ಕಥೆ

ಮದುವೆಯಾಗದೇ ತಾಯಿಯಾದವಳ ಕಥೆ

೦೧/೦೪/೨೦೧೫.

ಅದ್ಯಾಕೋ ರಾತ್ರೆಯಿಡಿ ನಿದ್ದೇನೆ ಬರ್ಲಿಲ್ಲ. ಮಧ್ಯಾಹ್ನ ನೋಡಿದ್ದ ಆ ಹುಡುಗನ ಮುಖ ಬೇಡಾ ಬೇಡಾ ಅಂದ್ರು ಮತ್ತೆ ಮತ್ತೆ ಕಣ್ಣ ಮುಂದೆ ಬರ್ತಾ ಇತ್ತು.

ಅದು ತೀರಾ ಆಕಸ್ಮಿಕವಾಗಿ ಆದ ಘಟನೆ. ನಾನು ಆ ಸಮಯಕ್ಕೆ ಅಲ್ಲಿಗೆ ಹೋಗದಿದ್ದಿದ್ರೆ ಅವ್ನು ಸಿಗ್ತಾನೇ ಇರ್ಲಿಲ್ಲ. ಹೋಗಿದ್ರೂ ಅವ್ನನ್ನ ನೋಡದೆ ಇದ್ದಿದ್ರೂ ಸಾಕಿತ್ತು!

ವಿಷ್ಯ ಏನಪ್ಪಾ ಅಂದ್ರೆ ನಿನ್ನೆ ಮತ್ತದೇ ಟೀಮ್ ಲಂಚು. ಮತ್ತೆ ಅದೇ ೧೫ -೨೦ ಸಾವಿರದ ಬಿಲ್ಲು, ಅದನ್ನಾ ಹಂಚಿಕೊಳ್ಳೋಕೆ ಒಂದ್ನಾಕು ಜನ , ನನ್ನ ಹುಟ್ಟಿದ ಹಬ್ಬ, ಅವ್ನ ಪ್ರೊಮೋಷನ್ನು ,ಇನ್ನೊಬ್ಬ೦ಗೆ ಮಗು ಆಯ್ತು. ಸಿಂಪಲ್ಲಾಗಿ ಹೇಳ್ಬೇಕು ಅಂದ್ರೆ ದುಡ್ಡು ಖರ್ಚು ಮಾಡೋಕೆ ಹುಡ್ಕಿದ ಒಂದಷ್ಟು ವಿಧಾನಗಳಲ್ಲಿ ಇದೂ ಒಂದು. ತುಂಬಾ ಕೆಲ್ಸಾ ಬೇರೆ ಬಾಕಿಯಿತ್ತು, ಮನಸ್ಸಿಲ್ಲದ ಮನಸ್ಸಿಂದ ಗೆಳೆಯರ ಒತ್ತಾಯಕ್ಕೆ ಹೊರಟೆ. ೫ -೬ ಕಾರುಗಳಲ್ಲಿ ಹೋಟೆಲ್ ಮುಟ್ಟ್ಬೇಕಾದ್ರೆ ೧ ಗಂಟೆ ದಾಟಿತ್ತು. ವ್ಯಾಲೆಟ್ ಕೈಗೆ ಪಾರ್ಕಿಂಗ್ ಮಾಡಪ್ಪಾ ಅಂತಾ ಕೀ ಕೊಟ್ಟು ಒಳಗೆ ಮುಟ್ಟುವಾಗ ಮತ್ತೆ ಹತ್ತು ನಿಮಿಷ ಡಮಾರ್. ನಾವೊಂದಷ್ಟು ಜನ ಅಲ್ಪಸಂಖ್ಯಾತರು ಒಂದು ಕಡೆ! ಅರೇ ಜಾತಿ ಅಲ್ಲಪ್ಪಾ , ಶಾಖಾಹಾರಿಗಳು!! ಮೂಳೇಮಾಂಸ ತಿನ್ನೋರು ಮತ್ತೊಂದು ಕಡೆ ಕೂತಿದ್ರು . “ಈಗ ಹೋಟೆಲ್ ಮುಟ್ಟಿದೆ, ನಿಂದೂಟ ಆಯ್ತಾ”, ಅಂತಾ ನನ್ನಾಕೆಗೆ ವಾಟ್ಸ್ಯಾಪಿಸಿ ಮೆನು ನೋಡುತ್ತಾ ಕೂತೆ. ಅದೇ ಹಳೇ ಸ್ಟಾರ್ಟರ್ಸುಗಳು, ಅದೇ ಸೂಪುಗಳು, ಅದೇ ಪರೋಟಾ ನಾನ್ಗಳು, ಮತ್ತೊಂದು ರೈಸ್, ಕೊನೆಗೆ ಡೆಸರ್ಟು. ಇಷ್ಟೇ ತಾನೆ ನಮ್ಗಿರೋ ಆಯ್ಕೆಗಳು. ಅದ್ರಲ್ಲೇ ಒಂದಿಷ್ಟನ್ನ ಆರ್ಡರ್ ಮಾಡ್ರಪ್ಪ ಅಂತಾ ಉಳಿದವರಿಗೆ ಹೇಳಿ ನಾನು ಯೋಚನೆಯಲ್ಲಿ ಮುಳುಗಿದೆ. ಅದೇ ಕ್ರಿಟಿಕಲ್ ಪ್ರಾಬ್ಲಮ್ ಬಂದಿತ್ತಲ್ಲಾ. ಈ ಇಂಜಿನೀಯರ್ಗಳ ಕಥೇನೇ ಇಷ್ಟು. ಯಾವಾಗ ಎಲ್ಲಿ ಏನಾಗುತ್ತೆ ಅಂತಾನೆ ತಿಳ್ದಿರಲ್ಲಾ. ಆಗ ನೋಡಿದ್ದೆ ಅವ್ನನ್ನ. ನಾ ಕುಳಿತಿದ್ದ ಗೋಡೆಯ ಗಾಜಿನಾಚೆಬದಿಯಲ್ಲಿ ಸುಮ್ನೆ ನಿತ್ಕೊಂಡು ನಮ್ಮನ್ನೇ ನೋಡ್ತಾ ಇದ್ದ ಅನ್ನಿಸ್ತು. ಕಂಗಳಲ್ಲಿ ಅದೇನೋ ಕಾಂತಿಯಿತ್ತು , ಆದ್ರೆ ಮುದುಡಿದ ಮುಖ ಹಾಸಿಹೊದೆದಿದ್ದ ಬಡತನಕ್ಕೆ ಸಾಕ್ಷಿಯೇನೋ ಎಂಬಂತೆ ಕಾಣ್ತಾ ಇತ್ತು. ಹರಿದ ಷರ್ಟು, ಮಾಸಲು ಚೆಡ್ಡಿ, ಕೆದರಿದ ಕೂದ್ಲು, ಅಲ್ಲಲ್ಲಿ ಕೊಳೆ, ಮಣ್ಣಿನ ಕಲೆಗಳು ಇವೆಲ್ಲಾ ಅವನ ವ್ಯಕ್ತಿತ್ವದ  ಭಾಗಗಳೇ ಏನೋ ಅನ್ನುವಷ್ಟರ ಮಟ್ಟಿಗೆ ಅವನನ್ನ ಆವರಿಸಿದ್ದವು, “ಅರ್ರೇ! ಯಾಕ್ರಿ ಆತರ ಆಕಾಶ ತಲೇ ಮೇಲೆ ಬಿದ್ದವ್ರ ತರಾ ಕೂತಿದೀರ? ನಿಮ್ಗೇನ್ರಿ, ಅರ್ಧ ಘಂಟೆ ಸರಿಯಾಗಿ ಕೂತ್ರೆ ಆ ಕ್ರಿಟಿಕಲ್ ಸಾಲ್ವಾಗುತ್ತೆ”, ಅಂದ್ರು ರಾಜೀವ್. “ಕ್ಲಿಷ್ಟಕರ ಸಮಸ್ಯೆ ಪರಿಹಾರವಾಗುತ್ತೆ ಅನ್ನಿ ” ಎಂದು ನಾನು ನಕ್ಕೆ. ನವೆಂಬರ್ ಇನ್ನೂ ದೂರವಿದೆ ಬಿಡಿ ಸಾರ್ ಅಂದ್ರು ಅದಕ್ಕವರು. ಹಂಗೆ ಊಟ ಡೆಸರ್ಟುಗಳನ್ನ ಹೊಟ್ಟೆಗೆ ತುಂಬಿಸಿ, ತಿಂದಿರುವ ಆಹಾರದ ಸರಾಸರಿ ಕ್ಯಾಲೊರಿಗಳ ಲೆಕ್ಕ ಹಾಕಿ, ಇವತ್ತು ಟ್ರೆಡ್ಮಿಲ್ಲಲ್ಲಿ ಒಂದು ಮೈಲು ಹೆಚ್ಚೇ ಓಡ್ಬೇಕು ಅಂತಾ ಆಲೋಚಿಸಿ ಹೊರ ಬಂದ್ವಿ. “ಬಿಲ್ ಕೊಡಿ ಇಲ್ಲಿ, ೧೭ ಸಾವಿರ ಆಯ್ತೇನ್ರಿ?, ೪ ಸಾವಿರ ಟ್ಯಾಕ್ಸು ಕಣ್ರೀ, ಸುಮ್ನೆ ತಿಂದಿದ್ದಲ್ಲಾ ಕುಡ್ದದ್ದಲ್ಲಾ. ಹೊಟ್ಟೆ ಉರಿಯುತ್ತೆ, ಅಷ್ಟೊಂದು ಟೇಷ್ಟೀನು ಇರ್ಲಿಲ್ಲ ಕಣ್ರೀ ಅಂದ ಪಾರ್ಟೀ ಪಾರ್ಟೀ ಎಂದು ನನ್ನ ಕಾಡಿದ್ದ ಮಹಾಶಯ. ಅವನತ್ತ ಒಂದು ಹುಸಿನಗುವನ್ನ ಎಸೆದೆ. “ನಿನ್ನ ಪಾರ್ಟಿ ಚೆನ್ನಾಗಿರ್ಲಿಲ್ಲಾ” ಅಂದದ್ದಾಗಿತ್ತಲ್ಲಾ ಹೆಂಗೂ. ಹೊರಬಂದು ಕಾರಿಗಾಗಿ ಕಾಯ್ತಾ ಇದ್ದ್ವಿ. ಮತ್ತೆ ಅವ್ನು ಕಾಣಿಸ್ಕೊಂಡಾ. ಯಾಕೋ ಕರುಳು ಚುರುಕ್ಕಂತು. ಈಗ ಬರ್ತೀನಿ ಅಂತೇಳಿ ಅವ್ನ ಕಡೆ ಹೊರಟೆ. ಅವ್ನು ನನ್ನನ್ನ ನೋಡಿ ಮುಖ ಆಚೆಕಡೆ ಹೊರಳಿಸಿದ. ಹೆದ್ರಿರ್ಬೇಕು ಅಂದ್ಕೊಂಡೆ. “ಮಗೂ, ಏನಪ್ಪಾ ನಿನ್ನ ಹೆಸ್ರು?” ಅಂತಾ ಕೇಳಿದೆ.ನನ್ನತ್ತ ನೋಡಿ “ತರುಣ್”, ಅಂದ. “ಐಸ್ಕ್ರೀಮ್ ತಿಂತೀಯಾ?” ನಾನು ಕೇಳಿದೆ. ” ಬೇಡಾ ಸರ್!”,  ನನ್ನ ಪ್ರಶ್ನೆ ಮುಗಿಯೋ ಮುಂಚೆನೇ ಬಂದಿತ್ತು ಅವ್ನ ಉತ್ತರ. “ಏ ಮರೀ ತಗೋಳೋ, ನಿಂಗೊಂದು ಐಸ್ಕ್ರೀಮ್ ಕೊಟ್ರೆ ನಾನೇನು ಬಡವ ಆಗಲ್ಲ, ನಿನ್ನ ಮುಖದಲ್ಲಿ ಖುಷಿ ನೋಡಿದ ಸಂತೋಷ ಇರುತ್ತೆ ಕಣೋ”, ಅಂದೆ! “ನನ್ನ ಖುಷಿಯನ್ನ ಇದೇ ರೀತಿ ಯಾರೋ ಏನೇ ಮಾಡಿದ್ರೂ ಬಡವರಾಗ್ದೇ ಇರೋರೇ ಸರ್ ಹಾಳ್ಮಾಡಿದ್ದು” ಅಂದ ಅವ್ನು. ಒಂದು ಕ್ಷಣ ಅವನ ಮಾತನ್ನ ಅರಗಿಸಿಕೊಳ್ಳೋಕೆ ಆಗ್ಲಿಲ್ಲ ನನಗೆ, ಇವ್ನ್ಯಾರು, ಏನೋ ಪಾಪ ಬಿಸ್ಲಲ್ಲಿ ನಿಂತಿದಾನೆ ಅಂತಾ ನಾನ್ಬಂದ್ರೆ ಇವ್ನ್ಯಾಕೆ ಹಿಂಗಾಡ್ತಿದಾನೆ ಅಂದ್ಕೊಂಡೆ, ತುಂಬಾ ಕೊಬ್ಬು ಅಂತಾ ಯೋಚಿಸಿ ಏನೋ ಹೇಳಹೊರಟವನು, “ಯಾಕಪ್ಪಾ ಹಾಗಂತೀಯಾ?”, ಯಾವ್ದಕ್ಕೂ ಇರ್ಲಿ ಅಂತಾ ಕೇಳಿದ ಪ್ರಶ್ನೆ ಅದು. “ನಿಮ್ಮ ಕಾರು ಬಂತು, ನೀವು ಹೊರ್ಡಿ ಸರ್ ಅಂದ ಅವ್ನು. ಯಾಕೋ ಪೆಚ್ಚೆನಿಸಿತ್ತು. ಹಾಗೇ ಹೊರಟು ಬಂದಿದ್ದೆ. ಮತ್ತೆ ಅದೇ ಕ್ರಿಟಿಕಲ್ಲಿನ ಹಿಂದೆ ಬಿದ್ದು, ಅದು ಮುಗಿಯೋಷ್ಟರಲ್ಲಿ ಜಿಮ್ಮಿಗೆ ಹೋಗುವ ಸಮಯವಾಗಿತ್ತು. ಮನೆಗೆ ಬಂದಿದ್ದು ೯.೪೫ಕ್ಕೆ . ಅಮ್ಮ  ಅಡುಗೆ ಬಿಸಿ ಮಾಡಿ ಬಡಿಸಿದ್ಲು. ತಿಂದು ಅಪ್ಪನೊಟ್ಟಿಗೆ ಹರಿಟಿ ಬಂದು ನನ್ನಾಕೆಗೆ ಒಂದು ಮತ್ತು ತರಿಸುವ ಮುತ್ತನ್ನು ಮತ್ತೆ ವಾಟ್ಸ್ಯಾಪಲ್ಲಿ ಇಕ್ಕಿ, ಗುಡ್ ನೈಟ್ ಕಂದಮ್ಮ ಅಂತಾ ಇನ್ನೊಂದು ಸಂದೇಶ ಕಳಿಸಿ ಹಾಗೇ ಹಾಸಿಗೆ ಮೇಲೊರಗಿದೆ. ತಕ್ಷಣ ನಿದ್ದೆ ಬಂತು. ಮಧ್ಯರಾತ್ರೆ ಚಕ್ಕನೆ ಬೆಚ್ಚಿಬಿದ್ದು ಎದ್ದೆ. ಆ ಹುಡುಗ ಕುತ್ತಿಗೆಗೆ ಕೈ ಹಾಕಿ, “ನೀನೇ ನನ್ನ ನಗುವನ್ನ ಕದ್ದವ್ನಲ್ವಾ?” ಅಂತಾ ಕೇಳಿದ್ದ! ಬಿಡಿಸಿಕೊಳ್ಳಲು ಪ್ರಯತ್ನ ಪಟ್ಟು ಅವನನ್ನ ದೂಡಿ ನಾನು ಕೆಳಗೆ ಬಿದ್ದಿದ್ದೆ,ಹಾಗೆ ಬಿದ್ದಾಗಲೇ ಎಚ್ಚರವಾಗಿದ್ದು, ಮೈಯೆಲ್ಲಾ ಬೆವರಿತ್ತು. ಒಂದು ಕ್ಷಣ ಹಾಗೆ ಕೂತಿದ್ದೆ. ತಲೆ ಕೊಡವಿ ಮೇಲೆದ್ದು ಒಂದು ಲೋಟ ನೀರು ಕುಡಿದು ನಿದ್ದೆ ಮಾಡಹೊರಟೆ. ಒಂದಷ್ಟು ಹೊತ್ತು ಹೊರಳಾಡಿದೆ. ನನ್ನಾಕೆಗೆ ಫೋನಾಯಿಸಿದೆ. “ವಾಟ್ಸಿಟ್ ಹನಿ, ಈ ಟೈಮಲ್ಲಿ, ಕಾಂಟ್ ವೈಟ್ ಫ಼ಾರ್ ೨ ಮೋರ್ ಮಂತ್ಸ್?” ಎಂದು ನಿದ್ದೆಯಲ್ಲೇ ನಕ್ಕಳು. ಬೇರೆದಿನವಾಗಿದ್ದರೆ ನಾನೂ ಏನಾದರೂ ಪೋಲಿ ಉತ್ತರ ಕೊಡ್ತಿದ್ದೆ! ಆದರೆ ನಿನ್ನೆ ನನ್ನ ಮನಸ್ಸು ಅದನ್ನೆಲ್ಲಾ ಹೇಳುವಷ್ಟು ಖುಷಿಯಲ್ಲಿರ್ಲಿಲ್ಲ. “ನಿನ್ನತ್ರ ಒಂದು ವಿಷ್ಯ ಮಾತಾಡ್ಬೇಕಿತ್ತು ಅಂದೆ”. ಆಕೆಯ ನಿದ್ದೆಯೂ ಅಲ್ಲಿಗೇ ಹಾಳಾಗಿತ್ತು! ನಡೆದದ್ದೆಲ್ಲವನ್ನ ಅವ್ಳತ್ರಾ ಹೇಳ್ಕೊಂಡೆ. ಪಾಪಚ್ಚಿ ಸುಮ್ನೆ ಕೇಳ್ತಾ ಕೂತಿದ್ಲು. ಮಧ್ಯರಾತ್ರೆಯಲ್ಲಿ ಅವ್ಳು ನಂಗೆ ಕಾಲ್ ಮಾಡಿದ್ರೆ, “ಏನೇ ನಿಂದು? ನಾಳೇ ಮಾತಾಡೋಣ”, ಅಂತಿದ್ನೇನೋ ನಾನು. “ಇಷ್ಟೊತ್ತು ಕೇಳಿದ್ದಕ್ಕೆ ಥ್ಯಾಂಕ್ಸ್ ಕಣೇ ಚಿನ್ನಿ”, ಅಂದೆ. “ಅದೆಲ್ಲಾ ಇರ್ಲಿ ಇದನ್ನ ಇಲ್ಲಿಗೇ ಬಿಡ್ತೀಯಾ” ಅಂದ್ಳು ಅವ್ಳು. “ಇನ್ನೇನ್ಮಾಡ್ಲಿ?” “ಅಹಂಕಾರಕ್ಕೆ ಉದಾಸೀನವೇ ಮದ್ದು ಅಲ್ವಾ”,ಅಂದೆ. “ಡೋಂಟ್ ಬಿ ಜಡ್ಜಮೆಂಟಲ್ ಹನೀ”, ಬಂದಿತ್ತು ಅವಳ ಉತ್ತರ. “ನಾನೇನ್ ಮಾಡ್ಲೀ? ಅವ್ನನ್ನ ಹುಡುಕ್ಕೋಂಡು ಹೋಗಿ ಏನಯ್ಯಾ ನಿನ್ನ ಪ್ರಾಬ್ಲಮ್ ಅನ್ಲಾ?” , “ವೈ ನಾಟ್?” ಅಂದ್ಳು ಅವಳು. “ಲೇ ವೈಪು, ಲೈಪು ಹಾಳಾಗ್ತಾ ಇದೇ ಕಣೇ, ರೋಮ್ಯಾನ್ಸು ಮಾಡೋ ಟೈಮಲ್ಲಿ ಯಾರ್ಯಾರೋ ಬರ್ತಿದಾರಲ್ಲೇ ಅಂದೆ” . ” ನಾಳೆ ನಾನೂ ನಿನ್ನ ಜೊತೆ ಬರ್ತೀನಿ. “ನಾನು ಸಿಕ್ ಲೀವ್ ತೊಗೋತೀನಿ” ಅಂದ್ಳು. ನಾನು ವರ್ಕ್ ಫ಼್ರಮ್ ಹೋಮ್ ತೊಗೊಳ್ಳೋ ಯೋಚ್ನೆ ಮಾಡಿ, ಹಂಗೇ ಅವ್ಳಿಗೊಂದು ಟೆಲಿಮುತ್ತು ಕೊಟ್ಟು ಫೋನಿಟ್ಟೆ. ನಿದ್ದೆಯಾಕೋ ಮತ್ತೂ ಬರ್ಲಿಲ್ಲ. ತತ್ತೆರೀಕೇ, ಅಂದ್ಕೊಂಡು ಹಂಗೆ ಲ್ಯಾಪ್ಟಾಪ್ ತೆರೆದು ಬಾಕಿಯಿದ್ದ ಒಂದಷ್ಟು ಕೆಲ್ಸ ಮಾಡತೊಡಗಿದೆ. ಹಂಗೆ ಒಂದಷ್ಟು ನೀರು ಬಿಸಿ ಮಾಡಿ ಅದಕ್ಕೊಂದಿಷ್ಟು ಸಕ್ಕರೆ ಮತ್ತೆ ನನ್ನ ಗ್ರೀನ್ಟೀಯ ಸ್ಯಾಚೆ ಹಾಕಿಟ್ಟು ಮತ್ತೆ ಕೆಲ್ಸಾ ಮುಂದುವರೆಸಿದೆ. ಮನಸ್ಸನ್ನ ಹತೋಟಿಗೆ ತರೋಕೆ ಮಾಡಿದ ಪ್ರಯತ್ನ ಅದು. ಅದೊಂದು ರೀತಿಯ ರುಟಿನ್ ನನಗೆ. ಒಂದು ಲೋಟ ಗ್ರೀನ್ ಟೀ. ಅದರೆ ಅದೂ ಉಪಯೋಗ ಆಗ್ಲಿಲ್ಲಾ. ಎಲ್ಲಾ ಸಾಯ್ಲಿ ಅಂತಾ ಒಂದು ಹಾಲಿವುಡ್ ಸಿನೆಮಾ ನೋಡ್ತಾ ಕೂತೆ. ಸಮಯ ಹೋಗಿದ್ದು ಗೊತ್ತಾಗ್ಲಿಲ್ಲಾ, ಅದು ಮುಗ್ದ ಮೇಲೆ ಇನ್ನೊಂದು ಸಿನೆಮಾ ನೋಡ್ತಾ ಕೂತಿದ್ದವನಿಗೆ ಅವ್ಳ “ಗುಡ್ ಮಾರ್ನಿಂಗ್ ಬೇಬಿ. ಲವ್ ಯೂ” ಮೆಸೇಜು ಮತ್ತೆ ನಿಜ ಜೀವನದತ್ತ ಮತ್ತೆ ಬರುವಂತೆ ಮಾಡಿತು. ” ಅಮ್ಮ ಮನೆಗೆ ತಿಂಡಿಗೆ ಬಾ ಅಂತಿದಾರೆ, ಅಪ್ಪ ಅಮ್ಮನ್ನೂ ಕರ್ಕೊಂಡು ಬಾ. ಅವ್ರಿಲ್ಲಿರ್ಲಿ, ನಾವು ಹೋಗ್ಬರೋಣ ಅಂದ್ಲು” , “ವಾಹ್, ಮಹಿಳಾಮಣಿ ಮೆಚ್ಚಿದೆ ನಿನ್ನ ಮನಸ್ಸನ್ನ, ಅತ್ತೆಗೆ ಈಗ್ಲೆ ಬಕೆಟ್ಟಾ?” ಅಂದೆ. ” ಸುಮ್ನಿರಕ್ಕೇನ್ಬೇಕು ನಿಂಗೆ”, ಅಂದ್ಳು ಅವ್ಳು. ಅಪ್ಪ ಅಮ್ಮಂಗೆ ಏನೋ ಒಂದು ಹೇಳಿ ಅವ್ರನ್ನು ಕೂರ್ಸ್ಕೊಂಡು ಅವ್ಳ ಮನೆ ಮುಟ್ಟಿದಾಗ ೯ ಘಂಟೆ ಆಗಿತ್ತು. ತಿಂಡಿಯೆಲ್ಲಾ ತಿಂದು, ಏನೋ ಕೆಲ್ಸಾ ಇದೆ, “ನಾವು ಸ್ವಲ್ಪಾ ಹೊರಗೆ ಹೋಗಿ ಬರ್ಬೇಕು, ಮಾವಾ, ಇವ್ಳನ್ನ ಕಳ್ಸ್ತೀರಾ ” ಅಂತಾ ಕೇಳ್ದೆ. ಅವ್ರು ಗೊಳ್ಳೆಂದು ನಕ್ಕು, ” ನಿನ್ನ ಹೆಂಡ್ತಿಯಾಗೋಳು, ನೀನಲ್ದೆ ಇನ್ನ್ಯಾರಪ್ಪಾ ಕರ್ಕೋಂಡು ಹೋಗ್ತಾರೆ, ಹೋಗ್ಬನ್ನಿ. ಆದ್ರೆ ಮಧ್ಯಾಹ್ನ ಊಟಕ್ಕೆ ಬನ್ನಿ ಅಂದ್ರು”, ಕಳ್ಳ ಮಾವ ಬರೀ ೩ ಘಂಟೆ ಟೈಮು ಕೊಟ್ಟಿದ್ದು! ಅದೂ ಕೂಡಾ ಬೆಣ್ಣೆಯಿಂದಾ ಕೂದ್ಲು ತೆಗ್ದಹಾಗೆ ಅಂತಾ ಅಂದ್ಕೊಂಡೆ, ಆದ್ರೂ, “ಆಯ್ತು ಮಾವ”, ಅಂತ ಹೇಳಿ ಅಲ್ಲಿಂದ ಹೊರಟಾಗ ೧೦.೩೦ ಆಗಿತ್ತು. ಅರ್ಧ ಘಂಟೇಲಿ ಆ ಹೋಟೇಲ್ ಮುಟ್ಟಿದ್ವಿ, ಆದ್ರೆ ಅವ್ನನ್ನೆಲ್ಲಿ ಅಂತಾ ಹುಡ್ಕೋದು ಅಂತಾ ಯೋಚಿಸ್ತಿದ್ದವ್ನಿಗೆ ಅವ್ನಲ್ಲೆ ದೂರದಲ್ಲಿ ನಿಂತು ಅದೇ ಹೊಟೇಲನ್ನ ನೋಡ್ತಾ ಇದ್ದದ್ದು ಕಾಣಿಸ್ತು. ಅದೇ ಬಟ್ಟೆ, ಅದೇ ಮುಖ, ಅದೇ ಕಂಗಳ ಕಾಂತಿ. ಅವ್ಳಿಗೆ ತೋರ್ಸಿದೆ. “ನೋಡಲ್ಲಿ ಅವ್ನೇ ನಮ್ಮ ಗುರು ಅಂದೆ”. ಅವ್ಳು ಸೀದಾ ಅವನತ್ತ ಸಾಗಿದಳು. ನಾನು ಕಾರನ್ನ ಪಾರ್ಕ್ ಮಾಡಿ ಆಕೆಯನ್ನ ಹಿಂಬಾಲಿಸಿದೆ. ಹುಡ್ಗೀರು ಹುಡ್ಗರ ವೀಕ್ನೆಸ್ಸು ಅನ್ನೋದು ಇದಕ್ಕೆ ಇರ್ಬೇಕು. ಅವ್ನು ನನ್ನಾಕೆಯೊಟ್ಟಿಗೆ ಮಾತಾಡತೊಡಗಿದ. ಅಲ್ಲೇ ಒಂದು ಮರದ ಕೆಳಗೆ ನಾವೂ, ಅವ್ನೂ ಕೂತ್ವಿ. “ನೀನ್ಯಾರೋ ಗೊತ್ತಿಲ್ಲಾ ಗುರು. ನಂಗೆ ಯಾಕೋ ನಿನ್ನನ್ನ ನೋಡಿ ಬೇಜಾರಾಯ್ತು, ಪಾಪ ಬಿಸ್ಲಲ್ಲಿ ಬೇಯ್ತಾ ಇದ್ದ್ಯಲ್ಲಾ ಅಂತಾ ಐಸ್ಕ್ರೀಮ್ ತಿನ್ನು ಅಂದೆ, ನೀನ್ಯಾಕೆ ಸುಮ್ನೆ ರಾಂಗಾದೆ” ಅಂದೆ. ಅವ್ನು ನುಸುನಕ್ಕು ಅಂದ. “ಸರ್, ನೀವು ಮತ್ತೆ ಬರ್ತೀರಾ ಅಂತಾ ಅಂದ್ಕೊಳ್ಳಿಲ್ಲಾ ಸರ್, ನಿನ್ನೆ ಎಲ್ಲರೂ ಇದ್ರು, ಅದಕ್ಕೆ ಅವ್ರೆದ್ರುಗೆ ನಾನ್ ತುಂಬಾ ಒಳ್ಳೇವ್ನು ಅಂತಾ ತೋರ್ಸ್ಕೋಳಕ್ಕೆ ಹಿಂಗಮಾಡುದ್ರಿ ಅಂತಾ ಅಂದ್ಕೋಂಡಿದ್ದೆ ಸ್ಸಾರಿ”, ಅಂದ. ” ಬಿಡಿಸಿ ಹೇಳಪ್ಪಾ ಅಂದೆ”. ” ನನ್ನ ಕಥೆ ಪೂರಾ ಹೇಳ್ತೀನಿ ,ಕೇಳ್ತೀರಾ” ಅಂದ ಅವ್ನು. “ಆಯ್ತು ಹೇಳು”, ಅಂದ್ಳು ನನ್ನವಳು.

ಆ ಹೋಟೆಲಿದ್ಯಲ್ಲಾ, ಅಲ್ಲಿ ಮುಂಚೆ ನಮ್ಮ ಹಟ್ಟಿಯಿತ್ತು, ದೊಡ್ಡದಲ್ಲಾ ಸರ್, ತುಂಬಾ ಸಣ್ಣದು. ಆದ್ರೆ ಅಲ್ಲಿ ಖುಷಿಯಿತ್ತು, ಅಮ್ಮ ಇದ್ರು, ನಾನಿದ್ದೆ. ಅಪ್ಪನ್ನ ಯಾವತ್ತೂ ನೋಡಿರ್ಲಿಲ್ಲ. ಆದ್ರೆ ಅಮ್ಮ ಯಾವತ್ತೂ ಅಪ್ಪ ಇಲ್ಲಾ ಅನ್ನೋದು ಗೊತ್ತಾಗದ ಹಾಗೆ ನೋಡ್ಕೊಂಡಿದ್ಲು. ಅವ್ಳು ಕಸ ಮುಸ್ರೆ ತಿಕ್ಕ್ತಾ ಇದ್ಳು ಸರ್,ಮನೆಮನೇಲಿ”, ಕಣ್ಣಂಚಲ್ಲಿ ಮೂಡಿದ್ದ ಕಣ್ಣೀರ ಪ್ರವಾಹ ತಡೆಹಿಡಿದು ಹೇಳಿದ್ದ. “ಆದ್ರೆ, ನಾನು ೬ ವರ್ಷದವ್ನಿರುವಾಗ ಅಂದ್ರೆ ೩ ವರ್ಷದ ಮುಂಚೆ ಈ ಹೋಟೆಲ್ ಬ್ಯುಲ್ಡರ್ರು ಅಂತೆ ಯಾರೋ, ಬಂದು ಜಾಗ ಖಾಲಿ ಮಾಡಿ ಅಂದಾ. ಅಮ್ಮ ಮಾತು ಕೇಳ್ಲಿಲ್ಲ. ಆಗಲ್ಲಾ ಅಂದ್ಳು. ಒಂಟಿ ಹೆಣ್ಣು ಯಾಕ್ಬೇಕು ನಿಂಗೆ ಹೋಗು ಅಂದ. ಒಂದಷ್ಟು ದುಡ್ಡು ಬಿಸಾಕ್ತೀನಿ ಅಂದ. ಅವ್ಳು ಕೇಳ್ಳಿಲ್ಲಾ. ಮತ್ತೆ ನಾನವಳನ್ನ ನೋಡಿದ್ದು ಹೆಣವಾಗೇ ಸರ್. ಪೋಲೀಸ್ನವ್ರು ಅದು ಆತ್ಮಹತ್ಯೆ ಅಂದ್ರು. ಆದ್ರೆ ಅವ್ಳು ನನ್ನನ್ನ ಬಿಟ್ಟು ಸಾಯೋಳಲ್ಲಾ ಸರ್. ಅವ್ಳನ್ನಾ ಆ ಪಾಪಿ ಕೊಂದ. ನಂಗೆ ಬೇರೆ ಯಾರು ಇರ್ಲಿಲ್ಲಾ. ಅಲ್ಲಿದ್ರೆ ಯಾವ್ದಾದ್ರು ಆಶ್ರಮಕ್ಕೆ ನನ್ನಾ ಸೇರ್ಸ್ತಾ ಇದ್ರು ಪೋಲಿಸ್ನವ್ರು . ಅದ್ಕೇ ಅಲ್ಲಿಂದಾ ಓಡೋದೆ ಸರ್. ಅಲ್ಲಿ ಇಲ್ಲಿ ಕಾಡಿ ಬೇಡಿ ಸ್ವಲ್ಪ ದಿನ ತಿಂದೆ, ಮತ್ತೆ ಸಣ್ಣ ಪುಟ್ಟ ಕೆಲ್ಸಾ ಮಾಡ್ತಾ ಇದ್ದೆ. ಈಗ ಒಂದು ತಿಂಗ್ಳಿಂದ ಇಲ್ಲಿದೀನಿ. ಅವ್ನೇನಾದ್ರು ಸಿಗ್ತಾನಾ ಅಂತಾ ನೋಡ್ತಾ ಇದೀನಿ ಸರ್, ನನ್ನ ಅಮ್ಮನ್ನ ಕೊಂದವ್ನು”. ನಂಗ್ಯಾಕೋ ತುಂಬಾ ಬೇಜಾರಾಗಿತ್ತು. ಕಣ್ಣೀರು ಸಣ್ಣಕ್ಕೆ ಕಣ್ಣನ್ನ ಒದ್ದೆ ಮಾಡಿತ್ತು,ನನ್ನಾಕೆ ಅದ್ಯಾವಾಗ  ಎದೆಗೊರಗಿ ಅಳಕ್ಕೆ ಶುರು ಮಾಡಿದ್ಲೋ ಗೊತ್ತಾಗಿರ್ಲಿಲ್ಲ. ನನ್ನ ಶರ್ಟು  ಎದೆಯ ಹತ್ರ ಒದ್ದೆಯಾಗಿತ್ತು. ಏನು ಹೇಳ್ಬೇಕು ಅಂತಾ ತೋಚಲಿಲ್ಲಾ. ಇಲ್ಲೇ ಇರು ಈಗ ಬರ್ತೀವಿ ಅಂತಾ ಹೊರಟೆ. ಹೋಟೆಲ್ನನವನನ್ನ ಹೊರಗೆಳೆದು ಅವ್ನ ಮಾನ ಹರಾಜು ಹಾಕೋಣ ಅಂದ್ಕೊಂಡೆ. ನನ್ನಾಕೆ ತಡೆದಳು. “ನೀನೇನ್ಮಾಡ್ಬೇಕು ಅಂತಾ ಇದೀಯಾ ಅಂತಾ ನಂಗೆ ಗೊತ್ತು. ಅವ್ನು ಹೋಟೆಲ್ಗಳ ಚೈನ್ ನಡೆಸ್ತಾನೆ. ಅದಲ್ಲದೆ ಮಂತ್ರಿ ಬೇರೆ. ಅವ್ರತ್ರ ಹೊಡ್ದಾಡಕ್ಕೆ ಆಗುತ್ತಾ” ಅಂದ್ಳು. ” ಇನ್ನೇನು ಮಾಡ್ಬೇಕು, ಅವ್ನನ್ನ ಹಾಗೆ ಬಿಟ್ಟು ಬಿಡೂ ಅಂತೀಯಾ? ಆ ಹುಡುಗನ್ನ ನೋಡು, ಅಪ್ಪ ಅಮ್ಮ ಇಬ್ರೂ ಇಲ್ಲಾ, ಒಂದು ಭವಿಷ್ಯ ಇಲ್ಲಾ, ಪಾಪ ಅವ್ನೇನು ತಪ್ಪು ಮಾಡಿದ್ದ, ಅವ್ನನ್ನ ಹಾಗೇ ಬಿಟ್ರೆ ನಂಗೂ,ಆ ಹೋಟೇಲ್ ಓನರ್ಗೂ ಏನು ವ್ಯತ್ಯಾಸ ಹೇಳು?” ಅಂದೆ. “ನಿಂಗೆಷ್ಟು ಸಂಬಳ ಬರುತ್ತೆ” ಕೇಳಿದ್ಳು ಅವ್ಳು. “ಇದೇನು ಹೊಸತ್ತು ನಿಂದು, ಗೊತ್ತಿಲ್ವಾ ನಿಂಗೆ?” ಅಂದೆ. “ಹಾಗಲ್ಲ,ನನ್ನ ಮನಸ್ಸಲ್ಲೇನೋ ಇದೆ ಅದಕ್ಕೆ ಕೇಳಿದ್ದು ಅಂದ್ಳು.” ಏನದು ಹೇಳು” ಅಂದೆ. “ನಾವಾವತ್ತು ನೋಡಿದ್ವಲ್ಲ ಆ ಡೈಮಂಡ್ ನೆಕ್ಲೆಸ್, ಅದಕ್ಕೆ ಎಷ್ಟಾಗುತ್ತೆ ಅಂದಿದ್ದೆ?” , ನಂಗೆ ಸಿಟ್ಟು ಬಂದಿತ್ತು, ಇವ್ಳ್ಯಾಕೆ ಹೀಗಾಡ್ತಿದಾಳೆ ಅಂತಾ. ಅವ್ಳ ಆಗಿನ ಕಣ್ಣೀರು ಸುಮ್ನೇನಾ ಅಂತಾ. ” ಬಾ ಇಲ್ಲಿ ಕೂತ್ಕೋ ಅಂತಾ ನನ್ನ ಕೂರ್ಸಿ, ನೋಡು, ನೀನು ನನ್ನನ್ನ ತುಂಬಾ ಪ್ರೀತಿಸ್ತಿಯಾ ಅಂತಾ ಗೊತ್ತು, ಅದನ್ನ ತೋರ್ಸೋಕೆ ನೀನು ನಂಗೆ ೨ ಲಕ್ಷ ಖರ್ಚು ಮಾಡಿ ನೆಕ್ಲೆಸ್ ತೆಕ್ಕೊಡ್ಬೇಕು ಅಂತ ಅಂದ್ಕೊಂಡಿಲ್ಲಾ ನಾನು. ನೀನು ಕೊಡ್ತೀನಿ ಅಂದೆ,ನಿನ್ನತ್ರ ದುಡ್ಡಿದ್ರೆ ಹಾಳು ಮಾಡ್ತೀಯಾ ಅಂತ ನಾನೂ ಆಯ್ತು ಅಂದಿದ್ದೆ. ನಾನೂ ದುಡೀತೀನಿ,ನೀನು ತುಂಬಾ ದುಡ್ಡು ದುಡೀತೀಯ. ಯಾವಾಗ ಬೇಕಾದ್ರು ನೆಕ್ಲೆಸ್ ತೊಗೋಬಹುದು. ಆ ೨ ಲಕ್ಷ ನಂಗೆ ಕೊಡು. ನನ್ನ ಫ್ರೆಂಡ್ ಒಬ್ಳು ಒಂದು ರೆಸಿಡೆನ್ಶಿಯಲ್ ಸ್ಕೂಲಲ್ಲಿ ಕೆಲ್ಸಾ ಮಾಡ್ತಾಳೆ , ಅದು ಎನ್.ಜಿ.ಓ ದವ್ರು ನಡ್ಸೋದು. ಒಳ್ಳೇ ಟೀಚಿಂಗಿದೆ. ೩ ಲಕ್ಷ ಕೊಟ್ರೆ ನಿನ್ನನ್ನ ಒಂದು ಅನಾಥ ಮಗುವಿನ  ಗಾರ್ಡಿಯನ್ ಮಾಡ್ತಾರೆ. ಅದು ಎಷ್ಟು ಓದುತ್ತೋ ಅಷ್ಟು ಓದುಸ್ತಾರೆ. ನಿನ್ನ ಕೈಲಾದ್ರೆ ಮತ್ತೆ ಸಹಾಯ ಮಾಡ್ಬಹುದು, ಇಲ್ಲಾಂದ್ರೆ ಅವ್ರೇನು ಕೇಳಲ್ಲಾ, ಅಂದ್ಳು. ಒಂದು ಸಲ ಅವ್ಳೇನಾ ನಾನು ಪ್ರೀತಿಸಿದ ಮುದ್ದು ಮೊಗದ ಮುಗ್ಧ ಹುಡುಗಿ ಅನ್ನಿಸ್ತು. ಅವ್ಳಲ್ಲಿ ನನ್ನ ಅಮ್ಮ ಕಾಣ್ತಾ ಇದ್ದ್ರು. ಮಾತಾಡದೆ ಅವ್ಳನ್ನ ತಬ್ಬಿಕೊಂಡೆ. ಮಾತಿನ ಅಗತ್ಯ ಅಲ್ಲಿರ್ಲಿಲ್ಲ. ಭಾವನೆಗಳೇ ಮಾತಾಗಿದ್ವು ಅಲ್ವಾ.

೧೨/೪/೨೦೧೫: ಈಗ ಅವ್ನು ಶಾಲೆಯಲ್ಲಿದಾನೆ. ನಾನು ಮದುವೆಯಾಗದೆ ತಂದೆಯಾಗಿದ್ದೇನೆ. ಅವಳು ತಾಯಿಯಾಗಿದ್ದಾಳೆ. ನಾವಿಬ್ಬರೂ ಒಬ್ಬರನ್ನೊಬ್ಬರು ನೆರಳಿನಂತೆ ಅರಿತಿದ್ದೇವೆ. ಅವನಿಗೆ ಇವತ್ತು ಐಸ್ಕ್ರೀಮ್ ತೆಕ್ಕೊಟ್ಟೆ. ಖುಷಿಯಲ್ಲಿ ತಿಂದ. ನಾವಿಬ್ರೂ ಒಂದು ಐಸ್ಕ್ರೀಮ್ ಹಂಚ್ಕೊಂಡು ತಿಂದ್ವಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!