ಕೈಯಲ್ಲಿ ಫೋನು ಇದ್ದರೆ ಸಾಕು, ಯಾವ ಊರಿನಲ್ಲಿ ಏನು ಬೇಕಾದರೂ ವ್ಯವಸ್ಥೆ ಮಾಡಿಕೊಳ್ಳಬಲ್ಲೆ ಅನ್ನುವ ಅಹಂಕಾರ ನನ್ನ ತಲೆಗೆ ಏರಿದ ಕಾಲವೊಂದಿತ್ತು. ಯಾಂಕದ್ರೆ ಅನೇಕ ಊರುಗಳಲ್ಲಿ ನನಗೆ ಸ್ನೇಹಿತರು ಇದ್ದರು. ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಅಂತಹ ಸಂಪರ್ಕಕಗಳು ಕಡಿಮೆಯಾಗಿ ಹೋಗಿವೆ. ಆದರೂ ಈ ಕಾಶಿಯಲ್ಲಿ ಒಂದು ಪರಿಚಯದ ಕೊಂಡಿ ಹುಡುಕಿಕೊಳ್ಳೋದು ದೊಡ್ಡ ಕಷ್ಟವೇನಿರಲಿಲ್ಲ. ಫೋನು ತೆಗೆದು ಶೃಂಗೇರಿಯ ಪಾಠ ಶಾಲೆಯಲ್ಲಿ ಋಗ್ವೇದ ಪಾಠ ಮಾಡುವ ರಮೇಶ ಭಟ್ಟರಿಗೆ ಕರೆ ಮಾಡಿ “ಈ ಕಾಶಿಯಲ್ಲಿ ನಿಮ್ಮ ಮಠದ ಬ್ರಾಂಚ್ ಏನಾದ್ರೂ ಉಂಟಾ ಮಾರ್ರೇ..” ಅಂತ ಕೇಳಿದ್ದಕ್ಕೆ ಅವರು “ಒಂದಲ್ಲ, ಎರಡೆರಡು ಇವೆ, ಇರಿ .. ಅಲ್ಲಿನ ಮೇನೇಜರ್’ಗೆ ಕರೆ ಮಾಡಿ ವ್ಯವಸ್ಥೆ ಮಾಡ್ತೀನಿ” ಅಂದು ವಿಳಾಸ ನೀಡಿದರು. ಮೆಹಮೂರ್ ಗಂಜ್ ನಲ್ಲಿರುವ ಶಂಕರ ಮಠ ಅಂದ ಕೂಡಲೇ ರಿಕ್ಷಾದವನು ಕರೆದುಕೊಂಡು ಹೋದ.
ಗೇಟ್ ನ ಬಳಿಯೇ ಅಲ್ಲಿಯ ಮ್ಯಾನೇಜರ್ ನನ್ನ ಸ್ವಾಗತಕ್ಕೆ ನಿಂತಿದ್ರು. ಅವರ ಹೆಸರು ”ಚಲ್ಲಾ ಸುಬ್ರಮ್ಹಣ್ಯ ಶಾಸ್ತ್ರೀ”. ನನಗೆ ಅವರ ”ಚಲ್ಲಾ” ಅನ್ನೋ ಸರ್ ನೇಮ್ ನಿಂದಾಗಿಯೇ ಅವರು ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯವರು ಅನ್ನೋದು ಗೊತ್ತಾಗಿತ್ತು. ಇವರ ಅಜ್ಜನ ಕಾಲದಿಂದಲೇ ಕಾಶಿಯಲ್ಲೇ ಸ್ಥಿರವಾಗಿದ್ದಾರಂತೆ. “ನಮ್ಮ ತಂದೆಯ ಹೆಸರನ್ನು ಕಾಶಿಯ ಒಂದು ರಸ್ತೆಗೆ ನಾಮಕರಣ ಮಾಡಿದ್ದಾರೆ, ಅವರು ಅಷ್ಟು ದೊಡ್ಡ ವಿದ್ವಾಂಸರಾಗಿದ್ದರು” ಅಂತ ಅವರ ತಂದೆಯ ಕಾಲದ ಕಾಶಿಯ ಬಗ್ಗೆ ಹೇಳತೊಡಗಿದರು. ನಾನು ಗೋದಾವರೀ ಸೀಮೆಯ ತೆಲುಗಿನಲ್ಲಿ ಮಾತಾಡಿದ್ದಕ್ಕೆ ಅವರು ತುಂಬಾ ಖುಶಿಯಾಗಿದ್ದಂತೆ ತೋರುತ್ತಿತ್ತು. ಅವರ ಸೀಮೆಯಲ್ಲಿ ಮಾಡುವ ಗುತ್ತೊಂಕಾಯಿ, ಪೆಸರಟ್ಟು, ಗೋಂಗೂರ ಮುಂತಾದ ಖಾದ್ಯಗಳನ್ನು ಹೊಗಳಿದ ಮೇಲಂತೂ ಅವರ ಮುಖದಲ್ಲಿ ಹೆಮ್ಮೆ ತುಂಬಿ ತುಳುಕತೊಡಗಿತ್ತು. ಸ್ವಲ್ಪ ಹರಟೆ ಮುಗಿದಕೂಡಲೇ “ಚಿಕ್ಕ ಕೋಣೆ ಇದ್ದರೆ ಸಾಕು ನಂಗೆ” ಅಂತ ಅವಸರಿಸಿದೆ. ಚಿಕ್ಕದು ಯಾಕೆ, ಶೃಂಗೇರಿಯಿಂದ ನಮ್ಮ ಅಡ್ಮಿನಿಸ್ಟ್ರೇಟರ್ ಬಂದಾಗ ಉಳೀಲಿಕ್ಕೆ ಕಟ್ಟಿಸಿರೂ ಸ್ಪೆಷಲ್ ಎಸಿ ರೂಮ್ ಇದೆ. ಅದನ್ನ ಯಾರಿಗೂ ಕೊಡೋದಿಲ್ಲ. ನಿಮಗೋಸ್ಕರ ಅದನ್ನೇ ಕೊಡ್ತೀನಿ, ಎಷ್ಟು ದಿನ ಬೇಕಾದ್ರೂ ಆರಾಮವಾಗಿ ಇರಿ ಅಂದ್ರು. “ನನಗ್ಯಾಕಪ್ಪಾ, ಇಷ್ಟೊಂದು ವಿಶೇಷ ಮರ್ಯಾದೆ?” ಅಂತ ನನಗೆ ಸೋಜಿಗವಾಗತೊಡಗಿತು. ಇದು ಬರೀ ತೆಲುಗು ಮಾತಾಡಿದ್ದಕ್ಕೆ ಸಿಗುತ್ತಿರುವ ಮರ್ಯಾದೆ ಅಲ್ಲ. ಗೇಟಿನ ಬಳಿ ಬಂದು ಸ್ವಾಗತಿಸುವಷ್ಟೇನು ದೊಡ್ಡ ವ್ಯಕ್ತಿಯೂ ನಾನಲ್ಲ. ಇದೆಲ್ಲದರ ಹಿಂದೆ ಬೇರೇನೋ ಒಳ ರಹಸ್ಯ ಇದೆ” ಅಂತ ಅನ್ನಿಸಿದರೂ ಹೆಚ್ಚು ಮಾತಾಡದೇ ಕೋಣೆ ಹೊಕ್ಕೆ.
ಮಂಚದ ಮೇಲೆ ಬ್ಯಾಗ್ ಎಸೆದು ನನ್ನ ಸಾಯಂಕಾಲದ ಕ್ರಿಯೆಯ ಅಭ್ಯಾಸಕ್ಕೆ ನೆಲದ ಮೇಲೆ ಕುಳಿತೆ. ಮೊದಲು ಪತಂಗಾಸನ ಮತ್ತು ಶಿಶುಪಾಲದಿಂದ ಬೆನ್ನುಮೂಳೆಯ ಮೂಲವನ್ನು ಉದ್ದೀಪನಗೊಳಿಸಿ, ಇಳಾ, ಪಿಂಗಳಾ, ಮತ್ತು ಸುಷುಮ್ನಾ ನಾಡಿಗಳನ್ನು ಪ್ರತ್ಯೇಕಿಸಿ ಸ್ಥಿರಗೊಳಿಸುವ ನಾಡೀ ವಿಭಜನ ಕ್ರಿಯೆ ಮುಗಿಸುವಷ್ಟರಲ್ಲಿ ಅರ್ಧ ಘಂಟೆ ಕಳೆದಿತ್ತು. ದೇಹಕ್ಕಾದ ಆಯಾಸವನ್ನೆಲ್ಲ ತೆಗೆದುಹಾಕಲಿಕ್ಕೆ ಹದಿನೈದು ನಿಮಿಷ ಸುಖಕ್ರಿಯೆ ಮಾಡಿ ಮುಗಿಸಿದೆ. ದೇಹ ಮೊದಲಿಗಿಂತ ಹತ್ತು ಕೇಜಿಯಷ್ಟು ಹಗುರಾದಂತೆ ಅನ್ನಿಸಿ ಹೂವಿನಂತೆ ಅನುಭವಕ್ಕೆ ಬರತೊಡಗಿತು. ಕಳೆದ ಒಂದು ವರ್ಷದಿಂದ ಮನೆಯಲ್ಲಿ ಇದನ್ನೆಲ್ಲ ಮಾಡಲಿಕ್ಕೆ ಆಗಿರಲಿಲ್ಲ. ರೂಢಿ ಬಿಟ್ಟುಹೋಗಿದ್ದರೂ ಯಾವುದು ಆದ ಮೇಲೆ ಯಾವುದು ಅನ್ನೋದು ನೆನಪಿತ್ತು. ಆಮೇಲೆ ಎಡಗಾಲಿನ ಹಿಮ್ಮಡಿಯಿಂದ ಬೆನ್ನುಮೂಳೆಯ ಬುಡದಲ್ಲಿರುವ ಮೂಲಾಧಾರಕ್ಕೆ ಒತ್ತಡ ಉಂಟಾಗುವಂತೆ ಕಾಲನ್ನು ಒಳಗೆಳೆದುಕೊಂಡು ಕುಳಿತು ಪ್ರಣವೋಚಾರಣೆ ಪ್ರಾರಂಭಿಸಿದೆ. ನಾಭಿಯಿಂದ “ಅ” ಕಾರ, ಹೃದಯದಿಂದ “ಉ”ಕಾರ, ಮೂರ್ಧನ್ಯ “ಮ್” ಕಾರ ಗಳನ್ನು ಎರಡೆರಡು ಮಾತ್ರಾ ಕಾಲಗಳಷ್ಟು ಲಂಬಿಸಿ ಆಯಾ ಅಕ್ಷರೋತ್ಪತ್ತಿಯ ಸ್ಥಾನಗಳಲ್ಲಿ ಕಂಪನ ಉಂಟಾಗುವಂತೆ ಹೇಳತೊಡಗಿದಕೂಡಲೇ ಶರೀದಲ್ಲೆಲ್ಲ ನಡುಕ ಕಾಣಿಸಿಕೊಳ್ಳತೊಡಗಿತ್ತು. ಆರು ಪ್ರಣವಗಳನ್ನು ಮುಗಿಸಿ ಏಳನೇಯ ಬಾರಿ ಪ್ರಣವ ಹೇಳುವಾಗ ಒಮ್ಮೆಲೆ ಬೆನ್ನುಹುರಿಯಲ್ಲಿ ಸಾವಿರ ವ್ಯಾಟ್ ಗಳ ವಿದ್ಯುತ್ ಪ್ರವಹಿಸಿದಂತಾಯ್ತು. ಏನು ಆಗುತ್ತಿದೆ ಅಂತ ನನ್ನ ಗಮನಕ್ಕೆ ಬರುವುದರೊಳಗಾಗಿ ನಾನು ಕುಳಿತಂತೆಯೇ ಮುಕ್ಕಾಲು ಅಡಿಯಷ್ಟು ಎತ್ತರಕ್ಕೆ ಹಾರಿ ನೆಲಕ್ಕೆ ಬಿದ್ದಿದ್ದೆ. ಹಿಂಭಾಗಕ್ಕೆ ವಾಲಿ ಬಿದ್ದದ್ದರಿಂದ ತಲೆಯ ಹಿಂಭಾಗ ಫ್ಲೋರ್ ಗೆ ಘಟ್ಟಿಸಿತ್ತು. ಕುಳಿತ ಆಸನ ಕೆಟ್ಟು ಕಾಲುಗಳು ಚೆದುರಿ ಹೋಗಿದ್ದವು. ಕಣ್ಣು ಬಿಟ್ಟು ಗಮನಿಸಿದರೆ ಶರೀರವಿಡೀ ಥರ ಥರ ಕಂಪಿಸುತ್ತಾ ಸಂಪೂರ್ಣವಾಗಿ ಬೆವೆತು ಹೋಗಿತ್ತು. ಜೋರಾಗಿ ಹೊಡೆದುಕೊಳ್ಳುತ್ತಿದ್ದ ಉಸಿರನ್ನು ಹತೋಟಿಗೆ ತಂದುಕೊಂದು ಕೆಲ ಕ್ಷಣಗಳ ಕಾಲ ಕಣ್ಣು ಮುಚ್ಚಿ ಸುಧಾರಿಸಿಕೊಳ್ಳುವಾಗ ತಲೆಯ ಹಿಂಭಾಗಕ್ಕೆ ಬಿದ್ದ ಪೆಟ್ಟಿನ ನೋವು ಅನುಭವಕ್ಕೆ ಬರತೊಡಗಿತ್ತು. ಹಾಗೆಯೇ ಮಲಗಿದಂತೆಯೇ ಕಣ್ಣು ಬಿಟ್ಟು ಛಾವಣಿಯನ್ನು ದಿಟ್ಟಿಸುತ್ತ ಇಂಥಾ ಅಪಘಾತ ಯಾಕಾಯ್ತು, ಏನು ವ್ಯತ್ಯಾಸವಾಗಿರಬಹುದು ಅಂತ ತಿಳಿಯುವ ಪ್ರಯತ್ನ ಮಾಡತೊಡಗಿದೆ. ಇದನ್ನೆಲ್ಲ ಖಾಲೀ ಹೊಟ್ಟೆಯಲ್ಲಿ ಮಾಡಬೇಕು. ಮುಂಜಾನೆ ಬೆಂಗಳೂರಿನಿಂದ ಹೊರಟಾಗಿನಿಂದ ಒಂದು ಚಹಾದ ಹೊರತಾಗಿ ಹೊಟ್ಟೆಗೆ ಏನೂ ತುಂಬಿರಲಿಲ್ಲ. ಎಲ್ಲಾ ಸರಿಯಾಗೇ ಇದೆಯಲ್ಲ? ಗಂಗೆಯಲ್ಲಿ ಸ್ನಾನ ಮಾಡಿದ್ದರಿಂದ ವಿಶೇಷವೇನಾದರೂ ಆಯ್ತಾ..? ಅಥವಾ ಈ ಕಾಶಿಯ ಎನರ್ಜೀ ವಲಯದಿಂದಾಗಿ ನನ್ನೊಳಗಿನ ಎನರ್ಜಿ ಹೀಗೆ ಹಿಡಿತಕ್ಕೆ ಸಿಗದೇ ಸ್ಫೋಟಗೊಂಡಿತಾ? ಅಂತೆಲ್ಲ… ಎಲ್ಲ ರೀತಿಯ ಸಾಧ್ಯತೆಗಳನ್ನು ವಿಮರ್ಶಿಸಿಕೊಂಡಮೇಲೆ ಗೊತ್ತಾಯ್ತು. ಒಂದು ವರ್ಷದಿಂದ ನಿಲ್ಲಿಸಿದ್ದ ಕ್ರಿಯೆಯನ್ನು ಈಗ ಒಮ್ಮೆಲೇ ತೀವ್ರಗತಿಯಲ್ಲಿ ಮತ್ತೆ ಶುರು ಮಾಡಿದ್ದಕ್ಕೆ ಹೀಗಾಗಿರಬಹುದು ಅನ್ನೋ ಸಮಾಧಾನಕರ ಅಭಿಪ್ರಾಯ ಮೂಡತೊಡಗಿತು.
2014 ಫೆಬ್ರುವರಿಯಲ್ಲಿ ವಿಜಯನಗರದಲ್ಲಿರೋ ಸಾಧಕಿಯೊಬ್ಬರ ಬಳಿ ಇದನ್ನು ಕಲಿತು ಮೊದಲ ಬಾರಿ ಅಭ್ಯಾಸ ಮಾಡುವಾಗಲಂತೂ ಮೈಯಲ್ಲೆಲ್ಲಾ ನಡುಕ ಹುಟ್ಟಿ ಥರಗುಟ್ಟಿ ಹೋಗಿದ್ದೆ. ಆಗ ಆಕೆ ”ಸ್ವಲ್ಪದಿನ ಹೀಗಾಗುತ್ತೆ, ಆಮೇಲೆ ಸರಿ ಹೋಗುತ್ತೆ’ ಅಂತ ಹೇಳಿ ಕೆಲ ಜಾಗ್ರತೆಗಳನ್ನು ವಹಿಸಿಲು ಹೇಳಿದ್ರು. ಆ ಜಾಗ್ರತೆಗಳನ್ನು ಮರೆತಿದ್ದೆ. ಮತ್ತು ಬಹುತೇಕ ಒಂದು ವರ್ಷದ ಕಾಲ ಯದ್ವಾ ತದ್ವಾ ಜೀವನ ನಡೆಸಿ, ಮಾನಸಿಕವಾಗಿ ನರಳಾಡಿ, ದೇಹವನ್ನು ಕೆಡಿಸಿಕೊಂಡಿದ್ದೆ. ಆ ಗ್ಯಾಪ್ ನ ನಂತರ ಈಗ ಮತ್ತೆ ಕ್ರಿಯೆ ಶುರು ಮಾಡಿರೋದ್ರಿಂದ ಹೀಗಾಗಿದೆ ಅನ್ನೋದು ಅರ್ಥವಾದಮೇಲೆ ಮನಸ್ಸು ಹಗುರವಾಯಿತು. ಅಷ್ಟರಲ್ಲೇ ಚಲ್ಲಾ ಶಾಸ್ತ್ರಿಗಳು ಬಾಗಿಲು ತಳ್ಳಿಕೊಂಡು ಒಳಗೆ ಬಂದು ” ಅಯ್ಯೋ ಇದೇನು.. ಹೀಗೆ ನೆಲದ ಮೇಲೆ ಮಲಗಿದೀರಿ..? ಏಸಿಯನ್ನೂ ಹಾಕ್ಕೊಂಡಿಲ್ಲ. ಮೈಯೆಲ್ಲಾ ಬೆವೆತುಹೋಗಿದೆ ನೋಡಿ ” ಅನ್ನುತ್ತಾ ವಿಪರೀತ ಕಾಳಜಿಯಿಂದ ಕಿರಿಕಿರಿ ಉಂಟುಮಾಡತೊಡಗಿದ್ರು. ಏನಾಯ್ತು ಅಂತ ಅವರಿಗೆ ಹೇಳಿದರೆ ಅದು ಅವರಿಗೆ ಅರ್ಥವಾಗೋ ಸಂಗತಿಯಲ್ಲ. ಅವರ ಹಿಂದೆಯೇ ಮಠದಲ್ಲಿ ಅಡಿಗೆ ಮಾಡುವವರು, ಉಳಿದ ಕನ್ನಡಿಗರಾದ ಸ್ಟಾಫ್ ನವರೆಲ್ಲ ಬಂದು ನಿಂತಿದ್ರು. ಅವರ ಊರು-ಕೇರಿಗಳ ಲೋಕಾಭಿರಾಮವೆಲ್ಲ ಮುಗಿದಮೇಲೆ ”ರಾತ್ರಿ ಊಟಕ್ಕೆ ಇವತ್ತು ಏನಾದ್ರೂ ವಿಶೇಷ ಮಾಡಪ್ಪ.. ಅಪರೂಪಕ್ಕೆ ಬೆಂಗಳೂರಿಂದ ಘನಪಾಠಿಗಳು ಬಂದಿದಾರೆ” ಅಂತ ಅವರು ಅಡಿಗೆಯವರಿಗೆ ಆದೇಶಿಸಿದರು. ಆ ಮಾತಿನಿಂದಲೇ ಇವರೆಲ್ಲ ನನಗೆ ಇಷ್ಟ್ಯಾಕೆ ಉಪಚಾರ ಮಾಡ್ತಾ ಇದ್ದಾರೆ ಅನ್ನೋದರ ಕಾರಣ ಗೊತ್ತಾಯ್ತು. ಗೇಟಿಗೆ ಬಂದು ಸ್ವಾಗತಿಸಿದ ಕಾರಣವೂ ಗೊತ್ತಾಯ್ತು. ರಮೇಶ ಭಟ್ರಿಗೆ ಫೋನು ಮಾಡಿದಾಗಲೇ ಇಲ್ಲಿಯವರಿಗೆ ನನ್ನ ಪರಿಚಯ ಹೆಚ್ಚು ಹೇಳ್ಬೇಡಿ ಅಂತ ಹೇಳಬೇಕಿತ್ತು.
ನನ್ನ ಹೆಸರು ಹೇಳುವ ಅಗತ್ಯವಿಲ್ಲ. “ಬೆಣ್ಣೆಗುಡ್ಡೆ ಶಂಕರ ಭಟ್ಟರ ಅಂತೇವಾಸಿ (ವಿದ್ಯಾರ್ಥಿ), ಋಗ್ವೇದ ಘನಪಾಠಿ” ಅನ್ನೋ ಎರಡು ಸಾಲಿನ ಪರಿಚಯ ಹೇಳಿದ್ರೆ ಸಾಕು. ಕರ್ನಾಟಕ, ಆಂಧ್ರ, ತಮಿಳುನಾಡು ರಾಜ್ಯಗಳ ಎಲ್ಲಾ ಬ್ರಾಹ್ಮಣ ಮಠಗಳಲ್ಲೂ ವಿಪರೀತ ಅನ್ನಿಸುವಷ್ಟು ಮರ್ಯಾದೆ ಸಿಗ್ತದೆ. ಅದರಲ್ಲಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಅಂತೆಲ್ಲ ಭೇದವೇನಿಲ್ಲ. ಆ ಎರಡು ಸಾಲು ಕೇಳಿದ ಕೂಡಲೇ “ಘನಪಾಠಿ” ಅಂದ್ರೆ ಏನು ಅಂತ ಗೊತ್ತಿರುವವರು ಕಣ್ಣರಳಿಸಿ ಎರಡು ಹೆಜ್ಜೆ ಹಿಂದೆ ಸರಿದು ನಿಂತು ಧ್ವನಿ ತಗ್ಗಿಸಿ ಮಾತಾಡ್ತಾರೆ. ಅದು ನನಗೆ ಸಿಗುವ ಮರ್ಯಾದೆ ಅಲ್ಲ. ನಮ್ಮ ಉಪಾಧ್ಯಾಯರ ಹೆಸರು ಮತ್ತು ಅದಕ್ಕಿಂತ ಹೆಚ್ಚಾಗಿ ಅವರು ಕಲಿಸಿದ ವೇದಕ್ಕೆ. ನಾನು ಆ ಐಡೆಂಟಿಟಿಯ ಭಾರವನ್ನು ಎಲ್ಲಾ ಕಡೆ ಹೊತ್ಕೊಂಡು ಓಡಾಡೋದಿಲ್ಲ, ಮತ್ತು ಮಠಗಳಿಂದ ಸಾಧ್ಯವಾದಷ್ಟು ದೂರವೇ ಇರ್ತೀನಿ. ಅಷ್ಟೇ ಅಲ್ಲದೇ ಹೆಸರಿನ ಜೊತೆಗೆ ಸರ್ ನೇಮ್ ಹೇಳಿದ ಕೂಡಲೇ ಜಾತಿ, ಉಪಜಾತಿ, ಪ್ರಾಂತೀಯತೆ ಎಲ್ಲಾ ಬಟಾಬಯಲಾಗಿ ಇಲ್ಲ-ಸಲ್ಲದ ವರಸೆಗಳು, ಅನಾವಶ್ಯಕ ಮಾತುಕತೆಗಳು, ಬಾದರಾಯಣ ಸಂಬಂಧಗಳು ಶುರುವಾಗಿ ನನಗೆ uncomfortable ಅನ್ನಿಸ್ತದೆ ಅನ್ನೋ ಕಾರಣಕ್ಕೆ ನಾನು ನನ್ನ ”ದೇಶಪಾಂಡೇ” ಅನ್ನೋ ಸರ್ ನೇಮ್ ಅನ್ನು ಕೂಡ ಎಲ್ಲೂ ಹೇಳಿಕೊಳ್ತಿರಲಿಲ್ಲ, ಮತ್ತು ಬರೆಯುತ್ತಲೂ ಇರಲಿಲ್ಲ. ಆದರೆ ಇಲ್ಲದ ಸಂಗತಿಯನ್ನು ”ಇದೆ” ಅಂತ ನಂಬಿಸೋದು ಎಷ್ಟು ಕಷ್ಟವೋ ಇರುವ ಯೋಗ್ಯತೆ ಮತ್ತು ಹೆಸರನ್ನು ಮುಚ್ಚಿಡಲಿಕ್ಕೂ ಅಷ್ಟೇ ಸಮಯ, ಎನರ್ಜೀ ವ್ಯರ್ಥವಾಗ್ತದೆ ಅನ್ನೋದು ಅನುಭವಕ್ಕೆ ಬಂದಮೇಲೆ ಈ ಮುಚ್ಚಿಡುವ ಪ್ರಯತ್ನಗಳನ್ನೆಲ್ಲ ಬಿಟ್ಟುಹಾಕಿದ್ದೇನೆ. ಯಾರು ಏನು ಮಾತಾಡಿದರೂ ನನಗೆ ಅದು ತಾಕದಂತೆ ನನ್ನನ್ನು ನಾನು ಬದಲಾಯಿಸಿಕೊಳ್ಳೋದೇ ಅದಕ್ಕಿಂತ ವಾಸಿ ಅಂದುಕೊಂಡು ಸುಮ್ಮನಾಗಿದ್ದೇನೆ. ರಮೇಶ ಭಟ್ಟರು ಇಲ್ಲಿಯವರಿಗೆ ನನ್ನ ಪರಿಚಯ ಹೇಳುವಾಗ ಏನೇನು ಹೇಳಿರಬಹುದು ಅಂತ ಊಹಿಸಿಕೊಂಡ ಕೂಡಲೇ ಈ ಅತೀ ಮರ್ಯಾದೆಯ ಕಾರಣ ಅರ್ಥವಾಗಿ ನಗು ಮೂಡಿತು.
ಆದಿಗುರು ನಾರಾಯಣನಿಂದ ಅನೂಚಾನವಾಗಿ, ಅವಿಚ್ಛಿನ್ನವಾಗಿ ಬಂದ ಜ್ಞಾನ ಪರಂಪರೆಯ ಮೂಲಕ ಸಂಘಟಿತರೂಪದಲ್ಲಿ ಪಾರಮಾರ್ಥಿಕ ನಿಃಶ್ರೇಯವನ್ನು ಬೋಧಿಸಲಿಕ್ಕೆ ಈ ತ್ರಿದಂಡೀ ಮಠಗಳ ವ್ಯವಸ್ಥೆ ಹುಟ್ಟಿಕೊಂಡಿದ್ದರೂ, ಅವುಗಳು ಜಾತಿಗಳ ಅಹಂಕಾರ ಬೆಳೆಸುವ ಹಾಗೂ ಸಮಾಜ ಸೇವೆ ಮಾಡುವ ಸಂಸ್ಥೆಗಳಾಗಿ ಮಾತ್ರ ಬದಲಾದದ್ದು ಶೊಕಾಂತಿಕ. ಜ್ಞಾನ ಪರಂಪರೆಯ ಗಂಧಗಾಳಿ ಗೊತ್ತಿಲ್ಲದ ಟ್ರಸ್ಟಿಗಳು, ಆಡಳಿತಗಾರರು, ಜಾತಿಯ ಹುಸಿ ಅಭಿಮಾನದ ಹೊರತು ಮತ್ತೇನೂ ಗೊತ್ತಿಲ್ಲದ ಭಕ್ತರು, ಕಾಡಿ ಪೀಡಿಸುವ ಅಡಿಗೆಯವರು ಮುಂತಾದವರ ಕೈಯಲ್ಲಿ ಸಿಕ್ಕು ಹೈರಾಣಾಗಿ ಅಸಹಾಯಕರಾಗಿ ಕೈಚೆಲ್ಲಿರುವ ಅನೇಕ ಜನ ಪೀಠಾಧಿಪತಿಗಳನ್ನು ಹತ್ತಿರದಿಂದ ನೋಡಿ ನಿಟ್ಟುಸಿರು ಬಿಟ್ಟಿದ್ದೇನೆ. ನನ್ನ ಉಪಾಧ್ಯಾಯರು ಕೂಡ ಮಠಗಳಲ್ಲಿ ಎಂದೂ ಕಾಲಿಡುವುದಿಲ್ಲ ಅಂತ ನಿರ್ಧಾರ ಮಾಡಿ ಬದುಕಿದವರು. ಹಾಗಾಗಿ ನನಗೆ ವಿದ್ಯಾರ್ಥಿದೆಸೆಯಲ್ಲಿಯೂ ಮಠದ ಅನ್ನವನ್ನು ತಿನ್ನುವ ಸಂದರ್ಭ ಒದಗಿರಲಿಲ್ಲ.
ನನ್ನ ”ಘನಾಂತ” ಮುಗಿದಮೇಲೆ ಕೆಲ ಮಠಗಳ ಸ್ವಾಮಿಗಳು ”ನಮ್ಮ ಮಠದಲ್ಲಿ ಅಧ್ಯಾಪಕನಾಗಿ ಬಂದುಬಿಡು, ನಿನ್ನಂಥವರು ನಮ್ಮ ಮಠದಲ್ಲಿ ಇರಬೇಕು” ಅಂದು ಸಂಬಳ-ಗಿಂಬಳ ಉಚಿತ ಆವಾಸ ಮುಂತಾದ ಆಮಿಷಗಳನ್ನಿಟ್ಟು ಪರಿಚಯಸ್ಥರಿಂದ ಹೇಳಿಸಿ ಒತ್ತಡ ಹಾಕಿದರೂ ನಯವಾಗಿ ತಿರಸ್ಕರಿಸಿ ನನ್ನದೇ ಆದ ರೀತಿಯಲ್ಲಿ ನನ್ನ ಅನ್ನವನ್ನು ಕಂಡುಕೊಂಡಿದ್ದೇನೆ. ಮಠಗಳು, ಮಠದ ರಾಜಕೀಯ ಮತ್ತು ಮಠಗಳ ಅನ್ನ ಈ ಮೂರರಿಂದ ಉದ್ದೇಶಪೂರ್ವಕವಾಗಿ ದೂರ ಉಳಿದಿದ್ದೇನೆ. ಅದಕ್ಕೆ ನನ್ನ ವೈಯಕ್ತಿಕ ಜೀವನದ ಸಂದರ್ಭಗಳೂ ಕಾರಣ. ಆದರೆ ಇವತ್ತು ಇಲ್ಲಿ ಹಿಂದು ಮುಂದು ಆಲೋಚಿಸದೇ ಮಠಕ್ಕೆ ಬಂದಿಳಿದಿದ್ದು ದುಡುಕಿದಂತಾಯ್ತು ಅಂದುಕೊಂಡೆ. ಬಿಸಿರಕ್ತದ ಹುಂಬತನದ ದಿನಗಳಲ್ಲಿ ನಾನು ಎಲ್ಲರ ಜೊತೆಗೂ ಎಲ್ಲ ವಿಷಯಗಳಲ್ಲಿಯೂ ವಾದಕ್ಕಿಳಿಯುತ್ತಿದ್ದೆ. ಆಗ ಒಬ್ಬ ವೃದ್ಧ ಪೀಠಾಧಿಪತಿಗಳ ಸ್ನೇಹವಾಗಿತ್ತು. ಏಕಾಂತದಲ್ಲಿ ಅವರ ಜೊತೆ ವಾದಕ್ಕಿಳಿದು ”ನೀವು ಮಠಾಧಿಪತಿಗಳೆಲ್ಲ ಮಾಡಬೇಕಾದ್ದನ್ನು ಬಿಟ್ಟು ಏನೇನೋ ಮಾಡ್ತಿದ್ದೀರಿ. ಆಸ್ಪತ್ರೆ ಕಟ್ಟಿಸೋದು, ಸ್ಕೂಲು ಕಾಲೇಜು ಮಾಡೋದು, ದೇವಸ್ಥಾನಗಳನ್ನ ಕಟ್ಟಿಸೋದು ಇವೆಲ್ಲ ಆಳುವ ದೊರೆಗಳು ಮಾಡೋ ಕೆಲಸಗಳು. ಶ್ರಾದ್ಧ ಮಾಡಿಸೋದು, ಕುಂಕುಮಾರ್ಚನೆ, ಹೋಮ ಹವನ ಇವೆಲ್ಲ ಪುರೋಹಿತರು ಮಾಡ್ಬೇಕು. ಇದನ್ನೆಲ್ಲ ಮಠಗಳಲ್ಲಿ ಯಾಕೆ ಮಾಡ್ತೀರಿ? ಇದೆಲ್ಲಾ ಗುರುವು ಮಾಡೋ ಕೆಲಸವಾ? ಗುರುಪೀಠವು ಪುರೋಹಿತರು ಮಾಡೋ ಕೆಲಸಗಳನ್ನ, ರಾಜರು, ಮಂತ್ರಿಗಳು ಮಾಡಬೇಕಾದ ಕೆಲಸ ಯಾಕೆ ಮಾಡಬೇಕು? ಮಠಗಳು ಅಂದ್ರೆ ಸ್ಕೂಲು, ಕಾಲೇಜು ಮಾಡೋ, ಶ್ರಾದ್ಧ ಮಾಡಿಸೋ, ವರ-ಕನ್ಯೆ ಹೊಂದಿಸೋ ಸೆಂಟರ್ ಗಳಾಗಿಹೋಗಿವೆ. ಗುರುವು ಮಾಡೋ ಕೆಲಸ ಇದಲ್ಲ. ಅಂತೆಲ್ಲ ಅವರ ಜೊತೆ ವಾದಿಸುತ್ತಿದ್ದೆ. ಅವರು ನನ್ನ ಕಡೆ ಕರುಣೆಯಿಂದ ನೋಡಿ ”ಈ ಸರ್ಕಾರಗಳು ತಾವು ಮಾಡಬೇಕಾದ ಕೆಲಸಗಳನ್ನು ಸರಿಯಾಗಿ ಮಾಡದೇ ಇದ್ದಾಗ ಬೇರೆ ಯಾರಾದರೂ ಅದನ್ನು ಮಾಡಲೇಬೇಕಾಗ್ತದೆ ಮಗು.. ಗುರುವು ಯಾರಿಗೆ ಬೇಕಾಗಿದ್ದಾನೆ ಹೇಳು..? ಎಷ್ಟು ಜನರಿಗೆ ಬೇಕಾಗ್ತಾನೆ? ಗುರುವಿನ ಅವಶ್ಯಕತೆ ಇರುವವರ ಸಂಖ್ಯೆ ತುಂಬಾ ಕಡಿಮೆ. ”ಅಧಿಕಾರ ತತ್ವ” ಅಂತ ಒಂದು ಇದೆ. ಅವರವರ ಅಧಿಕಾರಕ್ಕೆ ತಕ್ಕಂತೆ ಅವರಿಗೆ ಅದನ್ನು ತಾಯಿಯ ಹಾಗೆ ಹಂಚಿ ಎಲ್ಲರಿಗೂ ನೀಡೋದು ಗುರುವಿನ ಕೆಲಸ. ಗುರುವಾದವನು ಅನೇಕ ಪಾತ್ರಗಳನ್ನ ನಿಭಾಯಿಸಬೇಕಾಗ್ತದೆ. ನಿನಗಿನ್ನೂ ಮೀಸೆ ಚಿಗುರೋ ಸಮಯ. ಇಂಥದ್ದೆಲ್ಲ ಅರ್ಥ ಆಗೊದಿಲ್ಲ. ಸಮಯ ಬಂದಾಗ ಅರ್ಥ ಆಗುತ್ತೆ.” ಅಂತ ನನ್ನ ಕೆನ್ನೆ ಸವರಿ ಆಶೀರ್ವಾದ ಮಾಡಿ ಕಳಿಸಿದ್ರು. ಅವರ ಮಾತಿನಿಂದ ನಾನು convince ಆಗಿರಲಿಲ್ಲ, ಇವತ್ತಿಗೂ ಆಗಿಲ್ಲ. ಅವರ ಮಾತು ಈಗ ಅರ್ಥವಾಗುವಷ್ಟು ಅನುಭವವಾಗಿದ್ದರೂ ನನ್ನ ಅಸಮಾಧಾನ ಇನ್ನೂ ಪೂರ್ತಿಯಾಗಿ ಕಳೆದಿಲ್ಲ. ಏಕೆಂದರೆ ಗುರುಪೀಠದಿಂದ ಪ್ರಧಾನವಾಗಿ ನಡೆಯಬೇಕಾದ ಕೆಲಸ ಗೌಣವಾಗಿ ಹೋಗಿ ಉಳಿದ ಕೆಲಸಗಳೇ ಇವತ್ತಿಗೂ first priority ಆಗಿ ಹೋಗಿವೆ.
ಇದನ್ನೆಲ್ಲ ನಾನು ನೆನೆಪಿಸಿಕೊಂಡು, ಮಥನ ಪಟ್ಟು ಆ ಗುಂಗಿನಿಂದ ಹೊರಬರುವಷ್ಟರಲ್ಲೇ ಮತ್ತೆ ”ಚಲ್ಲಾ” ತಗುಲಿಕೊಂಡರು. ರಾತ್ರಿಯ ಅಡುಗೆ ಸಿದ್ಧವಾಗಿ ಊಟ ಮುಗಿಯುವ ವರೆಗೂ ಚಲ್ಲಾ ಅತೀ ಉತ್ಸಾಹದಿಂದ ಪಕ್ಕದಲ್ಲಿ ಕುಳಿತುಕೊಂಡು ಕರ್ನಾಟಕದ ಅನೇಕ ಮಠಗಳ ಸ್ವಾಮಿಗಳ ಜಾತಕಗಳನ್ನು, ಮಠಗಳ ಒಳ ರಾಜಕೀಯಗಳನ್ನು ನನ್ನ ಮುಂದೆ ಜಾಲಾಡಿದರು. ಮೌನವಾಗಿ ಕುಳಿತು ಊಟ ಮಾಡಲಿಕ್ಕೂ ಬಿಡಲಿಲ್ಲ. ಅವರಿಗೆ ಅಪರೂಪಕ್ಕೆ ಇಂಥದ್ದೆಲ್ಲಾ ಮಾತಾಡಬಹುದಾದ ಒಬ್ಬ ಪ್ರಾಣಿ ಸಿಕ್ಕಿದ್ದ. ನನಗೆ ಅದೆಲ್ಲದರ ಬಗ್ಗೆ ದಿವ್ಯ ನಿರಾಸಕ್ತಿ. ಅವರ ಮಾತುಗಳಿಗೆ ಪ್ರತಿಮಾತಾಡದೇ ಬರೀ “ಹೂಂ” ಗುಟ್ಟುತ್ತ ನನ್ನ ನಿರಾಸಕ್ತಿಯನ್ನು ಅವರಿಗೆ ತಿಳಿಸಲಿಕ್ಕೆ ಪ್ರಯತ್ನಿಸಿದೆ. ಅವರಿಗೆ ಅದು ಅರ್ಥವಾಗುವ ಸಂಭವ ಇರಲಿಲ್ಲ. ಅಲ್ಲಿನ ಪರಿಸರ ಗಮನಿಸಿದ ಮೇಲೆ ನಾನು ಯಾವ ಕೆಲಸ ಮಾಡಲಿಕ್ಕೆ ಕಾಶಿಗೆ ಬಂದಿದ್ದೀನೋ ಅದನ್ನು ಇಲ್ಲಿದ್ದು ಪೂರ್ತಿಮಾಡಲಿಕ್ಕೆ ಸಾಧ್ಯವಿಲ್ಲ ಅನ್ನೋದು ಸ್ಪಷ್ಟವಾಗಿ ಅರ್ಥವಾಯ್ತು. ಆ ಕೋಣೆಯೂ ಕೂಡ ಉಸಿರುಗಟ್ಟಿಸುವಂತೆ ಅನ್ನಿಸತೊಡಗಿತು. ಈ ಮೆಹಮೂರ್ ಗಂಜ್ ಘಾಟ್ ಗಳಿಂದ ಹತ್ತು ಮೈಲಿ ದೂರ ಇದೆ. ಪ್ರತೀ ದಿನ ಆಟೋದ ಓಡಾಟದಲ್ಲಿ, ಹರಟೆಯಲ್ಲಿ ಸಮಯ ಕಳೆಯೋದಕ್ಕಿಂತ ಇಲ್ಲಿಂದ ಹೊರಡೋದೇ ಸರಿ ಅಂತ ನಿರ್ಣಯಿಸಿ ಬ್ಯಾಗ್ ತೆಗೆದುಕೊಂಡು ಹೊರಬಂದೆ. ಪ್ರಾಂಗಣದಲ್ಲಿ ಗುರು ಪೀಠದಲ್ಲಿದ್ದ ಐದಾರು ಯತಿಗಳ ಚಿತ್ರಗಳನ್ನು ತೂಗುಹಾಕಲಾಗಿತ್ತು. ಎಲ್ಲ ಚಿತ್ರಗಳ ಮಧ್ಯದಲ್ಲಿ ಚಂದ್ರಶೇಖರ ಭಾರತಿಗಳ ಚಿತ್ರವಂತೂ ಮಾಣಿಕ್ಯದ ಹಾಗೆ ಹೊಳೆಯುತ್ತಿತ್ತು. ಚಂದ್ರಶೇಖರ ಭಾರತಿಗಳು ಮತ್ತು ಕಂಚಿಯ ಚಂದ್ರಶೇಖರೇಂದ್ರ ಸರಸ್ವತಿಗಳು ಈ ಇಬ್ಬರ ಚಿತ್ರಗಳನ್ನು ನೋಡಿದಾಗಲೆಲ್ಲ ಹಿಮಾಲಯದ ಮುಂದೆ ನಿಂತ ಸಣ್ಣ ಕ್ರಿಮಿಯಂತೆ ನಾನು ವಿನೀತನಾಗಿ ಹೋಗ್ತೇನೆ. ಅವರಿಬ್ಬರ ಜೀವನದ ಘಟನೆಗಳನನ್ನು ಕೇಳಿದಾಗಲೆಲ್ಲ ನಾನು ಆವಾಗಿನ ಕಾಲಮಾನದಲ್ಲಿ ಹುಟ್ಟಲಿಲ್ಲವಲ್ಲ ಅನ್ನೋ ಮೂರ್ಖತನದಿಂದ ಕೂಡಿದ ಕೊರಗು ಮನಸ್ಸಿನಲ್ಲಿ ಕೆಲವೊಮ್ಮೆ ಸುಳಿದು ಹೋಗ್ತದೆ. ಭಾರತೀಯ ಯತಿಪರಂಪರೆಯಲ್ಲಿ ಅವೆರಡೂ ಮಹಾಶೀಖರಗಳು. ಗೋಡೆಯ ಮೇಲೆ ಈಗಿನ ಗುರುಗಳಾದ ಭಾರತೀತೀರ್ಥರ ಜೊತೆ ಹೊಸದಾಗಿ ದೀಕ್ಷೆ ಪಡೆದ ವಿದುಶೇಖರರ ಚಿತ್ರವೂ ಇತ್ತು. ಕೆಲ ವರ್ಷಗಳ ಹಿಂದೆ ಅವರನ್ನು ತಿರುಪತಿಯ ಸಮ್ಮೇಳನವೊಂದರಲ್ಲಿ ಭೇಟಿಯಾದಾಗ ಅವರ ತಂದೆಯ ಜೊತೆ ವಿನೀತರಾಗಿ ನಡೆದಾಡುವುದನ್ನು ನೋಡಿ ”ಆಂಧ್ರದ ವಿದ್ವಾಂಸರ typical ಮಗ” ಅಂದಕೊಂಡಿದ್ದೆನೇ ಹೊರತು ಈತ ಜಗದ್ಗುರು ಪೀಠವನ್ನೇರುತ್ತಾರೆ ಅನ್ನೋ ಕಲ್ಪನೆಯೂ ನನ್ನಲ್ಲಿರಲಿಲ್ಲ. ಯಾರ ಅಂತರಂಗದಲ್ಲಿ ಯಾವ ಮಹಾವೃಕ್ಷದ ಬೀಜ ಅಡಗಿದೆಯೋ, ಗುರುಕೃಪೆ ಯಾರ ಮೇಲೆ ಯಾವಾಗ-ಹೇಗೆ ಆಗ್ತದೆ ಅನ್ನೋದು ಊಹಿಸಲೂ ಸಾಧ್ಯವಿಲ್ಲ. ”ಗುರುಕೃಪಾ ಹಿ ಕೇವಲಂ, ವಿತ್ತಬಲಂ, ಚಿತ್ತಬಲಂ, ಶಸ್ತ್ರಬಲಂ, ಶಾಸ್ತ್ರಬಲಂ. ತದ್ವಿನಾ ತು ಸರ್ವಬಲಂ ನಿಷ್ಫಲಂ.” ಆ ಗುರು ಪರಂಪರೆಗೆ ತಲೆಬಾಗಿ ಗೋಡೆಗೆ ಹಣೆ ಹಚ್ಚಿ ನಮಸ್ಕರಿಸಿ ಹೊರಟು ಬರುವಾಗ ತಲೆಯಲ್ಲಿ ಗಂಟೆ ಬಾರಿಸಿದ ಹಾಗೆ ಏನೋ ನೆನಪಾಯ್ತು. ಅಲ್ಲಿ ಮಾಡಿದ ರಾತ್ರಿಯ ಊಟ ಮತ್ತು ಕೋಣೆ ಬಳಸಿದ್ದಕ್ಕೆ ಪ್ರತ್ಯಾಮ್ನಾಯ ಆಗುವಷ್ಟು ಹಣವನ್ನ ಬ್ಯಾಗಿನಿಂದ ತೆಗೆದು ಅಲ್ಲಿದ್ದ ಹುಂಡಿಯಲ್ಲಿ ಹಾಕಿದೆ. ಚಲ್ಲಾ ಹತ್ತಿರದಲ್ಲೇ ಇದ್ದ ತಮ್ಮ ಮನೆಗೆ ಹೊರಟು ಹೋಗಿಯಾಗಿತ್ತು. ಒಂದು ಚಿಕ್ಕ ಚೀಟಿಯಲ್ಲಿ ನಾನು ಹೊರಡುತ್ತಿರುವ ವಿಷಯವನ್ನ ಬರೆದು ಕುಳಿತಲ್ಲೇ ತೂಕಡಿಸುತ್ತಿದ್ದ ಮಠದ ಕಾವಲುಗಾರನಿಗೆ ಬೀಗದ ಕೈ ಸಮೇತ ಕೊಟ್ಟು ”ಸಾಬ್ ಕೊ ದೆ ದೋ” ಅಂತ ಹೇಳಿ ಮೆಟ್ಟಿಲಿಳಿದೆ. ನೀರವವಾಗಿದ್ದ ರಸ್ತೆಯಲ್ಲಿ ನನಗಾಗಿಯೇ ಎಂಬಂತೆ ಬಂದ ಆಟೋ ಹತ್ತಿ ”ದಶಾಶ್ವಮೇಧ ಘಾಟ್ ಚಲೋ” ಅಂತ ಹೇಳಿದಾಗ ಫೋನಿನಲ್ಲಿ ಸಮಯ ರಾತ್ರಿ ಹನ್ನೊಂದೂವರೆ ಅಂತ ತೋರಿಸುತ್ತಿತ್ತು.
# ಮುಂದುವರೆಯುವುದು.