Featured ಪ್ರಚಲಿತ

ಕಾನೂನು ಸಚಿವರಿಗೊಂದು ಬಹಿರಂಗ ಪತ್ರ

ಗೌರವಾನ್ವಿತ ಕಾನೂನು ಸಚಿವರಾದ ಶ್ರೀ ಡಿ.ವಿ ಸದಾನಂದ ಗೌಡರಿಗೆ ನಮಸ್ಕಾರಗಳು.

ನೀವು ಯಾವ ಕ್ಷೇತ್ರದಿಂದ ರಾಜಕೀಯ ನೆಲೆ ಕಂಡು ಅಲ್ಲಿಂದ ಶಾಸಕರಾಗಿ ಇವತ್ತು ಕೇಂದ್ರದ ಕಾನೂನು ಮಂತ್ರಿಯಾಗುವವರೆಗೂ ಬೆಳೆದಿದ್ದೀರೋ ಅದೇ ಪುತ್ತೂರು ಕ್ಷೇತ್ರದ ನಿವಾಸಿಯಾಗಿರುವ ನಾನು, ಇವತ್ತು ದೇಶಕ್ಕೆ ಅತೀ ಅಗತ್ಯವಾಗಿ ಬೇಕಾಗಿರುವ ವಿಷಯವೊಂದರ ಕುರಿತಾಗಿ ಪತ್ರವೊಂದನ್ನು ಬರೆಯುತ್ತಿದ್ದೇನೆ.

ಮಾನ್ಯ ಸಚಿವರೇ, ನಮ್ಮ ಸಂವಿಧಾನವು ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ನಮ್ಮ ಸ್ವಯಂ ರಕ್ಷಣೆಗಾಗಿ ಹಲವಾರು ಕಾನೂನುಗಳನ್ನು ನಮಗಾಗಿ ಕೊಟ್ಟಿದೆ. ಅವುಗಳಲ್ಲಿ ಹಲವು ಕಾನೂನುಗಳು ನಿಜಕ್ಕೂ ನಮಗೆ ಉಪಯೋಗವಾಗುವಂತಾದ್ದೇ ಇದೆ. ಆದರೆ ದುರಾದೃಷ್ಟವೋ ಏನೋ, ಕೆಲವು ಕಾನೂನುಗಳು ವ್ಯಾಪಕವಾಗಿ ದುರುಪಯೋಗವಾಗುತ್ತಲೇ ಇವೆ. ಕಾನೂನು ಸಚಿವರಾಗಿರುವ ನಿಮಗೆ ಇದು ಗೊತ್ತಿರದ ವಿಷಯವೇನಲ್ಲ. ಯಾವುದೇ ಕಾನೂನಾಗಿದ್ದರೂ ಅದರ ಆಶಯ ಒಳ್ಳೆಯದೇ ಆಗಿರುತ್ತದೆ. ಆದರೆ ಅವುಗಳು ದುರ್ಬಳಕೆಯಾಗುತ್ತಿರುವುದು ಮಾತ್ರ ವಿಪರ್ಯಾಸ. ಉದಾಹರಣೆಗೆ ನೋಡುವುದಾದರೆ ವರದಕ್ಷಿಣೆಯ ವಿರುದ್ಧದ ಕಾನೂನು. ಇದು ದುರ್ಬಳಕೆಯಾಗುತ್ತಿರುವ ಕಾನೂನುಗಳಲ್ಲಿ ತೀರಾ ಇತ್ತೀಚಿನವರೆಗೂ ನಂಬರ್ ಒನ್ ಸ್ಥಾನದಲ್ಲಿತ್ತು. Genuine ಕೇಸುಗಳಲ್ಲಿ ಇದು ಬಹಳ ಪರಿಣಾಮಕಾರಿಯಾದ ಕಾನೂನು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಇದು ವ್ಯಾಪಕವಾಗಿ ದುರ್ಬಳಕೆಯಾಗಿದೆ ಮತ್ತು ಇವತ್ತೂ ಕೂಡಾ ದುರ್ಬಳಕೆಯಾಗುತ್ತಿದೆ. ಯಾವುದೋ ಕಾರಣಕ್ಕೆ ಗಂಡನ ಜೊತೆಗೆ ಜಗಳವಾಡುವ ಹೆಂಡತಿ ಅದನ್ನು ವರದಕ್ಷಿಣೆ ಕೇಸು ದಾಖಲಿಸುವ ಮೂಲಕ ಅಂತ್ಯಗೊಳಿಸುತ್ತಾಳೆ. ಕೇಸು ಗಂಡನ ಮೇಲಷ್ಟೇ ಅಲ್ಲ, ಏನೂ ಮಾಡದ ಅಮಾಯಕ ಅತ್ತೆ ಮಾವನ ಮೇಲೂ. ಅಂತಹಾ ಪ್ರಕರಣಗಳು ಜಾಮೀನು ರಹಿತವೂ ಆಗಿರುವುದರಿಂದ ಪೋಲೀಸರು ಹಿಂದೂ ಮುಂದೂ ನೋಡದೆ ಆಪಾದಿತರನ್ನು ಬಂದಿಸುತ್ತಾರೆ. ಅಷ್ಟೆಲ್ಲಾ ಸೀನ್ ಬೇಡ ಎಂದಾದರೆ ಲಕ್ಷ ಲಕ್ಷ ಹಣ ಕೊಡಿ ಎನ್ನುವ ಬೇಡಿಕೆ ಆಕೆಯ ಕಡೆಯಿಂದ ಬರುತ್ತದೆ. ಹಣ ಕೊಡದಿದ್ದರೆ ಕೇಸ್ ಹಾಕುತ್ತೇನೆ ಎನ್ನುವ ಬ್ಲಾಕ್’ಮೈಲ್ ಜೊತೆಗೆ. ಇದನ್ನೆಲ್ಲಾ ಸಂಭಾಳಿಸುವಷ್ಟರಲ್ಲಿ ಇಡೀ ಕುಟುಂಬದ ಮಾನ ಮೂರಾಬಟ್ಟೆಯಾಗಿರುತ್ತದೆ. ಆ ನೊವು, ಆ ಹತಾಶೆ, ಆ ಅವಮಾನ… ಹುಹ್.. ಯಾರಿಗೆ ಬೇಕು!

ಸರ್, ಬರೀ ಕಾನೂನು ಎನ್ನುವುದಕ್ಕಿಂತ ಮಹಿಳಾ ಸುರಕ್ಷೆಯ ಕಾನೂನುಗಳೇ ಇವತ್ತು ಹೆಚ್ಚಾಗಿ ದುರುಪಯೋಗವಾಗುತ್ತಿರುವುದು. ಕೆಲವೊಂದು ನೈಜ ಉದಾಹರಣೆಗಳನ್ನು ನೋಡೋಣ.

1.ರಾಘವೇಶ್ವರ ಶ್ರೀ ಪ್ರಕರಣ:
ರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ರಾಘವೇಶ್ವರ ಶ್ರೀಗಳ ಮೇಲೆ 2014ರಲ್ಲಿ ಮಹಿಳೆಯೊಬ್ಬಳು ಅತ್ಯಾಚಾರದ ದೂರನ್ನು ನೀಡಿದ್ದಳು. ತನ್ನ ಧಾರ್ಮಿಕ ಮತ್ತು ಸಾಮಾಜಿಕ ಕೆಲಸಗಳಿಂದಾಗಿ ಜನಪ್ರಿಯರಾಗಿದ್ದ ಶ್ರೀಗಳ ಮೇಲೆ ಅಂತಹಾ ಹೀನ ಆರೋಪ ಕೇಳಿ ಬಂದಿದ್ದು ರಾಜ್ಯವನ್ನೇ ತಲ್ಲಣಗೊಳಿಸಿತ್ತು. ಮೇಲ್ನೋಟಕ್ಕೂ ಸಾಬೀತಾಗದ ಕೇಸ್ ಅದಾಗಿದ್ದರೂ ಒಂದೂವರೆ ವರ್ಷಗಳ ವಿಚಾರಣೆ ನಡೆಯಿತು. ಚಾರ್ಜ್’ಶೀಟ್ ಮುಂತಾದ ಕಾನೂನು ಕ್ರಮಗಳು ನಡೆದವು. ನಮ್ಮ ಘನಾಂದಾರಿ ನ್ಯೂಸ್ ಚಾನಲ್’ಗಳು ಸಿಕ್ಕಿದ್ದು ಛಾನ್ಸ್ ಎನ್ನುತ್ತಾ ನಿರಂತರವಾಗಿ ಶ್ರೀಗಳ ಮತ್ತು ಮಠದ ತೇಜೋವಧೆ ಮಾಡ ತೊಡಗಿದರು. ಇಢೀ ರಾಮಚಂದ್ರಾಪುರ ಮಠದ ಮತ್ತು ಹವ್ಯಕ ಸಮಾಜದ ಮಾನವನ್ನು ಹರಾಜು ಹಾಕುವ ಪ್ರಯತ್ನ ಎಗ್ಗಿಲ್ಲದೆ ನಡೆಯಿತು. ಇದರ ನೇರ ಪರಿಣಾಮವಾಗಿದ್ದು ಶ್ರೀಗಳನ್ನು ನಂಬಿಕೊಂಡಿದ್ದ ಸಾವಿರಾರು ಜನ ಭಕ್ತರ ಮೇಲೆ. ಒಂದಿಬ್ಬರಿಗೆ ಹೃದಯಾಘಾತವಾಯಿತು. ಕೆಲವರು ಆತ್ಮಹತ್ಯೆಗೆ ಯತ್ನಿಸಿದರು. ಶ್ರೀಗಳ ಮೇಲೆ ಬಂದ ಆರೋಪಕ್ಕೆ ಸಂಬಂಧಿಸಿದಂತೆ ಶ್ಯಾಮ ಶಾಸ್ತ್ರಿ ಎಂಬುವವರ ಆತ್ಮಹತ್ಯೆ ಕಮ್ ಕೊಲೆ ನಡೆಯಿತು(ಇದು ಕೊಲೆಯೇ ಎನ್ನುವ ಬಲವಾದ ಅನುಮಾನ ಇಲ್ಲಿನ ಜನರಲ್ಲಿದೆ ಮತ್ತು ಕೋರ್ಟ್ ಶ್ರೀಗಳ ಮೇಲಿದ್ದ ಕೇಸನ್ನು ವಜಾಗೊಳಿಸಿದ್ದು ಅದು ಕೊಲೆ ಎಂಬುದನ್ನು ಪುಷ್ಟೀಕರಿಸುತ್ತದೆ). ಈ ಎಲ್ಲಾ ಗೊಂದಲ, ಗದ್ದಲಗಳಿಂದ ನೊಂದ ಸಾವಿರಾರು ಜನ ಶಿಷ್ಯರಲ್ಲಿ ನಾನೂ ಒಬ್ಬ. ಒಟ್ಟಿನಲ್ಲಿ ದುರುದ್ದೇಶಪೂರಿತವಾಗಿದ್ದ ಒಂದು ಸುಳ್ಳು ಆರೋಪ ಹತ್ತಾರು ಎಡವಟ್ಟುಗಳಿಗೆ ಎಡೆ ಮಾಡಿ ಕೊಟ್ಟಿತು. ಸರ್, ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಾನ್ಯ ನ್ಯಾಯಾಲಯ ಮಾರ್ಚ್ 31 2016ರಂದು ತೀರ್ಪು ನೀಡಿದ್ದು “ಇದು ರಾಘವೇಶ್ವರ ಶ್ರೀಗಳ ಮಾನ ಹರಣಕ್ಕಾಗಿ ಮತ್ತು ಹಣಕ್ಕಾಗಿ ಬ್ಲ್ಯಾಕ್’ಮೈಲ್ ಮಾಡುವ ಉದ್ದೇಶದಿಂದ ದಾಖಲಿಸಿದ ಸುಳ್ಳು ಪ್ರಕರಣವಾಗಿದ್ದು, ವಿಚಾರಣೆಗೆ ಅರ್ಹವಾಗಿಲ್ಲದೇ ಇರುವುದರಿಂದ ವಜಾಗೊಳಿಸುತ್ತಿದ್ದೇನೆ” ಎನ್ನುವ ತೀರ್ಪು ನೀಡಿದೆ.

2. ಸರ್, ನನ್ನ ಮನವಿಯ ಗಂಭೀರತೆ ಮನದಟ್ಟು ಮಾಡುವ ಉದ್ದೇಶದಿಂದ ನಿಮ್ಮ ಕುಟುಂಬದೊಳಗೆ ನಡೆದ ವಿಚಾರವನ್ನು ಪ್ರಸ್ತಾಪಿಸುತ್ತಿದ್ದೇನೆ. ಮಹಿಳಾ ಸುರಕ್ಷತೆಯ ಕಾನೂನಿನ ದುರ್ಬಳಕೆಗೆ ನಿಮ್ಮ ಕುಟುಂಬವೂ ತುತ್ತಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರದ ಸಂಗತಿಯೇನಲ್ಲ. ರಾಘವೇಶ್ವರ ಶ್ರೀಗಳ ಮೇಲೆ ಮತ್ತು ನಿಮ್ಮ ಪುತ್ರನ ಮೇಲೆ ಒಂದೇ ದಿನದ ಅಂತರದಲ್ಲಿ ಸುಳ್ಳು ಕೇಸ್ ದಾಖಲಾಗಿದ್ದು ಇಲ್ಲಿ ಕಾಕತಾಳೀಯ. ನಿಮ್ಮ ಪುತ್ರನಿಗೆ ವಿವಾಹ ನಿಶ್ಚಿತಾರ್ಥವಾದಾಗ ಯುವತಿಯೊಬ್ಬಳು ತನಗೂ ಕಾರ್ತಿಕಗೂ ವಿವಾಹವಾಗಿದೆ, ಆತ ನನ್ನನ್ನು ಅತ್ಯಾಚಾರ ಮಾಡಿದ್ದಾನೆ ಎನ್ನುವ ದೂರನ್ನು ನೀಡಿದ್ದಳು. ಅದು ಹಣಕ್ಕಾಗಿ ದಾಖಲಿಸಿದ ಸುಳ್ಳು ಕೇಸೆಂದು ಜನರೇ ಮಾತನಾಡಿಕೊಳ್ಳುತ್ತಿದ್ದರು. ಆ ನಿಮ್ಮ ಪರಿಸ್ಥಿತಿಯನ್ನೊಮ್ಮೆ ಊಹಿಸಿಕೊಳ್ಳಿ ಸರ್. ಆಗಷ್ಟೇ ನೀವು ಮೋದಿ ಸರಕಾರದಲ್ಲಿ ಸಚಿವರಾಗಿದ್ದಷ್ಟೇ. ನೀವು ನಿಮ್ಮದೇ ಆದ ಪ್ರತಿಷ್ಟೆಯನ್ನು ಕೇಂದ್ರ ಸರಕಾರದಲ್ಲಿ ಪಡೆದಿದ್ದಿರಿ. ಆದರೆ ಈ ಒಂದು ಪ್ರಕರಣ ಬರೀ ನಿಮಗೆ ಕಿರಿಕಿರಿ ಮಾಡಿದ್ದಲ್ಲ, ಮೋದಿ ಸರಕಾರಕ್ಕೂ ಮುಜಗರವನ್ನು ತಂದೊಡ್ಡಿತು. ಇಲ್ಲೂ ಟಿ.ವಿ ಚಾನಲ್’ಗಳು ಇಡೀ ದಿನ ಚರ್ಚೆಯನ್ನೇರ್ಪಡಿಸಿ ಅವ್ಯಾಹತವಾಗಿ ನಿಮ್ಮ ಮತ್ತು ಮೋದಿ ಸರಕಾರದ ಮಾನ ಹರಣ ಮಾಡಿದವು. ನಿಮ್ಮ ಪುತ್ರನ ಮದುವೆ ಮುಂದೆ ಹೋಯ್ತು. ಮದುವೆ ಆಗಿದೆ, ಅತ್ಯಾಚಾರ ಆಗಿದೆ ಎಂದೆಲ್ಲ ಬಿದಿ ರಂಪ ಮಾಡಿದ್ದ ಯುವತಿ ಒಂದಷ್ಟು ರಿಯಾಲಿಟಿ ಶೋಗಳಲ್ಲಿ ಅವಕಾಶಗಿಟ್ಟಿಸಿಕೊಂಡು ಹಣ ಮಾಡಿಕೊಂಡಳು. ಕೊನೇಗೆ ಏನಾಯ್ತು? ಈ ಕೇಸೂ ವಜಾ ಆಯ್ತು.

ಸರ್, ಮೇಲಿನವು ತಾಜಾ ತಾಜಾ ಎಂಬ ಕಾರಣಕ್ಕಾಗಿ ನೀಡಿದ ಉದಾಹರಣೆಯಾಗಿದೆ. ಇದಕ್ಕೂ ಮೀರಿದ ಸಾವಿರಾರು ಘಟನೆಗಳು ನಿತ್ಯವೂ ನದೆಯುತ್ತಿದೆ. ಇದನ್ನೆಲ್ಲಾ ನೋಡುವಾಗ, ಕಾನೂನು ದುರ್ಬಳಕೆ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸುವಂತಹಾ ಬಲಿಷ್ಠವಾದ ಕಾನೂನೊಂದನ್ನು ಜಾರಿಗೆ ತರಬೇಕೆಂಬುದು ದೇಶದ ಜನರ ಅಭಿಪ್ರಾಯವಾಗಿದೆ., ರಾಘವೇಶ್ವರರ ಪ್ರಕರಣದಲ್ಲೀಗ ಕೇಸ್ ರದ್ದಾಗಿದೆ. ಆದರೆ ವಿಚಾರಣೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಮನನೊಂದು ಕೆಲವರು ಹೃದಯಾಘಾತಗೊಂಡು ಸಾವನ್ನಪ್ಪಿದ್ದಾರೆ. ಕೇಸ್ ರದ್ದಾದ ಮಾತ್ರಕ್ಕೆ ಆ ಜೀವವನ್ನು ಮರಳಿ ಪಡೆಯಲು ಸಾಧ್ಯವಿದೆಯೇ? ಶ್ರೀಗಳ ಅಸಂಖ್ಯಾತ ಭಕ್ತರು ಮಾನಸಿಕವಾಗಿ ನೊಂದಿದ್ದಾರೆ. ಅವರ ನೋವನ್ನು ಭರಿಸಲು ಯಾರಿಗಾದರೂ ಸಾಧ್ಯವಿದೆಯೇ? ಒಂದು ವೇಳೆ ಶ್ರೀಗಳು ಆವತ್ತು ವೀರ್ಯ ಪರೀಕ್ಷೆಗೊಳಪಟ್ಟು ಇವತ್ತು ಪೀಠತ್ಯಾಗ ಮಾಡುವಂತಹಾ ಸ್ಥಿತಿ ಬಂದಿದ್ದರೆ ಅದು ಎಂತಹಾ ಅನಾಹುತವನ್ನು ಸೃಷ್ಠಿಸುತ್ತಿತ್ತು? ಸುಳ್ಳು ಪ್ರಕರಣವನ್ನೇ ಬಂಡವಾಳ ಮಾಡಿಕೊಂಡು ಎರಡು ವರ್ಷಗಳಿಂದ ಶ್ರೀಗಳ ತೇಜೋವಧೆ ಮಾಡಿದ ಟಿ.ವಿ ಚಾನಲ್, ಪತ್ರಿಕೆಗಳಿವೆ. ಇನ್ನೊಬ್ಬರ ದುಃಖದಲ್ಲಿ ಬೇಳೆ ಬೇಯಿಸಿಕೊಂಡ ಅಂತವುಗಳಿಗೆ ಯಾವುದೇ ಶಿಕ್ಷೆಯಿಲ್ಲವೇ? ನಮ್ಮ ದೇಶದಲ್ಲಿ ಸಕಾಲದಲ್ಲಿ ವಿಲೇವಾರಿಗೊಳ್ಳದೆ ಕೊಳೆಯುತ್ತಾ ಬಿದ್ದಿರುವ ಲಕ್ಷಗಟ್ಟಲೆ ಕೇಸುಗಳಿರುವಾಗಲೂ ಘನ ನ್ಯಾಯಾಲಯದ ಅತ್ಯಮೂಲ್ಯ ಸಮಯವನ್ನು ವ್ಯರ್ಥ ಮಾಡಿದವರಿಗೆ ಏನಾದರೂ ಶಿಕ್ಷೆ ವಿಧಿಸದಿದ್ದರೆ ಉಳಿದಿರುವ ಕಾನೂನುಗಳಿಗೇನು ಬಂತು ಸಾರ್ಥಕತೆ? ಈ ಎಲ್ಲಾ ನೋವನ್ನು ಸ್ವತಃ ನೀವೇ ನಿಮ್ಮ ಮಗನ ಕೇಸಿನಲ್ಲಿ ಅನುಭವಿಸಿದ್ದೀರಿ. ಆದ್ದರಿಂದ ನಿಮಗೆ ಆ ನೋವಿನ ಅರಿವು ಚೆನ್ನಾಗಿ ಗೊತ್ತಿರುತ್ತದೆ. ಆ ಪ್ರಕರಣದಲ್ಲಿ ನೀವೆಷ್ಟು ನೊಂದಿರಬಹುದು, ನಿಮ್ಮ ಕುಟುಂಬಕ್ಕೆಷ್ಟು ಅವಮಾನವಾಗಿರಬಹುದು ಎಂಬುದರ ಅರಿವು ನನಗೂ ಇದೆ. ಸರ್ ನಾನು ಹುಟ್ಟಿದಾಗಿನಿಂದಲೂ ನಿಮ್ಮನ್ನು ನೋಡುತ್ತಾ ಬೆಳೆದವನು. ನೀವು ಪುತ್ತೂರಿನ ಶಾಸಕರಾಗಿ, ವಿಧಾನ ಸಭೆ ಪ್ರತಿಪಕ್ಷ ಉಪನಾಯಕನಾಗಿ, ಮಂಗಳೂರು ಸಂಸದರಾಗಿ, ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ, ಬಿಜೆಪಿಯ ರಾಜ್ಯಾಧ್ಯಕ್ಷರಾಗಿ, ಕರ್ನಾಟಕದ ಮುಖ್ಯಮಂತ್ರಿಯಾಗಿ, ಮತ್ತೀಗ ಕೇಂದ್ರ ಕಾನೂನು ಸಚಿವರಾಗುವವರೆಗೂ ಪಡೆದ ಸ್ಥಾನಮಾನಗಳೆಲ್ಲವೂ ದಂಡಿಯಾಗಿ ಸಿಕ್ಕಿದ್ದಲ್ಲ. ಅದರ ಹಿಂದೆ ಸಾಕಷ್ಟು ಪರಿಶ್ರಮವಿದೆ, ನೀವು ಅಷ್ಟೊಂದು ಶ್ರದ್ಧೆ ಮತ್ತು ಪರಿಶ್ರಮದಿಂದ ಗಳಿಸಿಕೊಂಡ ಸ್ಥಾನಮಾನಕ್ಕೆ, ಪ್ರತಿಷ್ಠೆಗೆ ಮಗನ ಮೇಲೆ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಮುಜುಗರ ತಂದಂತವರನ್ನು ಈಸಿಯಾಗಿ ಬಿಟ್ಟು ಬಿಡುತ್ತೀರಾ? ನೀವು ಬಿಟ್ಟು ಬಿಟ್ಟರೂ ಪರವಾಗಿಲ್ಲ. ಆದರೆ ಇದು ಒಬ್ಬ ರಾಘವೇಶ್ವರ ಶ್ರೀಗಳ ಕಥೆಯಲ್ಲ. ಒಬ್ಬ ಕಾರ್ತಿಕ್ ಗೌಡರ ಕಥೆಯಲ್ಲ. ಬೆಳಕಿಗೆ ಬಾರದ ಸಾವಿರಾರು ಕಥೆಗಳಿವೆ. ವಿನಾ ಕಾರಣ ತೊಂದರೆಗೆ ಸಿಲುಕುವ ಸಾವಿರಾರು ಪುರುಷರಿದ್ದಾರೆ. ರಾಘವೇಶ್ವರ ಶ್ರೀಗಳಿಗೆ, ನಿಮಗೆ ಬಂದಂತಹ ಗತಿ ಇನ್ಯಾವ ಅಮಾಯಕರಿಗೂ ಬರಬಾರದಲ್ಲಾ? ನಕಲಿ ಸಂತ್ರಸ್ತೆಯರ ಆಟಾಟೋಪಗಳಿಗೆ ಅಮಾಯಕ ಪುರುಷರು ಸಂತ್ರಸ್ತರಾಗಬಾರದಲ್ಲಾ? ಆದುದರಿಂದಲಾದರೂ ಕಾನೂನು ದುರ್ಬಳಕೆ ಮಾಡುವವರಿಗೆ ಶಿಕ್ಷೆ ವಿಧಿಸುವ ಕಾನೂನು ತರಬೇಕಾಗಿದೆ.

ಮಾನ್ಯರೇ, ಕಾನೂನು ಸಚಿವರಾಗುತ್ತಲೇ ನಮ್ಮಲ್ಲಿದ್ದ ಅನಗತ್ಯ ಕಾನೂನುಗಳನ್ನು ತೆಗೆದು ಹಾಕುವ ಮೂಲಕ ಜನರ ಪ್ರಶಂಸೆಗೊಳಗಾದವರು ನೀವು. ದೇಶದಲ್ಲೆಲ್ಲೂ ಇರದಿದ್ದ ಸಕಾಲ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದ ಮುಖ್ಯಮಂತ್ರಿ ನೀವು. ಅದೇ ಭರವಸೆಯಲ್ಲಿ ನನ್ನದೊಂದು ಮನವಿ ನಿಮ್ಮಲ್ಲಿ. ಇದು ನನ್ನ ಒಬ್ಬನ ಮನವಿಯಲ್ಲ, ಇಡೀ ದೇಶದ ಮನವಿ. ಈ ಕಾನೂನನ್ನು ಜಾರಿಗೆ ತರುವುದಕ್ಕೆ ನಿಮ್ಮ ಬಳಿ ಒಂದು ಸ್ಪಷ್ಟ ಕಾರಣವೂ ಇದೆ, ಇದಕ್ಕೆ ಅಗತ್ಯವಾದ ಸ್ಥಾನಮಾನವೂ ಇದೆ. ಆದ್ದರಿಂದ ನನ್ನ ಮನವಿಯನ್ನು ಮನ್ನಿಸಿ ಈ ಕಾನೂನನ್ನು ಜಾರಿಗೆ ತರುವಲ್ಲಿ ನೀವು ಇನಿಶಿಯೇಷನ್ ತೆಗೆದುಕೊಳ್ಳುತ್ತೀರಾ ಎನ್ನುವುದು ನನ್ನ ಭಾವನೆ. ಪುತ್ತೂರು ಮಹಾಲಿಂಗೇಶ್ವರನ ಕೃಪಾಕಟಾಕ್ಷದಿಂದಲೇ ಈ ಹಂತಕ್ಕೇರಿರುವ ನಿಮ್ಮ ಕೈಯಿಂದ ಮಹಾಲಿಂಗೇಶ್ವರ ದೇಶಕ್ಕೆ ಅತೀ ಅಗತ್ಯವಾಗಿ ಬೇಕಾಗಿರುವ ಈ ಒಳ್ಳೆಯ ಕೆಲಸವನ್ನು ಮಾಡಿಸಲಿ ಎಂದು ಅವನಲ್ಲಿ ಪ್ರಾರ್ಥಿಸುತ್ತೇನೆ.

ಇಂತೀ ನಿಮ್ಮ

ಶಿವಪ್ರಸಾದ್ ಭಟ್
ಪುತ್ತೂರು

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!