ಪ್ರವಾಸ ಕಥನ

ಕಾಶೀ ಯಾತ್ರೆಯ ಅನುಭವ-1

ಬೆಂಗಳೂರಿನಿಂದ ದೂರ ಹತ್ತು ಹನ್ನೊಂದು ದಿವಸಗಳ ಕಾಲ ಸುಮ್ಮನೇ ಯಾವ ಉದ್ದೇಶವೂ ಇಲ್ಲದೇ ಭಗವಂತನ ನಾಮಸ್ಮರಣೆ ಮಾಡ್ತಾ ಏಕಾಂತದಲ್ಲಿ ಕಾಲ ಕಳೆಯೋ ಆಸೆಯಿಂದ ಹೊರಟಿದ್ದೆ. ನನ್ನ ಉದ್ದೇಶಕ್ಕೆ ಸಹಾಯ ಮಾಡೋ ಶಕ್ತಿ ಹಾಗೂ ವಿಶೇಷವಾದ ಒಂದಿಷ್ಟು infrastructure ಸಂಗತಿಗಳು ಇರೋದರಿಂದ ಕಾಶಿಯನ್ನು ಸೆಲೆಕ್ಟ್ ಮಾಡಿಕೊಂಡು ಹೊರಟಿದ್ದೆ. ಮಧ್ಯಾಹ್ನದ ಬಿಸಿಲಿನಲ್ಲಿ ವಿಮಾನದ ಮೆಟ್ಟಿಲಿಳಿದು ನಿಂತಾಗ ಕಾಶಿಯ ಹವೆ ಸ್ವಾಗತ ಕೋರುವ ರೀತಿಯಲ್ಲಿ ಆಹ್ಲಾದಕರವಾಗಿ ಬೀಸುತ್ತಿತ್ತು. ಮಹಿಂದ್ರಾ ಟ್ರಾಕ್ಟರ್ ಇಂಜಿನ್’ಗಳು ಆ ಪುಟ್ಟ ಏರ್’ಪೋರ್ಟ್’ನ ಒಳಗೆಲ್ಲ ಓಡಾಡುತ್ತ ಸರಂಜಾಮುಗಳನ್ನು ಹೊತ್ತೊಯ್ದು  ಟರ್ಮಿನಲ್ ಸೇರಿಸುತ್ತಿದ್ದವು. ಟ್ರಾಕ್ಟರ್’ಗಳನ್ನ ಇಂತಹ ಜಾಗಗಳಲ್ಲೂ ಬಳಸ್ತಾರೆ ಅನ್ನೋದು ನನ್ನ ಕಲ್ಪನೆಯನ್ನು ಮೀರಿದ್ದಾಗಿತ್ತು. ಇನ್ನೇನೇನು ವಿಚಿತ್ರಗಳನ್ನು ನೋಡುವುದಿದೆಯೋ ಈ ಊರಲ್ಲಿ ಅಂದುಕೊಂಡು ಟ್ಯಾಕ್ಸಿ ಹತ್ತಿ ನೇರವಾಗಿ ವಿಶ್ವನಾಥನ ಗುಡಿಯ ಮುಂದೆಯೇ ಹೋಗಿ ಇಳಿದು ನೋಡಿದರೆ ಎಲ್ಲಿ ಹೋಗಬೇಕು ಏನು ಮಾಡಬೇಕು ಎಂಬುದು ತೋಚಲಿಲ್ಲ. ಈ ಕಾಶಿಯಲ್ಲಿ ಎಲ್ಲೆಲ್ಲಿ ಏನೇನಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ, ವಸತಿ ಊಟ ಮುಂತಾದ ಯಾವುದೇ ವ್ಯವಸ್ಥೆ ಮಾಡಿಕೊಳ್ಳದೇ ಏಕ್ದಂ ಬಂದಿಳಿದಿದ್ದೆ. ಸುತ್ತಮುತ್ತಲಿನ ಅಂಗಡಿಗಳ ವ್ಯಾಪಾರಿಗಳು ”ಆವೋ ಸ್ವಾಮಿ”.. ”ರಾ ಸ್ವಾಮಿ…” ”ವಾಂಗೋ ಸ್ವಾಮಿ” ಅಂತ ಕರೆದು ಕರೆದು ತಮ್ಮ ಅಂಗಡಿಯ ವಸ್ತುಗಳನ್ನು ಮಾರಲಿಕ್ಕೆ ನೋಡಿದರು. ಇವರೆಲ್ಲಾ ನನ್ನನ್ನ ಸ್ವಾಮಿ ಅಂತ ಯಾಕೆ ಅಂತಿದ್ದಾರೆ ಅಂತ ಮೊದಲು ತಿಳಿಯಲಿಲ್ಲ. ಅಂಗಡಿಗಳ ಮೇಲೆ ಕಣ್ಣಾಡಿಸಿದರೆ ಬಹುತೇಕ ಅಂಗಡಿಗಳ ಮೇಲೆ ತೆಲುಗು-ತಮಿಳು ಲಿಪಿಯಲ್ಲಿ ತಪ್ಪು ತಪ್ಪಾಗಿ ಬರೆದಿದ್ದ ಬೋರ್ಡುಗಳು ನೇತಾಡುತ್ತಿದ್ದವು. ನನ್ನನ್ನು ಆಂಧ್ರದವನು ಅಂತ ಭಾವಿಸಿ ಸ್ವಾಮಿ ಅನ್ನುತ್ತಿದ್ದಾರೆ ಅಂತ ಅರ್ಥವಾಯ್ತು. ಇಲ್ಲಿಯೂ ಆಂಧ್ರದ ಯಾತ್ರಾರ್ಥಿಗಳೇ ಪ್ರಮುಖವಾಗಿ ಕ್ಷೇತ್ರಪೋಷಕರು ಅಂದುಕೊಳ್ಳುತ್ತಾ ಪೂರ್ವದ ಸಿಂಹದ್ವಾರದ ಬಳಿ ನಿಂತ ಪೋಲೀಸರ ಬಳಿ ಕಾಶಿಯ ಬಗ್ಗೆ ಸ್ವಲ್ಪ ಮಾಹಿತಿ ಪಡೆದೆ. ನಾನು ಸರಾಗವಾಗಿ ಮಾತಾಡುತ್ತಿದ್ದ ಭೋಪಾಲೀ ಹಿಂದೀಯನ್ನು ಕೇಳಿ ‘’ ಧಾಡ್ ಧಾಡ್ ಶುಧ್ ಹಿಂದೀ ಬೋಲ್ತೇ ಹೋ..ಭೈ, ಪತಾ ಹೀ ನಹೀ ಚಲ್ತಾ ಕಿ, ಮದ್ರಾಸೀ ಹೋ” ಅಂತ ಮೆಚ್ಚಿಕೊ೦ಡರು. ಅಲ್ಲೇ ಪಕ್ಕದಲ್ಲೇ ಕೇದಾರ್ ಘಾಟ್ ಇತ್ತು. ಆ ಪೊಲೀಸರಿಗೆ “ನನ್ನ ಬ್ಯಾಗ್ ಸ್ವಲ್ಪ ನೋಡಿಕೊಳ್ಳಿ.. ನಾನು ಸೂರ್ಯಾಸ್ತ ಆಗೋ ಮುಂಚೆ ಸ್ನಾನ ಮಾಡಿ ದರ್ಶನಕ್ಕೆ ಹೋಗಬೇಕು, ಹೊಟೆಲ್ಲು.. ರೂಮು ಅಂತೆಲ್ಲ ಹಡುಕುತ್ತಾ ಕೂತರೆ ಸಮಯ ಮೀರಿಹೋಗುತ್ತೆ” ಅಂತ ವಿನಂತಿಸಿದೆ. ಪಕ್ಕದಲ್ಲಿದ್ದ ಟೀ ಅಂಗಡಿಯಲ್ಲಿ ಇಡಲಿಕ್ಕೆ ಹೇಳಿ ಆ ಅಂಗಡಿಯ ಮಾಲೀಕನಿಗೆ ‘’ಏ ರಿಜ್ವಾನ್ ಇಸ್ ಸ್ವಾಮಿ ಕಾ ಬ್ಯಾಗ್ ರಖ್ ಲಿಯೋ.. ಘಾಟ್ ಮೆ ನಹಾಕರ್ ಆವೇ”  ಅಂತ ಆದೇಶಿಸಿದರು. ನಾನು ಸ್ವಾಮಿ ಅಲ್ಲ ಮತ್ತು ಮದ್ರಾಸೀ ಕೂಡ ಅಲ್ಲ ಅಂತ ಆ ಆಫೀಸರ್’ಗೆ ಹೇಳಬೇಕು ಅಂತ ಅನಿಸಿದರೂ ಅದರಿಂದ ಪ್ರಯೋಜನ ಇಲ್ಲ ಅಂತ ಸುಮ್ಮನಾದೆ. ಅಲ್ಲೇ ರಸ್ತೆಯಲ್ಲಿ ಅಂಗಿ ಬಿಚ್ಚಿ ಮೊಬೈಲ್ ಫೋನು.. ವ್ಯಾಲೆಟ್ ಎಲ್ಲಾ ಬ್ಯಾಗಿನಲ್ಲಿ ಹಾಕಿ ಒಂದು ಉತ್ತರೀಯ ಮಾತ್ರ ಹೆಗಲಮೇಲೆ ಒಗೆದುಕೊಂಡು ಗಂಗೆಯ ದಂಡೆಗೆ ಹೋಗುವ ದಾರಿ ಹುಡುಕಿಕೊಂಡು ಹೊರಟೆ. ಸಂಜೆಯ ಸೂರ್ಯ ಗಂಗೆಯನ್ನು ಕೆಂಪಗೆ ಮಾಡಿದ್ದ. ಎಡ-ಬಲಕ್ಕೆ ಎಷ್ಟು ದೂರಕ್ಕೆ ಕಣ್ಣು ಹಾಯಿಸಿದರೂ ಒಂದರ ಪಕ್ಕಕ್ಕೆ ಮತ್ತೊಂದರಂತೆ ಅಂಟಿಕೊಂಡ ಘಾಟ್’ಗಳ ಸಾಲು ಇತ್ತು. ದಂಡೆಯಲ್ಲಿ ನೀರಿನ ಅಲೆಗಳ ಮೇಲೆ ಕುಲುಕುತ್ತ ವಿಶ್ರಾಂತಿ ಪಡೆಯುತ್ತಿದ್ದ ದೋಣಿಗಳು ಹರಡಿದ್ದವು.

ಉತ್ತರೀಯವನ್ನು ಸೊಂಟಕ್ಕೆ ಬಿಗಿದು ನೀರಿನಲ್ಲಿ ಹಾರಿದ ಕೂಡಲೇ ಕೈ ಕಾಲುಗಳು ಸ್ವಾಭಾವಿಕವಾಗಿ ಪ್ರತಿಕ್ರಯಿಸಿ ದೇಹವನ್ನು ತೇಲಿಸತೊಡಗಿದವು. ಬಾಲ್ಯದಲ್ಲಿ ಕೃಷ್ಣಾ ನದಿಯಲ್ಲಿ ಈಜು ಕಲಿತದ್ದು. ಕಳೆದ ಹತ್ತು ವರ್ಷಗಳಿಂದ ಈಜದೇ ಇದ್ದರೂ, ಈಗ ಉದ್ದೇಶಪೂರ್ವಕವಾಗಿ ವಿಶೇಷ ಪ್ರಯತ್ನ ಮಾಡದೇ ಇದ್ದರೂ ದೇಹ ತನ್ನಷ್ಟಕ್ಕೆ ತಾನೇ ಸ್ಪಂದಿಸುತ್ತಿರುವುದು ನೋಡಿ ಸೋಜಿಗವೆನಿಸಿತು. survival instinct ಅಂದರೆ ಇದೇ ಅನ್ನಿಸುತ್ತೆ. ಸುಪ್ತ ಪೂರ್ವಾಭ್ಯಾಸ ಮತ್ತು ಜೀವದ ಸ್ವಾಭಾವಿಕ ಸ್ವಯಂರಕ್ಷಣಾ ತಂತ್ರಗಳು ಬುದ್ಧಿಯ ಗೊಡವೆಯಿಲ್ಲದೇ ಸ್ವಾಭಾವಿಕವಾಗಿ ಘಟಿಸುವುದು ಸ್ಪಷ್ಟವಾಗಿ ಗಮನಕ್ಕೆ ಬರತೊಡಗಿತ್ತು. ಪೂರ್ವಾಭ್ಯಾಸಗಳು ಕೇವಲ ಕಲಿತದ್ದು ಮಾತ್ರವಲ್ಲ ಆನುಜನ್ಮದ್ದು ಕೂಡ ಅನೇಕ ಇವೆ. ಹುಟ್ಟಿದ ಕೂಡಲೇ ಆಹಾರ ತಿನ್ನಬೇಕು ಅನ್ನೋ ತಿಳುವಳಿಕೆ ತರಬೇತಿ ಯಾವುದೂ ಇಲ್ಲದೆಯೇ ಮೊಲೆಯೂಡಲು ಪ್ರಾರಂಭಿಸುವುದೇ ಅಂತಹ ಪೂರ್ವಾಭ್ಯಾಸಗಳ ಪ್ರಾರಂಭ. ಅಳುವಿಕೆಯೂ ಕೂಡ. ಶರೀರದ ಪ್ರತಿ ಕಣಕಣವೂ ನೆನಪುಗಳನ್ನು ಹೊತ್ತುಕೊಂಡು ಬಂದಿದೆ. ಅಂತಹ ನೆನಪಿನ ಮೂಟೆಯಾದ ನಾವು ನಮ್ಮ ನೆನಪು ಇರುವುದು ಬರೀ ಮೆದುಳಲ್ಲಿ ಮಾತ್ರ ಇದೆ ಅಂದುಕೊಂಡು ಕೂತಿದ್ದೇವೆ.

ಕಾಶಿಯ ಬಗ್ಗೆ ಅನೇಕರು ಅನೇಕ ಬಗೆಯ ಕಥೆಗಳನ್ನು ಹೇಳಿದ್ದರು. ಈಜುವಾಗ ಕೈಗೆ ತಗಲುವಷ್ಟು ನದಿಯಲ್ಲಿ ಶವಗಳು ತೇಲಿ ಬರ್ತವೆ. ಎಲ್ಲೆಲ್ಲಿಯೂ ಕಸ ತುಂಬಿರುತ್ತೆ ಇತ್ಯಾದಿ ಇತ್ಯಾದಿ. ಆದರೆ ನೀರು ಸ್ವಲ್ಪ ಕೆಂಪಗಾಗಿದದ್ದನ್ನು ಬಿಟ್ಟರೆ ಉಳಿದಂತೆ ಎಲ್ಲೆಡೆ ಚೊಕ್ಕಟ ಮತ್ತು ಶುಭ್ರವಾಗಿ ಅಹ್ಲಾದಕರವಾಗಿತ್ತು. “ತುಂಬಾ ದೂರ ಹೋಗಬೇಡ, ನೀರಿನ ಸೆಳೆತ ತುಂಬಾ ಇದೆ” ಅಂತ ಪಕ್ಕದಲ್ಲೇ ಹಾದು ಹೋಗುತ್ತಿದ್ದ ದೋಣಿಯ ನಾವಿಕನೊಬ್ಬ ಎಚ್ಚರಿಸಿದ. ಅವನ ದೋಣಿಯನ್ನೇ ಹಿಂಬಾಲಿಸಿಕೊಂಡು ದಡ ಸೇರಿದರೆ ಅದು ಹರಿಶ್ಚಂದ್ರ ಘಾಟ್’ಗೆ ಬಂದು ತಲುಪಿತು. ಮೈ ಮೇಲಿನ ಬಟ್ಟೆಯನ್ನು ಬಿಚ್ಚಿ ಬಸಿಯುತ್ತಿದ್ದ ನೀರನ್ನು ಹಿಂಡಿ ಮತ್ತೆ ಅದನ್ನೇ ಉಟ್ಟುಕೊಂಡು ಅಲ್ಲೇ ನಿಂತು ಸೂರ್ಯನಿಗೆ ಅರ್ಘ್ಯ ಬಿಟ್ಟೆ. ಅಷ್ಟರಲ್ಲೇ ಹಣೆಗೆ ಏನೂ ಹಚ್ಚಿಕೊಂಡಿಲ್ಲವೆಂಬ ಸಂಗತಿ ನೆನಪಾಯ್ತು. ಅದೆಲ್ಲಾ ಬ್ಯಾಗ್’ನಲ್ಲೇ ಉಳಿದು ಹೋಗಿತ್ತು. ಗಡಿಬಿಡಿಯಲ್ಲಿ ಏನೂ ತಂದಿರಲಿಲ್ಲ. ಅರೇ.. ಆ ಅಂಗಡಿಯವನು ಬ್ಯಾಗ್ ವಾಪಸ್ ಕೊಡದೇ ಹೋದರೆ ಅಥವಾ ಅದರಲ್ಲಿರುವುದನ್ನೆಲ್ಲ ಎಗರಿಸಿಬಿಟ್ಟರೆ ಏನು ಗತಿ, ಯಾತ್ರಾಸ್ಥಳಗಳಲ್ಲಿ ಮೋಸಗಳು ಹೆಚ್ಚು. ಪೋಲೀಸರನ್ನೂ ನಂಬುವ ಹಾಗಿಲ್ಲ” ಅನ್ನೋ ಸಂಶಯ ಬಂದ ಕೂಡಲೇ ಚಿಂತೆಯಾಯ್ತು. ಬ್ಯಾಗಿನಲ್ಲಿ ಎರಡು ಜೊತೆ ಬಟ್ಟೆಯ ಹೊರತಾಗಿ ಮತ್ತೇನೂ ವಿಶೇಷ ಇರಲಿಲ್ಲ. ಆದರೆ ಹನ್ನೊಂದು ದಿನಕ್ಕಾಗುವಷ್ಟು ತಂದಿದ್ದ ದುಡ್ಡು, ಬ್ಯಾಂಕಿನ ಕಾರ್ಡುಗಳು, ಮೋಬೈಲು, ರಿಟರ್ನ್ ಟಿಕೆಟ್ಟು ಎಲ್ಲಾ ಅದರಲ್ಲೇ ಬಿಟ್ಟಿದ್ದೆ. ಕೈಯಲ್ಲಿದ್ದ ಉಂಗುರು ನೊಡಿಕೊಂಡು “ಹಾಗೇನಾದರೂ ನಡೆದರೆ ಊರಿಗೆ ವಾಪಸ್ ಹೋಗ್ಲಿಕ್ಕೆ ಇದು ಸಾಕು” ಅಂದುಕೊಂಡು ಬ್ಯಾಗಿನ ಚಿಂತೆ ಅಲ್ಲಿಗೇ ಕೈಬಿಟ್ಟೆ. ಅಲ್ಲೇ ಘಾಟ್’ನಲ್ಲಿ ಕುಳಿತಿದ್ದ ಸಾಧುವೊಬ್ಬನನ್ನು ಸ್ವಲ್ಪ “ಬಾಬಾ ವಿಭೂತಿ ಇದ್ದರೆ ಕೊಡು, ಸ್ನಾನಕ್ಕೆ ಬರುವಾಗ ತರುವುದು ಮರೆತು ಹೋಗಿತ್ತು” ಅಂತ ಕೇಳಿದ್ದಕ್ಕೆ ಆತ ತನ್ನ ಚೀಲದಿಂದ ತೆಗೆದು ಕೊಡಲಿಕ್ಕೆ ಒಪ್ಪಲಿಲ್ಲ. ಉರಿದು ಶಾಂತವಾಗಿದ್ದ ಚಿತೆಯ ಕಡೆಗೆ ಕೈ ತೋರಿಸಿ ಅಲ್ಲಿದೆ, ಎಷ್ಟು ಬೇಕಾದರೂ ತೊಗೊ ಅಂತ ಹೇಳಿದ. ಅದನ್ನೇ ಸ್ವಲ್ಪ ತೆಗೆದು ಅಭಿಂತ್ರಣ ಮಾಡಿ ತ್ರಿಪುಂಡ್ರ ಹಚ್ಚಿಕೊಂಡು ಸಂಧ್ಯೆಯ ವಂದನೆ ಮುಗಿಸಿದೆ.

ಅಲ್ಲಿಂದಲೇ ಒಳದಾರಿಯ ಮೂಲಕ ವಿಶ್ವನಾಥನ ದರ್ಶನಕ್ಕೆ ಬಂದರೆ ದಾರಿಯುದ್ದಕ್ಕೂ CRPF ಯೋಧರು ದೊಡ್ಡ ದೊಡ್ಡ ರೈಫಲ್’ಗಳನ್ನು ಗುರಿ ಹಿಡಿದು ನಿಂತಿದ್ದರು. ಬಾಗಿಲಲ್ಲಿ ನಿಂತ ಲೋಕಲ್ ಪೋಲೀಸರು ಜನರ ಮೈ ಕೈಯೆಲ್ಲ ಮುಟ್ಟಿ ಶರೀರದ ಸಂದುಗಳಲ್ಲೆಲ್ಲ ಕೈಯಾಡಿಸಿ ಪರೀಕ್ಷಿಸಿ ಒಳ ಬಿಡುತ್ತಿದ್ದರು. ಪಕ್ಕದಲ್ಲೇ ಹೆಂಗಸರ ಮೈ ಕೈ ಜಾಲಾಡಲಿಕ್ಕೆ ಬಟ್ಟೆಯಿಂದ ಮರೆ ಮಾಡಿದ ಕೊಣೆಯಲ್ಲಿ ಮಹಿಳಾ ಪೋಲೀಸರು ಕುಳಿತಿದ್ದರು. ಅವರ ಉದ್ಯೋಗದ ಅಸಹಾಯಕ ಸ್ಥಿತಿ ಮತ್ತು ದೇವರ ದರ್ಶನಕ್ಕೆ ಬರುವ ಭಕ್ತರ ಸ್ಥಿತಿ ಎರಡೂ ಹೇಳಿಕೊಳ್ಳಲಾಗದ ಅಸಹ್ಯ ಉಂಟುಮಾಡುವಂತಿದ್ದವು. ಇದೆಲ್ಲಕ್ಕೂ ಕಾರಣವಾಗುವುದು ಮನುಷ್ಯನ ಮತಭ್ರಾಂತ ಮೂರ್ಖತೆಯೇ ಅಂತ ಗೊತ್ತಿದ್ದರೂ “ವಿಶ್ವನಾಥಾ.. ಯಾಕೋ ಹಿಂಗೆ” ಅಂದು ವಿಶ್ವನಾಥನನ್ನೇ ಬೈದುಕೊಂಡು ಕಣ್ಣು ಮುಚ್ಚಿ ಮುಂದುವರೆದು ಜನರ ಕ್ಯೂನಲ್ಲಿ ಸೇರಿಕೊಂಡೆ. ಸರತಿಯಲ್ಲಿ ಮುಂದುವರೆದು ಗರ್ಭಗುಡಿಗೆ ತಲುಪುವಷ್ಟರಲ್ಲೇ ನೂಕುನುಗ್ಗಲು. ಗರ್ಭಗುಡಿಯಲ್ಲಿದ್ದ ತಗ್ಗಾದ ಗುಂಡಿಯಲ್ಲಿ.. ಸುರಿದ ಹಾಲು, ಹೂವುಗಳ ರಾಶಿಯ ಮಧ್ಯದಲ್ಲಿ ವಿಶ್ವನಾಥನ ಅರ್ಧಂಬರ್ಧ ದರ್ಶನ ಆಯಿತು. ಅಷ್ಟರಲ್ಲೇ ಪೋಲೀಸರು ರಟ್ಟೆ ಹಿಡಿದು ಎಳೆದು ಹೊರಗೆ ಹಾಕಿದರು. ಹಾಗೆ ಜನರನ್ನು ಹೊರಗೆ ಎಳೆದು ಹಾಕಲಿಕ್ಕಾಗಿಯೇ ಐದಾರು ಜನ ಪೋಲೀಸರು ಗರ್ಭಗುಡಿಯಲ್ಲಿ ನಿಂತಿದ್ದರು. ಆದರೆ ಅಲ್ಲಿ ಯಾವ ಅರ್ಚಕರೂ ಇರಲಿಲ್ಲ. ನನ್ನ ಹಾಗೆ ಸಿಕ್ಕಷ್ಟೇ ದರ್ಶನಕ್ಕೆ ತೃಪ್ತಿಪಟ್ಟುಕೊಳ್ಳದ ಹೆಂಗಸರು, ವೃದ್ಧರು ಮುಂತಾದವರು ಹೊರಗೆ ತಳ್ಳುವ ಪೋಲೀಸರನ್ನು ಲೆಕ್ಕಿಸದೇ ಆ ಗುಂಡಿಯಲ್ಲಿ ಹುದುಗಿದಂತಿದ್ದ ವಿಶ್ವನಾಥನ ಮೇಲೆ ತಾವು ತಂದಿದ್ದು ಹಾಲು, ಹೂವುಗಳನ್ನು ಹಾಕಿ ಕೈಯಿಂದ ಮುಟ್ಟಿ ನಮಸ್ಕಾರ ಮಾಡುತ್ತಿದ್ದರು. ಹಾಗೆ ಮಾಡುವಾಗ ಮುಕ್ಕರಿಸಿ ಆ ಗುಂಡಿಯಲ್ಲಿ ಬಿದ್ದರೆ ಏನಪ್ಪಾ ಗತಿ ಅಂದುಕೊಳ್ಳುತ್ತಾ ಹೊರಗೆ ಬಂದೆ. ಓಡಾಡುವವರಿಗೆ ದಾರಿ ಬಿಟ್ಟು ಗರ್ಭಗುಡಿಯ ಹೊರಹೋಗುವ ಬಾಗಿಲಿನ ಬಳಿ ಕುಳಿತುಕೊಂಡಮೇಲೆ ನೆನಪಾಯಿತು. ನಾನು ಆ ಗಡಿಬಿಡಿಯಲ್ಲಿ ದೇವರಿಗೆ ನಮಸ್ಕಾರವನ್ನೂ ಮಾಡಿರಲಿಲ್ಲ. ಕುಳಿತಲ್ಲೇ ಬಗ್ಗಿ ನೆಲಕ್ಕೆ ಹಣೆ ಹಚ್ಚಿ ”ವಿಸ್ಸಪ್ಪಾ.. ಬಂದಿದೀನಿ ನೋಡೋ” ಅನ್ನುವಷ್ಟರಲ್ಲಿ ಭಾವದ ಕಟ್ಟೆಯೊಡೆದು ಕಣ್ಣುಗಳು ತುಂಬಿ ಹರಿಯತೊಡಗಿದವು. ”ಇಲ್ಯಾಕೆ ಕೂತಿದ್ದೀಯ.. ಹೊರಗೆ ನಡಿ” ಅಂತ ಪೋಲೀಸಿನವನೊಬ್ಬನು ನನ್ನನ್ನು ಗದರಿಸುತ್ತಾ ಹತ್ತಿರಕ್ಕೆ ಬಂದು ನನ್ನ ಸ್ಥಿತಿಯನ್ನು ನೋಡಿ ಏನೂ ಮಾತಾಡದೆ ಹಿಂದಕ್ಕೆ ಹೋಗಿ ತನ್ನ ಜಾಗದಲ್ಲಿ ಕುಳಿತುಕೊಂಡ. ಒದ್ದೆಯಾಗಿದ್ದ ಕೆನ್ನೆ ಒರೆಸಿಕೊಂಡು ಕುಳಿತಲ್ಲಿಂದಲೇ ಸುತ್ತಮುತ್ತಲಿನ ಪರಿಸರ ಗಮನಿಸತೊಡಗಿದೆ. ಅಲ್ಲಿ ದರ್ಶನ ಮಾಡುತ್ತಿರುವವರು ಹಾಗೂ ಹೊರಬರುತ್ತಿರುವ ಎಲ್ಲರೂ ತಮ್ಮ ತಮ್ಮ ಶ್ರದ್ಧೆಗನುಸಾರವಾಗಿ ವರ್ತಿಸುತ್ತಿದ್ರು. ಈ ಜನ ಜಂಗುಳಿಯಲ್ಲಿ ಆರ್ತ, ಜಿಜ್ಞಾಸು, ಅರ್ಥಾರ್ಥಿ ಮತ್ತು ಜ್ಞಾನಿ -ಈ ನಾಲ್ಕೂ ಪ್ರಕಾರದ ಜನ ಇರ್ತಾರೆ. ಆದರೆ ಹೊರನೋಟಕ್ಕೆ ಎಲ್ಲರೂ ಒಂದೇ ರೀತಿ ಕಾಣ್ತಿದಾರೆ. ಬಾಹ್ಯದಲ್ಲಿ ಕಾಣದ ಈ ಭೇದ ಆಂತರ್ಯದಲ್ಲಿ ಎಷ್ಟು ನಿಚ್ಚಳವಾಗಿದೆ. ಇಲ್ಲಿ ಅವರು ಭಕ್ತಿಯಿಂದ ತಂದ ಹೂವು ಹಣ್ಣು ಹಾಲುಗಳನ್ನು ಸಮರ್ಪಿಸಲಿಕ್ಕೂ ಅವಕಾಶವಿಲ್ಲ. ತಳ್ಳಾಟದಲ್ಲಿ ಅದೆಲ್ಲಾ ನೆಲದ ಪಾಲಾಗುತ್ತಿದೆ. ಕಣ್ತುಂಬ ದೇವರನ್ನು ನೋಡಿ ಪ್ರಾರ್ಥಿಸಲಿಕ್ಕೂ ಅವಕಾಶ ಕೊಡದೇ ತಳ್ಳುತ್ತಿದ್ದಾರೆ. ಆದರೂ ಯಾರ ಮುಖದಲ್ಲೂ ಖೇದವಿಲ್ಲ. ಇಷ್ಟೆಲ್ಲ ಅನಾನುಕೂಲ, ಅವ್ಯವಸ್ಥೆ, ಅಡೆತಡೆಗಳಿದ್ದರೂ ಯಾರ ಬಗ್ಗೆಯೂ ಯಾರಿಗೂ ಕೋಪವಿಲ್ಲ. ಎಲ್ಲರ ಮುಖದಲ್ಲಿಯೂ ಧನ್ಯತಾಭಾವ ಇದೆ. ಸಂತೃಪ್ತಿಯಿದೆ. ಇದು ಶ್ರಧ್ದೆಯಲ್ಲದೇ ಮತ್ತೇನು..? ಯಾರೋ ತಲೆಯಲ್ಲಿ ತುಂಬಿದ ಸುಳ್ಳು ನಂಬಿಕೆಯಾಗಿದ್ದರೆ ಇದು ಇಷ್ಟು ಗಟ್ಟಿಯಾಗಿರುತ್ತಿತ್ತೇ..? ಎಂದೋ ನೆಗೆದುಬಿದ್ದು ಹೋಗಿರುತ್ತಿತ್ತು. ಶ್ರದ್ಧೆಗೂ ನಂಬಿಕೆಗೂ ಎಷ್ಟು ವ್ಯತ್ಯಾಸ ? ಅಂತೆಲ್ಲ ಶ್ರದ್ಧೆಯ ಮತ್ತು ನಂಬಿಕೆಯ ವಿಶ್ಲೇಷಣೆಗಳನ್ನು ಮಾಡಿಕೊಳ್ಳುವಾಗ ನಾನು ದರ್ಶನಕ್ಕೆ ಬರುವಾಗ ಕೈಯಲ್ಲಿ ಒಂದು ಹೂವನ್ನು ಕೂಡ ಹಿಡಿದುಕೊಂಡು ಬಂದಿರಲಿಲ್ಲ ಅನ್ನುವುದು ನೆನಪಾಗಿ guilt ಕಾಡತೊಡಗಿತು. ದೇವರ ಬಳಿಗೆ, ವಿಪ್ರರ ಬಳಿಗೆ ಹಾಗೂ ಯತಿಗಳ ಬಳಿಗೆ ಹೊಗುವಾಗ ಖಾಲಿ ಕೈಯಲ್ಲಿ ಹೋಗಬಾರದು ಅನ್ನುವುದು ಗೊತ್ತಿದ್ದರೂ ನನ್ನಲ್ಲಿ ಅದು ಆಚರಣೆಗೆ ಇಳಿದಿಲ್ಲ. ಪುಸ್ತಕದ ಮೂಲಕ ಕಲಿತ ವಿದ್ಯೆ ಆಚರಣೆಗೆ ಬರಲಿಕ್ಕೆ ಸಾಧ್ಯವಿಲ್ಲ. ನಿರಂತರ ಅಭ್ಯಾಸ ಮತ್ತು ಅದಕ್ಕೆ ತಕ್ಕ supportive system ಇಲ್ಲದೇ ಆಚರಣೆ ಮೈಗೂಡುವುದಿಲ್ಲ. ಕುರುಕ್ಷೇತ್ರದ ಯುಧ್ದಕ್ಕೂ ಮುಂಚೆ ಅರ್ಜುನ ಈ ಯುಧ್ಧದಿಂದಾಗುವ ವಿನಾಶಗಳ ಬಗ್ಗೆ ಚಿಂತಿತನಾಗಿ ಹೇಳುವುದು ಈ ಸಪೊರ್ಟ್ ಸಿಸ್ಟಮ್ಮಿನ ನಾಶದ ಬಗ್ಗೆಯೇ. ಅವನು ಸನಾತನ ಕುಲಧರ್ಮಗಳು ನಶಿಸಿಹೋದರೆ ಆಗುವ ಅನಾಹುತಗಳ ಬಗ್ಗೆ ಮಾತಾಡ್ತಾನೆ. ಅರ್ಜುನ ಎಷ್ಟು ವಿವೇಕವಂತನಾಗಿದ್ದ. ಬಹುಶಃ ಆ ವಿವೇಕದ ಅಧಿಕಾರವೇ ಅವನಿಗೆ ಯಾರಿಗೂ ಸಿಗದ ಉಪದೇಶಕ್ಕೆ ಅರ್ಹನನ್ನಾಗಿ ಮಾಡಿರಬಹುದು. ಭಾರತದ ಯುದ್ಧದ ನಂತರ ಎಷ್ಟು ಯುದ್ಧಗಳು, ಎಷ್ಟು ವಿನಾಶಗಳು, ಎಷ್ಟು ಅನಾಹುತಗಳು ನಡೆದು ಹೋಗಿವೆ. ಪುಸ್ತಕಗಳಿಂದ ಕಲಿಯುವ ವಿದ್ಯೆಗಿಂತ ಕುಟುಂಬದಲ್ಲಿ ಮುಂದುವರೆಸಿದ ಪರಂಪರೆಗಳೇ ಹೆಚ್ಚಿನದನ್ನು ಕಲಿಸಬೇಕು, ಮೈಗೂಡಿಸಬೇಕು. ನಮ್ಮಲ್ಲಿ ಎಷ್ಟು Deformation ಗಳು Reformation ಗಳು ನಡೆದು ಏನೇನೆಲ್ಲ discontinue ಆಗಿಹೋಗಿದೆ. ಎಷ್ಟೆಷ್ಟು ನಷ್ಟ ಮಾಡಿದೆ.? ನನ್ನ ಇವತ್ತಿನ ಈ ಚರ್ಯೆಗೆ ನನಗೆ ನನ್ನ ಪೂರ್ವಿಕರಿಂದ ಬರಬೇಕಾದದ್ದು ಬಾರದೇ ಇದ್ದದ್ದೇ ಕಾರಣ” ಅಂತೆಲ್ಲ ಮಾಡಿದ ತಪ್ಪಿಗೆ ಮನಸ್ಸು ನೆಪಗಳನ್ನು ಹುಡುಕಿಕೊಳ್ಳತೊಡಗಿತ್ತು.

ಥತ್. ಇದೆಲ್ಲಾ ಏನೂ ಇಲ್ಲ. ನನ್ನಲ್ಲಿ ಇರಬೇಕಾದಷ್ಟು ಎಚ್ಚರ ಇರಲಿಲ್ಲ ಅಷ್ಟೇ. I was just carried away by the compulsion. ಇಷ್ಟಕ್ಕೆಲ್ಲ .. ಅರ್ಜುನ, ಕುಲಧರ್ಮ, ಕುಲನಾಶ, ಪರಂಪರಾ ನಾಶ, ಕೌಟುಂಬಿಕ ಹಿನ್ನೆಲೆ ಅಂತೆಲ್ಲ ನೆಪ ಹುಡುಕಬಾರದು, ನಿನ್ನಲ್ಲೇ ಶ್ರದ್ಧಾಲೋಪವಾಗಿದೆ, one blames another to escape from the reality and Blaming is endless process ಅಂತ ಯಾವಾಗಲೂ ಬೇರೆಯವರಿಗೆ ಹೇಳೋ ನಾನೇ ಈಗ ಇತಿಹಾಸವನ್ನ ದೂರೋದು ಎಷ್ಟು ಸರಿ ಅಂತ ವಿವೇಕ ಹೇಳಿತು. ಈ ಮನಸ್ಸು ವಿವೇಕಗಳ ಚರ್ಚೆಯನ್ನು ಬದಿಗೊತ್ತಿ “ವಿಶ್ವನಾಥ ! ತಪ್ಪಾಯ್ತೋ, ನಾಳೆಯಿಂದ ಮರೆಯೋದಿಲ್ಲ ಕಣಪ್ಪಾ” ಅಂದು ಅವನು ಏನಂತಾನೆ ಅಂತ ನಾನು ಕುಳಿತಲ್ಲಿಂದಲೇ ಗರ್ಭಗುಡಿಯನ್ನು ಇಣುಕಿ ನೋಡಿದರೆ ಅಲ್ಲಿ ಜನಜಂಗುಳಿ ವಿಶ್ವನಾಥನನ್ನು ತಮ್ಮೊಳಕ್ಕೆ ಸೇರಿಸಿಕೊಂಡೇ ಬಿಡ್ತಾರೇನೋ ಅನ್ನೋ ಹಾಗೆ ಬಾಚಿ ಬಾಚಿ ತಬ್ಬಿ ಮುಟ್ಟಿ ತಮ್ಮ ಆಸೆ ತೀರಿಸಿಕೊಳ್ಳುತ್ತಿದ್ದರು. ಬಗ್ಗಿನಿಂತು ಚೈತನ್ಯಲಿಂಗವನ್ನು ಮುಟ್ಟಲು ಹವಣಿಸುತ್ತಿದ್ದವರ ಮತ್ತು ಅವರನ್ನು ಹೊರಕ್ಕೆ ತಳ್ಳುತ್ತಿದ್ದ ಪೋಲೀಸರ ಪೃಷ್ಠಗಳಷ್ಟೇ ನನಗೆ ನಾನು ಕುಳಿತಲ್ಲಿಂದ ಕಾಣುತ್ತಿದ್ದವು.

ವಿಶ್ವನಾಥನ ಗುಡಿಯಿಂದ ಹೊರಬಂದು ನಾನು ಬ್ಯಾಗ್ ಇಟ್ಟಿದ್ದ ಅಂಗಡಿಯನ್ನು ಹುಡುಕಿಕೊಂಡುಹೋಗಿ ನೋಡಿದರೆ ಅದರ ಮಾಲೀಕ ರಿಜ್ವಾನ್ ನಗುಮುಖದಿಂದ ಬ್ಯಾಗ್ ಹಿಂದಿರುಗಿಸಿದ. “ಅದರಕ್ ವಾಲೀ ಚಾಯ್” ಕುಡೀ ಅಂತ ಬಲವಂತ ಮಾಡಿದ. ನಾನು ಚಹಾ-ಕಾಫೀ ಎಲ್ಲಾ ಬಿಟ್ಟಿದೀನಿ ಅಂತ ಹೇಳುವಷ್ಟರಲ್ಲಿ ಅವನು ನನ್ನ ಕೈಯಲ್ಲಿ ಚಹಾದ ಕುಡಿಕೆ ಇಟ್ಟಾಗಿತ್ತು. ಕೈಗೆ ಬಂದ ಅನ್ನವನ್ನು ತಿರಸ್ಕರಿಸೋದು ಧರ್ಮವಲ್ಲವಾದ್ದರಿಂದ ಕುಡಿದು ಮುಗಿಸಿದೆ. ಹಸೀ ಶುಂಠಿ ಹಾಕಿದ ಚಹಾ ಅದ್ಭುತವಾಗಿತ್ತು. ಮಣ್ಣಿನ ಕುಡಿಕೆಯಲ್ಲಿ ಹಾಕಿದ್ದರಿಂದಲೋ ಏನೂ.. ವಿಶೇಷ ಸ್ವಾದ ಇತ್ತು. ನಾಳೆ ಬರುವುದಾಗಿ ಅವನಿಗೆ ತಿಳಿಸಿ ಹೊಟೆಲು ಹುಡುಕಿಕೊಂಡು ಹೊರಟೆ. ಸ್ನಾನ ಮಾಡುವಾಗ ನೋಡಿದ ದಶಾಶ್ವಮೇಧ ಘಾಟ್ ನನಗೆ ಇಷ್ಟವಾಗಿತ್ತು. ಅಲ್ಲೇ ಪಕ್ಕದಲ್ಲೇ ತಾರಕೇಶ್ವರನ ಗುಡಿ ಹಾಗೂ ಹರಿಶ್ಚಂದ್ರ ಘಾಟ್ ಇದ್ದವು. ಮುಂದಿನ ಹನ್ನೊಂದು ದಿನಗಳ ಕಾಲ ಕಾಲ್ನಡಿಗೆಯಲ್ಲೇ ಅಲ್ಲಿಗೆ ಹೋಗಿ ಬರುವಷ್ಟು ಹತ್ತಿರದಲ್ಲಿ ಹೊಟೆಲು ಹುಡುಕತೊಡಗಿದೆ. ಇದ್ದ ಒಂದೆರಡು ಹೊಟೆಲುಗಳು ವಿಪರೀತ ಗಲೀಜಾಗಿದ್ದವು. ಸ್ವಲ್ಪ ಸ್ವಚ್ಛ ಇದ್ದ ಹೊಟೆಲಿನಲ್ಲಿ ನನಗೆ ಮಂಚ ಬೇಡ, ನೆಲದ ಮೇಲೆ ಚಾಪೆ ಹಾಕಿಕೊಡು ಅಂದದ್ದಕ್ಕೆ ಅವರು ಒಪ್ಪಲಿಲ್ಲ. ಎಷ್ಟೋ ಜನ ಬಳಸಿದ ಹಾಸಿಗೆ ನನಗೆ ಒಪ್ಪಿಗೆಯಾಗದ್ದರಿಂದ ಹೊರಟು ಬಂದೆ. ಬೇರೆ option ಗಳಿರಲಿಲ್ಲ. ವಿಶ್ವನಾಥನ ಗುಡಿಯಿಂದ ಘಾಟ್’ಗಳಿಂದ ದೂರದಲ್ಲಿ ಒಳ್ಳೆಯ ಹೊಟೆಲ್’ಗಳಿದ್ದವು. ಅಷ್ಟು ದೂರದಿಂದ ಪ್ರತಿದಿನ ಓಡಾಡುವುದರಲ್ಲೇ ಸಮಯ ಹಾಳು ಮಾಡಲು ಇಷ್ಟವಿರಲಿಲ್ಲ. ಏನು ಮಾಡುವುದು ಅಂತ ತೋಚದೇ ಬ್ಯಾಗ್ ಎಳೆಯುತ್ತಾ ಪೇಟೆಯಲ್ಲಿ ಒಂದು ಸುತ್ತು ಹಾಕಿ ಬಂದೆ. ಆಗಲೇ ಸೂರ್ಯ ಮುಳುಗಿ ಬೀದಿ ದೀಪಗಳೆಲ್ಲ ಬೆಳಗಿ, ಕಾಶಿಯ ಗೃಹಸ್ಥರುಗಳು ಮನೆ ತಲುಪುತ್ತಿದ್ದರು. ಹಿಂಡು ಹಿಂಡು ಹುಡುಗಿಯರು ಚಾಟ್ ತಿನ್ನುವುದರಲ್ಲಿ ತಲ್ಲೀನರಾಗಿದ್ದರು. ಎಲ್ಲಿ ನೋಡಿದರಲ್ಲಿ ವಿಶಿಷ್ಟ ಸುಂದರ ಮುಖಚರ್ಯೆಯ ಹೆಂಗಸರುಗಳು. ನನಗೆ ದಿಲ್ಲಿಯಲ್ಲಿರುವ ಬನಾರಸದವಳೇ ಆದ ನನ್ನ ಗೆಳತಿಯ ನೆನಪಾಯ್ತು. ಯಾವಾಗಲೂ ಆಲಿಯಾ ಭಟ್’ಳಂತೆ ಪಟ ಪಟನೇ ಮಾತಾಡುತ್ತಲೇ ಇರುವ ಅವಳಿಗೆ ಕರೆ ಮಾಡಿ ”ನೋಡೇ ಸುಂದ್ರೀ .. ನಿಮ್ಮೂರಿಗೆ ಬಂದಿದೀನಿ, ಇಲ್ಲಿ ಎಲ್ಲಿ ನೋಡಿದ್ರೂ ಬರೀ ಹುಡ್ಗೀರು ಕಾಣ್ತಾರಲ್ಲ. ಅದೂ ಕೂಡ ಎಕ್ ದಂ.. ಝಕಾಸ್” ಅಂದದಕ್ಕೆ ಅವಳು ಗಹಗಹಿಸಿ ನಕ್ಕು ”ನಮ್ಮೂರಂದ್ರೆ ಏನಂದುಕೊಂಡಿದೀಯಾ.. ಅಂತ ಜಂಬ ಮಾಡತೊಡಗಿದ್ಲು. “ಅಷ್ಟೆಲ್ಲ.. ಸೀನ್ ಇಲ್ಲ.. ಸುಮ್ನೆ ಸ್ವಲ್ಪ ಹೊಗಳಿದ್ದಕ್ಕೆ ಜಾಸ್ತಿ ಸ್ಕೋಪ್ ತೊಗೋಬೇಡ” ಅಂದಕೂಡಲೇ ಅವಳು ನನ್ನ ಮೇಲೆ ತಿರುಗಿಬಿದ್ದು.. ”ಏ ಬೇಕೂಫಾ.. ಮೊದ್ಲೇ ಹೇಳಿದ್ರೆ ನಾನು ನಾಲ್ಕು ದಿನ ಕೆಲಸಕ್ಕೆ ರಜೆ ಹಾಕಿ ಊರಿಗೆ ಬರ್ತಿದ್ದೆ. ಈ ವೀಕೆಂಡ್ ವರೆಗೆ ಅಲ್ಲೇ ಇರು. ನಾನೂ ಬರ್ತೀನಿ.. ನಿಂಗೆ ಕಾಶೀ ಪೂರ್ತಿ ತೋರಿಸ್ತೀನಿ. ಖೂಬ್ ಖಾಯೆಂಗೆ, ಘೂಮೇಂಗೆ” ಅಂತ ಆಸೆ ಹುಟ್ಟಿಸತೊಡಗಿದಳು. ಅದೆಲ್ಲಾ ಬೇಡ ಮಾರಾಯ್ತಿ, ನಾನು ದಿಲ್ಲಿಗೆ ಬಂದಾಗ ಅದೆಲ್ಲಾ ಮಾಡೋಣ.. ನನಗೋಸ್ಕರ ರಜೆ ಹಾಕಿ ನೀನು ಬರಬೇಡ, ನಾನು ಇಲ್ಲಿಗೆ ಬಂದ ಉದ್ದೇಶ ಬೇರೆ ಅನ್ನೋದನ್ನು ತಿಳಿಸಿ, ವಾಸಕ್ಕೆ ಒಳ್ಳೆಯ ಹೋಟೆಲು ಯಾವುದು ಹೇಳು ಅಂದೆ. ಅವಳು ಸಿಕ್ಕಾಪಟ್ಟೆ ಬೈಯತೊಡಗಿದಳು. ”ಎಲ್ಲಿದೀಯ ಅಂತ ಹೇಳು, ಅಪ್ಪನಿಗೆ ಫೋನ್ ಮಾಡ್ತೀನಿ, ಮನೆಗೆ ಕರ್ಕೊಂಡು ಹೋಗ್ತಾರೆ, ನಮ್ಮೂರಿಗೆ ಬಂದು ನೀನು ಹೊಟೆಲಲ್ಲಿ ಇರ್ತೀನಿ ಅಂತೀಯಲ್ಲೋ .. ಪಾಗಲ್..” ಅಂತ ತರಾಟೆಗೆ ತೆಗದುಕೊಳ್ಳತೊಡಗಿದಳು. ನನಗೆ ಇಲ್ಲಿ ವಾಸಕ್ಕೆ ಬೇರೆ ವ್ಯವಸ್ಥೆ ಇದೆ, ಹೊಟೆಲ್ಲಿನ ಬಗ್ಗೆ ಸುಮ್ಮನೇ ವಿಚಾರಿಸಿದ್ದು” ಅಂತ ಸುಳ್ಳು ಹೇಳಿ ಅವಳನ್ನು ಸುಮ್ಮನಾಗಿಸುವುದರಲ್ಲಿ ಸಾಕು ಸಾಕಾಗಿ ಹೋಯ್ತು. ವಾಸಕ್ಕೆ ವ್ಯವಸ್ಥೆ ಆಗ್ತದೆ ಅಂತ ಗೆಳತಿಗೆ ಸುಳ್ಳು ಹೇಳಿದ್ದರೂ ನನ್ನ ತಲೆಯಲ್ಲಿ ಯಾವುದೇ ಯೋಜನೆಗಳಿರಲಿಲ್ಲ. ಕೈಯಲ್ಲಿನ ಫೋನು ಸಮಯ ಸಂಜೆಯ ಏಳು ಗಂಟೆ ಅಂತ ತೋರಿಸುತ್ತಿತ್ತು.

# ಮುಂದುವರೆಯುವುದು.

Facebook ಕಾಮೆಂಟ್ಸ್

ಲೇಖಕರ ಕುರಿತು

Dattaraj D

ದತ್ತರಾಜ್ ಹುಟ್ಟಿದ್ದು 1986, ಧಾರವಾಡ ಜಿಲ್ಲೆಯ ಕುಗ್ರಾಮವೊಂದರಲ್ಲಿ. ಬೆಳೆದದ್ದು ಆಂಧ್ರಪ್ರದೇಶ ತಮಿಳು ನಾಡು ಮಹಾರಾಷ್ಟ್ರ ಮುಂತಾದೆಡೆ. ಶಾಲಾ ಕಾಲೇಜುಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿಲ್ಲ. ಮೌಖಿಕ ಗುರುಶಿಷ್ಯ ಪರಂಪರೆಯಲ್ಲಿ ಋಗ್ವೇದವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದಾರೆ. ಬೀದರ್ ಜಿಲ್ಲೆಯ ಕೇಂದ್ರ ಸರ್ಕಾರದ ಅನುದಾನಿತ ಗುರುಕುಲದಲ್ಲಿ ಋಗ್ವೇದ ಅದ್ಯಾಪಕರಾಗಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಉದ್ಯೋಗ ತ್ಯಜಿಸಿ ಕಳೆದ ನಾಲ್ಕೈದು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಗೆಳೆಯರ ಜೊತೆ ಸೇರಿ ಕಟ್ಟಡ ನಿರ್ಮಾಣ ಸಂಸ್ಥೆ ನಡೆಸುತ್ತಾರೆ. ಕನ್ನಡ, ತೆಲುಗು, ಹಿಂದೀ ಮತ್ತು ಸಂಸ್ಕೃತ ಭಾಷೆಗಳಲ್ಲಿ ಬರವಣಿಗೆ ಮಾಡುತ್ತಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!