ಕಥೆ

ಅಂತಃಕರಣ ಭಾಗ 3

ಅವರು ಸಟ್ಟನೆದ್ದು ಶರಾಬಿನ ಬಾಟಲಿಯನ್ನು ಬದಿಗಿಟ್ಟು ಹೆಂಡತಿಯನ್ನು ಕೂಗಿ ಕರೆದು ಅಕ್ಕ ಸತ್ತುದುದನ್ನು ಹೇಳಿದರು . ಅವರ ಹೆಂಡತಿಯು , ” ಅಯ್ಯೋ , ಮೊನ್ನೆ ತಮ್ಮನತ್ರಜಗಳ ಮಾಡಿಕೊಂಡು ಹೋಗಿದ್ದರಲ್ಲಪ್ಪ . ಅವರಿಗೇನಾಗಿತ್ತು …..? ” ಎಂದು ಬೊಬ್ಬೆ ಹೊಡೆದರು .ಅಜ್ಜನಿಗೂ , ಅಜ್ಜಿಗೂ ಅಷ್ಟಕ್ಕಷ್ಟೇ . ಆಗಾಗ ಏನಾದರೊಂದಕ್ಕೆ ಇಬ್ಬರಿಗೂಜಗಳವಾಗುತ್ತಿತ್ತು .ಅಜ್ಜಿಯ ಜಗಳವೇನಿದ್ದರೂ ತಾತ್ಕಾಲಿಕ . ನಾಲ್ಕು ದಿನಗಳ ನಂತರ ತಾನಾಗಿಯೇ ಅವರನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದಳು .

” ಶಾಲು ಮೇಲೆ ಬಾರೆ , ಅಲ್ಲೇ ನಿಂತೆಯಲ್ಲೇ ” ಅಜ್ಜಿ ಕರೆದರು . ” ಬೇಡ ಹೋಗೋಣ . ಅಲ್ಲಿ ಸುಶೀಲ ಒಬ್ಬಳೇ ರಾತ್ರಿಯಲ್ಲಾ ಹೆಣ ಕಾಯ್ಕೊಂಡು ಕೂತಿದ್ದಾಳೆ .” ” ಅವಳು ಅಲ್ಲಿಗೆಹೋಗಿದ್ದಾಳಾ ?” ” ನಿನ್ನೆ ಬೆಳಿಗ್ಗೆ ಅಮ್ಮ ಬಂದು ಕರಕೊಂಡು ಹೋಗಿದ್ಲು.” ” ಛೆ , ಒಬ್ಬಳೇ ಇದ್ದಾಳಾ ? ಎಷ್ಟು ಹೆದರಿಕೊಂಡಳೋ ಏನೋ ? ನಡೀರಿ ನಾವು ಬರ್ತೀವಿ . ” ಗಂಡಹೆಂಡತಿ ಬಾಗಿಲು ಎಳೆದುಕೊಂಡು ನಮ್ಮೊಂದಿಗೆ ಹೊರಟರು . ” ಗೋವಿಂದನ್ನ ಓದಿಸೋಕೆ ಕೈಯಲ್ಲಿದ್ದದ್ದು ಬಾಯಲ್ಲಿದ್ದದ್ದು ಕೊಟ್ಟಳು . ಬಡ್ಡಿ ಮಗ ದೊಡ್ಡ ಮನುಷ್ಯರ ಮನೆ ಹೆಣ್ಣು ತಂದುತಾಯಿಯನ್ನ ಸಾಕಾಲಿಲ್ಲ . ನಮ್ಮನ್ನೂ ಮರೆತುಬಿಟ್ಟ ….” ಅಜ್ಜ ತೊದಲುತ್ತಾ ಹೇಳಿದರು. ದೊಡ್ಡ ಮಾವನಿಗೆ ಕೆಲಸ ಸಿಕ್ಕ ಮೇಲೆ ತಾಯಿಯನ್ನು ಕರೆದುಕೊಂಡು ಹೋಗಿ ಸಾಕಬೇಕೆಂದುತಂದೆಯವರು ಅಮ್ಮನೂ ಕಿವಿಮಾತು ಹೇಳಿದ್ದರು . ತಾಯಿ ಅವರಿವರ ಮನೆಯಲ್ಲಿ ಇನ್ನೂ ಕೆಲಸ ಮಾಡಿಕೊಂಡು ಇರುವುದು ನೆಂಟರಿಷ್ಟರಿಂದ ಕೆಟ್ಟ ಮಾತು ಕೇಳುವಂತಾಗುವುದು ಎಂದುಹೇಳಿದರು . ಮಾವ ಒಪ್ಪಿಕೊಂಡನೇ ವಿನಃ ತಾಯಿಯನ್ನು ಕರೆದುಕೊಂಡು ಹೋಗಲಿಲ್ಲ . ಮಾವನಿಗೆ ಮದುವೆಯಾದ ಮೇಲೂ ಬಂಧುಗಳು , ಸ್ನೇಹಿತರು ಮತ್ತೆ ಅದೇ ಪ್ರಸ್ತಾಪವನ್ನು ಅವನಮುಂದಿಟ್ಟರು. ನಿರ್ವಾಹವಿಲ್ಲದೇ ಮಾವ ಒಪ್ಪಿಕೊಂಡನಾದರೂ ತಾನು ಕರೆದುಕೊಂಡು ಹೋಗಲಿಲ್ಲ . ತಮ್ಮನೊಂದಿಗೆ ತಾಯಿಯನ್ನು ಕಳುಹಿಸಿರಿ ಎಂದು ನಮ್ಮ ತಂದೆಗೆ ಕಾಗದ ಬರೆದ .

ತಂದೆಯವರು ನನ್ನನ್ನೂ ಅಜ್ಜಿಯೊಂದಿಗೆ ಕಳುಹಿಸಿದರು . ಅಜ್ಜಿ , ತನ್ನ ಆಸ್ತಿಯಾದ ಗುಡಿಸಲು , ಗೇರು ಮರ , ನುಗ್ಗೆ ಮರ ಬಿಟ್ಟು ಬರಲು ಇಷ್ಟ ಪಡದಿದ್ದರೂ ಕೊನೆಗೆ ಎಲ್ಲರಒತ್ತಾಯದಿಂದ ಹೊರಟಳು . ನಾವು ಮಾವನ ಶಿವಮೊಗ್ಗ ಮನೆಗೆ ಹೋದಾಗ ಮಧ್ಯಾಹ್ನ ಎರಡು ಗಂಟೆಯಾಗಿತ್ತು . ಮಾವನ ಹೆಂಡತಿ ಪ್ರೀತಿ ವಿಶ್ವಾಸದಿಂದ ಮಾತನಾಡಿ ಕುಡಿಯಲು ಕಾಫಿಕೊಟ್ಟಳು . ಅವಳು ಈಗ ಊಟಕ್ಕೆ ಹಾಕುತ್ತಾಳೆ , ಮತ್ತೊಂದು ಗಳಿಗೆಯಲ್ಲಿ ಊಟಕ್ಕೆ ಹಾಕುತ್ತಾಳೆಂದು ನಾವು ಕಾದೆವು , ಆದರೆ , ಅದರ ಸುದ್ದಿಯೇ ಇಲ್ಲ . ನಾನು ಹಸಿವೆಯಿಂದ ಕಂಗೆಟ್ಟಿದ್ದೆ. ಮಾವನ ಮನೆಗೆ ಬಸ್ಸಿನಲ್ಲಿ ಬಹಳ ದೂರ ಹೋಗುವುದೆಂದು ಸಂಭ್ರಮದಲ್ಲಿ ಬೆಳಿಗ್ಗೆ ಸರಿಯಾಗಿ ತಿಂಡಿ ತಿಂದಿರಲಿಲ್ಲ . ನನ್ನ ಕಷ್ಟವನ್ನ ಅರ್ಥ ಮಾಡಿಕೊಂಡ ಅಜ್ಜಿ ಸೊಸೆಗೆ ಕೇಳಿಯೇಬಿಟ್ಟಳು.

” ಸರೋಜ , ಅಡಿಗೆ ಮಾಡಲಿಲ್ಲವೇನೆ …? ಊಟದ ಸುದ್ದಿಯೇ ಇಲ್ಲವಲ್ಲ …” ” ನೀವು ಬರೋದು ಗೊತ್ತಿರಲಿಲ್ಲ .ಗೊತ್ತಿದ್ದರೆ ಅಡಿಗೆ ಮಾಡಿ ಇಡುತ್ತಿದ್ದೆ ….” ಸರೋಜಒಯ್ಯಾರದಿಂದ ಹೇಳಿದಳು . ” ಎಂಥಾ ಗೊತ್ತಿರಲಿಲ್ಲ ? ನನ್ನ ಅಳಿಯ ಕಾಗದ ಬರೀಲಿಲ್ಲವಾ ” ” ನನಗೆ ನಿಮ್ಮ ಮಗ ಹೇಳಿರಲಿಲ್ಲವಮ್ಮ .” ” ಅವನು ಹೇಳದಿದ್ದರೆ ಹೋಗಲಿ . ನಾವುಬಂದು ಎಷ್ಟೊತ್ತು ಆಯಿತು . ಹುಡುಗ ಹಸಿವಾಗಿ ಒದ್ದಾಡುತ್ತಿದ್ದಾನೆ . ಈಗಲಾದರೂ ಮಾಡಿ ಹಾಕಲಿಕ್ಕೆ ಏನು ತೊಂದರೆ ನಿನಗೆ ..? ” ” ಇಲ್ಲಿ ಕೆಲಸಕ್ಕೆ ಜನ ಇಲ್ಲಮ್ಮ ಬೇಕಾದಾಗ ಅಡಿಗೆಮಾಡಲಿಕ್ಕೆ .” ” ಏನೆಂದೆ ? ನನ್ನ ಮಗನಿಗೆ ತಿನ್ನಲಿಕ್ಕೆ ಗತಿ ಇಲ್ಲದಾಗ , ಓದೋಕೆ ಕಾಸು ಇಲ್ಲದಾಗ ನೀನು ಇದ್ದೆಯಾ …? ನಿನ್ನಪ್ಪ ಇದ್ದನಾ …? ? ಏನೇ ನೀನು ಮಾತಾಡೋದು ?” “ಹಾಗೆಲ್ಲ ಮಾತಾಡಬೇಡಿಯಮ್ಮ . ಅಷ್ಟೆಲ್ಲಾ ಇದ್ದವರು ನನ್ನನ್ನ ಯಾಕೆ ಮದುವೆಯಾದರು ನಿಮ್ಮ ಮಗ ..? ” ” ನೀನು ಇಂಥವಳು ಅಂತ ಗೊತ್ತಿರಲಿಲ್ಲ .” ಅತ್ತೆ ಸೊಸೆಗೆ ಮೊದಲ ದಿನವೇಸಮರ ನಡೆಯಿತು . ಅಜ್ಜಿ ಹುಚ್ಚೆದ್ದು ಕೂಗಿ ಸೊಸೆಯ ಅಪ್ಪನ ಆರ್ಥಿಕ ಸ್ಥಿತಿಯನ್ನು , ಮಗ ಮದುವೆಯಲ್ಲಿ ತನ್ನನ್ನು ಕರೆದುಕೊಂಡು ಹೋಗದೇ ಮಗಳ ಮನೆ ಕಾದುಕೊಂಡು ಇರುವುದಕ್ಕೆಬಿಟ್ಟು ಹೋದುದನ್ನು ಹೇಳಿ ಕೂಗಿ ಗಲಾಟೆ ಮಾಡಿದಳು .

ಅದುವರೆಗೂ ಸುಮ್ಮನಿದ್ದ ಚಿಕ್ಕ ಮಾವ ತಾಯಿಗೆ , ಸುಮ್ಮನೆ ಇರು . ಅಣ್ಣ ಅವರಿಗೆ ಹೇಳಿದ್ದರೆ ಅವರು ಅಡಿಗೆ ಮಾಡಿಡುತ್ತಿದ್ದರು . ನೀನು ಜಗಳಗಂಟಿ ” ಎಂದು ಅಜ್ಜಿಯ ಬಾಯಿಮುಚ್ಚಿಸಿದ . ಅತ್ತಿಗೆಯನ್ನ ಸಂತೃಪ್ತಿ ಗೊಳಿಸಲು ಅವನು ತಾಯಿಗೆ ಹೆದರಿಸಿದ್ದಷ್ಟೆ . ಮೊದಲ ಸುತ್ತಿನಲ್ಲಿ ಅಜ್ಜಿಗೆ ಜಯವಾಯಿತೆಂದೇ ಹೇಳಬೇಕು . ಅಜ್ಜಿಗೆ ಮಗನ ಮದುವೆಯಲ್ಲಿ ತನ್ನನ್ನುಕರೆದುಕೊಂಡು ಹೋಗಲಿಲ್ಲ ಎಂಬ ಕೊರಗಿತ್ತು . ಮದುವೆಯಲ್ಲಿ ಬೀಗರ ಕಡೆಯವರಿಗೆ ತಾಯಿ ಏನಾದರೂ ಮಾತನಾಡಿ ಗಲಾಟೆಯಾಗಬಹುದೇನೋ ಎಂದು ದೊಡ್ಡ ಮಾವ ತಾಯಿ ,ಮದುವೆಗೆ ಬರುವುದು ಬೇಡವೆಂದು ಅಕ್ಕ ಭಾವನಿಗೆ ಹೇಳಿದ್ದ . ಅಕ್ಕ ಭಾವ ಅವನ ಮಾತಿಗೆ ಒಪ್ಪಿಕೊಂಡಿದ್ದರು .

ಅಜ್ಜಿಗೆ ಇನ್ನೂ ಒಂದು ಕೊರಗಿತ್ತು . ದೊಡ್ಡ ಮಗ ಚಿಕ್ಕವನಿದ್ದಾಗ ಬುಡುಬುಡುಕೆ ದಾಸಯ್ಯನೊಬ್ಬ ಈ ಹುಡುಗನಿಗೆ ಉತ್ತಮ ಭವಿಷ್ಯವಿದೆ . ವಿದ್ಯಾವಂತನಾಗುತ್ತಾನೆ . ಕೈತುಂಬಾ ಸಂಬಳಸಿಗುವ ಅಧಿಕಾರ ಸಿಗುತ್ತದೆ . ಭಾರೀ ಮನೆ ಕಟ್ಟಿಸುತ್ತಾನೆ…” ಎಂದು ಶಾಸ್ತ್ರ ಹೇಳಿದ್ದ . ಅಜ್ಜಿಗೆ ಆಶ್ಚರ್ಯವೋ ಆಶ್ಚರ್ಯ .

ಬಡತನದಲ್ಲಿರುವ ತಾವು ಅವನನ್ನು ಓದಿಸಲಾಗುತ್ತದೆಯೇ ? ಅವನು ಅಷ್ಟೆಲ್ಲ ಸಾಧನೆ ಮಾಡುತ್ತಾನೆಂದು ಗೋಪಾಲ ಹೇಳಿದಂತಾದರೆ ಮಗನನ್ನು ಕರೆದುಕೊಂಡು ಬಂದು ಹರಕೆಒಪ್ಪಿಸುವುದಾಗಿ ಧರ್ಮಸ್ಥಳದ ದೇವರಿಗೆ ಹರಕೆ ಹೊತ್ತಿದ್ದಳು . ಗೋಪಾಲ ಹೇಳಿದ ಶಕುನವೇನೋ ನಿಜವಾಯಿತು . ಆದರೆ, ಮಗನನ್ನು ಕರೆದುಕೊಂಡು ಅಜ್ಜಿಗೆ ಹರಕೆ ತೀರಿಸಲುಧರ್ಮಸ್ಥಳಕ್ಕೆ ಹೋಗಲಾಗಲಿಲ್ಲ . ಮಾವ ಓದು ಮುಗಿಸಿ ಸರ್ಕಾರಿ ಕೆಲಸ ಸಿಕ್ಕ ಮೇಲೆ ಅಜ್ಜಿ , ಮಾವನಿಗೆ ಹರಕೆ ವಿಷಯ ಹೇಳಿದಾಗಲೆಲ್ಲಾ ಮಾವ ಈಗ ರಜೆ ಇಲ್ಲ . ಮುಂದೆ ನೋಡೋಣಎಂದು ಕಾಲ ದೂಡಿದ . ಮುಂದೊಂದು ದಿನ ಯಾರಿಗೂ ಗೊತ್ತಾಗದಂತೆ ಹೆಂಡತಿ ಮಕ್ಕಳನ್ನು ಅತ್ತೆಯನ್ನು ಕಟ್ಟಿಕೊಂಡು ಧರ್ಮಸ್ಥಳಕ್ಕೆ ಹೋಗಿ ಹರಕೆ ತೀರಿಸಿ ಬಂದ . ತನ್ನನ್ನು ಕರೆದುಕೊಂಡು ಹೋಗದಿದ್ದುದಕ್ಕೆ ಅಜ್ಜಿ ಸದಾ ಕಣ್ಣೀರು ಹಾಕುತ್ತಿದ್ದಳು .

ಸಂಜೆ ಆಫೀಸು ಮುಗಿಸಿಕೊಂಡು ಬಂದ ಮಾವ ತಾಯಿಯನ್ನು , ತಮ್ಮನನ್ನು ಮಾತನಾಡಿಸಲಿಲ್ಲ. ನನಗೆ ” ಯಾವಾಗ ಬಂದಿರಿ ? ಮಧ್ಯಾಹ್ನ ಎಲ್ಲಿ ಊಟ ಮಾಡಿದಿರಿ ? ” ಎಂದುಕೇಳಿದ . ನಾನು , ” ಮಧ್ಯಾಹ್ನ ಬಂದೆವು . ಇಲ್ಲಿ ಊಟ ಸಿಗುತ್ತೆ ಅಂತ ಬಂದೆವು . ಅತ್ತೆಯವರು ಊಟ ಹಾಕುತ್ತಾರೆ ಅಂತ ಕಾದೆವು . ಅವರು ಆ ಪ್ರಶ್ನೇನೆ ಎತ್ತಲಿಲ್ಲ …” ಎಂದೆ . ಅತ್ತೆಸೊಸೆಗೆ ನಡೆದ ಸಂಭಾಷಣೆಯನ್ನು ನಾನು ಹೇಳಲಿಲ್ಲ . ಅತ್ತೆ ಸೊಸೆಯರು ಆ ಪ್ರಶ್ನೆ ಎತ್ತಲಿಲ್ಲ . ಮಾವ ಹೆಂಡತಿಗೆ ” ಯಾಕೆ , ಅಡಿಗೆ ಮಾಡಿರಲಿಲ್ಲವೇ ? ” ಕೇಳಿದ . ” ನೀವೆಲ್ಲಿಹೇಳಿದ್ದೀರಿ ಅವರು ಬರ್ತಾರೆ ಅಂತ …?” ಎಂದು ಅತ್ತೆ ಕೇಳಿದಳು . ” ಯಾಕೆ , ನೀನು ಭಾವ ಬರೆದ ಕಾಗದವನ್ನು ಓದಿರಲಿಲ್ಲವಾ ?” ಕೇಳಿದ ಮಾವ . ಮಾವನ ಹೆಂಡತಿ ಮೌನವಾದಳು. ಅಲ್ಲಿಗೆ ಪ್ರಹಸನ ನಿಂತಿತು . ಹೆಚ್ಚೇನೂ ಗಲಾಟೆ ಆಗಲಿಲ್ಲ .

ರಾತ್ರಿ ದೊಡ್ಡ ಮಾವನಿಗೆ ಮೊದಲು ಊಟ ಬಡಿಸಲಾಯಿತು . ಆನಂತರ ಮಾವನ ಹೆಂಡತಿ ಊಟ ಮಾಡಿದಳು . ಅವಳದಾದ ಮೇಲೆ ಮಾವನ ಹೆಂಡತಿ ಗಂಡನಿಗೆ , ” ಅವರಿಗೆ ಊಟಮಾಡಲಿಕ್ಕೆ ಹೇಳಿ ” ಎಂದಳು . ಮಾವ ನಮಗೆ , ” ಹೋಗಿ ಊಟ ಮಾಡಿ ” ಎಂದ . ಮಾವನ ಮನೆಯ ವಿದ್ಯಮಾನ ನಮಗೆ ವಿಚಿತ್ರವಾಗಿ ಕಂಡಿತು . ಮಾವ ಓದುವ ದಿನಗಳಲ್ಲಿ ಅಣ್ಣತಮ್ಮಂದಿರನ್ನು ಹೊರಗೆ ಕೂರಿಸಿ ಎಂದೂ ನಾವು ಮೊದಲು ಊಟ ಮಾಡಿರಲಿಲ್ಲ . ಮಾವ ರಜೆಯಲ್ಲಿ ಮನೆಗೆ ಬಂದಾಗ ಮಧ್ಯಾಹ್ನ ನಾಲ್ಕು ಗಂಟೆಯಾಗುತ್ತಿತ್ತು . … ರಾತ್ರಿ ಹತ್ತುಗಂಟೆಯಾಗುತ್ತಿತ್ತು . ಅಡಿಗೆ ಮುಗಿದು ಹೋಗಿದ್ದರೂ ಅಮ್ಮ ಹೊಸದಾಗಿ ಅಡಿಗೆ ಮಾಡಿ ಅವನಿಗೆ ಬಡಿಸುತ್ತಿದ್ದಳು . ನಮಗೆ ಏಕೆ ಹೀಗಾಯಿತು …? ? ಎಂದು ನಾನು ಪ್ರಶ್ನೆ ಮಾಡಿಕೊಂಡೆ .

ಕಥೆ ಮುಂದುವರಿಯುವುದು ……….

Facebook ಕಾಮೆಂಟ್ಸ್

ಲೇಖಕರ ಕುರಿತು

Prabhakar Tamragouri

ಫ್ರೀಲಾನ್ಸ್ ಬರಹಗಾರರಾಗಿದ್ದು ಗೋಕರ್ಣ ನಿವಾಸಿಯಾಗಿದ್ದಾರೆ. ಈವರೆಗೆ 4 ಕಾದಂಬರಿ , 4 ಕಥಾ ಸಂಕಲನ ,2 ಕವನ ಸಂಕಲನ ಒಟ್ಟು 10 ಪುಸ್ತಕಗಳು ಪ್ರಕಟವಾಗಿವೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!