ಕಥೆ

ಮರೆಯಾದ ಮಾಂತ್ರಿಕ

ಸಂಜೆ ರಾತ್ರಿಗಳು ಸಮ್ಮಿಲನಗೊಂಡು, ತಮ್ಮನ್ನು ತಾವೇ ಗುರುತಿಸಿಕೊಳ್ಳಲಾಗದ ಸಮಯ. ಕಳೆದ ಮೂರು ತಾಸುಗಳಿಂದ ಕೇಳುತ್ತಿರುವ ಈ ಚುಕುಬುಕು ಸದ್ದು ಬಹುಶಃ ಉತ್ಸಾಹವನ್ನು ಕ್ಷೀಣಿಸಿರಬಹುದು. ಬೇಸರ ಮನದ ಬಾಗಿಲ ತಟ್ಟಲು ಮುಂದಾಗುತ್ತಿದೆ. ಎಂಟು ತಾಸುಗಳ ಹಿಂದೆ ತಾಜಾ ಸುದ್ದಿ ಹೊತ್ತ ಹೂ ಬಾಡಿದೆ. ಪ್ರಯತ್ನದಿಂದ ಅರಳಿಸಿದರೂ ಆಕರ್ಷಿಸದೇ ಅಣಗಿಸಿ ನಿಂತ ಎಲ್ಲಾ ಮುಸಡಿಗಳಿಗೆ ಗಡ್ಡ ಮೀಸೆ ಬರೆದು ಮುಗುಳ್ನಗಲೂ ಅವಕಾಶ ಕಸಿದ ಪತ್ರಿಕೆ, ಲೇಖನಿಯ ಉತ್ಸಾಹವನ್ನು ಹೀರಿ ಬರಿದು ಮಾಡಿತ್ತು. ತಂಗಾಳಿಯು ಚುಂಬಿಸಲೆಂದು ರೈಲುಬೋಗಿಯ  ಬಾಗಿಲಿನ ಹತ್ತಿರ ಬಂದು ನಿಂತೆ. ಯಾರೋ ಕರೆದಂತಾಗಿ ಹಿಂದೆ ತಿರುಗಿದರೆ, ಸಣಕಲು ದೇಹದ ಭಿಕ್ಷುಕ ಬೋಗಿಯ ಮೂಲೆಯೊಂದನ್ನು ದಿಟ್ಟಿಸಿ ನೋಡುತ್ತಿದ್ದ. ಮತ್ತೆ ನನ್ನ ದೃಷ್ಟಿ ಗಗನದೆಡೆಗೆ ನೆಗೆದು ಹುಣ್ಣಿಮೆ ಚಂದ್ರನನ್ನು ನಾಟಿತು. ಕಣ್ಣಲ್ಲಿ ಚಂದ್ರನ ಬಿಂಬ ಮೂಡುವಷ್ಟರಲ್ಲಿ ಏನೋ ಹೊಳೆಯಿತು, ತಕ್ಷಣ ಹಿಂದೆ ತಿರುಗಿ ಆ ಭಿಕ್ಷುಕನನ್ನು ದಿಟ್ಟಿಸಿದೆ.

ಅರೇ! ಇವನು ಅದೇ ಗಾರುಡಿಗ, ಪ್ರಚಂಡ ಮಾಂತ್ರಿಕ. ಹತ್ತು ವರ್ಷಗಳ ಹಿಂದೆ ಪ್ರತಿ ಸಂತೆಯ ವಾರದ ನನ್ನ ಶಾಲಾ ದಿನಗಳನ್ನು ತಿಂದ ಮಾಯಾವಿ, ಹಾಜರಾತಿ ಇಲ್ಲದೇ ತನ್ನ ಸಂತೆ ಕ್ಲಾಸಿನಲ್ಲಿ ಎಲ್ಲರನ್ನೂ ಕಟ್ಟಿಹಾಕುತ್ತಿದ್ದ  ಮೋಡಿಗಾರ, ಉತ್ಸಾಹಕ್ಕೆ ನವಚೈತನ್ಯ ತುಂಬುವಂತಹ ಇವನ ಹಾವಭಾವ, ಸಂತೆಯಲ್ಲಿ ಕೊಳ್ಳಬೇಕಾದ ಸಾಮಗ್ರಿಗಳ ನೆನಪನ್ನು ಕೊಂದು ತನ್ನ ಆಟದ ಕಡೆಗೆ ಜನರನ್ನು ವಶೀಕರಿಸಿಕೊಳ್ಳುತ್ತಿದ್ದ  ಜಾದೂಗಾರ, ಜಾದೂವಿನ ಮೇಲೆ ಜಾದೂ ತೋರಿಸಿ ಎಲ್ಲಿಯೂ ಬೇಸರ ಇಣುಕದಂತೆ ಜನರನ್ನು ನಗಿಸಿ, ಹೆದರಿಸಿ ಸಂಜೆಹೊತ್ತಿಗೆ ಚಿಲ್ಲರೆಯ ದೊಡ್ಡಗಂಟನ್ನು ಕಟ್ಟುತ್ತಿದ್ದ ಮಹಾ ಗಾರುಡಿಗ. ಎಂತಹ ಹಾವನ್ನಾದರೂ ಕ್ಷಣಾರ್ಧದಲ್ಲಿ ಹಿಡಿದು ಚೀಲಕ್ಕೆ ತುರುಕಿಕೊಳ್ಳುತ್ತಿದ್ದ ಚಾಲಾಕಿ,ಇಂದು ಗಡ್ಡ ಮೀಸೆಗಳು ಇವನ  ಮುಖವನ್ನು ಮುಳುಗಿಸಿಗುರುತನ್ನು ಅಳಿಸಿ ಹಾಕಿವೆ. ಬದುಕಿನ ಆಂದೋಲನಕ್ಕೆ ದಣಿದು ಅವನೇ ರೈಲಿನ ಒಂದು ಮೂಲೆಗೆ ವಶೀಕರಣಗೊಂಡಿದ್ದಾನೇನೋ? ಅನ್ನುವಂತೆ ಬೋಗಿಯ ಮೂಲೆಯನ್ನು ದಿಟ್ಟಿಸುತ್ತಾ ಕೂತಿದ್ದಾನೆ. ತನ್ನೆಲ್ಲಾ ಶಕ್ತಿಯನ್ನು ಯಾವ ಅರ್ಜುನನಿಗೆ ಧಾರೆ ಎರೆದ?ಯಾವ ಕುಂತಿಗೆ ದಾನಮಾಡಿದ? ಅಥವಾ ಏಕಲವ್ಯನ ಹೃದಯಹೀನ  ದ್ರೋಣಪುತ್ಥಳಿ ಮೋಸದ ತಕ್ಕಡಿ ತೂಗಿ ಕಸಿದುಕೊಂಡಿತೋ? ಎಂಬ ಪ್ರಶ್ನೆಗಳು ಚಕಮಕಿಗೊಂಡು ಆ ಮಾಂತ್ರಿಕನನ್ನು ಮಾತನಾಡಿಸಲು ಪ್ರಚೋದಿಸಿದವು.

ಭಿಕ್ಷುಕನ ವೇಷದಲ್ಲಿದ್ದ ಈ ಜಾದೂಗಾರನನ್ನು ಮಾತನಾಡಿಸಲು ಯಾವ ಪ್ರಶ್ನೆಯ ಬಾಣವನ್ನು ಬಿಡಲಿ? ಹೇಗಿದ್ದೀಯ? ಎಂದರೆ ಮೂರ್ಖನಾಗುವೆ. ಎಲ್ಲಿಗೆಹೊರಟೆ? ಎಂದರೆ ಅಸಮಂಜಸ ಆದರೂ ಸ್ವಾಭಿಮಾನ ಬದಿಗಿಟ್ಟು ಪ್ರಶ್ನಾಕೃತಿಯ ಅನೇಕ ಬಾಣಗಳನ್ನು ಪ್ರಯೋಗಿಸಿದರೂ, ಮೌನವೇ ಅವನ ಉತ್ತರವಾಗಿತ್ತು. ಮೈಮುಟ್ಟಿ ಮಾತನಾಡಿಸಿದರೂ ಅಷ್ಟೇ, ನನ್ನ ಮುಖ ನೋಡಿ ಸ್ವಲ್ಪ ಹಿಂದೆ ಸರಿದು ತನ್ನ ತಲೆಯನ್ನು ತಿರುಗಿಸುತ್ತಾ ಹುಚ್ಚನಂತೆ ತುಸು ನಟಿಸಿ ಮತ್ತದೇ ಮೂಲೆಯನ್ನು ದಿಟ್ಟಿಸುತ್ತಾ ಕುಳಿತ. ಅವನ ಸ್ಥಿತಿ ನನ್ನನ್ನೂ ಮೌನಿಯಾಗಿಸಿತು. ಏನೂ ಮಾತಾಡದೆ ನನ್ನ ದೇಹವನ್ನು ಅಲ್ಲಿಂದ ನನ್ನ ಸೀಟಿನೆಡೆಗೆ ಒಯ್ದೆ. ನನ್ನ ಕಣ್ಣಿಗೆ ಅವನು ಕೇವಲ ದೊಂಬರಾಟ, ಹಾವಾಟ ಆಡುತ್ತಿದ್ದ ಕಾಟ್ರಾಜ್ ಆಗಿರಲಿಲ್ಲ್ಲ, ಯಾರೋ ಹೆತ್ತು ಬಿಸಾಡಿದ್ದ ಹೆಣ್ಣು ಕೂಸನ್ನು ತನ್ನ ಮಗಳಂತೆ ಸಾಕಿಕೊಂಡಿದ್ದ ಆದರ್ಶವಾದಿ. ರಾತ್ರಿ ಹಗಲೆನದೆ ಯಾರ ಮನೆಯಲ್ಲಿ ಹಾವು ತೂರಿದರೂ ತಕ್ಷಣ ಅಲ್ಲಿಗೆ ಹೋಗಿ ಅವರ ಸಮಸ್ಯೆಯನ್ನು ತನ್ನ ಚೀಲದೊಳಗೆ ತುರುಕಿಕೊಳ್ಳುತ್ತಿದ್ದ ಸಮಾಜಸೇವಕ. ಇವನು ಸಂತೆಯಲ್ಲಿ ತೋರಿಸುತ್ತಿದ್ದ ಜಾದೂಗಳು ನನಗೆ ಇಂದಿಗೂ ವಿಸ್ಮಯವಾಗಿವೆ. ಅವುಗಳಲ್ಲಿ ಕೆಲವು ಇವನಿಂದಲೇ ಕಲೆತು ಮರೆತಿದ್ದೆ. ಕಣ್ಣಿಗೆ ನಿದ್ದೆ ಆವರಿಸುವಷ್ಟರಲ್ಲಿ ಅವನ ಸಂತೆಯ ಆಟದ ದೃಶ್ಯ ಮನದ ಪರದೆಯ ಮೇಲೆ ಮೂಡಿತು.

ಕಾಟ್ರಾಜ್ ಬಂದೀನ್ರೀ ಕಾಟ್ರಾಜ್, ಇವತ್ತು ಹೊಸ ಆಟ ತೋರಿಸ್ತೀನ್ರೀ, ಧಣಿಗಳು ಧರ್ಮ ಕೊಟ್ಟು ನನ್ನ ಬೆಳಿಸ್ಯಾರ್ರೀ. ಅವರಿಗೆ ಈ ಆಟ ತೋರ್ಸಾಕ್ ಬಂದೀನ್ರೀ. ಕಾಟ್ರಾಜ್ ಆಟ ಹಳ್ಳಿಲಿದ್ದ ದಿಲ್ಲಿಗೂ ಗೊತ್ರೀ. ಕಾಟ್ರಾಜ್ ಆಟ ನೋಡ್ಬರ್ರೀ. ಕಣ್ಕಟ್ ಇಲ್ಲಾ, ಮಾಟ ಇಲ್ಲಾ, ಮಂತ್ರ ಇಲ್ಲಾ, ತಂತ್ರ ಇಲ್ಲಾ ಇದ್ದದ್ದು ಇದ್ದಂಗ ತೋರ್ಸೋ ಆಟ ರೀ, ಕಾಟ್ರಾಜ್ ಆಟ. ಇವನ ಆ ಧ್ವನಿಗೆ ಜನ ಇವನ ಸುತ್ತಲೂ ನೆರೆದರು.

ಒಂದು ವೃತ್ತಾಕಾರದ ಬಿದಿರಿನ ಡಬ್ಬಿಯನ್ನು ತೋರಿಸುತ್ತಾ.

ನೋಡ್ರೀ ಈ ಡಬ್ಯಾಗೇನೈತ್ರೀ?

ಏನೈತ್ರೀ?  (ಹಿಂದಿನಿಂದ ಅವನ ಮಗ ಬಂಗಾಳಿ ಇವನ ಮಾತಿನ ಕೊನೆಯ ಪದವನ್ನು ಪುನರುಚ್ಚರಿಸುತ್ತಾನೆ)

ಸಂತೆಗೆ ಬಂದ ಜನರಲ್ಲಿ ಕಾಲುಭಾಗ ಕಾಟ್ರಾಜನ ಆಟದ ವೃತ್ತದ ಪರಿಧಿಯೇ ಆಗಿತ್ತು.

ಈ ಡಬ್ಬೇನಾಗ ನೋಡ್ರಿ!

ನೋಡ್ರೀ

ಇವತ್ತಿನ್ ಸೆಂತಿಗ್ ಬಂದ್ ಮದ್ಲಗಿತ್ತಿ ಅದಾಳ್ ರೀ

ಮದ್ಲಗಿತ್ತಿ ಅದಾಳ್ ರೀ.

ನಿನ್ನೆ ಗೌಡ್ರ ಹೊಲದಾಗ ಸಿಕ್ಲೂ ರೀ, ಅಬಾ ಬಾ ಬಾ ಬಾ ಬಾ.

ಅಬಾ ಬಾ ಬಾ ಬಾ.

ನೋಡ್ಬೇಕ್ರೀ ಇವ್ಳ ವಯ್ಯಾರಾನಾ

ಹೌದ್ರೀ.

ಗೌಡ್ರ ಹೊಲದಾಗ ಮದ್ಲಿಂಗನ್ ಹುಡುಕ್ತಿದ್ಲು ರೀ

ಹೌದ್ರೀ.

ನಮ್ಮೂರ್ ಗೌಡ್ರ ಮನ್ಸು ದೊಡ್ದೂ ರೀ.

ಮನುಸ್ ರೀ.

ಕಾಟ್ರಾಜನ್ನ ಕರ್ದು, ನೂರುಪಾಯ್ ಕೊಟ್ಟು

ಕೊಟ್ಟು.

ಮದ್ಲಗಿತ್ತೀನ್ ನೀನೇ ತಗಂಡೋಗ್ ಅಂದ್ರೂ ರೀ

ತಗಂಡೋಗ್ ಅಂದ್ರು ರೀ.

ಅವಳ್ನ ಹಂಗೆ ಮುದುರಕೊಂಡು ಬೊಕ್ಕಣದಾಗ ಇಟ್ಕಣಾಕ್ ನೋಡ್ದೇರೀ.

ಬೊಕ್ಕಣದಾಗ್ ಯಾರಿದ್ರೂ?.

ಬೊಕ್ಕಣದಾಗ ಈ ಹಸುರು ಮದ್ಲಿಂಗ ಇದ್ದಾ ರೀ.

ಸಣಕಲು ಸೊಂಟಕ್ಕೆ ಜೋತಾಡುವ ಪ್ಯಾಂಟಿನ ಕಿಸೆಯಿಂದ ಹಸಿರುಹಾವನ್ನು ತೆಗೆದು ಜನರೆದುರು ಮಂಗಳಾರತಿ ಮಾಡಿ ಬಂಗಾಳಿ ಕಡೆ ಎಸೆದ. ಬ೦ಗಾಳಿ ಅದನ್ನು ಸಿಂಬೆಯಂತೆ ಸುತ್ತಿ ಸಣ್ಣ ಖಾಲಿಬುಟ್ಟಿಯಲ್ಲಿ ಮುಚ್ಚಿಡುತ್ತಾ,

ಮತ್ತೆ ನಿನ್ ಚಡ್ಡೀ ಬೊಕ್ಕಣದಾಗ ಹಕ್ಕೆಬೇಕು.ಅಂದ.

ಹಸಿರು ಹಾವನ್ನು ಕಂಡು ಬೆಚ್ಚಿಬಿದ್ದಿದ್ದ ಜನರು ನಕ್ಕು ಒಂದು ಹೆಜ್ಜೆ ಮುಂದೆ ಸರಿದರು.

ಏ ಚಡ್ಯಾಗಲ್ಲಾ ಲೇ ಬಂಗಾಳಿ

ಮತ್ತೆಲ್ಲಿ ಹಕ್ಕೆಂಡೆ.

ಪುಟ್ಯಾಗ್ಹಕ್ಕೊಂಡು ಸಂತ್ಯಾಗ ಎಲ್ಲಾ ಧಣಿಗುಳಿಗೆ ತೋರ್ಸಾನಾ ಅಂತ ತಂದೀನ್ರೀ.

ಮದ್ಲಗಿತ್ತಿ ಮಿಣಿಮಿಣಿ ಮಿಂಚ್ತಾಳ್ರೀ, ಪುಟ್ಯಾಗ್ ಹೋಕ್ಕಂಡು ಬುಸ್. (ಬುಸ್ ಎಂದು ಜೋರಾಗಿ ಶಬ್ದ ಮಾಡುತ್ತಾ ಬಂದು ಹೆಜ್ಜೆ ಮುಂದಿಟ್ಟು ಜನರೆಡೆಗೆ ತನ್ನ ಕೈಯಲ್ಲಿದ್ದ ಬುಟ್ಟಿಯನ್ನು ತೋರಿಸಿದ ಆದರೆ ತೆಗೆಯಲಿಲ್ಲ. ಯಾವುದೋ ಶಕ್ತಿಯುತ ಗಾಳಿ ದೂಕಿದಂತೆ ಜನರು ಹಿಂದೆ ಸರಿದರು)

ಬುಸ್ ಅಂದ್ಲು ರೀ

ಟುಸ್ ಅಂದ್ಲು ರೀ (ನೆರೆದ ಕೆಲವರು ನಕ್ಕು ಮತ್ತೆ ಮುಂದೆ ಸರಿದರು)

ಏ ಟುಸ್ ಅಲ್ಲಾ. ಬುಸ್.

ಕಾಟ್ರಾಜನ ಮಾತು ಮುಂದುವರೆಯುತ್ತಿದ್ದಂತೆ ವೃತ್ತದ ಮೂಲೆಯಲ್ಲಿ ಕುಳಿತಿದ್ದ ಅವನ ಹೆಂಡತಿ ರೂಪಾಳಿ ತನ್ನ ಕೂಸನ್ನು ಮಗನ ಕೈಗಿತ್ತು ವೃತ್ತದ ಮಧ್ಯೆ ಒಂದು ಮುಳ್ಳಿನ ಹಾಸನ್ನು ಹಾಸಿ ಮುಂದಿನ ಆಟಕ್ಕೆ ಸಿದ್ದತೆ ಮಾಡಿದಳು.

ಮದ್ಲಗಿತ್ತಿನಾ ಇವಾಗ್ ತೋರ್ಸಂಗಿಲ್ಲಾ

ಮತ್ಯಾವಾಗ್ ತೋರುಸ್ತೀ

ಒಂದು ಶಕ್ತಿ ಆಟ ನೋಡ್ರಿ ಧಣಿ

ಆಮೇಲ್ ಮದ್ಲಿಗಿತ್ತಿಗೆ ಎಂಗ್ ಮದ್ವೆಮಾಡ್ತೀನ್ ನೋಡ್ರಿ.

ಏ ಮದ್ಲಗಿತ್ತಿ ಜೋಪಾನ ಎಲ್ಲಾನ ಬುಟ್ಬುಟ್ಟೀಯಾ ಎಂದು ಮಗನ ಕೈಗೆ ಆ ಬುಟ್ಟಿಯನ್ನು ಕೊಟ್ಟು.

ವೃತ್ತದ ಮಧ್ಯದಲ್ಲಿ ರೂಪಾಳಿ ಹಾಸಿದ್ದ ಮುಳ್ಳಿಹಾಸಿನ ಹತ್ತಿರ ಬಂದು

ನೋಡ್ರೀ ಈ ಮಳೆ ಒರಿಜಿನಲ್ ರೀ, ಕಾಟ್ರಾಜ್ ಆಟದಾಗ ಎಲ್ಲಾ ಒರ್ಜಿನಲ್ ರೀ..

ಅಂಗಾರೆ ಅದರ ಮ್ಯಾಲೆ ಎಗರು. (ಜನರು ನಗುತ್ತಿದ್ದಂತೆ ಅದನ್ನು ಇಮ್ಮಡಿಗೊಳಿಸಲು)

ನಾನೆಗರಾದಲ್ಲಾ, ನಿನ್ನ ಅದ್ರುಮ್ಯಾಲೆ ಬಿಸಾಕ್ತೀ,

ಅಂತ ಮಗನ ಕಡೆ ಓಡಿದ.

ಅಯ್ಯಯ್ಯಪ್ಪೋ ಎನ್ನುತ್ತಾ ಮಗ ಅವನ ಹಿಂದೆ ಕಾಟ್ರಾಜ್ ಎರಡುಸುತ್ತಿನ ಮುಟ್ಟಾಟ ಮುಗಿಯುತ್ತಿದ್ದಂತೆ.

ಕಾಟ್ರಾಜನ ಹೆಂಡತಿ ತನ್ನ ದೇಹದ ಭಾರವನ್ನೆಲ್ಲಾ ಸಮವಾಗಿಸಿಕೊಂಡು ಮುಳ್ಳಿನ ಹಾಸಿನ ಮೇಲೆ ಮಲಗಿದಳು.

ಕಾಟ್ರಾಜ್ ಶಕ್ತಿ ಆಟ ನೊಡ್ರಿ. ಏ ತಾಕತ್ಕಿಬಾತ್ ರ್ರಿ, ತಾಕತ್ ನೈ ಆಟ ನೈರ್ರಿ, ತಾಕತ್ ಇದ್ರೆ ಎಲ್ಲಾ ಇದ್ದಂಗ್ರೀ, ಸಕ್ತಿ ಇಲ್ಲಾಂದ್ರ ಏನಿದ್ರು ಇಲ್ದಂಗ್ರೀ ಎನ್ನುತ್ತಾ

ಒಂದೂವರೆ ಎರಡೂವರೆ ಅಡಿ ಅಗಲದ ಒಂದು ಕಲ್ಲುಬಂಡೆಯನ್ನ ಎತ್ತಿ ಮುಳ್ಳಹಾಸಿನ ಮೇಲೆ ಮಲಗಿದ್ದ ತನ್ನ ಹೆಂಡತಿಯ ಮುಂಡದಮೇಲೆ ಉದ್ದವಾಗಿ ಇಟ್ಟು,

ಮನ್ಸಾಗೆ ಸಗುತಿ ಇದ್ರ ಗುಡ್ಡ ಬಡೀತಾನ್ರೀ

ಗಡ್ಡ ಬಡೀತಾನ್ರೀ.

ಲೇಗಡ್ಡ ನೈ ಲೇ ಗುಡ್ಡ ಗುಡ್ಡಾ.

ಹಾಂ, ಗುಡ್ಡ.

ಸಕ್ತಿ ಇಲ್ಲಾಂದ್ರೆ ಕಡ್ಲೆಗುಡ ಕಡಿಯಂಗಿಲ್ಲಾರೀ

ಕಡಿಯಂಗಿಲ್ರೀ

ನೋಡನ್ರೀ ಈ ನನ್ ಮಗನ್ ತೆಲೆಗಟ್ಟಿಗೈತಾ ಇಲ್ಲಾಂತ ಎನ್ನುತ್ತಾ ಮೂಲೆಯಲ್ಲಿದ್ದ ಉದ್ದವಾದ ಸುತ್ತಿಗೆ ಹಿಡಿದ

ಅಯ್ಯಯ್ಯಪ್ಪೋ. ಮತ್ತೆ ಒಂದು ಸುತ್ತು ತಂದೆ ಮಗನ ಮುಟ್ಟಾಟ ನಡೆಯಿತು.

ಸುತ್ತಿಗೆ ಕೈಲಿ ಹಿಡಿದು ತಿರುಗಿಸುತ್ತಾ.  ರೂಪಾಳಿ

ಓಯ್ (ಮುಳ್ಳುಹಾಸಿನ ಮೇಲೆ ಮಲಗಿದ್ದ ಅವನ ಹೆಂಡತಿ ರೂಪಾಳಿ ಉತ್ತರಿಸುತ್ತಾಳೆ)

ನಿಂತಾಗ ಸಗುತಿ ಐತಾ.

ಐತೆ.

ಎಷ್ಟೈತೆ?

ಜಗ್ಗಿ ಐತೆ.

ನಿಂತಾವ ಸುಗುತಿ ಇದ್ರೆ, ಸುತ್ತ ನಿಂತಿರೋ ದಣಿಗಳು ಧರ್ಮ ಹಾಕ್ತಾರೆ

ಏ ರೂಪಾಳಿ.

ಓಯ್.

ದಣಿಗಳು ಧರ್ಮ ಕೊಡ್ತಾರಿವತ್ತು, ನಿನಗೇನ್ ಬೇಕು ಕೇಳು

ಏನ್ ಕೊಡ್ತೀ.

ಕೇಟಿ ಬೇಕಾ?

ಬ್ಯಾಡ.

90 ಬೇಕಾ?

ಬ್ಯಾಡ.

ಏನ್ ಬೇಕು ಕೇಳು.

ಹಸೆಕೋಳಿ ರಗುತ ಬೇಕು.

ಮತ್ತೆ ಕಾಟ್ ರಾಜ್ ಧರ್ಮ ಕೇಳುತ್ತಾ

ಧರ್ಮ ಹಾಕಿ ದಣಿ ಧರ್ಮ ಹಾಕಿ. ಇಲ್ಲಿ ನೆಲಕ್ಕೊಗಿರಿ ನಾ ತಗಾತಿನಿ. ದರ್ಮ ಹಾಕಿ ದಣಿ ಎಂದು ಕೇಳುತ್ತಿದ್ದಂತೆ, ಕೆಲವರು ಚಿಲ್ಲರೆ ಅವನೆಡೆಗೆ ಎಸೆದರು. ಚಿಲ್ಲರೆ ಮಳೆ ಹನಿಗುಟ್ಟಿ ನಿಲ್ಲುತ್ತಿದ್ದಂತೆ

ಜೈ ಕೌಳೆ ಮಾರೆಮ್ಮ, ಬಳ್ಳಾರಿ ದುರುಗಮ್ಮ (ಎಂದು ಜೋರಾಗಿ ಹೇಳುತ್ತಾಸುತ್ತಿಗೆಯನ್ನು ಎತ್ತಿ ತನ್ನ ಹೆಂಡತಿಮೇಲೆ ಮಲಗಿದ್ದ ಬಂಡೆಯಮೇಲೆ ಹಾಕಿದ. ಬಂಡೆ ಎರಡು ಹೊಳಾಯ್ತು )

ಬಂಗಾಳಿ ಚಪ್ಪಾಳೆ ಸದ್ದು ಕ್ಷಣದ ಮೌನ ಕೊಂದು ನೆರೆದ ಜನ ಅನುಸರಿಸುವಂತೆ ಮಾಡಿತು.ಬಂಗಾಳಿ ಚಿಲ್ಲರೆಯನ್ನು ಖಾಲಿಮಾಡಿಟ್ಟ ಬುಟ್ಟಿ ಹಿಡಿದು ಕಾಟ್ರಾಜ್ ಮತ್ತೆ ಎಲ್ಲರ ಹತ್ತಿರ ಹೋಗಿ ಧರ್ಮಕೊಡಿ ಧಣಿ ಧರ್ಮಕೊಡಿ ಎನ್ನುತ್ತಾ ಎರಡು ಸುತ್ತುಹಾಕುತ್ತಿದ್ದಂತೆ ರೂಪಾಳಿ ಮುಳ್ಳುಹಾಸನ್ನು, ಒಡೆದ ಬಂಡೆಯನ್ನು ಮೂಲೆಯಲ್ಲಿಟ್ಟು ಕುಳಿತಳು. ಬರಗಾಲದ ಮಳೆಯಂತೆ ಬುಟ್ಟಿಯಲ್ಲಿ ಸಂಗ್ರಹವಾದ ಚಿಲ್ಲರೆಯನ್ನು ರೂಪಾಳಿ ಕೈಗೆ ಕೊಟ್ಟು ಕಾಟ್ರಾಜ್ ಮುಂದಿನ ಆಟಕ್ಕೆ ತಯಾರಿಯಾಗಿ

ಏ ಬಂಗಾಳಿ.

ಓಯ್.

ಆ ಮದ್ಲಿಗಿತ್ತೀನ ಎಲ್ಲಿ ಬಿಟ್ಟೆ

ಗೋ ಇಲ್ಲೈತೆ.

ಹಾವಿನ ಬುಟ್ಟಿಯನ್ನು ತಂದೆಯ ಕೈಗೆ ಕೊಟ್ಟ.

ದಣಿ ಈ ವಾರದ್ ಸಂತೆ ಸ್ಪೆಸಲ್ ಈ ಮದ್ಲಿಗಿತ್ತಿ ಧಣಿ

ಇನ್ನ ಹಲ್ಲಿಕಿತ್ತಿಲ್ಲ ದಣಿ. ವಸಾ ಮದ್ಲಿಗಿತ್ತಿ ದಣಿ

ವಸಾ ಮದ್ಲಿಗಿತ್ತಿ.

ರೂಪಾಳಿ ತನ್ನ ತೊಡೆಯಮೇಲೆ ಕೂಸನ್ನು ಮಲಗಿಸಿ ಹಾಲುಣಿಸುತ್ತಾ ಚೀಲದಿಂದ ಕೆಲವು ಹಳ್ಳಾಕಿಸಿದ ಫೂಟೋಗಳನ್ನು ತೆಗೆದಿಡುತ್ತಿದ್ದಳು.

ಏ ಬಂಗಾಳಿ.

ಓಯ್.

ಆ ಪುಂಗಿ ಕೊಡು.

ಲುಂಗಿ ಇಲ್ಲಾ.(ನೆರೆದವರಲ್ಲಿ ಕೆಲವರು ನಕ್ಕರು)

ಉಸ್ಕಾ ದಿಮಕ್ ಕರಾಬ್ ಹೋಗಯಾ, ಲುಂಗಿ ಅಲ್ಲಲೆ ಪುಂಗಿ, ಪುಂಗಿ.

ಕಾಟ್ರಾಜ್ ಹಾವಿನ ಡಬ್ಬಿಯನ್ನು ನೆಲದಮೇಲಿಟ್ಟು ಮಗ ಕೊಟ್ಟ ಪುಂಗಿಯನ್ನು ಹಾವಿನ ಡಬ್ಬದ ಮೇಲಿಟ್ಟುತನ್ನ ಹೆಂಡತಿ ಕೈಯಲ್ಲಿದ್ದ ಗ್ರಾಫಿಕ್ಸ್ ನಲ್ಲಿ ಚಿತ್ರನಟರ ಜೊತೆ ತಾನು ನಿಂತಹಾಗೆ ತೆಗೆಸಿಕೊಂಡಿದ್ದ ಫೋಟೋಳನ್ನು ತೋರಿಸುತ್ತಾ, ಈಗಾಗಲೇ ಚಿಲ್ಲರೆ ಕೊಟ್ಟವರು ಹಿಂದೆ ಹೋಗಿ, ಕೊಡದವರು ಮುಂದೆ ಬನ್ನಿ ಎನ್ನುವ ಬೇಡಿಕೆಯನ್ನು ಪರೋಕ್ಷವಾಗಿ ಇಂದುಕಿರಾ ದಣಿಗುಳು ಮುಂದೆ ಬರ್ಬೇಕ್. ಎತ್ತರಾ ಇರಾ ದಣ್ಯೋರು ಇಂದುಕೋಗಿ ದಣಿ. ಆ ಊರು ದಣ್ಯೋರು ಮು೦ದುಕ್ ಬರ್ಬೇಕ್ ಈ ಊರು ದಣ್ಯೋರ್ ಮುಂದುಕ್ ಬರ್ಬೇಕ್ ಎಂದು ಕೆಲವರನ್ನು ತಾನೇ ಕೈಹಿಡಿದು ಮುಂದೆ ತಂದ. ಸುತ್ತಲಿನ ಜನರ ಮುಕ್ಕಾಲುಭಾಗ ಹಿಂದೆ ಮುಂದೆ ಆದದ್ದು ಖಚಿತಪಡಿಸಿಕೊಂಡು.

ದಣಿಗುಳೇ ನೋಡ್ರಿ ನನ್ ಆಟನಾ ಶಿವರಾಜ್ಕುಮಾರ್ ನೋಡ್ಯಾರ್ರೀ.

ಶಿರಾಜ್ಕುಮಾರ್ ನೋಡ್ಯಾರ್ರೀ.

ವಿಷಣುವರ್ದನ್ ನೋಡ್ಯಾರ್ರೀ.

ಹೌದ್ರೀ.

ಚಿರಂಜೀವಿ ನೋಡ್ಯಾರ್ರೀ.

ಚಿರಂಚೀವಿ ನೋಡ್ಯಾರ್ರೀ.

ಮತ್ತೊಮ್ಮೆ ಎಲ್ಲರಿಗೂ ತನ್ನ ಫೋಟೋಗಳನ್ನು ಪ್ರದರ್ಶಿಸಿ ರೂಪಾಳಿಗೆ ಕೊಟ್ಟು,

ಏ ಬಂಗಾಳಿ

ಓಯ್.

ದಣೇರ್ಗೇ ಮದ್ಲಗಿತ್ತಿ ತೋರ್ಸಾನಾ?

ಓ, ತೋರ್ಸು.

ದಣೇರೇ ನೋಡ್ರಿ ಇದಕ್ಕಿನ್ನ ಹಲ್ಕಿತ್ತಿಲ್ರೀ

ಹಲ್ಕಿತ್ತಿಲ್ರೀ.

ಓ ಮದ್ಲಗಿತ್ತೀ ಇಲ್ಲರೋ ದಣ್ಯೋರ್ನ ಒಂದ್ಸಾರಿ ಬಂದು ನೋಡು

ನೋಡು.

ನಿನಗ್ ಯಾರ್ ಬೇಕು ಅಂತಾ ಹೇಳು

ಹೇಳು.

ದಣೇರೇ ಹೊಸ ಮದ್ಲಿಗಿತ್ತೀ ಸಿಟ್ನಾಗದಾಳ್ ರೀ.

ಹೌದ್ ರೀ.

ನೋಡ್ತೀರೀ ಸಿಟ್ಟು.

ಓ ನೋಡ್ತೇವ್.

ಡಬ್ಬದ ಮೇಲಿನ ಪುಂಗಿಯಿಂದ ಹಾವಿನ ಡಬ್ಬದ ಮೇಲೆ ಕುಕ್ಕಿ ಮುಚ್ಚುಳ ತೆಗೆಯುತ್ತಿದ್ದಂತೆ ಬುಸ್ ಎಂದು ಬುಸುಗುಟ್ಟುತ್ತಾ ಪುಟ್ಟಿಯೊಳಗೆ ಸುತ್ತಿಕೊಂಡಿದ್ದ ಹಾವು ಅಂಗೈಯಷ್ಟಗಲದ ತನ್ನ ಹೆಡೆ ಬಿಚ್ಚಿ ಒಂದು ಮಾಳುದ್ದ ನಿಗರಿ ನಿಲ್ಲುತ್ತಿದ್ದಂತೆ ಮುಚ್ಚುಳದಿಂದ ಹಾಗೇ ಡಬ್ಬವನ್ನು ಮುಚ್ಚಿ ಕೈಯಲ್ಲಿ ಹಿಡಿದು ನಿಂತ.ಭಯಾನಕ ಹಾವು ಕಂಡ ಜನರ ಎದೆಡವಗುಟ್ಟಿದ ಸದ್ದು ಕೇಳುವಷ್ಟು ನಿಶ್ಯಬ್ದ ಸೀಳಿ,

ಏ ಬಂಗಾಳಿ

ಓಯ್.

ಮದ್ಲಿಗಿತ್ತಿ ಸಿಟ್ಟಾಗ್ಯಾಳ.

ಏನ್ ಮಾಡ್ಬೇಕ್?

ಮದ್ಲಿಗಿತ್ತಿಗೆ ಹಾಲ್ ಕುಡುಸ್ಬೇಕ್

ಹಾಲ್ ಕುಡುಸ್ಬೇಕ್.

“ಮನಸಿದ್ ದಣೋರ್ ಯಾರಾನಾ ಏ ಕಾಟ್ರಾಜಾ, ಇದಕ್ಕ ಹಾಲ್ ಕುಡ್ಸು ಅಂತ ದರ್ಮ ಕೊಡಬೇಕು. ದಣಿ ಹಾಲು ಕುಡ್ಸಾಕ ದರ್ಮಕೊಡ್ರೀ ದಣಿ. ಮನಸ್ ಮಾಡಿ ಕೊಟ್ಟು ಆಟ ನೋಡ್ರಿ ದಣಿ. ಮಾಮೂಲ್ ಹಾವಲ್ಲ ದಣಿ ಬೆಂಗಳೂರ್ ಹಾವ್ ದಣಿ. ಹಾಲಿಗೆ ದರ್ಮ ಕೊಡ್ರಿ ದಣಿ” ಎನ್ನುತ್ತಾ ಡಬ್ಬಿಯನ್ನು ಕೈಲಿಹಿಡಿದು “ಮನಸಿಂದ ದರ್ಮ ನೀಡಿ ದಣಿ ಮನ್ಸಮಾಡಿ ಕೊಡ್ರಿ ದಣಿ” ಎನ್ನುತ್ತಾ ಸುತ್ತು ಹಾಕಿದ. ಕೆಲವರು ಹೃದಯಯದ ಮುಂದಿನ ಜೇಬಿನಿಂದ ಕೊಟ್ರೆ ಇನ್ನುಕೆಲವರು ಲುಂಗಿಯ ಹಿಂದೆ ಅಡಗಿದ್ದ ಡ್ರಾಯರ್ ಜೇಬಿನಿಂದ ಕೊಟ್ರು. ಕಾಟ್ರಾಜ್ ಕೂಡ ಅಲ್ಲಿಂದಲೇ ಕೊಡು ಹೇಳಿದ್ದ ಆದರೆ ಉಪಯೋಗಿಸಿದ ಪದ ಎರಡಕ್ಷರದ ಜೇಬಿನ ಬದಲು ಮೂರಕ್ಷರದ ಮನಸ್ಸು ಆಗಿತ್ತು. ಡಬ್ಬದಮೇಲೆ ಹಾಕಿದ ಚಿಲ್ಲರೆಯನ್ನು ರೂಪಾಳಿಯ ಮುಂದು ಉದುರಿಸಿ ಡಬ್ಬಿಯನ್ನು ವೃತ್ತದ ಮಧ್ಯೆ ಇಟ್ಟು ಪುಂಗಿ ಹಿಡಿದು ನಾದ ಹೊರಡಿಸಿದ.

ಮೈ ಜುಮ್ಮೆನ್ನುವನಾದ, ಪುಂಗಿಯ ತಿದಿ ಚಿಮ್ಮಿಸಿದ ತರಂಗದ ನಾದಕ್ಕೆ ಸುತ್ತಲಿನ ಮಂದಿ ಸಮ್ಮೋಹನಗೊಳ್ಳುವ ನಾದ. ಇಡೀ ಸಂತೆಯನ್ನೇ ವಶೀಕರಿಸುವಂತಹ ನಾದ. ತನ್ನ ಬದುಕಿನ ನೋವನ್ನೆಲ್ಲಾ ಪುಡಿಮಾಡಿ ಗಾಳಿಯೊಂದಿಗೆ ಬೆರೆಸಿ ಊದು ಹೊರಡಿಸುತ್ತಿರುವ ನಾದ. ಕತ್ತಲೆಯ ಸಮಾಜದ ಬೆಳಕಿನ ದಾಹವನ್ನು ತೋರಿಸುವ ನಾದ. ಗುಯ್ ಎಂದು ಕಿವಿ ಮಂಪರಿಸುವಂತಹ ನಾದ. ನಾದ ಹೊರಡುತ್ತಿದ್ದಂತೆಯೇ, ಪುಟ್ಟಿಯಲ್ಲಿದ್ದ ಹಾವು ತನ್ನ ಬಲವಾದ ಹೆಡೆಯಿಂದ ಮುಚ್ಚುಳ ಗುದ್ದಿ, ಹೆಡೆಬಿಚ್ಚಿ ನಿಗರಿ ಆಂದೋಲನವನ್ನು ಪ್ರಾರಂಭಿಸಿತು. ದಲಿತರ ಹೋರಾಟದಂತೆ ವಿಷವಿಲ್ಲದ ಹೆಡೆಯಿಂದ ನೆಲಕುಕ್ಕಲಾರಂಭಿಸಿತು. ಮತ್ತೆ ಮತ್ತೆ ಮೇಲೆದ್ದ ಪುಂಗಿಯ ನಾದಕ್ಕೆ ಇನ್ನಷ್ಟು ನಿಗರಿ ಹೆಡೆ ಅಗಲಮಾಡಿ ತನ್ನದಲ್ಲದ ಸಮಾಜವನ್ನು ತೂಗಿ ನೋಡುವ ಹಾಗೆ ಜೋಕಾಲಿಯಂತೆ ಅಡಿಸುತ್ತಾ ನಿಂತಿತು.ಕಾಟರಾಜ್ ಪುಂಗಿನಾದದಲ್ಲಿ ಎಡಬಲದನಾದಗಳೂ ಇವೆ. ಅವು ಸಮಾಜದ ಎಡಬಲ ಸಿದ್ದಾಂತದ ಮುಖವಾಡ ತೊಟ್ಟ ರಾಜಕೀಯ, ರಾಜಕಾರಣ ಸಿದ್ಧಾಂತಗಳನ್ನು ಊದುವನಾದ. ಕಾಟ್ರಾಜನ ಕಣ್ಣಿನ ಹೊಳಪು ಮಿಂಚಿನಂತೆ ಸಿಡಿಯುತ್ತಿತ್ತು. ಹಾವಿನ ಹೆಡೆಯನ್ನು ಕಣ್ಣುಮಿಟುಕಿಸದೇ ನೋಡುತ್ತಿದ್ದ ಜನ ನಿಶ್ಯಬ್ದವನ್ನು ಕಾಯ್ದಿರಿಸಿದ್ದರು. ಕಾಟ್ರಾಜ್ ಒಂದು ಕೈಯಲ್ಲಿ ಪುಂಗಿ ಊದುತ್ತಾ ಮತ್ತೊಂದು ಕೈಯಿಂದ ಚಿಲ್ಲರೆ ಹಾಕಿ ಎಂದು ಸಂಜ್ಞೆ ಮಾಡಿದ. ಬಂಗಾಳಿ ಪುಟ್ಟಿಹಿಡಿದು ಸುತ್ತುಹಾಕಿದ. ಪುಂಗಿ ನಾದ ಜೋರಾಗುತ್ತಿದ್ದಂತೆ ಜುಯ್ ಎಂದು ಬೀಸಿದ ಗಾಳಿಗೆ ಎಚ್ಚರಗೊಂಡ ಹಾವು ಪುಂಗಿಯ ಸ೦ಪ್ರದಾಯಕ್ಕೆ ಹೆದರಿ ಬುಟ್ಟಿಯೊಳಗೆ ಸರಿಯಿತು. ಬಿಡಲಿಲ್ಲ, ಕಾಟ್ರಾಜ್ ಅದರ ಬಾಲ ದೇಹ ಮುಟ್ಟುತ್ತಾ, ಚಿಟಿಕೆ ಹಾಕುತ್ತಾ ಅದು ಕುಕ್ಕಲು ಬಂದಾಗ ಮಡಿವಂತರಂತೆ ಕಾಲು ಕೈ ಯನ್ನು ಜೋಪಾನವಾಗಿ ಹಿಂದೆ ಸರಿಸುತ್ತಾ ಪುಂಗಿಯನ್ನು ಊದುತ್ತಿದ್ದ. ಹಾವು ಮತ್ತು ಕಾಟ್ರಾಜನ ಪುಂಗಿ ಕಾಳಗ ಆದಿ ಅಂತ್ಯಗಳು ಅಳಸಿಹೋಗುವಷ್ಟು ದೀರ್ಘವಾಗಿ ನಡೆಯಿತು. ತನ್ನ ಪುಂಗಿ ನಾದದಿಂದ ಹಾವನ್ನು ಪಳಗಿಸುತ್ತಿದ್ದಂತೆಯೇ ಚಿಲ್ಲರೆಯ ಹನಿಗಳು ಅವನ ಆಯಾಸವನ್ನು ತೀರಿಸಿ ಮತ್ತೆ ಮತ್ತೆ ಊದಲು ಪ್ರೇರೇಪಿಸಿದವು. ಹಾವಿನ ಸಿಟ್ಟು ಮತ್ತು ಪುಂಗಿನಾದಗಳು, ಸಮಾಜದ ಮೇಲು-ಕೀಳು ಸ್ಥರಗಳ ನಡುವಿನ ಬಂಡಾಯವನ್ನು ಮೀರಿ, ಸಮಾನತೆಯ ಅಟ್ಟವನ್ನು ಏರಿ, ಪ್ರಶಾಂತ ಜೀವನ ಮತ್ತು ಸುಖದ ನಿದ್ರೆಯನ್ನೂ ಸವಿದು ಮತ್ತೆ ಈ ಹಾಳು ಸಂತೆಗೆ ಹಿಂದಿರುಗಿದ್ದವು. ಈ ಕಾಳಗ ಅದೆಷ್ಟೋ ಕ್ಷಣಗಳನ್ನು ಕೊಂದು ಗಳಿಗೆಗಳನ್ನು ದೂರ ಸರಿಸಿತ್ತು. ಆದರೂ ಕಾಟ್ರಾಜನ ಪುಂಗಿಯ ಅಟ್ಟಹಾಸ ಅಡಗಿಲ್ಲ. ಹಳ್ಳಿಯ ದಲಿತರ ವಿಷವಿಲ್ಲದ ಹೆಡೆಗೆ ಭೇದ ತೋರುವ, ಸಮಾನತೆಯ ದಿಕ್ಕು ತಪ್ಪಿಸುವ ಸಾಂಪ್ರದಾಯಗಳ ಮಡಿವಂತಿಕೆಯ ಪುಂಗಿ ನಾದ  ಅಲೆಯಂತೆ ಬಂದು ಬಡಿದು ಹಾವನ್ನು ಹೆಡೆಮುರಿದು ಬುಟ್ಟಿಯೊಳಗೆ ಹೆದರಿ ಅಡಗಿ ಕುಳಿಯುವಂತೆ ಮಾಡಿತು. ಕಾಟ್ರಾಜ್ ಎಷ್ಟು ಕಾಟಕೊಟ್ಟರೂ ಮತ್ತೆ ಅದು ಹೆಡೆಬಿಚ್ಚುವ ಸಾಹಸ ಮಾಡಲಿಲ್ಲ.

ಮುಂದುವರಿಯುವುದು….

Goutham Rati, ಬಳ್ಳಾರಿ

   gouthamrati@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!