ಕಥೆ

ಬಿಳಿ ಹಾಳೆಗಳ ಮದುವೆ

ನಾನು ಟೈಪಿಸುತ್ತಿದ್ದೇನೋ ಇಲ್ಲವೋ . ಕುಳಿತ  ಖುರ್ಚಿಯ ಮೇಲೆಯೇ ನಿದ್ದೆ  ಬಂದಿರಬಹುದು. ನಿದ್ದೆ ಬರದಿದ್ದರೆ ಖಂಡಿತ ಅರ್ಧ ತೆರೆದ ಕಿಟಕಿಯತ್ತ ನೋಡುತ್ತಿದ್ದೇನೆ. ಅ ಕಿಟಕಿಯಿಂದೇನು ಗಾಳಿ ಬೀಸುವುದಿಲ್ಲ. ಆದರೂ ಅದನ್ನು ತೆರೆದೇ ಇಡುತ್ತೇನೆ. ದಿನದ ಬಹುಪಾಲು ನಾನು ಈ ಉಪ್ಪರಿಗೆ ಕೋಣೆಯಲ್ಲೆ ಕುಳಿತಿರುತ್ತೇನೆ. ಮಲಗಿರುತ್ತೇನೆ ಇಲ್ಲದಿದ್ದರೆ ಇತ್ತೀಚಿಗೆ ಮುದ್ದೆಯಾದ ಬಿಳಿ ಹಾಳೆಗಳನ್ನು ಎದುರಿಗಿಟ್ಟುಕೊಂಡು ಅದರಲ್ಲಿ ಬರೆದಿದ್ದ ಕಪ್ಪು  ಅಕ್ಷರಗಳನ್ನು ಟೈಪಿಸುತ್ತೇನೆ. ಬಿಳಿ ಹಾಳೆಗಳೇನು ಕಮ್ಮಿಯಿಲ್ಲ. ಗೋಡೆ ಕಪಾಟಿನ ಮೊದಲೆರಡು ಖಾನೆಗಳಲ್ಲಿ ಭರ್ತಿಯಾದಂತೆ ಕಾಣುತ್ತವೆ. ಅದರಲ್ಲಿ ಬರೆದಿರುವ ಅಕ್ಷರಗಳೆಲ್ಲ ನನ್ನದೇ, ಅಲ್ಲಲ್ಲ ನಾನು ಬರೆದುದೇ ಇರಬೇಕು. ಶತಮಾನಗಳಿಂದ ಬರೆಸಿಕೊಳ್ಳುತ್ತಿರುವ ಈ ಅಕ್ಷರಗಳನ್ನು ; ಹುಟ್ಟಿ ನಾಕು ಸೋಮವಾರವಾಗದ ನಾನು ಹೇಗೆ ನನ್ನದೆಂದು ಹೇಳಲಿ? ನಾನೇನು ಆ ಹಾಳೆಗಳನ್ನು ಒಪ್ಪವಾಗಿ ಜೋಡಿಸಿಟ್ಟಿಲ್ಲ. ಆದರೂ ಅವು ಶಿಸ್ತಿನಿಂದಲೇ ಆಗಾಗ ಚದುರಿಹೋಗುತ್ತವೆ. ಒಮ್ಮೊಮ್ಮೆ ಈ ಅಕ್ಷರಗಳ ಬಳಿ ಹಳಸಲು ವಾಸನೆ ಬರುವುದೂ ಉಂಟು. ಆದರೂ ಅವುಗಳನ್ನು ಕಂಪ್ಯೂಟರಿನಲ್ಲಿ ಸ್ಥಾಪಿಸಲು ಟೈಪಿಸುತ್ತಲೇ ಇರುತ್ತೇನೆ.

ಮೆತ್ತಿನ ಬೆಚ್ಚನೆಯ ಖಾನೆಯಲ್ಲಿ ನನ್ನಂತೆಯೇ ಹೊರ ಜಗತ್ತನ್ನು ನೋಡಿಯೂ ನೋಡದಿರುವ ಬರಹಗಳನ್ನು ಯಾರು ತಾನೇ ಓದುತ್ತಾರೆ. ಎಲ್ಲರಿಗೂ ಜೀವಂತಿಕೆ ತುಂಬಬೇಕು, ತುಳುಕಿದರೂ ನಡೆಯುತ್ತದೆ. ಸಂತೆಯಂತೆ ಪದಃಪುಂಜಗಳು ಗಡಿಬಿಡಿಯಿಂದ ಓಡಾಡಬೇಕು. ಇಲ್ಲದಿದ್ದರೆ ಯಾವುದೋ ಇಂಗ್ಲೀಷು ಭಾಷೆಯ ಬರಹವನ್ನು ನಕಲು ಮಾಡಿದ್ದು ಗೊತ್ತಾಗದಂತೆ ತರ್ಜುಮೆ ಮಾಡಬೇಕು. ದೈನಂದಿನ ವಿದ್ಯಮಾನಗಳನ್ನು ಕರಾರುವಕ್ಕಾಗಿ ವಿಮರ್ಶಿಸಬೇಕು. ಆದರೆ ನನ್ನ ಜೊತೆಯೇ ಕಪ್ಪನ್ನು ಹೊದ್ದುಕೊಂಡು ಮಲಗಿದ ಈ ಬರಹಗಳಿಗೆ ಯಾವ ಗಿರಾಕಿ ಸಿಗುತ್ತಾನೆ. ಈ ಬರಹಗಳ ಬಿಳಿ ಹಾಳೆಗಳನ್ನು ಸರಿಸುಮಾರು ಎಲ್ಲ ಪತ್ರಿಕೆಗಳಿಗೆ ಕಳಿಸಿದ ನೆನಪಿದೆ. ಕೊನೆಯಲ್ಲಿ ದಯಮಾಡಿ ಪ್ರಕಟಿಸಬೇಡಿ ಎಂದು ದಪ್ಪಕ್ಷರದಲ್ಲಿಯೇ ಬರೆದಿದ್ದೆ ಸಹ. ನನ್ನ ಕೋರಿಕೆಯನ್ನು ಸಂಪಾದಕರು ಎಷ್ಟು ಗೌರವಪೂರ್ವಕವಾಗಿ ಮನ್ನಿಸಿದರೆಂದರೆ ಯಾವ ಬರಹವನ್ನೂ ಪ್ರಕಟಿಸಲಿಲ್ಲ.

ಆದರೆ ಕೊನೆಗೂ ನನ್ನ ಬರಹಗಳನ್ನು ಓದಲು ಗಿರಾಕಿಗಳು ಸಿಕ್ಕರು. ಕೆಲವರಲ್ಲ, ಬಹಳ ಜಿರಳೆಗಳೇ ಇರಬಹುದು. ಗಾಳಿ ಸುಳಿಯದ ಆ ಖಾನೆಯೊಳಗಿದ್ದ ಹಾಳೆಗಳನ್ನು ನಾನು ಕಣ್ಮುಚ್ಚಿದಂತೆ ಜಿರಳೆಗಳು ಕಣ್ಬಿಟ್ಟು ಓದತೊಡಗಿದವು. ಹೌದು! ಅವು ಓದುತ್ತಲೇ ಇವೆ. ಅವು ಪಿಸುಮಾತಿನಲ್ಲಿ ಓದಿದರೂ ನನಗೆ ಕೇಳಿಸುತ್ತದೆ.  ಕೋಣೆಯ ಕಪ್ಪುಗತ್ತಲಲ್ಲಿ ಮತ್ಯಾರು ಶಬ್ಧ ಮಾಡಿಯಾರು. ಅದು ಅವು ಓದುವ ಶಬ್ಧವೇ, ನನಗೆ ಕೇಳಿಸುತ್ತಿದೆ. ನೀನು ಕಂಪ್ಯೂಟರಿನಲ್ಲಿ ಟೈಪ್ ಮಾಡಿ ನಮ್ಮ ಓದುವ ಹಕ್ಕನ್ನು ಕಸಿಯಬೇಡವೆಂದು ದೊಡ್ಡದಾಗಿಯೇ ಓದಬಹುದು.

ಅಷ್ಟರಲ್ಲಿ ಕೆಳಗಿನಿಂದ ಅಪ್ಪ ಕರೆದಂತೆ ಕೇಳಿಸಿತು. ಅಪ್ಪನೋ, ಅಮ್ಮನೋ ; ಸದ್ಯ ಅವರ ಧ್ವನಿಯನ್ನು ಕೇಳಿಲ್ಲ. ಅವರ ಪಾಡಿಗೆ ಓದಲು ಬಿಟ್ಟು ಏಣಿ ಇಳಿದೆ.

ಮೆತ್ತನೆಯ ಮರದ ಖುರ್ಚಿಯ ಮೇಲೆ ಉದ್ದಕೈ ಅಂಗಿಯ ಯಾರೋ ಕುಳಿತಿದ್ದರು. ನಿನ್ನ ಅಜ್ಜನಮನೆ ಮೂರನೇ ಮಾವ ಎಂದು ಅಮ್ಮ ಹೇಳಿದಂತೆ ಕೇಳಿಸಿತು. ನನ್ನ ಬಳಿ ನಮನಮೂನೆಯ ವಿನ್ಯಾಸವಿರುವ ಆಮಂತ್ರಣ ಪತ್ರ ಕೊಟ್ಟು ಮುದ್ದಾಂ ಬರಬೇಕು ಎಂದರು. ಬಿಡಿಸಿ ನೋಡಿದೆ, ಇವರದೇ ಮಗನಿರಬೇಕು. ಇಂತವರ ಏಕೈಕ ಸುಪುತ್ರ ಎಂಬ ಒಕ್ಕಣಿಕೆಯ ಕೆಳಗೆ ವರನ ಹೆಸರು, ದಪ್ಪಕ್ಷರದಲ್ಲಿ ‘ ಎಮ್.ಬಿ.ಎ’ ಎಂಬ ಬಿರುದನ್ನು ಹಣೆಪಟ್ಟಿಗೆ ಅಂಟಿಸಿದ್ದು ಸ್ಪಷ್ಟವಾಗಿ ಕಾಣಿಸಿತು. ನಮ್ಮ ಜಗುಲಿಯ ಮೇಲ್ಛಾವಣಿ ತಗಡಿನದೇನೋ, ಸೆಖೆ ಹೆಚ್ಚಾಗಿ ನನ್ನನ್ನು ದಿಟ್ಟಿಸಿ ಕೇಳಿದರು, ಏನು ಕಲಿತಿದ್ದೀರಿ? ಯಾವ ‘ಜಾಬ್’ ನಲ್ಲಿದ್ದೀರೆಂದು. ನಾನು ಕಲಿತದ್ದು ನಿಮಗೆ ಪ್ರಯೋಜನವಿಲ್ಲ ಬಿಡಿ ಎಂದು ಉಪ್ಪರಿಗೆಯ ಕಡೆ ನೋಡಿದೆ.  ‘ಆಹಾ! ಎಂತಹ ಬರಹ’ ಎಂಬ ಮಾತು ಮೇಲೆಲ್ಲ ಹರಿದಾಡಿದಂತೆ ಕೇಳಿತು.

ನೀವೇನು ಎಂಜಿನಿಯರಿಂಗ್ ಮಾಡಿದ್ದೀರಾ? ಮತ್ತೊಮ್ಮೆ ಕೇಳಿದರು.

ಇಲ್ಲ ಇವನು ಬರೀ ಬಿ.ಎ ಮಾಡಿದ್ದಾನಷ್ಟೇ  ಆಮಂತ್ರಣ ಪತ್ರವನ್ನು ಕಣ್ಣಿಗೆ ತಾಗಿಸಿಕೊಂಡು ಓದುತ್ತಿದ್ದ ಅಮ್ಮ ಹೇಳಿದಳು.

ಓಹೋ, ಅಷ್ಟೇಯಾ! ನನ್ನ ಅಳಿಯನಾಗಬೇಕಾದರೆ ಸಿ.ಎ ಅಥವಾ ಇಂಜಿನಿಯರ್ ಆಗಿರಬೇಕು ಎನ್ನುತ್ತ ನಿರಾಶಾದಾಯಕ ಮೊಗದಿಂದ ಹೊರಡಲನುವಾದರು.

ಹೊಳೆಯುವ ಶೂಗಳಿಗೆ ಅಂಗಳದ ಮಣ್ಣು ಬಡಿದುಬಿಡಬಹುದೆಂಬ ಕಳವಳದಲ್ಲೆ ಹೆಜ್ಜೆಹಾಕುತ್ತಿದ್ದರು. ಏನ್ಮಾಡೋದು, ನಾವು ಬೇಡ ಬೇಡವೆಂದರೂ ಆರ್ಟ್ಸ್ ತೆಗೆದುಕೊಂಡು ಮಳ್ಳು ಮಾಡಿದ. ಈಗ ಇಡೀ ದಿನ ಉಪ್ಪರಿಗೆ ಕೋಣೆ ಹೊಕ್ಕಿಕೊಂಡು ಕಾಲ ಕಳೆಯುತ್ತಾನೆ ಎಂದು ಅಮ್ಮ ಕೂಗಿದ್ದು ಕೇಳಿಸಿತು ಎಂಬಂತೆ ಅವರು ಹಿಂತಿರುಗಿ ನನ್ನೆಡೆ ನೋಡಿ ನಕ್ಕಾಗ ಸುಖ ನನ್ನಲ್ಲೇ ಇದೆ ಎಂದು ಹೇಳಿದಂತಾಯಿತು. ಹಾಗಾದರೆ ನಾನು ಗೋಡೆಯ ಮೇಲೆ ಸೃಜನ ಎಂದು ಗೀಚಿದ್ದನ್ನು ಅವರು ನೋಡಿದರೇ? ಹೋಗುವಾಗ ಅಪ್ಪ ಆರಿಸಿಟ್ಟಿದ್ದ ಸಾಣೆಕಲ್ಲಿಗೆ ತಮ್ಮ ಮನಸ್ಸನ್ನು ಗಸಗಸನೇ ಉಜ್ಜಿಕೊಂಡು ಹೋಗಿರಬಹುದು ಎಂದುಕೊಂಡೆ.

“ಹನ್ನೆರಡು ಘಂಟೆ ಆತು. ಸ್ನಾನ ಮಾಡಿ ದೇವರ ಪೂಜೆ ಮಾಡು. ಅಪ್ಪ ಬಪ್ಪೂದು ತಡಾ ಆವ್ತು. ನಾ ನಿನ್ನಂಗಲ್ಲ. ನನಗೆ ಹಸಿವು ಗಿಸಿವು ಆವ್ತು” ಎಂದು ಅಮ್ಮ ಕೂಗಿದಾಗ ತಡಮಾಡದೇ ಬಚ್ಚಲು ಮನೆ ಹೊಕ್ಕೆ. ಸೆಖೆ ತಣ್ಣೀರನ್ನೇ ಮೈಮೇಲೆ ಹೊಯ್ದುಕೊಂಡಿತು. ಇನ್ನೂ ಆಗದ ಮದುವೆ, ಯಾರೂ ಕೊಡದ ಕೂಸು ಎರಡೂ ಒಟ್ಟಿಗೆ ಬಾಗಿಲು ಬಡಿದಂತಾಯಿತು. ಒದ್ದೆ ಪಂಜಿ ಉಟ್ಟುಕೊಂಡು ಸೆಖೆಗೆ ಬೆವರಿದ್ದ ದೇವರಿಗೂ ತಣ್ಣೀರು ಮೀಯಿಸಿದೆ. ಬಿಸಿಬಿಸಿ ಅನ್ನವನ್ನು ನೈವೇದ್ಯ ಮಾಡಿ ಧೊಗಳೆ ಚಡ್ಡಿ ಸಿಕ್ಕಿಸಿದೆ.

“ಬಾ ಊಟ ಮಾಡುವ” ಅಮ್ಮ ಕರೆದಳು.

“ನನಗೆ ಊಟ ಬೇಡ” ಹಸಿವಾಗಿ ಕಂಗೆಟ್ಟವರ ಹಾಗೆ ಸಣ್ಣ ಧ್ವನಿಯಲ್ಲಿ ಹೇಳುತ್ತ ಉಪ್ಪರಿಗೆಯ ಏಣಿಯ ಮೆಟ್ಟಿಲೇರಿದೆ.

ನನ್ನ ಓದುಗರು ಎಲ್ಲ ಬಿಳಿ ಹಾಳೆಗಳನ್ನು ಓದಿ ಮುಗಿಸಿ ಹೊಸ ಬರಹಕ್ಕಾಗಿ ಕಾಯುತ್ತಿರಬಹುದು. ಇನ್ನು ತಡಮಾಡಬಾರದು ಎನ್ನುತ್ತ ಮತ್ತೆ ಕಪ್ಪುಬೆಳಕಿನ ಕೋಣೆಗೆ ಹೋಗಿ ಕುಳಿತೆ. ಅರ್ಧ ತೆರೆದಿದ್ದ ಕಿಟಕಿ ಪೂರ್ಣ ತೆರೆದಂತೆ ಕಂಡಿತು. ಗೋಡೆ ಕಪಾಟಿನ ಮೊದಲೆರಡು ಖಾನೆಗಳು ಖಾಲಿಯಾಗಿದ್ದವು. ಜಿರಲೆಗಳು ಬಿಳಿ ಹಾಳೆಗಳನ್ನು ಕಿಟಕಿಯಿಂದ ಹೊರಗೆಸೆದಿದ್ದವು. ಅಕ್ಷರಗಳು ಆಕಾಶದಲ್ಲಿ ಹಕ್ಕಿಗಳ ಜೊತೆ ಸ್ವಚ್ಛಂದವಾಗಿ ವಿಹರಿಸುತ್ತಿರುವುದು ಕಾಣಿಸಿತು. ನನ್ನ ಮೊದಲ ಓದುಗರಾದ ಜಿರಲೆಗಳು ನಾನು ಬರೆದದ್ದನ್ನು ಅಕ್ಷರಶಃ ಪಾಲಿಸಿದ್ದವು.

ಎಂದೂ ರಿಪೇರಿಯಿರದ ಲ್ಯಾಂಡ್’ಲೈನ್ ಫೋನಿಗೆ ಯಾರೋ ಕರೆ ಮಾಡಿದಂತೆ ಕೇಳಿಸಿತು. ಗಡಿಬಿಡಿಯಲ್ಲಿ ಏಣಿ ಹತ್ತಿ ಬಂದ ಅಮ್ಮ ಖುಷಿಯಿಂದ ಮಾವನ  ಮಗಳಿಗೆ ನೀನು ಒಪ್ಪಿಗೆಯಂತೆ, ಮಾವ ಫೋನ್ ಮಾಡಿದ್ದ. ಎಂದಳು.

ಎಲ್ಲ ಬಿಳಿ ಹಾಳೆಗಳಲ್ಲೂ ಓದಿ ಆಕಾಶಕ್ಕೆಸೆಯಿರಿ ಎಂದಷ್ಟೇ ಬರೆದಿದ್ದು ನೆನಪಾಯಿತು!

ಗುರುಗಣೇಶ ಡಬ್ಗುಳಿ, ಯಲ್ಲಾಪುರ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!