Featured ಪ್ರಚಲಿತ

“ಭಕ್ತ”ರ ಕಿತಾಪತಿಗಳು ಕೊನೆಗೊಳ್ಳುವುದೆಂದು?

ಈ ಫೆಬ್ರವರಿ ಹದಿನಾಲ್ಕು ಹತ್ತಿರ ಬಂತೆಂದರೆ ಸಾಕು ಪ್ರತೀ ಬಾರಿಯೂ ನಮ್ಮ ಮೊಬೈಲಿಗೊಂದು ಸಂದೇಶ ಬಂದಿರುತ್ತದೆ. ಈಗೀಗ ಫೇಸ್ಬುಕ್’ನಲ್ಲೂ ತಗಲಾಕೊಂಡಿರುತ್ತೇವೆ(ಟ್ಯಾಗ್). “ಫೆಬ್ರವರಿ ಹದಿನಾಲ್ಕು ಅಂದ್ರೆ ಪ್ರೇಮಿಗಳ ದಿನ, ಯುವಕ ಯುವತಿಯರು ಕುಡಿದು ಕುಣಿದು ಕುಪ್ಪಳಿಸುವ ದಿನ ಅಂತ ನಮಗೆ ಗೊತ್ತು, ಆದರೆ ಅದೇ ದಿನ ಭಗತ್ ಸಿಂಗ್, ರಾಜಗುರು, ಸುಖದೇವ್ ಎಂಬ ಮೂವರೂ ಹೀರೋಗಳು ಗಲ್ಲಿಗೇರಿದ ದಿನ ಎಂಬುದು ಯಾರಿಗಾದರೂ ಗೊತ್ತಿದೆಯಾ?” ಎಂಬ ಮೆಸೇಜಿನ ಬಗ್ಗೆ ನಾನು ಹೇಳುತ್ತಿರುವುದು. ನೀವು ಇದರ ಕಿರಿಕಿರಿಯನ್ನು ಅನುಭವಿಸಿಯೇ ಇರುತ್ತೀರ. ವಾಸ್ತವದಲ್ಲಿ ಅವರನ್ನು ಗಲ್ಲಿಗೇರಿಸಿದ್ದು ಫೆಬ್ರವರಿಯಲ್ಲಲ್ಲ, ಆದರೆ ಯಾರೋ ಕೆಲಸವಿಲ್ಲದವನು ಗಲ್ಲಿಗೇರಿಸಿದ್ದು ಅದೇ ದಿನ ಅಂತ ಒಂದು ಮೆಸ್ಸೇಜ್ ಕ್ರಿಯೇಟ್ ಮಾಡಿ ಅದನ್ನು ನೆಟ್ಟಿನಲ್ಲಿ ಹರಿಯಬಿಟ್ಟ. ಉಳಿದವರೆಲ್ಲ ಅದನ್ನೇ ಸತ್ಯ ಎಂದು ಭಾವಿಸಿ ಫಾರ್ವಡ್ ಮಾಡೇ ಬಿಟ್ಟರು. ಹೀಗೆ ಪಾಶ್ಚಾತ್ಯ ಸಂಸ್ಕೃತಿಯಾದ ಪ್ರೇಮಿಗಳ ದಿನವನ್ನು ವಿರೋಧಿಸುವ ಭರದಲ್ಲಿ, ಮೂವರು ಅಪ್ಪಟ ದೇಶಪ್ರೇಮಿಗಳನ್ನು ತಿಂಗಳಿಗೂ ಮುನ್ನವೇ ಸಾಯಿಸುವ ಕೃತಘ್ನರೂ ಇದ್ದಾರೆ ನಮ್ಮೊಳಗೆ.

ಇದು ಬರೀ ಪ್ರೇಮಿಗಳ ದಿನಕ್ಕೆ ಮಾತ್ರ ಸೀಮಿತವಾದದ್ದಲ್ಲ, ಗಡಿ ಕಾಯುವ ಸೈನಿಕ ಎಲ್ಲಾದರೂ ವೀರ ಮರಣ ಹೊಂದಿದರೆ, ಅವನ ನೈಜ ಫೋಟೋ ಸಿಗುವ ಮುನ್ನವೇ ಇನ್ಯಾರದ್ದೋ ಫೋಟೋವನ್ನು ಇದು ಅವನದ್ದೇ ಎಂದು ಬಿಂಬಿಸಿ ವೀರಯೋಧನಿಗೆ ಶ್ರದ್ಧಾಂಜಲಿ ಎನ್ನುವ ಫೋಟೋ ಹಾಕುವ ಅಸಂಬದ್ಧಗಳನ್ನೂ ನೋಡಿದ್ದೇವೆ ನಾವು. ಈ ಎಲ್ಲಾ ಅಸಂಬದ್ಧಗಳ ಹಿಂದಿರುವ ಉದ್ದೇಶ ಫೇಸ್’ಬುಕ್’ನಲ್ಲ್ಲಿ ಒಂದಷ್ಟು ಲೈಕುಗಳನ್ನು ಪಡೆಯುವುದಷ್ಟೇ ಆಗಿರುತ್ತದೆಯೇ ವಿನಹ ಸತ್ಯ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಿ ಜನರಲ್ಲಿ ಅರಿವು ಮೂಡಿಸುವಂತಹ ಒಳ್ಳೆ ಉದ್ದೇಶ ಖಂಡಿತಾ ಇರುವುದಲ್ಲ.

ಇಂತಹ ಅಸಂಬದ್ಧ ಪ್ರಲಾಪಕ್ಕೆ ಹೊಸದೊಂದು ಉದಾಹರಣೆ ಸಿಕ್ಕಿದೆ. ಜೆ.ಎನ್.ಯುನಲ್ಲಿ ಏನೆಲ್ಲಾ ಚಟುವಟಿಕೆಗಳು ನಡೆಯುತ್ತಿವೆ ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಈ ಎಲ್ಲಾ ಘಟನೆಗಳನ್ನು ನೋಡಿ ದೇಶದ ಅತ್ಯಂತ ಯಶಸ್ವೀ ಉದ್ಯಮಿ ರತನ್ ಟಾಟಾರವರು ತಮ್ಮ ಕಂಪೆನಿಗಳಲ್ಲಿ ಜೆ.ಎನ್.ಯುನಲ್ಲಿ ಕಲಿತವರಿಗೆ ಉದ್ಯೋಗ ನೀಡದಿರಲು ನಿರ್ಧರಿಸಿದ್ದಾರೆ ಎನ್ನುವ ಪೋಸ್ಟೊಂದು ಮೂರು ದಿನಗಳ ಹಿಂದೆ ಜಾಲತಾಣಗಳಲ್ಲಿ ರಾರಾಜಿಸುತ್ತಿತ್ತು. ಫೇಸ್ಬುಕ್, ವಾಟ್ಸಾಪ್’ಗಳಲ್ಲಿ ಇದರದ್ದೇ ಸದ್ದು. “ಇದಪ್ಪ ದೇಶಪ್ರೇಮ ಅಂದ್ರೆ” “ರತನ್ ಟಾಟಾರಂಥ ದೇಶಪ್ರೇಮಿಗೊಂದು ಸಲಾಂ” ಎನ್ನುತ್ತಾ ಕೆಲವರೆಲ್ಲ ಟಾಟಾರನ್ನು ಹೊಗಳಿದ್ದೇ ಹೊಗಳಿದ್ದು. ಅದರಲ್ಲೂ ಒಬ್ಬ ಇನ್ನೊಂದು ಹೆಜ್ಜೆ ಮುಂದೆ ಹೋಗಿ “ಟಾಟಾಜೀ ನಿಮ್ಮ ಹರಿದು ಹೋಗಿರೋ ಚಪ್ಪಲಿಯಿದ್ದರೆ ನನಗೆ ಕೊಡಿ, ದೇಶದ್ರೋಹಿಗಳನ್ನು ಬೆಂಬಲಿಸುವ ತಾಯಿಗಂಡರಿಗೆ ನಾನೇ ನನ್ನ ಕೈಯಾರೆ ಹೊಡೆಯುತ್ತೇನೆ. ನಿಮ್ಮಂತಾ ದೇಶಪ್ರೇಮಿಗಳಿಗೆ ನನ್ನದೊಂದು ಸಲಾಂ” ಎಂದು ಹಾಕಿದ್ದನ್ನು ನೋಡಿ ನನಗೆ ಪಿಚ್ಚೆನಿಸಿತ್ತು. ವಾಸ್ತವದಲ್ಲಿ ರತನ್ ಟಾಟಾ ಜೆ.ಎನ್.ಯು ಘಟನೆಯ ಕುರಿತಾಗಿ ಒಂದಕ್ಷರವನ್ನೂ ಮಾತನಾಡಿರಲಿಲ್ಲ.

ಅಲ್ಲಾರಿ… ಅವರಿಗೇನಾದ್ರೂ ತಲೆಕೆಟ್ಟಿದೆಯಾ ಅಂಥಾ ನಿರ್ಧಾರ ತೆಗೆದುಕೊಳ್ಳಲು? ಯಾರೋ ಒಂದಿಬ್ಬರು ದೇಶದ್ರೋಹದ ಹಾದಿ ಹಿಡಿದ ಮಾತ್ರಕ್ಕೆ ಜೆ.ಎನ್.ಯುನ ಯಾವುದೇ ವಿದ್ಯಾರ್ಥಿಗಳಿಗೂ ಕೆಲಸ ಕೊಡಲ್ಲ ಎನ್ನಲು ಟಾಟಾ ಏನು ನಮ್ಮಂಥಾ ಸಣ್ಣ ಮನಸ್ಸಿನವರಾ? ಹೌದು ಜೆ.ಎನ್.ಯುನಲ್ಲಿ ಹಿಂದೆಯೂ ದೇಶದ್ರೋಹದ ಘಟನೆಗಳು ನಡೆದಿವೆ. ಈಗಲಂತೂ ಅತಿರೇಕಕ್ಕೆ ತಲುಪಿದೆ. ಭಾರತವನ್ನೇ ನಾಶ ಮಾಡುತ್ತೇವೆ ಎನ್ನುವವರನ್ನು, ಹತ್ತಾರು ಸೈನಿಕರನ್ನು ಹುತಾತ್ಮರನ್ನಾಗಿ ಮಾಡಿದ ಅಫ್ಜಲ್ ಗುರುವನ್ನು ಪೂಜಿಸುವವರನ್ನು,ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುವವರನ್ನು ಖಂಡಿತವಾಗಿಯೂ ಸಹಿಸಲು ಸಾಧ್ಯವಿಲ್ಲ. ಬೇಕಾದರೆ ಅಸಹಿಷ್ಣುತೆ ಇದೆ ಎನ್ನಲಿ, ಅಂತವರನ್ನು ಮಾತ್ರ ಒದ್ದು ಬಳಗೆ ಹಾಕಬೇಕು. ಹಾಗೆಂದ ಮಾತ್ರಕ್ಕೆ, ದೇಶದ್ರೋಹಿಗಳಿಗೆ ಟಾಂಗ್ ಕೊಡುವ ಕಾರಣಕ್ಕಾಗಿ ಟಾಟಾರಂಥ ಪ್ರತಿಷ್ಠಿತರನ್ನು ವಿನಾಕಾರಣ ಎಳೆದು ತರುತ್ತಿರುವುದೇಕೆ? “ಭಕ್ತ”ರ ಈ ನಕಲಿ ದೇಶಪ್ರೇಮವನ್ನು ನೋಡಿ ಟಾಟಾಗೆ ಹೇಗನಿಸಬೇಡ ಹೇಳೀ? ಜೆ.ಎನ್.ಯುನಲ್ಲಿ ಕಲಿಯುತ್ತಿರುವ ಇತರ ಪ್ರತಿಭಾವಂತ ದೇಶಪ್ರೇಮಿ ವಿದ್ಯಾರ್ಥಿಗಳಿಗೆ ಹೇಗನಿಸಬೇಡ? ಅಷ್ಟಕ್ಕೂ, ಅಪ್ಪಟ ಸ್ವಾಭಿಮಾನಿಯಾಗಿರುವ ರತನ್ ಟಾಟಾರಿಗೆ, ಅಪ್ಟರ್ ಆಲ್ “ಲೈಕ್ಸ್” ಮೈಂಡೆಡ್ ಜನರ “ಆಹ್,,, ಇವರಪ್ಪ ದೇಶಪ್ರೇಮಿ..” ಎನ್ನುವ ಸರ್ಟಿಫಿಕೇಟ್’ನ ಅವಶ್ಯಕತೆಯಿದೆಯೇ?

ಟಾಟಾ ಕಂಪೆನಿಯಲ್ಲಿ ಜೆ.ಎನ್.ಯುನಲ್ಲಿ ಕಲಿತವರಿಗೆ ಉದ್ಯೋಗ ಕೊಡುವುದಿಲ್ಲ ಎಂಬ ಸುಳ್ಸುದ್ದಿಯನ್ನೇ ಭಯಂಕರ ಮಾಡಿ ಹೊಗಳುವುದಾದರೆ, ಕೇಂದ್ರದ ಅತ್ಯಂತ ಪ್ರಭಾವಿ, ಸ್ವಸಾಮರ್ಥ್ಯದಿಂದಲೇ ಉನ್ನತ ಹುದ್ದೆಗೆ ಬಂದಿರುವ ನಿರ್ಮಲಾ ಸೀತಾರಾಮನ್ ಕೂಡ ಓದಿದ್ದು ಜೆ.ಎನ್.ಯುನಲ್ಲಿಯೇ.. ಅವರನ್ನು ಸಚಿವೆಯನ್ನಾಗಿಸಿದ್ದು ಕೂಡಾ ದೇಶದ್ರೋಹದಂತಾಗುವುದಿಲ್ಲವೇ? ಗಾಂಧಿ ಕುಟುಂಬದ ಮತ್ತೊಬ್ಬ ನಾಯಕಿ ಮೇನಕಾ ಗಾಂಧಿ ಓದಿದ್ದೂ ಜೆ’ಎನ್.ಯುನಲ್ಲಿ. ಅವರನ್ನೂ ಸಚಿವೆಯನ್ನಾಗಿ ಮಾಡಿದ್ದು ದೇಶದ್ರೋಹದಂತಾಗುವುದಿಲ್ಲವೇ? ಒಂದು ವೇಳೆ ಟಾಟಾ ಆ ಥರದ ನಿರ್ಧಾರ ತೆಗೆದುಕೊಳ್ಳುತ್ತಿದ್ದರೂ ಅದೊಂದು ಮೂರ್ಖತನದ ನಿರ್ಧಾರವಾಗಿರುತ್ತಿತ್ತೇ ವಿನಹ ಈ ಥರಾ ಸಂಭ್ರಮಿಸುವಂತಹಾ ವಿಚಾರವಂತೂ ಖಂಡಿತವಾಗಿಯೂ ಅಲ್ಲ.

ನಾನು ಹೇಳುತ್ತಿರುವುದು ಇಷ್ಟೆ ಸಾಮಾಜಿಕ ಜಾಲತಾಣಗಳಲ್ಲಿ ನಾವೇನು ಹಾಕುತ್ತೇವೆ ಎಂಬುದರ ಬಗ್ಗೆ ನಮಗೆ ಸ್ಪಷ್ಟ ಅರಿವಿರಬೇಕು. ಯಾರೋ ಒಬ್ಬ ಹಾಕಿದ ಎಂದ ಮಾತ್ರಕ್ಕೆ ನಾವದನ್ನು ಕಣ್ಣು ಮುಚ್ಚಿ ಕ್ಯಾನ್ಸರಿನಂತೆ ಹಬ್ಬಿಬಿಡವುದಲ್ಲ. ಕೇಜ್ರಿವಾಲನಂಥ ಎಡಬಿಡಂಗಿಗಳ ಕುರಿತು, ರಾಹುಲ್ ಗಾಂಧಿಯಂತಹ ಎಳಸುಗಳ ಕುರಿತು ಸುಳ್ಸುದ್ದಿಗಳನ್ನು(Troll or fake news) ಹಬ್ಬಿಸುವುದು ಬಹಳ ವಿನೋದ ಎನಿಸುತ್ತದೆಯಾದರೂ ದೇಶದ ಸಾರ್ವಭೌಮತ್ವದಂತಹ ಗಂಭೀರ ವಿಷಯಗಳ ಕುರಿತಾಗಿ ಬರೆಯುವಾಗ ಪರಾಮರ್ಶಿಸಿದೇ ಮುಂದುವರಿಯುವುದು ಆಭಾಸವೆನಿಸುತ್ತದೆ. ಕೆಲವೊಮ್ಮೆ ಇದು ಅತಿರೇಕವೆನಿಸಿ ಮೋದಿ ವಿರೋಧಿಗಳ, ಸೋ ಕಾಲ್ಡ್ ಪ್ರಗತಿಪರರ ಅಪಹಾಸ್ಯಕೀಡಾಗುತ್ತಿವೆ. ವಿರೋಧಿಗಳ ಕೈಗೆ ಕೋಲು ಕೊಟ್ಟು ಪೆಟ್ಟು ತಿನ್ನುವ ದರ್ದು ನಮಗೇಕೆ? ಅವರುಗಳಂತೂ ಈಗಾಗಲೇ ನಂಗಾ ಆಗಿಬಿಟ್ಟಿದ್ದಾರೆ,ನಾವುಗಳೂ ಅವರ ಮಟ್ಟಕ್ಕಿಳಿಯುತ್ತಿರುವುದೇಕೆ? ಕೆಲ ಸಮಯದ ಹಿಂದೆ ವಿದೇಶದಲ್ಲಿ ಮೋದಿ ಭಾರತದ ಧ್ವಜಕ್ಕೆ ಅಪಮಾನಿಸಿದ್ದಾರೆ ಎಮ್ಬ ಸುಳ್ಳು ವರದಿಯನ್ನು ಪ್ರಚಾರ ಮಾಡಿ ಮಾಧಮಗಳು ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಂಡಿದ್ದವು. ತಮ್ಮ ಟಿ.ಆರ್.ಪಿ ಏರಿಸಿಕೊಳ್ಳುವುದಕ್ಕಾಗಿ ವಾಸ್ತವತೆಯನ್ನರಿಯದೆ ಅವುಗಳು ಸುದ್ದಿಯನ್ನು ಪರಾಮರ್ಶಿಸದೇ ಪ್ರಸಾರ ಮಾಡಿದ್ದವು. ಅವುಗಳಂತೆಯೇ ನಾವುಗಳೂ ಸಹ, ನಮ್ಮ ಅನುಕೂಲಕ್ಕೆ ತಕ್ಕಂತೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರೆ ನಮಗೂ ಪ್ರೆಸ್ಟಿಟ್ಯೂಟ್’ಗಳಿಗಿರುವ ವ್ಯತ್ಯಾಸವೇನು? ಫೇಸ್ಬುಕ್ ಕೂಡಾ ಒಂದು ಮಾಧ್ಯಮವೇ ಆಗಿರುವುದರಿಂದ ನಮ್ಮನ್ನೂ ಕೂಡಾ ಪ್ರೆಸ್ಟಿಟ್ಯೂಟ್’ಗಳೆಂದು ಕರೆಯಬಹುದಲ್ಲವೇ?

ಇತಿಹಾಸವನ್ನು ಸರಿ ತಿಳಿಯದೆ, ಪ್ರಚಾರದ ಆಸೆಗಾಗಿ, ಎಂದೋ ಸತ್ತ ವೀರನನ್ನು ಇನ್ನೆಂದೋ ಸಾಯಿಸುವುದು, ಯಾವುದೋ ಹುತಾತ್ಮನ ಭಾವಚಿತ್ರಕ್ಕೆ ಬದಲಾಗಿ ಮತ್ತೊಬ್ಬ ವೀರನ ಭಾವಚಿತ್ರ ಹಾಕುವುದು ಅವರ ನಿಜವಾದ ತ್ಯಾಗ,ಬಲಿದಾನಕ್ಕೆ ಮಾಡುವ ಅಪಚಾರವಾಗುತ್ತದೆ. ಸದ್ಯದ ಮಟ್ಟಿಗೆ ಮೋದಿ ನಮ್ಮ ದೇಶಕ್ಕೆ ಅನಿವಾರ್ಯ., ಒಂದಲ್ಲಾ ಒಂದು ವಿಷಯ ಹಿಡಿದುಕೊಂಡು ತಗಾದೆ ತೆಗೆಯುವುದು ರಾಹುಲನಂಥ ವಿರೋಧಿಗಳಿಗೆ ಅನಿವಾರ್ಯ. ಆದರೂ ನಾವು ದೇಶದ್ರೋಹಿಗಳನ್ನು, ಮೋದಿ ವಿರೋಧಿಗಳನ್ನು ವಿರೋಧಿಸುವ ಭರದಲ್ಲಿ ಅಸಂಬದ್ಧ ಪ್ರಲಾಪಗಳನ್ನು ಮಾಡಿದರೆ ಅದು ಯಾರಿಗೂ ಶೋಭೆ ತರದು..

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!