ಎರಡು ದಿನದಿಂದ ಆರಂಭವಾದ ಮಳೆ ಇನ್ನೂ ಸುರಿಯುತ್ತಲೇ ಇದೆ…ಹಗಲಾಗಿದ್ದರಿಂದ ಪಳಕ್ಕನೆ ಮಿಂಚುವ ಮಿಂಚು ಅಷ್ಟಾಗಿ ಕಾಣಿಸುತ್ತಿಲ್ಲವಾದರೂ ಗುಡುಗಿನ ಆರ್ಭಟ ಜೋರಾಗಿಯೇ ಇತ್ತು..ಇದು ಬಂಗಾಳ ಕೊಲ್ಲಿಯಲ್ಲಿ ಉಂಟಾದ ಚಂಡಮಾರುತದ ಪ್ರಭಾವ ಎಂದು ಹವಾಮಾನ ಇಲಾಖೆ ತಿಳಿಸಿತ್ತು…ಮೆಲ್ಲನೆ ಬೀಸುತ್ತಿರುವ ಗಾಳಿ ತೆರೆದಿಟ್ಟ ಕಿಟಿಕಿಯ ಮೂಲಕ ಒಳ ಬಂದಾಗ ಚಳಿಯಿಂದ ಮೈಯೆಲ್ಲ ಕಂಪಿಸಿತ್ತು..ಕಿಸೆಯಿಂದ ಸಿಗರೇಟೊಂದನ್ನು ತೆಗೆದು ತುಟಿಗಿಟ್ಟು ಬೆಂಕಿ ಹೊತ್ತಿಸಿದೆ..ಹೊರಗೆ ಸುರಿಯುತ್ತಿರುವ ಮಳೆಯನ್ನೇ ನೋಡುತ್ತಾ ಧಮ್ ಎಳೆಯತೊಡಗಿದೆ…ಮಂಗಳೂರಿಗೆ ಬಂದು 4 ದಿವಸಗಳಾಗುತ್ತಾ ಬಂತು..ಈ ಮಳೆಯಿಂದಾಗಿ ಸಿನೆಮಾ ಶೂಟಿಂಗ್ ಇನ್ನೂ ಸ್ಟಾರ್ಟ್ ಆಗಿಲ್ಲ…ಯುಗಾದಿಗೆ ಫಿಲಂ ಬಿಡುಗಡೆ ಮಾಡುವ ಪ್ಲಾನ್ ಹಾಕಿಕೊಂಡಿದ್ದೆ…ಇನ್ನೂ ಮಳೆ ನಿಲ್ಲದಿದ್ದರೆ ನನ್ನ ಪ್ಲಾನ್ ಹಾಳಾಗುತ್ತದೇನೋ….ಹಲವು ಸಿನೆಮಾ ನಿರ್ದೇಶಿಸಿದ್ದ ನನಗೆ ಈ ಸಿನೆಮಾ ತುಂಬಾನೇ ಸ್ಪೆಷಲ್!!!ಅದಕ್ಕೆ ಕಾರಣಗಳು ಹಲವು?!!…ಟೇಬಲ್ ಮೇಲೆ ಇರಿಸಿದ್ದ ಸ್ಕ್ರಿಪ್ಟ್’ನ ಮೇಲೆ ಕೈಯಾಡಿಸಿದೆ…”ಇನ್ನೊಂದು ಮುಖ” ಟೈಟಲ್ ಎದ್ದು ಕಾಣಿಸುತ್ತಿತ್ತು…ಕೈ ಸ್ಕ್ರಿಪ್ಟ್’ನ ಕಾಗದದ ಹಾಳೆಗಳನ್ನು ಬಿಡಿಸುತ್ತಾ ಹೋದಂತೆ ಮನಸ್ಸು ಹಿಂದಿನ ಘಟನೆಗಳನ್ನು ಬಿಡಿಸುತ್ತಾ ಹೋಗಿತ್ತು…
. . . . . . . . .
“ರಜನಿ….ಇದೇನಿದು?!” ಉದ್ವೇಗದಿಂದ ಅವಳನ್ನು ಪ್ರಶ್ನಿಸಿದ್ದೆ. “ಕಾಣಿಸ್ತಿಲ್ವಾ…ಡೈವೋರ್ಸ್ ಪೇಪರ್!!!…ಸೈನ್ ಮಾಡಿ” ಮುಖಕ್ಕೆ ಹೊಡೆದ ರೀತಿ ಹೇಳಿದ್ದಳು..ನನಗೆ ಶಾಕ್ ಆಗಿತ್ತು..”ಯಾಕೆ ಏನಾಯಿತು ನಿಂಗೆ…ತಮಾಷೆ ಮಾಡ್ತಿಲ್ಲ ತಾನೆ?!” ಕಳವಳದಿಂದ ಕೇಳಿದ್ದೆ..”ಇಲ್ಲ..ಸೀರಿಯಸ್ಸಾಗಿ ಹೇಳ್ತಿದ್ದೀನಿ…ನಂಗೆ ನಿಮ್ಮ ಜೊತೆ ಬಾಳಲು ಇಷ್ಟವಿಲ್ಲ..ಕಾರಣ ಅವನೀಶ್’ನನ್ನು ನಾನು ಇಷ್ಟ ಪಟ್ಟಿದ್ದೀನಿ..ಅವನು ಕೂಡ..”ಅವಳ ನೇರ ಮಾತಿನ ಬಾಣ ನನ್ನ ಹೃದಯವನ್ನು ಛಿಧ್ರ ಮಾಡಿತ್ತು..”ಸೂರ್ಯ..ನೀನೆಂದರೆ ನಂಗೆ ತುಂಬ ಇಷ್ಟ..ನಿನ್ನಂತ ಗಂಡನ ಪಡೆಯೋಕೆ ನಾನು ತುಂಬಾನೇ ಪುಣ್ಯ ಮಾಡಿದ್ದೀನಿ” ಎಂದವಳು ಇವಳೇನಾ…?!!
ಸಿನೆಮಾ, ಸೀರಿಯಲ್’ಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದವಳು ರಜನಿ!!! ನನ್ನ ಒಂದು ಸಿನೆಮಾದಲ್ಲಿ ನಟಿಸಿದ್ದಳು…ಅಲ್ಲಿಂದ ಉಂಟಾದ ಪರಿಚಯ ಪ್ರೀತಿಯಾಗಲು ತುಂಬ ದಿವಸಗಳೇನು ಬೇಕಾಗಿರಲಿಲ್ಲ..ಗಾಸಿಪ್ ಆಗುವುದಕ್ಕಿಂತ ಮೊದಲೇ ಮದುವೆಯಾಗಿತ್ತು..ಅಂದರೆ ಇಷ್ಟು ದಿನ ಅವಳು ಹೇಳಿದ್ದೆಲ್ಲ ಸೀರಿಯಲ್ ಡೈಲಾಗ್?!!ಅದನ್ನು ನಾನು ಪ್ರೀತಿ ಅಂತ ನಂಬಿದೆ..
“ರಜನಿ ಯಾಕೆ ಹೀಗೆಲ್ಲ ಮಾತಾಡ್ತಿ…ನಾನು ನಿಂಗೆ ಯಾವುದರಲ್ಲಿ ಕಡಿಮೆ ಮಾಡಿದ್ದೀನಿ…ಹೇಳು..ಸ್ಟಿಲ್ ಐ ಲವ್ ಯೂ…” ಅದಕ್ಕವಳ ಉತ್ತರ ಕೇಳಿ ಆಘಾತವಾಗಿತ್ತು..”ಜೀವನ ಮಾಡಲು ದುಡ್ಡು ಬೇಕ್ರಿ…ಪ್ರೀತಿಯಲ್ಲ..” ಅವನೀಶ್ ಕೋಟಿ ಕೋಟಿ ಸಂಪಾದನೆ ಮಾಡುವ ಸ್ಟಾರ್ ನಟ ಅವನೆಲ್ಲಿ!! ಹಾಗೋ ಹೀಗೋ ಲಕ್ಷ ಸಿಗುವ ನಾನೆಲ್ಲಿ!!..ಪ್ರೀತಿಗಿಂತ ನಾನೇ ಕಣೋ ಗ್ರೇಟ್..ಇಂಪಾರ್ಟೆಂಟ್..ಎಂದು ದುಡ್ಡು ನನ್ನನ್ನು ಗೇಲಿ ಮಾಡಿದಂತೆ ಅನಿಸಿದ್ದು ಸುಳ್ಳಲ್ಲ..ಹಾಗಾದ್ರೆ ನಿಜವಾದ ಪ್ರೀತಿಗೆ ಬೆಲೆಯಿಲ್ವಾ…ಮನಸ್ಸು ನೋವಿನಿಂದ ಚೀರಿತ್ತು..ರಜನಿಗೆ ಅವನೀಶ್ ಮತ್ತು ಅವನ ದುಡ್ಡು ಸಂತೋಷ ಕೊಡುವುದಾದರೆ ನಾನು ಏನು ತಾನೆ ಮಾಡಲು ಸಾದ್ಯ!! ಅವಳನ್ನು ತಡೆಯೋಕೆ ಸಾಧ್ಯನಾ?! ಏನೂಂತ ಕನ್ವಿನ್ಸ್ ಮಾಡಲಿ…ಏನೂ ಮಾತನಾಡದೆ ಭಾರವಾದ ಮನಸ್ಸಿನಿಂದ ಡೈವೋರ್ಸ್ ಪೇಪರ್’ಗೆ ಸೈನ್ ಮಾಡಿದ್ದೆ..ಈ ಘಟನೆ ನನ್ನ ಬದುಕಿನ ಗತಿಯನ್ನೇ ಬದಲಿಸಿತ್ತು ಅಂತ ಹೇಳಬಹುದು..ಬಾರ್ ಕಡೆಗಿನ ಸೆಳೆತ ಜಾಸ್ತಿಯಾದ್ರೆ ಸಿನೆಮಾ ಕಡಿಮೆಯಾಗಿತ್ತು..ರಜನಿ ನನ್ನ ಮರೆತಿರಬಹುದು…ಆದ್ರೆ ನನಗೆ ಅವಳನ್ನು ಮರೆಯುದಕ್ಕೆ ಸಾಧ್ಯವಾಗುತ್ತಿಲ್ಲ..ಅಷ್ಟೊಂದು ಲವ್ ಮಾಡ್ತಿದ್ದೆ..ಆದ್ರೆ ಅವಳು..?? ಯೋಚಿಸಿ ಯೋಚಿಸಿ ತಲೆ ಕೆಟ್ಟು ಹೋಗಿತ್ತು..ಈ ನಡುವೆ ನನ್ನ ಕಾಲೇಜು ಫ್ರೆಂಡ್ ನವೀನ ಸಿಕ್ಕಿದ್ದು ನನಗೆ ತುಂಬಾನೇ ಖುಷಿಯಾಗಿತ್ತು.
“ಸೂರ್ಯ..ನೀನಿನ್ನೂ ಅವಳ ನೆನಪಲ್ಲಿ ಕೊರಗುವುದು ಸರಿಯಿಲ್ಲ..ಮಾರಾಯ..ಬಿಟ್ಟಾಕು..ಅವಳಿಗೆ ನೀನು ಬೇಡ ಅಂದ ಮೇಲೆ ನಿಂಗ್ಯಾಕೆ..ಈಗಾದ್ರೂ ಅವಳ ನಿಜವಾದ ಇನ್ನೊಂದು ಮುಖದ ಪರಿಚಯವಾಯ್ತಲ್ಲ..ಅದಕ್ಕೆ ಖುಷಿ ಬಿಡು..” ಸ್ವಲ್ಪ ಕಟುವಾಗಿಯೇ ನುಡಿದಿದ್ದ..”ಅದು ಹಾಗಲ್ಲ ಕಣೋ..” ಹೇಳುವ ಮೊದಲೇ ಅವನು ಹೇಳಿದ್ದ..”ನೀನು ಇನ್ನು ಇಲ್ಲಿದ್ದರೆ ಪೂರ್ತಿ ಹಾಳಾಗುತ್ತಿ..ಅದಕ್ಕೆ ಮಾರಾಯ..ಸ್ವಲ್ಪ ದಿವಸಕ್ಕೆ ನಮ್ಮೂರಿಗೆ ಬಾ..ನಿನ್ನ ಮನಸ್ಸಿಗೂ ನೆಮ್ಮದಿ ಸಿಗುತ್ತೆ..” ನವೀನ ಹೇಳಿದ್ದು ಕರೆಕ್ಟ್..ಇನ್ನು ನಾನು ಇಲ್ಲಿದ್ದರೆ ಹುಚ್ಚ ಆಗ್ತಿನೇನೋ..ರಜನಿಯ ನೆನಪಿನಿಂದ ಹೊರ ಬಂದು ಮೊದಲಿನ ಹಾಗೆ ಆಗಲು ವಾತಾವರಣ ಬೇಕೆನಿಸಿತ್ತು..ಆದ್ರೆ ಊರಿಗೆ ಹೋಗುವುದಕ್ಕೆ ಅಂಜಿಕೆ!!..ಅಪ್ಪ,ಅಮ್ಮ,ಊರವರಿಗೆಲ್ಲ ಹೇಗೆ ಮುಖ ತೋರಿಸ್ಲಿ..ನೂರೆಂಟು ಪ್ರಶ್ನೆಗಳು..ಅದಕ್ಕೆಲ್ಲ ನನ್ನಿಂದ ಉತ್ತರಿಸುವುದಕ್ಕೆ ಆಗುತ್ತಾ…ಇಲ್ಲ..ಈಗ ನವೀನನ ಜೊತೆ ಹೋಗುವುದೇ ಬೆಟರ್..!!
ಇಲ್ಲೇ ಬೆಂಗಳೂರಲ್ಲಿ ಸಾಪ್ಟ್‍ವೇರ್ ಇಂಜಿನಿಯರ್ ಆಗಿದ್ದ ನವೀನ ರಜೆಯ ಮೇಲೆ ಅವನೂರಿಗೆ ಹೊರಟಿದ್ದ..ಅವನ ಜೊತೆ ನಾನು ಕೂಡಾ..
ಪಶ್ಚಿಮ ಅರಬ್ಬೀ ಸಮುದ್ರದ ಮತ್ತು ಪಶ್ಚಿಮ ಘಟ್ಟಗಳ ಪೂರ್ವಕ್ಕೆ ಹರಡಿಕೊಂಡಿರುವ ಕರಾವಳಿ ಪ್ರದೇಶವೇ ಮಂಗಳೂರು..! ಮಲ್ಪೆ, ಪಣಂಬೂರಿನ ಕಣ್ಮನ ಸೆಳೆಯುವ ಸುಂದರ ಕಡಲ ತೀರಗಳು..! ಮನಸ್ಸಿಗೆ ಶಾಂತಿ ನೀಡುವ ಕದ್ರಿ, ಕುದ್ರೋಳಿ, ಮಂಗಳಾದೇವಿ ಆಕರ್ಷಣೀಯ ದೇವಾಲಗಳು..! ಮತ್ತೊಮ್ಮೆ ಮಗದೊಮ್ಮೆ ನೋಡಬೇಕೆನಿಸುವ ಮಾನಸ,ಪಿಲಿಕುಳ..! ಬಾಯಲ್ಲಿ ನೀರೂರಿಸುವ ರುಚಿಕರವಾದ ತಿಂಡಿ,ತಿನಿಸುಗಳು..! ಎಲ್ಲವೂ ಮನಸ್ಸಿಗೆ ಖುಷಿ ಕೊಟ್ಟಿತ್ತು..ಜೀವನದಲ್ಲಿ ಹೊಸ ಹುರುಪು ಬಂದಿತ್ತು..ಒಂದು ದಿನ ಸಂಜೆ ಪಣಂಬೂರು ಬೀಚ್’ಗೆ ಹೋಗಿದ್ದು ಹಿಂತಿರುಗಿ ಬರುತ್ತಿರುವ ಸಂದರ್ಭ..! ಆಕಾಶದಲ್ಲಿ ಕರಿ ಮೋಡಗಳು ಕಾಣಿಸಿಕೊಂಡು ಇನ್ನೇನು ಮಳೆ ಬರುವ ಸೂಚನೆಯನ್ನು ತೋರಿಸತೊಡಗಿದ್ದವು..ಹಾಗಾಗಿ ಕತ್ತಲು ಬೇಗನೆ ಆವರಿತ್ತು..ಸಣ್ಣಗೆ ಗಾಳಿ ಬೀಸುತ್ತಿದ್ದರಿಂದ ಮೈಯೆಲ್ಲ ಚಳಿಯಿಂದ ನಡುಗುತ್ತಿತ್ತು…ನವೀನ ಕಾರ್ ಡ್ರೈವ್ ಮಾಡುತ್ತಿದ್ದರೆ ನಾನು ಅವನ ಪಕ್ಕ ಕುಳಿತಿದ್ದೆ..ಮುಂದೇನು? ಸಿನೆಮಾ ಮಾಡೋಣವೆಂದರೆ ಕಥೆ ಸಿಗ್ತಿಲ್ಲ..ಹಿಂದಿನ ಎರಡು ಸಿನೆಮಾ ಹೇಳುವಸ್ಟು ಯಶಸ್ಸು ಸಿಗದಿದ್ದರಿಂದ ಈ ಸಲ ಬೇರೆ ತರ ಟ್ರೈ ಮಾಡ್ಬೇಕು..ಏನು ಮಾಡೂದು..?! ಆಲೋಚಿಸುತ್ತಾ ತಲೆ ನೋವು ಬರತೊಡಗಿದ್ದರಿಂದ ಅದರಿಂದ ಹೊರ ಬಂದೆ..ರಸ್ತೆಯಲ್ಲಿ ಹಾಗೊಂದು ಹೀಗೊಂದು ಬಿಟ್ಟರೆ ವಾಹನದ ಓಡಾಟ ಕಡಿಮೆಯಿತ್ತು..ಜನಜಂಗುಳಿ ಇಲ್ಲದ ನಿರ್ಜನ ಪ್ರದೇಶವದು..ಕಾರು ವೇಗವಾಗಿ ಹೋಗುತ್ತಿರಬೇಕಾದ್ರೆ ಅನಿರೀಕ್ಷಿತ ಘಟನೆಯೊಂದು ನಡೆದು ಹೋಗಿತ್ತು…ಎಡಗಡೆಯಿಂದ ಓಡುತ್ತಾ ಬಂದ ಯುವತಿ ಕಾರಿಗೆ ಅಡ್ಡ ಬಂದಳು..ನವೀನ ಗಾಬರಿಯಿಂದ ಬ್ರೇಕ್ ಹಾಕಿದ..ಆದ್ರೂ ಕಾರು ಅವಳಿಗೆ ಗುದ್ದಿತ್ತು ಅಂತ ಕಾಣಿಸುತ್ತೆ ಕುಸಿದು ಬಿದ್ದಳು..ಆ ಯುವತಿಯ ಬಳಿ ಹೋಗಿ ನೋಡಿ ಶಾಕ್ ಆಗಿತ್ತು..!! ಬಟ್ಟೆಯೆಲ್ಲ ಅಸ್ತವ್ಯಸ್ತವಾಗಿದ್ದು ಮೈ ಮೇಲೆಲ್ಲ ಪರಚಿದ,ಕಚ್ಚಿದ ಗಾಯಗಳು..ಅವುಗಳಿಂದ ರಕ್ತ ಒಸರುತ್ತಿತ್ತು..ಮೈಮೇಲೆ ಸ್ವಲ್ಪವೂ ಪ್ರಜ್ಞೆಯಿಲ್ಲದೆ ಬಿದ್ದಿದ್ದಳು..ಕೂಡಲೇ ಪೋಲಿಸರಿಗೆ ವಿಷಯ ತಿಳಿಸಿದ ನವೀನ..ಅವಳನ್ನು ಆಸ್ಪತ್ರೆಗೆ ಸೇರಿಸಲಾಯಿತು..ಆ ಯುವತಿ ಮಾನಭಂಗಕ್ಕೆ ಒಳಗಾಗಿದ್ದಾಳೆಂದು ಆಸ್ಪತ್ರೆಯಿಂದ ದೃಢೀಕರಿಸಲ್ಪಟ್ಟಿತ್ತು…ಅಕ್ಷರಶಃ ಇಡೀ ಮಂಗಳೂರು ಈ ಸುದ್ದಿಯಿಂದ ನಡುಗಿ ಹೋಗಿತ್ತು..ಟಿ.ವಿ, ಪೇಪರ್ ಎಲ್ಲ ಕಡೆ ಇದೇ ಸುದ್ದಿ..!! ಇತ್ತೀಚೆಗಂತೂ ಇದು ಕೇಳುವುದಕ್ಕೆ ಕಾಮನ್ ಆಗಿಹೋಗಿದೆ..!! ದೆಹಲಿಯ ನಿರ್ಭಯ, ಮಂಗಳೂರಿನ ಸೌಜನ್ಯ ಪ್ರಕರಣ, ಬೆಂಗಳೂರಿನ ಕಾಲ್ ಸೆಂಟರ್ ಹುಡುಗಿ ವಿಷಯ..ಹೇಳುತ್ತಾ ಹೋದರೆ ಅದೆಷ್ಟೋ…!! ಹೆಣ್ಣನ್ನು ಗೌರವಿಸುವ, ಪೂಜಿಸುವ ದೇಶ ಯಾಕಿಷ್ಟು ಕೆಟ್ಟು ಹೋಗಿದೆ..!! ಹೆಣ್ಣು ಅಂದ್ರೆ ಭೋಗದ ವಸ್ತುನಾ..?! ಅವರ ಭಾವನೆಗೆ ಬೆಲೆನೇ ಇಲ್ವಾ..ಯಾಕೆ ಹೀಗೆಲ್ಲಾ ಆಗ್ತಿದೆ..ಸಿನೆಮಾ, ಜಾಹಿರಾತು ಪ್ರಭಾವಾನಾ..ಅಲ್ಲ ಚೇಂಜ್ ಆದ ಲೈಫ್ ಸ್ಟೈಲೋ..ಕಾರಣ ಹುಡುಕುತ್ತಾ ಹೋದರೆ ಹಲವು ಸಿಗುತ್ತವೆ..ಎರಡು ದಿನ ಕಳೆದರೂ ಪೋಲೀಸರಿಗೆ ಆರೋಪಿ ಸಿಗಲೇ ಇಲ್ಲ..ಆಗಲೇ ವಿವಿಧ ಸಂಸ್ಥೆ, ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ, ಸತ್ಯಾಗ್ರಹ ಆರಂಭವಾಗಿತ್ತು..ಆ ಯುವತಿಗೆ ಪ್ರಜ್ಞೆ ಬಂದಾಗ ನಡೆದ ವಿಷಯವನ್ನು ಹೇಳಿದ್ದಳು..!!
ಅವಳ ಹೆಸರು ಸುಕನ್ಯ..!! ಮಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಟೀಚರಾಗಿ ಕೆಲಸ ಮಾಡುತ್ತಿದ್ದಳು..ಮನೆಯಲ್ಲಿ ತಾಯಿ ಮಾತ್ರ..ತಂದೆ ಚಿಕ್ಕವಳಿರಬೇಕಾದ್ರೆ ತೀರಿಕೊಂಡಿದ್ದರು..ಒಡಹುಟ್ಟಿದವರು ಯಾರೂ ಇಲ್ಲ..ಒಬ್ಬಳೇ ಮಗಳು..ಅಂದು ಸಂಜೆ ಸ್ಪೆಶಲ್ ಕ್ಲಾಸ್ ಇದ್ದುದರಿಂದ ಶಾಲೆ ಬಿಡಲು ಸ್ವಲ್ಪ ಲೇಟಾಗಿತ್ತು..ಯಾವತ್ತೂ ಒಟ್ಟಿಗೆ ಬರುವ ಗೆಳತಿ ರಾಣಿ ಜ್ವರದ ನಿಮಿತ್ತ ಬಂದಿರಲಿಲ್ಲ..ಸುಕನ್ಯ ಒಬ್ಬಳೇ ತನ್ನ ಬಸ್’ಸ್ಟಾಪಿನಲ್ಲಿ ಇಳಿದು ಮನೆಯತ್ತ ಹೆಜ್ಜೆ ಹಾಕಿದ್ದಳು..ಆಗ ಏಳು ಗಂಟೆಯಾಗಿತ್ತು..ಕತ್ತಲು ಆವರಿಸಿತ್ತು..ಮಳೆ ಬರುವ ಸೂಚನೆ ಬೇರೆ ಕಾಣಿಸಿದ್ದರಿಂದ ಬೇಗ ಬೇಗನೆ ನಡೆಯತೊಡಗಿದ್ದಳು..ಇದ್ದಕ್ಕಿದ್ದಂತೆ ಒಬ್ಬ ಅವಳ ಮುಂದೆ ಕಾಣಿಸಿಕೊಂಡ..ಅವನ್ಯಾರೂಂತ ಆ ಮಸುಕು ಕತ್ತಲಲ್ಲಿ ಕಾಣಿಸಲಿಲ್ಲ..ಹೆದರಿಕೆಯಿಂದ ನಡುಗಿದ್ದಳು..ಓಡಲು ಕಾಲುಗಳು ಸ್ಪಂದಿಸುತ್ತಿಲ್ಲ..ಗಟ್ಟಿಯಾಗಿ ಕೂಗೋಣವೆಂದರೆ ಬಾಯಿಯಿಂದ ಸ್ವರ ಹೊರಡುತ್ತಿಲ್ಲ..ಹುಲಿಯ ಬಾಯಿಗೆ ಸಿಕ್ಕಿ ಬಿದ್ದ ಜಿಂಕೆಯ ಪರಿಸ್ಥಿತಿ ಅವಳದಾಗಿತ್ತು..ಸೋತು ಹೋಗಿದ್ದಳು..ತನ್ನ ಕಾಮ ತೃಷೆ ತೀರಿದ ಮೇಲೆ ಅವಳನ್ನು ಕೊಲ್ಲಲು ಹೊರಟಿದ್ದ…ಜೋರಾಗಿ ವಾಹನದ ಸದ್ದು ಕೇಳಿಸಿದ್ದರಿಂದ ಭಯ ಉಂಟಾಗಿತ್ತೇನೋ..ಅವಳನ್ನು ಬಿಟ್ಟು ಓಡಿ ಹೋದ..ಸುಕನ್ಯ, ಅದೆಲ್ಲಿಂದ ಬಂದಿತ್ತೋ ಶಕ್ತಿ ಎದ್ದು ನಿಂತು ರಸ್ತೆಯತ್ತ ಓಡಿದ್ದಳು..!! ನಮ್ಮ ಕಾರಿಗೆ ಸಿಲುಕಿದ್ದಳು..ಇದೆಂತಹ ವಿಧಿಯಾಟವೇನೋ…!! ಈ ವಿಷಯ ಕೇಳಿ ಸುಕನ್ಯಳ ತಾಯಿಗೆ ಹಾರ್ಟ್ ಅಟ್ಯಾಕ್ ಆಗಿದ್ದು ತೀರಿಕೊಂಡಿದ್ದರು..ಆಸ್ಪತ್ರೆಗೆ ತೆರಳಿ ಸುಕನ್ಯಳಿಗೆ ಸಾಂತ್ವಾನ ಹೇಳಿದ್ದೆ..”ನಾನು ಏನು ಹೇಳಿದ್ರೂ ನಿಮಗೆ ಸಮಾಧಾನ ಆಗಲ್ಲ..ಆದ್ರೂ ಹೇಳ್ತಿದ್ದಿನಿ..ಆದದ್ದು ಕೆಟ್ಟ ಕನಸೆಂದು ಮರೆತುಬಿಡಿ..ಮುಂದೆ ಹೊಸ ಜೀವನ ಆರಂಭಿಸಿ..” “ಅಯ್ಯೋ?! ಇದೇನು ಸಾರ್ ನೀವು ಹೇಳ್ತಿದ್ದೀರಿ..ಎಲ್ಲರ ಹಾಗೆ ನಾನು ಅಳುಮುಂಜಿ ಅಂದುಕೊಂಡ್ರಾ..” ಸುಕನ್ಯಳ ವರಸೆಗೆ ಅಚ್ಚರಿ ಪಡುವ ಸರದಿ ನನ್ನದಾಗಿತ್ತು..ಅವಳು ಆಗಲೇ ಮೆಂಟಲೀ ಸ್ಟ್ರಾಂಗ್ ಆಗಿದ್ದು ಕಂಡು ಬಂತು..ತನಗೇನು ಆಗಿಲ್ಲವೇನೋ ಎಂಬಂತಿದ್ದಳು..”ನಿಮ್ಮ ಪಿಚ್ಚರ್ಸ್ ಎಲ್ಲ ನೋಡಿದ್ದೀನಿ ಸಾರ್..ತುಂಬ ಚೆನ್ನಾಗಿತ್ತು..ನೆಕ್ಸ್ಟು ಯಾವ ಫಿಲಂ ಮಾಡ್ತಿದ್ದಿರಿ ಸಾರ್..?!” ಆ ಪರಿಸ್ಥಿತಿಯಲ್ಲಿ ಅವಳ ಮಾತಿಗೆ ನನಗೆ ಏನು ಹೇಳಬೇಕೆಂದೇ ತಿಳಿಯಲಿಲ್ಲ..ಸುಮ್ಮನೆ ನಕ್ಕು ಬಿಟ್ಟೆ..ಆ ಸಮಯದಲ್ಲಿ ಸುಕನ್ಯ ಕೆಲಸ ಮಾಡುತ್ತಿದ್ದ ಶಾಲೆಯ ಕೆಲವು ಸ್ಟಾಫ್ಸ್ ಅವಳನ್ನು ನೋಡಲು ಬಂದರು..ಅವರನ್ನೆಲ್ಲ ನನಗೆ ಪರಿಚಯ ಮಾಡಿಸಿದ್ದಳು..”ಇವಳು ರಾಗಿಣಿ ನನ್ನ ಕ್ಲೋಸ್ ಫ್ರೆಂಡ್..” ರಾಗಿಣಿ ವಯ್ಯಾರದಿಂದ ಕೈ ಮುಗಿದು ನುಡಿದಳು..”ನೀವು ಡೈರಕ್ಟರ್ ಸೂರ್ಯ ಅಲ್ವಾ..ನನಗೆ ಗೊತ್ತು ಸಾರ್..” ನನಗೆ ಖುಷಿಯಾಗಿತ್ತು.. “ಇವ್ರು ಗಣೇಶ್..ಸೈನ್ಸ್ ಟೀಚರ್..” ಹೇಳಿದ್ದಳು ಸುಕನ್ಯ..ಸ್ವಲ್ಪ ಬೊಜ್ಜಿನ ಮೂವತ್ತೈದರ ಆಸುಪಾಸಿನ ವ್ಯಕ್ತಿ ನಗುತ್ತಾ ಕೈ ನೀಡಿದರು..ಅವರ ಕೊರಳಿಂದ ಹೊರ ಬರಲು ಇಣುಕುತ್ತಿದ್ದ ಚಿನ್ನದ ಸರ…ಕೈಗೆ ಕಟ್ಟಿದ್ದ ಬೆಲೆ ಬಾಳುವ ವಾಚ್..ಕೈ ಬೆರಳುಗಳಲ್ಲಿ ಕಾಣಿಸುತ್ತಿದ್ದ ಚಿನ್ನದ ಉಂಗುರ..ಎಲ್ಲವೂ ಅವರೊಬ್ಬ ಶ್ರೀಮಂತರೆಂದು ತೋರಿಸುತ್ತಿತು..ಶೇಕ್’ಹ್ಯ್ಂಡ್ ಮಾಡಿದೆ..ಸಣಕಲು ದೇಹದ ಸುಮಾರು ಐದೂವರೆ ಅಡಿ ಎತ್ತರದ ಬಿಳುಪು ಬಣ್ಣದ ಮೈಯ ಸುಂದರ ಯುವಕನನ್ನು ಪರಿಚಯಿಸಿದಳು..”ಇವ್ರು ಮನೋಹರ್..ಲಾಬ್ ಇನ್‍ಸ್ಟ್ರಕ್ಟರ್..!!” “ನಮಸ್ತೆ..” ಎಂದವ ಕೈ ಚಾಚಿದ..ಅವನ ಕೈ ಬೆರಳಲ್ಲಿದ್ದ ಪಚ್ಚೆಕಲ್ಲಿನ ಉಂಗುರ ಕೋಣೆಯಲ್ಲಿನ ಲೈಟಿನ ಬೆಳಕಿಗೆ ಫಳ ಫಳನೆ ಹೊಳೆದಿತ್ತು..”ನಿಮ್ಮನ್ನೆಲ್ಲ ನೋಡಿ ತುಂಬ ಖುಷಿಯಾಯ್ತು..” ಎಂದೆ..
ಮುಂದುವರಿಯುವುದು…