Featured ಪ್ರಚಲಿತ

ನಿಜವಾಗಿಯೂ ಸ್ವಾತಂತ್ರ ಬೇಕಾಗಿರುವುದು ಯಾರಿಗೆ??

ಎಡಪಂಥೀಯ ಪಕ್ಷಗಳಿಗೆ ಮತ್ತು ಬುದ್ಧಿಜೀವಿಗಳ ಕಥೆ ಏನಾಗಿದೆ ಅಂದರೆ ಕೆಲಸವಿಲ್ಲದ ಬಡಗಿ ಅದ್ಯಾರದ್ದೋ ಮುಕುಳೀ ಕೆತ್ತಿದ ಅಂದಂಗೆ. ಕೇವಲ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷವನ್ನು ವಿರೋಧಿಸಲು ಈ ದೇಶವನ್ನು ವಿರೋಧಿಸುತ್ತಾರೆ. ದೇಶಕ್ಕಾಗಿ ಹಗಲಿರುಳು ಕಾಯುವ ಸೈನಿಕರನ್ನು ಹೀಯಾಳಿಸುತ್ತಾರೆ. ಸಂಸತ್ ಭವನಕ್ಕೆ ಬಾಂಬ್ ಇಟ್ಟ ದೇಶದ್ರೋಹಿಗಳನ್ನು ಶಹೀದ್ ಅನ್ನುತ್ತಾರೆ. ಮಾವೋವಾದಿ, ದೇಶದ್ರೋಹಿ ಸಂಘಟನೆಗಳನ್ನು ಬೆಂಬಲಿಸುತ್ತಾರೆ. ಇವರಿಗೆ ನರೇಂದ್ರ ಮೋದಿ ಸರಕಾರದ ಕಾರ್ಯಕ್ರಮಗಳನ್ನು, ಆಡಳಿತ ವೈಖರಿಗಳನ್ನು ವಿರೋಧಿಸಲು ಬೇರೆ ಹಲವು ಮಾರ್ಗಗಳಿತ್ತು. ಆದ್ರೆ ಈಗಾಗಲೇ ದೇಶವಾಸಿಗಳಲ್ಲಿ ಭರವಸೆ ಮೂಡಿಸಿರುವ ಮೋದಿ ಸರಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಮನಗಂಡೇ ನಕಲಿ ಅಸಹಿಷ್ಣುತೆಯ ಬೀಜವನ್ನು ಬಿತ್ತಲಾಯಿತು. ಕಾಂಗ್ರೆಸ್ ಕೃಪಾಪೋಷಿತ ಮಾಧ್ಯಮ ಲೋಕದ ಸೋ ಕಾಲ್ಡ್ ದಿಗ್ಗಜರಾದ ರಾಜ್ ದೀಪ್ ಸರ್ದೇಸಾಯಿ, ಬರ್ಖಾ ದತ್ತ್ ಮುಂತಾದವರು ಈ ನಕಲಿ ಅಸಹಿಷ್ಣುತೆಯ ಸಣ್ಣ ಗಿಡವನ್ನು ಹಗಲಿರುಳು ನೀರು ಹಾಕಿ ಪೋಷಿಸಿ ದೊಡ್ಡ ಹೆಮ್ಮರವನ್ನಾಗಿ ಮಾಡಲು ಯಶಸ್ವಿಯಾದರು. ಆದರೆ ನಿಜವಾದ ದೇಶ ಭಕ್ತರು ತಕ್ಕ ಉತ್ತರ ನೀಡಿದಾಗ ಅಸಹಿಷ್ಣುತಾವಾದಿಗಳ ಜಂಘಾ ಬಲವೇ ಉಡುಗಿ ಹೋಗಿತ್ತು. ಅಸಹಿಷ್ಣುತೆ ನಾಟಕಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರ ಮತ್ತು ಪಾತ್ರಧಾರಿಗಳು ಸಿಗದೇ ಹೋದಾಗ ಬೇರೊಂದು ಪರ್ಯಾಯ ವಿಷಯ ಬೇಕಿತ್ತು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು. ಆವಾಗ ಸಿಕ್ಕಿದ್ದೇ ರೋಹಿತ್ ವೇಮುಲ ಕೇಸ್!!

ರೋಹಿತ್ ವೇಮುಲ ಪ್ರಕರಣದಲ್ಲಿ ಸಂಸತ್ತಿನಲ್ಲಿ ಗದ್ದಲವೆಬ್ಬಿಸಿ ಆಡಳಿತ ಪಕ್ಷವಾದ ಬಿಜೆಪಿ ಸದಸ್ಯರಿಂದ ಸರಿಯಾಗಿ ಮಾತಿನಲ್ಲಿ ಗುಮ್ಮಿಸಿಕೊಂಡರೂ ಕಾಂಗ್ರೆಸ್ ಮತ್ತದರ ಮಿತ್ರಪಕ್ಷಗಳಿಗೆ ತೃಪ್ತಿಯಾದಂತೆ ಕಂಡು ಬರಲಿಲ್ಲ. ಕೊರೆಯುವ ಚಳಿಯಲ್ಲಿ ಮಂಜುಗಡ್ಡೆಯ ಅಡಿ ಸಿಕ್ಕಿಹಾಕಿಗೊಂಡ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ದೇಶಕ್ಕಾಗಿ ಪ್ರಾಣತೆತ್ತರೂ ಅವರ ಅಂತ್ಯ ಸಂಸ್ಕಾರಕ್ಕಿರಲಿ, ಸೌಜನ್ಯಕ್ಕಾದರೂ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಲು ಸಮಯವಿಲ್ಲದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದೇಶದ್ರೋಹಿ ಅಫ಼್ಜಲ್ ಗುರು ತಿಥಿಯನ್ನು ಆಯೋಜಿಸಿ ಜೈಲು ಪಾಲಾದ ಕನ್ನಯ್ಯ ಕುಮಾರ್ ಬೆಂಬಲಕ್ಕೆ ನಿಲ್ಲುತ್ತಾರೆ. ಬಹಿರಂಗ ಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್, ಭಾರತ್ ಕೀ ಬರ್ಬಾದಿ ತಕ್ ಜಂಗ್ ರಹೇಗಿ ಅಂತ ಘೋಷಣೆ ಕೂಗಿದ ದೇಶದ್ರೋಹಿಗಳನ್ನು ಬೆಂಬಲಿಸಿ “ಫ್ರೀಡಮ್ ಆಫ್ ಸ್ಪೀಚ್ ಎಲ್ಲರಿಗೂ ಇದೆ. ಯಾರೂ ಹಿಟ್ಲರ್ ನಂತೆ ವರ್ತಿಸಲು ನಾವು ಬಿಡಲ್ಲ ಈ ದೇಶದಲ್ಲಿ” ಅಂತ ಯಾರೋ ಬರೆದು ಕೊಟ್ಟ ಭಾಷಣ ಬಿಗಿದು ಬರುತ್ತಾರೆ ಅಂದರೆ ಯೋಚಿಸಿ ಕಾಂಗ್ರೆಸ್ ಪಕ್ಷದ ಸಧ್ಯದ ಪರಿಸ್ಥಿತಿಯ ಬಗ್ಗೆ. !!

ದೇಶದೆಲ್ಲೆಡೆ ಸೋತು ದಯನೀಯ ಪರಿಸ್ಥಿತಿ ತಲುಪಿರುವ ಕಾಂಗ್ರೆಸ್ ಪಕ್ಷಕ್ಕೆ ಮೋದಿ ಸರಕಾರದ ವಿರುದ್ಧವಾಗಿ ಈಜಲು ಅಸ್ತ್ರಗಳು ಬೇಕಾಗಿವೆ. ದೋಣಿ ಎಂದರೆ ಏನು ಎತ್ತ ಅಂದು ಅರಿಯದ ರಾಹುಲ್ ಗಾಂಧಿಗೆ ಕಾಂಗ್ರೆಸ್ ದೋಣಿಯನ್ನು ಮುನ್ನಡೆಸಲು ಅಸಹಿಷ್ಣುತೆ ಬಗ್ಗೆ ಮಾತನಾಡುವ ಬುದ್ಧಿ ಜೀವಿಗಳು, ವೇಮುಲ, ಕನ್ನಯ್ಯ ಕುಮಾರ್ ಮುಂತಾದವರು ಆಶಾಕಿರಣವಾಗಿ ಕಾಣುತ್ತಾರೆ. ಇನ್ನು ಈ ಬುದ್ಧಿ ಜೀವಿಗಳ ಲೇಟೆಸ್ಟ್ ಸಂಶೋಧನೆ ಕನ್ನಯ್ಯ ಕುಮಾರ್ ವಿಷಯಕ್ಕೆ ಬರುವುದಾದರೆ, ಈತನನ್ನು ಬೆಂಬಲಿಸಿ ಹಲವು ಎಡಪಂಥೀಯರು ನಾವು ಭಾರತದಿಂದ ಸ್ವಾತಂತ್ರ್ಯವನ್ನು ಬಯಸುತ್ತಿಲ್ಲ. ಆದರೆ ಭಾರತದ ಒಳಗೆ ಸ್ವಾತಂತ್ರ್ಯವನ್ನು ಬಯಸುತ್ತಿದ್ದೇವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ, ಟೀವಿ ಮಾಧ್ಯಮಗಳಲ್ಲಿ, ಎಲ್ಲೆಲ್ಲಿ ತಮ್ಮ ಹರಕಲು ಬಾಯಿಗೆ ಮಾತನಾಡಲು ಅವಕಾಶ ಸಿಕ್ಕುತ್ತೋ ಅಲ್ಲೆಲ್ಲಾ ಹೇಳಿಕೊಂಡು ಬರುತ್ತಿದ್ದಾರೆ. ಇವರೆಲ್ಲಾ ಸಂವಿಧಾನ ವ್ಯವಸ್ಥೆಯನ್ನೇ ಕಗ್ಗತ್ತಲಿಗೆ ತಳ್ಳಿದ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಸಮಯದಲ್ಲಿ ಎಲ್ಲಿ ಹೋಗಿದ್ದರು.? ಆವಾಗ ಶಾಯಿ ಇಲ್ಲದೇ ಬಡವಾಗಿದ್ದ ಇವರ ಇಂಪೋರ್ಟೆಡ್ ಪೆನ್ನುಗಳು ಕೇವಲ ಮೋದಿ ವಿರುದ್ಧ ಮಾತ್ರ ಏಕೆ ಬರೆಯುತ್ತಿವೆ?? ಸಿಖ್ಖರ ನರಮೇಧವಾಗಿದ್ದಾಗ ಸಿಕ್ಕಿ ಹಾಕಿಕೊಂಡಿದ್ದ ಎಡಪಂಥೀಯರ ಗಂಟಲು ಇದೀಗ ಮಾತ್ರ ಯಾಕೆ ಒಂದೇ ಸಮನೆ ಸದ್ದು ಮಾಡುತ್ತಿದೆ??

ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಮಾನ ಹಕ್ಕು ಇದೆ ನಮ್ಮ ಭಾರತ ದೇಶದಲ್ಲಿ. ಆದರೆ ಭಾರತಮಾತೆಯ ನೆಲದಲ್ಲಿ ಹುಟ್ಟಿ ಇಲ್ಲಿಯೇ ತಮ್ಮ ನೆಲೆಯನ್ನು ಕಂಡುಕೊಂಡು ಬಿಜಿಪಿಯ ರಾಜಕೀಯ ಸಿದ್ಧಾಂತವನ್ನು ವಿರೋಧಿಸಲು ಮತ್ತು ಕೇವಲ ಬಿಜೆಪಿಯ ರಾಜಕೀಯ ಏಳಿಗೆಯನ್ನು ಸಹಿಸದ ಮಾತ್ರಕ್ಕೆ ದೇಶದ್ರೋಹಿಗಳಿಗೆ ಬೆಂಬಲ ಸೂಚಿಸಿದರೆ, ದೇಶದ ಸೈನಿಕರ ಬಗ್ಗೆ ಬಹಳ ತುಚ್ಛವಾಗಿ ಮಾತನಾಡಿದರೆ ಸಹಿಸಿಕೊಂಡು ಕೂರಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಪಕ್ಷ ಒಂದು ನೆನಪಿಟ್ಟುಕೊಂಡರೆ ಒಳ್ಳೆಯದು. ೪೪ ಸದಸ್ಯರನ್ನು ಆರಿಸಿದ್ದ ದೇಶದ ಜನತೆ ಮುಂದಿನ ದಿನಗಳಲ್ಲಿ ಬರೇ ನಾಲ್ಕು ಜನರನ್ನು ಆರಿಸಿ ಲೋಕಸಭೆಗೆ ಕಳುಹಿಸುವ ದಿನ ಬಹಳ ದೂರವೇನಿಲ್ಲ. ದೇಶದ ಜನತೆಗೆ ನಿಜವಾಗಿಯೂ ಸ್ವಾತಂತ್ರ್ಯ ಬೇಕಿರುವುದು ನಿಮ್ಮ ಕಪಟ ನಾಟಕಗಳಿಂದ ಮತ್ತು ದೇಶದ್ರೋಹಕ್ಕೆ ಬೆಂಬಲಿಸುವ ನಿಮ್ಮಂತವರಿಂದ!!.

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!