ಕಥೆ

ತಪ್ಪಿದ ಬರಿಗಾಲ ಪ್ರವಾಸ

ಕಾಲಿನಲ್ಲಿ ಚಪ್ಪಲಿ ಇಲ್ಲದಿದ್ದರೆ ಒಂದು ಹೆಜ್ಜೆಯು ಮುಂದೆ ಹೋಗದ ಆಸಾಮಿ ನಾನು. ಆದರೆ ಆವತ್ತು ಬರಿಗಾಲಲ್ಲಿ ಪ್ರವಾಸಕ್ಕೆ ಹೋಗುವ ಕೇಡುಗಾಲ ಬಂದಿದ್ದು ನನ್ನ ಬೇಜವಾಬ್ದಾರಿಯಿಂದ. ಬಸ್ ಬಂದು ನಿಂತಿದೆ,ಗೆಳೆಯರೆಲ್ಲ ಅದಾಗಲೇ ಬಸ್ ಹತ್ತಿ ಕುಳಿತು ಕಿಟಕಿಯಿಂದ ನನ್ನ ಕರೆಯುತ್ತಿರುವುದನ್ನು ನೋಡಿಯೂ ನೋಡದಂತೆ, ಶಾಲೆಯ ಗೇಟನ್ನೆ ನೋಡುತ್ತಿದ್ದೆ. ಬಸ್ ಏರಿದ ಚಾಲಕ,ಒಂದು ಸಾರಿ ಜೋರಾಗಿ ಶಬ್ದ ಮಾಡಿದಾಗ,ಮನದಲ್ಲಿದ್ದ ಅಳುಕು ಕಣ್ಣಿನಿಂದ ಹೊರ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದವು.
*****
ಶನಿವಾರದ ಏಕ್’ಸೆ ಬಡಕರ್ ಏಕ್ ನೋಡಿ, ಆಂಜನೇಯನ ದೇವಸ್ಥಾನಕ್ಕೆ ಹೋಗುವುದು ರೂಢಿ. ನಾಲ್ಕು ದಿನದ ಹಿಂದೆ ಅಷ್ಟೇ ತಂದಿದ್ದ ಹೊಸ ಚಪ್ಪಲಿಗಳು ಕಾಲಿನಲ್ಲಿ ಸರಿಯಾಗಿ ಕೂಡುತ್ತಿರಲಿಲ್ಲ. ದೇವಸ್ಥಾನದ ಮೆಟ್ಟಿಲ ಕೆಳಗೆ ರಾಶಿ ರಾಶಿ ಚಪ್ಪಲಿಗಳನ್ನು ನೋಡಿ ನಾನೂ ಅಲ್ಲಿಯೇ ಬಿಟ್ಟು ಮೇಲೆ ಹೋದೆ. ಮಂಗಳಾರತಿ, ಪ್ರದಕ್ಷಿಣೆ ಮುಗಿಸಿ ಎರಡು ನಿಮಿಷ ಮೆಟ್ಟಿಲ ಮೇಲೆ ಕುಳಿತು ನಾನು ಮತ್ತು ಸೋನು ಕೊಬ್ಬರಿ ತಿನ್ನುವುದರಲ್ಲಿ ಬ್ಯುಸಿ ಅಗಿದ್ದೆವು. ಅದಾಗಲೇ ಕಾಲಲ್ಲಿ ಚಪ್ಪಲಿಗಳಿಂದ ಆದ ನವೆಯನ್ನು ತುರಿಸುತ್ತ ಮೆಟ್ಟಿಲ ಕೆಳಗೆ ಕಣ್ಣಾಡಿಸಿದೆ. ಆ ರಾಶಿಯಲ್ಲಿ ನನ್ನ ಚಪ್ಪಲಿಗಳು ಮಾತ್ರ ಮಿಸ್ಸಿಂಗ್. ಸೋನು ಬಿಟ್ಟಿದ್ದ ಆ ಹಳೆಯ ಹವಾಯಿಗಳು ಮಾತ್ರ ಅಲ್ಲೆ ಇದ್ದವು. ಮನದಲ್ಲಿ ದುಗುಡ. ಅವು ಕಳೆದವು ಎಂದು ಅಲ್ಲಾ,ಮನೆಯವರೆಗೆ ಹೇಗೆ ಹೋಗುವುದು ಅಂತ?!
ನಾಲ್ಕು ದಿನಗಳ ನಂತರ ಮತ್ತೆ ಹೊಸ ಚಪ್ಪಲಿಗಳು, ಈ ಬಾರಿ ಏನೇ ಆದರೂ ಆಂಜನೇಯನ ದೇವಸ್ಥಾನಕ್ಕೆ ಹೋಗುವ ರೂಢಿಯನ್ನು ತಪ್ಪಿಸಬೇಕು. ಮುಂದಿನ ವಾರನೇ ಪ್ರವಾಸಕ್ಕೆ ಹೋಗುವುದು ಇರುವುದರಿಂದ ಹೊಸ ಚಪ್ಪಲಿಗಳನ್ನ ಚೆನ್ನಾಗಿ ಕಾಯಬೇಕು. ಹೊರಗೆ ಇರುವ ಅವುಗಳನ್ನೆ ನೋಡುತ್ತ ಕುಳಿತಿದ್ದೆ, ಶಿಲ್ಪಾ ಬಂದು ನನ್ನನ್ನ ಬಲಕ್ಕೆ ಸರಿಸಿ “ಆಂಟಿ,ಸತ್ಯನಾರಾಯಣ ಪೂಜೆಗೆ ಬನ್ನಿ,ಏ ನೀನು ಬಾರೊ ಪ್ರಸಾದ ಕೊಡುತ್ತೇನೆ” ಅಂದಳು.
ಕರೆದರೆ ಬಿಡ್ತೀನಾ ಮೊದಲೆ ಸತ್ಯನಾರಾಯಣ ಪೂಜೆ ಪ್ರಸಾದ, ಓಡಿ ಹೋಗಿ, ಗೇಟ್ ಹತ್ತಿರ ಚಪ್ಪಲಿ ಬಿಟ್ಟು, ನಮಸ್ಕಾರ ಮಾಡುತ್ತ ದೇವರ ಮುಂದೆ ನಿಂತಿದ್ದೆ. ಶಿಲ್ಪಾ ಅವರ ಅಮ್ಮ ಬಾ ಮುಂದೆ ಎಂದು, ಪ್ರಸಾದ ಕೊಟ್ಟದ್ದು ಸಾಕಿತ್ತು, ರಿವರ್ಸ ಗೇರ್’ನಲ್ಲಿ ಮನೆಗೆ. ಪ್ರಸಾದ ಖಾಲಿ ಆಯ್ತು. ತಲೆಯಲ್ಲಿ ಅದೇನೋ ಕಳೆದುಕೊಂಡ ಭಾವನೆ. ಅಯ್ಯೋ…. ಶಿಲ್ಪಾ ಅವರ ಮನೆ ಗೇಟ್ ಹತ್ತಿರ ಬಿಟ್ಟ ಚಪ್ಪಲಿ. ಮತ್ತೆ ಓಡಿ ಹೋಗಿ, ಗೇಟ್ ಹತ್ತಿರ ನೋಡಿದರೆ. ಭಾವನೆ ನಿಜದ ಸ್ವರೂಪ. ಮತ್ತೆ ಕಳೆದು ಹೋಗಿದ್ದ ಚಪ್ಪಲಿಗಳು.

ಎರಡು ದಿನದ ನಂತರ ಮತ್ತದೇ ಕಥೆ, ಸೋನು ಮತ್ತು ನಾನು ಪಕ್ಕದ ಬೀದಿಯ ಪ್ರಕಾಶ ಟೀಮ್ ಜೊತೆ ಕ್ರಿಕೆಟ್ ಆಡುತ್ತ ಇದ್ದೆವು, ಕೊನೆಯ ಓವರ್ ಇತ್ತು, ಅದಾಗಲೇ ಸಾಕಷ್ಟು ರನ್ ಕೊಟ್ಟಿದ್ದೆವು, ಚೇಸ್ ಮಾಡೋಕೆ ಕಷ್ಟ ಆಗುತ್ತೆ ಅಂಥ ನಾನೇ ಬೌಲ್ ಮಾಡ್ತಾ ಇದ್ದೆ. ಓಡಲು ಅಡ್ಡಿಯಾದ ಚಪ್ಪಲಿಗಳನ್ನ, ಅಂಪೈರಿಂಗ್ ಮಾಡಲು ನಿಂತಿದ್ದ ಪ್ರಕಾಶ ಟೀಮ್ ಹುಡುಗನಿಗೆ ಹಾಕಿಕೊಳ್ಳಲು ಕೊಟ್ಟೆ. ಇನ್ನೆರಡು ಬಾಲ್’ಗಳು ಬಾಕಿ ಇದ್ದವು ಪ್ರಕಾಶ ಟೀಮ್’ಗೆ ಅದೇನು ಆಯ್ತೋ ಗೊತ್ತಿಲ್ಲ, ಓಡೋಕೆ ಶುರು ಮಾಡಿದರು, ಹಿಂದೆ ನೋಡಿದರೆ ಪಾರ್ಕಿನ ಮಾಲಿ ಕೈಯಲ್ಲಿ ಬೆತ್ತ ಹಿಡಿದು ಬರುತ್ತಿದ್ದ. ಕ್ರಿಕೆಟ್ ಆಡಿ ಆಡಿ ಪಾರ್ಕಿನ ಗಿಡಗಳನ್ನ ಹಾಳು ಮಾಡುತ್ತೇವೆ ಎಂಬ ಸಿಟ್ಟು ಪಾರ್ಕಿನ ಮಾಲಿಯದು. ಸೋನು ಓಡು ಅಂದ, ಕೈಯಲ್ಲಿ ಇದ್ದ ಬಾಲ್’ನ ಹಿಡಿದು ಓಡಿದ್ದು ಒಂದೇ ನೆನಪು, ಮತ್ತೆ ಚಪ್ಪಲಿ ಗಾಯಬ್. ಆಮೇಲೆ ಪ್ರಕಾಶ ಮನೆಗೆ ಹೋಗಿ ಕೇಳಿದರೆ, ಅಂಪೈರಿಂಗ್ ಮಾಡಲು ನಿಂತಿದ್ದ ಹುಡುಗ ಯಾರು ಅಂಥ ಅವನಿಗೂ ಗೊತ್ತಿಲ್ಲ ಅಂದು ಬಿಟ್ಟ. ಮೂರು ಬಾರಿ ಚಪ್ಪಲಿ ಕಳೆದುಕೊಂಡ ಅನುಭವ ಬರಿಗಾಲ ನಡಿಗೆ ಕಲಿಸಲಿಲ್ಲ. ನಾಳೆನೇ ಪ್ರವಾಸದ ದಿನ.

ಮುಂಜಾನೆಯಿಂದ ರಾತ್ರಿ ಶಾಲೆಗೆ ಹೋಗುವವರೆಗೂ ಮನೆ ಬಿಟ್ಟು ಹೊರಗಡೇನೇ ಹೋಗಲಿಲ್ಲ. ರಾತ್ರಿ ಬಸ್ ಬರೋ ಸಮಯ, ಬ್ಯಾಗ್ ಹಿಡಿದು ಬರಿಗಾಲಲ್ಲಿ ಹೊರಗೆ ಬಂದೆ. ಅಮ್ಮ ಟಾಟಾ ಮಾಡುತ್ತ ಇದ್ದರು,ಬರಿಗಾಲು,ಮನೆ ಬಿಟ್ಟು ಹೋಗುತ್ತಿದ್ದೇನೋ ಏನೋ ಅನ್ನುವ ಭಾವನೆ.
ಬಸ್ ಏರಿದ ಚಾಲಕ, ಒಂದು ಸಾರಿ ಜೋರಾಗಿ ಶಬ್ದ ಮಾಡಿದಾಗ, ಮನದಲ್ಲಿದ್ದ ಅಳುಕು ಕಣ್ಣಿನಿಂದ ಹೊರ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದವು. ಶಾಲೆಯ ಗೇಟ್ ಹತ್ತಿರ ಬಸ್ ಹೋಗುತ್ತಿತ್ತು,ಅಪ್ಪ ಓಡಿ ಬಂದರು, ಅವರ ಕೈಯ್ಯಲ್ಲಿ ಇದ್ದ ಪ್ಲಾಸ್ಟಿಕ್ ಬ್ಯಾಗನ್ನ ಕಿಟಕಿಯಿಂದ ನನಗೆ ಕೊಟ್ಟರು. ಕಾತರದಲ್ಲಿದ್ದ ನಾನೂ ಆ ಪ್ಲಾಸ್ಟಿಕ್ ಬ್ಯಾಗ್’ನ ಒಳಗೆ ತಲೆ ಹಾಕಿದೆ. ಒಳಗೆ ಇದ್ದದ್ದು ಬಿಳಿ ಬಣ್ಣದ ಬೂಟುಗಳು.

Facebook ಕಾಮೆಂಟ್ಸ್

ಲೇಖಕರ ಕುರಿತು

Anand Rc

ಹವ್ಯಾಸಿ ಬರಹಗಾರ,ಎಂ,ಸಿ,ಎ ಓದಿ,ಪ್ರಸ್ತುತ ಗದಗ ಜಿಲ್ಲೆಯಲ್ಲಿ ಸರಕಾರಿ ಯೋಜನೆಗಳಿಗೆ
ಸಲಹೆಗಾರರ ವೃತ್ತಿ.ಕಂಪ್ಯೂಟರ್,ಮಾಹಿತಿ ತಂತ್ರಜ್ಞಾನ ಮತ್ತು ಪುಸ್ತಕಗಳ ಆಸಕ್ತಿ ಬರೆಯುವದನ್ನು
ಕಲಿಸಿದ್ದು,Aarsi.org ಎಂಬ ಸ್ವಂತ ವೆಬ್ಸೈಟ್ ಹೊಂದಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!