ಹದ್ದುಗಳನ್ನು ನೋಡಿದ್ದೀರಾ? ಅದು ಎತ್ತರದಲ್ಲಿ ಹಾರಾಡುತ್ತಿರುತ್ತದೆ. ಆದರೆ ನೆಲದ ಮೇಲಿರುವ ಹೆಣದ ಮೇಲೆ ದೃಷ್ಟಿ ನೆಟ್ಟಿರುತ್ತದೆ. ಅದು ಹಾರುತ್ತಿರುವ ಎತ್ತರದಿಂದ ಭುವಿಯ ದೃಶ್ಯ ಅದೆಷ್ಟು ಸುಂದರವಾಗಿ ಕಂಡೀತು. ಆದರೆ ಅದಕ್ಕೆ ಕೊಳೆತು ನಾರುತ್ತಿರುವ ಹೆಣವೇ ಬೇಕು. ಪಾಪ. ಅದರ ಆಹಾರವೇ ಅದು. ಏನು ಮಾಡುತ್ತೀರಾ ಹೇಳಿ.
ಅಂದ ಹಾಗೆ ಇಷ್ಟೂ ಪೀಠಿಕೆ ಈ ದೇಶದ ಮಾಧ್ಯಮಗಳ ಕುರಿತಂತೆ. ವಿಶ್ವ ಸಾಂಸ್ಕೃತಿಕ ಹಬ್ಬ ಯಮುನಾ ತೀರದಲ್ಲಿ ಅಷ್ಟೊಂದು ಅದ್ದೂರಿಯಾಗಿ ನಡೆಯಿತಲ್ಲ, ಜಗತ್ತಿನ ನೂರೈವತ್ತಕ್ಕೂ ಮಿಕ್ಕಿ ದೇಶಗಳ ಜನ, ನೂರಾರು ದೇಶಗಳ ರಾಜಕೀಯ ನಾಯಕರು, ಧರ್ಮ ಗುರುಗಳು ಬಂದರಲ್ಲ, ಈ ದೇಶದ ಹತ್ತಾರು ಲಕ್ಷ ಜನ ವಿಶ್ವ ಶಾಂತಿಗಾಗಿ ಒಂದೆಡೆ ಸೇರಿದರಲ್ಲ ಇವ್ಯಾವುವೂ ಅವರಿಗೆ ಮಹತ್ವದ ಸುದ್ದಿ ಎನಿಸಲೇ ಇಲ್ಲ. ದಲೈಲಾಮಾ ತಮ್ಮ ಸಂದೇಶ ಕಳಿಸಿ ಭಾರತೀಯ ಪರಂಪರೆ ಬಲು ಆಳವಾದ ಬೇರುಗಳನ್ನು ಹೊಂದಿರುವಂಥದ್ದು; ನಲಂದಾದಿಂದ ಶಿಕ್ಷಣ ಪಡೆದಿರುವ ಅದರ ಶಾಖೆ ನಾವು. ಮತ್ತೊಮ್ಮೆ ಇಲ್ಲಿನ ಆಧ್ಯಾತ್ಮ ವಿಜ್ಞಾನ ಜಗತ್ತನ್ನು ಆಳುವಂತಾಗಲೆಂದು ಉತ್ಕಂಠದಿಂದ ನುಡಿದರಲ್ಲ ಅದನ್ನೂ ಹೆಮ್ಮೆಯಿಂದ ಹೇಳಿಕೊಳ್ಳಬೇಕೆನಿಸಲಿಲ್ಲ. ಜಗತ್ತಿನ ಎಲ್ಲಾ ಸಂಸ್ಕೃತಿಗಳ ಮೂಲಸ್ಥಾನ ಭಾರತವೆಂದು ಪಶ್ಚಿಮದ ರಾಷ್ಟ್ರಗಳೂ ತಮ್ಮ ಅಹಂಕಾರ ಬಿಟ್ಟು ಒಪ್ಪಿಕೊಂಡವಲ್ಲ ಅದೂ ಮಾಧ್ಯಮಗಳಿಗೆ ಮಹತ್ವದ್ದೆನಿಸಲಿಲ್ಲ.
ಇದನ್ನೂ ಓದಿ: ಕೊನೆಗೂ ಗೆದ್ದಿದ್ದು ರಾಜಕೀಯವಲ್ಲ, ಸದ್ಗುರುವಿನ ಆಧ್ಯಾತ್ಮಿಕ ಶಕ್ತಿ ಮಾತ್ರ..!
ಪಾಕಿಸ್ತಾನದಿಂದ ಬಂದ ಧರ್ಮಗುರುವೊಬ್ಬ ತನ್ನ ಮಾತಿನ ಕೊನೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದದ್ದು ಮಾತ್ರ ಬ್ರೇಕಿಂಗ್ ನ್ಯೂಸ್ ಎನಿಸಿಕೊಂಡಿತು. ನ್ಯೂಸ್’ರೂಮ್’ಗಳಲ್ಲಿ ಚರ್ಚೆಗಳ ಭರಾಟೆ ಶುರುವಾಯಿತು. ಕೊಳೆತ ಹೆಣಗಳನ್ನೇ ಅರಸುವ ಹದ್ದುಗಳು ಮಾಧ್ಯಮಗಳೆಂಬುದನ್ನು ಕೊನೆಗೂ ಸಾಬೀತು ಮಾಡಿಕೊಂಡುಬಿಟ್ಟರಲ್ಲ!
ಇಷ್ಟಕ್ಕೂ ಈ ಕಾರ್ಯಕ್ರಮವೇ ವಿಶ್ವಭ್ರಾತೃತ್ವಕ್ಕೆ ಸಂಬಂಧಿಸಿದ್ದು. ವಿಶ್ವಕುಟುಂಬದ ಕಲ್ಪನೆಯನ್ನು ಋಷಿಗಳು ಕೊಟ್ಟಾಗ ಅವರು ಗಡಿಗಳನ್ನು ಮೀರಿ ಜಗತ್ತನ್ನು ಅಪ್ಪಿಕೊಂಡಿದ್ದರು. ಹಾಗಂತ ತಮ್ಮದೆಲ್ಲವನ್ನೂ ಬಿಟ್ಟು ಕೊಟ್ಟು ಬೆತ್ತಲಾಗಿ ಅವರೆದುರು ನಿಲ್ಲಲಿಲ್ಲ. ಸನಾತನ ಸಂಸ್ಕೃತಿಯ ಮೂಲ ಸತ್ವದ ಅಡಿಪಾಯ ಗಟ್ಟಿಯಾಗಿಟ್ಟುಕೊಂಡೇ ಸೌಧ ಕಟ್ಟಿದರು. ಯಾರನ್ನೂ ದೂಷಿಸಲಿಲ್ಲ. ಎಲ್ಲರನ್ನೂ ಗೆಲುವಿನ ಒಡೆಯರನ್ನಾಗಿಸಿದರು. ಈಗಿನ ಪ್ರಯತ್ನ ಅದೇ. ಪಾಕೀಸ್ತಾನದಿಂದ ಬಂದ ಧರ್ಮಗುರು ತನ್ನ ಮಾತಿನ ಕೊನೆಯಲ್ಲಿ ಪಾಕೀಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದಾಗ ಅನೇಕರಿಗೆ ಕಸಿವಿಸಿಯಾಗಿರಲಿಕ್ಕೂ ಸಾಕು. ಕೂಡಲೇ ಎದ್ದು ನಿಂತ ಶ್ರೀಶ್ರೀ ‘ಪಾಕೀಸ್ತಾನ್ ಜಿಂದಾಬಾದ್ ಮತ್ತು ಜೈಹಿಂದ್’ಗಳು ಜೊತೆಯಲ್ಲಿಯೇ ಸಾಗಬೇಕು. ಒಬ್ಬನ ಗೆಲುವೆಂದರೆ ಮತ್ತೊಬ್ಬನ ಸೋಲಲ್ಲ. ಇಬ್ಬರೂ ಗೆಲ್ಲಬೇಕು’ ಎನ್ನುತ್ತ ಮತ್ತೊಮ್ಮೆ ಅವನ ಬಳಿ ಪಾಕಿಸ್ತಾನಕ್ಕೆ ಜಿಂದಾಬಾದ್ ಹೇಳಿಸಿ ತಾವು ಜೈಹಿಂದ್ ಎಂದರು! ಇಡಿಯ ಮೈದಾನ ಕರತಾಡನದ ಶಬ್ದದಿಂದ ತುಂಬಿ ಹೋಯ್ತು. ಸೌಹಾರ್ದತೆಯ, ಸದ್ಭಾವನೆಯ ಸಂದೇಶವನ್ನು ಇದಕ್ಕಿಂತ ಶ್ರೇಷ್ಠ ರೂಪದಲ್ಲಿ ಭಾರತದ ಸಂತನೊಬ್ಬ ಕೊಡಲು ಸಾಧ್ಯವೇ ಇರಲಿಲ್ಲ! ಬಹುಶಃ ಈ ಕಾರಣಕ್ಕೆ ಕಾರ್ಯಕ್ರಮದ ಮೂರನೆಯ ದಿನ ಕೇಂದ್ರ ರೇಲ್ವೆ ಸಚಿವ ಶ್ರೀ ಸುರೇಶ್ ಪ್ರಭು ಮಾತನಾಡಿ, ‘ವಿಶ್ವಸಂಸ್ಥೆ ಮಾಡಬೇಕಾದ ಕೆಲಸವನ್ನೂ ಆರ್ಟ್ ಆಫ್ ಲಿವಿಂಗ್ ಮಾಡುತ್ತಿದೆ’ ಎಂದ ಮಾತು ಮನಸೆಳೆಯುವಂತಿತ್ತು. ಅಲ್ಲವೇ ಮತ್ತೆ? ಇಂತಹ ಕೆಲಸವನ್ನು ಚರ್ಚ್’ನ ಪೋಪ್ ಮಾಡಿಸಲಾರ, ಅರಬ್’ನ ಮೌಲ್ವಿಗಳು ಮಾಡಿಸಲಾರರು. ಆ ತಾಕತ್ತು ಭಾರತದ, ಸನಾತನ ಧರ್ಮದ ಆಳ-ಅಗಲಗಳನ್ನೂ ಅರಿತ ಋಷಿಯೊಬ್ಬನಿಗೆ ಮಾತ್ರ ಇರಲು ಸಾಧ್ಯ! ಬಿಡಿ. ಹುಳುಕು ಹುಡುಕುತ್ತಲೇ ಬದುಕು ಸವೆಸುವ ಅಂಡೇಪಿರ್ಕಿಗಳಿಗೆ ಉತ್ತರ ಕೊಡುತ್ತ ಕೂತರೆ ರಾಷ್ಟ್ರ ಕಟ್ಟುವ ಕಾರ್ಯಕ್ಕೆ ಹಿನ್ನೆಡೆಯಾದೀತು.
ಶ್ರೀ ರವಿಶಂಕರ್ ಗುರೂಜಿಯವರ ಮುಖ ಎಂದಿನಂತೆ ಮಂದಸ್ಮಿತವೇ. ನ್ಯಾಶನಲ್ ಗ್ರೀನ್ ಟ್ರಿಬ್ಯೂನಲ್’ನ ಆದೇಶ ಪ್ರತಿಕೂಲವಾಗಿ ಬಂದಾಗಲೂ ಬರ್ಖಾದತ್’ಳೊಂದಿಗೆ ನಗು ನಗುತ್ತ ಮಾತನಾಡಿದವರು ಅವರು. ಅವರೊಳಗೊಂದು ಮುಗ್ಧ ಮಗು ಕೂತಿದೆ. ಈ ವಿಶ್ವ ಹಬ್ಬದ ಮೂರನೇ ದಿನವೂ ಆ ಮಗುವಿನದ್ದೇ ಕಾರುಬಾರು. ಬಂದ ಗಣ್ಯರನ್ನು ಸ್ವಾಗತಿಸುತ್ತ, ಹಾಡಿಗೆ ತಲೆದೂಗುತ್ತ, ನರ್ತನವನ್ನು ಮೈಯೆಲ್ಲಾ ಕಣ್ಣಾಗಿ ನೋಡುತ್ತ, ನೆರೆದಿದ್ದ ಜನರ ಆನಂದಕ್ಕೆ ತಾವೂ ಸ್ಪಂದಿಸುತ್ತ, ಶ್ರೀಶ್ರೀ ಹೊಸ ಲೋಕವನ್ನೇ ಸೃಷ್ಟಿಸಿದ್ದರು. ಬಹುಶಃ ಅನೇಕ ಶತಮಾನಗಳ ನಂತರ ಯಮುನೆ ತನ್ನೊಡಲನ್ನು ಬಯಲಾಗಿಸಿಕೊಂಡು ಆಸ್ತಿಕರೆದುರು ತೆರೆದುಕೊಂಡಿತ್ತು.
ಅಂತಿಮ ದಿನವೆಂತಲೋ ಏನೋ? ಹಿಂದಿನೆರಡೂ ದಿನಗಳಿಗಿಂತ ಹೆಚ್ಚು ಜನ ಸೇರಿದ್ದರು. ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ‘ಜೀವನದಲ್ಲಿಯೇ ಇಷ್ಟು ದೊಡ್ಡ ಸಮಾರಂಭ ನೋಡಲೇ ಇಲ್ಲ’ ಎಂದು ಉದ್ಗರಿಸಿದ್ದಕ್ಕೆ ಖಂಡಿತ ಕಾರಣವಿತ್ತು. ಸುಮಾರು ಎರಡೂವರೆಯ ವೇಳೆಗಾಗಲೇ ಕಾರ್ಯಕ್ರಮದತ್ತ ಸಾಗುವ ಎಲ್ಲಾ ಮಾರ್ಗಗಳೂ ಗಿಜಿಗುಡಲಾರಂಭಿಸಿದ್ದವು. ಮೊದಲ ದಿನ ಮುಸಲಧಾರೆ, ಎರಡನೆ ದಿನ ಮೋಡ-ತುಂತುರು ಹನಿ. ಕೊನೆಯ ದಿನ ಶುಭ್ರ ನೀಲಾಕಾಶ, ಬಿರು ಬಿಸಿಲು. ಪ್ರಕೃತಿ ಯಾವುದೋ ಅವ್ಯಕ್ತ ಸಂದೇಶ ಕೊಡಲೆತ್ನಿಸಿತ್ತಾ? ಬಹುಶಃ ಅಂತರ್ಗಣ್ಣುಗಳು ಮಾತ್ರ ಅರಿಯಬಲ್ಲವೇನೋ?
ಕಾರ್ಯಕ್ರಮದ ಆರಂಭವೇ ‘ದಮಾದಮ್ ಮಸ್ತ್ ಕಲಂದರ್’ ಎಂಬ ಸೂಫಿ ಗೀತೆಯಿಂದ. ಗೀತೆ ಸೂಫಿಗಳದ್ದು, ಸಂಗೀತ ಭಾರತದ್ದು. ಹಾಡಿಗೆ ಹೆಜ್ಜೆ ಹಾಕಿ ಕುಣಿದವರಲ್ಲಿ ಪಶ್ಚಿಮದವರೂ ಇದ್ದರು. ಓಹ್! ಅನುಭವಿಸಬಲ್ಲವನಿಗೆ ಇಷ್ಟೇ ಸಾಕು. ಅದಾಗುತ್ತಿದ್ದಂತೆ ನೂರಾರು ಬಂಗಾಳಿ ಕಲಾವಿದರು ಕೈಲಿ ಚೈತನ್ಯರ ಶ್ರೀ ಖೋಲೂ ಹಿಡಿದು ನುಡಿಸುತ್ತ ಮಿಂಚಿನ ಸಂಚಾರವಾಗುವಂತೆ ಮಾಡಿದರು. ನ್ಯೂಜಿಲೆಂಡಿನ ಜನರ ನಾಟ್ಯ, 1700 ಜನ ಆಂಧ್ರದ ಹೆಣ್ಣು ಮಕ್ಕಳಿಂದ ಕೂಚಿಪುಡಿ ನೃತ್ಯ ಆಕರ್ಷಣೀಯವಾಗಿತ್ತು.
ಬಹುಶಃ ಕೊನೆಯ ದಿನವಾಗಿದ್ದರಿಂದಲೋ ಏನೋ? ರಾಜಕಾರಣಿಗಳು ದೊಡ್ಡ ಸಂಖ್ಯೆಯಲ್ಲಿದ್ದರು. ಕೆಲವರು ಮನ ಮುಟ್ಟುವಂತೆ ಮಾತನಾಡಿದರೂ ಕೂಡ. ತಮ್ಮ ಎಂದಿನ ಶೈಲಿಯ ಪ್ರಾಸಬದ್ಧ ಮಾತುಗಳಿಂದ ಚಪ್ಪಾಳೆಗಿಟ್ಟಿಸಿದ ಶ್ರೀ ವೆಂಕಯ್ಯನಾಯ್ಡು, ಯಮುನೆಯ ಹೆಸರಲ್ಲೂ ರಾಜಕೀಯ ಮಾಡಿದವರನ್ನು ಟೀಕಿಸಿ ಮಾತನಾಡಿದ ಶ್ರೀ ಅಮಿತ್ ಷಾಹ್, ಠೀಕುಠಾಕು ಮಾತನ್ನು ಕ್ಲುಪ್ತವಾಗಿ ಮುಗಿಸಿದ ಶ್ರೀ ಅರುಣ್ ಜೇಟ್ಲಿ ಪ್ರಮುಖರು. ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲರೂ ವೇದಿಕೆಯಲ್ಲಿದ್ದರು. ತಮ್ಮ ಮಾತಿನಲ್ಲಿ ಎಂದಿನ ಕೇಂದ್ರ ಕುಟುಕು ಪುರಾಣವನ್ನು ಮುಂದುವರೆಸಿದ್ದರು!
ಇದನ್ನೂ ಓದಿ: ಆಮ್ ಆದ್ಮಿಗಳು ಒಬ್ಬರೂ ಇರಲಿಲ್ಲ, ಎಲ್ಲರೂ ಖಾಸ್ ಆದ್ಮಿಗಳೇ..!
ಇಂಗ್ಲೇಂಡಿನ ಪ್ರಧಾನಿ ಡೆವಿಡ್ ಕೆಮರೂನ್ ಪರವಾಗಿ ಬಂದಿದ್ದ ಅಲ್ಲಿನ ಪಾರ್ಲಿಮೆಂಟಿನ ಸದಸ್ಯರು ಪ್ರಧಾನಿಯ ಸಂದೇಶವನ್ನು ಮುಟ್ಟಿಸಿದರು. ಶ್ರೀಶ್ರೀಯವರು ಲಂಡನ್’ನ ಹೌಸ್ ಆಫ್ ಕಾಮನ್ಸ್’ನಲ್ಲಿ ಬಂದು ತಮ್ಮ ಮಾತುಗಳಿಂದ ಸಂಪ್ರೀತಗೊಳಿಸಬೇಕೆಂದು ಪ್ರಧಾನಿಯವರು ಕೋರಿಕೊಂಡಿದ್ದಾರೆಂಬುದನ್ನು ಸೇರಿಸಲು ಮರೆಯಲಿಲ್ಲ. ಅಮೇರಿಕಾ ಸರ್ಕಾರದ ಪರವಾಗಿ ಬಂದಿದ್ದ ಅಧಿಕಾರಿಗಳು, ಚುನಾಯಿತ ಸದಸ್ಯರು ಅಲ್ಲಿನ ಸಂಸತ್ ಭವನದ ಮೇಲೆ ಕಳೆದ ವಾರ ಹಾರಾಡಿದ್ದ ಅಮೇರಿಕಾ ಧ್ವಜವನ್ನು ಶ್ರೀಶ್ರೀಗಳಿಗೆ ಕೊಟ್ಟು ಗೌರವ ಪ್ರದಾನ ಮಾಡಿದರು.
ಪ್ರಾಮಾಣಿಕವಾಗಿ ಹೇಳಿ. ಈ ಪರಿಯ ಗೌರವ ಸದ್ಯದ ಪರಿಸ್ಥಿತಿಯಲ್ಲಿ ಯಾರಿಗಾದರೂ ಸಿಕ್ಕಿದ್ದನ್ನು ಕೇಳಿದ್ದೀರಾ? ಭಾರತೀಯ ಸಂತರೊಬ್ಬರನ್ನು ಜಗತ್ತು ಈ ಪರಿ ಮುತ್ತಿಕೊಳ್ಳುವುದನ್ನು ಕಂಡಾಗಲೂ ಹೆಮ್ಮೆಯಾಗದಿದ್ದರೆ ಅಂಥವರನ್ನು ಏನೆಂದು ಕರೆಯಬೇಕು ಹೇಳಿ!
ಇಡಿಯ ಕಾರ್ಯಕ್ರಮದ ಹೈಲೈಟು ಅಂದರೆ ನಾಲ್ಕೂಮುಕ್ಕಾಲು ಸಾವಿರ ಜನ ಒಂದೇ ವೇದಿಕೆಯಲ್ಲಿ ಮಾಡಿದ ನೃತ್ಯ. ಅದರಲ್ಲಿ ಪಂಜಾಬಿನ ಭಾಂಗಡಾ ಇತ್ತು; ಗುಜರಾತಿನ ಗರ್ಬಾ ಕೂಡ ಇತ್ತು. ಇಂಗ್ಲೆಂಡು-ನ್ಯೂಜಿಲೆಂಡುಗಳ ಪಶ್ಚಿಮದ ಶೈಲಿಯ ನರ್ತನವಿತ್ತು, ಪಕ್ಕಾ ಶಾಸ್ತ್ರೀಯ ನೃತ್ಯವೂ ಇತ್ತು. ಕನಿಷ್ಠ 28 ವಿವಿಧ ಬಗೆಯ, ವಿವಿಧ ಪ್ರದೇಶದ ನೃತ್ಯ ಗುಂಪುಗಳು ಒಂದು ಹಾರವಾಗಿ ಪೋಣಿಸಲ್ಪಟ್ಟಿದ್ದವು. ‘ಮುಮುಕ್ಷುವಿನ ಯಾತ್ರೆ’ ಎಂಬ ಹೆಸರಿನ ಈ ನೃತ್ಯ ಸೃಷ್ಟಿಯ ಆದಿಯ ರಹಸ್ಯವನ್ನು ಭೇದಿಸುತ್ತ, ಮನಸ್ಸಿನ ಆಳಕ್ಕಿಳಿದು ಅದನ್ನು ಹಿಡಿತಕ್ಕೆ ತಂದುಕೊಳ್ಳುವಲ್ಲಿ ಅಂತರಂಗ ಶಕ್ತಿಯ ಅನಾವರಣ ಮಾಡುವುದನ್ನು ಮನೋಜ್ಞವಾಗಿ ಪ್ರತಿಪಾದಿಸಿತು. ನೃತ್ಯದ ಕೊನೆಯಲ್ಲಿ ಭಾಂಗ್ರಾ ತಾಳಕ್ಕೆ ಎಲ್ಲ ನರ್ತಕರೂ ತಮ್ಮದೇ ಆದ ರೀತಿಯಲ್ಲಿ ನರ್ತಿಸುವಾಗ ಇಡಿಯ ಮೈದಾನ ಎದ್ದು ಕುಣಿಯುತ್ತಿತ್ತು.
ಭಾವುಕರಾದ ಶ್ರೀ ರವಿಶಂಕರ್ ಗುರೂಜಿ ಅಂತರ್ಜಾಲದ ಮೂಲಕವೇ ನೃತ್ಯಾಭ್ಯಾಸ ಮಾಡಿ ವೇದಿಕೆಯ ಮೇಲೆ ಪ್ರದರ್ಶನ ನೀಡಿದ ಅಷ್ಟೂ ಕಲಾವಿದರನ್ನು ಅಭಿನಂದಿಸಿ ವಿಶ್ವ ಶಾಂತಿಗಾಗಿ ಧ್ಯಾನ ಮಾಡುವಂತೆ ನೆರೆದಿದ್ದ ಅಷ್ಟೂ ಜನರನ್ನು ಅಣಿಗೊಳಿಸಿದರು. ಸುಮಾರು ಹತ್ತು ಲಕ್ಷ ಜನ ಏಕಕಾಲಕ್ಕೆ ಪೂರ್ಣ ಶಾಂತವಾಗಿ ಶ್ರೀ ಶ್ರೀಯವರ ಸುಮಧುರ ಕಂಠಕ್ಕೆ ಮನಸ್ಸನ್ನು ಏಕಗೊಳಿಸಿ ಹೃತ್ಕಮಲದಲ್ಲಿ ವಿಶ್ವ ಶಾಂತಿಯನ್ನು ಧ್ಯಾನಿಸಿದರಲ್ಲ, ಅಲ್ಲಿ ಅದ್ಭುತವಾದ ಆಧ್ಯಾತ್ಮಿಕ ಕ್ರಿಯೆ ನಡೆದಿತ್ತು. ವಿಶ್ವ ಸಾಂಸ್ಕೃತಿಕ ಹಬ್ಬಕ್ಕೆ ಇದಕ್ಕಿಂತಲೂ ಸುಂದರವಾಗಿ ತೆರೆ ಎಳೆಯಲು ಸಾಧ್ಯವಿತ್ತೇ, ಹೇಳಿ! ಭಾರತದಿಂದ ಶುರುವಾದ ಶಾಂತಿ ಪ್ರಕ್ರಿಯೆ ಧ್ಯಾನದ ಮೂಲಕವೇ ತುದಿ ತಲುಪಬೇಕಿತ್ತು. ಶ್ರೀ ರವಿಶಂಕರ್ ಗುರೂಜಿ ಅದನ್ನು ಯಶಸ್ವಿಯಾಗಿ ಮಾಡಿ ಮುಗಿಸಿದರು.
ಧ್ಯಾನದ ನಂತರ ಮನಸ್ಸು ಶಾಂತವಾಗಬೇಕು. ಆದರೇನು ಮಾಡೋದು? ಇಂದಿನ ರಾಜಕೀಯದ ಕಲಸು ಮೇಲೋಗರದ ನಡುವೆ ಶಾಂತಿ ಎಲ್ಲಿಂದ? ಈಗ ಗ್ರೀನ್ ಟ್ರಿಬ್ಯುನಲ್’ಗೆ 5 ಕೋಟಿ ಕಟ್ಟಬೇಕಿದೆ. ಅದು ದಂಡವಾದರೆ ನಾನು ಅದನ್ನು ಪಾವತಿಸುವ ಬದಲು ಜೈಲಿಗೆ ಹೋಗಲಿಚ್ಛಿಸುತ್ತೇನೆ ಎಂದಿದ್ದರು ಶ್ರೀಶ್ರೀ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಬರಾಕ್ ಒಬಾಮಾನ ಆಧ್ಯಾತ್ಮಿಕ ಗುರುವೊಬ್ಬರು ವೇದಿಕೆಯ ಮೇಲಿಂದ ಘರ್ಜಿಸಿದ್ದರು, ‘ನೀವು ಜೈಲಿಗೆ ಹೋಗುವಾಗ ಹೇಳಿ, ನಾನೂ ನಿಮ್ಮೊಡನೆ ಬರುತ್ತೇನೆ’. ಭಾರತದ ಸಂತನ ಕುರಿತಂತೆ ಜಗತ್ತಿಗೆ ಗೌರವವಿದೆ, ಕಳಕಳಿಯಿದೆ. ಆತನ ಕರೆಗೆ ಜಗತ್ತಿನ ಮೂಲೆ ಮೂಲೆಯಿಂದ ಜನರು ಬಿಡಿ, ಸರ್ಕಾರದ ಪ್ರತಿನಿಧಿಗಳೇ ಧಾವಿಸಿ ಬರುತ್ತಾರೆ. ನಾವು ಮಾತ್ರ ಅನುಮಾನದ ಕಂಗಳಿಂದ ನೋಡುತ್ತೇವೆ. ಆಧ್ಯಾತ್ಮ ಸಾಧಕರನ್ನು ನಿಂದಿಸುತ್ತೇವೆ.
ಹೌದು. ಸ್ವಾಮಿ ವಿವೇಕಾನಂದರು ಸರಿಯಾಗಿಯೇ ಹೇಳಿದ್ದರು. ‘ಜವಾಬ್ದಾರಿಯುತ ಮನುಷ್ಯರನ್ನು ಸೃಷ್ಟಿಸದೇ ಪಡೆದ ಸ್ವಾತಂತ್ರ್ಯ ಬಲಶಾಲಿಯಾಗಿರಲಾರದು’ ಅಂತ. ನಮ್ಮ ಮನಸ್ಸುಗಳನ್ನು ಶುದ್ಧ ನೀರಿನಿಂದ ಮತ್ತೆ ಮತ್ತೆ ತೊಳೆದುಕೊಳ್ಳಬೇಕಿದೆ. ಆರ್ಟ್ ಆಫ್ ಲಿವಿಂಗ್ ಅನ್ನೂ ಸರಿಯಾಗಿ ಕಲಿಯಬೇಕಿದೆ!
ವಿಶ್ವ ಸಾಂಸ್ಕೃತಿಕ ಮೇಳದ ಟೇಕ್ ಹೋಮ್ ಮೆಸೇಜ್ ಇದೇ ಇರಬೇಕು!