ಅಂಕಣ

ಮುರುಕು ಸ್ವಪ್ನ ಬಿಂಬ 2

ಮುರುಕು ಸ್ವಪ್ನ ಬಿಂಬ 1
ಅರವಿಂದರಾಯರು ಸಿದ್ದಾರ್ಥ ಬರುತ್ತಾನಂತೆ ಅಂತ ಹೇಳುತ್ತಾರೆ. ಸಾರಿಕಾ ನಿಟ್ಟುಸಿರುಬಿಡುತ್ತಾಳೆ. ಸಿದ್ದಾರ್ಥ ವಿಮಾನದಲ್ಲಿ ಬರುತ್ತಾನೆ. ಮನೆಗೆ ಬರುವಾಗ ಸಂಜೆ ಸುಮಾರು ೫ ಗಂಟೆ. ಮನೆಯಲ್ಲಿ ಬೆಳಿಗ್ಗೆಯಿಂದ ಯಾರೂ ಅನ್ನಾಹಾರ ಸೇವಿಸಿಲ್ಲ. ಎಲ್ಲರೂ ಆತನ ಬರುವಿಕೆಗಾಗಿ ಕಾಯುತ್ತಲೇ ಇದ್ದರು. ಸಿದ್ದಾರ್ಥ ಮನೆ ಬಾಗಿಲಿಗೆ ಬಂದಿಳಿದ. ಆತ ಹೇಳಿದಂತೆಯೇ,ಮೂರು ಹಣತೆಗಳು ಬೆಳಗುತ್ತಿದ್ದವು. ಹಣತೆಗಳಿಗೆ ಅಲ್ಲಿಯೇ ಇದ್ದ ಹೂಗಳನ್ನು ತಾಗಿಸಿದ. ಹಣತೆಗಳಿಗೆ ಕೈಮುಗಿದ.ಮನಸ್ಸಿನಲ್ಲೇ ಧ್ಯಾನಿಸಿದ…”ಹೇ ಹಣತೆಗಳೇ!..ನಿಮ್ಮನ್ನೇ ಬ್ರಹ್ಮ ವಿಷ್ಣು ಮಹೇಶ್ವರರೆಂಬ ತ್ರಿಮೂರ್ತಿಗಳನ್ನಾಗಿ ಕಲ್ಪಿಸಿಕೊಳ್ಳುತ್ತಿದ್ದೇನೆ. ಹೇ ಶಕ್ತಿಯೇ..ಮುಸುಕಿದ ಮಾಯೆಯ ಮಸುಕನ್ನು ಕಳೆದು ದೇದೀಪ್ಯಮಾನವಾದ ಬೆಳಕನ್ನು ನೀಡುತ್ತಿದ್ದೀಯೆಂದೇ ಭಾವಿಸುತ್ತೇನೆ.ನನ್ನ ಮನಸ್ಸಿನಲ್ಲಿ ದುಗುಡವಿಲ್ಲ;ಆದರೆ..ಈಗೀಗ ದ್ವಂದ್ವ ಶುರುವಾಗುತ್ತಿದೆ. ಆ ದ್ವಂದ್ವ ಕಳೆದು ಏಕತ್ವದೊಂದಿಗೆ ಸಂಧಾನವಾಗಬೇಕು. ಹರಸಿರಿ..ಈಗ ನಾನು ಮಾಡುತ್ತಿರುವ ಕಾರ್ಯ ಸರಿಯೋ ತಪ್ಪೋ ತಿಳಿಯುತ್ತಿಲ್ಲ,ಮನ್ನಿಸಿ…ತಂದೆಯ ಅಪರಕ್ರಿಯೆಗಳನ್ನು ಮಾಡಲಿಕ್ಕೆ ಮನೆಯೊಳಗೆ ಅಡಿಯಿಡುತ್ತಿದ್ದೇನೆ. ಅಪರಿಮಿತ ಆಶೀರ್ವಾದಗಳಿರಲಿ,ಅನುಗ್ರಹವಿರಲಿ..” ಮನೆಯ ಹೊಸ್ತಿಲನ್ನು ದಾಟಿ ಒಳಗೆ ಪ್ರವೇಶಿಸುತ್ತಾನೆ. ಒಂದು ಕ್ಷಣ ಮೈ ‘ಜುಂ’ ಅನ್ನುತ್ತದೆ. ಕ್ಷಣಕಾಲ ಕಣ್ಮುಚ್ಚಿ ನಿಂತು,ಕಣ್ತೆರೆಯುತ್ತಾನೆ.ಎಲ್ಲರೂ ಅವನತ್ತಲೇ ನೋಡುತ್ತಿದ್ದಾರೆ.ಆತನ ಕಣ್ಣುಗಳಲ್ಲಿ ತೇಜಸ್ಸು ಸ್ಫುರಿಸುತ್ತಿದೆ. ಕಂಗಳ ಕಾಂತಿ,ಮುಗುಳ್ನಗುವ ವದನ ತಿಂಗಳ ಹುಣ್ಣಿಮೆಯಂತೆ ಕಂಗೊಳಿಸುತ್ತಿದೆ.ಆ ಕಣ್ಣುಗಳಲ್ಲಿ ಯಾವುದೋ ಕಾಣದೊಂದು ಆಹ್ಲಾದ ದಿವ್ಯ ಧ್ಯಾನವಿದೆ…ಮಂದಸ್ಮಿತ ಲಾಸ್ಯವಾಡುತ್ತಿದೆ. ಪ್ರಶಾಂತವಾದ ಮೊಗದಲ್ಲಿ ಪ್ರಸನ್ನತೆಯಿದೆ.ನಿಂತ ಆ ಶೈಲಿಯಲ್ಲಿ ಗಾಂಭೀರ್ಯವಿದೆ.ದೇಹದ ಸುತ್ತ ಏನೋ ಒಂಥರದ ಪ್ರಭೆಯಿದ್ದಂತೆ ಗೋಚರಿಸುತ್ತಿದೆ. ಬೆಳಕಿನ ಸ್ಯಂದನವೋ ಎಂಬಂತೆ ತೋರುತ್ತಿದ್ದಾನೆ. ಸ್ಫುರದ್ರೂಪಿ ಸಿದ್ದಾರ್ಥನ ತನುವಿನಲ್ಲಿ ಯೌವನ ನಳನಳಿಸುತ್ತಿದೆ.ದೇಹ ಸದೃಢವಾಗಿದೆ;ಆತನ ಮನಸ್ಸಿನಂತೆಯೇ!ಈ ಎಲ್ಲ ಕಾಂತಿಯೊಂದಿಗಿನ ಆತ ಯಾವುದೋ ಒಂದು ಮನೋಹರ ಸುಂದರ ಅಗೋಚರ ಶಕ್ತಿಯಂತೆ ಗೋಚರಿಸುತ್ತಿದ್ದಾನೆ. ಆತ ಮುಂದೆ ಮುಂದೆ ನಡೆದುಬಂದು, ತಂದೆಯ ಶವದ ಬಳಿಗೆ ಬಂದ.ಶವದ ಮುಂದೆ ಕುಳಿತ. ಶವವನ್ನು ಮುಟ್ಟಲು ಮುಂದಾದ. ಇದ್ದಕ್ಕಿದ್ದಂತೆ, “ನಿಲ್ಲು..ಮುಟ್ಟಬೇಡ..”ಎಂಬಂತಹ ಕರ್ಕಶ ಧ್ವನಿ..ಯಾರದ್ದು ಆ ಧ್ವನಿ?..ಆತನ ತಾಯಿ ಜಾನಕಿಯಲ್ಲಿ ಆಕ್ರೋಶ ಭುಗಿಲೆದ್ದಿತ್ತು.”ಮುಟ್ಬೇಡ…ಬೇಡ..ಮನುಷ್ಯ ಸಂಬಂಧಗಳ ಮೌಲ್ಯವೇ ಗೊತ್ತಿರದ,ಹೆತ್ತವರ ಮೇಲೆ ಗೌರವ ಪ್ರೀತ್ಯಾದರಗಳಿರದ,ಅನಾಗರಿಕತೆಯ ಪಿಪಾಸು ನೀನು…ಹಸಿಮಾಂಸ ತಿನ್ನುವ ಅಘೋರಿಗಳಂತೆ ನೀ ನನಗೆ ಗೋಚರಿಸ್ತಾ ಇದ್ದೀಯಾ!..ಮುಟ್ಟಬೇಡ..ಅವರ ಸಾವಿಗೆ ಕಾರಣ ನೀನೇ..ನೀನೇ…ನೀನೇ…ಕೊಂದೇಬಿಟ್ಯಲ್ಲೋ ಪಾಪೀ…” ಜಾನಕಿ ಬಿಕ್ಕಳಿಸುತ್ತಾಳೆ. ಆದರೆ,ಆತನ ಮುಖದಲ್ಲಿ ಪಶ್ಚಾತಾಪ ಇಲ್ಲ.ದೃಢವಾದ ನೋಟ,ಮತ್ತದೇ ಮಾಸದ ಮಂದಹಾಸ!..ಹೇಳುತ್ತಾನೆ, “ಎಲ್ಲರೂ ಅವರವರ ಸಮಯ ಬಂದಾಗ ಸಾವಿನ ಪರದೆಯ ಹಿಂದೆ ಸರಿಯಲೇಬೇಕು..ಯಾರ ಸಾವಿಗೆ ಯಾರೂ ಕಾರಣರಲ್ಲ..ನೀವು ಕೊಡುವ ಕಾರಣಗಳೆಲ್ಲ ನೆಪಗಳಷ್ಟೇ..!ಸಾವು ಶಾಶ್ವತವಾದದ್ದು, ಸಾವು ನಿಶ್ಚಿತವಾದದ್ದು…!” ಎಂದಷ್ಟೇ ಹೇಳಿದ. ಹೆತ್ತ ಕರುಳು ರೋಧಿಸುತ್ತಿತ್ತು. ಜಾನಕಿ ಮತ್ತೆ ಕೂಗಿದಳು, “ಮಗನಾಗಿ ಮಾಡಬೇಕಾದ ಎಲ್ಲ ಕಾರ್ಯಗಳನ್ನು ಮುಗಿಸುತ್ತೀಯಾ ಎಂದಾದಲ್ಲಿ ಮಾತ್ರ ಅವರ ಶವವನ್ನು ಮುಟ್ಟು..ಇಲ್ಲವಾದಲ್ಲಿ ಅದನ್ನು ಮುಟ್ಟುವ ಅಧಿಕಾರ ನಿನಗಿಲ್ಲ,ಹೊರಟೋಗು ಇಲ್ಲಿಂದ!!..ನನಗಿರುವ ಹೆಣ್ಮಕ್ಕಳಲ್ಲಿ ಒಬ್ಬಳನ್ನು ಮಗನೆಂದು ತಿಳಿದು,ಅವಳ ಕೈಯಿಂದಲೇ ಎಲ್ಲ ಕ್ರಿಯೆಗಳನ್ನು ಮಾಡಿಸುತ್ತೇನೆ.ಮದದಿಂದ ಕೊಬ್ಬಿದ ಮಗನ ಹಂಗು ನನಗಿಲ್ಲ!..” ಎಂದು ಹೇಳುತ್ತಾ ಮೂರ್ಛೆಹೋದಳು. ಕಿರಿಯ ಮಗಳು ಲತಿಕಾ,ತನ್ನ ತಾಯಿ ಜಾನಕಿಯನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡಳು. ಮಂದಮಂದ ಮಕರಂದದ ನಗುವಿನೊಂದಿಗೆ ಸಿದ್ದಾರ್ಥ ಕುಳಿತಿದ್ದ. ಸ್ಥಿತಪ್ರಜ್ಞತೆಯೆಂದರೆ ಇದೇ ಇರಬೇಕು! ತಾಯಿಯೆಡೆಗೆ ನೋಡಿದ.ಕಣ್ಮುಚ್ಚಿ,ತನ್ನ ಚೀಲದಿಂದ ವಿಭೂತಿಯನ್ನು ತೆಗೆದು,ಬೊಗಸೆಯಲ್ಲೇ ಹಿಡಿದು ಧ್ಯಾನಿಸಿದ.ನೀರವ ಮೌನ…ಆ ವಿಭೂತಿಯನ್ನು ತನ್ನ ತಂದೆಯ ಶವಕ್ಕೆ ಸಂಪೂರ್ಣವಾಗಿ ಲೇಪಿಸಿದ.ಕೈಮುಗಿದು ಎದ್ದು ನಿಂತ. ನೆಪಕ್ಕೂ ಕೂಡ ಆತನಿಗೆ ಕಣ್ಣೀರಿನ ನೆನಪಾಗಲಿಲ್ಲ. ಒಂದು ತೊಟ್ಟು ಕಂಬನಿಯೂ ಬಸಿಯಲಿಲ್ಲ!ತಾಯಿಗೆ ಎಚ್ಚರವಾಯಿತು.ಆತ ಕೈಸನ್ನೆಯ ಮೂಲಕವೇ,ಮುಂದುವರೆಸಿ ಎಂದು ಎಲ್ಲರಲ್ಲೂ ವಿನಂತಿಸಿಕೊಂಡ.ಹೆತ್ತ ಬಸಿರಿನ ಉಸಿರ ಕಲಕುವ ಆಕ್ರಂದನ ಮಾರ್ದನಿಸುತ್ತಲೇ ಇತ್ತು.೩೫ ವರ್ಷಗಳ ಜಾನಕಿಯ ದಾಂಪತ್ಯದ ಕೊಂಡಿ ಬಲವಂತವಾಗಿ ಹರಿಯಲ್ಪಟ್ಟಿದೆ.ಎದೆಯ ತಳಮಳ,ತವಕ ತಲ್ಲಣಗಳಿಗೆ ಸಾಕ್ಷಿಯಾಗಿದ್ದ,ಸಾಂತ್ವನವಾಗಿದ್ದ ಒಂದು ದೇಹ ಈಗ ಎಲ್ಲ ಜಂಜಾಟಗಳಿಂದ ಮುಕ್ತವಾಗಿ ಮಣ್ಣೊಳಗೆ ಜಾರಿಹೋಗುತ್ತಿದೆ. ಕರುಳು ಹಿಂಡುವ ಆ ಹೃದಯವಿದ್ರಾವಕ ದೃಶ್ಯಕ್ಕೆ ಸಾಕ್ಷಿಯಾದ ಸಿದ್ದಾರ್ಥನ ಮೊಗದ ಮೇಲೆ ಮಗುವಿನ ಆ ಮುಗ್ಧ ಮಂದಹಾಸ ಇನ್ನೂ ಮಾಸದೇ,ಹಾಗೆಯೇ ಇದೆ.ರಘುನಾಥರ ದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು.ಅವರ ದೇಹ ಪಂಚಮಹಾಭೂತಗಳಲ್ಲಿ ಲೀನವಾಯಿತು..

ಸ್ನಾನಾದಿಗಳನ್ನು ಮುಗಿಸಿದ ಸಿದ್ದಾರ್ಥ,ಏಕಾಂತದಲ್ಲಿ ತನ್ನೊಳಗೆ ತಾನೇ ತನಗೇ
ತಾನು ಮುಖಾಮುಖಿಯಾಗುತ್ತಿರುವ ಸಂದರ್ಭ..!ಸೂತಕದ ಕರಿಛಾಯೆಯ ಮಂಪರು ಇನ್ನೂ ಸರಿದಿರಲಿಲ್ಲ. ಮೋಹಕ,ಮಾದಕ ಬಟ್ಟೆ ತೊಟ್ಟ ಸ್ವಪ್ನಾ
ಸಿದ್ದಾರ್ಥನ ಕೋಣೆಯನ್ನು ಪ್ರವೇಶಿಸುತ್ತಾಳೆ. “ಮಾವ…”ಮಾದಕವಾಗಿ ಉಲಿಯುತ್ತಾಳೆ. ಸಿದ್ದಾರ್ಥ
ತಲೆ ಎತ್ತಿದ;ಏನು ಎಂಬಂತೆ
ಪ್ರಶ್ನಾರ್ಥಕವಾಗಿ ಆಕೆಯತ್ತ ನೋಡಿದ.ಆತನ ಹತ್ತಿರ ಬಂದಳು.ಆತನ ಪಕ್ಕದಲ್ಲೇ ಅವನ ಮೈಗೆ ಅವಳ ಮೈ
ತಾಕುವಂತೆ ಕುಳಿತಳು..ಆತ ಅಲ್ಲಿಂದ ಏಳಲು ಮುಂದಾದಾಗ,ಆತನ ಕೈ ಹಿಡಿದೆಳೆದಳು.ಕೈ
ಬಿಡಿಸಿಕೊಂಡ.ಮಾವ…”ಇಷ್ಟು ವರ್ಷ
ನಿನಗೋಸ್ಕರ ಕಾಯ್ತಾ ಇದ್ದೆ…” ಫೋನಲ್ಲಿ
ಮಾತಾಡುವಾಗಿನ ಬಹುವಚನ ಈಗ ಏಕವಚನಕ್ಕೆ ತಿರುಗಿತ್ತು.ಹೇಳುತ್ತಿದ್ದಾಳೆ..”ವಿರಹವೇದನೆಯಲ್ಲೇ ಕ್ಷಣಕ್ಷಣವೂ
ಬೆಂದು ‘ನೀರಸ’ವಾಗಿದ್ದೆ.ನಿನ್ನಾಗಮನಕ್ಕಾಗಿ ಮನಸ್ಸು
ತವಕಿಸುತ್ತಿತ್ತು.ಈಗ ‘ನೀ’ಬಾಳ‘ರಸ’ವಾಗಿ ಬಂದಿದ್ದೀಯಾ..ನಿನ್ನ ದೇಹದ ಬಿಸಿಗೆ
ಬೆಣ್ಣೆಯಾಗಬೇಕೆಂದಿದ್ದೇನೆ”…ಸಿದ್ದಾರ್ಥ
ಬೇರೇನೋ ಯೋಚಿಸುತ್ತಿದ್ದಾನೆ,ಅವಳು
ಹೇಳುತ್ತಲೇ ಇದ್ದಾಳೆ. “ನಿನ್ನ
ಸ್ಪರ್ಶದ ಪಾಶದಲ್ಲಿ ಖೈದಿಯಾಗಬೇಕೆಂದಿದ್ದೇನೆ,ಬಾ ಬಂಧಿಸು ನಿನ್ನ ತೋಳ್ಗಳಿಂದ…” ಅವನನ್ನು ತಬ್ಬಲು ಮುಂದಾಗುತ್ತಾಳೆ.ಅವಳ
ಕೈಗಳಿಂದ ಬಿಡಿಸಿಕೊಂಡು,ಸಿದ್ದಾರ್ಥ
ಎದ್ದುನಿಲ್ಲುತ್ತಾನೆ. “ಸ್ವಪ್ನಾ…”ಆತ ಕರೆದ. ಆಹಾ!ಎಂಥ ಮಧುರ ಗಂಭೀರ
ಧ್ವನಿ…ಧ್ವನಿಯಲ್ಲಿ ಅದೆಂಥ ಸಂಗೀತದ ನಾದವಿದೆ!..ಸ್ವಪ್ನಾ ಮನದಲ್ಲೇ ಯೋಚಿಸುತ್ತಿದ್ದಾಳೆ. ‘ಸ್ವಪ್ನಾ…!ಇದೇನ್ ಮಾಡ್ತಾ ಇದ್ದೀಯಾ?ತಂದೆಯ ಶವವನ್ನು ಸುಟ್ಟುಬಂದು ಮಾಡಿದ
ಸ್ನಾನದ ಮೈಯಿನ್ನೂ ಒಣಗದೇ ಹಸಿಯಾಗಿಯೇ ಇದೆ. ಸೂತಕದ ಮೂಕಸಾಕ್ಷಿಯಾಗಿ ಇಡೀ ಊರು
ಶೋಕಿಸುತ್ತಿದೆ.ಇಂಥ ಸಮಯದಲ್ಲಿ ನಿನಗೆ ಪ್ರಣಯದ ಗುಂಗೇ?ಸ್ವಪ್ನಾ..ನಿನಗೆ ತಿಳಿದೇ
ಇದೆ..ರಘುನಾಥರ ಒಬ್ಬನೇ ಮಗ ನಾನು.ಲಕ್ಷ ಲಕ್ಷ ಸಂಬಳ ಎಣಿಸುತ್ತಿದ್ದ ನಾನು,ಈ ಎಲ್ಲವುಗಳನ್ನು
ತ್ಯಜಿಸಿದ್ದೇನೆ.ತಿಳಿದೇ ಇದೆ ಅಲ್ವಾ?ಐಹಿಕ ಲಾಲಸೆಗಳನ್ನು ಮೋಹಿಸದೆ ಪಾರಮಾರ್ಥಿಕ ಪಾರಮ್ಯದೆಡೆಗೆ
ನಡೆಯುತ್ತಿರುವವನು ನಾನು..ಸಂಸಾರದ ಎಲ್ಲ ಬಾಂಧವ್ಯಗಳ ಸಂಕೋಲೆಗಳನ್ನು ಹರಿದು,ಕಿತ್ತೆಸೆದು ಸನ್ಯಾಸಿಯಾಗಬಯಸಿದವನು
ನಾನು…ಬುದ್ಧನಾಗಬೇಕೆಂದಿದ್ದೇನೆ!ನನ್ನಲ್ಲಿ ನಿನಗದೆಂಥ ಕಾಮ?” ಆತ ಪ್ರಶ್ನಿಸುತ್ತಾನೆ. “ಮಾವ..ನೀನು ನನ್ನವನಾಗಬೇಕೆಂದು
ಪರಿತಪಿಸುತ್ತಿದ್ದವಳು ನಾನು…ಈ ಸಮಯವನ್ನು ನಾನು ಕಳೆದುಕೊಂಡರೆ,ನೀ ನನಗೆಂದೆಂದೂ ಮತ್ತೆ ಸಿಗುವುದೇ
ಇಲ್ಲ. ನಿನ್ನ ಪಡೆದುಕೊಳ್ಳಲಿಕ್ಕೆ ನನಗಿರುವುದು ಈ ಕಾಲವೊಂದೇ…!ಒಬ್ಬ ಹೆಣ್ಣಾಗಿಯೂ ನನ್ನೆಲ್ಲಾ
ನಾಚಿಕೆಗಳನ್ನು ಬಿಟ್ಟು ನಿನ್ನಲ್ಲಿಗೆ ಬಂದಿದ್ದೇನೆ. ಮದನನ ಮೋಹದ ಕುಸುಮಶರವು ನನ್ನ
ಅಂಗಾಂಗಗಳಲ್ಲಿ ಕಚಗುಳಿಯಿಡುತ್ತಿದೆ. ಬಾ,ನಿನ್ನನ್ನು ಸುಂದರ ಸ್ವಪ್ನಗಳ
ಮಾಯಾಲೋಕದಲ್ಲಿ ತೇಲಾಡಿಸುತ್ತೇನೆ.ಹಪಹಪಿಸುವ ಯೌವನದ ಪರಿಮಳದಲ್ಲಿ ಹೊರಳಿಸುತ್ತೇನೆ.ಹಿತವಾಗಿ,ಮೃದುವಾಗಿ,ಸುಖವಾಗಿ ನರಳಿಸುತ್ತೇನೆ! ಏನಂದೆ ನೀನು?ಬುದ್ಧನಾಗಬೇಕೆಂದಿದ್ದೇನೆ,ಎಂದಲ್ಲವೇ?ಬುದ್ಧನಾಗಬಹುದು…ಆಗು,ನನ್ನದೇನೂ
ಅಭ್ಯಂತರವಿಲ್ಲ!ಆದರೆ..ಈಗ ಬುದ್ಧನಾಗುವುದಕ್ಕಿಂತ ಮೊದಲಿನ ಸಿದ್ದಾರ್ಥನಾಗು,ಸಾಕು…ಆ ಸಿದ್ದಾರ್ಥ ಸಂಸಾರದ,ಸಂಭೋಗದ ಎಲ್ಲ ಸುಖಗಳನ್ನೂ
ಅನುಭವಿಸಿದ್ದನಲ್ಲವೇ?ನನ್ನೊಡಲ
ಮೋಹದ ಕಿಚ್ಚನ್ನು ತಣ್ಣಗಾಗಿಸು ಬಾ..” ಹೇಳುತ್ತಾಳೆ ಸ್ವಪ್ನಾ. “ತರಳೆ!..ಹ್ಹಹ್ಹಹ್ಹಾ…ಒಡಕು ಬಿಂಬಗಳ
ಮುರುಕು ಸ್ವಪ್ನದ ದರ್ಶನ ನನಗೆ ಬೇಕಿಲ್ಲ.ಪೌರ್ಣಿಮೆಯ ಪೂರ್ಣಚಂದ್ರಪ್ರಭಾಬಿಂಬಕ್ಕಾಗಿ
ಕಾತರಿಸುತ್ತಿರುವವನು ನಾನು..ಸ್ವಪ್ನ ಎಂಬ ಕಾಲ್ಪನಿಕ ಮಾಯೆಯ ಹಂಗು ನನಗೆ ಬೇಕಿಲ್ಲ
ಕೂಡಾ..!ಸ್ವಪ್ನದಲ್ಲಿ ಕಂಡ ಸುಪ್ತ ಮನಸ್ಸಿನ ಸಂಗತಿಗಳು ಕೇವಲ ಕಾಲ್ಪನಿಕವೂ ಆಗಬಹುದಲ್ಲವೇ?ಸತ್ಯವೇ ಆಗುತ್ತವೆ
ಎಂದೇನಿಲ್ಲವಲ್ಲ.ಸತ್ಯವಾಗಲೇಬೇಕು ಎಂದೂ ಕೂಡಾ ಇಲ್ಲ ಅಲ್ಲವೇ?ನಾನು ರುಥದ
ಹುಡುಕಾಟದಲ್ಲಿದ್ದೇನೆ.ಸುಪ್ತ ಮನಸ್ಸು ಕೂಡಾ ಜಾಗೃತವಾಗಲೆಂದೇ ಕಾತರಿಸುತ್ತಿದ್ದೇನೆ.ಆ
ಋತುವಿಗಾಗಿ ಕನವರಿಸುತ್ತಿದ್ದೇನೆ.ಸಾಧಿಸಬೇಕಾಗಿದೆ ಸತ್ಯವನ್ನು!..ಆರಾಧನೆಯೆಂಬುದು
ಸನಾತನವೂ ಹೌದು,ನೂತನವೂ
ಹೌದು.ಅದು ನಮ್ಮೊಳಗೆ ತಾನಾಗೇ ಸ್ಫುರಿಸಿಬರಬೇಕು.ಕಾಮವನ್ನು ಪುರುಷಾರ್ಥಗಳ ಮುಖೇನ ನೋಡು.ವಿಕೃತ
ಆಸೆಗಳಿಗೆಲ್ಲ ಒಂದು ಶುಭದ ಸಂಕ್ರಮಣ ಬರಲಿ.ಗಂಡು ಹೆಣ್ಣಿನ ಮಧ್ಯೆ ಇರುವ ಮೋಹದ ಗೆರೆಯನ್ನು ದಾಟಿ
ಈಚೆ ಬಾ..ಸನ್ಯಾಸಿಯಾಗುವಾಗ ನಮ್ಮ ಅಪರಕ್ರಿಯೆಗಳನ್ನು ನಾವೇ ಮಾಡಿಕೊಂಡು,ಈ ಲೋಕದಿಂದ ಬಿಡುಗಡೆ ಹೊಂದುತ್ತೇವೆ.ಈ
ಕಳೇಬರದೊಂದಿಗೆ ನಿನಗದಾವ ಸುಖ?ಪೈಶಾಚಿಕ
ಆನಂದಕ್ಕಾಗಿ ಹಾತೊರೆಯುತ್ತೀಯಾ?ಬದುಕನ್ನು
ನಂಬು,ಪ್ರೀತಿ
ಸಿಗುತ್ತದೆ.ಪ್ರೇಮ ಕಾಮದ ಸಂಘರ್ಷದಲ್ಲಿ ಮೂಕವಾಗಿ ತಿಕ್ಕಾಟಕ್ಕೆ ಒಳಗಾಗಿ
ಸುಕ್ಕಾಗಬೇಡ..!ಸ್ಫುಟವಾಗು…ಹೋಗು,ಒಂದೊಳ್ಳೆಯ ಬದುಕು ಕಟ್ಟಿಕೋ..” ಅತ್ಯಂತ ಪ್ರಶಾಂತನಾಗಿ ಅಷ್ಟೇ
ಪ್ರಬುದ್ಧನಾಗಿ ಸಿದ್ದಾರ್ಥ ಹೇಳಿದ. ಸ್ವಪ್ನಾ ಅಳುತ್ತಾ ಹೊರಗೋಡಿದಳು.ಸಿದ್ದಾರ್ಥ ಯೋಚಿಸುತ್ತಲೇ
ಇದ್ದ…ಮನುಷ್ಯ ತುಡಿತುಡಿವ ಕ್ಷಣಿಕತೆಗಾಗಿ ಅದೆಷ್ಟು ಹಂಬಲಿಸುತ್ತಾನೆ.ಸೂತಕದ ಜಾಗದಲ್ಲೂ
ಸಂಭೋಗದ ಸಂಭ್ರಮಕ್ಕಾಗಿ ಅದೆಷ್ಟು ಹಪಹಪಿಸುತ್ತಾನೆ!!ಆದಷ್ಟು ಬೇಗ ಈ ಭೀಕರ ಸಂಸಾರದಂಗಳದಿಂದ
ದೂರಾಗಿಬಿಡಬೇಕು…!!

ಬಾನಲ್ಲಿ ಶಶಿ ಅಸ್ತಮಿಸೆ,ದಿನಮಣಿಯು ತೊದಲುತ್ತ ಬಂದ!ಇತ್ತ ಸಿದ್ದಾರ್ಥ
ಹೊರಟುನಿಂತಿದ್ದಾನೆ.ತಾಯಿ ಜಾನಕಿಯ ಅತ್ತೂ ಅತ್ತೂ ಕೆಂಪಾದ ಕಣ್ಣುಗಳಿನ್ನೂ ಸಹಜ ಸ್ಥಿತಿಗೆ
ಬಂದಿರಲಿಲ್ಲ.ಮತ್ತೆ ಬೊಬ್ಬಿಡುತ್ತಿದ್ದಾಳೆ….”ಹೆತ್ತ ತಾಯಿಯನ್ನು ಒಬ್ಬಂಟಿಯಾಗಿ
ಬಿಟ್ಟು,ಮತ್ತೆಲ್ಲಿಗೋ
ಹೋಗಿ,ಅರ್ಥವಾಗದ
ಪ್ರಶ್ನೆಯ ಕಗ್ಗಂಟಾಗಿ ಯಾಕೆ ಉಳಿಯುತ್ತೀಯಾ? ಎಲ್ಲರೂ ಹೆತ್ತವರ ಋಣ ತೀರಿಸಲು
ಹೆಣಗುತ್ತಾರೆ.ಆದರೆ,ನೀನು..ಥೂ…ಹೆತ್ತವರ
ಹೆಣ ಕೆಡವಲು ಹವಣಿಸುತ್ತಿದ್ದೀಯಲ್ಲಾ!ನಿನ್ನ ಕೊರಗಿನಲ್ಲೇ ನಿನ್ನ ತಂದೆ ಪ್ರಾಣ ಬಿಟ್ಟರು.ಅವರ
ಸಾವಿಗೆ ನೀನೇ ಕಾರಣವಾದೆ!ಸಾಯುವಾಗಲೂ ಅವರು “ನನ್ ಮಗ” ಅಂತಾನೇ ಸತ್ತೋದ್ರು.ಈಗ
ನಿನ್ನ ತಾಯಿಯ ಸಾವಿಗೂ ನೀನೇ ಕಾರಣವಾಗುತ್ತೀಯಾ?.ದಯವಿಟ್ಟು ಹೇಳಿಬಿಡು,ಇನ್ನೆಷ್ಟು ಜೀವಗಳ ಬಲಿಗಾಗಿ ನೀನು ಪರಿತಪಿಸುತ್ತಿದ್ದೀಯಾ?..ಸನ್ಯಾಸಿಯಂತೆ!ಹೆತ್ತವರ ಒಡಲಲ್ಲಿ
ಬೆಂಕಿಯಿಟ್ಟು ತಪ್ತವಾಗುವುದೆಂಥ ತಪಸ್ಸು?!ಹೆತ್ತ ತಾಯಿಗಿಂತ ಮೊನ್ನೆ ಮೊನ್ನೆ
ಹುಟ್ಟಿಕೊಂಡ ಸನ್ಯಾಸದ ಆಸೆಯೇ ಸತ್ವವಾಯಿತಾ?ನವಮಾಸಗರ್ಭದ ಋಣ, ಬುದ್ಧಿ ಬಲಿತು ಮಾಗುವವರೆಗಿನ ಅನ್ನದ
ಋಣ,ಮತ್ತೆ
ಮತ್ತೆ ನೆನಪಾಗುವ ವಾತ್ಸಲ್ಯದ ಋಣ,ಕಲ್ಮಶವೇ ಗೊತ್ತಿರದ ಆ ಪ್ರೀತಿಯ ಋಣ..ಈ ಎಲ್ಲವುಗಳ ಲೆಕ್ಕ ಚುಕ್ತಾ ಆಯಿತೇ?ಅಥವಾ ಇವೆಲ್ಲ ಗೌಣವಾದವೇ?ಸತ್ಯ ಸತ್ಯ ಎಂದು
ಸಂಭ್ರಮಿಸುತ್ತೀಯಲ್ಲಾ, ತವಕಿಸುತ್ತೀಯಲ್ಲಾ,ತಾಯಿ ಎನ್ನುವವಳೂ ಕೂಡಾ ಒಂದು
ಸುಳ್ಳಾದಳೇ ಹಾಗಾದರೆ?…ನಿನ್ನ ಆ
ಸತ್ಯದ ಪಟ್ಟಿಯಲ್ಲಿ ತಾಯಿ ಎನ್ನುವವಳೊಬ್ಬಳಿಲ್ಲವೇ ಹಾಗಾದರೆ?ನಿನ್ನ ಆ ಸಂಭ್ರಮದ ಸರಹದ್ದಿನಲ್ಲಿ
ತಾಯಿ ಎನ್ನುವವಳು ಸತ್ಯದ ಸಂಭ್ರಮವಾಗಲೇ ಇಲ್ಲವೇಹೇಳು ಸಿದ್ದಾರ್ಥ ಹೇಳು…ಹೇಳು ಕಂದಾ…!” “ಅಮ್ಮಾ..”ಸಿದ್ದಾರ್ಥ ಅರುಹತೊಡಗುತ್ತಾನೆ…”ಮಹಾತ್ಮನಾಗಲು ಹೊರಟ ಈ ನಿಮ್ಮ ಮಗನನ್ನು
ನೋಡಿ ಹರಸಬೇಕಾಗಿತ್ತು ನೀವು!ಆದರೆ??…ಅಮ್ಮಾ,ಸಮಾಧಿಯಾದ
ಸಂಗತಿಗಳ ಮುಂದೆ ಹಣತೆ ಹಚ್ಚಿಬಿಡಿ ಅಮ್ಮಾ,ಬೆಳಕಾದರೂ ತುಂಬಿಕೊಳ್ಳುತ್ತದೆ.ಯಾರ
ಗೋರಿಯ ಮೇಲೂ ಆತನ ಸಂಸಾರದ ವರದಿಯಿರುವುದಿಲ್ಲ.ಯಾರನ್ನು ಸುಡಬೇಕಾದರೂ,ಆತನ ಜೊತೆ ಆತನ ಪತ್ನಿ,ಮಕ್ಕಳ್ಯಾರೂ ಬೂದಿಯಾಗಲು
ಚಿತೆಯನ್ನಲಂಕರಿಸುವುದಿಲ್ಲ ಅಲ್ಲವೇನಮ್ಮಾ?ಬದುಕಿನ ಸಾರದ ಪೂರ್ಣರೂಪವೇ
ಅಲ್ಲವೇನಮ್ಮಾ ಮೋಕ್ಷ!ಸನ್ಯಾಸವೆಂಬುದು ಸಾಮಾನ್ಯವಲ್ಲಮ್ಮ…ಸಹಸ್ರ ಸಹಸ್ರ ಜನುಮಗಳ ಸುಕೃತಗಳ
ಸಾರದ ಅಮೂರ್ತ ರೂಪದ ಮೂರ್ತ ಜನುಮ ಕಣಮ್ಮಾ…ಸಂತನಾಗುವುದೆಂದರೆ,ಬದುಕಿನ ವಸಂತವಮ್ಮಾ!..” ಹೇಳುತ್ತಿದ್ದಾನೆ ಸಿದ್ದಾರ್ಥ…”ಬಾಯ್ಮುಚ್ಚು,ಹೆತ್ತ ತಾಯಿಯ ಬದುಕಿಲ್ಲಿ
ಧಗಧಗಿಸುತ್ತಿರುವಾಗ ನಿನಗದೆಲ್ಲಿಯ ವಸಂತ?ಶಂಕರರೂ ಸನ್ಯಾಸಿಗಳಾದರು. ಆದರೆ,ಶಂಕರರು ತಾಯಿಯ ಅಣತಿಯನ್ನು ಪಡೆದೇ
ಸನ್ಯಾಸಿಯಾದರು.ಸರ್ವಸಂಗಪರಿತ್ಯಾಗಿಯಾದ ಮೇಲೂ ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಆಗಮಿಸಿದರು…ನಮ್ಮ
ಈ ಜನಾಂಗ,ನಮ್ಮ ಈ
ಪರಂಪರೆ,ನಮ್ಮ ಈ
ಪುರಾಣೇತಿಹಾಸಗಳು ಜಡಚೇತನಗಳಲ್ಲೂ ಕೂಡಾ ಮಾತೃತ್ವವನ್ನು ಕಂಡಿವೆ.ಮಾತೃತ್ವವನ್ನು ಆದಿಶಕ್ತಿ ಎಂದು
ಆರಾಧಿಸುತ್ತಿವೆ.ಈ ಎಲ್ಲ ಮಹಾನ್ ಮಹಾನ್ ಮಹಾತ್ಮೆಗಳಿಗಿಂತ ದೊಡ್ಡವನೇನಲ್ಲವಲ್ಲ
ನೀನು!ಹೆತ್ತವರನ್ನೇ ಸರಿಯಾಗಿ ಪಾಲಿಸದ ನೀನು,ಜಗತ್ತಿಗೇನು ಕೊಡಬಲ್ಲೆ?ಸಚ್ಚಿದಾನಂದಸ್ವರೂಪವೇನೆಂದರೇನೆಂದರಿಯದ
ಪಾಮರಳು ನಾನೆಂದುಕೊಂಡೆಯಾ?ಸಂಸಾರದೊಳಗೊಮ್ಮೆ
ಧುಮುಕಿ ನೋಡು. ತೀರವಿರದ ಆ ಸಾಗರದಲ್ಲಿ ಈಜುವುದೇ ಒಂಥರದ ರೋಮಾಂಚನ!..ಕ್ಷಣಕ್ಷಣವೂ ಮೈದಡವುವ
ಪ್ರೀತಿಯ ಆಲಿಂಗನ!..ನಮ್ಮ ನಮ್ಮ ತೀರಗಳನ್ನು ನಾವು ನಾವೇ ಸೃಷ್ಟಿಸಿಕೊಳ್ಳುವಂತೆ ಮಾಡುವುದೇ ಅದರ
ಜಾಯಮಾನ..!ಸತ್ತ ನಂತರದ ಮೋಕ್ಷಕ್ಕಿಂತ ಬದುಕಿನೊಳಗಿನ ಐಕ್ಯ ಚೆಂದ,ಅಲ್ಲವೇ?ಮೋಕ್ಷ ಸಿಗುತ್ತದೋ ಇಲ್ಲವೋ
ತಿಳಿದವರಾರು?ಆದರೆ,ನೆಚ್ಚಿಕೊಂಡ ಹಚ್ಚಿಕೊಂಡ ಬದುಕಿನಲ್ಲಿ
ಪ್ರೀತಿ ಸಿಗುತ್ತದೆ.ಆ ಪ್ರೀತಿಯಲ್ಲೇ ನೀ ಹುಡುಕುವ ಸಚ್ಚಿದಾನಂದ ಸ್ವರೂಪವಿದೆ…ಸಂಸಾರದ ಕೊನೆಯ
ಮಜಲೇ ಮೋಕ್ಷದೊಂದಿಗಿನ ಸಂದರ್ಶನ ಅಲ್ಲವೇನಪ್ಪಾ?..ದೀಪ ಹಚ್ಚುವುದು ಸುಲಭ.ಆದರೆ,ಆರದಂತೆ ನೋಡಿಕೊಳ್ಳುವುದು ಕಷ್ಟ ಕಣೋ!..ಸಂಸಾರವೆಂಬುದು
ಒಂದು ಸುಂದರ ಅನುಭೂತಿ!ಅನುಭವಿಸಿ ನೋಡು,ಅರ್ಥವಾಗುತ್ತದೆ!!ಅರ್ಥಗಳು ತಾನಾಗಿ
ಹುಟ್ಟುವುದಿಲ್ಲ.ಅವುಗಳ ಸೆಲೆಗಳಿಗಾಗಿ ಅನ್ವೇಷಿಸಬೇಕು.ಅವುಗಳ ಹುಟ್ಟಿಗಾಗಿ
ಧೇನಿಸಬೇಕು.ಹೋಗ್ಬೇಡ್ವೋ…” ಅಂತ ಜಾನಕಿ
ಸಿದ್ದಾರ್ಥನ ಕಾಲಗಳನ್ನು ಹಿಡಿದುಕೊಂಡಳು. “ಅಮ್ಮಾ!ಇದೇನ್ ಮಾಡ್ತಾ ಇದ್ದೀರಿ,ನೀವು?ದೇವತೆಯ ಪ್ರತಿರೂಪದಂತಿರುವ ತಾಯಿ,ಮಗನ ಕಾಲನ್ನೆಲ್ಲಾ ಹಿಡಿಯಬಾರದಮ್ಮಾ…”ಅಂತ ಹೇಳುತ್ತಾ,ಮನೆಯ ಹೊಸ್ತಿಲೆಡೆಗೆ ಬಂದ.ತನ್ನ
ಕೈಲಿದ್ದ ಚೀಲವನ್ನು ತೆಗೆದು,ಅಲ್ಲೇ
ಕೆಳಗಿಟ್ಟು,ದೇಹದ
ಅರ್ಧಭಾಗ ಮನೆಯ ಒಳಗೂ,ಇನ್ನರ್ಧ
ಭಾಗ ಮನೆಯ ಹೊರಗೂ ಇರುವಂತೆ,ಹೊಸ್ತಿಲ
ಮೇಲೆ ಕಣ್ಮುಚ್ಚಿ ಕುಳಿತುಬಿಟ್ಟ. ಆಚೆ ಹೋಗಲೋ,ಇಲ್ಲೇ ಇರಲೋ ಎಂಬ ದ್ವಂದ್ವ ಮನಸ್ಥಿತಿ..ಮನಸ್ಸು
ಡೋಲಾಯಮಾನವಾಗತೊಡಗಿತ್ತು…ತಂತಾನೇ ಕಣ್ಣಿಂದ ಎರಡು ಹನಿ ಉದುರಿತ್ತು. ಪಶ್ಚಾತ್ತಾಪಕ್ಕೋ,ಅಥವಾ ಸನ್ಯಾಸದ ಪರಿತಾಪಕ್ಕೋ
ತಿಳಿಯುತ್ತಿಲ್ಲ. ಆದರೆ,ಸ್ವಪ್ನಾ
ಓಡಿಬಂದು,ಆತನ
ಕೆನ್ನೆಯ ಮೇಲಿಂದಿಳಿದ ನೀರಿನ ಬಿಂದುಗಳನ್ನು ತನ್ನ ಬೊಗಸೆಯಲ್ಲಿ ಹಿಡಿದಳು.ಬದುಕಿಗೆ ಬೇಕಿರುವುದೂ
ಕೂಡಾ,ಕಣ್ಣೀರೊರೆಸುವ
ಕೈಗಳೇ ಅಲ್ಲವೇ?ಆತ
ಕಣ್ಮುಚ್ಚಿ ಹೊಸ್ತಿಲ ಮೇಲೆ ಹಾಗೇ ಪದ್ಮಾಸನದಲ್ಲಿಯೇ ಕುಳಿತಿದ್ದ..ದಾರಿಯಲ್ಲಿ ಹೋಗುತ್ತಿದ್ದ
ಭೈರಾಗಿಯೊಬ್ಬ ಇವನನ್ನು ನೋಡಿ ನಗುತ್ತಾನೆ..”ಸಂಸಾರವೇ ಹಾಗೆ..ಮರಳಿ ಮರಳಿ
ಸುತ್ತಿಕೊಳ್ಳುವ ಮಾಯಾವರ್ತುಲ..ಮನಸ್ಸು ಪಕ್ವವಾಗಬೇಕು..ನಮ್ಮೊಳಗಿನ ನಮ್ಮಲ್ಲಿ ನಾವು
ಒಂದಾಗಬೇಕು..ಸನ್ಯಾಸ ಸುಲಭವಾಗಿ ದಕ್ಕುವಂಥದ್ದಲ್ಲ..!!ವೈರಾಗ್ಯದ ಮೇಲೆ
ಅನುರಾಗವುದಿಸಬೇಕು…ಎಲ್ಲರಿಗೂ ಒದಗದ ಈ ಸುಯೋಗದಿಂದ ಆತನನ್ನು ಈ ಜನ
ವಂಚಿಸುತ್ತಿದ್ದಾರೆ…ನಶ್ವರತೆ ಅರಿವಾಗುವುದರೊಳಗೆ ಆಚೆಗಿನ ತೀರ ತಲುಪುವುದು ಸ್ವಪ್ನವೇ
ಆಗಿಹೋಗುತ್ತದೆ..ಋತು ಚಕ್ರ ಮರಳಿ ಮರಳಿ ತಿರುಗುತ್ತಿದೆ,ತಿರುಗುತ್ತಲೇ
ಇರುತ್ತದೆ…ಹ್ಹಹ್ಹಹ್ಹಾ..ಹ್ಹಹ್ಹಹ್ಹಾ…” ಎನ್ನುತ್ತಾ ಆ ಭೈರಾಗಿ ಮತ್ತೆ ಈ
ಮನೆಯತ್ತ ತಿರುಗಿಯೂ ನೋಡದೇ ಹಾಗೇ ನಡೆದುಬಿಟ್ಟ..ಸಿದ್ದಾರ್ಥ ಹಾಗೆಯೇ ಕುಳಿತಿದ್ದಾನೆ…ಒಂದು
ಕಡೆ ಬುದ್ಧನಾಗುವ ಮನಸ್ಸು ಹೊತ್ತು..ಇನ್ನೊಂದೆಡೆ ಸಂಸಾರಸ್ವಪ್ನದ ಖೈದಿಯಾಗಿದ್ದಾನೆ;ನೆನೆದು ಅಮ್ಮನ ಕೈತುತ್ತು..!!….
-Shree Talageri
ಚಿತ್ರ ಕೃಪೆ: ಗೂಗಲ್

Facebook ಕಾಮೆಂಟ್ಸ್

ಲೇಖಕರ ಕುರಿತು

ಶ್ರೀ ತಲಗೇರಿ

ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸ,ಆಗಾಗ ಲೇಖನಿ,ಕುಂಚಗಳ ಸಹವಾಸ..ಬದುಕಿನ ಬಣ್ಣಗಳಲ್ಲಿ ಪ್ರೀತಿಯ ಚಿತ್ರ ಬಿಡಿಸಿ ಖುಷಿಪಡುತ್ತ,ಶಬ್ದಗಳಿಗೆ ಜೀವ ಕೊಡುವ ಪ್ರಯತ್ನದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿರುವ ಕನಸು ಕಂಗಳ ಹುಡುಗ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!