ಕಥೆ

ಆಯ್ಕೆ

ರಭಸವಾಗಿ ಓಡಿ ಬಂದ ಶಾಲಿನಿ ಏದುಸಿರು ಬಿಡುತ್ತ ಅಲ್ಲೆ ಪಕ್ಕದಲ್ಲೆ ನಿಂತಿದ್ದ ತನ್ನ ತಂದೆಯ ಮುಖವನ್ನೇ ದಿಟ್ಟಿಸಿ ನೋಡಿದಳು. “ ನೋ.. 3 ನಿಮಿಷ ಬೇಗ ತಲುಪಿದಿದ್ರೆ ಆಗಿರೊದು,, ಛೇ… ರಾಷ್ಟ್ರೀಯ ದಾಖಲೆ ಸಮ ಮಾಡಲು ಇನ್ನೂ ಕಠಿಣ ಶ್ರಮ ಬೇಕು ಮಗಳೆ “ ಎಂದು ತುಸು ಬೇಸರದಿಂದಲೇ ನುಡಿದರು. ಅವರ ಬೇಸರಕ್ಕೂ ಒಂದು ಅರ್ಥವಿತ್ತು. ಅಂದಿನ ಕಾಲಕ್ಕೆ ಅವರೂ ಒಬ್ಬ ನೈಜ ಕ್ರೀಡಾಪಟು. ೧೦೦೦ ಮೀ, , ೨೦೦೦ ಮೀ ಎಂಬಿತ್ಯಾದಿ ದೂರ ಓಟಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿದವರು. ದೇಶಕ್ಕೆ ಅತ್ಯುತ್ತಮ ಓಟಗಾರನೆನಿಸಬೇಕೆಂಬ ಅಪರಿಮಿತ ಹಂಬಲದಿಂದ ಒಂದು ಕಡೆ ಛಲದಿಂದ ತಾಲೀಮು ನಡೆಸಿದರೆ ಮತ್ತೊಂದು ಕಡೆ ವಿಧಿ ಬೇರೆನನ್ನೋ ನಿರ್ಧರಿಸಿತ್ತು. ಸಂಜೆಯ ಅಭ್ಯಾಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಶರವೇಗದಿಂದ ಬಂದ ಕಾರೊಂದು ಇವರಿಗೆ ಬಡಿದು ಹೊರಟೇ ಹೋಗಿತ್ತು. ಯಾರದೋ ಕುಡಿತದ ಛಟಕ್ಕೆ ಅಂದು ಬಲಿಯಾದದ್ದು ಮಾತ್ರ ಮಿಂಚಿನ ಓಟ ಮಾಡುತಿದ್ದ ಒಬ್ಬ ಅಪ್ರತಿಮ ಕ್ರೀಡಾಪಟುವಿನ ಕಾಲುಗಳು.

೩ ತಿಂಗಳ ನಂತರ ಚೇತರಿಕೊಂಡರಾದರೂ ಕುಂಠಿತಗೊಂಡದ್ದು ಅವರ ಕಾಲು ಮಾತ್ರ ಅಗಿರಲಿಲ್ಲ, ಅವರ ವೇಗವೂ..! ಕುಂಟುತ್ತಾ ನಡೆಯುವ ಅವರಿಗೆ ಎಲ್ಲೂ ಕೆಲಸ ಕೂಡ ಸಿಗಲಿಲ್ಲ. ಪರವಾಗಿಲ್ಲ! ತಮ್ಮ ಕೈಯ್ಯಲ್ಲಿಯೇ ಇದ್ದ ನಾಲ್ಕು ಕಾಸು ಒಟ್ಟು ಮಾಡಿ ಒಂದು ಸಣ್ಣ ಕಿರಾಣಿ ಅಂಗಡಿ ತೆರೆದರು. ತಮ್ಮ ಜೀವನಕ್ಕೇನೋ ಅವರು ಉತ್ತಮ ದಾರಿಯ ಕಂಡುಕೊಂಡಿದ್ದರು. ಆದರೆ ಸಮಸ್ಯೆ ಶುರುವಾದದ್ದೆ ಅವರ ತಂದೆ-ತಾಯಿ ಸೇರಿ “ಒಂಟಿ ಜೀವನ ಎಷ್ಟು ದಿನ ಅಂತ ನಡೆಸ್ತಿಯಪ್ಪ. ಒಂದು ಮದುವೆ ಅಂತ ಅಗಿದ್ದಿದ್ದರೆ ನಿನಗೂ ಒಂದು ಆಧಾರ ಅಂತ ಇರೋದು. ನಮಗೂ ವಯಸ್ಸಾತ್ತಲ್ವೆ” ಅಂದಾಗ. ಮೂರು ಜನರ ಸಂಸಾರ ನಡೆಸುವುದೇ ದುಸ್ತರವಾಗಿರುವಾಗ ಇನ್ನೊಬ್ಬಳ್ಳನ್ನು ಹೇಗಪ್ಪ ಈ ಕಷ್ಟ ಕೂಪದೊಳಗೆ ಸೇರಿಸಲಿ ಎನ್ನುವ ಯೋಚನೆ, ಆದರೆ ಅವರಂದುಕೊಂಡಂತಾಗಲಿಲ್ಲ. ಹಿರಿಯರು ನೋಡಿ ನಿಶ್ಚಯ ಮಾಡಿದ ಹೆಣ್ಣು ಮಗಳು ಎಲ್ಲದಕ್ಕೂ ಹೊಂದಿಕೊಂಡಳು. ಖುದ್ದು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಮನೆಯ ಕೆಲಸವೂ ನಿಭಾಯಿಸುತ್ತಾ ಸಂಸಾರವೆಂಬ ರಥಕ್ಕೆ ಇನ್ನೊಂದು ಚಕ್ರವಾಗಿ, ಅದು ಸುಸೂತ್ರವಾಗಿ ನಡೆಯುವಂತೆ ನೋಡಿಕೊಂಡಳು. ಮೊದಲನೆ ವರ್ಷಕ್ಕೆ ಒಂದು ಪುಟ್ಟ ಮಗು ಮನೆಗೆ ಕಾಲಿಟ್ಟಿತು. ಅಜ್ಜಿ-ತಾತ ಅದನ್ನು ಮುದ್ದಾಗಿ ಶಾಲಿನಿ ಎಂದರು. ಸಹಜವಾಗಿ ಅವರಲ್ಲಿದ್ದ ಒಬ್ಬ ನೈಜ ಕ್ರೀಡಾಪಟು ಜಾಗೃತವಾಗಿ ತಮ್ಮ ಮುದ್ದು ಮಗಳ ಮೂಲಕ ಮತ್ತೊಬ್ಬ ಶ್ರೇಷ್ಟ ಕ್ರೀಡಾಪಟು ತಯಾರು ಮಾಡಬೆಕೆಂಬ ಹಂಬಲ ಹುಟ್ಟು ಹಾಕಿದ್ದ. ಆಯಿತು ಅಲ್ಲಿಂದ ಪ್ರತೀದಿನ ಮುಂಜಾನೆ ತಾಲೀಮು ಆರಂಭವಾಯ್ತು.

“ಅಯ್ಯೊ, ಅ ಸಣ್ಣ ಹುಡುಗೀಗೆ ಯಾಕಪ್ಪ ಈ ರೀತಿ ಕಷ್ಟ ಕೊಡ್ತ್ತಿದ್ದಿಯ. ಆಡಿಕೂಂಡು ಇರ್ಬೆಕಾದ ವಯಸ್ಸು. “ 5ನೇ ವಯಸ್ಸಿಗೆ ಮೈದಾನಕ್ಕೆ ಕೊಂಡೊಯ್ಯುವಾಗ ಎಲ್ಲ ಮೊಮ್ಮಕ್ಕಳನ್ನು ಮುದ್ದುಮಾಡುವ ಅಜ್ಜ-ಅಜ್ಜಿಯರಂತೆ ಇಲ್ಲೂ ಮಾತು ಕೇಳಿಬಂದಿತ್ತು. ಚುರುಕುಬುದ್ದಿಯವಳಾದ ಶಾಲಿನಿ ಕಲಿಕೆಯಲ್ಲಿ ಮೊದಮೊದಲು ಮುಂದಿದ್ದರೂ ಅನಂತರ ಅದು ಹಿಮ್ಮುಖವಾದಾಗ “ ನಿಮ್ಮ race, competition ಅಂತ ಪಾಪ ಆ ಹುಡ್ಗಿ ಓದ್ನೆಲ್ಲ ಹಾಳು ಮಾಡಿದ್ರಿ..” ಎಂದು ತಾಯಿ ಹೃದಯ ಚುಚ್ಹಿ ಮಾತಾಡಿದ್ದೂ ಆಯ್ತು. ಆದರೆ ಹುಡುಗಿಯ ಹಾಕುತ್ತಿದ್ದ ಪರಿಶ್ರಮ ತಂದೆಯ ಆಸೆ ಹಾಗೂ ಹಟ ಎರಡನ್ನೂ ಹೆಚ್ಹಾಗಿಸಿತ್ತು. ಎಲ್ಲವೂ ಸರಿಯಾಗಿಯೆ ನಡೆದಿತ್ತು.
ಶಾಲಿನಿಗೆ 6 ತುಂಬಿದಾಗ, ಅವಳ ತಂದೆಯ ಕೈಗೆ ಒಂದು ಗಂಡು ಮಗುವನ್ನಿತ್ತು ಆ ಮಹಾತಾಯಿ ಪ್ರಾಣಬಿಟ್ಟಳು. ಮನೆಯವರೆಲ್ಲರ ಮನಸ್ಸು ಒಳ್ಳೆಯದಾಗಿರಲಿ ಎಂದು ಮಗುವಿಗೆ ಸುಮಂತ್ ಎಂಬ ಹೆಸರಿಟ್ಟು ಅಜ್ಜ-ಅಜ್ಜಿ ಪ್ರೀತಿಯಿಂದೇನೊ ಸಾಕಿದರು. ಆದರೆ ಕಾಲದ ಮಿತಿಯನ್ನು ಅವರಿಂದಲೂ ಮೀರಲಾಗಲಿಲ್ಲ. ನಾಲ್ಕೇ ವರ್ಷದೊಳಗೆ ಇಬ್ಬರೂ ಕಾಲವಾದರು. ಸುಮಂತ್ ಎಂದು ಹೆಸರಿಟ್ಟಾಕ್ಷಣ ಮನೆ-ಮನಸ್ಸು ಒಳ್ಳೆಯದಾಗಿರದೆ ಬದಲಾಗಿ ಮನಸ್ಸಿನ ಶಾಂತಿಯೇ ಕದಡಿಹೋಗಿತ್ತು. ವಿಪರ್ಯಾಸವೆಂಬುದು ಬಹುಶಃ ಇದಕ್ಕಿಂತಲೂ ಮತ್ತೊಂದಿಲ್ಲ. ಸಂಸಾರದ ನೊಗಹೊರುವ ಒಂದು ಜೀವ ಕಣ್ಮರೆಯಾಗಿತ್ತು, ಬದುಕು ದುಸ್ತರವಾಗಿತ್ತು.

ಆದರೆ ಇದೆಲ್ಲವನ್ನು ಮೀರಿದ ಸ್ಪಷ್ಟ ಗುರಿಯೊಂದು ಸಾಧಿಸಬೇಕಿತ್ತು. ಅದಾಗಿ ಈಗ 13 ಸಂವತ್ಸರಗಳೇ ಕಳೆದುಹೋಗಿವೆ. ಶಾಲೆ-ಕಾಲೇಜುಗಳಲ್ಲಿರುವಾಗ ರಾಜ್ಯ ಹಾಗೂ ರಾಷ್ಟ್ರಮಟ್ಟದ ಎಲ್ಲ ಕ್ರೀಡಾಕೂಟಗಳಲ್ಲಿ ಜಯಗಳಿಸಿ ತಂದೆಯ ಶ್ರಮಕ್ಕೆ ಸಮರ್ಪಿಸಿಯಾಗಿದೆ. ಈಗ ಇರುವುದು ದೊಡ್ಡ ಹಾಗೂ ಕಡೆಯ ಹಂತ. ಅದುವೆ ಪ್ರಸಕ್ತ ರಾಷ್ಟ್ರೀಯ ಕ್ರೀಡಾಕೂಟ, ಅದಕ್ಕೆ ಇಷ್ಟೆಲ್ಲ ತಯಾರಿ. ಇಲ್ಲಿ ಗೆದ್ದರೆ ಇಷ್ಟು ವರಷದ ತಪಸ್ಸಿಗೆ ಫಲ ದೊರಕಿದಂತಾಗುತ್ತದೆ. ಮುಂದೆ ಏನಿದ್ದರೂ ಅಂತರಾಷ್ಟ್ರೀಯ ಮಟ್ಟದ ಸ್ಪರ್ದೆ ಅದರ ಹಿಂದೆ ಖ್ಯಾತಿ ಎಲ್ಲವು. ಅಲ್ಲದೆ ಇತ್ತೀಚೆಗೆ ಕೆಲವು ಸರ್ಕಾರಿ ಸಂಸ್ಥೆಗಳಿಗೂ SPORTS QUOTA ದ ಅಡಿ ಕೆಲಸಕ್ಕೆ ಅರ್ಜಿ ಕೂಡ ಹಾಕಲಾಗಿತ್ತು. ಅದೊಂದು ಆಗಿಬಿಟ್ಟರೆ ಮುಂದಿನದೆಲ್ಲವೂ ಸಂತಸದ ದಿನಗಳೇ… ಈ ಮಧ್ಯೆ ಸಾಕಷ್ಟು ಬೆಳವಣಿಗೆ ಆಗಿ ಹೋಗಿತ್ತು. ಶಾಲಿನಿಯ ತರಬೇತಿಗೆಂದು, ಅವಳ ಓಡಾಟ, ಹೆಚ್ಚಿನ ತರಬೇತಿಯ ಖರ್ಚು, ಮಗನ ಶಿಕ್ಷಣ ಹೀಗೆ ಪಟ್ಟಿ ಬೆಳೆಯುತ್ತ ಹೋದಂತೆ ಸಾಲವೂ ಸಾಕಷ್ಟು ಆಗಿಹೋಗಿದ್ದವು. ಅವರ ವ್ಯಾಪಾರ- ವ್ಯವಹಾರವೂ ಅಷ್ಟಕಷ್ಟೆ ಅನ್ನುವಂತಾಗಿತ್ತು. ಇದೊಂದು ಕಷ್ಟ ಬರದೆ ಹೋಗಿದ್ದರೆ ಬಹುಶಃ ಸಾಹೇಬರು ತಮ್ಮ ಮಗನನ್ನೂ ಕ್ರೀಡೆಯ ಗೋಜಿನಲ್ಲಿ ತೊಡಗಿಸಿಕೊಳ್ಳುತ್ತಿದ್ದರೋ ಏನೊ. ಅದೇನೇ ಇರಲಿ ತಮ್ಮ ಇಷ್ಟು ವರ್ಷದ ದುಡಿಮೆಯ ಒಂದು ದೊಡ್ಡ ಭಾಗವನ್ನು ಅವರು ಶಾಲಿನಿಯ ಮುಂದಿನ ತಯಾರಿಗೆಂದೇ ಅವಳ ಹೆಸರಲ್ಲಿ ಮೀಸಲಿಟ್ಟಿದ್ದರು. ದೇಶದ ಅತ್ಯುನ್ನತ ತರಬೇತುದಾರರಿಂದ ಅವಳನ್ನು ತಯಾರುಗೊಳಿಸಬೇಕೆಂಬುದೇ ಅವರ ಆಶಯ.

ಆ ದಿನ ಶಾಲಿನಿ ಯಾವುದೋ ಒಂದು ಸರ್ಕಾರೀ ನೌಕರಿಯ ಕೊನೇಯ ಸುತ್ತಿನ ಸಂದರ್ಶನಕ್ಕೆ ಕರೆ ಬಂದಿದೆ ಎಂದು ಹೊರಟು ಹೋಗಿದ್ದಳು. ತೀರ ಆತ್ಮವಿಶ್ವಾಸದಿಂದಲೇ ನಡೆದು ಬಂದ ಅವಳನ್ನು ಸ್ವಾಗತಿಸಿದ ಸಾಹೇಬರು ಎಲ್ಲ ದಾಖಲೆ ಪರಿಶೀಲಿಸುತ್ತ ಕೊನೆಗೆ ಮುಗುಳ್ನಕ್ಕು “ಮಿಸ್ಸ್ ಶಾಲಿನಿ, ನಿಮ್ಮ TRACK RECORD ತುಂಬಾನೆ ಚೆನ್ನಾಗಿದೆ. ಯ್ಲ್ಲ CANDIDATES ಗಳಿಗಿಂತ ಹೆಚ್ಚು ಅರ್ಹತೆ ನಿಮ್ಗೆ ಇದೆ. “ ಎಂದಾಗ ಸಂತೋಷದಿಂದ ಉಬ್ಬಿಹೋದರೂ ಅದನ್ನು ತೋರಿಸದೆ “thank you sir” ಎಂದಷ್ಟೆ ಹೇಳಿದಳು. “ಆದರೆ ಅರ್ಹತೆ ಒಂದೇ ಸಾಕಾಗೋದಿಲ್ಲ ನೋಡಿ. ನಮ್ಮ ಅಭ್ಯರ್ಥಿಗಳಿಂದ ನಾವು ಇನ್ನೂ ಹೆಚ್ಚಿನದನ್ನು ನಿರೀಕ್ಷಿಸ್ತೇವೆ ನೋಡಿ..” ಎಂದು ಹಲ್ಲು ಕಿರಿದರು. ಏನೂ ಅರ್ಥವಾಗದವಳಂತೆ “ ಖಂಡಿತವಾಗಿಯೂ ಈ ಬಾರಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದ ದಾಖಲೆ ನನ್ನದೆ ಆಗಿರುತ್ತೆ ಸಾರ್” ಎಂದು ಮುಗ್ಧವಾಗಿ ನುಡಿದಳು ಶಾಲಿನಿ. “ ಹಹ್ ಹಹ್.. ದಾಖಲೆ ಬರೆದರೂ ಹೋದ್ರು, ಗೆದ್ರೂ ಸೋತ್ರೂ ಅದ್ರ ಮೇಲೆ ಇಲ್ಲಿ ಯಾರೂ ಕೆಲ್ಸ ಕೊಡೋದಲ್ಲಮ್ಮ. ಹಣ ಇಲ್ಲದೆ ಇಲ್ಲಿ ಏನೂ ನಡೆಯೊಲ್ಲ ಅಂತ ನಾನೇ ಹೇಳ್ಬೇಕಾ. ಖಜಾನೆ ತುಂಬಿದ್ರೇನೇ ಕೆಲಸದ ಕದ ತೆರೆಯೋದು ಇಲ್ಲಿ. ನೇರವಾಗಿ ಹೇಳ್ತಾ ಇದ್ದೇನೆ 3 ಲಕ್ಷ ತಂದು ಒಂದು ವಾರದ ಒಳಗೆ ನಮ್ಮ ಎಟೆಂಡೆರ್ ಕೈಗೆ ಕೊಟ್ರೆ ಅಲ್ಲೆ ನಿಮ್ಗೆ APPOINTMENT LETTER ಕೈಗೆ ಕೊಡ್ತೇವೆ. ಇದ್ರಲ್ಲಿ ಯಾವ್ದೆ ಮೋಸ ಇಲ್ಲ. ಹಣ ಕೈಗೆ ಬಂದ ಮೇಲೆ ನಾವು strict ಬಿಡಿ..” ತಣ್ಣಗೆ ನುಡಿದರು ಆ ಆಫೀಸರ್.

ಅಲ್ಲಿಯವರೆಗೂ ಬಲೂನಿನಂತೆ ಉಬ್ಬಿದ್ದ ಮುಖ ಒಮ್ಮಿಂದೊಮ್ಮೆಗೇ ಮ್ಲಾನವಾಯಿತು. ಇದ್ದ ಉತ್ಸಾಹವೆಲ್ಲ ಕರಗಿತು. ಏನು ಹೇಳಬೇಕೊ ತೋಚಲಿಲ್ಲ. ಇಲ್ಲದ ನಗುವನ್ನು ತಂದುಕೊಂಡು “ಆಯಿತು ಸಾರ್, ಥಾಂಕ್ಯು” ಎಂದಷ್ಟೆ ಹೇಳಿ ಹೊರಟು ಹೋದಳು. ಮನೆಗೆ ಬರುವಾಗ ತಲೆಯಲ್ಲಿ ಹಲವಾರು ಯೋಚನೆ ಸುಳಿಯಿತು. ಎಲ್ಲಿ ಹೋದರೂ ಇದೇ ರೀತಿ ಕೆಲಸಕ್ಕಾಗಿ ಹಣದ ಬೇಡಿಕೆ ಬಂದೇ ಬರುತ್ತದೆ. ಕೆಲಸ ಸಿಕ್ಕರೆ ತಮ್ಮನ ಶಿಕ್ಷಣಕ್ಕೆ ದಾರಿ, ತಂದೆಗೊ ಅಧಾರ. ಕ್ರೀಡೆಯಲ್ಲಿ ಎಷ್ಟೇ ಮುಂದುವರಿದರೂ ಸರ್ಕಾರದಿಂದ ಸಹಾಯ ಹಣ ನಿರೀಕ್ಷಿಸುವಂತಿಲ್ಲ. ಇನ್ನು ATLETICS ಗೆ ಪ್ರಾಯೋಜಕತ್ವ ದೂರದ ಮಾತು. ಆದರೆ ತಂದೆ ತನ್ನ ಮೇಲೆ ಇರಿಸಿದ ವಿಶ್ವಾಸ, ನಿರೀಕ್ಷೆ, ಅವರ ಆಸೆ, ಕನಸು.. ?

ತಂದೆಯ ಮೊಬೈಲಿಗೆ ಕರೆ ಬಂತು. ಪರಿಚಯದ ಡಾಕ್ಟರ್ ಒಬ್ಬರು ಕಾಲ್ ಮಾಡಿದ್ದರು. ಕೂಡಲೆ ಆಸ್ಪತ್ರೆಗೆ ಧಾವಿಸಿದ ಅವರು ಬೆವರೊಸಿಕೊಳ್ಳುತ್ತ ಉದ್ವೇಗದಿಂದ reception ಬಳಿ “ಶಾಲಿನಿ…” ಎಂದಾಗ “room no. 18” ಎನ್ನುವ ಉತ್ತರ ಬಂತು. ಆತಂಕದಿಂದಲೇ ಬಂದು ನೋಡಿದಾಗ ಅಲ್ಲಿ ಮಲಗಿದ್ದಳು ಮುದ್ದಿನ ಮಗಳು ಶಾಲಿನಿ. ಕಾಲಿಗೆ ಬ್ಯಾಂಡೇಜ್ ಸುತ್ತಲಾಗಿತ್ತು, ಕಣ್ಣಲ್ಲಿ ನೀರು. ತಂದೆಯನ್ನು ನೋಡುತ್ತಲೇ “ಅಪ್ಪ, ನಿನ್ನ ಆಸೆ ಈಡೇರಿಸಲು ನನ್ನಿಂದ ಸಾದ್ಯ ಆಗ್ತಿಲ್ಲ. ತಪ್ಪೆಲ್ಲ ನಂದೆ. ಕೆಲ್ಸ ಸಿಕ್ಕಿದ ಖುಶೀಲಿ ಮೈಮರ್ತು ಬರ್ತ ಇದ್ದೆ. ಸಣ್ಣದೊಂದು accident ಆಯ್ತು. ಅವ್ರು ಯಾರೊ ಇಲ್ಲಿ ಸೇರಿಸಿದ್ರು. ಒಂದು ತಿಂಗಳ rest ತಗೋಬೇಕು ಹೇಳಿದಾರೆ ಡಾಕ್ಟರ್. ಮೂಳೆ ಮುರಿದ ಕಾರಣ ಇನ್ನು ಮುಂದೆ ಯಾವುದೇ ರೀತಿ ಆಟೋಟ ಮಡ್ಬಾರ್ದು ಅಂತ ಹೇಳಿದ್ರು..” ಅನ್ನುವಾಗ ಅವಳ ಕಣ್ಣಲ್ಲಿ ನೀರು ತೊಟ್ಟಿಕ್ಕುತಿತ್ತು

ಕೊಂಚ ಕಾಲ ಏನೂ ಮಾತನಾಡದೆ ಸುಮ್ಮನ್ನಿದ್ದ ಅವರು ಸಾವರಿರಿಸಿಕೊಂಡು “ ಮಗಳೆ. ದೊಡ್ಡದ್ರಲ್ಲಿ ಆಗೂದು ಸಣ್ಣದಾಗಿ ಮುಗೀತೆಂದು ತಿಳಿ. ದೇವರು ದೊಡ್ಡೋವ್ನು, ಸದ್ಯ ನಿನಗೇನು ಜಾಸ್ತಿ ಅಪಾಯ ಆಗ್ಲಿಲ್ಲ ಅಷ್ಟೇ ಸಾಕು. ಬೇರ್ಯಾವುದರ ಬಗ್ಗೆಯೂ ಚಿಂತೆ ಮಾಡ್ಬೇಡ. ನಿನ್ನಿಂದ ಅಲ್ಲದಿದ್ರೇನಂತೆ ನಿನ್ನ ಮಗಳಿಗೆ ತರಬೇತಿ ಕೊಡ್ತೇನೆ. ಅವಳಿಂದ ನನ್ನ ಆಸೆ ತೀರಿಸ್ಕೊಳ್ತೇನೆ…” ಕೊನೆಯ ಸಾಲು ಹೇಳುವಾಗ ಸಣ್ಣ ನಗೆ ಅವರ ಮುಖದ ಮೇಲೆ ಬಂತು. ಆ ಮಾತನ್ನು ಕೇಳಿ ಶಾಲಿನಿ ಮುಖದಲ್ಲೂ ನಗೆ ಮೂಡದೆ ಇರಲಿಲ್ಲ. ಆದರ ದೈಹಿಕವಾಗಿ ಕಾಲು ನೋವು ನೀಡದಿದ್ದರೂ, ಮನಸಿನಲ್ಲಾದ ತುಮುಲ, ದುಗುಡ ಮಾತ್ರ ಕಣ್ಣಲ್ಲಿನ ನೀರು ತಡೆಯಲು ಅನುಮತಿ ನೀಡಲಿಲ್ಲ.
ತಂದೆಯ ಈ ಪರಿಯ ಮಮತೆ ಕಂಡು ಒಂದು ವೇಳೆ ತಾನು ಮಾಡಿದ ತಪ್ಪು ತಿಳಿದರೆ ಏನು ತಿಳಿಯುವರೊ ಎನ್ನುವ ಪಾಪಪ್ರಜ್ಞೆ ಒಂದು ಕಡೆಯಿಂದ ಮನಸ್ಸನ್ನು ತಿನ್ನುತಿತ್ತು.

ಅದಾಗಿ ಒಂದು ವಾರ ಕಳೆದಿದೆ. ಆಸ್ಪತ್ರೆಯಿಂದ ಮನೆಗೆ ಶಾಲಿನಿ ಬರುವಾಗಲೆ ಕೈಲಿ APPOINTMENT LETTER ಬಂದಿತ್ತು. ಅದಕ್ಕಾಗಿ ಬ್ಯಾಂಕ್ ಖಾತೆ ಬರಿದಾಗಿತ್ತು. ಹಣ ಕೊಟ್ಟರೆ ಕೆಲಸವೇ ಸಿಗುವ ಕಾಲಕ್ಕೆ ಕಾಲು ಮುರಿದಿದೆ ಅನ್ನುವ ಸುಳ್ಳು CERTIFICATE , ಒಂದು ಪ್ಯಾಕ್ B-COMPLEX ಮಾತ್ರೆ ಸಿಗದೇ ಇರುತ್ತದೆಯೇ, ಅದೂ ಪರಿಚಯದ ಡಾಕ್ಟರ್ ಇರುವಾಗ. ಒಂದು ತಿಂಗಳು ವಿಶ್ರಾಂತಿ ಬೇಕಿದ್ದವಳು ಎದ್ದು ಎರಡೇ ವಾರದೊಳಗೆ ಕೆಲಸಕ್ಕೆ ಸೇರಿದ್ದಳು. ತಂದೆಯ ಕಣ್ಣಲ್ಲಿ ಆಶ್ಚರ್ಯದ ಬದಲು ಹೆಮ್ಮೆ ಇತ್ತು. ಏನೂ ಕೇಳದ ತಂದೆಯ ವರ್ತನೆ ಕಂಡು ಆಶ್ಚರ್ಯಪಡುವ ಸರದಿ ಶಾಲಿನಿಯದಾಗಿತ್ತು.

ಬದುಕು ಹೀಗೆ, ನಾವು ಬಯಸಿದ್ದು ಸಿಗುವುದು ಅಪರೂಪ. ಆದರೆ ನಮಗೆ ದೊರತದ್ದು ಸ್ವೀಕರಿಸಿ ಅದರಲ್ಲೇ ಸಂತಸ ಕಾಣುವಂತೆ ಮಾಡುತ್ತದೆ. ಜೀವನ ನಮಗೆ ಅದೆಷ್ಟೊ ಆಯ್ಕೆ ನೀಡಬಹುದು. ನಾವು ನಮಗೆ ಸರಿಯಾದ ಆಯ್ಕೆ ಮಾಡಿದರೆ ಬಹುಮಾನ ಸಿಗಲು ಇದು ಯಾವುದೇ ಸ್ಪರ್ದೆಯಲ್ಲ. ಬದಲಾಗಿ ಸಂದರ್ಭಕ್ಕೆ ಸೂಕ್ತ ಆಯ್ಕೆ ಮಾಡಿದರೆ ದೊರಕುವ ನೆಮ್ಮದಿಯೇ ನಮ್ಮ ಪಾಲಿನ ದೊಡ್ಡ ಬಹುಮಾನ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!