ಕಥೆ

 ಉಳ್ಳ ಭಾಗ-೩

ಕಥೆಯ ಹಿಂದಿನ ಎರಡು ಭಾಗಗಳನ್ನು ಓದಲು ಲಕೆಳಗೆ ಕ್ಲಿಕ್ ಮಾಡಿ

ಉಳ್ಳ (ಭಾಗ-೧)

ಉಳ್ಳ (ಭಾಗ-೨)

 

ಆವತ್ತು ಬಸ್ಸಿನಿಂದಿಳಿದು ನಿಧಾನಕ್ಕೆ ನಡೆದುಬರುತ್ತಿದ್ದ ಕುಸುಮಳನ್ನು, ಬಲಿಪಶುವಾಗಲಿದ್ದ  ಯುವಕರಿಬ್ಬರನ್ನು ಹೊತ್ತ ಬೈಕ್ ಹಿಂಬಾಲಿಸುತ್ತಿತ್ತು. ಈ ಮೂವರೂ ವ್ಯಕ್ತಿಗಳನ್ನು ಮರದಹಳುಗಳೆಡೆಯಿಂದ, ಯಾವುದೇ ಅನುಮಾನಾಸ್ಪದಕ್ಕೆಡೆಗೊಡದಂತೆ ನಾನು ಮತ್ತು ಅಣ್ಣಪ್ಪ ಹಿಂಬಾಲಿಸುತ್ತಿದ್ದೆವು. ಏನಾದರೂ ಅಚಾತುರ್ಯವಾದರೆ ಕೂಡಲೇ ಕುಸುಮಳ ಸಹಾಯಕ್ಕಾಗಮಿಸುವುದು ನಮ್ಮ ಕರ್ತವ್ಯವಾಗಿತ್ತು. ಆಗಸ ತೂತಾಗುವಂತೆ ಸುರಿದಿದ್ದ ಮಳೆ ಆ ಸಮಯದಲ್ಲೇ ನಿಂತಿತ್ತಾದರೂ, ಅದು ನಮ್ಮ ಯೋಜನೆಗೆ ಯಾವ ತೊಂದರೆಗಳನ್ನೂ ಉಂಟುಮಾಡುತ್ತಿರಲಿಲ್ಲ. ಹಿಂಬಾಲಿಸುತ್ತಿದ್ದವರೀರ್ವರೂ ಅದ್ಯಾವುದೋ ಅಶ್ಲೀಲ ಹಾಸ್ಯದೊಂದಿಗೆ ನಗುತ್ತಿದ್ದರು. (ಅಶ್ಲೀಲ ಹಾಸ್ಯವೆಂಬುದು ನನ್ನ ಊಹೆಯಷ್ಟೆ.) ಅವರ ಮುಖದಲ್ಲಿ ಹೆಣ್ಣನ್ನು, ಅದರಲ್ಲೂ ನಮ್ಮೂರಿನ ಹೆಣ್ಣನ್ನು ಬಳಸಿ ಬಿಸಾಡುವ ಭಾವನೆ ಕಾಣುತ್ತಿತ್ತೇ ವಿನಃ ಇನ್ಯಾವುದೇ ಉದಾತ್ತ ಚಿಂತನೆಯಿರಲಿಲ್ಲ. ಸೂಚನೆಯಂತೆಯೇ ಕುಸುಮ ಕೂಡ ಆಗಾಗ ಹಿಂದಿರುಗಿ ಮುಗುಳ್ನಗುತ್ತಾ, ವಯ್ಯಾರದಿಂದ ನಿಧಾನವಾಗಿಯೇ ನಡೆಯುತ್ತಿದ್ದಳು. ಕಾನುಗಪ್ಪೆಗಳ ಮೊರೆತ ಮತ್ತು ಪಕ್ಕದಲ್ಲೇ ಹರಿಯುತ್ತಿದ್ದ ಚಿಕ್ಕ ಝರಿಯ ಭೋರ್ಗರೆತ, ಏಕತಾನತೆಯನ್ನು ಮರೆಮಾಚುತ್ತಿತ್ತು.  ಮರಕುಟಿಕ ಹಕ್ಕಿಯ “ಕುಟ್ಟೂ…. ಕುಟ್ಟೂ…. ಕುಟ್ಟ್” ಶಬ್ದ, ನಡೆಯುತ್ತಿರುವ ಮತ್ತು ನಡೆಯಲಿರುವ ನಾಟಕ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು.

ಅಂತೂ ಇಂತೂ ಕೊನೆಗೂ ನಾವು ನಿರ್ಧರಿಸಿದ್ದ ಬಲಿಪೀಠದ ಜಾಗಕ್ಕೆ ಕುರಿ ಮಾನವರಿಬ್ಬರ ಆಗಮನವಾಯಿತು. ಹಾವಿನಂತೆ ಸುತ್ತೀ ಬಳಸಿ ಮುಂದರಿಯುತ್ತಿದ್ದ ರಸ್ತೆಯ ಒಂದು ಬದಿಯಲ್ಲಿ ಕಾಡಿನೊಳಕ್ಕೆ ಅಗಚುವ ಕಾಲ್ದಾರಿಯೊಂದು ಎಳೆಯ ಬಾಳೆಪಟ್ಟೆಯಂತೆ ಬಿದ್ದಿತ್ತು. ಅಲ್ಲಲ್ಲಿ ಸವೆದು, ಹಸಿರು ಹುಲ್ಲಿನಿಂದಾವೃತವಾಗಿದ್ದ ಆ ದಾರಿ ಎಲ್ಲೋ ಕೆಲವೊಮ್ಮೆ ಮಾತ್ರ ಬಳಕೆಯಾಗುತ್ತಿತ್ತಲ್ಲದೇ ದಿನಬಳಕೆಯ ಸಂಚಾರೀ ಮಾರ್ಗವಾಗಿರಲಿಲ್ಲ. ಕುಸುಮ ಅಲ್ಲಿಯೇ ನಿಂತವಳು, ಒಮ್ಮೆ ತಿರುಗಿ ನೋಡಿದಳು. ತನ್ನ ನೀಳಜಡೆಯನ್ನು ಮುಂದಕ್ಕೆಳೆದು ಕೈಬೆರಳಿಗೆ ಸುತ್ತುತ್ತಾ ತಲೆ ಬಗ್ಗಿಸಿ ಕಾದಳು. ಹೆಣ್ಣಿನ ಮನಸ್ಸನ್ನು ಬಲ್ಲ ಯಾರಿಗಾದರೂ ಅರ್ಥವಾಗುತ್ತದೆ, ಅದೊಂದು ಮೌನರೂಪೀ ಆಹ್ವಾನ ವಿಧಾನವೆಂದು. ಹಸಿದ ತೋಳಗಳಂತೆ ಕಾಯುತ್ತಿದ್ದವರು ಮುಂಬಂದು ನಿಧಾನಕ್ಕೆ ಮಾತಿಗೆ ಶುರುವಿಟ್ಟರು. ಆ ಮೂವರ ನಡುವಿನ ‘ಪಿಸಿಪಿಸಿ ಗುಸುಗುಸು’ ವಾಕ್ ಶಬ್ದಗಳು, ದೂರದಲ್ಲಿ ಗವ್ವೆನ್ನುವ ಕಾಡಿನ ನಡುವೆ ಕುಳಿತು ನೋಡುತ್ತಿದ್ದ ನಮ್ಮೀರ್ವರಿಗೆ ಕೇಳಿಸುವ ಸಾಧ್ಯತೆಯೇ ಇರಲಿಲ್ಲ.

ಅಣ್ಣಪ್ಪ ಮತ್ತು ನಾನು ಕುಕ್ಕುರುಗಾಲಲ್ಲಿ ಕುಳಿತಿದ್ದೆವು. ಆತ ಹಾಕಿದ್ದ ಚಡ್ಡಿಯಲ್ಲಿ ತೂತುಗಳನ್ನು ಎಣಿಸುವುದಕ್ಕಿಂತ ಬಟ್ಟೆಯೆಲ್ಲಿದೆಯೆಂದು ನೋಡುವುದೇ ಸುಲಭ ಸಾಧ್ಯವಾದ ಕಾರ್ಯವಾಗಿತ್ತು.  ಇಂತಿಪ್ಪ ಸಮ ವಯಸ್ಕೀ ಪೆದ್ದು ಅಣ್ಣಪ್ಪನನ್ನು ನೋಡಿ ನಗು ತಡೆಯಲಾರದ ನಾನು, ಬಾಯಿಗೆ ಬಲಗೈಯನ್ನು ಭದ್ರವಾಗಿಟ್ಟು, ಎಡಗೈ ಮೊಣಕಟ್ಟಿನಿಂದ ಬಲವಾಗೊಮ್ಮೆ ತಿವಿದ ರಭಸಕ್ಕೆ ಹೊರಳಿ ಬೀಳುವ ಹಂತದಲ್ಲಿದ್ದವ ಕೈಯೂರಿ ಕುಳಿತ. ಹುಬ್ಬುಗಂಟಿಕ್ಕಿ ನನ್ನೆಡೆಗೆ ನೋಡಿ, ‘ಏನು?’ ಎಂಬಂತೆ ತಲೆಯನ್ನು ಮೇಲಕ್ಕಲ್ಲಾಡಿಸಿದ. ಪ್ರಶ್ನಿಸುತ್ತಿದ್ದವನ ಅಜ್ಞಾನವನ್ನು ಕೈದೋರಿ ನಿವಾರಿಸಿದೆ. ಕೂಡಲೇ ಸರಿಪಡಿಸಿಕೊಳ್ಳಲು ಎದ್ದು ನಿಲ್ಲಲಿದ್ದವನನ್ನು ಎಳೆದು ಕೂರಿಸಿದೆ. ಕೂತ ರಭಸಕ್ಕೆ ಒಣಗಿದೆಲೆಗಳು ‘ಚರ್ ಚರ್’ಎಂದ ಸದ್ದು ರಸ್ತೆಯಲ್ಲಿದ್ದ ಮೂವರನ್ನು ಮುಟ್ಟಲಿಲ್ಲ. ಆತನೇನಾದರೂ ನಿಂತಿದ್ದಲ್ಲಿ, ಸುತ್ತಲಿದ್ದ ಪೊದೆ ಅಥವಾ ನಾವು ಕುಳಿತಿದ್ದ ಹಳುವೇ ಗಡಗಡನೆ ನಡುಗಿ, ವ್ಯವಸ್ಥಿತವಾಗಿ ಹಾಕಿದ್ದ ನೀಲಿನಕ್ಷೆಯೆಲ್ಲವೂ ನೀರಲ್ಲಿ ಮಾಡಿದ ಹೋಮದಂತೆ ವ್ಯರ್ಥವಾಗುತ್ತಿತ್ತು. ತನ್ನ ಮಾನ ಮುಚ್ಚಿಕೊಳ್ಳಲು ಭೂಮಿತಾಯಿಯನ್ನೇ ಆಸರೆಯಾಗಿ ಪಡೆದ ಅಣ್ಣಪ್ಪ, ಕುಕ್ಕುರುಗಾಲಿನ ಭಂಗಿಯಿಂದ ಪದ್ಮಾಸನ ಸ್ಥಿತಿಗೆ ಬದಲಾಯಿಸಲ್ಪಟ್ಟ. ರಸ್ತೆಯ ಮಧ್ಯದಲ್ಲಿ ನಡೆಯುತ್ತಿದ್ದ ಸಂಭಾಷಣೆ ಮುಗಿದು, ಕುಸುಮ ನಿಧಾನಕ್ಕೆ ಕಾಡಿನ ಕಾಲ್ದಾರಿಯಲ್ಲಿ ನಡೆಯಲು ಮೊದಲಾಗಿದ್ದಳು. ಅವಳನ್ನೇ ಹಿಂಬಾಲಿಸುತ್ತಿದ್ದ ಯುವಕರೀರ್ವರು ಪರಸ್ಪರ ಪಿಸುಗುಡುತ್ತಾ ನಗುತ್ತಿದ್ದರು. ಮಾರುದೂರದಲ್ಲಿ ಅನಾಥವಾಗಿ ನಿಂತಿತ್ತವರ ದ್ವಿಚಕ್ರವಾಹನ. ಫಕ್ಕನೆ ಅಣ್ಣಪ್ಪ ಪದ್ಮಾಸನದಿಂದೆದ್ದು ಅತ್ತಲೂ ಇತ್ತಲೂ ಕುಂಡೆಯನ್ನಲ್ಲಾಡಿಸಿ ಮತ್ತದೇ ಭಂಗಿಯಲ್ಲಿ ಕುಳಿತ.

ಏನಾಯಿತೆಂಬಂತೆ ಆಶ್ಚರ್ಯದಿಂದವನೆಡೆಗೆ ನೋಡಿದ ನನ್ನನ್ನುದ್ದೇಶಿಸಿ,” ಕಟ್ಟಿರುವೆ ಮಾರ್ರೆ, ಕುಂಡಿ ಒಳ್ಗೆಲ್ಲಾ ಕಚ್ತದೆ” ಎಂದ. ನನಗರ್ಥವಾಯಿತು. ಆತನ ಸಹಸ್ರಾರು ತೂತುಮಯ ಜರಡಿಯಂತಹ ಚಡ್ಡಿಯೊಳಗೆ ಯಾವುದೋ ಒಂದು ಅದೃಶ್ಯರೂಪಿ ಇರುವೆ ಪ್ರವೇಶಿಸಿದೆ ಎ೦ದು. “ಅಂಯ್ಯಕ್” ಎಂಬ ಉದ್ಘೋಷದೊಂದಿಗೆ ಸಟಕ್ಕನೆ ಮೇಲೆದ್ದ ಅಣ್ಣಪ್ಪನನ್ನು  ಕೂರಿಸುವ ಪ್ರಯತ್ನ ಮಾಡುವುದಕ್ಕೂ, “ಸರಕ್….. ಧಡ್” ಎಂದು ದಾರಿಯಲ್ಲಡಗಿಸಿದ್ದ ಕುಣಿಕೆಗೆ ಕಾಲುಸಿಕ್ಕು ಕಾಮುಕರಿಬ್ಬರೂ ತಲೆಕೆಳಗಾಗಿ ತೇಲುವುದಕ್ಕೂ ಸರಿಹೋಯಿತು.

“ಅಯ್ಯಯ್ಯೋ…., ಶಿಟ್….., ಹೆಲ್ಪ್….., ಹೆಲ್ಪ್…..”

“ಹೆಲ್ಪ್…., ಹೆಲ್ಪ್…..” ಯಾರ್ಯಾರು ಏನೆಂದು ಕೂಗಿದರೆಂದು ನನಗೂ ತಿಳಿಯಲಿಲ್ಲ. ಅರಚುವಿಕೆಗೆ ಒಮ್ಮೆ ಕಾಡೇ ಅಲ್ಲಾಡಿತು. ಪಕ್ಕದಲ್ಲೆಲ್ಲೋ ಸದ್ದಿಲ್ಲದೇ ಬಿದ್ದಿದ್ದ ಹಂದಿಯೊಂದು ಧಡ ಧಡನೆ ಓಡಿತು. ಸುತ್ತಲಿನ ಸಮಸ್ತ ಹಕ್ಕಿ ಪರಿವಾರವೆಲ್ಲವೂ ಒಮ್ಮೇಲೆ ಗಾಳಿಗೆ ಹಾರಿದವು. ಕುಸುಮಳಾಗಲೇ ಓಡುತ್ತಾ ಮನೆತಲುಪಿದ್ದಿರಬಹುದು. ಅಣ್ಣಪ್ಪನಿನ್ನೂ ಕಿಸಿ ಕಿಸಿ ನಗುತ್ತಲೇ ಕಾಲಗಲಿಸಿ ತನ್ನ ಹುಡುಕಾಟದ ತುರಿಸುವಿಕೆಯನ್ನು ಮುಂದುವರೆಸಿದ್ದ. ಕಾಡಿನೊಳಗೇ ನಿಧಾನಕ್ಕೆ ಮುಂದರಿದು, ರಸ್ತೆಗಿಳಿದು, ನಮ್ಮಂತೆಯೇ ಅಡಗಿಕುಳಿತಿದ್ದ ಉಳಿದವರನ್ನು ಸೇರಿಕೊಂಡಿದ್ದೆವು.

**********

ಅಪ್ಪಯ್ಯ ಉಳ್ಳ ಹಾಕಬೇಕೆಂದಾಗ ಎಲ್ಲರೂ ಆಶ್ಚರ್ಯಪಟ್ಟರಲ್ಲವೇ? ಉಳ್ಳ ಎಂದರೆ ಒಂದು ರೀತಿಯ ಸರಗುಣಿಕೆ. ಹಳ್ಳಿಯಲ್ಲಿ ಗದ್ದೆಗೆ ಧಾಳಿಯಿಡುವ ‘ಹುಂಡಾನಕ್ಕಿ’ ಯನ್ನು, ಚಿಕ್ಕಪುಟ್ಟ ಪ್ರಾಣಿಗಳಾದ ಮೊಲ, ಕಾಡುಕೋಳಿ ಮುಂತಾದವುಗಳನ್ನು ಹಿಡಿಯಲು ಬಳಸುತ್ತಾರೆ. ಆಯಾಪ್ರಾಣಿಗಳನ್ನು ಆಹಾರದ ಮೂಲಕ ಆಕರ್ಷಿಸಿ, ಸಜೀವವಾಗಿ ಕುಣಿಕೆಗೆ ಸಿಕ್ಕಿಬೀಳುವ ತೆರದಲ್ಲಿ ಹೆಣೆದಿರುತ್ತಾರೆ. ಒಮ್ಮೆ ನಿಗದಿತ ಜಾಗಕ್ಕೆ ಕಾಲಿಟ್ಟು ಸಿಕ್ಕಿಬಿದ್ದ ಪ್ರಾಣಿ, ಬಿಡಿಸುವವರೆಗೂ ತಪ್ಪಿಸಿಕೊಳ್ಳಲಾರದು. ಆದರೆ ದೊಡ್ಡ ಪ್ರಾಣಿಗಳನ್ನು ಹಿಡಿಯುವುದಕ್ಕೆ ಬಲವಾದ ಹಗ್ಗ ಮತ್ತು ಸಮರ್ಥ ಕುಣಿಕೆಯ ಹೆಣೆಯುವಿಕೆ ಅವಶ್ಯವಾದ್ದರಿಂದ ಮತ್ತು ಕೋವಿಯನ್ನು ಬಳಸುವುದೇ ಸುಲಭವಾದ್ದರಿಂದ ಈ ಉಳ್ಳವನ್ನು ಪ್ರಯೋಗಿಸುವುದಿಲ್ಲ. ಅದರಲ್ಲೂ ಮನುಷ್ಯರಿಗೆ ಉಳ್ಳ ಹಾಕುವುದೆಂದರೆ ಹೊಸ ಪ್ರಯೋಗವೇ ಸರಿ. ಅದರೂ ಕೂಡ ’ಉಳ್ಳಪ್ರವೀಣ’ರಾದ ಸೋಮಯ್ಯ ಮತ್ತು ಅಣ್ಣಪ್ಪರಿಬ್ಬರೂ ಕಾಡಿನ ಬಿಳಲುಗಳನ್ನು ಹೆರೆದು ತಂದು ರಾತ್ರಿಯೆಲ್ಲಾ ಕುಳಿತು ಉಳ್ಳಮಾಡಿ, ಬೆಳ್ಳಂಬೆಳ್ಳಿಗ್ಗೆಯೇ ಸರಿಯಾದ ನಿಗದಿತ ಜಾಗದಲ್ಲಿ ಪ್ರಯೋಗಿಸಿದ್ದರು. ಅದರ  ಯಾವುದೇ ರೂಪರೇಖೆಗಳನ್ನು ಹೊರಪ್ರಪಂಚಕ್ಕೆ ಕಾಣದಂತೆ ಮುಚ್ಚಿ, ಕುಸುಮಳನ್ನು ಕರೆದು ಅವಳೇನು ಮಾಡಬೇಕೆಂಬುದನ್ನು ವಿವರಿಸಿದ್ದರು. ಬೆಳಿಗ್ಗೆಯೇ ಪ್ರಯೋಗಿಸಿಟ್ಟ ಉಳ್ಳಕ್ಕೆ ಬೇರಾವ ಪ್ರಾಣಿಗಳೂ ಸಿಲುಕದಂತೆ ಕಾಯುವ ಕೆಲಸವನ್ನು  ರಾಮಯ್ಯ ಮತ್ತು ಲಕ್ಷ್ಮಣನಾಯ್ಕರಿಗೆ ಒಪ್ಪಿಸಲಾಗಿತ್ತು. ಈ ಲೋಕವ್ಯಾಪಾರದ ಅರಿವಿಲ್ಲದೇ ಬಂದ ದುರಾದೃಷ್ಟವಂತರಿಬ್ಬರೂ ಉಳ್ಳಕ್ಕೆ ಸಿಕ್ಕು ತಲೆಕೆಳಗಾಗಿ ನೇತಾಡುತ್ತಿದ್ದರು.

**********

ಇನ್ನೂ ನಾಟಕ ಮುಗಿದಿರಲಿಲ್ಲ. ಆಗಷ್ಟೇ ರಂಗೇರತೊಡಗಿತ್ತು. ಪಕ್ಕದಲ್ಲಿದ್ದ ರಸ್ತೆಯ ಎರಡೂ ಕೊನೆಗಳಲ್ಲಿ ಅಡ್ಡಲಾಗಿ ಮರದಂಥ ಗಿಡವೊಂದನ್ನುರುಳಿಸಿ ಮುಚ್ಚಲಾಯಿತು. ಹಾಗೆಯೇ, ಬೇರೊಂದು ಬಳಸುದಾರಿಯನ್ನು ಹಿಡಿಯುವಂತೆ ಹಳ್ಳಿಯ ಅನಕ್ಷರಸ್ಥ ತಪ್ಪು ತಪ್ಪು ಕನ್ನಡ ಭಾಷೆಯ ಸೂಚನಾ ಫಲಕವೊಂದನ್ನು ತೋರಿಸಲಾಯಿತು. ಆ ರಸ್ತೆಯಲ್ಲಿ ತಿರುಗಾಡುವ ಯಾರಾದರೂ ಇವರೀರ್ವರ ಕೂಗನ್ನು ಕೇಳಿ, ತಪ್ಪಿಸುವುದು ನಮಗೆ ಬೇಕಾಗಿರಲಿಲ್ಲ. ಇದೆಲ್ಲ ಕೆಲಸವೂ ನುರಿತ ಕೈಗಳಿಂದ ಕ್ಷಣಾರ್ಧದಲ್ಲಿ ಮುಗಿದುಹೋಯಿತು. ಸೂರ್ಯರಶ್ಮಿಯೂ ನೆಲಮುಟ್ಟದ, ಪಟ್ಟಣದಿಂದ ಇಪ್ಪತ್ತು ಕಿಲೋಮೀಟರ್ ದೂರದ ಹಳ್ಳಿಯ ಆ ಕಗ್ಗಾಡಿನಲ್ಲಿ ಮೊಬೈಲ್ ಸಂಪರ್ಕ ಸಿಗುವುದಂತೂ ಕನಸಿನಮಾತೇ ಸರಿ.

 

ಮುಸ್ಸಂಜೆ ಹೊತ್ತಲ್ಲಿ ಸಿಕ್ಕುಬಿದ್ದು, ಕೂಗಿಕೂಗಿ ಸುಸ್ತಾಗಿ ಅಳುತ್ತಿದ್ದವರಿಗೆ ರಾತ್ರಿಯಲ್ಲಿ ಭಯಂಕರ ಅನುಭವಗಳು ಕಾದಿದ್ದವು. ಮಳೆಯೂ ಕೂಡ, ತನ್ನ ಶಿಕ್ಷೆಯ ಪಾಲನ್ನು ಕೊಡಲು ಶುರುಮಾಡಿತ್ತು. ಮಾಮೂಲಿನಂತೆ ಮಿಂಚುವ ಮಿಂಚು, ಗುಡುಗುಗಳು ವಾತಾವರಣಕ್ಕೆ ರೌದ್ರ ಭಯಂಕರತೆಯನ್ನಿತ್ತಿದ್ದವು. ಮಿಂಚಿಗೆ ಪ್ರತಿಯೊಂದು ಮರ ಗಿಡಗಳೂ ಸಾವಿರ ಕೈಗಳ ಪ್ರೇತಾತ್ಮಗಳಂತೆ ಕಾಣುತ್ತಿದ್ದವು. ಮುಂದಿನ ಕಾರ್ಯವಿದ್ದದ್ದು ಅಣ್ಣಪ್ಪನ ಪಾಲಿಗೆ. ಕಾಡಲ್ಲೇ ಹುಟ್ಟಿ ಬೆಳೆದ ಆತ , ಬಗೆಬಗೆಯ ಪ್ರಾಣಿಗಳ ಕೂಗನ್ನು ಹೊರಡಿಸುವುದರಲ್ಲಿ ನಿಷ್ಣಾತ. ಬಾವಲಿಯಂತೆ ನೇತಾಡುತ್ತಿದ್ದವರು ಜೀವನದಲ್ಲೇ ಕೇಳದಿದ್ದ, ಕೇಳಲೂ ಆಗದ  ಕರ್ಕಶ ಶಬ್ದಗಳನ್ನು ಕೇಳಿದ್ದರು. ಇವೆಲ್ಲವೂ ನಾಟಕೀಯವೆಂದೆನಿಸಿ, ಹಾಸ್ಯಮಯವಾಗಿದ್ದರೂ ಆವತ್ತಿನ ಘಳಿಗೆಯಲ್ಲಿ, ಅಂಥ ಪರಿಸರದಲ್ಲಿ, ಇಡೀ ದೇಹದ ಭಾರವನ್ನು ಕಾಲುಗಳಿಗೆ ಬಿಟ್ಟು, ಗಾಳಿಯಲ್ಲಿ ತೇಲುತ್ತಾ, ಯಮಗಟ್ಟಿಯ ಆ ಬಳ್ಳಿಗಳಿಂದ ಬಿಡಿಸಿಕೊಳ್ಳಲು ಹರಸಾಹಸಪಡುತ್ತಿದ್ದವರಿಗೆ ನರಕವಾಗಿ ಪರಿಣಮಿಸಿತ್ತು. ಮಾಯೆಯ ಬಲೆಗೆ ತುತ್ತಾಗಿ, ಭಯದ ಬಂಧನಕ್ಕೊಳಗಾಗಿ ಊಳಿಡುತ್ತಿದ್ದ ಅವರ ಮನಸ್ಸು ಸತ್ಯ-ಅಸತ್ಯಗಳ ನಡುವಿನ ವ್ಯತ್ಯಾಸವನ್ನು ಗುರುತಿಸದೇ, ಅಣ್ಣಪ್ಪನ ಬಗೆಬಗೆ ಸ್ವರವನ್ನೂ ಕೂಡ ನಿಜವೆಂದೇ ಭ್ರಮಿಸಿ, ಹೆದರಿ, ಬೆದರಿದ್ದವು. ಮಿಂಚಿದಾಗ ಕಂಡ, ಅವರ ತಲೆಯಿಂದ ಕೆಳಕ್ಕೆ ಸುರಿಯುತ್ತಿದ್ದ ದ್ರವವನ್ನು ಮಳೆನೀರೋ, ಮೂತ್ರವೋ ಎಂದು ಗುರುತಿಸಲಾಗಲಿಲ್ಲ. ಇಂತಿಪ್ಪ ರಾತ್ರಿ ಕಳೆದು ಬೆಳಗಾಯಿತು. ರಾತ್ರಿಯಿಡೀ ಉಭಯ  ಕಡೆಯವರಿಗೂ ನಿದ್ರೆಯಿರಲಿಲ್ಲ. ಒಬ್ಬರಿಗೆ ಭಯ ಕಾರಣವಾದರೆ, ಇನ್ನೊಬ್ಬರಿಗೆ ಭಯದ ಹುಟ್ಟಿಸುವಿಕೆಯ ಕೆಲಸ ಕಾರಣವಾಗಿತ್ತು.

**********

ಅಸಾಧ್ಯ ನೋವಿಗೋ ಅಥವಾ ಎದೆನಡುಗಿಸಿದ ಭಯಕ್ಕೋ ಮೂರ್ಛೆಹೋಗಿದ್ದವರನ್ನು ಬೆಳಿಗ್ಗೆ ಇಳಿಸಿ, ತಟ್ಟಿ ಎಬ್ಬಿಸಲಾಯಿತು. ಆ ಹೊತ್ತಿಗೆಲ್ಲಾ ರಸ್ತೆಯ ಎರಡೂ ಕೊನೆಗೆ ಕಡಿದು ಬೀಳಿಸಿದ್ದ ಗಿಡಗಳನ್ನು ಕುರುಹೂ ಇಲ್ಲದಂತೆ ನಾಶಪಡಿಸಲಾಗಿತ್ತು. ಇಬ್ಬರಿಗೂ ಕುಡಿಯಲು ನೀರನ್ನೂ, ತಿನ್ನಲು ಆಹಾರವನ್ನೂ ಕೊಡಲಾಯಿತು. ವಿಷಯ ತಿಳಿದಕೂಡಲೇ ಓಡಿಬಂದ ಸಮಾಜದ ದೊಡ್ಡವ್ಯಕ್ತಿಗಳೆನೆಸಿಕೊಂಡವರು ತಮ್ಮತಮ್ಮ ಸುಪುತ್ರರನ್ನು ಅಪ್ಪಿ ಮುದ್ದಾಡಿದರು. ಪ್ರಾಣಿಗೆಂದು ಉಳ್ಳಹಾಕಿದ್ದು, ರಾತ್ರಿಯಿಡೀ ನಿರ್ಲಕ್ಷಿಸಿದ್ದು, ಬೆಳಿಗ್ಗೆ ಕಾಪಾಡಿದರೂ ಉತ್ತಮ ಚಿಕಿತ್ಸೆ ನೀಡದಿದ್ದುದು, ಒಳ್ಳೆಯ ಆಹಾರ ಕೊಡದಿದ್ದುದು, ಮಲಗಿಸಲು ಬೆಡ್ ಒದಗಿಸದೇ ಕಂಬಳಿಯನ್ನಿತ್ತಿದ್ದು ಹೀಗೆ ಮುಂತಾದ ಕಾರಣಗಳಿಗಾಗಿ ಊರವರನ್ನು ಹೀನಾಮಾನ ಬಯ್ದಿದ್ದರು. ಕೂಗಾಟ ನಡೆಯುತ್ತಿದ್ದ ವೇಳೆ ರಾಮಯ್ಯ ಮತ್ತು ಲಕ್ಷ್ಮಣನಾಯ್ಕರಿಬ್ಬರೂ ಪರಸ್ಪರ ಮುಸಿಮುಸಿ ನಗುತ್ತಿದ್ದರು. ಅಂಬುಲೆನ್ಸಿನೊಳಗೆ ಸ್ಟ್ರೆಚರ್ನೊಂದಿಗೆ ಮಲಗಿಸುವಾಗ ನಾನೂ ಕೈನೀಡಿದೆ. ನಂತರ ಅವರೀರ್ವರ ಕಿವಿಯಲ್ಲುಸುರಿದೆ, “ಮುಂದೆ ಮತ್ತೊಮ್ಮೆ ಈ ರಸ್ತೆಯಲ್ಲಿ ಬಂದರೆ ಕಾಲಿಗೆ ಬಿದ್ದದ್ದು ಕುತ್ತಿಗೆಗೆ ಬೀಳುತ್ತದೆ ಹುಶ್ಯಾರ್…..,”

“ಏನೋ ಅದು? ಏನ್ ಹೇಳ್ತಿದಿಯಾ?” ಅವರಲ್ಲೊಬ್ಬನ ಅಪ್ಪನೆನಿಸಿಕೊಂಡವ ಅರಚಿದ.

ಶುಭ್ರ ಬಿಳಿಲುಂಗಿಯುಟ್ಟಿದ್ದ ನಾನು ಅಷ್ಟೇ ಶುಭ್ರವಾಗೆಂದೆ, “ನಥಿಂಗ್ ಮೋರ್ ಸರ್. ಜಸ್ಟ್ ವಿಶಿಂಗ್ ದೆಮ್ ಟು ಗೆಟ್ ವೆಲ್ ಸೂನ್” ಆ ಹಳ್ಳಿಗಾಡಿನಲ್ಲೂ ನೂತನ ನಾಗರೀಕತೆ ಪಸರಿಸಿದ್ದು ನೋಡಿ ಅಚ್ಚರಿಗೊಂಡರೂ, ವಿದ್ಯಾಭ್ಯಾಸವನ್ನು ವಿಚಾರಿಸಿದವರು ಹೊರಟುಹೋದರು. ಅವರಿಗೂ ಗೊತ್ತಾಗಿತ್ತು, ಇನ್ನೂ ಹೆಚ್ಚು ಕೂಗಾಡಿದರೆ ಸಮರ್ಥ ಉತ್ತರ ಕೊಡಲೊಬ್ಬ ಎದುರಾಳಿ ಇದ್ದಾನೆಂದು. ಮಳೆಬಿಟ್ಟ ಆಗಸದಲ್ಲಿ ಮತ್ತೆ ಬಾಲನೇಸರನ ಆಗಮನವಾಗಿತ್ತು. ಸುತ್ತಲೆಲ್ಲ ಪ್ರಖರ ಬೆಳಕು ಪಸರಿಸುತ್ತಿದ್ದ ಸಮಯದಲ್ಲಿ, ಕತ್ತಲನ್ನು ಹೊತ್ತ ಗಾಡಿ ಹೊರಟಿತು. ಅಣ್ಣಪ್ಪ ನಗುತ್ತಾ ಫಲವನ್ನು ಬಯಸದೇ ಟಾ ಟಾ ಮಾಡುತ್ತಿದ್ದ.

**********

ನಾವೆಲ್ಲರೂ ಸೇರಿ ಹೂಡಿದ್ದ ಉಪಾಯದಲ್ಲೊಂದು ಬೃಹತ್ ದೊಡ್ಡ ತಪ್ಪಿತ್ತು. ಆದರೆ ಅದರಿಂದ ಯಾರಿಗೂ ತೊಂದರೆಯಾಗುವ ಸ್ಥಿತಿಯಿರಲಿಲ್ಲ. ಅದೇನೆಂದು ನಮಗೂ ಗೊತ್ತಿತ್ತು, ಉಳ್ಳಕ್ಕೆ ಬಿದ್ದವರಿಗೂ ಗೊತ್ತಿತ್ತು. ಕುಣಿಕೆಗೆ ಸಿಕ್ಕ ಇಬ್ಬರನ್ನೂ ನೋಡಿದ ಕುಸುಮ, ಕೂಡಲೇ ಮನೆಗೆ ತಿಳಿಸಿ ಊರವರನ್ನು ಕರೆತಂದು ತಪ್ಪಿಸಬಹುದಾಗಿತ್ತು. ಆದರೆ ಅದಾಗದಿದ್ದಾಗಲೇ ಅವರಿಗೆ ತಿಳಿದುಹೋಗಿತ್ತು, ತಾವು ಮೊದಲೇ ತಮಗೆಂದೇ ತಯಾರಿಸಿದ ಬಲೆಗೆ ಸಿಕ್ಕುಬಿದ್ದಿದ್ದೀವೆಂದು. ಆ ಭಯವೂ ಮತ್ತು ನಮಗೇನೂ ಆಗಲಾರದೆಂಬ ಧೈರ್ಯವೂ ಅವರಲ್ಲಿತ್ತು. ಈ ನಿಟ್ಟಿನಲ್ಲೇನಾದರೂ ತಮ್ಮ ಹೆತ್ತವರಿಂದ ವಿಚಾರಣೆ ನಡೆದಲ್ಲಿ ಮುಂದೊಮ್ಮೆ ತಮಗೆ ಸಂಚಕಾರವಿದೆಯೆಂದರಿತು ತಡೆಹಿಡಿದಿದ್ದರು. ಸೂಚ್ಯವಾಗಿ ತಪ್ಪು ತಮ್ಮದಿದೆಯೆಂದು ತಿಳಿಸಿದ್ದರು.

ಮುಂದೆಂದೂ ಭಟ್ಕಳದಲ್ಲೆಲ್ಲೂ ಅವರನ್ನು ನಾನು ನೋಡಿದ್ದಿಲ್ಲ. ಎರಡು ತಿಂಗಳ ನಂತರ ಇನ್ಸ್ಪೆಕ್ಟರ್ರಿಗೆ ಚಿತ್ರದುರ್ಗದ ತಾಲೂಕೊಂದಕ್ಕೆ ವರ್ಗವಾಯಿತೆಂದು ಕೇಳಲ್ಪಟ್ಟೆ. ಅಧಿಕಾರದ ಗದ್ದುಗೆಯಲ್ಲಿದ್ದವರಿಂದ ಮುಂದಾಗಬಹುದಾದ ತೊಂದರೆಗಳಿಂದ ಮುಕ್ತರಾಗಿ ನಿಟ್ಟುಸಿರಿಟ್ಟಿದ್ದೆವು. ಕುಸುಮಳೀಗ ಧೈರ್ಯದಿಂದ ಒಬ್ಬಳೇ ಅದೇ ದಾರಿಯಲ್ಲಿ ತಿರುಗಾಡುತ್ತಾಳೆ. ತನಗೇನಾದರೂ ತನ್ನವರು ಕೈಬಿಡಲಾರರೆಂಬ ಯೋಚನೆಯೊಂದು ಗಟ್ಟಿಯಾಗಿ ಅವಳ ಪ್ರಜ್ಞಾವಲಯದಲ್ಲಿ ಪ್ರತಿಷ್ಠಾಪನೆಗೊಂಡಿದೆ. ಅಣ್ಣಪ್ಪನೀಗಲೂ ತೂತಾದ ಚಡ್ಡಿಯನ್ನು ಹಾಕುವುದನ್ನು ಬಿಟ್ಟಿಲ್ಲ.

 

-ಸಂದೀಪ ಪರಮೇಶ್ವರ ಹೆಗ್ಡೆ.

hegdesandeep10@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!