ಅದೊಂದು ವಿಚಿತ್ರವಾದ ದಾರಿ! ಸುತ್ತ ಮುತ್ತ ಹಸಿರು ತುಂಬಿದ ಗಿಡಗಳು ತುಂಬಿದೆ. ಒಂದು ಚೂರೂ ಗಾಳಿ ಇಲ್ಲ ! ಗೋಪಾಲ್ ರಾವ್ ಒಬ್ಬರೇ ನಡೆಯುತ್ತಿದ್ದಾರೆ. ಯಾವಾಗಲೂ ಅವರ ಜೊತೆಯಲ್ಲಿಯೇ ಇರುತ್ತಿದ್ದ ಹೆಂಡತಿ ಅದೇನೋ ಬಹಳ ನಿಧಾನವಾಗಿ ನಡೆಯುತ್ತಿದ್ದಾರೆ. ಅವರು ಬರಲಿಲ್ಲ ಎಂದು ಬೇಸರವೇನೂ ಇರಲಿಲ್ಲ. ಅಕ್ಕ –ಪಕ್ಕ ಅವರೊಂದಿಗೆ ನಡೆಯುತ್ತಿದ್ದವರು ತಮ್ಮ ಪಾಡಿಗೆ ತಾವು ನಡೆಯುತ್ತಿದ್ದಾರೆ ಯಾರೂ ಒಬ್ಬರನ್ನೊಬ್ಬರು ನೋಡುತ್ತಿಲ್ಲ …ಕೆಲವರು ಇವರಿಗಿಂತಾ ವೇಗವಾಗಿ ನಡೆಯುತ್ತಿದ್ದರೆ .. ಕೆಲವರು ನಿಧಾನವಾಗಿ … ಯಾರೊಬ್ಬರ ಮುಖವೂ ಪರಿಚಿತವಲ್ಲ …. ಯಾರ ಮುಖದಲ್ಲಿಯೂ ನಗುವಿಲ್ಲ … ಯಾವ ಭಾವನೆಗಳೂ ಇಲ್ಲ ಯಾರೂ ಯಾರೊಡನೆಯೂ ಮಾತಾಡುತ್ತಿಲ್ಲ … ವಿಚಿತ್ರವೆಂದರೆ ಆ ವಿಶಾಲ ರಸ್ತೆಯಲ್ಲಿ ಎಲ್ಲರೂ ಒಂದೇ ದಿಕ್ಕಿನಲ್ಲಿ ನಡೆಯುತ್ತಿದ್ದಾರೆ.. ಆ ಕಡೆಯಿಂದ ಯಾರೂ ಬರುತ್ತಿಲ್ಲ…
ಒಮ್ಮೆಲೇ ಅಗಾಧವಾದ ಬಾಗಿಲೊಂದು ಎದುರಾಯಿತು. ಬಾಗಿಲಲ್ಲೊಬ್ಬ ಭಯಂಕರವಾದ ವ್ಯಕ್ತಿ. ಬಾಗಿಲ ಬಳಿ ಬರುವವರನ್ನು ಯಾವುದೇ ಕರುಣೆ ಇಲ್ಲದ ಎಳೆದುಹಾಕುತ್ತಿದ್ದಾನೆ. ಕೆಲವರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ .. ಅದೆಲ್ಲಾ ನಿಷ್ಪ್ರಯೋಜಕ ಎಂದು ಗೋಪಾಲರಾಯರಿಗೆ ಗೊತ್ತಾಗುತ್ತಿದೆ. ಕಡೇ ಪ್ರಯತ್ನ ಎಂಬಂತೆ ತಪ್ಪಿಸಿಕೊಂಡು ಹೋಗೋಣವೆಂದು ಹಿಂತಿರುಗಿ ಓಡಲು ಪ್ರಯತ್ನಿಸಿದರು. ಅದೆಲ್ಲಿಂದಲೋ ಬಂದ ಎರಡು ಬಲಿಷ್ಟವಾದ ಕೈಗಳು ಅವರನ್ನು ಆವರಿಸಿದವು. ಬರಿಯ ಕೈಗಳು ಮಾತ್ರ …. ದೇಹವೇ ಇಲ್ಲ… ಅವರ ಯಾವ ಶಕ್ತಿಯೂ ಆ ಕೈಗಳ ಬಲದ ಮುಂದೆ ಕಾರ್ಯಸಾಧುವಾಗಲಿಲ್ಲ . ಸಹಾಯಕ್ಕೆ ಕೂಗಲು ಪ್ರಯತ್ನಿಸಿದರೆ ಬಾಯಿಂದ ಮಾತೇ ಹೊರಡುತ್ತಿಲ್ಲ.
ತಾವೆಲ್ಲಿದ್ದೇವೆ …? ಅಲ್ಲಿ ನಿಂತಿರುವ ಆ ಭಯಂಕರ ವ್ಯಕ್ತಿ ಯಾರು …? ತನ್ನನ್ನು ಹಿಡಿದಿರುವ ಆ ಬಲಿಷ್ಟ ಕೈಗಳು ಯಾರವು..? ಸುತ್ತ ಮುತ್ತಲಿನ ಜನ ನನ್ನ ಅವಸ್ಥೆ ನೋಡಿ ಕಂಡೂ ಕಾಣದಂತೆ ಯಾಕೆ ಆ ಬಾಗಿಲಿನೆಡೆ ನಡೆಯುತ್ತಿದ್ದಾರೆ..? ನನ್ನನ್ನು ಯಾಕೆ ಬಿಡಿಸಲೂ ಬರುತ್ತಿಲ್ಲ …? ಅವರೆಲ್ಲ ಎಲ್ಲಿಗೆ ಹೋಗುತ್ತಿದ್ದಾರೆ …? ಎಲ್ಲಾ ಪ್ರಶ್ನೆಗಳೇ…..ಧಡಕ್ಕನೆ ಎಚ್ಚರವಾಯಿತು ಗೋಪಾಲರಾಯರಿಗೆ …. ಎ.ಸಿ’ಯಿಂದ ತಂಪಾಗಿದ್ದ ರೂಂನಲ್ಲಿಯೂ ಕೂಡಾ ಅವರ ಮೈ ಬೆವರಿನಿಂದ ಒದ್ದೆ –ಮುದ್ದೆಯಾಗಿತ್ತು. ಸಾವರಿಸಿಕೊಳ್ಳಲು ಒಂದೆರಡು ನಿಮಿಷಗಳೇ ಬೇಕಾದವು.
“ಅರೇ…! ಆಗಲೇ ಬೆಳಕಾಗಿದೆ …. ಅಲಾರಾಂ ಯಾಕೆ ಹೊಡೆಯಲಿಲ್ಲ …“ ಎಂದುಕೊಂಡು ಟೈಂ ನೋಡಿಕೊಂಡರು…
“ಘಂಟೆ ಆರೂವರೆ !”
ಓಹ್! .. ಲೇಟ್ ಆಯಿತು …. ಎಂದು ಪಕ್ಕಕ್ಕೆ ತಿರುಗಿ ನೋಡಿದರು.. ಪತ್ನಿ ಶಾಂತವಾಗಿ ಮಲಗಿದ್ದಾರೆ.
“ಇವತ್ತು ಏನಾಗಿದೆ ನನಗೆ..? ಯಾಕೆ ಲೇಟ್ ಆಯಿತು ..? ದಿನಾ ಐದೂವರೆಗೇ ಎಚ್ಚರವಾಗುತ್ತಿದ್ದ ನನಗೆ ಇಂದೇನಾಯಿತು..? ನನಗಿಂತಾ ಮೊದಲೇ ಏಳುವವಳು .. ಇವಳೂ ಯಾಕೆ ಎದ್ದಿಲ್ಲ…? ಇದೆಲ್ಲಕ್ಕಿಂತಾ ಆ ಹಾಳುಕನಸು ! ಆ ಕನಸಿನ ಅರ್ಥ ಏನು ..?”
ತಕ್ಷಣ ನೆನೆಪಾಯಿತು … ವಾಕಿಂಗ್’ಗೆ ಹೊರಡಬೇಕೆಂದು…
“ಜಯಣ್ಣ , ಮಹಾವೀರ್ ಬಂದು ಬಿಟ್ಟಿರುತ್ತಾರೆ …. ಕಾರ್ ತೆಗೆದುಕೊಂಡು ಹೋದರಾಯಿತು.”
ಪತ್ನಿಯನ್ನು ಎಬ್ಬಿಸದೇ ಬೇಗ ಬೇಗ ರೆಡಿಯಾಗಿ ಹೊರಟರು.
ಪಾರ್ಕ್ ಸೇರುವ ವೇಳೆಗೆ ಸೂರ್ಯ ತನ್ನ ಪ್ರತಾಪವನ್ನು ತೋರಿಸಲು ಅನುವಾಗಿದ್ದ. ಪಾರ್ಕಿನಲ್ಲಿ ಆಗಲೇ ಜನ ಜಾಸ್ತಿಯಾಗಿದ್ದರು. ಬೇಸಿಗೆಯ ರಜೆ ಎಂದು ಮಕ್ಕಳೂ … ಅವರನ್ನು ಕರೆತಂದ ತಂದೆ ತಾಯಂದಿರು …. ಬೇಗ ಎಚ್ಚರವಾಯಿತೆಂದು, ಬೇಸಿಗೆ ಕಾಲದ ಬೆಳಗಿನ ಸೆಖೆ ಎಂದು ಬಂದಿದ್ದ ಅಮೆಚೂರ್ ವಾಕರ್’ಗಳಿಂದ ಪಾರ್ಕ್ ಗಿಜಿ ಗಿಜಿ ಗುಡುತ್ತಿತ್ತು.
“ಛೆ ! ಇವತ್ತು ಲೇಟ್ ಆಯಿತು …ಮಹಾವೀರ್ ಎಲ್ಲಿ…?” ಎಂದು ಗೇಟ್’ನ ಹತ್ತಿರ ಹೋಗುವಾಗ , ಸರ್ರ್…. ಎಂದು ಕಪ್ಪು ಬಣ್ಣದ ಸ್ಕೋಡಾ ಕಾರ್ ಅವರನ್ನು ದಾಟಿ ಹೊರಟು ಹೋಯಿತು …
“ಆರೆ!… ಮಹಾವೀರ್ ಕಾರ್…. ಇದೇನು ಇಷ್ಟು ಬೇಗ….ಹೊರಟರು…ನನಗೆ ಫೋನ್ ಕೂಡಾ ಮಾಡಿಲ್ಲ…ಏನಾಯಿತು…ನಾನಾದರೂ ಫೋನ್ ಮಾಡಬೇಕು” ಜೇಬಿಗೆ ಕೈ ಹಾಕಿದರು. ಮೊಬೈಲ್ ಇರಲಿಲ್ಲ….!
“ಇವತ್ತೇನಾಗಿದೆ …? ಮೊದಲು ಆ ಹಾಳು ಕನಸು… ಲೇಟ್ ಬೇರೆ… ಇವಳೂ ಎದ್ದಿರಲಿಲ್ಲ…. ಮಹಾವೀರ್ ನನ್ನನ್ನು ನೋಡಿಯೂ ನೋಡದಂತೆ ಹೋದರು…. ಕೇಳೋಣ ಅಂದರೆ ಮೊಬೈಲ್ ತಂದಿಲ್ಲ… ಈ ದೊಡ್ಡ ಪಾರ್ಕ್’ನಲ್ಲಿ ಜಯಣ್ಣನ ಹುಡುಕುವುದು ಹೇಗೆ ?“
ಸ್ವಗತದಲ್ಲಿ ಹೇಳಿಕೊಂಡರೂ… ತಮಗೇನೋ ಕೇಳಿಸಿತೆಂದು ಸುತ್ತಮುತ್ತಲಿದ್ದವರು ತಿರುಗಿ ನೋಡಿದರು.
“ಯಾರು ಬರದಿದ್ದರೂ ನಾನು ನನ್ನ ವಾಕಿಂಗ್ ಮುಗಿಸಿ ಹೋಗುತ್ತೇನೆ “ ಎಂದು ತಮ್ಮ ನಿತ್ಯದ ವಾಕಿಂಗ್ ಪ್ರಾರಂಭಿಸಿದರು.
ಒಂದು ಸುತ್ತು ಬಂದಿರಬಹುದು ಅದೇನೋ ಒಂದು ಥರಹದ ಸುಸ್ತು…. ಯಾವತ್ತೂ ಇರದಂಥಹದ್ದು… ಕಾಲುಗಳು ಮುಂದಡಿಯಿಡಲು ಹಿಂಜರಿಯುತ್ತಿವೆ… ತಲೆಸುತ್ತು ಬರುವಂತಾಗುತ್ತಿದೆ … ಛಲ ಬಿಡಲಿಲ್ಲ … ಮುಂದುವರೆದರು…
ಮಾಧವನ್ ಪಾರ್ಕ್ ಹಸಿರುಗಿಡಗಳಿಂದ ತುಂಬಿರುತ್ತದೆ. ಒಂದು ಭಾಗ ಸುಮಾರು ಇನ್ನೂರು ಮೀಟರ್ ಮತ್ತೊಂದು ಭಾಗ ಐವತ್ತು ಮೀಟರ್ … ಒಂದು ಪೂರ್ತಿ ಸುತ್ತು ಅರ್ಧ ಕಿ.ಮೀ. ಜಯನಗರದ ಮಧ್ಯ ಭಾಗದಲ್ಲಿದ್ದಿದ್ದುದರಿಂದ ಬರೀ ಹೈ ಸೊಸೈಟಿಯ ಜನಗಳು ಬರುತ್ತಿದ್ದರು. ಅಲ್ಲಿ ಬರುವವರಿಗೆ ಒಬ್ಬರಿಗೊಬ್ಬರ ಪರಿಚಯ ಅಷ್ಟಕ್ಕಷ್ಟೆ! ತಮಗೆ ಬೇಕಾದವರೊಂದಿಗೆ ಮಾತ್ರ ವಿಶ್ವಾಸ , ಮಾತು… ಉಳಿದವರೊಂದಿಗೆ ….. ಒಂದ ಸಣ್ಣ ನಗೆ ಕೂಡಾ ಇಲ್ಲ…!
ಗೋಪಾಲರಾಯರಿಗೂ ಅಲ್ಲಿ ಯಾರ ಪರಿಚಯವೂ ಇಲ್ಲ.. ಕೇವಲ ಅವರ ಇಬ್ಬರು ಸ್ನೇಹಿತರು… ಮಹಾವೀರ್… ಚಿನ್ನಾಭರಣದ ಅಂಗಡಿಗಳ ಓನರ್… ಜಯಣ್ಣ…. ತಮ್ಮಂತೆಯೇ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದು ರಿಟೈರ್ಡ್ ಆದವರು. ಎಲ್ಲಿಯಾದರೂ ಜಯಣ್ಣ ಕಾಣುತ್ತಾರೇನೋ ಎಂದು ನಿಧಾನವಾಗಿಯೇ ನಡೆಯತೊಡಗಿದರು..ಮತ್ತೆ ಅದೇ ಸುಸ್ತು…! ಈ ಬಾರಿ ತಲೆ ತಿರುಗಿದಂಥಹ ಭಾಸ!… ಹಿಂದಿನ ದಿನ ತಿಂದದ್ದೆಲ್ಲಾ ವಾಂತಿ ಬರುವಂಥಹ ಭಾವನೆ.
“ತಡೆಯಲಾಗದು….”
ಹತ್ತಿರದಲ್ಲಿದ್ದ ಕಲ್ಲುಬೆಂಚಿನಮೇಲೆ … ಕುಸಿದು ಕುಳಿತರು….ಒಂದುಕ್ಷಣ ಇಡೀ ಪಾರ್ಕ್ ಕತ್ತಲಾವರಿಸಿದಂತಾಯಿತು. ಸುತ್ತಮುತ್ತಲಿನ ಗಾಳಿ ಸ್ಥಬ್ಧ ! ಸುತ್ತ ಮುತ್ತ ಇರುವ ಗಿಡಮರಗಳೆಲ್ಲವೂ ಯಾವುದೇ ಎಲೆ ಬಳ್ಳಿಗಳಿಲ್ಲದೇ … ಬೋಳಾಯಿತು… ಮಕ್ಕಳ ಆಟಕ್ಕೆ ಮಾಡಿದ್ದ ಸಿಮೆಂಟಿನ ಪ್ರಾಣಿ ,ಪಕ್ಷಿಗಳೆಲ್ಲವೂ ಜೀವಬಂದು ಅವರನ್ನೇ ಕೆಕ್ಕರಿಸಿಕೊಂಡು ನೋಡುತ್ತಿವೆ ಎನಿಸತೊಡಗಿತು.
ಎಲ್ಲಿಂದಲೋ ಮಗ ರಾಜೀವ ಸೊಸೆ ಮೀನಾಕ್ಷಿ ಪ್ರತ್ಯಕ್ಷವಾದರು… ಅವರ ಹಿಂದೆ ಮೊಮ್ಮಗ ಹಿಮಾಂಷು… ಬಗ್ಗಿನೋಡುತ್ತಿದ್ದಾನೆ… ಅವನ ಮುಖದಲ್ಲಿ ತಾತನನ್ನು ನೋಡಿದ ಸಂತೋಷವಿಲ್ಲ… ಭಯವಿದೆ. ಅಪ್ಪನ ದೇಹಸ್ಥಿತಿ ವಿಚಾರಿಸಲು ಮುಂದಡಿಯಿಟ್ಟ… ಅವನೆಡೆ ಹೋಗಲು ಏಳಲು ಪ್ರಯತ್ನಿಸುತ್ತಾರೆ… ಉಹುಂ… ಸಾಧ್ಯವಾಗದು! ಯಾವುದೋ ಹಗ್ಗ ಸೊಂಟಕ್ಕೆ ಸುತ್ತಿಕೊಂಡು ಎಳೆದಂತಾಗುತ್ತಿದೆ. ಮುಂದಿನ ಎರಡು ಮೂರು ಕ್ಷಣ ಏನಾಯಿತೆಂದೇ ತಿಳಿಯಲಿಲ್ಲ…. ಹಾಗೇ… ಕತ್ತಲು ಆವರಿಸಿಕೊಂಡಿತು….
ಅದೆಷ್ಟು ಹೊತ್ತು ಹಾಗೆಯೇ ಮಲಗಿದ್ದರೋ ತಿಳಿಯದು… ಸಮಯದ ಪರಿವೆಯೇ ಇರಲಿಲ್ಲ…ಎಚ್ಚರವಾದಾಗ … ವಾಕಿಂಗ್ ಬಂದವರೆಲ್ಲರೂ ತಮ್ಮ ಪಾಡಿಗೆ ತಾವು ವಾಕಿಂಗ್ ಮಾಡುತ್ತಲೇ ಇದ್ದರು… ಆಟವಾಡುತ್ತಿದ್ದ ಮಕ್ಕಳು ಆಟವಾಡುತ್ತಲೇ ಇದ್ದಾರೆ… ಅದೇ ಪರಿಚಿತ ಮುಖಗಳು….
“ಅಂದರೆ … ನಾನು ಕುಳಿತು ಒಂದೆರಡು ನಿಮಿಷಗಳಾಗಿದೆ ಅಷ್ಟೆ!…”
“ಸಧ್ಯ ! ಬರೀ ಭ್ರಮೆ! .. “
ಸ್ವಲ್ಪ ನಿರಾಳ ಎನಿಸಿದರೂ ಮನಸ್ಸು ಅಲ್ಲಿಯತನಕ ನಡೆದ ಘಟನೆಗಳನ್ನು ಮೆಲುಕರಿಸಿ ಭಯದಿಂದ ಸಣ್ಣಗೆ ನಡುಗುತ್ತಿತ್ತು.
ಪಿತ್ತ ಇರಬೇಕು… ಮನೆಗೆ ಹೋಗಿ ಮಲಗಿದರೆ ಸರಿಯಾಗುತ್ತದೆ. ವಾಕಿಂಗ್ ಸಾಕು ಮನೆಗೆ ಹೋಗುತ್ತೇನೆ ಎಂದು ಕುಳಿತಿದ್ದ ಕಲ್ಲುಬೆಂಚಿನಿಂದ ಎದ್ದರು…ಅದೇನೋ ಕಾಲಿಗೆ ತೊಡರಿದಂತಾಯಿತು. ಹಸಿರು ಹುಲ್ಲಿನಲ್ಲಿ ಅಡಗಿದ್ದ ಏನೋ ವಸ್ತು. ಮನುಷ್ಯ ಸಹಜ ಕುತೂಹಲದಿಂದ ಬಗ್ಗಿನೋಡಿದರು.
ಅದೊಂದು ಪುಸ್ತಕ
ದಪ್ಪರಟ್ಟಿನ ಪುಸ್ತಕ
ಕರೀ ಬಣ್ಣದ . ದಪ್ಪ ರಟ್ಟಿನ ಪುಸ್ತಕ…!
ಯಾರೋ ವಾಕಿಂಗ್ ಬಂದವರು ಬೀಳಿಸಿಕೊಂಡು ಹೋಗಿದ್ದಾರೆ… ತೆಗೆದು ಮೇಲೆ ಇಡೋಣ ಎಂದು ಆ ಕರೀ ಬಣ್ಣದ ಪುಸ್ತಕ ತೆಗೆದುಕೊಳ್ಳಲು ಬಗ್ಗಿದರು. ಸೊಂಟ ಛಳಕ್ ಎಂದಿತು.. ಭರಿಸಲಸಾಧ್ಯವಾದ ನೋವು… ಬಗ್ಗಿದ ಸೊಂಟ ಎತ್ತಲಾಗದು… ಕಲ್ಲುಬೆಂಚಿನ ಸಹಾಯ ಪಡೆಯಲು ಪುಸ್ತಕ ಕೈಬಿಡಲು ಪ್ರಯತ್ನಿಸಿದರು… ಕೈಗೆ ಗೋಂದು ಹಾಕಿ ಅಂಟಿಸಿದಂತೆ ಕೈಯಿಂದ ಬಿಡಲೊಲ್ಲೆ ಎಂದಿತು. ಬಗ್ಗಿದ ಸೊಂಟ ನೇರ ಮಾಡಲು ಪ್ರಯತ್ನಿಸಿದರು…
“ಅಮ್ಮಾ… ಎಂದು ಅವರಿಗೆ ಅರಿವಿಲ್ಲದಯೇ.. ಬಾಯಿಯಿಂದ ಕೂಗೊಂದು ಹೊರಬಂತು…ಅವರಮ್ಮನನ್ನು ನೆನೆದೇ ಇಪ್ಪತ್ತು ವರ್ಷಗಳಾಗಿದ್ದವು… ಆಶ್ಚರ್ಯ ಎಂಬಂತೆ ಸುತ್ತಮುತ್ತ ಇದ್ದವರು ಯಾವುದೇ ಶಬ್ದ ಬಂದಿಲ್ಲ ಎಂಬಂತೆ ತಮ್ಮ ಪಾಡಿಗೆ ತಾವು ವಾಕಿಂಗ್ ಮಾಡುತ್ತಿದ್ದರು. ಸುಧಾರಿಸಿಕೊಂಡು ಕಲ್ಲು ಬೆಂಚಿನ ಮೇಲೆ ಕುಳಿತುಕೊಂಡರು.. ಪುಸ್ತಕ ಕೈಯಲ್ಲಿಯೇ ಇತ್ತು.
ದಪ್ಪ ರಟ್ಟಿನ ಪುಸ್ತಕವದು. ಅದರ ಮೇಲೆ ಕಡುಗಪ್ಪಿನ ಕಾಗದದ ಬೈಂಡ್ ಹಾಕಿದ್ದರು. ಸುತ್ತಲೂ ಸುವರ್ಣ ಬಣ್ಣದ ಬಾರ್ಡರ್..ಅದು ಇಡೀ ಪುಸ್ತಕಕ್ಕೆ ಒಂದು ವಿಶಿಷ್ಟ ಮೆರುಗು ತಂದಿತ್ತು. ಪುಸ್ತಕದ ಮೇಲೆ ಯಾವುದೇ ಹೆಸರಿರಲಿಲ್ಲ ! ಏನೂ ಬರೆದಿರಲಿಲ್ಲ… ಆದರೂ ಆ ಪುಸ್ತಕ ನೋಡುವುದಕ್ಕೇ ಏನೋ ಒಂದು ಆಕರ್ಷಣೆ. ಸಾಧಾರಣ ಪುಸ್ತಕಕ್ಕಿಂತಾ… ತುಸು ಭಾರವೇ ಇತ್ತು…!
ಮನಸ್ಸಿನ ತುಂಬಾ ಬರೀ ಪ್ರಶ್ನೆಗಳೇ…
“ಇಂದೇಕೆ ಹೀಗೆ ? ಎಂದೂ ಇಲ್ಲದ್ದು.. ಕಳೆದ ಸುಮಾರು ವರ್ಷಗಳಿಂದ ಒಂದು ದಿನವೂ ಮಲಗಿದವನಲ್ಲ… ನನಗೇನಾಗಿದೆ?
ಕಲ್ಲುಬೆಂಚಿನ ಮೇಲೆ ಕುಳಿತಾಗ ಕಂಡದ್ದೇನು..? ಈ ಕರೀ ಪುಸ್ತಕ ಯಾವುದು…? ಯಾರದ್ದು..? ಇಲ್ಲೇಕೆ ಬಂದಿತು..? ಇದರಲ್ಲೇನಿದೆ…?
ಇದರಲ್ಲೇನಿದೆ ಎಂಬ ಪ್ರಶ್ನೆ ಭೂತಾಕಾರವಾಗಿ ಕಾಡತೊಡಗಿತು. ವಾಕಿಂಗ್ ಮಾಡುತ್ತಿದ್ದವರು ಅವರಿಗೆ ಸಂಬಂಧವೇ ಇಲ್ಲದಂತೆ ನಡೆಯುತ್ತಿದ್ದರು.
ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಾಗುತ್ತಿತ್ತು…”ಈ ಪುಸ್ತಕದಲ್ಲಿ ಅಂಥದ್ದೇನಿದೆ…?”
ಮುಂದುವರಿಯುವುದು…