ಮಧುಚಂದ್ರವಿರದ ಮನ್ವಂತರದ ಬದುಕೇ!!… ದಿಗಂತವೆಂಬುದು ಅನಂತದಲ್ಲಿರುವಾಗ ಕಣ್ಣುಗಳಿಗೆಲ್ಲಿ ಅದನ್ನು ಸೆರೆಹಿಡಿಯುವ ಅವಕಾಶ?.. ಹಂಬಲಗಳ ಹಂಗಿನಲ್ಲಿ ಬದುಕು ಒಂದು ಹಂದರ ಅಲ್ಲವೇ? ನನ್ನ ಒಲುಮೆಯ ಬೃಂದಾವನದಿ ನೆನಪುಗಳೇ ಅವನ ರಾಯಭಾರಿ.. ಇತಿಹಾಸದಲ್ಲಿ ಮತ್ತೆ ಮತ್ತೆ ಕಾಡುವ,ಕೃಷ್ಣನ ತೋರುವ ಪ್ರೀತಿ ಕಣ್ಣಾಗಿ, ರಾಧೆಯಾಗಿಬಿಡಲೇ?ಪರಿತಾಪವೆಲ್ಲಾ ಈಗ ಪರಿಧ್ಯಾನವಾಗಿ ಅನುಭಾವವಾಗುತ್ತಿದೆಯಲ್ಲಾ.. ಸಾವಿನಾ ಸಂಚಿನೊಳಗೆಲ್ಲ ಸ್ವಚ್ಛಂದವಾಗಿ ವಿಹರಿಸಿಬಿಡಬೇಕಲ್ಲವೇ? ನನ್ನದೆನ್ನುವ ನೆರಳು ನನ್ನೊಂದಿಗೇ ಇದೆ.. ಸಾವೂ ಕೂಡಾ ಇದೆ;ಬೆನ್ತಟ್ಟುವ ಬೆರಳುಗಳಂತೆಯೇ! ಸಾವು,ನೆರಳು ಮತ್ತು ಪ್ರೀತಿಯ ವಿಶ್ಲೇಷಣೆಗಳಲ್ಲಿ ನಾನು ಸೋತುಹೋಗಿದ್ದೇನೆ..ಆದರೆ,ಹೆಣ್ತನದ ವಾತ್ಸಲ್ಯದ ಪರಿಧಿಯೊಳಗೆ ಏನೋ ಒಂಥರದ ಸಮಾಧಾನದ ಗೆಲುವನ್ನು ಹೊಂದಿದ್ದೇನಲ್ಲವೇ?ಮಾತೃತ್ವವೆಂಬುದು ಜೀವಕಾವ್ಯದಂತೆ.. ಸಾವಿರದ ಚರಿತ್ರೆಯಂತೆ..ನನಗೆ ಅದು ದೊರೆತಾಯಿತು! ನಾನು ತಾಯಿಯಾದೆ..!ಮಾತೃತ್ವದ ಜೀವಸೆಲೆಯ ಸನ್ನಿಧಿಯಲ್ಲಿ ವಾಸ್ತವದ ಪವಿತ್ರ ಸಂಗತಿಯಾದೆ.. ಭಣಗುಡುವ ನನ್ನೊಡಲ ಏಕಾಂತಕ್ಕೆ ಇನ್ನೇನೂ ಹೇಳಬೇಕಿಲ್ಲ!ಅದೀಗ ಭಣಗುಡುತ್ತಲೂ ಇಲ್ಲ,ಅದೀಗ ಏಕಾಂಗಿಯೂ ಅಲ್ಲ!! ಮೌನದೊಂದಿಗೆ ಮನದ ಸಂಧಾನವಾಗಿದೆ. ಶಬ್ದಗಳು ಹೇಳಲಾಗದ ಮಾತೃತ್ವದ ಜೀವನ ಸೌಂದರ್ಯವನ್ನು ಕೇವಲ ಪ್ರೀತಿಯ ಒಂದು ಸ್ಪರ್ಶ ನೀಡಿದೆಯಲ್ಲವೇ?ಮಳೆ ಹನಿಸುತ್ತಲೇ ಇದೆ ಅಲ್ಲವೇ?ಹೀಗೇ ಇರಲಿ.. ಮನಸ್ಸಿಗೆ,ದೇಹಕ್ಕೆ ತಂಪು ಕೊಡುವ ಈ ಹನಿಗಳ ಬಳಗದ ಚಳುವಳಿಯ ಸೊಗಡು ಸೊಬಗಲ್ಲವೇ?.. ಚಂದಮಾಮ ನಿನ್ನ ಬೆಳಗು.. ನೀರ ಗಾಜಿನ ಲೋಕದೊಳಗು!!.. ಅಂದುಕೊಳ್ಳುತ್ತಿದ್ದಾಳೆ. ಮರಳಲ್ಲಿ ನಡೆಯಬೇಕೆಂದರೆ ಕಾಲೆಳೆಯುತ್ತ ಸಾಗಬಾರದು.. ಕಾಲನ್ನು ಎತ್ತಿಹಾಕುತ್ತಾ ಹೋಗಬೇಕು..ಅಂದಾಗ ಮಾತ್ರ ದಿಟ್ಟ,ಸ್ಪಷ್ಟ ಹೆಜ್ಜೆ ಮೂಡಲು ಸಾಧ್ಯ.. ಕುಳಿತ ಕಲ್ಲಿನಿಂದ ಕೆಳಗಿಳಿದು ಬಂದಳು.ಸಮುದ್ರದಲೆಗಳು ತೀರ ತಾಕುವ ಜಾಗಕ್ಕಿಂತ ಸ್ವಲ್ಪ ದೂರದಲ್ಲಿ ಬಂದು ನಿಂತಳು.. ಚಂದಮಾಮನನ್ನು ನೋಡಿದಳು..ಹಾಗೇ ಸಮುದ್ರವನ್ನು ನೋಡಿದಳು..ಮಂದಸ್ಮಿತಳಾದಳು.. ಕಡಲಿಗೆ ಹೇಳಿದಳು.. ನೋಡು ನೋಡು,ಸಾಲು ಸಾಲು!ಕಾದು ಕುಳಿತಿವೆ ಪ್ರಸವಕ್ಕೆ ಭಾವ ಹಣತೆಗಳು..ಇದು ನನ್ನೊಬ್ಬಳ ಕತೆಯಲ್ಲ, ಎಲ್ಲರ ಕತೆ!.. ಎನ್ನುತ್ತಾ ಅಲ್ಲೇ ಮಳಲ ಮೇಲೆ ಕುಳಿತಳು..ಆ ಇಬ್ಬರು ಪುಟ್ಟ ಮಕ್ಕಳು ಮಾಡಿದ್ದ ಗೊಂಬೆಯ ಅವಶೇಷದ ಸುಳಿವು ದೊರಕುತ್ತಿತ್ತು. ಈಕೆ ಮಳಲನ್ನು ಒಟ್ಟುಗೂಡಿಸತೊಡಗಿದಳು..ಈಗ ಅವಳ ಅಂತರಂಗದಲ್ಲಿ ಬೆಳಕಿತ್ತು..ಹೊಸ ಭರವಸೆಯ ಹೊಳಹಿತ್ತು..ಮಳಲಿನ ಮನೆಯನ್ನು ಕಟ್ಟುತ್ತಾ ಹೇಳತೊಡಗಿದಳು… ನನ್ನ ಕಡಲು ಈಗ ಅಗಾಧವಾಗಿದೆ, ಪ್ರಶಾಂತವಾಗಿದೆ..ಅದರ ಕಿನಾರೆಯ ತುಂಬೆಲ್ಲ ಹರಡಿದ್ದ ನೆನಪ ಮಳಲ ಮೇಲೆ ಇದ್ದ ಪ್ರೀತಿ,ಸಾವು ಮತ್ತು ನೆಳಲಿನ ಹೆಜ್ಜೆಗುರುತುಗಳು ಮುಗಿಲ ಕಂಬನಿಯಿಂದ ಮತ್ತಷ್ಟು ಸ್ಪಷ್ಟವಾಗಿವೆ.. ಸ್ಥಿರವಾಗಿವೆ.. ಅಳಿಸಿಹೋಗಬೇಕಾದವು ಅರಳಿನಿಂತಿವೆ..!! ಸಾಧನೆಯ ಬೀದಿಗೆ ಅವೇ ನನಗೆ ದಾರಿಯಾಗಿವೆ.. ಕಡಲೇ.. ಕಲ್ಪನೆಗೂ,ವಾಸ್ತವಕ್ಕೂ ಎಲ್ಲಿಯ ಹೋಲಿಕೆ?…ಕನಸೆಂಬುದು ಎಂದೂ ಗಾಜಿನಾ ಬಾಲಿಕೆ.. ಅರ್ಥವಾಗುತ್ತದೋ ಇಲ್ಲವೋ ಅದೆಲ್ಲ ‘ಅವನಿಗೆ’.. ಆದರೂ ನಿನ್ನೆಗೆ ನಾಳೆಗೆ ಒಲವಿನ ಬೆಸುಗೆ!ಕಳೆದ ಕ್ಷಣಗಳ,ಬೆಸೆದ ಮನಗಳ ನೆನಪುಗಳ ಮಹಲು.. ಕನವರಿಸಿ ಕನಿಕರಿಸಿ ಕುಳಿತಿಹವು ಈಗ ಕನಸುಗಳು… ನನ್ನ ಮನದ ತುಂಬ ತುಂಬ ನೆನಪುಗಳ ರಾಯಭಾರ… ಬರೆದು ಬಿಡಿ ಭಾವಗಳೇ,ನನ್ನೆದೆಯ ಮಳಲ ಮೇಲೆ ಚೂರು ಹಸ್ತಾಕ್ಷರ…!!!….

Facebook ಕಾಮೆಂಟ್ಸ್

ಲೇಖಕರ ಕುರಿತು

ಶ್ರೀ ತಲಗೇರಿ

ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸ,ಆಗಾಗ ಲೇಖನಿ,ಕುಂಚಗಳ ಸಹವಾಸ..ಬದುಕಿನ ಬಣ್ಣಗಳಲ್ಲಿ ಪ್ರೀತಿಯ ಚಿತ್ರ ಬಿಡಿಸಿ ಖುಷಿಪಡುತ್ತ,ಶಬ್ದಗಳಿಗೆ ಜೀವ ಕೊಡುವ ಪ್ರಯತ್ನದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿರುವ ಕನಸು ಕಂಗಳ ಹುಡುಗ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!