ಪ್ರವಾಸ ಕಥನ ವಲಸಿಗರ ನಾಡಿನಲ್ಲಿ

ನಾನೂ ಕಾರು ಚಲಾಯಿಸಲಿಚ್ಚಿಸಿದೆ

ಕಾರು ಚಲಾಯಿಸಲು ಪರವಾನಗಿ ಪಡೆದು ಹೆಚ್ಚು ಕಡಿಮೆ ಇಪ್ಪತ್ತೈದು ವರ್ಷಗಳ ನಂತರ ಕಾರು ಚಲಾಯಿಸಲು ಇಚ್ಛೆ ಮಾಡಿದೆನೆಂದರೆ ಜನ ನನಗೆ ಹುಚ್ಚೆನ್ನದೆ ಮತ್ತೇನು? ನಿತ್ಯ ಕಾರು ಚಲಾಯಿಸುತ್ತಿದ್ದರೆ ವಿಚಾರ ಬೇರೆ. ಪರವಾನಗಿ ಪಡೆದು ಕಾರಿನ ಕಡೆ ಕಣ್ಣು ಹಾಕದವನಿಗೆ ಈ ವಯಸ್ಸಿನಲ್ಲಿ ಈಗ ಕಾರು ಚಲಾಯಿಸುವ ಹುಮ್ಮಸ್ಸು ಬಂದಿತೆಂದರೆ ಹುಚ್ಚೇ ಅಲ್ಲವೆ? ಆದರೆ ಪರಿಸರ ಅಂತಹದು, ವ್ಯವಸ್ಥೆ ಆಕರ್ಷಣೀಯ. ಹಾಗೇ ವಾಹನಗಳೂ ಚಾಲನೆಗೆ ಕ್ಲಿಷ್ಟವಲ್ಲದವು. ಅದಕ್ಕೆ ಅಮೇರಿಕೆಯಲ್ಲಿದ್ದಾಗ ಈ ಉತ್ಸಾಹ ಮೂಡಿದುದು.
ದೇಶವಿಡೀ ಕಾರುಗಳದ್ದೇ ಕಾರುಬಾರ. ಶಾಲೆಗೆ ಹೋಗುವ ಮಕ್ಕಳಿಂದ ತೊಡಗಿ ವೃದ್ಧಾಶ್ರಮದ ಮುದುಕನ ವರೆಗೆ ಕಾರಿಲ್ಲದವ ಅಮೇರಿಕೆಯಲ್ಲಿ ಕಾಲಿಲ್ಲದವನ ಹಾಗೆ. ಹೀಗೆ ಪ್ರತಿಯೊಬ್ಬನಲ್ಲಿ ಕಾರು, ಆಕಡೆಯಿಂದ ಈ ಕಡೆಗೆ ಸಾಗಾಣೆಗೆ ಟ್ರಕ್ಕುಗಳು, ಬಸ್ಸುಗಳು. ಇವುಗಳ ಮಧ್ಯೆ ಬಾಣದಂತೆ ಚಲಿಸುವ ಮೋಟಾರು ಬೈಕುಗಳು. ಇವುಗಳನ್ನೆಲ್ಲ ಹದ್ದು ಬಸ್ತಿನಲ್ಲಿಟ್ಟುಕೊಂಡು ಹೇಗೆ ಸುಧಾರಿಸುತ್ತಾರೋ ಎಂಬ ಯೋಚನೆ , ಅವುಗಳ ಕೇವಲ ಸಂಖ್ಯೆಯಿಂದ ಗಾಬರಿ. ಕಾರಣ ಇಷ್ಟೆ, ನನ್ನ ಊರಿನ ರಸ್ತೆ, ಪೇಟೆಗಳಲ್ಲಿ ಈ ಸಂಖ್ಯೆಗಳಲ್ಲಿ ವಾಹನಗಳಿದ್ದರೆ ಗುಜರಿ ಅಂಗಡಿ, ಆಸ್ಪತ್ರೆ, ವಿಮಾ ಕಂಪೆನಿಗಳು ರಸ್ತೆ ಪಕ್ಕದಲ್ಲೇ ಬಿಡಾರ ಹೂಡ ಬೇಕಾದೀತು. ಒಂದೆರಡು ದಿವಸ ಈ ಯೋಚನೆ, ರಸ್ತೆಯಲ್ಲಿ ಕಾಲಿಡ ಬೇಕಾದರೆ( ಕಾರಿನ ಒಳಗೇ ಕಾಲಿಡುವುದು!) ಅಳುಕು ಆಗಿಯೇ ಆಗುತ್ತದಾದರೂ ವಾಹನಗಳ ದಿನಚರಿ ತಿಳಿದ ಮೇಲೆ ಮನಸ್ಸು ಹಗುರವಾಗುತ್ತದೆ.

ಮಕ್ಕಳೊಡನೆ ಹೊರಗೆ ಹೋಗಿ ಬರುವಾಗ ಕತ್ತಲಾದರೆ ರಸ್ತೆಯನ್ನೊಮ್ಮೆ ನೋಡಬೇಕು, ಅದೂ ಎತ್ತರದಲ್ಲಿದ್ದಾಗ. ರಸ್ತೆಯ ಒಂದು ಬದಿಯಲ್ಲಿ ದಾರಿಯಿಡೀ ಮಿಣುಕು ಹುಳಗಳು ಓಡುವಂತೆ ಕಂಡರೆ ಮತ್ತೊಂದು ಬದಿಯಲ್ಲಿ ವೇಗದ ಪಂಜಿನ ಮೆರವಣ ಗೆ ಆಗುತ್ತಿರುವ ಹಾಗೆ ಕಾಣುತ್ತದೆ. ಕಾರಣ ಇಷ್ಟೆ, ಒಂದು ಬದಿಯಲ್ಲಿ ವಾಹನಗಳು ಪ್ರವಾಹದ ರೀತಿ ಹೋಗುತ್ತಿದ್ದರೆ ಇನ್ನೊಂದು ಬದಿ ಕಾರುಗಳ ಪ್ರವಾಹ ಬರುತ್ತಿರುತ್ತದೆ. ವಾಹನಗಳ ಹಿಂದಿನ, ಮುಂದಿನ ಬೆಳಕಿನ ಬಣ್ಣ ವ್ಯತ್ಯಾಸದಿಂದ ಈ ದೃಶ್ಯ. ಇದರ ಜತೆಗೆ ಯಾವುದೇ ಕಾರುಗಳ ಹಾರ್ನುಗಳ ಕಿರಿಚಾಟ ಕೂಗಾಟವೇ ಇಲ್ಲ. ಇದೂ ಒಂದು ಬೆರಗಾಗಿಸುವ ದೃಶ್ಯವೇ.

ಮಕ್ಕಳೊಡನೆ ಕಾರಿನ ಪ್ರಯಾಣ ಮಾಡಿದಾಗಲೇ ಸ್ವಲ್ಪ ಮಟ್ಟಿಗಾದರೂ ನನಗೆ ಗೊತ್ತಾದುದು ಅಮೇರಿಕಾದ ವಾಹನ ಸಂಚಾರ. ಹಿಂದೊಮ್ಮೆ ಭಾರತಕ್ಕೆ ಭೇಟಿಯಾಗಿದ್ದ ಅಮೇರಿಕನನೊಡನೆ ಮಾತಾಡಿದಾಗ ಅವನೆಂದಿದ್ದ ‘ನಿಮ್ಮ ಊರ ರಸ್ತೆಗಳು ‘ಬಂಪಿ’ ಎಂದು. ನಮ್ಮ ಊರ ರಸ್ತೆಗಳು ಹೇಗೆ ಬಂಪಿ ಎಂದು ಅರ್ಥವಾದುದು ಅಮೇರಿಕೆಯ ರಸ್ತೆಗಳಲ್ಲಿ ಪ್ರಯಾಣ ಮಾಡಿದಾಗಲೇ. ಹೊಂಡ ಗುಂಡಿ ಇಲ್ಲದ ರಸ್ತೆ. ಅಮೇರಿಕಾದ ಯಾವುದೇ ಭಾಗಕ್ಕೆ ಹೋದರು ಒಂದೇ ರೀತಿಯ ಸಾರಿಗೆ ನಿಯಮ. ಅಮೇರಿಕಾದ ಅಷ್ಟೂ ವಾಹನಗಳು ನಿಯಮ ಪಾಲಿಸುತ್ತವೆ. ಪ್ರತಿಯೊಂದಕ್ಕು ಹೊರತಾಗಿರುವಂತೆ ಕೆಲವು ಮಂದಿ ನಿಯಮ ಭಂಗಿಸಬಹುದು. ಆದರೆ ಕಾವಲು ಇರಲೀ ಇಲ್ಲದಿರಲೀ ವಾಹನ ನಿಯಮ ಪಾಲನೆ ಸ್ವಯಂಪ್ರೇರಿತ. ಯಾಕೆಂದರೆ ನಿಯಮವನ್ನು ಕಟ್ಟುನಿಟ್ಟಾಗಿ ಹೇರುವವರಿದ್ದಾರೆ, ಹೇರುತ್ತಾರೆ. ತಪ್ಪಿತಸ್ತ ವಾಹನವನ್ನು ಹುಲಿಯು ಜಿಂಕೆಯನ್ನು ಅಟ್ಟಾಡಿಸಿ ಬೇಟೆಯಾಡುವಂತೆ ಪೋಲೀಸರು ವಾಹನದಲ್ಲಿ ಬೆಂಬತ್ತಿ ಹಿಡಿದು ಶಿಕ್ಷೆ ವಿಧಿಸಿಯೇ ಸಿದ್ದ. ಹಲವಾರು ಬಾರಿ ಶಿಕ್ಷೆಗೊಳಗಾದರೆ ಮುಂದೆ ಪರವಾನಗಿ ವಜಾನೂ ಆಗ ಬಹುದು.

ವಾಹನಗಳು ರಸ್ತೆಯಲ್ಲಿ ಚಲಿಸುವಾಗ ಸೂಚನೆಗಳು, ಓಣ ಗಳನ್ನು ಗಮನದಲ್ಲಿಟ್ಟೇ ಮುಂದುವರಿಯುವುದಾದರೂ ನಡೆದು ಓಡಾಡುವವರಿಗೆ ಪ್ರಥಮ ಪ್ರಾಶಸ್ತ್ಯ. ಒಂದೊಮ್ಮೆ ಸೂಚನಾ ದೀಪಗಳ ಸಲಹೆಯಂತೆ ಪಾದಚರಿಯು ರಸ್ತೆ ದಾಟಲು ತೊಡಗಿದ್ದರೆ ಅವನು ದಾಟಿದ ಮೇಲೆನೇ ವಾಹನ ಚಲಿಸುವುದು. ಎಷ್ಟೋ ಸಲ ನನಗೆ ರಸ್ತೆ ದಾಟುವ ಸಂದರ್ಭದಲ್ಲಿ ಆಕಡೆ ಇಂದ ವೇಗವಾಗಿ ಕಾರು ಬರುತ್ತಿದೆ ಎಂದು ನಾನು ನಿತ್ತರೆ ವಾಹನ ಚಾಲಕನು ನಗುತ್ತ ನನಗೇ ಮುಂದುವರಿಯಲು ಸೂಚಿಸಿದ್ದಾನೆ. ಹಾಗೆಂತ ಹೆದ್ದಾರಿಗಳಲ್ಲಿ ರಸ್ತೆ ದಾಟಲು ಯತ್ನಿಸಿದರೆ ಅಥವಾ ರಸ್ತೆಯಲ್ಲಿ ತಿರುಗಾಡತೊಡಗಿದರೆ ಪೋಲೀಸರ ಅತಿಥಿಯಾಗುವುದು ಖಂಡಿತ. ಅಲ್ಲಿಯ ಹೆದ್ದಾರಿಗಳಲ್ಲಿ ಮನುಷ್ಯರು ಯಾಕೆ ಪ್ರಾಣ ಗಳೂ ಕಾಣಬರುವುದಿಲ್ಲ. ರಾಷ್ಟ್ರೀಯ ವನಗಳಿರುವಲ್ಲಿ ಮಾತ್ರ ಕಾಡು ಪ್ರಾಣ ಗಳು ಆಕಸ್ಮಿಕವಾಗಿ ಭೇಟಿಯಾಗ ಬಹುದಷ್ಟೆ. ಮುನ್ನೆಚ್ಚೆರಿಕೆಯಾಗಿ ಆ ವಲಯದ ರಸ್ತೆಗಳ ಪಕ್ಕ ಸೂಚನಾ ಫಲಕ ಹಚ್ಚಿರುತ್ತಾರೆ.
ವಾಹನಗಳೆಲ್ಲ ರಸ್ತೆಗಳಲ್ಲಿ ನಿಗದಿತ ಓಣ ಗಳಲ್ಲಿ ಓಡುವುದರಿಂದ ವಾಹನ ಸಂಚಾರ ನಿರಾತಂಕ. ಓಣ ಬದಲಾಯಿಸಬೇಕಾದ ಸಂದರ್ಭದಲ್ಲಿ ಕಾರಿನ ಹಿಂದಿನ ದೀಪಗಳಿಂದ ಸೂಚನೆ ಕೊಡುತ್ತನೇ ಬದಲಾಯಿಸ ಬೇಕು. ಆದರೆ ರಸ್ತೆಯುದ್ದಕ್ಕೂ ಹಳದಿ ಬಣ್ಣದ ನೇರ ಪಟ್ಟಿ ಇದ್ದರೆ ಅದನ್ನು ದಾಟಿ ಓಣ ಬದಲಾಯಿಸುವ ಹಾಗಿಲ್ಲ. ತುಂಡು ತುಂಡಾದ ಹಳದಿ ಬಣ್ಣದ ಪಟ್ಟಿ ಇದ್ದಲ್ಲಿ ಮಾತ್ರ ಓಣ ಬದಲಾಯಿಸ ಬಹುದು. ಹಳದಿಯ ನೇರ ಪಟ್ಟಿಯನ್ನು ತಡೆ ಗೋಡೆ ಎಂದೇ ಪರಿಗಣ ಸ ಬೇಕು!

ಓಣ ಎಂದಾಗ ನೆನಪಾದುದು ನನಗೆ ನನ್ನ ಸೊಸೆ ಬರೆದ ಪತ್ರ. ‘ಮಾವ ಈಗ ನಾನು ಕಾಲೇಜಿಗೆ ಹೋಗುವಾಗ ನನ್ನ ಜೊತೆ ಚೈನೀಸ್ ಹುಡುಗಿಯೊಬ್ಬಳೂ ಬರುತ್ತಾಳೆ. ಅವಳೂ ಜತೆಗೆ ಬರುವ ಕಾರಣ ಕಾರ್ ಪೂಲಿನಲ್ಲಿ ಬೇಗನೆ ಹೋಗಲಾಗುತ್ತದೆ.’ ಈ ಕಾರ್ ಪೂಲ್ ಎಂದರೇನಪ್ಪ? ಯಾವುದೇ ಕಾರಿನಲ್ಲಿ ಕೇವಲ ಒಬ್ಬನ ಬದಲು ಇಬ್ಬರಿದ್ದರೂ ಸಾಕು, ಹೆದ್ದಾರಿಯ ಅತ್ಯಂತ ಎಡಕ್ಕಿರುವ ಓಣ ಯಲ್ಲಿ ವೇಗವಾಗಿ ಚಲಿಸ ಬಹುದು. ಈ ಓಣ ಗೆ ಕಾರ್ ಪೂಲ್ ಎಂದೇ ಕರೆಯುತ್ತಾರೆ. ಮೋಟಾರು ಬೈಕುಗಳೂ ಈ ಓಣ ಯನ್ನು ಬಳಸ ಬಹುದು. ಉದ್ದೇಶ ಸಾಧ್ಯವಾದಷ್ಟು ಇಂಧನ ಮಿತವ್ಯಯ!

ನಮ್ಮಲ್ಲಿ ವಾಹನದ ಹಿಂದೆ ಮುಂದೆ ತಗಲಿಸಿದ ಸಂಖ್ಯೆ ಮತ್ತು ಅಕ್ಷರ ನೋಡಿದರೆ ಯಾವ ರಾಜ್ಯದಲ್ಲಿ ನೊಂದಾಯಿಸಿದ್ದೆಂದು ಗೊತ್ತಾಗುತ್ತದೆ. ಅಮೇರಿಕಾದಲ್ಲಿಯ ನೊಂದಾಣ ಫಲಕದಲ್ಲಿ ರಾಜ್ಯದ ಹೆಸರೇ ಬರೆಯಲ್ಪಡುತ್ತದೆ. ಮತ್ತೆ ಚಿತ್ರ ವಿಚಿತ್ರ ಸಂಖ್ಯೆಗಳು ಅಕ್ಷರಗಳು. 1 ಲವ್ 2 ಡಾಗ್ಸ್, 4 ಥೀವ್ಸ್ ಇತ್ಯಾದಿ ಅಂಕೆ ಅಕ್ಷರಗಳಿದ್ದರೂ ಆಶ್ಚರ್ಯವಿಲ್ಲ. ಜತೆಗೆ ಯಾವ ತಿಂಗಳು ವರ್ಷದಿಂದ ಯಾವ ತಿಂಗಳು ವರ್ಷದವರೆಗೆ ನೊಂದಾವಣೆ ಊರ್ಜಿತವಿದೆ ಎಂದೂ ನಮೂದಿಸಿರುತ್ತಾರೆ.

ಮಕ್ಕಳೊಡನೆ ಕುಳಿತು ಅಮೇರಿಕಾದ ರಸ್ತೆಯಲ್ಲಿ ಕಾರು ಪ್ರಯಾಣ ಮಾಡುವ ಅನುಭವ ಬೇರೆ. ಹೆಚ್ಚಿನ ಎಲ್ಲಾ ವಾಹನಗಳು ಸ್ವಯಂಚಾಲಿತ. ಚಾಲನಾ ಚಕ್ರ, ವೇಗವರ್ಧಕ, ಬ್ರೇಕಿನ ಮೇಲೆ ನಿಯಂತ್ರಣ ಇಟ್ಟು ಸಾರಿಗೆ ನಿಯಮ ಸರಿಯಾಗಿ ಅರ್ಥ ಮಾಡಿಕೊಂಡರಾಯಿತು, ಅಮೇರಿಕಾದಲ್ಲಿ ಕಾರು ಚಲಾಯಿಸ ಬಹುದು, ಭಾರತದಲ್ಲಲ್ಲ! ನೂರುಗಟ್ಟಲೆ ಮೈಲು ರಸ್ತೆ ಸಾಗಿದರೂ ದಣ ವಿಲ್ಲದೆ ಸಾಗಬಹುದು. ಹೆದ್ದಾರಿಗಳಲ್ಲಿ ಸಾಗುತ್ತಿರುವಾಗ ಆಯಾ ಪ್ರದೇಶಕ್ಕೆ ನಮೂದಿಸಿದ ವೇಗದ ಮಿತಿಯಲ್ಲಿ ಚಲಿಸಿದರಾಯಿತು. ಹಾಗೆಂದು ಎಲ್ಲೆಂದರಲ್ಲಿ ರಸ್ತೆಯಲ್ಲಿ ಕಾರನ್ನು ನಿಲ್ಲಿಸುವ ಹಾಗಿಲ್ಲ. ರಸ್ತೆಗೆ ತಾಗಿ ಅಲ್ಲಲ್ಲಿ ‘ರೆಸ್ಟ್ ಏರಿಯ’ ಅಥವ ‘ವಿಸ್ತಾ ಪೋಯಿಂಟ್’ ಗಳಿವೆ. ಈ ಜಾಗಗಳು ಎಷ್ಟೇ ನಿರ್ಜನ ಜಾಗದಲ್ಲಿರಲಿ ಅಲ್ಲಿ ಬಹಿರ್ದೆಸೆಗೆ ಹೋಗುವ ಜಾಗಗಳು ಅತ್ಯಂತ ಶುಚಿ. ಶೌಚಾಲಯದ ಕಾಗದದಿಂದ ಹಿಡಿದು ನೀರಿನ ವರೆಗೆ ‘ರೆಸ್ಟ್ ಏರಿಯಾ’ದಲ್ಲಿ ಇಪ್ಪತ್ತ ನಾಲ್ಕು ಗಂಟೆಯೂ ಲಭ್ಯ. ‘ವಿಸ್ತಾ ಪೋಯಿಂಟ್’ ಗಳು ಪ್ರೇಕ್ಷಣ ೀಯ ಜಾಗಗಳಾಗಿದ್ದು ಕಾರಿನಿಂದಿಳಿದು ಕೈಕಾಲು ಸಡಿಲ ಮಾಡಿಕೊಳ್ಳಬಹುದು. ರೆಸ್ಟ್ ಏರಿಯಾಗಳು ಎಲ್ಲಾ ವಾಹನಗಳಿಗೆ ಲಭ್ಯವಾದ ಕಾರಣ ಕಾರಿನಿಂದಿಳಿÀದು ಸುತ್ತಮುತ್ತ ನೋಡಿದರೆ ಕಾಣುವುದೇ ಎಲ್ಲ ವಿಧದ ವಾಹನಗಳು, ದೈತ್ಯ ಸಾಗಣೆ ವಾಹನಗಳಿಂದ ತೊಡಗಿ ದೈತ್ಯ ಮೋಟಾರು ಬೈಕಿನವರೆಗೆ.

ಹೆದ್ದಾರಿಗಳಲ್ಲಿ ಅಡಚಣೆ ಇಲ್ಲದೆ 80 – 90 ಮೈಲು ವೇಗದಲ್ಲಿ ಚಲಿಸುವಾಗಲೇ ನನಗೆ ಅನಿಸಿದುದು ‘ನಾನೂ ಒಮ್ಮೆ ಸ್ಟಿಯರಿಂಗ್ ವೀಃಲ್ ಹಿಡಿದರೇನಂತೆ’ ಎಂದು. ಆದರೆ ಹಿಡಿಯಲಿಲ್ಲ! ಅಮೇರಿಕೆಗೆ ಹೋದ ಆರಂಭದಲ್ಲಿ ನನ್ನ ಭಾರತದ ಚಾಲನಾ ಪರವಾನಗಿಯಲ್ಲೇ ತಾತ್ಕಾಲಿಕವಾಗಿ ಕಾರು ಚಲಾಯಿಸಬಹುದಾದರೂ ಅಲ್ಲಿಯದೇ ಪರವಾನಿಗೆಗೆ ನೊಂದಾಯಿಸಿ ಕೊಳ್ಳಲೇ ಬೇಕು. ಅಲ್ಲಿಯ ಪರವಾನಿಗೆ ನೊಂದಾಯಿಸಿಕೊಂಡು ಅಲ್ಲಿಯ ಪರೀಕ್ಷೆಗೆ ಒಳಪಡಬೇಕು. ಕೆಲವೇ ಸಮಯ ವಾಸ್ತವ್ಯವಿರುವ ನನಗೆ ಇವೆಲ್ಲ ಉಸಾಬರಿ ಯಾಕೆಂದು ಸುಮ್ಮಗಾಗಿದ್ದೆ. ಆದರೂ ಅಲ್ಲಿಯ ಪರೀಕ್ಷೆಯಲ್ಲಿ ಸಮಾನಾಂತರವಾಗಿ ಕಾರನ್ನು ‘ಪಾರ್ಕು’ ಮಾಡುವುದು ಒಂದು ಜಾಣ ಕಲೆ. ಕಾರುಗಳ ರಾಜ್ಯದಲ್ಲಿ ಅವುಗಳನ್ನು ನಿಲ್ಲಿಸುವುದೇ ಸಮಸ್ಯೆ. ಅದಕ್ಕಾಗಿ ‘ಪಾರ್ಕಿಂಗ್’ ಗೆಂದೇ ಜಾಗ. ಕೆಲವುಕಡೆ ಪುಕ್ಕಟೆ ನಿಲ್ಲಿಸ ಬಹುದು. ಇನ್ನು ಹಲವೆಡೆ ಕೆಲವು ಗಂಟೆ, ಕೆಲವು ನಿಮಿಷಕ್ಕೆ ಪಾರ್ಕಿಂಗ್ ಮಾತ್ರ ಎಂದು. ಮತ್ತೆ ಕೆಲವು ಕಡೆ ಪಾರ್ಕಿಂಗಿಗೆ ದುಡ್ಡುಕೊಟ್ಟು ನಿಲ್ಲಿಸಬಹುದು. ಕೆಲವರಿಗೆ ಪಾರ್ಕಿಂಗಿಂದೇ ದಂಧೆ! ಅದಕ್ಕೇ ನೋಡಿ ಪಾರ್ಕಿಂಗಿಗೆಂದೆ ಬಹು ಮಹಡಿ ಕಟ್ಟಡಗಳು, ಇವುಗಳೊಳಗೆ ಬಿಡುವುದು ದುಡ್ಡು ವಸೂಲಿ ಎಲ್ಲಾ ಯಾಂತ್ರೀಕೃತ.

ಅಮೇರಿಕನ್ನರು ಹೆಚ್ಚಿನವರು ಕಾರಿನ ಆರೋಗ್ಯ ಗೊತ್ತಿದ್ದವರೇ. ಆದರೂ ಸಾವಿರಗಟ್ಟಲೆ ಮೈಲು ಪ್ರಯಾಣ ಸುತ್ತಿರಬೇಕಾದರೆ ದಾರಿಯಲ್ಲಿ ಎಡವಟ್ಟಾದರೆ? ಇಂತಹ ಪರಿಸ್ಥಿತಿಯಲ್ಲಿ ಇವಕ್ಕೆಂದೇ ಒದಗುವ ಕಂಪೆನಿಗಳಿವೆ. ಉದಾಹರಣೆಗೆ ‘ಎಎಎ’ ಎಂಬುದೊಂದು. ದೇಶದ ಯಾವುದೋ ಮೂಲೆಯಿಂದಲೂ ಅವರ ನಿರ್ದಿಷ್ಟ ಸಂಖ್ಯೆಗೆ ಫೋನಾಯಿಸಿದರಾಯಿತು, ಹತ್ತಿರದ ಅವರ ಘಟಕ ಕಾರ್ಯಪ್ರವೃತ್ತವಾಗುತ್ತದೆ. ಹಾಗೂ ತರಾತುರಿಯ ಸೇವೆ ಒದಗಿಸುತ್ತದೆ. ಇದಕ್ಕೆಂದೇ ಕಾರಿನ ಮಾಲಿಕರು ಇಂತಹ ಕಂಪೆನಿಗಳ ಸೇವೆಗೆ ನಿರ್ದಿಷ್ಟ ಶುಲ್ಕಕ್ಕೆ ನೊಂದಾಯಿಸಿಕೊಳ್ಳುತ್ತಾರೆ. ಹಾಗೆಂದು ಎಲ್ಲಾ ವಾಹನಗಳು ಮಾಲಕತ್ವದವೇ ಆಗಬೇಕೆಂದೇನಿಲ್ಲ. ಬಾಡಿಗೆಗೆ ಓಡುವ ಕಾರುಗಳೂ ಇವೆ. ಇವುಗಳದ್ದೇ ಕಂಪೆನಿಗಳೂ ಇವೆ. ಬಹಳ ದೂರದ ಪ್ರವಾಸಕ್ಕಾಗುವಾಗ ಕಾರನ್ನು ಬಾಡಿಗೆಗೆ ತೆಗೆದುಕೊಂಡು ಹೋದ ಊರಲ್ಲಿ ಆಕಾರನ್ನು ಕಂಪೆನಿಯ ಅಲ್ಲಿಯ ಘಟಕದಲ್ಲಿ ಬಿಟ್ಟು ಮರು ಪ್ರಯಾಣ ವಿಮಾನದಲ್ಲೋ, ಬಸ್ಸಿನಲ್ಲೋ ಮಾಡುವುದು. ಇನ್ನೂ ಸಾವಧಾನವಾಗಿ ಪ್ರವಾಸ ಮಾಡುವುದಿದ್ದರೆ ‘ಆರ್ ವಿ’ ಅಂದರೆ ‘ರಿಕ್ರಿಯೇಶನಲ್ ವೆಹಿಕಲ್’- ಮೋಜಿಗಾಗಿಯೇ ಇರುವ ವಾಹನವನ್ನು ಬಾಡಿಗೆಗೆ ತೆಗೆದುಕೊಳ್ಳುವುದು. ಈ ಆರ್ ವಿ ಗಳು ಚಲಿಸುವ ಸಣ್ಣ ಮನೆಗಳಂತೆ. ಬೇಕಾದಲ್ಲಿ ನಿಲ್ಲಿಸಿ, ಬೇಕಾದಷ್ಟು ಸಮಯ ಇದ್ದು ಮತ್ತೆ ಇನ್ನೊಂದು ಊರಿಗೆ ಹೋಗುವುದು. ವಿಶೇಷವೆಂದರೆ ಈ ‘ಆರ್ ವಿ’ ಗಳು ಸ್ಥಿತಿವಂತರ ಹಾಗು ದುರ್ಬಲರ ಸಾಮಾನ್ಯ ಸಂಕೇತ! ‘ಆರ್ ವಿ’ ಯನ್ನು ಸ್ವಂತಕ್ಕೆಂದು ಕೊಂಡಾತ ಊರಿಂದೂರಿಗೆ ಒಯ್ಯುತಿದ್ದರೆ ಸ್ಥಿತಿವಂತನೆಂದು, ಕೊಂಡ ‘ಆರ್ ವಿ’ ಶಾಶ್ವತವಾಗಿ ನಿತ್ತಲ್ಲೇ ಇದ್ದರೆ ಅದರೊಡೆಯ ಆರ್ಥಿಕವಾಗಿ ದುರ್ಬಲನೆಂದು ಅರ್ಥೈಸಿಕೊಳ್ಳಬಹುದು. ದುರ್ಬಲರಿಗೆ ಅದುವೇ ಶಾಶ್ವ್ವತ ಮನೆ!

ಇಷ್ಟೆಲ್ಲ ನಾನು ಹೇಳುವಾಗ ಅಮೇರಿಕಾದ ರಸ್ತೆಗಳಲ್ಲಿ ಸ್ವರ್ಗ ಸುಖ, ಯಾವುದೇ ದುರ್ಘಟನೆ ಇಲ್ಲದ್ದು ಎಂಬ ಭಾವನೆ ಮೂಡುವ ಅವಕಾಶವಿದೆ. ಆದರೆ ವಸ್ತು ಸ್ಥಿತಿಯಲ್ಲಿ ಅನುಕೂಲದಂತೆ ಅನಾನುಕೂಲವೂ ಇದೆ, ಅಪಘಾತಗಳೂ ಆಗೊಮ್ಮೆ ಈಗೊಮ್ಮೆ ನಡೆಯುತ್ತಲೂ ಇವೆ. ಸಾವಿರಗಟ್ಟಲೆ ವಾಹನಚಾಲನೆಯ ರಸ್ತೆಯಲ್ಲಿ ಎಲ್ಲಿಯಾದರೂ ಒಂದುಕಡೆ ತೊಂದರೆಯಾದರೆ ಕಾರುಗಳ ಸಾಲಿನಲ್ಲೇ ಗಂಟೆಗಟ್ಟಲೆ ಸಿಕ್ಕಿಹಾಕಿಕೊಳ್ಳ ಬೇಕು. ಮತ್ತೆ ಅತಿವೇಗದಲ್ಲಿ ವಾಹನಗಳು ಚಲಿಸುವ ಕಾರಣ ಯಾವನ ತಪ್ಪಿಗಾದರೂ ಅಪಘಾತವಾದರೆ ಭಾಗವಹಿಸಿದ ವಾಹನಗಳು ಒಡೆದು ಹೋಳಾಗುವ ಸಾಧ್ಯತೆಗಳೇ ಜಾಸ್ತಿ! ಮನೆ ಬಿಡುವಾಗ ಅಂತರ್ಜಾಲದಲ್ಲಿ ಯಾವ ರಸ್ತೆಯಲ್ಲಿ ಅಪಘಾತವಾಗಿದೆ, ಯಾವ ರಸ್ತೆಯಲ್ಲಿ ವಾಹನ ದಟ್ಟಣೆ ಇದೆ, ತಲಪಲು ಎಷ್ಟು ಹೊತ್ತಾಗ ಬಹುದೆಂದು ಮುಹೂರ್ತ ನೋಡಿಯೇ ಹೊರಡುವ ಪರಿಸ್ಥಿತಿಯೂ ಇದೆ!

ಬಾಲ್ಯದಲ್ಲಿ ಕೇಳಿದ್ದೆ ಅಮೇರಿಕಾದಲ್ಲಿ ‘ಫೋರ್ಡ’ ಕಾರುಗಳದ್ದೇ ಕಾರುಬಾರವೆಂದು. ಆದರೆ ಆ ಚಿತ್ರ ಹರಿದು ಚೂರಾದುದು ಅಮೇರಿಕೆಗೆ ಹೋದ ಮೇಲೇನೆ. ಒಮ್ಮೆ ರಸ್ತೆಗೆ ದೃಷ್ಟಿ ಹಾಯಿಸಿದರೆ ಅಮೇರಿಕಾದಲ್ಲೆ ಹುಟ್ಟಿ ಬೆಳೆದ ‘ಫೋಡ್ರ್’ ಕಾರುಗಳು ಕೆಲವೇ ಕಾಣಸಿಕ್ಕಿದರೆ ಮಿರುಮಿರುಗುವ ಈ ಶತಮಾನದ ಎಲ್ಲಾ ಕಾರುಗಳು ಅಮೇರಿಕಾದ ರಸ್ತೆಯಲ್ಲಿ ಭರದಿಂದ ಓಡುತ್ತಿವೆ. ಕುತೂಹಲದಿಂದ ನಮ್ಮ ‘ಟಾಟಾ’ ದವರ ಕಾರುಗಳೇನದರೂ ಇವೆಯೋ ಎಂದು ಕಣ್ಣರಸುತ್ತವೆ. ಅರಸುವ ಕಣ ್ಣಗೆ ಮಾತ್ರ ಕಂಡುದು ‘ವಾರ್ನರ್’ ಪಾರ್ಕಿನ ಬಳಿ ಬಣ್ಣ ಬಣ್ಣದ ಭಾರತದ ಅಟೊ ರಿಕ್ಷಾ!

ಮಕ್ಕಳಿಬ್ಬರು ಅವರ ಕೆಲಸಕ್ಕೆ ಹೋಗಿ ಮನೆಯಲ್ಲಿ ನಾನೂ ನನ್ನಾಕೆಯೂ ಇದ್ದಾಗ ಅನಿಸುವುದು – ಇಲ್ಲಿಯ ಕಾರುಗಳು, ಇಲ್ಲಿಯ ರಸ್ತೆ, ಇಲ್ಲಿಯ ಸಾರಿಗೆ ನಿಯಮ ನಮ್ಮ ದೇಶದ ನೀತಿ ನಿಯಮಗಳಿಗೆ ತೀರಾ ವಿರುದ್ದ. ಜೀವ ಬಿಡಲು ತಯಾರಾದ ವಾಹನಗಳು ನಮ್ಮಲ್ಲಿ ಓಡಾಡುತ್ತಿದ್ದರೆ, ರಸ್ತೆ ಎಂದರೆ ಹೇಗಿದ್ದರೂ ಸರಿಯೇ ಎಂದಿರುವಲ್ಲಿ, ನಿಯಮಗಳೆಲ್ಲಾ ಪಾಲಿಸುವವರಿಗೆ ಮಾತ್ರವಾದಾಗ ಕಾರು ಚಲಾಯಿಸುವ ಇಚ್ಛೆ ಹೇಗೆ ಬರಬೇಕು. ಹಳೆವಾಹನಗಳು ಅವುಗಳ ಗೋರಿಗೆ, ರಸ್ತೆಗಳ ದುರಸ್ತಿ ಶುಚಿತ್ವ ನಿತ್ಯವೆಂಬಂತೆ, ಹಾಗೂ ರಸ್ತೆ ನಿಯಮ ಎಲ್ಲರಿಗೂ ಎಂಬಲ್ಲಿ ನನಗೂ ಕಾರು ಚಲಾಯಿಸಿದರಾದೀತು ಎಂಬ ಉತ್ಸಾಹ ಮೂಡಿದ್ದು ತಪ್ಪಲ್ಲವಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

A. Ramachandra Bhat

ಕೇರಳ-ಕರ್ನಾಟದ ಗಡಿಯ ಊರು ಅಡ್ಯನಡ್ಕ, ನನ್ನ ಹುಟ್ಟೂರು. ಸ್ವಾತಂತ್ರ್ಯ ಪೂರ್ವದ ವ್ಯಕ್ತಿ ನಾನು. ನನ್ನ ತಂದೆಯವರಿಂದ ತೊಡಗಿ ಅಧ್ಯಾಪನವೇ ಜೀವನೋಪಾಯವಾಗಿದ್ದ ನನ್ನ ದೊಡ್ಡ ಕುಟುಂಬದಲ್ಲಿ ಕವಲು ದಾರಿ ಹಿಡಿದು ಆ ದಾರಿ ಬಿಟ್ಟು ಜೀವ ವಿಮಾ ನಿಗಮದಂತಹ ಸಂಸ್ಥೆಯಲ್ಲಿ ದುಡಿಯುವ ದಾರಿ ಕಂಡುಕೊಂಡ ಪ್ರಥಮ ಕುಟುಂಬ ಸದಸ್ಯ. ಅಡ್ಯನಡ್ಕ, ಕಾಸರಗೋಡು, ಹಾಗು ಪುತ್ತೂರಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ವಿದ್ಯಾಭ್ಯಾಸ. ಎಲ್ಲರಂತೆ ನೌಕರಿಸೇರಿ ದುಡಿದು, ಈಗ ನಿವೃತ್ತನಾಗಿರುವವ. ಜೀವನದುದ್ದಕ್ಕೂ ಹೊಸ ಜಾಗ, ಜನ, ಘಟನೆ, ಚಟುವಟಿಕೆಗಳ ಬಗ್ಗೆ ಕುತೂಹಲ, ಅನುಭವಿಸುವ ಹಾಗೂ ದಾಖಲಿಸುವ ಹಂಬಲ ಇದ್ದವ. ಹಾಗಾಗಿ ಈಗ ಬಯಸಿದ್ದನ್ನು ಬರೆದು ಹಂಚಿಕೊಳ್ಳುವ ಹವ್ಯಾಸದವ. ಜೀವ ವಿಮಾ ನಿಗಮದಿಂದ ನಿವೃತ್ತಿಯ ನಂತರ ಈ ಹವ್ಯಾಸಕ್ಕೆ ದಾರಿ ಕಂಡುಕೊಂಡಿದ್ದೇನೆ. ಈಗ ಹುಟ್ಟೂರು ಬಿಟ್ಟು ವೃತ್ತಿಯಿಂದ ನಿವೃತ್ತಿಯಾದ ಉಡುಪಿಯಲ್ಲೇ ನನ್ನ ಕನಸುಗಳನ್ನು ನೇಯುತಿದ್ದೇನೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!