JNU ಕ್ಯಾಂಪಸ್ ನಲ್ಲಿ ಅಫ್ಜಲ್ ಗುರು ಪರವಾಗಿ ಘೋಷಣೆ ಕೂಗಿದವರನ್ನು ವಿರೋಧಿಸುವಲ್ಲಿಂದ ಶುರುವಾಗಿದ್ದು ಈಗ ಎಲ್ಲೆಲ್ಲಿಗೋ ಹೋಗಿ ಮುಟ್ಟಿದೆ.ಇದೇ ವಿಷಯವನ್ನು ತಮಗೆ ಬೇಕಾದಂತೆ ತಿರುಚಿ ದೊಡ್ಡದು ಮಾಡಿರುವ ಹಲವರು ತಮಗಾಗದವರ ವಿರುದ್ಧ ವೈಯಕ್ತಿಕ ದಾಳಿಗೆ ಇಳಿದಿದ್ದಾರೆ.ಎಷ್ಟೋ ಕಾಲದಿಂದ ಇದ್ದ ಸಿಟ್ಟು,ದ್ವೇಷಗಳನ್ನು ತೀರಿಸಿಕೊಳ್ಳಲು ಸರಿಯಾದ ಸಂದರ್ಭಕ್ಕೆ ಕಾಯುತ್ತಿದ್ದ ಒಂದಷ್ಟು ಪತ್ರಕರ್ತರು,ಸಾಮಾಜಿಕ ಹೋರಾಟಗಾರರು,ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು JNU ವಿಷಯವನ್ನು ಇಟ್ಟುಕೊಂಡು ತಮ್ಮ ವಿರೋಧಿಗಳನ್ನು ಮನಸೋಇಚ್ಛೆ ಹಳಿಯುತ್ತಿದ್ದಾರೆ.ಒಂದು ಉದಾಹರಣೆ ಕೊಡುವುದಾದರೆ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಮತ್ತು ನಟ ಅನುಪಮ್ ಖೇರ್ ದೇಶಪ್ರೇಮ,ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದ ಬಗ್ಗೆ ರಾತ್ರಿ ಒಂದುಗಂಟೆ ಸಮಯದಲ್ಲಿ ಟ್ವಿಟ್ಟರ್ ಯುದ್ಧ ಶುರು ಹಚ್ಚಿಕೊಂಡುಬಿಟ್ಟಿದ್ದರು.ಅವರಿಬ್ಬರಲ್ಲಿ ಯಾರು ಸರಿ ಎಂದು ನಾವಿಲ್ಲಿ ನೋಡುವುದು ಬೇಡ.ಆದರೆ ಈ ವಿಷಯಕ್ಕೆ ಸಂಬಂಧಿಸಿ ಪರಸ್ಪರರು ಟ್ವಿಟ್ಟರ್ ನಲ್ಲಿ ಅಪರ ರಾತ್ರಿಯಲ್ಲಿ ವೈಯಕ್ತಿಕ ದಾಳಿಗಿಳಿದುಬಿಟ್ಟರು.
ಭಾರತದ ನೆಲದಲ್ಲಿ ನಿಂತು ಅದರಲ್ಲೂ ಭಾರತೀಯ ತೆರಿಗೆದಾರರ ಹಣದಿಂದ ಅತೀ ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ,ವಿಭಿನ್ನ ವಿಚಾರಧಾರೆಗಳುಳ್ಳ ಆದರೂ ಉನ್ನತ ಬೌದ್ಧಿಕ ಪರಂಪರೆ ಪಡೆದ ಪದವೀಧರರನ್ನು ಪ್ರತಿ ವರ್ಷವೂ ದೇಶಕ್ಕೆ ನೀಡುತ್ತ ಬಂದ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಂಥ ಸಂಸ್ಥೆಯ ಆವರಣದಲ್ಲಿ “ಭಾರತ್ ಕೆ ಬರ್ಬಾದಿ ತಕ್ ಜಂಗ್ ರಹೇಗಿ” ಅಂತ ಕೂಗುವುದನ್ನು,ಅಫ್ಜಲ್ ಗುರುವನ್ನು ಹುತಾತ್ಮ ಎಂಬಂತೆ ಬಿಂಬಿಸಿ ಅರಚಾಡಿದವರನ್ನು ಯಾವ ಪ್ರಜ್ಞಾವಂತ ಭಾರತೀಯನೂ ಸಮರ್ಥಿಸಲಾರ.ಅವರು ಮಾಡಿದ್ದನ್ನು ವಿರೋಧಿಸಲು ದೇಶಪ್ರೇಮಿಯೇ ಆಗಬೇಕೆಂದಿಲ್ಲ.ಅಫ್ಜಲ್ ದಾಳಿ ಮಾಡಿದ ಸಂಸತ್ ಗೇ ಐದು ವರ್ಷಗಳಿಗೊಮ್ಮೆ ನಾಯಕರನ್ನು ಜಾಣತನದಿಂದ ಆರಿಸಿ ಕಳಿಸುವ ಪ್ರಜ್ಞಾವಂತ ಮತದಾರನೂ ಸಾಕು ಉಮರ್ ಖಲೀದ್ ನಂಥ ವಿಕ್ಷಿಪ್ತ ಮನಸ್ಸಿನ ದೇಶದ್ರೋಹಿಗೆ ಛೀ ಥೂ ಎನ್ನಲು.
JNU ನಲ್ಲಿ Pro Afzal ಘೋಷಣೆ ಕೂಗಿದ ಮರುದಿನವೇ ಉಮರ್ ಖಲೀದ್ ಟೈಮ್ಸ್ ನೌ ಚಾನೆಲ್ ನಲ್ಲಿ ಅರ್ನಬ್ ಗೋಸ್ವಾಮಿಯ ಚರ್ಚೆಯಲ್ಲಿ ಭಾಗವಹಿಸಿ ಹಿಗ್ಗಾಮುಗ್ಗಾ ಬೈಸಿಕೊಂಡ.ಆದರೆ ದಿಲ್ಲಿ ಪೋಲೀಸರು ಮರುದಿನ JNU ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯಾ ಕುಮಾರ್ ನನ್ನು ಬಂಧಿಸಿ ಕೈಕಟ್ಟಿ ಕುಳಿತುಕೊಂಡುಬಿಟ್ಟರು.ಅವತ್ತು ರಾತ್ರಿ ಅರ್ನಬ್ ಗೋಸ್ವಾಮಿಯ ಚರ್ಚೆಯಲ್ಲಿ ಭಾಗವಹಿಸಿದ ಬಳಿಕ ಉಮರ್ ಖಲೀದ್ ಎಲ್ಲಿಗೆ ಹೋದ ಎಂಬುದು ಯಾರಿಗೂ ಗೊತ್ತಿಲ್ಲ.ನಿಜವಾಗಿ ಜೈಲಿನಲ್ಲಿರಬೇಕಾದವನು ಉಮರ್. ಜನರು ಸಾಮಾಜಿಕ ಜಾಲತಾಣದಲ್ಲಿ ಉಮರ್ ಖಲೀದ್ ನನ್ನು ಬಂಧಿಸಲು ಒತ್ತಾಯಿಸಲು ತೊಡಗಿದ ಮೇಲೆಯೇ ಪೋಲೀಸರು ಎಚ್ಚೆತ್ತುಕೊಂಡು ಆತನಿಗಾಗಿ ಬಲೆ ಬೀಸಿ ಅವನ ಫೋನ್ ಕರೆಗಳ ದಾಖಲೆಗಳನ್ನು ಪಡೆದಿದ್ದು.ಉಮರ್ ದೇಶವಿರೋಧಿ ಘೋಷಣೆಗಳನ್ನು ಕೂಗಿರುವುದಕ್ಕೆ ವೀಡಿಯೋ ಸಾಕ್ಷ್ಯಗಳು,ಪ್ರತ್ಯಕ್ಷದರ್ಶಿಗಳು ಲಭ್ಯವಿದ್ದೂ ಉಮರ್ ಖಲೀದ್ ತಪ್ಪಿಸಿಕೊಂಡು ತಲೆ ಮರೆಸಿಕೊಳ್ಳುವವರೆಗೆ ಪೋಲೀಸರು ಸುಮ್ಮನಿದ್ದದ್ದೇಕೆ ಎನ್ನುವುದು ಪ್ರಶ್ನೆಯಾಗೇ ಉಳಿದಿದೆ.ಈ ಲೇಖನ ಓದುವ ಹೊತ್ತಿಗೆ ಉಮರ್ ಸೆರೆಸಿಕ್ಕಿರಲೂ ಬಹುದು ಅಥವಾ ಪೋಲೀಸರು ಆತನನ್ನು ಇನ್ನೂ ಹುಡುಕುತ್ತಿರಲೂ ಬಹುದು.
ಈ ನಡುವೆಯೇ ಕನ್ಹಯ್ಯಾ ಕುಮಾರ್ ನನ್ನು ಪಟಿಯಾಲಾ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಒಂದಷ್ಟು ವಕೀಲರು ಆತನ ಮೇಲೆ ಹಲ್ಲೆಗೆ ಯತ್ನಿಸಿದರು.ಅಲ್ಲಿಗೆ ಸುದ್ದಿ ಕವರೇಜ್ ಮಾಡಲು ಹೋಗಿದ್ದ ಒಂದಷ್ಟು ಪತ್ರಕರ್ತರ ಮೇಲೆಯೂ ಹಲ್ಲೆ ನಡೆಸಿದರು.ಮತ್ತೊಂದೆಡೆ ಯಾವುದೋ ಕಾರಣಕ್ಕೆ ತಾಳ್ಮೆ ಕಳೆದುಕೊಂಡ ದಿಲ್ಲಿಯ ಬಿಜೆಪಿ ಮುಖಂಡ ಓಂ ಪ್ರಕಾಶ್ ಶರ್ಮಾ CPI ಕಾರ್ಯಕರ್ತನೊಬ್ಬನ ಮೇಲೆ ಹಲ್ಲೆ ಮಾಡಿದ್ದು ಎಲ್ಲ ಕಡೆಯೂ ವೈರಲ್ ಆಯಿತು.ಅಲ್ಲಿಗೆ ಪ್ರಕರಣ ಯೂಟರ್ನ್ ಹೊಡೆದುಬಿಟ್ಟಿತು.JNU,ಉಮರ್ ಖಲೀದ್ ವಿಷಯವನ್ನು ಮೂಲೆಗೆ ತಳ್ಳಿದ ಒಂದಷ್ಟು ಪ್ರಸಿದ್ಧ ಟಿವಿ ಪತ್ರಕರ್ತರು,ಸಾಮಾಜಿಕ ಜಾಲತಾಣದ ಸೆಲೆಬ್ರಿಟಿಗಳು,ಎಡಪಕ್ಷಗಳು,ಕಾಂಗ್ರೆಸ್ ಮತ್ತು ಅರವಿಂದ ಕೇಜ್ರಿವಾಲ್ ಮುಂತಾದವರು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆಯಾಗುತ್ತಿದೆ,ವಕೀಲರೇ ಕಾನೂನನ್ನು ಮುರಿಯುತ್ತಿದ್ದಾರೆ, ಭಾರತದಲ್ಲಿ ತುರ್ತುಪರಿಸ್ಥಿತಿ ಮತ್ತೆ ಬಂದಿದೆಯೇನೋ ಅನ್ನಿಸುತ್ತಿದೆ,ಕನ್ಹಯ್ಯಾ ಕುಮಾರ್ ನಂಥ ಅಮಾಯಕರನ್ನು ಸುಮ್ಮನೇ ಬಂಧಿಸಲಾಗಿದೆ ಎಂದು ಗಂಟಲು ಹರಿದುಕೊಂಡು ಕೂಗಲಾರಂಭಿಸಿದರು.ವಕೀಲರು ಹಲ್ಲೆ ನಡೆಸಿದ್ದನ್ನೇ ನೆಪವಾಗಿಟ್ಟುಕೊಂಡು ಕೆಲವು ಜನರು ಇಡೀ ಪ್ರಕರಣವನ್ನೇ ತಿರುಚಿ ಬಿಟ್ಟರು.ಉಮರ್ ಖಲೀದ್ ಹೆಸರೇ ಮರೆತು ಹೋಯಿತು.ಕನ್ಹಯ್ಯಾ ಕುಮಾರ್ ನನ್ನು ರಾಷ್ಟ್ರೀಯ ಹೀರೋ ಮಾಡಿಬಿಟ್ಟರು.ಕನ್ಹಯ್ಯಾ ದೇಶದ್ರೋಹಿಯಾದರೆ ನಾವೂ ದೇಶದ್ರೋಹಿಗಳು ಎಂದು ಒಂದಷ್ಟು ಸೆಲೆಬ್ರೆಟಿ ಪತ್ರಕರ್ತರು ನಾಚಿಕೆ ಬಿಟ್ಟು ಹೇಳಿದರು.ಪತ್ರಕರ್ತರ ಮೇಲೆ ನಡೆದ ಹಲ್ಲೆ ವಿರೋಧಿಸಿ ನಡೆಸಿದ ಪ್ರತಿಭಟನೆಗೆ ಎರಡು ಪ್ರಮುಖ ರಾಷ್ಟ್ರೀಯ ಸುದ್ದಿವಾಹಿನಿಗಳು ಬರಲಿಲ್ಲ ಎಂಬುದನ್ನೇ ಒಂದು ದಿನ ದೊಡ್ಡ ವಿಷಯ ಮಾಡಿದರು.ಇಂಡಿಯಾ ಟುಡೇ ಟೀವಿಯಂತೂ ರಾಹುಲ್ ಕನ್ವಲ್ ನೇತೃತ್ವದಲ್ಲಿ ತನ್ನ ನ್ಯೂಸ್ ರೂಮ್ ಗೇ ವಿಧಿವಿಜ್ಞಾನ ತಜ್ಞರನ್ನು ಕರೆಸಿ ಉಮರ್ ಖಲೀದ್ ಮತ್ತು ಕನ್ಹಯ್ಯಾ ಘೋಷಣೆ ಕೂಗುತ್ತಿದ್ದ ವೀಡಿಯೋ ನಕಲಿ ಎಂಬುದನ್ನು ಸಾಬೀತು ಪಡಿಸುವ ಪ್ರಯತ್ನ ನಡೆಸಿತು.ಆ ಮೂಲಕ ಎಡಿಟ್ ಮಾಡಿದ ವೀಡಿಯೋ ತೋರಿಸಿದ್ದಕ್ಕೆ ಕೆಲವು ಸುದ್ದಿವಾಹಿನಿಗಳು ಮತ್ತು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡವರೆಲ್ಲರೂ ಕ್ಷಮೆ ಕೇಳಬೇಕೆಂದು ಆಗ್ರಹಿಸಿತು.ಮತ್ತೊಮ್ಮೆ ಒಂದಷ್ಟು ಪತ್ರಕರ್ತರು,ಸೆಲೆಬ್ರೆಟಿಗಳು,ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವವರು ಹಲವಾರು ಟ್ರೆಂಡ್,ಹ್ಯಾಷ್ ಟ್ಯಾಗ್ ಗಳ ಮೂಲಕ ಉಮರ್ ಖಲೀದ್ ಮತ್ತು ದೇಶವಿರೋಧಿ ಘಟನೆಯ ಪ್ರಕರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವಲ್ಲಿ ಬಹುತೇಕ ಯಶಸ್ವಿಯಾದರು.
ಅದು ಅಲ್ಲಿಗೇ ನಿಲ್ಲಲಿಲ್ಲ.ಅರ್ನಬ್ ಗೋಸ್ವಾಮಿಯ ಜನಪ್ರಿಯತೆಯನ್ನು ಕಂಡು ಕರುಬುತ್ತಿದ್ದವರು,ಆತನ ಮಾನವನ್ನು ರಾಷ್ಟ್ರೀಯ ಮಟ್ಟದಲ್ಲಿ ಹಾರಜು ಹಾಕಬೇಕೆಂದು ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದವರು ಟೈಮ್ಸ್ ನೌ ಸುದ್ದಿವಾಹಿನಿ ದೇಶವಿರೋಧಿಗಳನ್ನು ಹಿಗ್ಗಾಮುಗ್ಗಾ ಝಾಡಿಸುತ್ತಿದ್ದದ್ದಕ್ಕೆ ವಿರೋಧ ವ್ಯಕ್ತಪಡಿಸಿದರು.ಅರ್ನಬ್ ಉಮರ್ ಖಲೀದ್ ನನ್ನು ಕೂರಿಸಿಕೊಂಡು ಅವನ ಬಣ್ಣವನ್ನು ಬಯಲು ಮಾಡಿದ್ದಕ್ಕೆ,JNU ಪ್ರೊಫೇಸರ್ ಗಿಲಾನಿಯ ರಾಷ್ಟ್ರವಿರೋಧಿ ಮುಖವನ್ನು ತೋರಿಸಿದ್ದಕ್ಕೆ,ಕೋರ್ಟ್ ನಲ್ಲಿ ಹಲ್ಲೆ ನಡೆಸಿದ ವಕೀಲರನ್ನು ಮಾತ್ರ ನೆಪವಾಗಿಟ್ಟುಕೊಂಡು ಪ್ರಕರಣ ತಿರುಚಿ ಎಲ್ಲಾ ವಕೀಲರನ್ನು ಗೂಂಡಾಗಳೆಂದು ಕರೆಯುವುದು ಸರಿಯಲ್ಲವೆಂದು ಹೇಳಿದ್ದಕ್ಕೆ,ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕೆಂದು ಹೇಳಿದ್ದನ್ನು ವಿರೋಧಿಸಿದವರಿಗೆ ತನ್ನ ಎಂದಿನ ಶೈಲಿಯಲ್ಲಿ ಅರ್ನಬ್ ಉತ್ತರಕೊಟ್ಟು ಭಾರತದ ಪರವಾಗಿ ನಿಂತದ್ದಕ್ಕೆ ಅರ್ನಬ್ ನನ್ನು ಬಿಜೆಪಿ ಏಜಂಟ್ ಎಂದು ಬಿಟ್ಟರು.ಆತ ಆರೆಸ್ಸೆಸ್ ಪ್ರಣೀತ ವಿಚಾರಧಾರೆಗಳನ್ನು ತನ್ನ ಟಿವಿಯ ಮೂಲಕ ಜನರ ಮೇಲೆ ಹೇರುತ್ತಿದ್ದಾನೆ ಎಂದು BoycottArnab ಎಂಬುದನ್ನು ಟ್ರೆಂಡ್ ಮಾಡಿನಿಟ್ಟರು.ಅತ್ತ ಭಾರತ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ಕೆಲವರು ಆಂದೋಲನ ನಡೆಸುತ್ತಿದ್ದರೆ ಇತ್ತ ಸೆಲೆಬ್ರೆಟಿ ಪತ್ರಕರ್ತರು,ಕೆಲವು ರಾಜಕಾರಣಿಗಳು ಅರ್ನಬ್ ವಿರೋಧಿ ಆಂದೋಲನ ನಡೆಸತೊಡಗಿದರು.ದೇಶಪ್ರೇಮದ ಬಗ್ಗೆ ಮಾತನಾಡುವವರಿಗೆಲ್ಲ ಬಿಜೆಪಿ ಏಜಂಟ್ ಗಳ ಪಟ್ಟ ಕಟ್ಟಿದರು.ನ್ಯೂಯಾರ್ಕ್ ನಲ್ಲಿ ಮೋದಿ ವಿರೋಧಿಗಳಿಂದ ಒದೆ ತಿಂದಿದ್ದ ಒಬ್ಬ ಟಿವಿ ಪತ್ರಕರ್ತರಂತೂ ನಿರ್ಲಜ್ಜೆಯಿಂದ ರಾಷ್ಟ್ರವಿರೋಧಿಗಳನ್ನು ಸಮರ್ಥಿಸಿಕೊಂಡು `I am Anti National’ ಎಂಬ ಲೇಖನ ಬರೆದು ಅದು ಭಾರತದ ಬೇರೆ ಬೇರೆ ಭಾಷೆಗಳ ಪತ್ರಿಕೆಗಳಲ್ಲೂ ಪ್ರಕಟವಾಗುವಂತೆ ನೋಡಿಕೊಂಡರು.ಎಲ್ಲದಕ್ಕೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರು ಕೊಟ್ಟರು.
ತಮಗೆ ಅನ್ನಿಸಿದ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ಸಂವಿಧಾನ ಅಧಿಕಾರ ಕೊಟ್ಟಿದೆ.ಆದರೂ ದೇಶವಿರೋಧಿ ಘಟನೆಗಳು ನಡೆದಾಗ ಅದನ್ನು ಎಲ್ಲರೂ ಒಗ್ಗಟ್ಟಾಗಿ ವಿರೋಧಿಸುವ ಬದಲು ಇಡೀ ಪ್ರಕರಣವನ್ನೇ ತಮಗೆ ಬೇಕಾದಂತೆ ದೇಶದ ಒಂದಷ್ಟು ಜನರು ತಿರುಚಿಬಿಟ್ಟರು.ಉಮರ್ ಖಲೀದ್ ಮತ್ತು JNU ಪ್ರಕರಣಕ್ಕೆ ಜಾಸ್ತಿ ಹೈಲೈಟ್ ಸಿಗಬೇಕಾಗಿದ್ದ ಕಡೆ ಪತ್ರಕರ್ತರ ಮೇಲೆ ನಡೆದ ಹಲ್ಲೆಯ ಪ್ರಕರಣಕ್ಕೆ ಹೈ ವೊಲ್ಟೇಜ್ ಸಿಕ್ಕಿಬಿಟ್ಟಿತು.ಸರ್ಕಾರ ನಿಜಕ್ಕೂ ಪ್ರಜೆಗಳ ದನಿಯನ್ನು ಹತ್ತಿಕ್ಕುತ್ತಿದೆಯೇನೋ ಎಂದು ಜನರಿಗೆ ಅನ್ನಿಸಿಬಿಡಬಿಡುವಷ್ಟರ ಮಟ್ಟಿಗೆ JNU ಪ್ರಕರಣದ ದಿಕ್ಕನ್ನು ಬದಲಾಯಿಸಿಬಿಟ್ಟರು.ಹಾಗೆ ತಿರುಚುವವರಿಗೆ ಪೂರಕವಾದ ಘಟನೆಗಳಾದ ಕನ್ಹಯ್ಯಾ,ಪತ್ರಕರ್ತರ ಮೇಲಿನ ದಾಳಿ ನಡೆದದ್ದು ಕಾಕತಾಳಿಯವೋ ಅಥವಾ ಅಂಥ ಸನ್ನಿವೇಶಗಳನ್ನು ಉದ್ದೇಶಪೂರಕವಾಗಿ ಸೃಷ್ಟಿಸಲಾಯಿತೋ ಎಂಬುದೂ ಕೂಡಾ ಪ್ರಶ್ನೆಯಾಗೇ ಉಳಿದಿದೆ.
ಹಾಗೆ ಪ್ರಕರಣದ ದಿಕ್ಕು ತಪ್ಪಿಸಹೊರಟ ಪ್ರಸಿದ್ಧ ವ್ಯಕ್ತಿಗಳು ಮಾತ್ರ ಹಿಂದೆಂದೂ ಆಗದ ರೀತಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬೌದ್ಧಿಕವಾಗಿ,ವೈಚಾರಿಕವಾಗಿ ಬೆತ್ತಲಾಗಿಬಿಟ್ಟರು.ಜನರು ಸಾಮಾಜಿಕ ಜಾಲತಾಣಗಳಲ್ಲಿ,ಪತ್ರಿಕೆಗಳಲ್ಲಿ,ಟಿವಿ ಚರ್ಚೆಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಚೌಕಟ್ಟಿನೊಳಗೇ I am Anti National ಟ್ರೆಂಡ್ ಮಾಡಿದವರನ್ನು ಉಗಿಯತೊಡಗಿದರು.ತಮ್ಮ ಬೇಳೆ ಬೇಯಿಸಿಕೊಳ್ಳಲು ಕೆಲವರು ಭಾರತದ ಭದ್ರತೆಯನ್ನೂ ಹರಾಜಿಗಿಡಬಲ್ಲರು ಎಂಬುದು ಮತ್ತೊಮ್ಮೆ ಸಾಬೀತಾಯಿತು.ಅದೇ ಸಮಯದಲ್ಲಿ ದೇಶಪ್ರೇಮದ ಬಗ್ಗೆ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ದೊಡ್ಡ ಚರ್ಚೆಗಳಾದವು.ಹಲವು ರಾಜಕೀಯ ಪಕ್ಷಗಳ ಮುಖವಾಣಿಯಾಗಿರುವ ವಿದ್ಯಾರ್ಥಿ ಸಂಘಟನೆಗಳು ತಾವೂ ಒಂದಷ್ಟು ಪ್ರಚಾರ ಪಡೆದವು.Pro Afzal ಆಂದೋಲನವನ್ನು ವಿರೋಧಿಸುವ ಭರಾಟೆಯಲ್ಲಿ ತಾವೂ ಒಂದಷ್ಟು ವಿಕೃತಿಗಳನ್ನು ಪ್ರದರ್ಶಿಸಿದವು.
ನಿಜವಾದ ಅರೋಪಿ ಉಮರ್ ಖಲೀದ್ ನನ್ನು ಬಂಧಿಸಬೇಕು,ಅದು ಬಿಟ್ಟು ಕನ್ಹಯ್ಯಾನನ್ನು ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಬಂಧಿಸಿದ್ದು ಸರಿಯಲ್ಲ,ಕಾಶ್ಮೀರದಲ್ಲಿ ಪಿಡಿಪಿ ಜೊತೆ ನಂಟು ಕಡಿದುಕೊಳ್ಳುವ ಭಯದಿಂದ ಕಾಶ್ಮೀರ ಪ್ರತ್ಯೇಕತಾವಾದಿಗಳ ಜೊತೆ ಸಂಪರ್ಕವಿದ್ದ ಉಮರ್ ಖಲೀದ್ ನನ್ನು ಬಂಧಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಹೇಳಿದವರಿಗೆ ಕೂಡಾ ದೇಶವಿರೋಧಿಗಳ ಪಟ್ಟ ಕಟ್ಟಲಾಯಿತು.ಇದೇ ವಿಷಯ ಇಟ್ಟುಕೊಂಡು ರಾಷ್ಟ್ರವಿರೋಧಿಗಳನ್ನು ವಿರೋಧಿಸುವ ನೆಪದಲ್ಲಿ ಕೆಲವು ‘ಭಕ್ತರು’ ತಮ್ಮ ಅತಿರೇಕದ ವಿಕೃತಿಗಳನ್ನು ಪ್ರದರ್ಶಿಸಿ ಪ್ರಜ್ಞಾವಂತ ದೇಶಪ್ರೇಮಿ ಮನನೊಂದುಕೊಳ್ಳುವಂತೆ ಮಾಡಿದರು.ಪತ್ರಕರ್ತರ ಮೇಲಿನ ಹಲ್ಲೆಯನ್ನು ರಂಪ ಮಾಡಿ ಪ್ರಕರಣ ತಿರುಚಿದವರದ್ದೂ ಮತ್ತು ನಿಜವಾದ ಅಪರಾಧಿಗಳನ್ನು ಬಂಧಿಸಿ ಎಂದು ಕೇಂದ್ರಸರ್ಕಾರಕ್ಕೆ ಬೈದವರ ಮೇಲೆ ಮುಗಿಬಿದ್ದು ವೈಯಕ್ತಿಕ ದಾಳಿ ಮಾಡಿದ ‘ಭಕ್ತ’ರದ್ದು ಇಬ್ಬರದ್ದೂ ತಪ್ಪು ಎಂದು ‘ಭಕ್ತರು’ ಅರ್ಥಮಾಡಿಕೊಳ್ಳಲೇ ಇಲ್ಲ.ಇದರಿಂದ ಕೇಂದ್ರಸರ್ಕಾರಕ್ಕೆ ಮತ್ತೊಂದಷ್ಟು ಕೆಟ್ಟ ಹೆಸರು ಬಂತು.
ಎಲ್ಲಾ ಪ್ರಕರಣಗಳಂತೆ JNU ಪ್ರಕರಣದಲ್ಲೂ ರಾಜಕೀಯ ಮಾಡಲಾಯಿತು.ಎಡಪಕ್ಷಗಳು,ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಕನ್ಹಯ್ಯಾ,ಉಮರ್ ಖಲೀದ್ ಪರವಾಗಿ ನಿಂತರೆ ಆಡಳಿತ ಪಕ್ಷ ಬಿಜೆಯ ಮುಖಂಡರು ದೇಶವಿರೋಧಿ ಘೋಷಣೆ ಕೂಗಿದವರನ್ನು ಬಂಧಿಸಲು ಪಟ್ಟು ಹಿಡಿದರು.ಯುಪಿಎ ಅವಧಿಯಲ್ಲೇ ಉಮರ್ ಖಲೀದ್ ಸದಸ್ಯನಾಗಿದ್ದ DSU ರಾಜಕೀಯ ಸಂಘಟನೆಯ ಮೇಲೆ ನಿಗಾ ಇಟ್ಟು ಅದು ದೇಶವಿರೋಧಿ ಕೃತ್ಯ ನಡೆಸದಂತೆ ಎಚ್ಚರಿಕೆ ವಹಿಸಲಾಗಿತ್ತು.ಹಾಗಿರುವಾಗ ಈಗ ನೀವೇಕೆ ಉಮರ್ ಖಲೀದ್ ಗೆ ಬೆಂಬಲ ಸೂಚಿಸುತ್ತಿದ್ದೀರಿ ಎಂದು ಕೇಳಿದರೆ ಕಾಂಗ್ರೆಸ್ ಬಳಿ ಉತ್ತರವಿಲ್ಲ.ನಿಜವಾದ ಆರೋಪಿ ಉಮರ್ ಖಲೀದ್ ತಪ್ಪಿಸಿಕೊಳ್ಳುವ ತನಕ ಸುಮ್ಮನಿದ್ದು ಕನ್ಹಯ್ಯಾನನ್ನು ಮಾತ್ರ ಬಂಧಿಸಿದ್ದೇಕೆ,ಉಮರ್ ಬಂಧನಕ್ಕೆ ಕಾಶ್ಮೀರದ ಪಿಡಿಪಿ ಅಡ್ಡಿಯಾಗುತ್ತಿದೆಯೇ ಎಂದು ಕೇಳಿದರೆ ಬಿಜೆಪಿಯ ಬಳಿಯೂ ಉತ್ತರವಿಲ್ಲ.ಒಟ್ಟಿನಲ್ಲಿ ಎಲ್ಲರೂ ಸುಮ್ಮನೇ ರಾಜಕೀಯ ಮಾಡುತ್ತಿದ್ದಾರಷ್ಟೇ.ಒಂದು ಕಡೆ ಒಬ್ಬನ ದೇಶದ್ರೋಹದ ಕೆಲಸ ರಾಜಕೀಯ ಪಕ್ಷವೊಂದರ ವೋಟ್ ಬ್ಯಾಂಕ್ ಆಗಿ ಬದಲಾದರೆ ಇನ್ನೊಂದೆಡೆ ಹಲವು ಜನರ ದೇಶಪ್ರೇಮ ಮತ್ತೊಂದು ಪಕ್ಷದ ವೋಟ್ ಬ್ಯಾಂಕ್ ಆಗುತ್ತಿದೆ.
ಅಭಿವ್ಯಕ್ತಿ ಸ್ವಾತಂತ್ರ್ಯ,ಸೈದ್ಧಾಂತಿಕ ಭಿನ್ನಾಭಿಪ್ರಾಯ,ಹೊಟ್ಟೆ ಕಿಚ್ಚು,ರಾಜಕೀಯ ಇಬ್ಬಂದಿತನ,ಸಮ್ಮಿಶ್ರ ಸರ್ಕಾರ ಈ ಎಲ್ಲದಕ್ಕಿಂತಲೂ ದೇಶದ ಆಂತರಿಕ ಭದ್ರತೆ,ಅಖಂಡತೆ ಮುಖ್ಯ ಎಂಬುದನ್ನು ಕೆಲವರು ಅರ್ಥ ಮಾಡಿಕೊಳ್ಳಬೇಕಿತ್ತು.ಪ್ರತಿ ಸಲವೂ ದೇಶಪ್ರೇಮದ ಸರ್ಟಿಫಿಕೇಟ್ ತೋರಿಸಬೇಕೆ ಎಂದು ಕೆಲವರು ಅರಚಾಡುವುದು,ಸರ್ಕಾರವನ್ನು ಪ್ರಶ್ನಿಸಿದ ಮಾತ್ರಕ್ಕೆ ಅವರಿಗೆ Anti National ಪಟ್ಟ ಕಟ್ಟುವ ‘ಭಕ್ತ’ರ ವಿಕ್ಷಿಪ್ತ ಮನಸ್ಥಿತಿ ಇವೆಲ್ಲಕ್ಕಿಂತಲೂ ದೇಶವೇ ಮುಖ್ಯವಾಗಬೇಕು.ಭಾರತದಲ್ಲೇ ಇದ್ದುಕೊಂಡು ದೇಶವಿರೋಧಿಗಳಾಗಿ ದೇಶವನ್ನು ಒಡೆಯುವವರ ಒಳಸಂಚಿಕೆ ನಾವು ಬಲಿಯಾಗುವುದಿಲ್ಲ ಎಂದು ಎಲ್ಲ ಭಾರತೀಯರು ಘಂಟಾಘೋಷವಾಗಿ ಕೂಗಿ ಹೇಳಬೇಕಿತ್ತು.ಆದರೆ ಹಾಗಾಗದೆ JNU ಪ್ರಕರಣ ದೇಶಪ್ರೇಮ,ದೇಶದ್ರೋಹ,ಅಭಿವ್ಯಕ್ತಿ ಸ್ವಾತಂತ್ರ್ಯ,ರಾಜಕೀಯದ ಕಲಸುಮೇಲೋಗರವಾಗಿರುವುದು ತೀರಾ ವಿಪರ್ಯಾಸ.