ಆ ಸ್ಥಳದ ಹೆಸರು ನನಗೆ ಸರಿಯಾಗಿ ನೆನಪಿಲ್ಲ. ಮನದ ಮೂಲೆಯಲ್ಲೆಲ್ಲೋ ಅಲ್ಲಿ ನಡೆದ ಘಟನೆಗಳನ್ನು ನೋಡಿದ್ದೇನೆಂಬ ಭಾವ ಬಹುವಾಗಿ ಕಾಣುತ್ತದೆ. ನಮ್ಮ ಅನುಕೂಲಕ್ಕಾಗಿ ಗಿರಿಗೊಟ್ಣ ಎಂದು ಕರೆಯೋಣ. ನನ್ನ ಕಣ್ಣುಗಳು ನನಗೆ ಹೇಳಿದಂತೆ ವಿವರಿಸುತ್ತಾ ಹೋಗುತ್ತೇನೆ.
ನಡೆದದ್ದು , ನಡೆದಷ್ಟು.
ಇತಿಹಾಸ ಪೂರ್ವಕಾಲ:
ಬೆಂಕಿಯ ಸುತ್ತ ನೆರೆದಿದ್ದ ಎಲ್ಲರೂ ಬಹುಪಾಲು ನಗ್ನರಾಗಿದ್ದರು. ಗುಳಿಬಿದ್ದ ಮೊಗದವ ಮೊನಚಾದ ಕಲ್ಲಿನಿಂದ ಜಿಂಕೆಯ ಚರ್ಮವನ್ನು ಹರಿದಿದ್ದ. ಸಪೂರ ದೇಹಿಯೊಬ್ಬ ಬೆಂಕಿಯ ಆಚೀಚೆ ಹುಗಿದಿದ್ದ ಕಪರು ಗುಟ್ಟಕ್ಕೆ ದೊಣ್ಣೆಯನ್ನು ಸಿಕ್ಕಿಸಿದ್ದ. ಜಿಂಕೆ ಮಾಂಸಕ್ಕೆ ಜ್ವಾಲೆ ಹದವಾಗಿ ತಾಕುವಂತೆ ಜೋತು ಬಿಟ್ಟ. ಮಿಕ್ಕ ಹಲ ಸ್ತ್ರೀ ಪುರುಷರ ಕಣ್ಗಳಿಂದ ಹಸಿವು ಜೊಂಪೆ ಜೊಂಪೆಯಾಗಿ ಸುರಿಯುತ್ತಿತ್ತು. ಮಾಂಸ ಬೆಂದ ಕ್ಷಣ ತರುವಾಯ ಎಲ್ಲರ ಹೊಟ್ಟೆ ಸೇರಿತ್ತು. ಸಮೀಪದ ಗುಹೆ ಹೊಕ್ಕು ಒಬ್ಬರ ಪಕ್ಕ ಒಬ್ಬರು ಮಲಗಿದರು. ಆಗಾಗ ಸುರತ ಕ್ರಿಯೆಯ ಮುಲುಗಾಟ ಕೇಳಿಸುತ್ತಿತ್ತು.
ಕ್ರಿ. ಪೂ 300
ಹೌದು! ಅದೇ ಜಾಗ , ನನಗೆ ನಂಬಿಕೆಯೇ ಬರುತ್ತಿಲ್ಲ. ವಾಸ್ತುಶಾಸ್ತ್ರದ ಪ್ರಕಾರ ನಿರ್ಮಿತವಾದ ಭವ್ಯ ದೇಗುಲ ಗಿರಿಗೊಟ್ಣವೆಂಬ ಆ ಗ್ರಾಮದಲ್ಲಿ ತಲೆ ಎತ್ತಿದೆ. ದೇಶ ಪರ್ಯಟನೆಯಲ್ಲಿದ್ದ ಸಾಧಕರೊಬ್ಬರು ಇಷ್ಟ ದೈವದ ಪ್ರೇರಣೆ ಹೊಂದಿ ಪ್ರತಿಷ್ಠಾಪಿಸಿದರು. ಆ ರಾಜ್ಯದ ರಾಜನೂ ಪರಮ ಧಾರ್ಮಿಕನಾಗಿದ್ದರಿಂದ ದೇವಸ್ಥಾನ ಅಭಿವೃದ್ಧಿ ಹೊಂದತೊಡಗಿತು. ಅಲ್ಲದೇ ಸುತ್ತಲಿನ ಹತ್ತು ಹಳ್ಳಿಗಳನ್ನು ದತ್ತಿಯಾಗಿ ನೀಡಿದ. ಕ್ರಮೇಣ ಗಿರಿಗೊಟ್ಣ ದೇವರ ಶಕ್ತಿ ಭಕ್ತರಿಗೆ ಅರಿವಿಗೆ ಬರತೊಡಗಿತು. ಹರಕೆ ಹೊರುವವರ ಸಂಖ್ಯೆ ಅಧಿಕವಾಯಿತು. ದೇವ ಲೀಲೆಗಳು ಜನಪ್ರಿಯವಾಗತೊಡಗಿದವು. ಅಕ್ಕ ಪಕ್ಕದ ಸಂಸ್ಥಾನಗಳ ಭಕ್ತಾದಿಗಳೂ ಇತ್ತ ಮುಖ ಮಾಡತೊಡಗಿದರು. ತೀರ್ಥಯಾತ್ರಿಗಳ ಪಟ್ಟಿಯಲ್ಲಿ ಗಿರಿಗೊಟ್ಣದ ಹೆಸರು ಭದ್ರವಾಯಿತು. ದೇವಾಲಯಕ್ಕೆ ಸಂಪತ್ತು ಎಲ್ಲೆಡೆಯಿಂದ ಹರಿದುಬರತೊಡಗಿತು.
ಕ್ರಿ.ಷ 1015
ಗಿರಿಗೊಟ್ಣದ ದೇಗುಲದಲ್ಲಿ ಗರ್ಭಗುಡಿಯೊಂದನ್ನು ಹೊರತುಪಡಿಸಿ ಮುರುಕು ಮಂಟಪವೊಂದೇ ಅಸ್ತಿತ್ವದಲ್ಲಿದೆ. ಪೂಜಾ ಕೈಂಕರ್ಯಗಳು ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ನೆರೆ ರಾಜ್ಯದ ಪ್ರಸಿದ್ಧ ದೇವಾಲಯದಂತೆ ಈ ದೇವಾಲಯವೂ ಪರಕೀಯರ ಧಾಳಿಗೆ ತುತ್ತಾಯಿತು. ಧಾರ್ಮಿಕ ನಾಯಕರು ಒಂದುಗೂಡಿ ಹೊಸ ಮೂರ್ತಿಯನ್ನು ಪೃತಿಷ್ಠಾಪಿಸಿದರು. ಆದರೆ ವೈಭವೋಪೇತ ಗತವೈಭವ ನೆನಪಾಗಿಯೇ ಉಳಿಯಿತು.
ಕ್ರಿ.ಷ 1990
ಧಾಳಿಯಿಂದ ಶಿಥಿಲಾವಸ್ಥೆಗೆ ತಿರುಗಿದ್ದ ದೇವಾಲಯದ ಚರಿತ್ರೆಯನ್ನು ಆಸ್ತಿಕ ಇತಿಹಾಸಕಾರರೋರ್ವರು ಕಡತ ಜಾಲಾಡಿ ಹೊರ ತೆಗೆದರು. ಹಿಂದೊಮ್ಮೆ ದೇಗುಲ ಉಚ್ಛ್ರಾಯ ಸ್ಥಿತಿಯಲ್ಲಿತ್ತೆಂದು ವಿವರಿಸಿದರು. ತಾತನ ಕಾಲದಿಂದ ಗಿರಿಗೊಟ್ಣದ ದೇವರು ತಮ್ಮ ಮನೆ ದೇವರಾಗಿದ್ದರೆಂಬ ಸುಪ್ತ ಪ್ರಜ್ಞೆ ಕೆಲವರಿಗೆ ಜಾಗೃತವಾಯಿತು. ಅವರೆಲ್ಲ ಒಟ್ಟುಗೂಡಿ ರಚಿಸಿದ ಗಿರಿಗೊಟ್ಣ ದೇವರ ಅಭಿವೃದ್ಧಿ ಟ್ರಸ್ಟ್ ಮರುದಿನ ಮುಂಜಾನೆಯೇ ನೊಂದಣಿ ಹೊಂದಿತು. ಸ್ಥಳೀಯ ಶಾಸಕರ ಸಹಾಯದಿಂದ ವರ್ಷದ ಬಜೆಟ್ನ ಧಾರ್ಮಿಕ ಅಭಿವೃದ್ಧಿ ಫಂಡ್ನಿಂದ ಕೋಟಿ ರೂಪಾಯಿಗಳ ಅನುದಾನ ಮಂಜೂರಿಯಾಯಿತು. ವಿದೇಶದಲ್ಲಿ ವ್ಯಾಸಂಗ ಮಾಡಿದ ಇಂಜಿನಿಯರನನ್ನು ಕರೆಸಿ ಪಾಳು ದೇಗುಲವನ್ನು ಧ್ವಂಸಿಸಿ ಹೊಸ ದೇವಸ್ಥಾನ ಕಟ್ಟುವ ಯೋಜನೆ ರೂಪಿಸಲಾಯಿತು. ಗ್ರಾನೈಟ್ , ಮಾರ್ಬಲ್ಗಳಿಂದ ವಿಜೃಂಭಿತವಾದ ದೇಗುಲವನ್ನು ಕಟ್ಟುವ ತೀರ್ಮಾನ ಬಹುಮತ ಪಡೆಯಿತು. ಮುಚ್ಚಿದ ಕಣ್ಣು ತೆರೆದಂತೆ ಭೃಹತ್ ದೇಗುಲ ತಲೆಎತ್ತಿತ್ತು. ಪ್ರಖ್ಯಾತ ಟಿವಿ ಜ್ಯೋತಿಷಿಗಳ ಮುಂದಾಳತ್ವದಲ್ಲಿ ಧಾಮಿಕ ಕಾರ್ಯಗಳನ್ನೂ ನೆರವೇರಿಸಲಾಯಿತು. ವಾತಾವರಣ ಸದಾ ಕೂಲ್ ಇರುವಂತೆ ಮಾಡಲು ಏ.ಸಿಯನ್ನು ಅಳವಡಿಸಲಾಯಿತು. ದೇವರನ್ನು ಕಾಯಲು ಆಧುನಿಕ ಭದ್ರತಾ ವ್ಯವಸ್ಥೆಗಳನ್ನೂ, ಸೆಕ್ಯುರುಟಿ ಗಾರ್ಡಗಳನ್ನೂ ನೇಮಿಸಲಾಯಿತು. ಸುತ್ತಲೂ ಬಣ ಬಣ್ಣ್ಣದ ಕಾರಂಜಿಗಳು ಚಿಮ್ಮತೊಡಗಿದವು. ದೇಗುಲ ಮುಖ್ಯವಾಹಿನಿಗೆ ಬಂದಂತೆ ದೇಶದ ಮೂಲೆಮೂಲೆಗಳಿಂದ ಭಕ್ತರ ದಂಡು ಪ್ರವಾಹೋಪಾದಿಯಲ್ಲಿ ಭೋರ್ಗರೆಯತೊಡಗಿತು.
ಕ್ರಿ.ಷ 2014
ತಮ್ಮ ಚಪ್ಪಲಿಗಳ ಹುಡುಕಾಟದಲ್ಲಿದ್ದ ಭಕ್ತಾದಿಗಳು ಧ್ವನಿವರ್ಧಕದ ಶಬ್ಧ ಕೇಳಿ ತಲೆ ಎತ್ತಿ ನೋಡಿದರು. ದೇವರು ಅಲ್ಲಲ್ಲಿ ಬೃಹತ್ ಎಲ್.ಸಿ.ಡಿ ಪರದೆಗಳಲ್ಲಿ ಪ್ರತ್ಯಕ್ಷನಾಗಿದ್ದ. ಆನ್ಲೈನ್ನಲ್ಲಿ ಹೆಚ್ಚಿನ ಹಣ ಪಾವತಿಸಿ ವಿಶೇಷ ದರ್ಶನಕ್ಕೆ ಮುಂಗಡ ಬುಕಿಂಗ್ ಮಾಡಿಸಿದ್ದ ಕೆಲವರು ದರ್ಶನಕ್ಕೆ ಲೇಟಾಯಿತೆಂದು ಗೊಣಗುತ್ತಿರುವುದು ಕೇಳಿಸುತ್ತಿದೆ. ಪ್ರವೇಶ ದ್ವಾರದ ಪಕ್ಕದಲ್ಲಿ ಉಡುಪಿ ಹೊಟೆಲ್ ಮೆನುವಿನ ತದ್ರೂಪಿಯಂಥದ್ದೊಂದನ್ನು ಪ್ರಕಟಿಸಲಾಗಿದೆ. ಅದರಲ್ಲಿ ಇಂತಿಷ್ಟು ಡಾಲರ್ ನೀಡಿದರೆ ಇಂತಹ ಸೇವೆ ಲಭ್ಯವಿದೆಯೆಂದು ನಮೂದಿಸಲಾಗಿದೆ. ಅಲ್ಲಲ್ಲಿ ಬೃಹತ್ ಕಾಣಿಕೆ ಹುಂಡಿಗಳನ್ನು ಸ್ಥಾಪಿಸಲಾಗಿದೆ. ಅನ್ನದಾಸೋಹಕ್ಕಾಗಿ ಜನ ಉದ್ದನೆಯ ಸಾಲುಗಟ್ಟಿದ್ದರು. ವಾರದ ಹಿಂದಷ್ಟೇ ವಿದೇಶಿ ಭಕ್ತರೊಬ್ಬರು ದೇಣಿಗೆಯಿತ್ತ ಕಿವಿ ಗಡಚಿಕ್ಕುವ ಯಾಂತ್ರಿಕ ಇಲೆಕ್ಟ್ರಿಕ್ ಜಾಗಟೆಯನ್ನು ಗರ್ಭಗುಡಿಯಲ್ಲಿಯೇ ಇರಿಸಲಾಗಿದೆ. ಅಂದಿನಿಂದ ಅರ್ಚಕರು ಕಿವಿಯಲ್ಲಿ ಹತ್ತಿ ಉಂಡೆಗಳನ್ನು ಇರಿಸಿಕೊಂಡು ಪೂಜಿಸುವುದನ್ನು ದೇವರೂ ನೋಡಿಲ್ಲ.
ದಿನ ಕಳೆದಂತೆ ಯಾಂತ್ರೀಕೃತ ಜಾಗಟೆಗಳ ಮಿತಿಮೀರಿದ ಕೇಕೆ ದೇವರ ಕರ್ಣಪಟಲವನ್ನು ಛಿದ್ರಗೊಳಿಸತೊಡಗಿತು. ಹಿಂದೆ ಭಕ್ತ ಮಹಾಶಯರು ಸಿಡಿಲಬ್ಬರದಿಂದ ಘಂಟಾ ನಿನಾದಗೈದರೂ ಅಲ್ಲೊಂದು ಇಂಪು ಇಣುಕುತ್ತಿತ್ತು. ಭಕ್ತಿ ಶಬ್ಧವಾಗಿ ಪ್ರವಹಿಸಿ ದೇವರ ಕಿವಿ ತಲುಪುತ್ತಿತ್ತು. ತಿಂಗಳು ಕಳೆಯುವಷ್ಟರಲ್ಲಿ ದೇವರು ಕಿವುಡಾಗತೊಡಗಿದ. ಅರ್ಚಕರ ಮಂತ್ರವೂ, ಭಕ್ತರ ಬೇಡಿಕೆಗಳೂ ದೇವರಿಗೆ ಕೇಳದಾಯಿತು.
ಕ್ರಿ.ಷ 2050
ದೇವರು ಈಗ ಯಾವ ಇಷ್ಟಾರ್ಥಗಳನ್ನೂ ಈಡೇರಿಸುತ್ತಿಲ್ಲ. ಭಕ್ತರ ಕೋರಿಕೆಗಳು ಕಿವಿಯನ್ನೇ ತಲುಪುತ್ತಿಲ್ಲ. ಇಲೆಕ್ಟ್ರಿಕ್ ಜಾಗಟೆಯ ಹಾವಳಿಯಲ್ಲಿ ಆತ ಸಂಪೂರ್ಣ ಕಿವುಡಾಗಿದ್ದಾನೆ. ಅರ್ಚಕನ ಸ್ಥಾನವನ್ನು ರೋಬೋಟ್ (ಮೇಡ್ ಇನ್ಪ ಜಪಾನ್) ಅತಿಕ್ರಮಿಸಿದೆ. ವರ್ಷಗಳ ಹಿಂದೆಯೇ ಅವನನ್ನು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕಾರ್ಯಾಗಾರಕ್ಕೆ ಕಳಿಸಲಾಗಿದೆ.ದೇವರ ಮಾನಸಿಕ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಭೇದಿಸಲು ಸಾದ್ಯವಾಗಿಲ್ಲ. ಆಗಾಗ ನರಳುತ್ತಾನೆ. ಇಲೆಕ್ಟ್ರಿಕ್ ಜಾಗಟೆಯ ಗೌಜಿನಲ್ಲಿ ಆತನ ನರಳುವಿಕೆ ಕಾಣೆಯಾಗಿದೆ.
ಅದೊಂದು ಅಮವಾಸ್ಯೆಯ ದಿನ, ದೇವರ ಕೋಪ ನೆತ್ತಿಗೇರಿತು. ಆದರೂ ಅಸಹಾಯಕನಾದ. ಉಳಿದುದೊಂದೇ ದಾರಿ ಎನಿಸಿತು. ಪೃಕೃತಿಯ ಬಳಿ ಮೊರೆಯಿಟ್ಟ. ಮರುಕ್ಷಣವೇ ಭೀಕರ ಸಿಡಿಲು ಅಪ್ಪಳಿಸಿತು. ಎಲ್ಲ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದ ಆಡಳಿತ ಮಂಡಳಿಯವರು ಸಿಡಿಲು ನಿರೋಧಕವನ್ನು ಅಳವಡಿಸಲು ಮರೆತಿದ್ದು ಕಾಕತಾಳೀಯವೋ , ವಿಧಿ ಲಿಖಿತವೋ ನಾನರಿಯೆ. ಮಳೆಯೂ ಧೋಗುಡತೊಡಗಿತು. ಇಲೆಕ್ರ್ಟಿಕ್ ಜಾಗಟೆಯೂ ಸೇರಿದಂತೆ ಎಲ್ಲ ಅತ್ಯಾಧುನಿಕ ಉಪಕರಣಗಳು ಒಮ್ಮೆಗೇ ನಿಂತುಹೋದವು. ಜನ ಸಮೂಹ ಸನ್ನಿಗೊಳಗಾದರು. ದೇಗುಲದಿಂದ ಹೊರಹೋಗಲು ಮುಗಿಬಿದ್ದರು. ಕಾಲ್ತುಳಿತ ಏರ್ಪಟ್ಟಿತು. ಈ ಪರಿಸ್ಥಿತಿಯಲ್ಲಿಯೇ ಪಾರಾಗಲು ದೇವರು ಆಲೋಚಿಸಿದ. ಅಗಾಧ ಭಕ್ತವೃಂದದ ಮಧ್ಯೆ ನುಸುಳಿ ಓಡಲು ಸಾಧ್ಯವಾಗಲಿಲ್ಲ. ಕಾಲ್ತುಳಿತಕ್ಕೆ ಸಿಲುಕಿ ಅಸುನೀಗಿದ.
( ಈ ಕಥೆ ಕಾಲ್ಪನಿಕ. ಯಾವ ಧರ್ಮದ ಭಾವನೆಗಳನ್ನೂ ಘಾಸಿಗೊಳಿಸುವ ದುರುದ್ದೇಶದಿಂದ ಈ ಕಥೆಯನ್ನು ರಚಿಸಲಾಗಿಲ್ಲ. ಇಲ್ಲಿ ಖಚಿತ ಕಾಲಮಾನ ಬಳಸಿಲ್ಲ. ಸರಿ ಸುಮಾರು ಅಂದಾಜಷ್ಟೇ)
ಗುರುಗಣೇಶ ಡಬ್ಗುಳಿ ,ಯಲ್ಲಾಪುರ