Featured ಪ್ರಚಲಿತ

ಆಮ್ ಆದ್ಮಿಗಳು ಒಬ್ಬರೂ ಇರಲಿಲ್ಲ, ಎಲ್ಲರೂ ಖಾಸ್ ಆದ್ಮಿಗಳೇ..!

ಅನುಭವಗಳು ಪಾಠ ಕಲಿಸುತ್ತವೆ. ಕಲಿತಿಲ್ಲದವನು ಬದುಕಿನ ಆನಂದ ಸವಿಯೋದು ಸಾಧ್ಯವಿಲ್ಲ’. ಇದನ್ನು ಅರಿಯಲು ಆರ್ಟ್ ಆಫ್ ಲಿವಿಂಗ್ನ ಪಾಠವೇ ಬೇಕಿಲ್ಲ. ಬದುಕಿನ ಹಾದಿಯಲ್ಲಿ ನಡೆವ ಪ್ರತಿಯೊಬ್ಬನಿಗೂ ಇದರ ಅರಿವು ಇದ್ದೇ ಇರುತ್ತದೆ. ನಾನು ಹೇಳಬೇಕೆಂದಿದ್ದು ಆಧ್ಯಾತ್ಮದ ಯಾವುದೋ ಘನವಾದ ತತ್ತ್ವವಲ್ಲ; ವಿಶ್ವ ಸಾಂಸ್ಕೃತಿಕ ಮಹೋತ್ಸವದ ಎರಡನೆಯ ದಿನದ ಜನರ ಓಟ, ಧಾವಂತದ ಪರಿ ಅಷ್ಟೇ.

ಮೊದಲ ದಿನ ಸುರಿದ ಮಳೆ, ಟ್ರಾಫಿಕ್ ಜಾಮ್’ನಿಂದ ಜನ ಪಾಠ ಕಲಿತಂತಿತ್ತು. ನಾನೂ ಕೂಡ. ಸಂಜೆಯಾಗುವುದಕ್ಕೆ ಬಲು ಮುನ್ನವೇ ಕೋಣೆಯಿಂದ ಹೊರಬಿದ್ದೆ. ಐ.ಎನ್.ಎಯಿಂದ, ರಾಜೀವ್ ಚೌಕ್’ಗೆ. ಅಲ್ಲಿ ನೀಲಿ ಲೈನ್’ಗೆ ಪಥ ಬದಲಾಯಿಸಿಕೊಂಡು ಅಕ್ಷರಧಾಮಕ್ಕೆ. ಮೆಟ್ರೊ ತುಂಬೆಲ್ಲಾ ಈ ಕಾರ್ಯಕ್ರಮದ ಕಲರವವೇ. ನನ್ನಂತೆ ಪಾಠ ಕಲಿತವರು ಬಹಳ ಮಂದಿ ಇದ್ದರು. ಹಲದಿರಾಮ್’ಲ್ಲಿ ಊಟ ಮುಗಿಸಿ ಆಟೋ ಹಿಡಿದು ಗೇಟ್ 5 ರ ಬಳಿ ಬಂದು ನಿಂತಾಗ ಮುಖ್ಯ ಕಾರ್ಯಕ್ರಮಕ್ಕಿನ್ನೂ ಎರಡೂವರೆ ಗಂಟೆ ಬಾಕಿ ಇತ್ತು. ಹಾಗಂತ ನಾವೇ ಮೊದಲೇನಲ್ಲ. ಅದಾಗಲೇ ಕಾಲು ಭಾಗದಷ್ಟು ಜನ ತಂತಮ್ಮ ಸ್ಥಳಗಳಲ್ಲಿ ಕುಂತಾಗಿತ್ತು. ಬಿರು ಬಿಸಿಲು ಮುಂಚಿನ ದಿನಕ್ಕೆ ವ್ಯತಿರಿಕ್ತವಾದ ಪ್ರಕೃತಿಯ ದರ್ಶನ ಮಾಡಿಸಿತ್ತು. ವಿದೇಶಿಗರೂ ಛತ್ರಿ ಹಿಡಿದು ನೆರಳು ಮಾಡಿಕೊಂಡು ಕಾಯುತ್ತ ಕುಳಿತಿದ್ದುದು ಕಣ್ಣಿಗೆ ಹಬ್ಬವೇ ಸರಿ.

ಮೊದಲ ದಿನದ ಕಾರ್ಯಕ್ರಮ ಕಣ್ಣಿಗೆ ಬಿದ್ದಷ್ಟು ಪುಣ್ಯ, ಕಿವಿಗೆ ಕೇಳಿದಷ್ಟು ಭಾಗ್ಯ ಎನ್ನುವಂತಿತ್ತು. ಆದರೀಗ ಹಾಗಿಲ್ಲ. ಬಿಸಿಲಾದರೂ ಸರಿ ವೇದಿಕೆ, ಮೈದಾನ ಪೂರ್ಣ ಕಣ್ತುಂಬಿಕೊಳ್ಳುವಂತಿತ್ತು. ಒಟ್ಟಾರೆ 7 ಎಕರೆಗೆ ಹರಡಿಕೊಂಡ ವಿಸ್ತಾರವಾದ ವೇದಿಕೆ ಅದು. ಕನಿಷ್ಠ 20ಸಾವಿರ ಜನ ಏಕಕಾಲಕ್ಕೆ ಕುಳಿತುಕೊಳ್ಳಬಹುದಾದದ್ದು. ಅದರ ಮಧ್ಯಕ್ಕೆ ರಾಜಸ್ತಾನೀ ಶೈಲಿಯ ಕಳಸಗಳು. ನಮ್ಮ ಮತ್ತು ಈ ವೇದಿಕೆಯ ನಡುವೆ ಕಲಾಕಾರರಿಗೆಂದೇ ವಿಶಾಲವಾದ ಹಜಾರ! ವಿಶಾಲ ಎಂಬ ಪದವೂ ಚಿಕ್ಕದಾದೀತೇನೋ. ಅಷ್ಟು ಬೃಹತ್ತಾದುದು ಅದು. ಏಕಕಾಲಕ್ಕೆ 2ಸಾವಿರ ಜನ ನರ್ತಿಸಬಹುದಾದಷ್ಟು ಅಗಾಧ.

ಇದನ್ನೂ ಓದಿ: ಕೊನೆಗೂ ಗೆದ್ದಿದ್ದು ರಾಜಕೀಯವಲ್ಲ, ಸದ್ಗುರುವಿನ ಆಧ್ಯಾತ್ಮಿಕ ಶಕ್ತಿ ಮಾತ್ರ..!

ಇನ್ನು ಮೈದಾನದಲ್ಲಿ 10ಲಕ್ಷ ಜನ ಸೇರಬಹುದಾದಷ್ಟು ಜಾಗ, ಕನಿಷ್ಠ ಪಕ್ಷ ಸಾವಿರ ಎಕರೆ! ಸಾವಿರ ಜನಕ್ಕಾಗುವಷ್ಟು ಸೋಫಾ, ಆದ ಮೇಲೆ ಲಕ್ಷಗಳ ಸಂಖ್ಯೆಯಲ್ಲಿ ಹರಡಿಕೊಂಡ ಕುರ್ಚಿಗಳು. ಒಳಪ್ರವೇಶಕ್ಕೆ ಒಟ್ಟು 13 ಗೇಟುಗಳು. ಒಂದನೇ ಗೇಟಿನಿಂದ 13 ನೇ ಗೇಟಿನವರೆಗೆ ಪರಿಧಿಯಲ್ಲಿ ಒಂದು ಸುತ್ತು ಬಂದರೆ ಅಂದಾಜು 6 ಕಿ.ಮೀ ಆದರೂ ಆದೀತು.
ಬೆಳಗಿನಿಂದ ಸೂರ್ಯ ಪ್ರಖರವಾಗಿ ಉರಿದಿದ್ದರಿಂದ ನಿನ್ನೆಯಷ್ಟು ರಾಡಿ ಇರಲಿಲ್ಲ. ಜಲ್ಲಿ ಕಲ್ಲುಗಳನ್ನು ಅಲ್ಲಲ್ಲಿ ಹಾಕಿ ಮಟ್ಟಸ ಮಾಡುವ ಪ್ರಯತ್ನವನ್ನೂ ಕಾರ್ಯಕರ್ತರು ಮಾಡಿದ್ದರು.

ಇವೆಲ್ಲದರ ನಡುವೆ ವೇದಿಕೆಯ ಮೇಲೆ, ಹಜಾರದಲ್ಲಿ ತಯಾರಿಯಂತೂ ನಡೆದೇ ಇತ್ತು. ಮಹಾರಾಷ್ಟ್ರದ ಸುಮಾರು 2 ಸಾವಿರ ತರುಣರು ಢೋಲು ಹಿಡಿದು ಅಭ್ಯಾಸ ಮಾಡುತ್ತಿದ್ದರು. ಅವರು ಕಟ್ಟಿದ ಹಳದಿ ಮತ್ತು ಕೆಂಪು ಮುಂಡಾಸುಗಳು ಕನ್ನಡದ ಬಾವುಟವನ್ನು ನೆನಪಿಗೆ ತಂದದ್ದಂತೂ ದಿಟವೇ. ಏನು ಮಾಡೋದು, ವಿಶ್ವ ಮಾನವತೆಯ ಮಾತನಾಡಿದರೂ ನಿಂತ ನೆಲ ಬಿಡಲಾಗುವುದೇನು? ಕಾರ್ಯಕ್ರಮ ನಿಗದಿತ ಸಮಯಕ್ಕೆ ಸರಿಯಾಗಿ ಶುರುವಾದದ್ದು ಈ ವಾದ್ಯವೃಂದದಿಂದಲೇ. ಸಾವಿರ-ಸಾವಿರ ಸಂಖ್ಯೆಯ ಢೋಲು- ನಗಾರಿಗಳು, ಕಹಳೆ ಕಿವಿಗಡಚಿಕ್ಕುವ ದನಿ, ಆಗಾಗ ಎರಚುತ್ತಿದ್ದ ಅರಿಶಿಣ ಪುಡಿ ಇಡಿಯ ವಾತಾವರಣವನ್ನೇ ಬದಲಾಯಿಸಿಬಿಟ್ಟಿತ್ತು. ಅರಿಶಿಣ ನಂಜು ನಿರೋಧಕವಂತೆ. ದೆಹಲಿಯ, ಆ ಮೂಲಕ ದೇಶದ ನಂಜನ್ನೂ ಅದು ದೂರ ಮಾಡಲೆಂಬಂತೆ ಎರಚಿದಂತಿತ್ತು.

ವಿಶ್ವ ಸಾಂಸ್ಕೃತಿಕ ಮಹೋತ್ಸವದ ಒಟ್ಟಾರೆ ಉದ್ದೇಶವೇ ಜೊತೆಯಲ್ಲಿ ಸಾಗೋಣ ಅನ್ನೋದು. ವಿಶ್ವ ಭ್ರಾತೃತ್ವದ ಈ ಕಲ್ಪನೆಗೆ ಮೂಲವೇ ವೇದ. ವಸುಧೈವ ಕುಟುಂಬಕಂನ ಮೂಲಕ ವಿಶ್ವ ಕುಟುಂಬಿಯಾಗುವ ಕಲ್ಪನೆ ಕಟ್ಟಿಕೊಟ್ಟಿದ್ದ ಋಷಿಗಳೇ ‘ಸಂಗಚ್ಛಧ್ವಂ’ ಎನ್ನುವ ಮೂಲಕ ಜೊತೆಗೂಡಿ ಸಾಗುವ ಮಾರ್ಗವನ್ನು ತೋರಿಕೊಟ್ಟರು. ಆ ಮಾರ್ಗದಲ್ಲಿ ನಡೆದರೆ ಅದೇ ಆರ್ಟ್ ಆಫ್ ಲಿವಿಂಗ್! ಶ್ರೀ ರವಿಶಂಕರ್ ಗುರೂಜಿ ಹಾಗೆ ಪ್ರೇಮದಿಂದ ಕೈ ಕೈ ಹಿಡಿದು ನಡೆಯಬಹುದಾದ ಸುಲಭದ ಮಾರ್ಗ ತೋರಿಕೊಟ್ಟರು. ಅದಕ್ಕೆಂದೇ ಇಂದು 150 ದೇಶಗಳಿಂದ ಲಕ್ಷಾಂತರ ಜನ ಒಂದೆಡೆ ಸೇರಿ ಕೈ ಹಿಡಿದು ನಿಲ್ಲಲು ಸಾಧ್ಯವಾಗಿರೋದು. ಅದಕ್ಕೇ ಈ ಕಾರ್ಯಕ್ರಮ ಬಲು ವಿಶೇಷ. ಜಗತ್ತೆಲ್ಲಾ ಕೈ ಕೈ ಮಿಲಾಯಿಸಲು ತಯಾರಾಗಿ ನಿಂತಿರುವಾಗ ಕೈ ಹಿಡಿದು ಪ್ರೇಮದಿಂದ ನರ್ತಿಸುವಂತೆ, ಸಮಸಮಕ್ಕೆ ನಡೆಸುವಂತೆ ಮಾಡುವ ತಾಕತ್ತು ಭಾರತಕ್ಕೆ ಮಾತ್ರ. ಹೀಗಾಗಿ ಈ ಕಾರ್ಯಕ್ರಮದ ಥೀಮ್ ಸಾಂಗ್ ‘ಸಂಗಚ್ಛಧ್ವಂ’. ಅದನ್ನು ಹಾಡುವ ಮೂಲಕ ಕಾರ್ಯಕ್ರಮ ಅಧಿಕೃತ ಆರಂಭ ಕಂಡಿತು.

ಇಂದಿನ ಕಾರ್ಯಕ್ರಮ ಸಂತ ಸಮಾಗಮ. ಕನಿಷ್ಠ ಒಂದು ಸಾವಿರ ಭಿನ್ನ ಭಿನ್ನ ಜಾತಿ, ಮತ, ಪಂಥಗಳ, ಬೇರೆ ಬೇರೆ ದೇಶಗಳ ಸಜ್ಜನರ ಗುರುಗಳ ಸಮಾಗಮ. ಏಷ್ಯಾದಿಂದ ಹಿಡಿದು ಅಮೇರಿಕಾದವರೆಗೆ ಅನೇಕ ಖಂಡಗಳ, ಅನೇಕ ದೇಶಗಳ ಸಂತರು ವೇದಿಕೆಯ ಮೇಲಿದ್ದರು. ಇವೆಲ್ಲದರ ನಡುವೆ ನಮ್ಮ ಹೆಮ್ಮೆ ನೂರ್ಮಡಿಗೊಳ್ಳುವಂತೆ ಮೊದಲು ಮಾತನಾಡಿದವರು ಸುತ್ತೂರಿನ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು. ಅವರ ನಂತರದ ಸರದಿ ನಿರ್ಮಲಾನಂದನಾಥ ಸ್ವಾಮಿಗಳದ್ದು. ಇಬ್ಬರೂ ಅಂತರರಾಷ್ಟ್ರೀಯ ಶಾಂತಿಗೆ ಒತ್ತು ಕೊಟ್ಟು ಅದನ್ನು ಸಾಧಿಸುವ ಶಕ್ತಿ ಆಧ್ಯಾತ್ಮಕ್ಕಿದೆ ಎಂಬುದನ್ನು ಸಮರ್ಥವಾಗಿ ಪ್ರತಿಪಾದಿಸಿದರು.

ಆಮೇಲೆ ಮತ್ತೊಂದಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳ ಸರಮಾಲೆ. 8 ಸಾವಿರ ಜನ ವಾದ್ಯವೃಂದದವರೊಂದಿಗೆ ಹಾಡಿದ ಗೀತೆಯಂತೂ ಇಡಿಯ ಸಭೆಯನ್ನು ಕುಣಿಯಲು ಪ್ರೇರೇಪಿಸಿಬಿಟ್ಟಿತು. ಮೊಬೈಲಿನ ಲೈಟುಗಳನ್ನು ಹಾಕಿಕೊಂಡು ಲಕ್ಷಾಂತರ ಜನ ತಲೆತೂಗುವುದನ್ನು ನೋಡುವುದೇ ಆನಂದ!
ಸಿಕ್ಕಿಂ, ಝಾರ್ಖಂಡ್ಗಳ ಜಾನಪದ ನೃತ್ಯಗಳು ಮನಸೂರೆಗೊಂಡರೆ ಸಿಂಗಾಪೂರ, ಚೀನಾಗಳಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ಗಾಯಕರು ಚೀನೀ ಗೀತೆ ಹಾಡುವಾಗ ನನ್ನ ಕಣ್ಣಂಚಂತೂ ಒದ್ದೆಯಾಗಿಬಿಟ್ಟಿತ್ತು. ಚೀನಾ ದೈಹಿಕವಾಗಿ ನಮ್ಮನ್ನೇರಿ ಕೂರಲು ಶತಪ್ರಯತ್ನ ಮಾಡುತ್ತಿದ್ದರೆ, ಇತ್ತ ಭಾರತದ ಆಧ್ಯಾತ್ಮ ನಿಶ್ಯಬ್ಧವಾಗಿ ಚೀನಿ ಮನಸ್ಸುಗಳನ್ನು ಆಕ್ರಮಿಸಿಕೊಂಡುಬಿಟ್ಟಿದೆಯಲ್ಲ ಅನ್ನೋದು ಒಂದು ಕ್ಷಣ ನನ್ನನ್ನು ಭಾವುಕನನ್ನಾಗಿಸಿಬಿಟ್ಟಿತ್ತು.

ನನ್ನ ಬದಿಯಲ್ಲಿಯೇ ಕುಳಿತಿದ್ದ ಇಂಗ್ಲೆಂಡಿನ ಹೆಣ್ಣುಮಗಳು ಆಗಾಗ ಚೀಲದಿಂದ ಶೃಂಗಾರ ಸಾಧನಗಳನ್ನು ತೆಗೆದು ಲಿಪ್ಸ್ಟಿಕ್ ಬಳಸಿಕೊಳ್ಳುವುದು, ಪೌಡರ್ ಮೆತ್ತಿಕೊಳ್ಳುವುದನ್ನು ನೋಡಿದಾಗ ಮಜವೆನ್ನಿಸುತ್ತಿತ್ತು. ಆದರೆ ಸಾಮೂಹಿಕ ಗುರುಪೂಜೆಯ ಮಂತ್ರಕ್ಕೆ ಆಕೆಯೂ ಧ್ಯಾನಸ್ಥಳಾಗಿ ಸಂಸ್ಕೃತದ ಶ್ಲೋಕಗಳನ್ನು ಉಚ್ಚರಿಸುವುದನ್ನು ಕಂಡಾಗ ಬೆಚ್ಚಿಬೀಳುವಂತಾಗಿತ್ತು.ಅರಬ್ ರಾಷ್ಟ್ರಗಳಿಂದ ಬಂದಿದ್ದ ಅನೇಕರು ಕಣ್ಣು ಮುಚ್ಚಿಕೊಂಡು ಕೈಮುಗಿದು ಗುರುಪೂಜೆಯ ಧ್ಯಾನದಲ್ಲಿ ನಿರತರಾಗಿದ್ದುದು ನನಗಂತೂ ರೋಮಾಂಚನ ಉಂಟು ಮಾಡುವಂತಹ ಅನುಭವ.

ಶ್ರೀ ರವಿಶಂಕರ್ ಗುರುಜಿ ಇಂದು ಮಾತನಾಡಿದ್ದು ಬಲು ಕಡಿಮೆಯೇ. ಆದರೆ ಆಡಿದ ಅಷ್ಟೂ ಮಾತುಗಳೂ ಪ್ರೇಮದ ಸುತ್ತಮುತ್ತಲೇ ತಿರುಗಾಡುತ್ತಿದ್ದವು. ನಾವು ಕೈ ಹಿಡಿದು ವಿಶ್ವ ಪಥದಲ್ಲಿ ನಡೆಯಬಹುದೆಂಬ ಅವರ ಆಶಯ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. ಮೈದಾನದಲ್ಲಿ ಅಕ್ಷರಶಃ ಸಾಕಾರಗೊಂಡಿತ್ತು.

ಯೂರೋಪಿನಿಂದ ಬಂದಿದ್ದ ಪಡೆಯೊಂದು ಇಡಿಯ ಕಾರ್ಯಕ್ರಮವನ್ನು ನಿಂತುಕೊಂಡೇ ವೀಕ್ಷಿಸಿದ್ದು ಶ್ರದ್ಧೆಯ ಪ್ರತೀಕ!
ಕೇಂದ್ರ ಗೃಹಮಂತ್ರಿ ರಾಜ್’ನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದಿನ ಆಕರ್ಷಣೆಗಳಲ್ಲಿ ಪ್ರಮುಖರು. ಸುಷ್ಮಾ ಸ್ವರಾಜ್ ಶ್ರೀ ರವಿಶಂಕರ್ ಗುರೂಜಿ ಭಾರತದಲ್ಲಿ ಹುಟ್ಟಿರುವುದೇ ನಮ್ಮೆಲ್ಲರ ಪುಣ್ಯ ಎಂದರಲ್ಲದೇ, ಅವರು ಇಂತಹ ಆಯೋಜನೆ ಮಾಡಿರುವುದರಲ್ಲಿ ಅಚ್ಚರಿಯೇ ಇಲ್ಲ ಎಂದು ಹೆಮ್ಮೆಯ ನುಡಿಗಳನ್ನು ಮುಂದಿಟ್ಟರು.

ಹ್ಞಾಂ. ಹೇಳೋದು ಮರೆತಿದ್ದೆ. ಮೊದಲ ದಿನದ ಮಳೆಯಿಂದ ಖುಷಿಪಟ್ಟಿದ್ದ ಪತ್ರಕರ್ತ ರಾಜ್ದೀಪ್ ಸರದೇಸಾಯಿ ಕಾರ್ಯಕ್ರಮ ಯಶಸ್ವಿಯಾದ ಹೊಟ್ಟೆಯುರಿಗೆ ಇಂದು ಟ್ವೀಟ್ ಮಾಡಿದ್ದ. ಸೇರಿದವರೆಲ್ಲ ಶ್ರೀ ಶ್ರೀ ಅನುಯಾಯಿಗಳೇ ಆಗಿದ್ದು ಅಲ್ಲಿ ‘ಆಮ್ ಆದ್ಮಿ’ಯೇ ಇರಲಿಲ್ಲ ಅಂತ. ಅದು ನಿಜವೇ ಆಗಿದ್ದರೆ ಸರದೇಸಾಯಿಗೆ ಆತಂಕದ ವಿಷಯವೇ. 10 ಲಕ್ಷ ಜನ ದೆಹಲಿಗೆ ಬರಬಲ್ಲ ಅನುಯಾಯಿಗಳನ್ನು ಹೊಂದಿರುವ ಋಷಿ ಒಂದೆಡೆ. ಅದರ ಶೇಕಡಾ ಹತ್ತರಷ್ಟೂ ವೀಕ್ಷಕರಿಲ್ಲದ ನ್ಯೂಸ್ ಚಾನೆಲ್ ಮತ್ತೊಂದೆಡೆ!! ಮತ್ತೆ ಗೆಲುವು ಆಧ್ಯಾತ್ಮ ಗುರುವಿನದ್ದೇ.

ಬಿಡಿ. ಶ್ರೇಷ್ಠ ಯಾಗಗಳಿಗೆ ರಾಕ್ಷಸರು ಅಡ್ಡಿಮಾಡುತ್ತಾರಂತೆ. ಆಗಲೇ ಭಗವಂತ ಸಹಕಾರಕ್ಕೆ ಬಂದು ಎಲ್ಲವನ್ನೂ ಸುಸೂತ್ರ ಮಾಡಿಕೊಡೋದು. ಇಲ್ಲಿಯೂ ಹಾಗೆಯೇ. ಕೋರ್ಟು-ಕೇಸು, ರೈತರ ಹೆಸರಲ್ಲಿ ಕಿರಿಕಿರಿ, ಆಮೇಲೆ ಮುಸಲಧಾರೆ. ಎಲ್ಲ ಪರೀಕ್ಷೆಗಳೂ ಮುಗಿದ ನಂತರ ಭಗವಂತನ ಶ್ರೀರಕ್ಷೆ. ಎರಡನೇ ದಿನವೂ ಭರ್ಜರಿ ಯಶಸ್ಸು. ಜಾಗತಿಕ ವೇದಿಕೆಯಲ್ಲಿ ಈಗ ಭಾರತದ್ದೇ ಚರ್ಚೆ.
ನಿಜಕ್ಕೂ ಎದೆ ಹೆಮ್ಮೆಯಿಂದ ಬೀಗುತ್ತಿದೆ..

ನಾಳೆ ನಿರೀಕ್ಷಿಸಿ: ಲೈವ್ ಫ್ರಾಮ್ ವರ್ಲ್ಡ್ ಕಲ್ಚರಲ್ ಫೆಸ್ಟಿವಲ್  -3

Facebook ಕಾಮೆಂಟ್ಸ್

ಲೇಖಕರ ಕುರಿತು

Chakravarthy Sulibele

ನಾಡಿನ ಖ್ಯಾತ ಚಿಂತಕರೂ, ವಾಗ್ಮಿಗಳೂ, ಬರಹಗಾರರೂ ಆಗಿರುವ ಶ್ರೀ ಚಕ್ರವರ್ತಿ ಸೂಲಿಬೆಲೆಯವರು, ನಿತ್ಯ ನಿರಂತರವಾಗಿ ದೇಶದ ಜನರಲ್ಲಿ ರಾಷ್ಟ್ರ ಭಕ್ತಿಯನ್ನು ಉಕ್ಕಿಸುತ್ತಾ ದೇಶಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!