ಕಥೆ

ಶಾಸ್ತ್ರೋಕ್ತ – ೧

ಈ ಮಳೆಗೂ ನಾನು ಹೊರಡುವ ಸಮಯಕ್ಕೂ ಏನೋಅವಿನಾಭಾವ ಸಂಬಂಧವಂತೂ ಖಂಡಿತ ಇದೆ. ಶಾಲೆಗೆ  ಹೋಗುವಸಮಯದಿಂದ ಹಿಡಿದು ಇಂದಿನ ತನಕವೂ ಅದು ತಪ್ಪಿಲ್ಲ.ಮಳೆಗಾಲದಲ್ಲಿ ಇಡೀ ದಿನ ಬಿಸಿಲಿದ್ದರೂ ಶಾಲೆ ಬಿಟ್ಟು ಮನೆಗೆಹೋಗುವ ಸಮಯಕ್ಕೆ ಸರಿಯಾಗಿ ಜಡಿ ಮಳೆ ತಪ್ಪಿಲ್ಲದೇ ಹಾಜರು.ಉದ್ದನೆಯ ನಿಲುವಂಗಿ ತರದ, ಮೇಲೊಂದು ಟೊಪ್ಪಿಸಿಕ್ಕಿಸಿಕೊಂಡಿರುವ ಬಣ್ಣದ ರೈನ್ ಕೋಟ್ ಹಾಕಿಕೊಂಡುಶಾಲೆಯಿಂದ ಹೊರಟರೆ ಮನೆಗೆ ತಲುಪುವಾಗ ಮಳೆಯ ರಭಸಕ್ಕೆಮುಖ ಮಾತ್ರ ಒದ್ದೆಯಾಗಿ ಬಾಯಿಯ ಒಳಗೆ ಹನಿ ಹನಿ ಉಪ್ಪುನೀರಿನ ರುಚಿ. ಉಪ್ಪು ರುಚಿಗೆ ಕಾರಣ ಮೂಗಿನಿಂದ ಸುರಿದ ನೀರೋಅಥವಾ ಮಳೆಗೆ ತೊಯ್ದ ಮುಖದಲ್ಲಿದ್ದ ಬೆವರು ಕಾರಣವೋಇಂದಿಗೂ ತಿಳಿದಿಲ್ಲ. ಇನ್ನು ಕಾಲೇಜ್ ಸಮಯದಲ್ಲಿ ಕೊಡೆಹಿಡಿದುಕೊಂಡು ಸೈಕಲ್ ಹತ್ತಿ ಮನೆ ಹೊರಟರೆ, ತಲುಪುವಸಮಯದಲ್ಲಿ ಕುತ್ತಿಗೆಯ ಕೆಳಗಿನ ಎಲ್ಲ ಭಾಗಗಳು ಓದ್ದೆಯೇ. ಈಗಕೆಲಸಕ್ಕೆ ಸೇರಿದ ಮೇಲೆ ಸೈಕಲ್ ಜಾಗಕ್ಕೆ ಬೈಕ್ ಬಂದಿದೆ, ಕೊಡೆಯಜಾಗಕ್ಕೆ ಹೆಲ್ಮೆಟ್ ಬಂದಿದೆ ಅಷ್ಟೇ. ಮಳೆ ತನ್ನ ಸಮಯವನ್ನು,ಕಿಲಾಡಿತನವನ್ನು ಎಂದೂ ಬಿಟ್ಟುಕೊಟ್ಟಿಲ್ಲ.

ಬೆಂಗಳೂರಿನ ಅತೀ ಚಟುವಟಿಕೆಯ ಪ್ರಯಾಸದ ಜೀವನದಿಂದ ಸ್ವಲ್ಪದಿನ ವಿಶ್ರಾಮ ತಗೊಳ್ಳುವ ಆಲೋಚನೆಯಿಂದ ೧ ವಾರದ ಉದ್ದದರಜೆ ಹಾಕಿ ಊರಿಗೆ ಬಂದರೆ ಸರಿಯಾಗಿ ಇಲ್ಲಿ ಕೂಡ ಕುಂಭ ದ್ರೋಣಮಳೆ. ಬೇಕಾದ ಕೆಲವು ದಿನಸಿ ಸಾಮಾನು ತರಲು ಸಂಜೆ ಅಪ್ಪನಬೈಕನ್ನೇರಿ ಮನೆ ಬಿಟ್ಟವನಿಗೆ ಪೇಟೆಯಲ್ಲಿ ಹಳೆಯ ಗೆಳೆಯ ಸಿಕ್ಕಿಹರಟುತ್ತ ಹರಟುತ್ತ ಸಮಯ ನೋಡಲು ಆಗಲೇ ರಾತ್ರಿ ೮ ಗಂಟೆ.ಮೊಬೈಲ್ ಫೋನ್ ಕೂಡ ಮನೆಯಲ್ಲೇ ಬಿಟ್ಟು ಬಂದಿದ್ದೇನೆ. ಅಮ್ಮಅಪ್ಪನ ಆತಂಕ ತಾರಕಕ್ಕೆ ಏರಿರುತ್ತದೆ ಈಗಾಗಲೇ ಎಂದುಯೋಚಿಸುತ್ತ, ಬೈಕಿನ ಮೇಲೆ ಕುಳಿತುಕೊಳ್ಳಲು ಸರಿಯಾಗಿ,ಮೇಲಿಂದ ಯಾರೋ ಬಕೆಟ್ಟಿನಲ್ಲಿ ನೀರು ಸುರಿದಂತೆ ಧೋ ಎಂದುಮತ್ತೆ ಮಳೆ ಶುರು. ಗೊತ್ತಿದ್ದ ಹಳೇ ಬೈಗುಳಗಳನ್ನೆಲ್ಲ ಮಳೆಯ ಮೇಲೆಪ್ರಯೋಗಿಸಿ ಹಾಗಾದರೂ ಮಳೆ ನಿಂತಿತೇ ಎಂದು ನಿರೀಕ್ಷಿಸುತ್ತಾಮತ್ತರ್ಧ ಗಂಟೆ ಹಾಗೇ ಕಳೆದು ಹೋಯಿತು. ಮಳೆಯ ಅಬ್ಬರ ಸ್ವಲ್ಪಕಡಿಮೆಯಾಗುತ್ತಿದ್ದ ಹಾಗೆ ಇನ್ನು ಕಾದು ಪ್ರಯೋಜನವಿಲ್ಲವೆಂದುಅಲ್ಲೇ ಶ್ಯಾಮಣ್ಣನ ಬಸ್ ಸ್ಟಾಂಡ್ ಅಂಗಡಿಯಿಂದ ಒಂದು ಪ್ಲಾಸ್ಟಿಕ್ಕವರ್ ತಲೆಗೆ ಸಿಕ್ಕಿಸಿಕೊಂಡು ಹೊರಟೇ ಬಿಟ್ಟೆ.

ಪೇಟೆ ದಾಟುವ ತನಕ ಬೀದಿ ದೀಪ, ದಾಟಿದ ನಂತರ ಎದುರು ಬರುವವಾಹನಗಳ ಬೆಳಕು ಅಷ್ಟಿಷ್ಟು ಧೈರ್ಯ ತುಂಬಿದರೂ ಬೆಳ್ಯಾಡಿಯಕಡೆಗೆ ಮುಖ್ಯ ರಸ್ತೆಯಿಂದ ಬಲಕ್ಕೆ ತಿರುಗಿದ ನಂತರದ ದಾರಿ ನಿಜಕ್ಕೂಭಯ ಹುಟ್ಟಿಸ ತೊಡಗಿತು. ಜಿಟಿ ಪಿಟಿ ಮಳೆ, ಬೈಕಿನ ಹೆಡ್ ಲೈಟಿನ ೫ಅಡಿಯ ತನಕ ಚಾಚಿದ ಬೆಳಕು ಬಿಟ್ಟರೆ ನೀರವ ಕತ್ತಲೆ. ಮನುಷ್ಯಪ್ರಾಣಿಯ ಸುಳಿವೇ ಇಲ್ಲ. ದೂರದಲ್ಲೆಲ್ಲೋ ನಾಯಿ ಬೊಗಳುವಸದ್ದು. ವೇಗವಾಗಿ ಓಡಿಸೋಣವೆಂದರೆ ರಸ್ತೆಯಲ್ಲಿರುವ ಹೊಂಡಗಳುಪೂರ್ತಿ ಅಪರಿಚಿತವಾಗಿ ಬಿಟ್ಟಿವೆ ಊರು ಬಿಟ್ಟ ಈ ವರ್ಷಗಳಲ್ಲಿ. ಈಥರದ ಭಯ ನನಗೇನು ಹೊಸತಲ್ಲ. ಚಿಕ್ಕಂದಿನಲ್ಲಿ ಮನೆಯ ಒಂದುಕೋಣೆಯಿಂದ ಇನ್ನೊಂದು ಕೋಣೆಗೆ ಹೋಗಲು ಕೂಡ ಯಾರಾದರುಜನ ಜೊತೆಗೆ ಬೇಕಿತ್ತು ನನಗೆ. ಬೆಳೆಯುತ್ತಾ ಬಂದಂತೆ ಭಯನಿಧಾನಕ್ಕೆ ಮಾಯವಾಗಿ, ಕಾಲೇಜು ಸಮಯದಲ್ಲಿ ರಾತ್ರಿ ಊಟದನಂತರ ಹಾಸ್ಟೆಲ್ಲಿನ ಪಕ್ಕದ ಚರ್ಚ್ ಸ್ಮಶಾನದ ಹತ್ತಿರ ಗೆಳೆಯರ ಜೊತೆಹರಟುತ್ತಾ  ನಡೆದಾಡುವಷ್ಟರ ಮಟ್ಟಿಗೆ ಧೈರ್ಯ ಬೆಳೆದಿತ್ತು. ಇನ್ನುಬೆಂಗಳೂರಿನಲ್ಲಂತೂ ಪ್ರೇತಗಳೇ ಮನುಷ್ಯರಿಗೆ ಹೆದರಿಬದುಕಬೇಕಾದ ಪರಿಸ್ಥಿತಿ. ಹೀಗಾಗಿ ಈಗ ಮೂಡುತ್ತಿರುವ ಅಳುಕುಕೂಡಾ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿ ಒಂದುತೆರನಾದ ಮಜವನ್ನೇ ಕೊಡತೊಡಗಿತು.

ಆದರೆ ಹೀಗೆ ಮೂಡಿದ ಧೈರ್ಯ ಕ್ಷಣಮಾತ್ರದಲ್ಲಿ ಮಾಯವಾಗಿ ಎದೆಧಸಕ್ಕೆಂದಿದ್ದು ಸ್ವಲ್ಪವೇ ದೂರದಲ್ಲಿ ಮಳೆಯಲ್ಲಿ ನೆನೆಯುತ್ತ ನಿಂತಿದ್ದಬಿಳಿ ಪಂಚೆಯನ್ನು ಮೇಲೆ ಕಟ್ಟಿ, ಎದೆಯ ಮೇಲೊಂದು ಬಿಳಿ ಶಾಲುಧರಿಸಿಕೊಂಡು ನಿಂತಿದ್ದ ಹಣ್ಣು ಹಣ್ಣು ಮುದುಕನನ್ನು ನೋಡಿ. ಆತನಮುಖ ಕೂಡ ನೋಡುವ ಧೈರ್ಯ ಸಾಲದೇ, ಬೈಕಿನ ಕಿವಿಯನ್ನು ಇದ್ದಬಲವೆಲ್ಲ ಹಾಕಿ ಹಿಂಡಲು, ಕುರ್ರೋ ಎಂದು ಅದು ಮಾಡಿದ ಸದ್ದಿಗೆಹೆದರಿ ದೂರದಲ್ಲಿ ಬೊಗಳುತ್ತಿದ್ದ ನಾಯಿಗಳು ಕೂಡ ಸುಮ್ಮನಾಗಿ,ವಾತಾವರಣ ಮತ್ತಷ್ಟು ನೀರವವಾಗಿ, ಎದೆಯೊಳಗಿನ ಅಳುಕುಮತ್ತಷ್ಟು ಜಾಸ್ತಿಯಾಗಿ ಭಯದಿಂದ ಕೈ ನಡುಗ ತೊಡಗಿತು.ಯಾರಿರಬಹುದು ಆತ? ಕಾಡಿನ ದಾರಿಯ ಮಧ್ಯೆ ಆತ ಹೇಗೆ,ಎಲ್ಲಿಂದ ಬಂದ? ದೂರದಿಂದ ತೋರಿದ್ದ ಪ್ರಕಾರ ಆತ ಹೆಚ್ಚು ದೂರನಡೆಯಲಾಗದಂಥ ಮುದುಕ. ಯಾರದ್ದಾದರೂ ಪ್ರೇತವಿರಬಹುದೇ?ಕಾಡುದಾರಿಯ ತಿರುವಿನಲ್ಲಿ ಆತನ ಅಪಘಾತವಾಗಿ ಅತೃಪ್ತ ಆತ್ಮಅಲ್ಲೇ ಸುತ್ತಾಡುತ್ತಿರಬಹುದೇ? ತಾನು ಬೈಕ್ ನಿಲ್ಲಿಸಿದ್ದರೆ ತನ್ನ ರಕ್ತಹೀರಿ ಸಾಯಿಸುತ್ತಿದ್ದಿರಬಹುದೇ? ಆದರೆ ಆ ಆಕೃತಿ ತನ್ನ ಬೈಕಿನ ಕಡೆಬರುವ ಯಾವ ಪ್ರಯತ್ನ ಕೂಡ ಮಾಡಲಿಲ್ಲ. ಹೀಗೇಯೋಚಿಸುತ್ತಿರಲು, ಹೈಸ್ಕೂಲಿನ ಗೆಳೆಯ ಗಿರೀಶನ ಅಜ್ಜನ ಕಥೆನೆನಪಿಗೆ ಬಂತು. ಅಂದು ಕರ್ಕಾಟಕ ಅಮಾವಾಸ್ಯೆ. ಕರ್ಕಾಟಕಅಮಾವಾಸ್ಯೆಯ ದಿನ ಹಾಳೆ ಕೆತ್ತೆ ಎಂಬ ಮರದ ತೊಗಟೆಯನ್ನು ಜಜ್ಜಿಒಂದು ಬಗೆಯ ಕೆಟ್ಟ ಕಹಿ ಕಷಾಯ ಮಾಡಿ ಕುಡಿದರೆ ಆರೋಗ್ಯಕ್ಕೆಒಳ್ಳೆಯದು ಎಂಬ ಪ್ರತೀತಿ ಇದೆ. ಆದರೆ ಮರದ ತೊಗಟೆಯನ್ನುಸೂರ್ಯ ಮೂಡುವ ಮೊದಲೇ ಕೆತ್ತಿ ತರಬೇಕು. ಅದಕ್ಕೆಂದೇಗಿರೀಶನ ಅಜ್ಜ ಬೆಳಗ್ಗೆ ಕತ್ತಲು ಕತ್ತಲಿರುವಾಗಲೇ ಮನೆಯಿಂದ ಸ್ವಲ್ಪದೂರದ ಬಯಲಿನ ಇನ್ನೊಂದು ಕಡೆಯಲ್ಲಿರುವ ಹಾಳೆ ಕೆತ್ತೆ ಮರದಕಡೆ ಹೊರಟಿದ್ದರು. ಮರದ ಹತ್ತಿರ ಬಂದವರಿಗೆ ಮುಂಜಾವಿನಅಸ್ಪಷ್ಟ ಬೆಳಕಿನಲ್ಲಿ ತೋರಿದ್ದು ಮರದ ಕೆಳಗೆ ಉದ್ದಕ್ಕೆ ಕೂದಲುಬಿಟ್ಟುಕೊಂಡು ತಲೆ ಬಾಚಿಕೊಳ್ಳುತ್ತಿರುವ ಬಿಳಿಬಣ್ಣದ ಸೀರೆಯನ್ನುಟ್ಟಮಹಿಳೆ. ಕೂಡಲೇ ಅಜ್ಜನ ಮನಸ್ಸಿಗೆ ಹೊಳೆದದ್ದು ಉಮಲ್ತಿ ಭೂತದಚಿತ್ರ. ಉಮಲ್ತಿ ಭೂತ ಕೂಡ ಹೀಗೆ ಬಿಳಿ ಸೀರೆಯುಟ್ಟು, ಮಾರುದ್ದದಕೂದಲು ಬಿಟ್ಟು ಗಂಡಸರ ಮನಸ್ಸು ವಶೀಕರಣ ಮಾಡಿಕೊಂಡು ರಕ್ತಕಾರಿಸಿ ಕೊಲ್ಲುವುದರಲ್ಲಿ ಹೆಸರುವಾಸಿ. ಆ ಆಲೋಚನೆ ಅಜ್ಜನಮನಸ್ಸಿಗೆ ಬಂದದ್ದೇ ತಡ, ಬಿದ್ದೆನೋ ಎದ್ದೆನೋ ಎಂದು ಕೈಯಲ್ಲಿದ್ದಕತ್ತಿಯನ್ನು ಅಲ್ಲೇ ಬಿಸಾಡಿ ಮನೆಯ ಕಡೆ ಓಡತೊಡಗಿದರು. ಸ್ವಲ್ಪಮುಂದೆ ಓಡಿ ಹಿಂದಿರುಗಿ ನೋಡಿದವರಿಗೆ ತೋರಿದ್ದು ಆ ಬಿಳಿ ಸೀರೆಉಟ್ಟ ಮಹಿಳೆ ಕೂಡ ತನ್ನನ್ನು ಹಿಂಬಾಲಿಸಿ ಓಡಿಕೊಂಡುಬರುತ್ತಿರುವುದು. ಪ್ರಾಣವೇ ಬಾಯಿಗೆ ಬಂದಂತಾಗಿ ಅಜ್ಜ ಓಡಿ ಮನೆಸೇರಿ ಮಲಗಿದವರು, ಭಯದಿಂದ ಊಟ, ನೀರು ಬಿಟ್ಟು ೪ ನೇದಿನಕ್ಕೆ ಕೊನೆಯುಸಿರೆಳೆದರು. ಕಂಗಾಲಾದ ಮನೆಯವರು ಅಲ್ಲಿ ಇಲ್ಲಿವಿಚಾರಿಸಲು ತಿಳಿದದ್ದು ಅಂದು ತಲೆ ಬಾಚಿಕೊಳ್ಳುತ್ತಿದ್ದದ್ದು ಉಮಲ್ತಿಅಲ್ಲ, ಕೂಲಿ ಕೆಲಸ ಮಾಡುವ ಬಚ್ಚಿಯ ಮಗಳೆಂದು. ಅವಳ ಮನೆ ಆಮರದ ಪಕ್ಕದಲ್ಲೇ ಇದ್ದದ್ದು ಅಜ್ಜನಿಗೆ ಹೊಳೆದಿರಲಿಲ್ಲ. ಅಜ್ಜ ಬಿಸಾಡಿಹೋದ ಕತ್ತಿಯನ್ನು ಅವರಿಗೆ ಹಿಂದಿರುಗಿಸಲು ಆಕೆ ಅಜ್ಜನನ್ನುಹಿಂಬಾಲಿಸಿದ್ದದ್ದು. ಈ ಕಥೆ ಹೇಳುವಾಗ ಅಜ್ಜ ತೀರಿದ ೧೦ನೆಯದಿನಕ್ಕೂ ಗಿರೀಶ ಬಿದ್ದು ಬಿದ್ದು ನಕ್ಕಿದ್ದ. ಹೀಗೆ ನೆನಪಾದ ಈ ಘಟನೆ,ದಾರಿಯಲ್ಲಿ ತೋರಿದ ಮುದುಕ ಆಕೃತಿಯ ಮೇಲೆ ಕರುಣೆಮೂಡಿಸಿತು. ಪಾಪ ಮೊದಲೇ ನಡೆಯಲು ತ್ರಾಣವಿಲ್ಲದ ಇಳಿಜೀವ.ಈ ರಾತ್ರಿಯಲ್ಲಿ ಬೇರೆ ವಾಹನಗಳು ಸಂಚರಿಸುವ ಸಾಧ್ಯತೆ ಕೂಡಕಡಿಮೆಯೇ. ಬಿಡದೆ ಸುರಿಯುತ್ತಿರುವ ಮಳೆ ಬೇರೆ. ಇಂಥಸಂಧರ್ಭದಲ್ಲಿ ತಾನು ಸಹಾಯ ಮಾಡದಿದ್ದರೆ ಆ ಮುದಿಜೀವದಸಾವಿನ ಪಾಪ ತನಗೂ ತಟ್ಟದೇ ಬಿಡುವುದಿಲ್ಲವೆಂದು ಹಾಗೆಯೇಬೈಕನ್ನು ಹಿಂದಕ್ಕೆ ತಿರುಗಿಸಿ ಆ ವ್ಯಕ್ತಿ ನಿಂತಿದ್ದ ಜಾಗದ ಕಡೆಗೆ ಓಡಿಸಿದೆ.

ಸ್ವಲ್ಪ ದೂರ ಹೋದ ನಂತರ ಆ ವ್ಯಕ್ತಿ ಅದೇ ಜಾಗದಲ್ಲಿನಿರಾಸೆಯಿಂದ ಕುಳಿತು ಬಿಟ್ಟಂತೆ ತೋರಿತು. ಸ್ವಲ್ಪ ಅಳುಕಿನಿಂದಲೇಪಕ್ಕದಲ್ಲೇ ಬೈಕ್ ನಿಲ್ಲಿಸಿದೆ. ಕೂಡಲೇ ಆ ವ್ಯಕ್ತಿ ಎದ್ದು ನಿಂತರು.ಎಲ್ಲದಕ್ಕಿಂತ ಮೊದಲು ನಾನು ಗಮನಿಸಿದ್ದು ಆ ವ್ಯಕ್ತಿಯ ಪಾದವನ್ನು.ಚಿಕ್ಕಂದಿನಲ್ಲಿ ಎಲ್ಲರೂ ಹೇಳುತ್ತಾ ಇದ್ದದ್ದು ಸರಿಯಾಗಿ ನೆನಪಿತ್ತು,ಭೂತ, ಪ್ರೇತಗಳ ಕಾಲು ಹಿಂಬದಿ ತಿರುಗಿರುತ್ತವೆ ಎಂದು. ಆ ವ್ಯಕ್ತಿಯಪಾದ ಸರಿಯಾಗಿಯೇ ಇದ್ದದ್ದು ನೋಡಿ ಅರ್ಧ ಜೀವ ವಾಪಾಸುಬಂದಂತಾಯಿತು. ಈಗ ತಲೆಯೆತ್ತಿ ವ್ಯಕ್ತಿಯ ಮುಖ ಗಮನಿಸಲು,ನಿರೀಕ್ಷಿಸಿದಂತೆಯೇ ವಯೋವೃದ್ಧರೇ ಆಗಿದ್ದರು. ತಲೆಯ ಮೇಲೆ ಚಿಕ್ಕಜುಟ್ಟು, ಕಿರಿದಾದ ಹಣೆಯ ಮೇಲೆ ಉದ್ದನೆಯ ಕೆಂಪು ನಾಮ.ಸಾಮಾನ್ಯವಾಗಿ ವಯಸ್ಸಿನೊಂದಿಗೆ ಕೃಶವಾಗಿರುವ ದೇಹ. ಎದೆಯಮೇಲೆ ಇಡೀ ದೇಹವನ್ನು ಮುಚ್ಚುವಂತೆ ಹೊದ್ದ ಬಿಳಿ ಶಾಲಿನಿಂದಇಣುಕುತ್ತಿರುವ ಜನಿವಾರ. ಒಟ್ಟಾರೆ ೭೫ ರಿಂದ ೮೦ ರಆಸುಪಾಸಿನಲ್ಲಿರುವ ಪುರೋಹಿತ ಬ್ರಾಹ್ಮಣ ಎಂದು ನನ್ನ ಮನಸ್ಸುಆಗಲೇ ಲೆಕ್ಕಾಚಾರ ಹಾಕಿತು. ಬೈಕ್ ನಿಲ್ಲಿಸಿದ್ದನ್ನು ನೋಡಿ ಅವರಮುಖ ಪ್ರಸನ್ನವಾಗಿದ್ದು ಬೈಕಿನ ಹೆಡ್ ಲೈಟಿನ ಮಂದ ಬೆಳಕಿನಲ್ಲಿಸ್ಪಷ್ಟವಾಗಿ ಗೋಚರಿಸಿತು.

 ಮುಂದುವರಿರಿಯುವುದು….

-Thilakraj Somayaji

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!