ಕಥೆ

ಅಂತಃಕರಣ

ಮರುದಿನ ಬೆಳಿಗ್ಗೆ ಚಿಕ್ಕ ಮಾವ ಊರಿಗೆ ಹೋದ . ಶಾಲೆಗೆ ರಜೆ ಇದ್ದುದರಿಂದ ನಾನು ಮಾವನ ಮನೆಯಲ್ಲೇ ಇದ್ದೆ . ಮುಂದಿನ ವಿದ್ಯಮಾನಗಳು ದುಃಖದ ವಿಷಯ . ಮಾವನ ಹೆಂಡತಿ ಬೆಳಿಗ್ಗೆ ಏಳುಗಂಟೆಯತನಕ ಏಳುತ್ತಿರಲಿಲ್ಲ . ಅಜ್ಜಿಯೇ ಎದ್ದು ಸ್ನಾನಕ್ಕೆ ನೀರು ಕಾಯಿಸಬೇಕು . ಮನೆ ಕಸ ಗುಡಿಸಬೇಕು . ಕಾಫಿ ತಿಂಡಿ ಮಾಡಬೇಕು . ಸೊಸೆಗೆ ಅದು ಸರಿಬರುತ್ತಿರಲಿಲ್ಲ . ” ಅದು ಮಾಡಿದ್ದು ಸರಿಯಾಗಲಿಲ್ಲ …. . ಇದು ಮಾಡಿದ್ದು ಸರಿಯಾಗಲಿಲ್ಲ ….” ಎಂದು ಗೊಣಗುತ್ತಿದ್ದಳು . ಅಜ್ಜಿ , ” ಅಷ್ಟು ಇದ್ದವಳು ನೀನೇ ಎದ್ದು ಮಾಡಬೇಕಿತ್ತು . ಮಹಾರಾಣಿಯ ಹಾಗೆ ಸೂರ್ಯ ಮೂಡೋತನಕ ಕಾಲು ಚಾಚಿಕೊಂಡು ಮಲಗಿರುತ್ತಿಯಲ್ಲ ” ಎಂದು ಸಿಡುಕುತ್ತಿದ್ದಳು . ” ನಿಮಗೆ ಯಾರು ಅದನ್ನೆಲ್ಲ ಮಾಡಲಿಕ್ಕೆ ಹೇಳಿದವರು ….? ಅಷ್ಟು ಅರ್ಜೆಂಟ್ ಏನಿತ್ತು ಎಲ್ಲ ಮಾಡಲಿಕ್ಕೆ ….? ” ಸೊಸೆ ರೇಗುತ್ತಿದ್ದಳು .ಇಬ್ಬರಿಗೂ ಜಗಳವಾಗುತ್ತಿತ್ತು . ಮಾವ ಎಲ್ಲಾ ಕೇಳಿಕೊಂಡು ಸುಮ್ಮನಿರುತ್ತಿದ್ದ . ಒಂದು ದಿನ ಇಬ್ಬರ ಜಗಳವೂ ತಾರಕಕ್ಕೇರಿತು . ಅಜ್ಜಿ ಮೌನಿಯಾಗಿ ಕೂತಿದ್ದ ಮಗನನ್ನು ತರಾಟೆಗೆ ತೆಗೆದುಕೊಂಡಳು . ” ಏನೋ ಅವಳು ಆ ಥರ ಮಾತನಾಡುತ್ತಾಳೆ . ಸುಮ್ಮನೆ ಕೂತಿರುವಿಯಲ್ಲ ….? ಒಂಬತ್ತು ತಿಂಗಳು ಹೊತ್ತು ಸಾಕಿದ್ದು ಇದಕ್ಕೇನೋ ?! ಕೈಯಲ್ಲಿದ್ದುದು ಕೊಟ್ಟು ಚೆನ್ನಾಗಿ ಓದಿಸಿದ್ದು ಇದಕ್ಕೆ ಏನೋ ..? ” ಎಂದಳು .

ಮಾವ , “ನೀನು ಏನೂ ಮಾಡ್ಬೇಡ . ಸುಮ್ಮನೆ ಇರೋದು ಕಲಿ . ” ಎಂದುಬಿಟ್ಟ . ಅಜ್ಜಿ ಹಳೆಯದೆಲ್ಲ ಎತ್ತಿ ಅವಾಚ್ಯವಾಗಿ ಬೈದು ಕೂಗಾಡಿದಳು . ಊಟ , ತಿಂಡಿ ಮಾಡದೆ ಉಪವಾಸ ಕೂತಳು .ಮಾವ ತಾಯಿಗೆ ಯಾಕೆ ಉಪವಾಸ ಕೂತೆ ಎಂದು ಕೇಳಲಿಲ್ಲ . ಹಸಿವಾದರೆ ಊಟಮಾಡುತ್ತಾಳೆ ಎಂಬ ನೀತಿಗೆ ಬದ್ಧನಾದ . ಸೊಸೆ ಅವಳ ತಂದೆಗೆ ಕಾಗದ ಬರೆದಲೇನೋ . ಅವಳಪ್ಪ ಅಣ್ಣ ತಮ್ಮಂದಿರು ಬಂದರು . ಅವರಿಗೆ ಅವಳು ಕಣ್ಣೀರು ಹಾಕಿಕೊಂಡು ಅತ್ತೆಯಿಂದ ತನಗಾಗುವ ಕಷ್ಟವನ್ನು ಹೇಳಿಕೊಂಡಳು .ಅವರು ಅಜ್ಜಿಯ ಮೇಲೆ ಹರಿಹಾಯ್ದರು . ಅಜ್ಜಿ ಒಬ್ಬಂಟಿಯಾಗಿ ಅವರೊಂದಿಗೆ ಹೋರಾಡಿದಳು . ಆ ಮನೆಗೆ ಬಂದಾಗ ಊಟ ಹಾಕದೇ ಇರುವುದರಿಂದ ಹಿಡಿದು ಎಲ್ಲವನ್ನೂ ಹೇಳಿ ಸೊಸೆಯ ನಡವಳಿಕೆಯನ್ನು ಹರಾಜು ಹಾಕಿದಳು . ಮನೆಯಲ್ಲಿ ಗಲಾಟೆ ನಡೆಯುವಾಗ ಮಾವ ಅಜ್ಜಿಯ ಬಾಯಿ ಒತ್ತಿ ಹಿಡಿದು , ಕಾರು ಶೆಡ್ಡಿಗೆ ದೂಡಿ ಬಾಗಿಲು ಹಾಕಿದ . ಇಲ್ಲಿಂದ ಅಜ್ಜಿಯ ಆರ್ಭಟ ಇಳಿಮುಖವಾಯಿತು .

ಅಜ್ಜಿ ಆನಂತರ ಒಂದು ಕೋಣೆಯಲ್ಲಿ ಸುಮ್ಮನೆ ಕೂತಿರುತ್ತಿದ್ದಳು .ಯಾರೊಡನೆಯೂ ಮಾತನಾಡುತ್ತಿರಲಿಲ್ಲ . ಯಾರೂ ಅವಳನ್ನು ಮಾತನಾಡಿಸುತ್ತಿರಲಿಲ್ಲ . ಮಗ ಸೊಸೆಯ ಊಟವಾದ ಮೇಲೆ ಕಸ ಗುಡಿಸುವುದು , ಪಾತ್ರೆ ತೊಳೆಯುವುದು , ಅವಳ ಪಾಲಿಗೆ ಬಂದ ಕೆಲಸವನ್ನು ಮಾಡಿಕೊಂಡಿರುತ್ತಿದಳು . ಸೊಸೆಯ ತವರು ಮನೆಯವರು ಬಂದಾಗ ಗಂಡನೆದುರಿಗೆ ಅತ್ತೆಯನ್ನು ವ್ಯಂಗ್ಯ , ಟೀಕೆ ಮಾಡುವುದನ್ನು ಕೇಳಿಸಿಕೊಂಡು ಕೂತಿರುತ್ತಿದ್ದಳು .

ಶಾಲೆಗೆ ರಜೆ ಮುಗಿದು ನಾನು ಊರಿಗೆ ಬಂದ ಮೇಲೆ ಅಜ್ಜಿಯೊಂದಿಗೆ ಮಾತನಾಡುವವರೇ ಇಲ್ಲವಾಯಿತು . ನಾನು ಊರಿಗೆ ಬಂದ ಮೇಲೆ ಅಜ್ಜಿ ಮಗನ ಮನೆಯಲ್ಲಿದ್ದುದು ಒಂದೇ ವಾರ . ಮಾವ ನಮ್ಮ ತಂದೆಗೆ ತಾಯಿಯ ಮೇಲೆ ಚಾಡಿಯ ಸರಮಾಲೆಯನ್ನೇ ಬರೆದು ತಾಯಿ ಮೂರು ದಿನದಿಂದ ಉಪವಾಸವಿದ್ದಾಳೆಂದು ತನ್ನನ್ನು ಊರಿಗೆ ಕಳುಹಿಸು ಎಂದು ಬೊಬ್ಬೆ ಹೊಡೆಯುತ್ತಾಳೆಂದು ದೂರಿದ . ಆಗಲೇ ನಾನು ತಂದೆಯವರಿಗೆ ಅಜ್ಜಿಯ ಕತೆ ಹೇಳಿದ್ದರಿಂದ ಅವರು ಮಾವನಿಗೆ ಉತ್ತರ ಬರೆಯಲು ಹೋಗಿರಲಿಲ್ಲ . ಚಿಕ್ಕ ಮಾವನನ್ನು ಕಳುಹಿಸಿ ಅಜ್ಜಿಯನ್ನು ಕರೆಸಿಕೊಂಡರು . ವಿಷಯ ಸರಿಯಾಗಿ ಇಳಿಯದ ಅಮ್ಮ ಚಿಕ್ಕ ಮಾವ ತಾಯಿಗೆ ಬೈದರು . ಅಜ್ಜಿ ಮಾತನಾಡದೇ ತನ್ನ ಗೂಡು ಸೇರಿ ಸ್ವತಂತ್ರಳಾದಳು.

ನಾವು ಅಜ್ಜಿ ಮನೆಯನ್ನು ಸೇರುವ ಹೊತ್ತಿಗೆ ಮಳೆ ಬಿಟ್ಟು ಎಳೆ ಬಿಸಿಲು ಹರಡಿಕೊಂಡಿತ್ತು . ಚಿಕ್ಕಮ್ಮನ ಮಗ ಅನಂತನಿಗೆ ಅಜ್ಜಿಯ ಸಾವಿನ ಬಿಸಿ ತಟ್ಟಿರಲಿಲ್ಲವಾದ್ದರಿಂದ ಅವನು ಮಳೆಯ ನೀರಿನಲ್ಲಿ ಆಟವಾಡುತ್ತಿದ್ದ . ಚಿಕ್ಕಮ್ಮ ಅಕ್ಕನನ್ನು ನೋಡಿದ ಕೂಡಲೇ , ” ಅಯ್ಯೋ ಅಕ್ಕ ಇದೇನು ಇಷ್ಟು ತಡವಾಗಿ ಬರ್ತಿದ್ದೀರಿ . ರಾತ್ರಿಯೆಲ್ಲಾ ಮಕ್ಕಳನ್ನು ಮಲಗಿಸಿಕೊಂಡು ಹೆಣ ಕಾಯ್ತಾ ಒಬ್ಬಳೇ ಕೂತೆ . ಚಿಮಣಿ ಎಣ್ಣೆ ಖರ್ಚಾಗಿ ದೀಪ ಬೇರೆ ಆರಿಹೋಗಿ ಕತ್ತಲೆಲ್ಲೆ ಕೂತನಲ್ಲೆ …” ಎಂದು ರೊದಿಸ ಹತ್ತಿದಳು . ” ನಮಗೆ ಗೊತ್ತಾಗಿದ್ದೇ ಬೆಳಿಗ್ಗೆ ರಾಮಯ್ಯ ಬಂದು ಹೇಳಿದ ಮೇಲೆ . ರಾತ್ರೇನೇ ಗೊತ್ತಾಗಿದ್ರೆ ಬರ್ತಿರಲಿಲ್ವೇನೆ …? ” ಎಂದು ಅಮ್ಮ ಅಜ್ಜಿಯನ್ನು ತಬ್ಬಿಕೊಂಡು ಗಳಗಳನೆ ಆಳಹತ್ತಿದಳು .

ಆಗಲೇ ಹತ್ತಾರು ಜನ ನೆಂಟರಿಷ್ಟರು ಅಲ್ಲಿ ಸೇರಿದರು . ಹತ್ತಿರ ಹೋಗಿ ಅಜ್ಜಿಯ ಮುಖ ನೋಡಿದೆ . ಅಜ್ಜಿಯ ಮುಖದಲ್ಲಿ ಮುಗುಳು ನಗು ಇತ್ತು . ಪ್ರೇತ ಕಳೆ ಇರಲಿಲ್ಲ . ಒಂದು ಕಾಲದಲ್ಲಿ ನನಗೆ ಪ್ರಿಯವಾಗಿದ್ದ ಅಜ್ಜಿಯ ಗೇರು ಮರ ಇಂದು ನನಗೆ ಯಮನಂತೆ ಕಂಡಿತು . ಮನೆ ಹಿಂದಿನ ನುಗ್ಗೆ ಮರ ಕಾಣಲಿಲ್ಲ . ಏಕೆ , ಏನಾಯಿತೆಂದು ಹಿತ್ತಲ ಕಡೆ ಹೋಗಿ ನೋಡಿದೆ ಗಾಳಿ ಮಳೆಗೆ ನುಗ್ಗೆಮರ ನೆಲಕ್ಕೆ ಅಡ್ಡ ಬಿದ್ದಿತ್ತು . ಹಿಂದುರಿಗಿ ಬಂದೆ. ಅಜ್ಜಿಯ ಶವ ಸಂಸ್ಕಾರಕ್ಕೆ ಬಿರುಸಿನಿಂದ ಓಡಾಡುತ್ತಿದ್ದರು .ಅಷ್ಟರಲ್ಲಿ ತಂದೆಯವರು ನನ್ನಣ್ಣ ತಂಗಿ ಚಿಕ್ಕ ಮಾವನೊಂದಿಗೆ ಬಂದರು . ದೂರದ ಊರಿಂದ ಅಜ್ಜಿಯ ತಂಗಿಯು ಬಂದಳು . ಮತ್ತೆ ರೋದನ ಶುರುವಾಯಿತು .

ಚಿಕ್ಕಜ್ಜಿ ಅಕ್ಕ ಜೀವನದಲ್ಲಿ ಕಷ್ಟ ಪಟ್ಟಿದ್ದನ್ನು ಹೇಳಿಕೊಂಡು ತಾನೂ ಅತ್ತಳಲ್ಲದೆ ಬೇರೆಯವರಿಗೂ ಕರಳು ಬಾಯಿಗೆ ಬರುವಂತೆ ಮಾಡಿದಳು .ಚಿಕ್ಕ ಮಾವನಂತೂ ಚಿಕ್ಕ ಮಕ್ಕಳಂತೆ ಆಳ ಹತ್ತಿದ .ಶವ ಸಂಸ್ಕಾರಕ್ಕೆ ಸಿದ್ಧತೆ ಮುಗಿಯುತ್ತಿದ್ದಂತೇ ದೊಡ್ಡ ಮಾವನ ಸವಾರಿ ಸ್ನೇಹಿತರೊಂದಿಗೆ ಬಂದಿಳಿಯಿತು . ಆತ ಕೂಡ ” ಅಯ್ಯೋ ಅಮ್ಮ ಹೋದಿಯೇನೆ ….” ಎಂದು ಗೋಡೆಗೆ ತಲೆ ಬಡಿದುಕೊಳ್ಳ ಹತ್ತಿದ . ನನಗೆ ಎಲ್ಲವೂ ಕೃತಕವಾಗಿ ಕಂಡಿತು . ” ನಿನ್ನ ಹೆಂಡತಿ ಬರಲಿಲ್ಲವೇನೋ ..? ” ಚಿಕ್ಕಜ್ಜಿ ಅಳುತ್ತಲೇ ಕೇಳಿದಳು . ” ಅವಳಿಗೆ ಹುಶಾರಿಲ್ಲ ” ಮಾವ ಬಿಕ್ಕುತ್ತಲೇ ಹೇಳಿದ . ” ಹುಶಾರಿಲ್ಲವೋ ..? ಅಥವಾ ಹೀಗೆ ಹೇಳಿ ಅಂತ ಹೆಳಿಕಳಿಸಿದಳೋ …? ದೊಡ್ಡ ಮನುಷ್ಯರ ಮನೆ ಹೆಣ್ಣು ತಂದರೆ ಹೀಗೇ ! ನೀನು ಹೆಂಡತಿ ಗುಲಾಮ . ಕಳ್ಳರಂಡೆನ ಮದುವೆ ಮಾಡಿಕೊಂಡು ಹೆತ್ತ ತಾಯಿಯನ್ನು ಮನೆಯಿಂದ ಓಡಿಸಿದವನಲ್ಲವಾ ನೀನು ..? ” ಅಜ್ಜ ರೇಗಿದರು .

” ಸುಮ್ಮನೆ ಇರಿ . ಈಗ ಅದೆಲ್ಲ ಯಾಕೆ ? ” ತಂದೆ ಅಂದರು . ಅಜ್ಜ ಸುಮ್ಮನಿರಲಿಲ್ಲ . ಮಾತು ಬೆಳೆಸಿದರು . ” ನಿನಗೆ ಅನ್ನ ಹಾಕೋ ಬದಲು ನಾಯಿಗೆ ಅನ್ನ ಹಾಕಿದ್ದರೆ ಬಾಲ ಅಲ್ಲಾಡಿಸಿಕೊಂಡು ಕೃತಜ್ಞತೆಯಿಂದ ಮನೆ ಕಾಯ್ಕೊಂಡು ಬಿದ್ದಿರುತ್ತಿತ್ತು . ಹೆಂಡತಿ ಪೈಕಿ ಯಾರ ಮದುವೆಯಾದರೂ ಅಲ್ಲಿಗೆ ನಿನಗೆ ಹೋಗಲಿಕ್ಕೆ ಆಗುತ್ತದೆ . ಕಷ್ಟ ಕಾಲದಲ್ಲಿ ಸಹಾಯ ಮಾಡಿದವರು , ಅನ್ನ ಹಾಕಿದವರನ್ನ ನೋಡಬೇಕು ಅನ್ನೋದಿಲ್ಲ ಅಲ್ಲವಾ ನಿನಗೆ …..?” ಮಾವ ಮಾತನಾಡಲಿಲ್ಲ . ಕಣ್ಣೀರು ಹಾಕುತ್ತಾ ನಿಂತಿದ್ದ . ಅವನು ಬೈಸಿಕೊಂಡಿದ್ದಕ್ಕೆ ಕಣ್ಣೀರು ಹಾಕುತ್ತಿದ್ದಾನೋ , ತಾಯಿ ಸತ್ತಿದ್ದಕ್ಕೆ ಕಣ್ಣೀರು ಹಾಕುತ್ತಿದ್ದಾನೋ ಎಂಬುದು ನನಗೆ ಅರ್ಥವಾಗಲಿಲ್ಲ . ಅಜ್ಜ ಅವನಿಗೆ ಇನ್ನಷ್ಟು ಉಗಿಯಲಿ ಎಂಬ ಮನಸ್ಸು ನನಗಿತ್ತು . ಅದೇಕೋ ಅಜ್ಜನ ಆರ್ಭಟ ಅಲ್ಲಿಗೇ ನಿಂತು ಹೋಯಿತು .

ಮಳೆಗೆ ಜಿಂಕ್ ಶೀಟ್ ಮಾಡು ಕಟ್ಟಿ ನೀರು ಬಿದ್ದು ಬೆಂಕಿ ಆರಿ ಹೋಗದಂತೆ ಅಜ್ಜಿಯ ಶವ ಸಂಸ್ಕಾರ ಮಾಡಿದರು . ಬಂದವರೆಲ್ಲ ಹೋದರು . ಚಿಕ್ಕಜ್ಜಿ ಮಾವ ನಮ್ಮೊಂದಿಗೆ ಮನೆಗೆ ಬಂದರು . ಮಾವ ಹಣ ಖರ್ಚು ಮಾಡಿ ತಾಯಿಯ ವೈಕುಂಠ ಸಮಾರಾಧನೆ ಮಾಡಿ ಕೈತೊಳೆದುಕೊಂಡ . ಅವನು ಹೋದ ಮೇಲೆ ಅವನ ಹೆಂಡತಿಯಿಂದ ನಮ್ಮ ತಂದೆಗೆ ಕಾಗದ ಬಂತು . ” ಅಯ್ಯೋ ಅತ್ತೆ ಕಾಲವಾದರಂತೆ . ನನಗೆ ಮೊನ್ನೆ ಗೊತ್ತಾಯಿತು . ನಾನು ಊರಲ್ಲಿ ಇರಲಿಲ್ಲ . ಇವರು ನನಗೆ ತಿಳಿಸಿದ್ದರೆ ನಾನು ಅಂತಿಮ ದರ್ಶನ ಮಾಡಿಕೊಳ್ಳುತ್ತಿದ್ದೆ . ಎಂಥಾ ಕೆಲಸ ಆಗಿಹೋಯಿತು . ಪರಮಾತ್ಮನು ಅವರ ಆತ್ಮಕ್ಕೆ ಶಾಂತಿಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ” ಎಂದು ಬರೆದಿದ್ದಳು .

ಕಾಗದ ಓದಿ ನಾವೆಲ್ಲಾ ನಕ್ಕೆವು . ನಾನೂ ಒಂದು ಕಾಗದ ಅವಳಿಗೆ ಬರೆದೆ . ” ನೀನು ಅಜ್ಜಿಯನ್ನು ಗೋಳು ಹೊಯ್ದುಕೊಂಡು ಮನೆಯಿಂದ ಓಡಿಸಿದಾಗಲೇ ದೇವರು ಅವಳ ಆತ್ಮಕ್ಕೆ ಶಾಂತಿಯನ್ನು ಕೊಟ್ಟಿದ್ದಾನೆ . ನಿನ್ನ ಮೊಸಳೆ ಕಣ್ಣೀರು ಬೇಕಾಗಿಲ್ಲ ….” ಎಂದು . ತಂದೆಯವರು ” ಹಾಗೆಲ್ಲ ಬರೆಯಬಾರದು . ಅವರವರ ಪಾಪಕ್ಕೆ ಅವರವರೇ ಹಾಳಾಗುತ್ತಾರೆ ” ಎಂದು ನನ್ನನ್ನು ಆಕ್ಷೇಪಿಸಿದರು .

ಮುಗಿಯಿತು.

Facebook ಕಾಮೆಂಟ್ಸ್

ಲೇಖಕರ ಕುರಿತು

Prabhakar Tamragouri

ಫ್ರೀಲಾನ್ಸ್ ಬರಹಗಾರರಾಗಿದ್ದು ಗೋಕರ್ಣ ನಿವಾಸಿಯಾಗಿದ್ದಾರೆ. ಈವರೆಗೆ 4 ಕಾದಂಬರಿ , 4 ಕಥಾ ಸಂಕಲನ ,2 ಕವನ ಸಂಕಲನ ಒಟ್ಟು 10 ಪುಸ್ತಕಗಳು ಪ್ರಕಟವಾಗಿವೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!