ಕಥೆ

ಮಾಯೆಯ ಮುಸುಕು

ನಸುಗತ್ತಲೆಯ ಕೋಣೆ. ಸರಳುಗಳ ಮಧ್ಯೆ ತೂರಿ ಬಂದು, ಕತ್ತಲನು ಬಡಿದೋಡಿಸುವಷ್ಟು ಅವಕಾಶ ಬೆಳಕಿಗಿದ್ದರೂ ಪಾಪಿಯ ಬಳಿ ಸುಳಿಯಲು ಇಷ್ಟವಿಲ್ಲವೇನೋ ಎಂಬಂತಹ ಭಾವ. ” ಅಯ್ಯೋ, ಇವಳು ಹೆತ್ತ ಮಗಳನ್ನೇ ಕೊಂದು ಜೈಲಿಗೆ ಬಂದಿದಾಳೆ. ಏನು ಕಾಲ ಬಂತಪ್ಪ” ಎದುರಿನಲ್ಲಿ ಯಾರೋ ಹೇಳಿಕೊಂಡು ಹೋದರು. ಮಾತು ಕಾದ ಸೀಸದಂತೆ ಕಿವಿಯೊಳಗೆ ಇಳಿಯುತ್ತಿದ್ದರೂ ಕಂಬನಿ ಮಿಡಿಯಲೂ ಸಾಧ್ಯವಾಗದಷ್ಟು ಸೋತಿದೆ ಮಾತೃಹೃದಯ, ಪಾಪಿಹೃದಯ!!. ಮಗಳನ್ನು ಕೊಂದಿದ್ದಕ್ಕೆ ಅವಳಿಗೆ ಸಂತಾಪವಿಲ್ಲ. ಅಪ್ಪ ಅಮ್ಮನ ಕನಸುಗಳನ್ನು ಕೊಂದಿದ್ದಕ್ಕೆ ಅವಳನ್ನು ಅವಳು ಕ್ಷಮಿಸಿಕೊಳ್ಳಲಾರಳು.ಆದರೆ ಈ ಮಹಾಪರಾಧಕ್ಕೆ ಯಾವುದೇ ಜೈಲು ಶಿಕ್ಷೆಯೂ ಇಲ್ಲ. ಗಹಗಹಿಸಿ ನಕ್ಕಳು. ನಗುವಲ್ಲದ ನಗು. ಮನದೊಳಗಿನ ದುಃಖವನ್ನು ಅಳು ಹೊರ ಹಾಕಲಾಗದ ಪರಿಸ್ಥಿತಿಯಲ್ಲಿ ಮರಗಟ್ಟಿ ಕೊರಡಿನಂತಾದ ಗಂಟಲನ್ನು ಸರಿಪಡಿಸಿಕೊಳ್ಳಲೇ ಬೇಕಾದ ಸಂದರ್ಭದಲ್ಲಿ ಒಂದಿನಿತೂ ಕಂಬನಿಯಿಲ್ಲದೆ ನೋವನ್ನು ಹೊರ ಹಾಕುವ ವಿಕಾರ ನಗು.ಮತ್ತೆ ಅಳು. ಸಂದರ್ಭದ ಪರಿವೆಯೇ ಅರಿವಿಲ್ಲದೇ,’ ಮಗಳನ್ನು ಕೊಂದ ಕೊಲೆಗಾತಿ’ ಎಂದು ಆಡಿಕೊಳ್ಳುವವರ ಮುಂದೆ ಹೆತ್ತ ಕರುಳಿನ ಸಂಕಟವೆಲ್ಲವನ್ನು ಒಮ್ಮೆಲೇ ಕಕ್ಕುವಷ್ಟು ಭೀಕರವಾಗಿ.

ಅಪ್ಪ ಅಮ್ಮನ ಮುದ್ದಿನ ಮಗಳು ಚೈತ್ರ. ಹಿರಿಯ ಮಗಳಾದ ಕಾರಣ ಅವಳ ಇಬ್ಬರು ತಂಗಿಯರಿಗಿಂತಲೂ ಹೆಚ್ಚಿನ ಪ್ರೀತಿ ಇವಳ ಪಾಲಿಗೆ. ನಿರ್ಜೀವ ವಸ್ತುಗಳನ್ನೂ ಮಾತನಾಡಿಸ ಬಲ್ಲಳು ನನ್ನ ವಾಚಾಳಿ ಮಗಳು ಎಂದು ಅಮ್ಮ ಪ್ರೀತಿಯಿಂದ ತಲೆ ಮೊಟಕಿದರೆ ಎಲ್ಲಿಲ್ಲದ ಹಿಗ್ಗು ಚೈತ್ರಳಿಗೆ. ಶಾಲಾ ಚಟುವಟಿಕೆಗಳಲ್ಲಿ ಸದಾ ಮುಂದಿರುತ್ತಿದ್ದ ಇವಳು ಹಲವು ಶಿಕ್ಷಕರಿಂದ ಸೈ ಎನಿಸಿಕೊಂಡಿದ್ದಳು. ಭಾಷಣ ಚರ್ಚಾಸ್ಪರ್ಧೆ ಯಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ಎಲ್ಲಾ ಬಹುಮಾನಗಳನ್ನು ತನ್ನದಾಗಿಸಿಕೊಳ್ಳುತ್ತಿದ್ದಳು..ಮನೆಯಲ್ಲಿ ಶೋಕೆಸಿನಂತೆ ಇದ್ದ ಸಣ್ಣ ಕಪಾಟಿನಲ್ಲಿ ಮಗಳ ಪದಕ ಪಾರಿತೋಷಗಳನ್ನು ನೋಡುತ್ತಾ ” ವರದಕ್ಷಿಣೆ ಕೊಟ್ಟು ಮದುವೆ ಮಾಡಿಸಲಾರೆ ಮಗಳೇ, ಇವುಗಳಲ್ಲೇ ನಿನ್ನ ಹಿರಿತನ ವರ್ಣಿಸುವೆ” ಎಂದು ಹೇಳಿದರೆ ಒಂದಿಷ್ಟೂಲಜ್ಜೆಯಿಲ್ಲದೇ ” ಮದುವೆಯಂತಾದರೆ ಪುರುಷನನ್ನೇ ಮದುವೆಯಾಗುವೆ. ಕೊಂಡುಕೊಳ್ಳುವ ವಸ್ತುವಿನಂತಹವರನ್ನು ಮದುವೆಯಾಗಬೇಕಾದ ಪರಿಸ್ಥಿತಿ ಬಂದರೆ ಮದುವೆಯೇ ಬೇಡ. ” ಎಂದು ಹೇಳುವ ಮಗಳನ್ನು ತಂದೆ ಹೆಮ್ಮೆಯಿಂದ ನೋಡಿದರೆ ಏನು ಗಂಡುಬೀರಿ ಹುಡುಗಿಯಿವಳು ಎಂದು ತಾಯಿ ನಿಟ್ಟುಸಿರು ಬಿಡುತ್ತಿದ್ದರು. ವರದಕ್ಷಿಣೆ ವಿರುದ್ಧ ಎಷ್ಟೇ ಹೊಸ ಹೊಸ ಕಾಯಿದೆಗಳು ಜಾರಿಗೆ ಬಂದರೂ ಕಡ್ಡಾಯವಾಗಿ ವಧುವಿಗೆ ವರನಿಗೆಂದು ಇಷ್ಟು ಚಿನ್ನ, ಬೆಳ್ಳಿ ಹಾಕತಕ್ಕದ್ದು ಎಂದೆಲ್ಲಾ ಹೇಳಿ ಅಪರೋಕ್ಷವಾಗಿ ವರದಕ್ಷಿಣೆ ಪಡೆಯುವ ದೌರ್ಜನ್ಯವನ್ನು ತಡೆಯಲಾದೀತೇ?.

ಹದಿನೆಂಟರ ಹರೆಯದ ನವ ಯೌವ್ವನೆ ಚೈತ್ರ ದಿನ ದಿನಕ್ಕೂ ಚಂದಿರನಂತೆ ಬೆಳಗುತ್ತಿದ್ದಳು. ತಾರುಣ್ಯದ ವಯಸ್ಸಿನಲ್ಲಿ ಎಲ್ಲವೂ ಕುತೂಹಲವೇ. ತಾನು, ತನ್ನ ಬದುಕು, ತನ್ನ ಜೀವನ ತನ್ನ ನಿರ್ಧಾರ ಎನ್ನುವ ಮೊಂಡು ವಾದಗಳು ಅವಳಲ್ಲಿಯೂ ಮೊಳಕೆಯೊಡೆಯುತ್ತಿದ್ದ ಸಮಯ. ಮನಸ್ಸು ವಿವೇಕವನ್ನು ಮರೆತಿದೆ ಎಂದು ಅರಿವಾಗುವ ಮೊದಲೇ ಊರಿಗೆ ಆಗಂತುಕನಾಗಿ ಬಂದಿದ್ದ ಮಹೇಶನನ್ನು ಆರಾಧಿಸತೊಡಗಿದಳು. ತನ್ನ ಗೆಳೆಯನ ಮನೆಯಲ್ಲಿ ಕೆಲವು ದಿನಗಳ ಕಾಲ ಉಳಿಯಲೆಂದು ಬಂದಿದ್ದ ಮಹೇಶ. ಒಂದು ದಿನ ಕಾಲೇಜಿನಿಂದ ಬರುತ್ತಿರುವಾಗ ದಾರಿಯಲ್ಲಿ ಆಕಸ್ಮಿಕವಾಗಿ ಅವನನ್ನು ಭೇಟಿಯಾದಳು. ಆ ಹಳ್ಳಿ ಪರಿಸರವನ್ನು ಪಟ್ಟಣಿಗನಾದ ತನಗೆ ತೋರಿಸಬೇಕೆಂದು ಮಹೇಶ ಇನ್ನಿಲ್ಲದೆ ಕೇಳಿಕೊಂಡಾಗ ಮನಸ್ಸಿಲ್ಲದ ಮನಸ್ಸಿನಿಂದ ಹೊರಟಳು. ತಾನು ಅನಾಥನೆಂದೂ ಬೆಂಗಳೂರಿನಲ್ಲಿ ಸಣ್ಣ ಉದ್ಯೋಗದಲ್ಲಿ ಇರುವೆನೆಂದೂ ತನ್ನ ಬಗ್ಗೆ ಹೇಳಿಕೊಂಡ. ಈರ್ವರ ಇಷ್ಟ, ಆಸಕ್ತಿಗಳ ಕುರಿತು ವಿಚಾರ ವಿನಿಮಯದಿಂದ ಆರಂಭವಾಯಿತು ಮಾತುಕತೆ. ಮಹೇಶ ಸರಸಿ. ಅವನ ಸ್ನೇಹಮಯ ಮಾತುಕತೆಗಳು ಅವಳನ್ನು ಸೆಳೆಯಿತು. ಅವನ ಮೋಹಕ ನಗು, ನಿಲುವು, ವ್ಯಕ್ತಿತ್ವ ಎಲ್ಲವೂ ಅವಳ ಮನಪಟಲದಲ್ಲಿ ಅಚ್ಚಾದವು. ವಯಸ್ಸಿನ ಮಾಯೆ! ಚೈತ್ರಳಿಗಂತೂ ನಿಂತಲ್ಲಿ ,ಕುಳಿತಲ್ಲಿ , ಕೊನೆಗೆ ಕನಸಿನಲ್ಲಿಯೂ ಅವನದ್ದೇ ಧ್ಯಾನ. ವಯಸ್ಸಿನ ಮಾಯೆಗೆ ಬಲಿಯಾಗಿ ಉಂಟಾದ ಆಕರ್ಷಣೆಯನ್ನೇ ಪ್ರೀತಿ ಎಂದು ಭ್ರಮಿಸತೊಡಗಿದಳು. ಅವನು ದೂರದ ಬೆಂಗಳೂರಿನಲ್ಲಿದ್ದರೂ ವಾರಕ್ಕೆರಡು ಬಾರಿಯಾದರೂ ಫೋನಿನಲ್ಲಿ ಮಾತನಾಡುತ್ತಿದ್ದರು. ನಿರ್ಧಾರ ತೆಗೆದುಕೊಳ್ಳಲು ಅಸಮರ್ಥಳಾದ ವಯಸ್ಸಿನಲ್ಲಿಯೇ ಮದುವೆಯಾದರೆ ಮಹೇಶನನ್ನೇ ಎಂದು ಬದುಕಿನ ದೊಡ್ಡ ನಿರ್ಣಯವನ್ನು ತೆಗೆದುಕೊಂಡಳು. ಅದು ಅವಳೂ ಅವನೂ ಸೇರಿ ತೆಗೆದುಕೊಂಡ ನಿರ್ಧಾರ. ಅವಳಿಗೆ ಗೋಚರವಾಗುತ್ತಿದ್ದದ್ದು ಅವನು, ಅವಳು ಅವಳ ಕನಸಿನ ಬದುಕು. ಅಪ್ಪ ಅಮ್ಮನ ಯೋಚನೆಗಳು, ಅವರ ಕನಸುಗಳು ಎಲ್ಲವೂ ಗೌಣವಾಯಿತು ಮಾಯೆಯ ಮುಸುಕಲ್ಲಿ. ದ್ವಿತೀಯ ಪಿಯುಸಿ ಫಲಿತಾಂಶದ ಮಾರನೇ ದಿನವೇ ಅಪ್ಪನೆದುರು ತನ್ನ ಪ್ರೇಮ ನಿವೇದನೆ ಮಾಡಿದಳು. ಮಗಳ ಯೋಚನೆಗೆ ಬೇಸತ್ತ ಅವರು ಬುದ್ಧಿವಾದ ಹೇಳಲು ಪ್ರಯತ್ನಿಸಿದರು. ಅವನನ್ನೇ ಮದುವೆಯಾಗುವುದಾದರೆ ನಮ್ಮೊಂದಿಗಿನ ಸಂಬಂಧವನ್ನು ಮರೆಯಬೆಕಾದೀತೆಂದು ಬೆದರಿಸಿದರು. ಪರಿಣಾಮ ಮಾತ್ರ ಶೂನ್ಯ. ಹೆತ್ತವರ ಆಸೆ ಆಕಾಂಕ್ಷೆಗಳ ಗೋರಿಯ ಮೇಲೆ ನಿಂತು ಉತ್ಸುಕಳಾಗಿ ಕಾಯುತ್ತಿದ್ದ ಪ್ರೇಯಸಿಯನ್ನು ಕರೆದೊಯ್ಯಲು ಮಹೇಶ ಬಂದ. ತಂದೆ ತಾಯಿಯರಿಗೆ ಪತ್ರ ಬರೆದಿಟ್ಟು ಕಾಣದ ಬೆಂಗಳೂರಿಗೆ ಕಣ್ತುಂಬಾ ಕನಸುಗಳ ಹೊತ್ತು ನೆಚ್ಚಿನ ಮಹೇಶನೊಂದಿಗೆ ಪಯಣ ಬೆಳೆಸಿದಳು.

ಕಿಕ್ಕಿರಿದ ಜನಸಂದಣಿ. ಎಲ್ಲೋ ಕಳೆದು ಹೋಗುತ್ತಿದ್ದೇನೆಯೇ ಎಂದು ಬೆಚ್ಚಿ ಮಹೇಶನ ಕೈ ಹಿಡಿದು ನಡೆದಳು. ಮಹಾನಗರಿ ಬೆಂಗಳೂರಿನಲ್ಲಿ ಪುಟ್ಟ ಮನೆ. ಊರಿನ ಮನೆಗಿಂತಲೂ ಸಣ್ಣದು ಎಂದೆನಿಸಿತಾದರೂ ಮಹೇಶನ ಇರುವಿಕೆಯಲ್ಲಿ ಗುಡಿಸಲೂ ಅರಮನೆಯಂತೆನಿಸುವುದು ಎಂದು ಮನದಲ್ಲೇ ನಕ್ಕಳು. ಅವನ ಕೆಲವು ಗೆಳೆಯರ ಹಾಜರಾತಿಯಲ್ಲಿ ರಿಜಿಸ್ಟ್ರಾರ್ ಆಫೀಸಿನಲ್ಲಿ ಮಹೇಶ ಚೈತ್ರ ದಂಪತಿಗಳಾದರು. ಮದುವೆಯ ಹೊಸತರಲ್ಲಿ ದಿನಗಳು ರಂಗುರಂಗಾಗಿಯೇ ಇದ್ದವು. ಆಗಾಗ ಮನೆಯವರೆಲ್ಲರ ನೆನಪಾಗುತ್ತಿದ್ದರೂ ಮಹೇಶನ ಪ್ರೀತಿ ಎಲ್ಲವನ್ನೂ ಮರೆಸುತ್ತಿತ್ತು. ವಸ್ತ್ರಕ್ಕೆ ವಸತಿಗೆ ಕೊರತೆಯಿಲ್ಲದಂತಹ ಚಿಕ್ಕ ಸಂಸಾರ. ಸಂತೋಷವನ್ನು ಮತ್ತಷ್ಟು ಹೆಚ್ಚಿಸುವಂತೆ ಚೈತ್ರ ಗರ್ಭಿಣಿಯಾದಳು.

ಹೀಗೇ ದಿನಗಳು ಕಳೆಯುತ್ತಿದ್ದಾಗ ಒಂದು ದಿನ ಮಹೇಶ ಕುಡಿದು ಮನೆಗೆ ಬಂದ. ಚೈತ್ರ ಕೂಗಾಡಿ ಅವನನ್ನು ಮನೆಯಿಂದ ಹೊರಗೆ ಹಾಕಿದಳು. ಎಲ್ಲೋ ದೂರದಲ್ಲಿ ಕುಡಿದು ತೂರಾಡಿ ನಡೆಯುತ್ತಿದ್ದವರನ್ನು ನೋಡಿ ಅಸಹ್ಯಪಟ್ಟುಕೊಳ್ಳುತ್ತಿದ್ದವಳಿಗೆ ತನ್ನ ಗಂಡ ಕುಡಿದಿದ್ದಾನೆ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲಾಗದೇ ರಾತ್ರಿಯಿಡೀ ಬಿಕ್ಕಿದಳು. ಬೆಳಿಗ್ಗೆ ಪ್ರೀತಿಯಿಂದ ಗಂಡನಿಗೆ ಬುದ್ಧಿ ಹೇಳಲು ಹೋದರೆ ಎಲ್ಲವನ್ನೂ ನಿರಾಕರಿಸಿ “ನನ್ನ ಇಷ್ಟಕ್ಕೆ ಅಡ್ಡಿ ಬಂದರೆ ಹುಷಾರ್” ಎಂದು ಹೆಂಡತಿಗೆ ಎಚ್ಚರಿಸಿದ.ದಿನಗಳ ರಂಗು ಮಸಾತೊಡಗಿತು. ದಿನವೂ ಕುಡಿದು ಬರಲು ಆರಂಭಿಸಿದ. ನಿರಂತರ ಶೋಷಣೆ ಪ್ರಾರಂಭವಾಯಿತು. ” ಕುಡಿಯುವ ಗಂಡಸರಿಗೆ ಧಿಕ್ಕಾರವಿರಲಿ, ಕುಡುಕ ರಹಿತ ಸಮಾಜವನ್ನು ಕಟ್ಟುವ ಶಕ್ತಿ ಸ್ತ್ರೀಯಲ್ಲಿದೆ ” ಎಂದು ಭಾಷಣದಲ್ಲಿ ಹೇಳಿದ ಘೋಷಣೆಗಳು ನೆನಪಾಗಿ ಅಣಕಿಸಿದಂತಾಯಿತು. ಎಲ್ಲವನ್ನೂ ಬಿಟ್ಟು ದೂರ ಹೋಗಬೇಕೆಂದೆನಿಸಿತು. ಕತ್ತಿನಲ್ಲಿ ಕರಿಮಣಿಯಿದೆ ಎಂಬ ಒಂದೇ ಕಾರಣಕ್ಕೆ ಇಷ್ಟವಿಲ್ಲದ ಮನಸ್ಸುಗಳು ಒಂದೇ ಸೂರಿನಡಿಯಲ್ಲಿರಬೇಕೆ…? ಆದರೆ ಗೊತ್ತು ಗುರಿಯಿಲ್ಲದೆ ಹುಟ್ಟಿದ ಆಸೆಯ ಬೆನ್ನಟ್ಟಿ ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಬಂದ ನಾನು ಈ ರೀತಿ ಯೋಚಿಸಲು ಅರ್ಹಳೇ. ಉತ್ತರ ಸಿಗದ ಪ್ರಶ್ನೆಗಳು. ಬರಲಿರುವ ಹೊಸ ಜೀವದ ಭವಿಷ್ಯಕ್ಕಾಗಿ ಸಹನೆ ಅನಿವಾರ್ಯವಾಯಿತು. “ಸ್ತ್ರೀ ಅಬಲೆಯಲ್ಲ. ಮದುವೆಯ ಕಟ್ಟುಪಾಡುಗಳಿಂದ ಅವಳೊಳಗಿನ ಅವಳು ಮರೆಯಾಗಬಾರದು”. ವಿದ್ಯಾರ್ಥಿ ದಿನಗಳಲ್ಲಿ ಅವಾಳಾಡಿದ ಮಾತುಗಳ ನೆನಪು. ತುಟಿಯಂಚಲ್ಲಿ ವ್ಯಂಗ್ಯ ನಗೆ ಮೂಡಿತು. ತೆಗೆದುಕೊಂಡ ಒಂದು ತಪ್ಪು ನಿರ್ಧಾರ ಜೀವನದ ಗತಿಯನ್ನೇ ಬದಲಿಸಿತ್ತು.

ತಿಂಗಳು ತುಂಬಿ ಸುಂದರವಾದ ಹೆಣ್ಣು ಮಗುವಿಗೆ ಜನ್ಮವಿತ್ತಳು. ಮಗುವಿನ ಮುಖ ನೋಡಿ ಗಂಡನ ವರ್ತನೆ ಬದಲಾಗಬಹುದೇನೋ ಎಂದು ಕೊನರಿದ ಆಸೆಯನ್ನು ಚಿವುಟಿ ಕುಡಿತದೊಂದಿಗೆ ಇನ್ನೂ ಹತ್ತು ಹಲವು ಕೆಟ್ಟ ಚಟಗಳನ್ನು ಮೈಗೂಡಿಸಿಕೊಂಡ.. ಮನೆಯಲ್ಲಿಯೇ ತನ್ನ ಗೆಳೆಯರನ್ನೆಲ್ಲಾ ಸೇರಿಸಿಕೊಂಡು ಕುಡಿಯತೊಡಗಿದ.. ಕುಡಿದ ಮತ್ತಿನಲ್ಲಿ ಅವನ ಗೆಳೆಯನೊಬ್ಬ ಚೈತ್ರಳೊಂದಿಗೆ ಅಸಭ್ಯವಾಗಿ ವರ್ತಿಸಿದಾಗ ಸಿಟ್ಟಾದ ಚೈತ್ರ ಮನೆಯಿಂದಾಚೆಗೆ ಹೋಗುವಂತೆ ಬೈದಳು. ಈ ಸಂದರ್ಭದಲ್ಲಿ ಹೆಂಡತಿಗೆ ಬೆಂಬಲ ನೀಡುವ ಬದಲು ಪತಿರಾಯ ಕೂಡಿದ ಮತ್ತಿನಲ್ಲಿ ಗೆಳೆಯನ ಪರ ವಹಿಸಿ ಹೆಂಡತಿಯನ್ನೇ ಮನೆಯಿಂದ ಹೊರಗೆ ಹಾಕಿದ.ಗಂಡನನ್ನು ಅತ್ತು ಕರೆದು ಬೇಡುವ ಮನಸ್ಸು ಅವಳಿಗೆ ಬರಲಿಲ್ಲ.

ಅಂದು ಮಹೇಶನ ಕೈ ಹಿಡಿದು ಹೊರಟಿದ್ದಳು. ಇಂದು ಕೈಯಲ್ಲಿ ಆರು ತಿಂಗಳ ಹಸುಗೂಸು. ಬದುಕು ಇಷ್ಟು ದುರ್ಗಮವಾಗಿರಬಹುದೆಂದು ಕನಸಿನಲ್ಲಿಯೂ ಎಣಿಸಿರೇಲಿಲ್ಲವೇನೋ. ಕೈಯಲ್ಲಿದ್ದಷ್ಟು ಕಾಸಿನಿಂದ ಪಕ್ಕದೂರಿನಲ್ಲಿದ್ದ ದೇವಸ್ಥಾನಕ್ಕೆ ಹೋದಳು. ದೇವಸ್ಥಾನದ ಪ್ರಸಾದವನ್ನು ತಿಂದು ಸೂರಿನಡಿಯಲ್ಲಿ ವಾಸಿಸುವವರೊಂದಿಗೆ ಸೇರಿದಳು. ಕೈಯಲ್ಲಿ ಕೆಲಸವಿಲ್ಲ.ಮೈಯಲ್ಲಿ ಕಸುವಿಲ್ಲ. ಆದರೂ ಕೂಸಿಗೆ ಬದುಕು ಕಟ್ಟಿಕೊಡುತ್ತೇನೆ ಎಂದು ತನ್ನ ವಿಧಿಗೇ ಸವಾಲೊಡ್ಡಿ ಹೊರಟವಳಿಗೆ ತಾನು ಪರಾಜಿತಳಾಗುತ್ತೇನೆಂಬ ಕಲ್ಪನೆಯೂ ಇರಲಿಲ್ಲ. ಹಸುಗೂಸಿಗೆ ಡೆಂಗ್ಯೂ ಆವರಿಸಿತು. ದೇವಸ್ಥಾನದ ಪ್ರಸಾದ ಗಂಟಲೊಳಗೆ ಇಳಿಯಲಿಲ್ಲ. ಔಷಧೋಪಚಾರಕ್ಕೆ ಹಣ ಇಲ್ಲ. ದುರಾದೃಷ್ಟವೇನೋ ಎಂಬಂತೆ ಮಗುವನ್ನು ಎತ್ತಿಕೊಂಡು ಭಿಕ್ಷೆ ಬೇಡಿದರೆ ಹತ್ತು ರುಪಾಯಿಯೂ ಸಿಗಲಿಲ್ಲ. ಮಗುವನ್ನೆತ್ತಿ ಮುದ್ದು ಮಾಡಿದಳು. ದೇವರಿಗೆ ಹರಕೆ ಹೊತ್ತಳು. ಜ್ವರದ ಕಾವು ಏರುತ್ತಿದ್ದಂತೆಯೇ ಮಗುವಿನ ಆಕ್ರಂದನವೂ ಜಾಸ್ತಿಯಾಯಿತು.. ಮೊದಲೇ ನಿಶ್ಯಕ್ತಿಯಿಂದ ಬಳಲುತ್ತಿದ್ದ ಮಗು ಕೂಗಲೂ ಆಗದೇ ಸಂಕಟ ಪಡುತ್ತಿತ್ತು. ಮಗುವಿನ ಸಂಕಟವನ್ನು ನಿಲ್ಲಿಸಲು ಚೈತ್ರ ಕೈಯಿಂದ ಬಾಯಿಯನ್ನು ಮುಚ್ಚಿ ಹಿಡಿದು ಸಂತೈಸುತ್ತಿದ್ದಳು. ಕೆಲವೇ ನಿಮಿಷಗಳಲ್ಲಿ ಮಗು ಶಾಶ್ವತವಾಗಿ ಸುಮ್ಮನಾಯಿತು.

ಅಯ್ಯೋ ವಿಧಿಯೆ ಎಂದು ಮನ ಹಗುರಾಗುವಲ್ಲಿಯವರೆಗೆ ಕಣ್ಣೀರಿಡಲೂ ಸಾಧ್ಯವಾಗದಷ್ಟು ನಿಸ್ಸಹಾಯಕತೆ. ಮಗುವನ್ನು ಮಣ್ಣು ಮಾಡಲು ಹಣವೆಲ್ಲಿಂದ ತರುವುದು ಎಂಬ ಪ್ರಶ್ನೆ. ಮಗುವಿನ ಶವವನ್ನು ಎತ್ತಿಕೊಂಡು ಪೊಲೀಸ್ ಸ್ಟೇಷನ್ನಿಗೆ ಓಡಿದಳು. ತನ್ನ ಮಗುವಿನ ಸಾವಿಗೆ ತಾನೇ ಕಾರಣ ಎಂದು ಹೇಳಿ ಮಗುವಿನ ಅಂತ್ಯಕ್ರಿಯೆಗೆ ಸಹಾಯ ಮಾಡಿ ಎಂದು ಗೋಗರೆದಳು. ಅವರ ನೆರವಿನಲ್ಲಿ ಎಲ್ಲಾ ಕಾರ್ಯಕ್ರಮಗಳನ್ನೂ ಪೂರೈಸಿದಳು. ತಾನೇ ಆರಿಸಿಕೊಂಡ ನಸುಗತ್ತಲಿನ ಕೋಣೆಯೊಳಗೆ ಬಂಧಿಯಾದಳು.

ಮಾಯೆಯ ಮುಸುಕು ಸರಿಯುವಾಗ ಪ್ರಳಯವೇ ಆಗಿತ್ತು. ಮೊದಲಿನ ಫಲವೆಲ್ಲಾ ವಿಫಲವಾಗುವಂತೆ; ಮತ್ತೆಂದೂ ಫಸಲು ಬರದಂತೆ…

Varija hebbar

varija.v.h2011@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!