ಅಂಕಣ

ಮುರುಕು ಸ್ವಪ್ನ ಬಿಂಬ….

…ಬಿಡುಗಡೆಗೆ ಹಂಬಲಿಸುತಿಹ ಅಂತರ್ಮುಖಿಯ ನಭ….

ಮೌನ…ಎದೆ ಕರಗಿಸುವ ಮೌನ..ಮರುಕ್ಷಣ ರಕ್ತಹೆಪ್ಪುಗಟ್ಟುವ ಆಕ್ರಂದನ..ಹೃದಯ ಮಿಡಿವ ಮೃದು ತಂಗಾಳಿಯಲ್ಲಿ ಬಿರುಗಾಳಿಯ ಭೋರ್ಗರೆತದ ಝೇಂಕಾರವೇಕೆ? ನಂದಗೋಕುಲದಂತಾಗಬೇಕಿದ್ದ ಮನೆಯ ನಂದಾದೀಪ ನಂದಿದ್ದೇಕೆ?ನೆಲಕ್ಕೆ ಏನೋ ಬಡಿದಂತೆ ಸದ್ದು..ಕಿಟಾರನೆ ಕಿರುಚಿಕೊಂಡಿದ್ದಾರೆ ಯಾರೋ! ದೇವರ ಕೋಣೆಯೊಳಗಿಂದ ಓಡಿಬಂದಳು ಜಾನಕಿ…ಕೆಲಸದವಳು ಗರಬಡಿದವರಂತೆ ನಿಂತುಬಿಟ್ಟಿದ್ದಾಳೆ.ಜಾನಕಿಗೆ ಗಾಬರಿ! “ಹೇ!ಸೀಮಾ,ಏನಾಯ್ತೇ ಏನಾಯ್ತೇ?”..ಸೀಮಾ ಮಾತನಾಡಲು ತೊದಲುತ್ತಿದ್ದಾಳೆ. “ಅಮ್ಮಾ…ಅಮ್ಮಾ..ಅಲ್ಲಿ…ಅಲ್ಲಿ ನೋಡಿ…” ಎಂದು ಕೈತೋರಿಸಿದಳು. ಜಾನಕಿಯ ಗಂಡ ರಘುನಾಥರಾಯರು ಪ್ರಜ್ಞೆ ತಪ್ಪಿಬಿದ್ದಿದ್ದರು.ಅವರ ಹಣೆಯಿಂದ ರಕ್ತ ಒಸರುತ್ತಿತ್ತು.ಜಾನಕಿ ನೋಡುನೋಡುತ್ತಿದ್ದಂತೆಯೇ ಕುಸಿದಳು.ಸೀಮಾ ತಡಮಾಡಲಿಲ್ಲ.ಅದೆಲ್ಲಿಂದ ಅವಳಲ್ಲಿ ಕರ್ತವ್ಯಪ್ರಜ್ಞೆ ಜಾಗೃತವಾಯಿತೋ,ತಕ್ಷಣ ಜಾನಕಿಯನ್ನು ಹಿಡಿದಳು ಮತ್ತು ಖುರ್ಚಿಯ ಮೇಲೆ ಕೂರಿಸಿದಳು.ಅವಳಿಗೆ ಎತ್ತ ಹೋಗಬೇಕೆಂದು ತಿಳಿಯುತ್ತಿಲ್ಲ;ಏನು ಮಾಡಬೇಕೆಂದು ಕೂಡಾ ತಿಳಿಯುತ್ತಿಲ್ಲ.ತತ್’ಕ್ಷಣ ರಘುನಾಥರಲ್ಲಿಗೆ ಓಡಿದಳು.”ರಾಯರೇ,ರಾಯರೇ…” ಕೈ ಹಿಡಿದು ಅಲುಗಾಡಿಸುತ್ತಿದ್ದಾಳೆ.ಎಚ್ಚರಾಗುತ್ತಿಲ್ಲ.ನೀರು ತರಲಿಕ್ಕೆ ಮತ್ತೆ ಓಡಿದಳು.ಹಾಗೆಯೇ,ಅಲ್ಲಿಯೇ ಇದ್ದ ಜಾನಕಿಯ ಮುಖಕ್ಕೆ ನೀರು ಸಿಂಪಡಿಸಿ,ಮತ್ತೆ ರಘುನಾಥರಲ್ಲಿಗೆ ಬಂದಳು.ಅವರ ಮುಖಕ್ಕೆ ನೀರು ಹಾಕಿ,ಕರೆದಳು, “ರಾಯರೇ,ಎದ್ದೇಳಿ ಎದ್ದೇಳಿ..” ಅಷ್ಟೊತ್ತಿಗೆ,ಸಾವರಿಸಿಕೊಂಡ ಜಾನಕಿ ಅಲ್ಲಿಗೆ ಓಡಿಬಂದಳು. “ರ್ರೀ…ಏಳ್ರೀ…ಏ…ರ್ರೀ.. ಎದ್ದೇಳ್ರೀ..” ಎರಡೂ ಭುಜ ಹಿಡಿದು ಅಲುಗಾಡಿಸಿದಳು.. ಇಲ್ಲ ರಘುನಾಥರಿಗೆ ಎಚ್ಚರವಾಗುತ್ತಲೇ ಇಲ್ಲ. “ಅಯ್ಯೋ ದೇವ್ರೇ! ಈಗ್ ಏನ್ ಮಾಡೋದಪ್ಪಾ.. ಸೀಮಾ! ಹೋಗು, ಪ್ರಣವನಿಗೆ ಫೋನ್ ಮಾಡು,ಹೋಗು..” ಜಾನಕಿ ಸೀಮಾಳನ್ನು ದೂಡಿದಳು. ಸೀಮಾ ಓಡಿಹೋಗಿ ಪ್ರಣವನಿಗೆ ಫೋನ್ ಮಾಡಿ ವಿಷಯ ತಿಳಿಸಿದಳು. ರಘುನಾಥರನ್ನು ಎಬ್ಬಿಸಲು ಜಾನಕಿಯ ಪ್ರಯತ್ನ ನಡೀತಾನೇ ಇತ್ತು… “ರ್ರೀ..ಏಳ್ರೀ..ಅಯ್ಯೋ…ಏನಾಯ್ತ್ರೀ.. ಏ…ರ್ರೀ..ಎದ್ದೇಳ್ರೀ…” ರಘುನಾಥರ ಅಂಗೈ ಹಿಡಿದು ಉಜ್ಜಿದಳು. ಸೀಮಾ ರಘುನಾಥರ ಕಾಲುಗಳನ್ನು ಉಜ್ಜಲು ಹಿಡಿದುಕೊಂಡಾಗ, ಏನೋ ಒಂಥರ ತಲ್ಲಣ.. ಮರಗಟ್ಟಿದಂತೆ ಭಾಸ..!ಆದರೂ ಕಾಲುಗಳನ್ನು ಉಜ್ಜುತ್ತಲೇ ಹೋದಳು.ಇತ್ತ ಜಾನಕಿ,ರಘುನಾಥರನ್ನು ಎಬ್ಬಿಸಲು ಪ್ರಯತ್ನಿಸುತ್ತಲೇ ಇದ್ದಾಳೆ.ಅಷ್ಟೊತ್ತಿಗೆ ಡಾಕ್ಟರ್ ಪ್ರಣವ್ ಬಂದರು.ನಾಡಿ ಹಿಡಿದಾಗ ಸಣ್ಣದಾಗಿ ಹೊಡೆದುಕೊಳ್ಳುತ್ತಲೇ ಇತ್ತು. “ಡಾಕ್ಟರ್..ಡಾಕ್ಟರ್..ನೋಡಿ ನಮ್ಮೆಜಮಾನ್ರು… ರ್ರೀ…ಏಳ್ರೀ… ಎದ್ದೇಳ್ರೀ.. ಏ..ರ್ರೀ..ಏಳ್ರೀ…” “ಅಮ್ಮಾ,ಭಯಪಡಬೇಡಿ,ಏನೋ ಆಗಲ್ಲ,ಇರಿ,ನಾ ನೋಡ್ತಿದ್ದೀನಲ್ಲಾ..” ಪ್ರಣವ್ ಹೇಳ್ತಾ ಇದ್ದಾರೆ. ಪ್ರಣವ್ ರಘುನಾಥರಿಗೆ ಒಂದು ಚುಚ್ಚುಮದ್ದನ್ನು ಕೊಟ್ಟರು.ಪ್ರಣವ್ ರಘುನಾಥರ ಎದೆಯ ಮೇಲೆ ಕೈಯಿಟ್ಟು,ನಿಧಾನವಾಗಿ,ಮೃದುವಾಗಿ ಗುದ್ದಿದರು…ಎರಡು ಮೂರು ಸಲ ಹಾಗೇ ಮಾಡಿದರು.ರಘುನಾಥರ ಕಣ್ರೆಪ್ಪೆಗಳು ಅಲುಗಾಡಿದವು. “ನನ್ ಮಗ.. ನನ್ ಮಗ…” ಮಲಗಿದಲ್ಲಿಯೇ ಮುಲುಗುತ್ತಿದ್ದಾರೆ. ಜಾನಕೀ..ಅಂತ ಒಮ್ಮೆಲೇ ಜೋರಾಗಿ ಕಿರುಚಿದರು…ಮತ್ತೆ ಪ್ರಜ್ಞೆ ತಪ್ಪಿದರು. ಡಾಕ್ಟರ್ ಪ್ರಣವ್ ಅರಿತುಕೊಳ್ಳುವಷ್ಟರಲ್ಲಿ ಪರಿಸ್ಥಿತಿ ಬದಲಾಗಿಬಿಟ್ಟಿತ್ತು.ಜಾನಕಿ ರೋಧಿಸುತ್ತಿದ್ದಾಳೆ. ಸೀಮಾ ಜಾನಕಿಯತ್ತ ನೋಡಿದಳು.ಜಾನಕಿಯ ಹಣೆಯ ಮೇಲಿನ ಸಿಂಧೂರ ಕಾಣೆಯಾಗಿ,ಅವಳ ಹಣೆ ಬೋಳುಬೋಳಾಗಿತ್ತು. ಸೀಮಾಳ ಎದೆ ‘ಝಲ್’ ಎಂದಿತು. ರಘುನಾಥರತ್ತ ನೋಡಿದಳು.ಜಾನಕಿಯ ಹಣೆಬೊಟ್ಟು ರಘುನಾಥರ ಹಣೆಗೆ ಅಂಟಿಕೊಂಡಿತ್ತು.ಇತ್ತ ಪ್ರಣವ್ ರಘುನಾಥರ ನಾಡಿ ಹಿಡಿದು ಮತ್ತೆ ನೋಡಿದರು.ಹಿಡಿದ ನಾಡಿ ಮಿಡಿಯುತ್ತಿಲ್ಲ. ಪಟಪಟನೆ ಹೊಡೆದುಕೊಳ್ಳಬೇಕಾಗಿದ್ದ ಹೃದಯ ಸ್ತಬ್ಧವಾಗಿತ್ತು. ನಾಡಿ ಹಿಡಿದು ನೋಡಿ ರಘುನಾಥರ ಕೈ ಬಿಟ್ಟಾಗ,ಕೈ ಧಡ್ಡನೆ ನೆಲಕ್ಕೆ ಬಿತ್ತು. ಜಾನಕಿಗೆ ದಿಕ್ಕೇ ತೋಚುತ್ತಿಲ್ಲ.ಪ್ರಣವ್ ಎದ್ದುನಿಂತರು. “ಅಮ್ಮಾ…ಧೈರ್ಯ ತಗೊಳ್ಳಿ…” ಎಂದಷ್ಟೇ ಹೇಳಿ, ಹೊರಬಿದ್ದು, ಸೀಮಾಳನ್ನು ಕರೆದರು. “ಸೀಮಾ,ಇವರ ಬಂಧುಬಳಗದವರಿಗೆಲ್ಲ ಬರಹೇಳು,ರಾಯರು ಹೋಗ್ಬಿಟ್ರು..” ಅಂತಷ್ಟೇ ಹೇಳಿ ಪ್ರಣವ್ ಹೊರಟುಬಿಟ್ರು. ಸೀಮಾಳಿಗೆ ಕತ್ತಲು ಕವಿದಂತಾಯಿತು. ತಕ್ಷಣ ಸಾವರಿಸಿಕೊಂಡು ಒಳಗೆ ಬಂದಳು. ರಘುನಾಥರ ಹತ್ತಿರವೇ ಕುಳಿತಿದ್ದ ಜಾನಕಿ, “ಸೀಮಾ,ಏನಂದ್ರೇ ಡಾಕ್ಟರ್ ಪ್ರಣವ್ ಏನಂದ್ರೇ?..” ಅಂತ ಕೇಳಿದಳು “ಅಮ್ಮಾ..ಅಮ್ಮಾ…ಎಲ್ಲಾ ಮುಗೀತಮ್ಮಾ!…” ಸೀಮಾ ಕೈ ತಿರುಗಿಸಿದಳು,ಹಾಗೇ ಮೇಲೆ ನೋಡಿದಳು…”ಆ…ರ್ರೀ…” ಜಾನಕಿ ಎದೆ ಬಡಿದುಕೊಳ್ಳತೊಡಗಿದಳು.ಅವಳ ಕೈಗಳೆರಡು ಪರಸ್ಪರ ಘರ್ಷಿಸಿ,ಅವಳ ಕೈಬಳೆಗಳು ಒಂದೊಂದಾಗಿ ಚೂರಾಗಿ ಬೀಳತೊಡಗಿದವು. “ಅಯ್ಯೋ ದೇವ್ರೇ” ಅಂತ ತಲೆಮೇಲೆ ಕೈಯಿಟ್ಟುಕೊಂಡು ಕೂದಲು ಕೆದರಿಕೊಂದಳು. ಬಿದ್ದು ಬಿದ್ದು ಹೊರಳಾಡಿದಳು. ಅಳಿದುಳಿದ ಬಳೆಗಳೂ ಚೂರುಚೂರಾಗಿ ನೆಲದ ಮೇಲೊರಗಿದವು;ಜಾನಕಿಯಂತೆಯೇ! ಇತ್ತ ಸೀಮಾ,ರಘುನಾಥರ ಹೆಣ್ಮಕ್ಕಳಿಗೆ,ಬಂಧುಬಳಗದವರಿಗೆಲ್ಲಾ ಫೋನ್ ಮೂಲಕ ವಿಷಯ ತಿಳಿಸಿದಳು.ಜಾನಕಿಯನ್ನು ಸಮಾಧಾನಪಡಿಸುವುದಾದರೂ ಹೇಗೆ?ಸೀಮಾಳಿಗೆ ಜಾನಕಿಯನ್ನು ಹೇಗೆ ಸಮಾಧಾನಿಸಬೇಕೆಂದೇ ತಿಳಿಯುತ್ತಿಲ್ಲ. ವಿಲವಿಲನೆ ಒದ್ದಾಡಿದಳು.ಹೇಗೆ,ಹೇಗೆ ಸಮಾಧಾನಿಸಲಿ?…ಅರ್ಥವೇ ಆಗುತ್ತಿಲ್ಲ. ಜಾನಕಿಯ ಹತ್ತಿರ ಬಂದಳು.”ಅಮ್ಮಾ..ಅಮ್ಮಾ..”ಎಂದು ರೋಧಿಸುತ್ತಾ ಒಂದು ಕಡೆ ಕುಳಿತುಬಿಟ್ಟಳು. ಅಷ್ಟೊತ್ತಿಗೆ ಅವರ ರೋಧನವನ್ನು ಕೇಳಿ,ಅಕ್ಕಪಕ್ಕದ ಮನೆಯವರೆಲ್ಲಾ ಬಂದುಸೇರಿದ್ದರು.ಎಲ್ಲರೂ ಮರುಕಪಡುವವರೇ! ಒಬ್ಬ ಮನುಷ್ಯನ ನಿಜವಾದ ಘನತೆ,ಬದುಕಿನ ಔನ್ನತ್ಯ ತಿಳಿಯುವುದು ಆತನ ಸಾವಿನಲ್ಲಂತೆ! ಎಲ್ಲರೂ ಸತ್ತ ರಘುನಾಥರಿಗಾಗಿ ಕಂಬನಿ ಮಿಡಿಯುವವರೇ! ಅವರನ್ನು ಹಾಡಿಹೊಗಳುವವರೇ! ಎಂತಹ ಮೃದುತ್ವವನ್ನು ಹೊಂದಿದವರಾಗಿದ್ದರು…ಅಂಥವರಿಗೆ ೫೮ನೇ ವರ್ಷಕ್ಕೇ ಸಾವೇ? ದೇವರು ಕ್ರೂರಿ, ಆತನಿಗೆ ಕರುಣೆಯೆಂಬುದೇ ಇಲ್ಲ..ಅಂತ ಒಬ್ಬರು ಹೇಳಿದರೆ,ಇನ್ನೊಬ್ಬರು,ನಿನ್ನೆ ಸಂಜೆ ನನ್ ಜೊತೆ ನಗ್ ನಗ್ತಾ ಮಾತಾಡಿದ್ರು..ಇವತ್ ಸಂಜೆ ವಾಕಿಂಗಿಗೆ ಹೋಗಿ,ದೇವಸ್ಥಾನಕ್ಕೆ ಹೋಗ್ಬರೋಣ ಅಂತ ಹೇಳ್ತಾ ಇದ್ರು…ಅಂತ ಹೇಳ್ತಾ ಇದ್ದಾರೆ. ಅಷ್ಟೊತ್ತಿಗಾಗಲೇ ಇಡೀ ಊರಿಗೇ ಸುದ್ದಿ ತಲುಪಿತ್ತು. ಎಲ್ಲರೂ ರಘುನಾಥರ ಮನೆ ಮುಂದೆ ಸೇರತೊಡಗಿದರು.ಎಲ್ಲರಿಗೂ ರಘುನಾಥರನ್ನು ಕಂಡರೆ ಅಕ್ಕರೆ,ಗೌರವ. ಆದರೆ,ಈಗ ರಘುನಾಥರ ಜೀವ ವಿಧಿಯ ಬೊಕ್ಕಸ ಸೇರಿತ್ತು. ಎಲ್ಲರೂ ರಘುನಾಥರ ಗುಣಗಾನ ಮಾಡುತ್ತಿದ್ದಾರೆ. ರಘುನಾಥರ ಬಂಧುಬಳಗದವರೆಲ್ಲಾ ಸೇರತೊಡಗಿದರು.ಅವರ ಇಬ್ಬರು ಹೆಣ್ಮಕ್ಕಳು ಬಂದು ಸೇರಿದರು.ರಘುನಾಥರ ಹಿರಿಮಗಳು ಮತ್ತು ಅವಳ ಮಗಳು, ರಘುನಾಥರ ಕಿರಿಮಗಳು ಮತ್ತು ಅವಳ ಮಗ…ಹೀಗೆ ಎಲ್ಲರೂ ನೆರೆದಿದ್ದಾರೆ. ಆದರೂ,ಎಲ್ಲರೂ ಇನ್ನೂ ಒಬ್ಬರ ಬರುವಿಕೆಗಾಗಿ ಕಾಯ್ತಾ ಇದ್ದಾರೆ. ರಘುನಾಥರ ಹಿರಿಮಗಳು ಸಾರಿಕಾ, “ಸೀಮಾ!ಸಿದ್ದಾರ್ಥನಿಗೆ ವಿಷ್ಯ ತಿಳ್ಸಿದ್ದೀಯಾ?” ಅಂತ ಕೇಳಿದಳು. “ಹೌದಮ್ಮಾ..ತಿಳ್ಸಿದ್ದೀನಮ್ಮಾ..ಹೌದಾ,ಅಂತ ಕೇಳಿ,ಫೋನ್ ಇಟ್ಬಿಟ್ರು..ಬರ್ತೀನೋ ಇಲ್ವೋ ಅಂತಾನೂ ಹೇಳಿಲ್ಲಮ್ಮಾ..” ಅಂತ ಸೀಮಾ ಹೇಳಿದಾಗ, “ಅವ್ನ್ ನಂಬರ್ ಕೊಡು,ನಾನ್ ಮಾತಾಡ್ತೀನಿ”,ಅಂತ ಸಾರಿಕಾ ಸಿದ್ದಾರ್ಥನಿಗೆ ಕರೆ ಮಾಡಿದಳು. “ಹಲೋ ನಮಸ್ತೇ..ಸಿದ್ದಾರ್ಥ ಇದ್ದಾನಾ…ಸ್ವಲ್ಪ ಕರೀತೀರಾ?..” ಸಾರಿಕಾ ಕೇಳಿದಳು. ಆ ಕಡೆಯಿಂದ, “ಹ್ಹ…ಮಾ ಅವ್ರು ತನಗೆ ಯಾವ್ದೇ ಕರೆ ಬಂದ್ರೂ ಈಗ ಆಗೋದಿಲ್ಲಾ ಅಂತ ಹೇಳ್ಲಿಕ್ ಹೇಳಿದ್ದಾರೆ…” ಅಂತ ಆತ ಹೇಳಿದ. “ಇಲ್ಲ,ತುಂಬಾ ತುರ್ತು ವಿಷಯ..ನೀವು ಆತನನ್ನು ಕರೀಲೇಬೇಕು..ದಯಮಾಡಿ ಕರೀರಿ,ಅವ್ನ ತಂದೆಯವರು ತೀರ್ಕೊಂಡಿದ್ದಾರೆ,ದಯವಿಟ್ಟು ಕರೀರಿ..” ಸಾರಿಕಾ ಹೇಳಿದಳು. ಆತ, “ಹ್ಹ..ಕರೀತೀನಮ್ಮಾ” ಅಂತ ಹೇಳಿದ. ಎರಡು ಕ್ಷಣ ಬಿಟ್ಟು…”ಹ್ಹ,ಹೇಳಿ ಮಾ..”ಅನ್ನೋ ಪ್ರಶಾಂತವಾದ ಧ್ವನಿ. “ಏ ಸಿದ್ದಾರ್ಥ್,ನಾನು ಕಣೋ,ಅಮ್ಮ ಅಲ್ಲ,ನಿನ್ನ ಅಕ್ಕ ಸಾರಿಕಾ ಮಾತಾಡ್ತಿದ್ದೀನಿ..” “ಹ್ಹ,ಗೊತ್ತಾಯ್ತು,ಆದರೆ,ನಾನೀಗ ನನಗಿಂತ ಹಿರಿಯ ಸ್ತ್ರೀಯರೆಲ್ಲರನ್ನೂ ‘ಅಮ್ಮಾ’ ಅಂತಾನೇ ಕರೆಯೋದು..ಹೇಳಿ…” ಅಂತ ಮತ್ತೆ ಅಷ್ಟೇ ಪ್ರಶಾಂತವಾದ ಧ್ವನಿಯಲ್ಲಿ ಆತ ಹೇಳಿದ. ಇವಳಿಗೆ ಆಶ್ಚರ್ಯ,ಇನ್ನೊಂದೆಡೇ ಆತಂಕ.ಇತ್ತ ಎಲ್ಲರೂ ಬಿಕ್ಕಿ ಬಿಕ್ಕಿ ಅಳ್ತಾ ಇದ್ದಾರೆ. “ಹೇ ಸಿದ್ದಾರ್ಥ್..ಅಪ್ಪ…ಅಪ್ಪ ಹೋಗ್ಬಿಟ್ರು ಕಣೋ..ನೀನು ಆದಷ್ಟ್ ಬೇಗ ಬಾರೋ..ಎಲ್ರೂ ನಿನಗೋಸ್ಕರ ಕಾಯ್ತಾ ಇದ್ದೀವಿ.ಬೇಗ್ ಬಾರೋ..” ಅಳ್ತಾ ಹೇಳ್ತಾಳೆ. “ಆದ್ರೆ ನಾನೀಗ ಬರೋ ಹಾಗಿಲ್ಲ, ಬರೋವಂಥ ಸ್ಥಿತೀಲೂ ನಾನಿಲ್ಲ. ಬರ್ಲಿಕ್ಕಾಗೋದಿಲ್ಲಮ್ಮಾ…” ಸಿದ್ದಾರ್ಥನ ದೃಢವಾದ ಮತ್ತು ಮತ್ತಷ್ಟೇ ಪ್ರಶಾಂತವಾದ ಧ್ವನಿ..”ಹೇ ಸಿದ್ದಾರ್ಥ್,ನಿಂಗ್ ಏನ್ ತಲೆ ಕೆಟ್ಟಿದ್ಯೇನೋ?ಅಪ್ಪ ಸತ್ತಿದ್ದಾರೆ,ಬಾರೋ ಅಂದ್ರೆ ಬರೋಕ್ಕಾಗಲ್ಲ ಅಂತಿದ್ದೀಯಲ್ಲೋ.ಹುಚ್ಚು ಹಿಡ್ದಿದ್ಯೇನೋ?…” ಫೋನಲ್ಲೇ ಬಿಕ್ಕಳಿಸ್ತಾ,ಗದರ್ತಾ ಇದ್ದಾಳೆ,ಸಾರಿಕಾ.”ಕ್ಷಮಿಸಮ್ಮಾ,ಎಲ್ಲವನ್ನು ಬಿಟ್ಟುಬಂದವನಿಗೆ ಇನ್ನೆಲ್ಲಿಯ ಸಂಬಂಧ!ಸಂಬಂಧ ಬಿಂದುಗಳ ಪರಿಧಿಯಿಂದ ಆಚೆ ಬಂದವನಿಗೆ ಇನ್ನೆಲ್ಲಿಯ ಅಪ್ಪನೆಂಬ ಬಾಂಧವ್ಯ!ಎಲ್ಲವನ್ನೂ ತೊರೆದಾಗಿದೆ..ಮತ್ತ್ಯಾಕೆ ಸಂಸಾರದ ಮೋಹದ ಪರದೆಯನ್ನು ನನ್ನ ಸುತ್ತಲೂ ಹರಡುತ್ತಿದ್ದೀಯಾ? ಜಾಲು ಜಾಲಾದ ಬಲೆಯೊಳಗೆ ಜಗತ್ತಿಲ್ಲ,ಪರದೆ ಸರಿಸಿ,ಪರಿಧಿಯನ್ನು ದಾಟಿದವನನ್ನು ಮತ್ತ್ಯಾಕೆ ಕಾಯುತ್ತೀರಾ?ಮುಂದಿನ ಕೆಲಸಗಳನ್ನು ನೆರವೇರಿಸಿ…” ವಿಚಿತ್ರ ಧ್ವನಿಯಲ್ಲಿ ಆತ ಉಸುರಿದ.ಇತ್ತ ಸಾರಿಕಾಳಿಗೆ ಸಿಡಿಲು ಬಡಿದಂತಾಯಿತು. “ಹೆತ್ತ ಅಪ್ಪನ ಹೆಣ ನೋಡಲೂ ಬರೋದಿಲ್ಲ ಅಂತ ಹೇಳ್ತಿದ್ದೀಯಲ್ಲೋ,ತಲೆ ನೆಟ್ಟಗಿಲ್ವೇನೋ ನಿಂಗೆ…ಹ್ಹೇ..ಯಾಕೋ ಯಾಕೋ ಹೀಗ್ ಮಾಡ್ತಾ ಇದ್ದೀಯಾ?..” ಜೋರಾಗಿ ಕಿರುಚ್ತಾನೇ ಹೇಳ್ತಿದ್ದಾಳೆ.ತಕ್ಷಣ ಸಾರಿಕಾಳ ಮಗಳು ಸ್ವಪ್ನಾ ಫೋನ್ ತೆಗೆದುಕೊಂಡಳು. “ಮಾವ..ದಯವಿಟ್ಟು ಬನ್ನಿ ಮಾವ..ನಿಮಗೋಸ್ಕರ ಎಲ್ರೂ ಕಾಯ್ತಿದಾರೆ..”ಅಂತ ಹೇಳ್ತಿದ್ದಾಳೆ. ಸಾರಿಕಾ ತನ್ನ ಮಾವನ ಹತ್ತಿರ, ಮಾವ ಅವನು ಬರೋದಿಲ್ವಂತೆ..ಅಂತ ಗೋಳಾಡ್ತಾ ಇದ್ದಾಳೆ.ಆಗ ಸ್ವಪ್ನಾಳ ಕೈಯಿಂದ ಸಾರಿಕಾಳ ಮಾವ ಫೋನ್ ತೆಗೆದುಕೊಂಡರು. “ಸಿದ್ದಾರ್ಥ..ನಾನು ಸಾರಿಕಾಳ ಮಾವ ಅರವಿಂದ ಮಾತ್ನಾಡ್ತಾ ಇರೋದು..ಯಾಕಪ್ಪಾ,ಏನಾಯ್ತು?ಹೆತ್ತ ತಂದೆ ಸತ್ತಿರುವ ಸಮಯದಲ್ಲೂ ಆತನನ್ನು ನೋಡೋದಿಕ್ಕೆ ಬರೋದಿಲ್ಲ ಅಂತ ಹೇಳ್ತಿದ್ದೀಯಲ್ಲಾ,ಯಾಕಪ್ಪಾ,ಯಾಕಪ್ಪಾ ಈ ದ್ವೇಷ?..” ಅಂತ ಅರವಿಂದರಾಯರು ಹೇಳಿದರು. “ಕ್ಷಮಿಸಿ..ನಾನು ಬರೋದಿಲ್ಲ.ದ್ವೇಷವಲ್ಲ,ಸಂಬಂಧಗಳನ್ನು ತ್ಯಜಿಸಿ ನಿಂತ ನನಗೆ ಮತ್ತೆಲ್ಲಿಯ ಸಂಬಂಧಗಳ ಗಂಟು?ಯಾಕಾಗಿ ಬರಲಿ ನಾನಲ್ಲಿಗೆ?..ಸಿದ್ದಾರ್ಥ ಪ್ರಶ್ನಿಸುತ್ತಾನೆ.” “ನೋಡು ಸಿದ್ದಾರ್ಥ,ಇದು ವಾದ ಮಾಡಬೇಕಾದ ಸಮಯವಲ್ಲ ಅಥವಾ ಸಂಸಾರದೊಳಗಿನ ಬದುಕು ಮತ್ತು ಸಂಸಾರದಾಚೆಗಿನ ಬದುಕಿನ ಬಗ್ಗೆ ಚರ್ಚಿಸಿ,ನಿಧಾನವಾಗಿ ನಿರ್ಧಾರ ತೆಗೆದುಕೊಳ್ಳುವ ಸಮಯವೂ ಅಲ್ಲ.ನಿನಗೆ ಕೈ ಮುಗಿದು ಕೇಳ್ಕೋತೀನಿ,ಹೆತ್ತವರ ಋಣ ತೀರಿಸುವ ನೆಪಕ್ಕಾದರೂ ದಯವಿಟ್ಟು ಬಾ..ಮಗನಾದ ನಿನ್ನ ಪಾಲಿನ ಕರ್ತವ್ಯಗಳನ್ನು ಮರೆಯಬೇಡ.ನೀನು ಬಂದ ನಂತರ,ಮುಂದಿನ ಬದುಕಿನ ಬಗ್ಗೆ ವಿಮರ್ಶಿಸೋಣ.ನಿನ್ನ ಈ ಭೂಮಿಗೆ ತಂದ ತಪ್ಪಿಗೆ,ಸತ್ತ ನಿನ್ನ ತಂದೆ ಪಶ್ಚಾತ್ತಾಪಪಡಲಿ.ನಿನ್ನಲ್ಲಿ ಬದುಕನ್ನಿಟ್ಟುಕೊಂಡು,ಬದುಕಿನ ಅರ್ಥವನ್ನೇ ಕಳೆದುಕೊಂಡ,ನಿನ್ನ ಆ ನತದೃಷ್ಟ ತಂದೆಯ ಮುಖವನ್ನು ಕೊನೇ ಬಾರಿ ಒಮ್ಮೆ ನೋಡಲಿಕ್ಕಾದರೂ ಬಾರೋ.ಮತ್ತೆಂದೂ ಆ ಪುಣ್ಯಾತ್ಮನ ಮುಖ ನಿನಗೆ ನೋಡೋದಿಕ್ಕೆ ಸಿಗೋದಿಲ್ಲಾ..ಕೈಮುಗೀತೀನಿ ಕಣೋ..” ಹೇಳುತ್ತಲೇ ಇದ್ದಾರೆ. “ದಯವಿಟ್ಟು ಕ್ಷಮಿಸಿ, ತಾವು ಹಿರಿಯರು,ನನಗೆ ಕೈಮುಗಿಯುವುದು ಅಷ್ಟೊಂದು ಸಮಂಜಸವಲ್ಲ.ಬರುತ್ತೇನೆ,ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿ.ನಾನು ಬರುವ ದಾರಿಯಲ್ಲಿ ಮೂರು ಹಣತೆಗಳನ್ನು ಹಚ್ಚಿಡಿ.ಒಂದೊಂದು ಹಣತೆಯ ಬಳಿಯೂ ಒಂದೊಂದು ಹೂವನ್ನಿಡಿ..” ಅಂತ ಸಿದ್ದಾರ್ಥ ಹೇಳುತ್ತಾನೆ.

ಎಲ್ಲರ ಮುಖದಲ್ಲೂ ಪ್ರಶ್ನಾಭಾವ! ಎಲ್ಲಿ,ರಘುನಾಥರ ಮಗನೆಲ್ಲಿ?ಈಗ ಆತ ಎಲ್ಲಿದ್ದಾನೆ?ಏನು ಮಾಡುತ್ತಿದ್ದಾನೆ?ಆತ ಊರಿಗೆ ಬಂದದ್ದನ್ನು ನೋಡಿ ಮೂರ್ನಾಲ್ಕು ವರ್ಷಗಳೇ ಕಳೆದುಹೋಗಿವೆ..ಈಗ ನಿಮ್ಮ ಮನದಲ್ಲೂ ಎದ್ದಿರಬೇಕಲ್ಲವೇ ಈ ಎಲ್ಲ ಪ್ರಶ್ನೆಗಳು?ಯಾರು ಈ ಸಿದ್ದಾರ್ಥ ಅಂತ,ಯಾಕೆ ಆತ ಹಾಗೆಲ್ಲಾ ಹೇಳುತ್ತಿದ್ದಾನೆ ಅಂತ!ನಿಮ್ಮ ಎಲ್ಲ ಪ್ರಶ್ನೆಗಳಿಗೂ ಮುಂದೆ ಓದ್ತಾ ಓದ್ತಾ ಉತ್ತರ ಸಿಗುತ್ತೆ…

ಮುಂದುವರಿಯುವುದು..

ಚಿತ್ರ ಕೃಪೆ: ಗೂಗಲ್

Facebook ಕಾಮೆಂಟ್ಸ್

ಲೇಖಕರ ಕುರಿತು

ಶ್ರೀ ತಲಗೇರಿ

ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸ,ಆಗಾಗ ಲೇಖನಿ,ಕುಂಚಗಳ ಸಹವಾಸ..ಬದುಕಿನ ಬಣ್ಣಗಳಲ್ಲಿ ಪ್ರೀತಿಯ ಚಿತ್ರ ಬಿಡಿಸಿ ಖುಷಿಪಡುತ್ತ,ಶಬ್ದಗಳಿಗೆ ಜೀವ ಕೊಡುವ ಪ್ರಯತ್ನದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿರುವ ಕನಸು ಕಂಗಳ ಹುಡುಗ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!