ಕಥೆ

ಅನಾಥ – ‘ಪ್ರೀತಿ’

ಇವನೊಬ್ಬ ಅನಾಥ. ಅನಾಥ ಅಂದ್ರೆ ಹಿಂದು-ಮುಂದು ಯಾರು ಇಲ್ಲ ಅಂತ ಅಲ್ಲ. ಎಲ್ಲಾ ಇದ್ದು ಅವನೊಬ್ಬ ಅನಾಥ. ಹೌದು , ಯಾವುದೋ ವಿಷಗಳಿಗೆಯಲ್ಲಿ ಎಲ್ಲಾರಿಂದಲೂ ದೂರಾದ. ಮತ್ತೆಂದೂ ತನ್ನವರೆನ್ನೆಲ್ಲಾ ಸೇರಲಾರದಷ್ಟು ದೂರ. ಕಣ್ಣೆದುರಿಗಿದ್ದರೂ ಇವರೇ ತನ್ನವರೆಂದು ಗುರುತು ಹಿಡಿಯಲಾರ . ಯಾರ ಪಾಪದ ಬಸುರೋ , ಯಾರ ತೀಟೆ ತೀರಿಸಿಕೊಳ್ಳಲು ಹುಟ್ಟಿಸಿದ್ದೋ , ಹೆತ್ತ ಮರುಕ್ಷಣವೇ ಹೆತ್ತವರು ತಿಪ್ಪೆ ಪಾಲು ಮಾಡಿದರಲ್ಲ. ಯಾರು ನೋಡಿದರೋ, ಯಾರು ಹಾಲುಣಿಸಿದರೋ, ತಿಳಿಯದು. ಅಂತು ಬೀದಿ ಬದಿಯ ಹೆಣವಾಗಬೇಕಿದ್ದ ಜೀವವೊಂದು , ಬೀದಿ ನಾಯಿಯ ಬಾಳು ಬಾಳಿತು.

ಯಾರು ಕರೆದು ಅನ್ನ ಹಾಕಿದರೋ, ಯಾರು ಕರೆದು ಶಾಲೆಗೆ ಸೇರಿಸಿದರೋ ಎಲ್ಲವೂ ಯಾರು – ಯಾಕೆ ಎಂಬ ಪ್ರಶ್ನೆಯೇ ಹೊರತು ಒಂದಕ್ಕೂಉತ್ತರವಿಲ್ಲ. ಓದಿದ ಓದು ಲೋಕಜ್ಞಾನಕ್ಕಾಯಿತೇ ಹೊರತು ತಲೆಗೆ ಕಿಂಚಿತ್ತೂ ಹತ್ತಲಿಲ್ಲ. ಆದರೆ ವಿದ್ಯೆಯ ಸರಸ್ವತಿ ಒಲಿಯದಿದ್ದರೇನಂತೆ, ಸಂಗೀತದ ಶಾರದೆ ಒಲಿದಳಲ್ಲ.

ಹೌದು ಹವ್ಯಾಸಕ್ಕೆಂದು ಶುರುವಾದ ಸಂಗೀತಾಸಕ್ತಿ ಕೊನೆಗೆ ಉಸಿರಾಗಿ ಹೋಯಿತು. ಸಂಗೀತವೆ ತಂದೆ-ತಾಯಿ ಬಂಧು-ಬಳಗ ಎಲ್ಲಾ.

ಜೈಲಿನಲ್ಲಿ ಹುಟ್ಟಿದ ಕೃಷ್ಣನಿಗೊಲಿದದ್ದೂ ಅದೇ ಕೊಳಲು. ತಿಪ್ಪೆಗುಂಡಿಯಲ್ಲಿ ಕಣ್ಬಿಟ್ಟ ಇವನಿಗೊಲಿದಿದ್ದೂ ಅದೇ ಕೊಳಲು. ಆ ಕೃಷ್ಣನಿಗೋ ಹದಿನಾರು ಸಾವಿರ ಗೋಪಿಕೆಯರು. ಇವನಿಗೆ ಹತ್ತಿರ ಹೋದರೂ ದೂರ ನಿಲ್ಲುವ ಹುಡುಗಿಯರು.

ಎಲ್ಲರ ಜೀವನದಲ್ಲೂ ಬದಲಾವಣೆಯ ಗಾಳಿ ಎಂಬುದು ಬೀಸಲೇಬೇಕು. ಹಾಗೆ ಇವನ ಜೀವನದಲ್ಲೂ ಬೀಸಿತೊಂದು ತಂಗಾಳಿ. ತನಗರಿಯದೆ ತಾ ಸೋತ , ಮೈಮರೆತ. ಎಲ್ಲೋ ಇವನ ಕೊಳಲು ನಾದ ಕೇಳಿದವಳು ಇಷ್ಟ ಅಂದಳು. ಅಷ್ಟೇ ಅಂದಿದ್ದರೆ ಪರವಾಗಿರಲಿಲ್ಲವೇನೋ ,ಸಂಗೀತದ ಜೊತೆಗೆ ನೀನು ಇಷ್ಟ ಅಂದಳು.

ಬರಡಾಗಿದ್ದ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕಂತಾಗಿತ್ತು ಇವನ ಪರಿಸ್ಥಿತಿ. ಜಗತ್ತಿನಲ್ಲಿ ಸಂಗೀತ ಬಿಟ್ಟು ಉಳಿದ್ದದ್ದೆಲ್ಲವೂ ಸುಳ್ಳು, ಮೋಸ ಎಂದು ನಂಬಿದ್ದವನಿಗೆ , ಅವನ ಮೇಲೆ ನಂಬಿಕೆಯಿಟ್ಟು ಬಂದವಳಿಗೆ ಏನು ಹೇಳಬೇಕೋ ತಿಳಿಯದೇ ಹೋಯಿತು. ದಿನಗಳುರುಳಿದರೂ ಒಮ್ಮೆಲೇ ಬೀಸಿದ ಬದಲಾವಣೆಯ ಗಾಳಿಗೆ ಏನು ಮಾಡಬೇಕೋ ತೋಚದೆ ಹೋಗಿದ್ದ. ಜೀವನದಲ್ಲಿ ಮೊದಲ ಬಾರಿ ಸಿಕ್ಕ ಪ್ರೀತಿಯನ್ನು ಒಪ್ಪಿಕೊಳ್ಳಲೋ ಅಥವಾ ಅವಳು ಮೆಚಿದ್ದು ಕೇವಲ ತನ್ನ ಸಂಗೀತವನ್ನ , ಅಂತರಾತ್ಮವನ್ನಲ್ಲಾ ಎಂಬ ಕಹಿ ಸತ್ಯವ..?

ಅಂತು ಇವನ ಉತ್ತರಕ್ಕಾಗಿ ಕಾದವಳು ಕೊನೆಗೆ ಕಣ್ಮರೆಯಾಗೇ ಹೋದಳು. ಎಲ್ಲಿಂದ ಬಂದವಳೋ, ಈಗ ಎಲ್ಲಿಗೆ ಹೋದಳೋ ಒಂದೂ ಇವನಿಗೆ ಗೊತ್ತಿಲ್ಲ. ಹುಟ್ಟಿದ್ದು ಅನಾಥನಾಗಿಯೋ , ಹುಟ್ಟಿದ ಮೇಲೆ ಅನಾಥನಾದನೋ, ಅನಾಥನಿಗೆ ಸಿಕ್ಕ ಪ್ರೀತಿ ಅನಾಥವಯಿತೋ ಅಥವಾ ಸಿಕ್ಕ ಪ್ರೀತಿಯೂ ಅವನನ್ನು ಅನಾಥನನ್ನಾಗಿ ಮಾಡಿತೋ……..

ಏನೂ ಅರಿಯದೆ ಕುಳಿತ ಮರದಡಿಗೆ ಸುಮ್ಮನೇ ಕೊಳಲನೂದುತ್ತ.

Satya narayana Yc

sathyanarayanayc@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!