ಅಂಕಣ

ಇನ್ನಾದರೂ ಬರೆಯಬೇಕು ಖರೇ ಇತಿಹಾಸ

ಎರಡು ವಾರಗಳ ಅಂತರದಲ್ಲಿ, ನಮ್ಮ ದೇಶದ ಹೆಮ್ಮೆಯ ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ, ಗಡಿನಾಡು ಕಾಸರಗೋಡಲ್ಲಿ ಕನ್ನಡದ ನಂದಾದೀಪದಂತೆ ಬೆಳಗುತ್ತಿದ್ದ ಕವಿ ಕಯ್ಯಾರ ಕಿಞ್ಞಣ್ಣ ರೈ, ಆರೆಸ್ಸೆಸ್’ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಪ್ರಚಾರಕ ನ. ಕೃಷ್ಣಪ್ಪ ತೀರಿಕೊಂಡರು. ಗೂಗಲ್ಎಂಬ ಹೆಸರಾಂತ ಐಟಿ ದಿಗ್ಗಜ ಕಂಪೆನಿಗೆ ಭಾರತ ಮೂಲದ ಸುಂದರ್ ಪಿಚೈ ಆಯ್ಕೆಯಾದರು. ಒಂದೇ ಒಂದು ದಿನವೂ ಕಲಾಪ ನಡೆಯದೆ ಗಲಾಟೆ, ಗದ್ದಲ, ಕಿರುಚಾಟಗಳಲ್ಲೇ ನಮ್ಮ ಸಂಸತ್ತಿನ ಮುಂಗಾರು ಅಧಿವೇಶನದ ಹದಿನಾರು ದಿನಗಳು ಕಳೆದುಹೋದವು. ಭಾರತದ ಪ್ರಜಾಪ್ರಭುತ್ವ ವೈಭವವನ್ನು ನೋಡಲುಬಂದಿದ್ದ ಭೂತಾನ್ ದೇಶದ ಸಂಸದರು ಕನಸಲ್ಲೂ ಬೆಚ್ಚಿಬೀಳುವಷ್ಟು ಭಯಂಕರವಾದ ಗೊಂದಲಪುರವನ್ನು ನೋಡಿಕೊಂಡು ವಾಪಸಾದರು.  ಈ ಎಲ್ಲಾ ಗೊಂದಲಗಳು ಮುಗಿವಷ್ಟರಲ್ಲಿ ಮತ್ತೊಂದು ಸ್ವಾತಂತ್ರವೂ ಬಂದಿತ್ತು.

ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ ಬರುತ್ತದೆ. ತಪ್ಪದೆ, ಅದೇ ಆಗಸ್ಟ್ ಹದಿನೈದಕ್ಕೆ. ಪ್ರತಿವರ್ಷ, ತಪ್ಪದೆ ನಮ್ಮ ದೇಶದ ಪ್ರಧಾನಿಗಳು ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿ ದೇಶವನ್ನುದ್ಧೇಶಿಸಿ ಭಾಷಣ ಮಾಡುತ್ತಾರೆ. ದೇವರ ಮೈಯ ನೈರ್ಮಲ್ಯ ತೆಗೆದು ಅಭಿಷೇಕ ಮಾಡಿಸಿ ಹೊಸ ಹೂವು ಹಾಕಿ ಪೂಜೆ ಮಾಡಿಮಲಗಿಸಿದ ಹಾಗೆ, ಪ್ರತಿವರ್ಷದ ಆಗಸ್ಟ್ ತಿಂಗಳಲ್ಲೂ ನಾವು ದೇಶಭಕ್ತಿಯ ಭಾವಾವೇಶದಲ್ಲಿ ಮಿಂದೆದ್ದು ತಾಯಿಭಾರತಿಯನ್ನು ಕೊಂಡಾಡಿ ಉತ್ಸವದಲ್ಲಿ ಮೆರೆಸಿ ನಂತರ ಮರೆತುಬಿಡುತ್ತೇವೆ. ಮುಂಜಾನೆ ನಸುಕಿಗೆದ್ದು ಶಾಲೆಗೆ ಹೋದ ಹುಡುಗರು ಧ್ವಜವಂದನೆಯ ಬಳಿಕ ಲಾಡು ತಿಂದು ಮನೆಗೆ ಮರಳಿದರೆ ಅಂದಿನ, ಆವರ್ಷದ ಕೋಟಾ ಮುಗಿದಹಾಗೆ. ಮತ್ತೆ ಮುಂದಿನ ವರ್ಷದವರೆಗೆ ತಿರಂಗಕ್ಕೆ ಅಜ್ಞಾತವಾಸ.

ಪ್ರತಿ ವರ್ಷದ ಆಗಸ್ಟ್ ತಿಂಗಳಲ್ಲೂ ನನ್ನನ್ನು ಕಾಡುವ ಪ್ರಶ್ನೆ: ನಮಗೆ ನಿಜಕ್ಕೂ ಸ್ವಾತಂತ್ರ್ಯ ಬಂದಿದೆಯೆ? “ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ?” ಎಂದು ಕವಿಗಳು ಬಹಳ ಹಿಂದೆಯೇ ಕೇಳಿದರು. ಉತ್ತರ ಕಗ್ಗಂಟಾಗಿದೆ. ಕೇವಲ ಹದಿನೈದು ದಿನಗಳ ಹಿಂದೆ ಒಬ್ಬ ದೇಶದ್ರೋಹಿಯನ್ನು ಗಲ್ಲಿಗೆಹಾಕುವ ಪ್ರಕರಣದಲ್ಲಿ ನಡುರಾತ್ರಿ ಎರಡು ಗಂಟೆಗೆ ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯ ಕೆಲಸ ಮಾಡಿದ್ದು ಮತ್ತು ಆ ವ್ಯಕ್ತಿ ಸತ್ತ ಮೇಲೆ ಅವನ ಲಕ್ಷಾಂತರ “ಅಭಿಮಾನಿ”ಗಳು ಈ ದೇಶದಲ್ಲಿ ಕಂಬನಿ ಸುರಿಸಿದ್ದನ್ನು ಕಂಡಮೇಲಂತೂ ನಾವೊಂದು ಸ್ವತಂತ್ರದೇಶದಲ್ಲಿ ಬದುಕುತ್ತಿದ್ದೇವೆನ್ನುವುದೇ ಹುಸಿ ಎಂಬ ಭಾವನೆನನಗೆ ಬಲವಾಗಿದೆ. ಸ್ವಾತಂತ್ರ್ಯ ದಿನದ ವಿಶೇಷ ಭಾಷಣ ಕೊಡಲು ಪ್ರಧಾನಿಗಳು  ಈಗ ಗುಂಡುನಿರೋಧಕ ಕವಚದೊಳಗೆ ನಿಲ್ಲುವುದಿಲ್ಲವಾದರೂ ಅವರನ್ನು ಕಾಯಲು ನೂರಾರು ಜನ ಪೋಲೀಸರಿರುತ್ತಾರೆ. ದೇಶದ ತುಂಬ ಲಕ್ಷಲಕ್ಷ ಪೋಲೀಸರು, ಸೈನಿಕರು ಆ ಒಂದು ದಿನದ ಭದ್ರತೆಗಾಗಿ ವಾರಗಟ್ಟಲೆ ನಿದ್ದೆಬಿಟ್ಟುಕಾರ್ಯ ನಿರ್ವಹಿಸುತ್ತಾರೆ. ಅದೆಷ್ಟೋ ಸಿಸಿಟಿವಿಗಳು ಅಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡಂತೆ ಕಾವಲು ಕಾಯುತ್ತವೆ. ಒಟ್ಟಲ್ಲಿ ನಮ್ಮ ಸ್ವಾತಂತ್ರ್ಯವೇ ಭದ್ರತೆಗೆ (ಅಥವಾ ಭದ್ರತೆಯೇ ಸ್ವಾತಂತ್ರ್ಯಕ್ಕೆ?) ಬಹುದೊಡ್ಡ ಸವಾಲಾಗಿದೆ. ಇದು ವಿಪರ್ಯಾಸ!

ಭಾರತ ಕಳೆದ ಏಳು ದಶಕಗಳಲ್ಲಿ ಹಲವು ಸಾಧನೆಗಳನ್ನು ಮಾಡಿದೆ; ಸಂಶಯವೇ ಇಲ್ಲ. ಆದರೆ, ಅದಕ್ಕೆ ಮಗ್ಗುಲ ಮುಳ್ಳಾಗಿ ಇಂದಿಗೂ ಚುಚ್ಚುತ್ತಿರುವುದು ಭಯೋತ್ಪಾದನೆ ಮತ್ತು ಅದಕ್ಕೆ ಕುಮ್ಮಕ್ಕು ಕೊಡುತ್ತಿರುವ ಪಾಕಿಸ್ತಾನ. ಒಡಹುಟ್ಟಿದ ಮಕ್ಕಳಲ್ಲಿ ಕಾಲ ಸರಿಯುತ್ತ ಹೋದಂತೆ ಹಗೆತನ ಹುಟ್ಟುವುದು ಅಸಹಜವಲ್ಲ.ಆದರೆ, ಒಟ್ಟೊಟ್ಟಿಗೆ ಹುಟ್ಟಿದ ಭಾರತ ಮತ್ತು ಪಾಕಿಸ್ತಾನಗಳಿಗೆ ಮಾತ್ರ ಅದೇಕೋ ಮೊದಲ ದಿನದಿಂದಲೂ ಎಣ್ಣೆ-ಸೀಗೇಕಾಯಿ, ಹುಲಿ-ಹುಲ್ಲೆಯ ಸಂಬಂಧ. ಇದಕ್ಕೆ ಕಾರಣವಾದದ್ದು ಸ್ವಾತಂತ್ರ್ಯ ಪಡೆದುಕೊಳ್ಳುವ ಸಮಯದಲ್ಲಿ ನಮ್ಮವರು ನಡೆಸಿದ ಕೆಲ ರಾಜಕೀಯ ದೊಂಬರಾಟಗಳು. ಉದಾಹರಣೆಗೆ ನೋಡಿ, ಇಡೀಸ್ವಾತಂತ್ರ್ಯಹೋರಾಟದ ಕತೆಯಲ್ಲಿ ಮಹಮ್ಮದ್ ಆಲಿ ಜಿನ್ನಾ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಅಸಲಿಗೆ ಆ ವ್ಯಕ್ತಿ ಸ್ವಾತಂತ್ರ್ಯಹೋರಾಟಗಾರನೇ ಅಲ್ಲ. ಬಿಳಿಯರ ವಿರುದ್ಧ ಹೋರಾಡುತ್ತಿದ್ದ ಜನರಲ್ಲಿ ಒಡಕು ಮೂಡಿಸಿ, ಜಾತಿಮತಗಳ ಆಧಾರದಲ್ಲಿ ಜನಸಂಖ್ಯೆಯನ್ನು ಧ್ರುವೀಕರಣ ಮಾಡಲು ಯತ್ನಿಸಿದ ಮೊದಲ ಗುಳ್ಳೆನರಿಜಿನ್ನಾ. ಈ ಮತವೈಷಮ್ಯ ಹುಟ್ಟಿಬೆಳೆಯಲು ಗಾಂಧೀಜಿಯ ಪಾಲೂ ಒಂದಷ್ಟು ಇದೆ ಎನ್ನುವುದನ್ನು ನಿರ್ವ್ಯಾಜ್ಯವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ದೇಶಭ್ರಷ್ಟನಾದ ಅರೇಬಿಯದ ದೊರೆಯನ್ನು ಮತ್ತೆ ಪಟ್ಟಕ್ಕೆ ತರಬೇಕೆಂದು ಅರಬಸ್ಥಾನದವರು ನಡೆಸುತ್ತಿದ್ದ ಒಂದು ಪುಟ್ಟ ಚಳವಳಿಯನ್ನು ನಮ್ಮ ದೇಶದಸ್ವಾತಂತ್ರ್ಯಹೋರಾಟಕ್ಕೆ ತಳಕು ಹಾಕಿ, ಇಲ್ಲಿನ ಹೋರಾಟಗಾರರೂ ತಮ್ಮ ಜಾತಿಮತ ಧರ್ಮಗಳಿಗೆ ತಕ್ಕಂತೆ ವಿವಿಧ ಗುಂಪುಗಳನ್ನು ಕಟ್ಟಿಕೊಳ್ಳಲು ಕಾರಣವಾದದ್ದು ಗಾಂಧೀಜಿ ಮತ್ತು ಅವರು ಬೆಂಬಲಿಸಿದ ಖಿಲಾಫತ್ ಚಳವಳಿ. ಅಲ್ಲಿ ಹೊತ್ತಿಕೊಂಡ ಕಿಡಿ ಬೆಳೆಯುತ್ತಾಹೋಯಿತು. ಜಿನ್ನಾ ಕಾಲದಲ್ಲಿ ಪ್ರವರ್ಧಮಾನಕ್ಕೆಬಂತು. ಬ್ರಿಟಿಷರನ್ನು ಓಡಿಸುವುದಕ್ಕಾಗಿ ಹೋರಾಡುತ್ತಿದ್ದವರೆಲ್ಲ ಕೊನೆಗೆ ತಂತಮ್ಮ ಧರ್ಮಗಳಿಗಾಗಿ ಬಡಿದಾಡುವ ಪರಿಸ್ಥಿತಿ ಹುಟ್ಟಿತು. ಬೆಂಕಿಬಿದ್ದ ಮನೆಯಲ್ಲಿ ಚಳಿ ಕಾಯಿಸಿಕೊಳ್ಳಲು ಹವಣಿಸುತ್ತಿದ್ದ ಪರಂಗಿಗಳು ಇದರ ಲಾಭ ಪಡೆದರು. ದೇಶವನ್ನು ಒಡೆಯುವ ಪ್ರಸ್ತಾಪ ಮುಂದಿಟ್ಟರು. ಅದಕ್ಕೂ ಸ್ವಾತಂತ್ರ್ಯಕ್ಕೂತಳಕುಹಾಕಿದರು. ಹೇಗಾದರೂ ಮಾಡಿ ಅಧಿಕಾರ ಅನುಭವಿಸಬೇಕೆಂದು ಹಪಹಪಿಸುತ್ತಿದ್ದ ಒಬ್ಬ ಜಿನ್ನರನ್ನು ತಡೆಯಲು ನಮ್ಮ ದೇಶದ ನಾಯಕರಿಗೆ ಆಗಲಿಲ್ಲ! ಗಂಟೆಗಟ್ಟಲೆ ಹಾರಾಡಿದ ವಿಮಾನ ಇನ್ನೇನು ನಿಲ್ದಾಣದಲ್ಲಿ ಇಳಿಯಬೇಕೆನ್ನುವಾಗ ರನ್’ವೇನಲ್ಲಿ ಜಾರಿ ಅಗ್ನಿಗಾಹುತಿಯಾದ ಹಾಗೆ, ನಮ್ಮ ಅಷ್ಟೊಂದುವರ್ಷಗಳ ಸ್ವಾತಂತ್ರ್ಯಸಮರ ಉತ್ತುಂಗಕ್ಷಣದಲ್ಲಿ ತನ್ನ ಘನತೆ, ಮರ್ಯಾದೆ ಕಳೆದುಕೊಂಡಿತು. ಜಿನ್ನಾ ಎಂಬ ಒಬ್ಬ ಕ್ಷುದ್ರಹುಳುವಿನ ಮುಂದೆ ನಮ್ಮ ಮಹಾಮಹಿಮರು ಶರಣು ಹೊಡೆಯುವಂತಾಯಿತು. ಆಗ ನಡೆದುಹೋದ ತಪ್ಪಿನ ದಂಡವನ್ನು ಈಗಲೂ ಕಟ್ಟುತ್ತಿದ್ದೇವೆ.

ಭಾರತದ ಸ್ವಾತಂತ್ರ್ಯಕ್ಕೆ ದೊಡ್ಡ ಕೊಡುಗೆ ಕೊಟ್ಟದ್ದು ಗಾಂಧಿಯ ಅಹಿಂಸೆ, ಅಸಹಕಾರ, ಸತ್ಯಾಗ್ರಹಗಳ ಮಾರ್ಗ ಎಂಬ ನಂಬಿಕೆ ಇದೆ. ನಾವು ಓದಿರುವ ಪಠ್ಯಪುಸ್ತಕಗಳಲ್ಲೂ ಅದಕ್ಕೆ ಧಾರಾಳ ಸಮರ್ಥನೆಗಳು ಸಿಗುತ್ತವೆ. ಸ್ವಾತಂತ್ರ್ಯಕ್ಕಾಗಿ ಗಾಂಧಿ ಹೋರಾಡಿದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅವರಹೋರಾಟದ ಜೊತೆಜೊತೆಗೆ ಬೇರೆ ದಾರಿಗಳಿಂದ ಬ್ರಿಟಿಷರನ್ನು ಬಗ್ಗುಬಡಿಯಲು ಯತ್ನಿಸಿದ ಉಳಿದ ಕ್ರಾಂತಿಕಾರಿಗಳ ಪ್ರಯತ್ನವೇನೂ ಸಣ್ಣದಲ್ಲ. ಖಡ್ಗವನ್ನು ಖಡ್ಗದಿಂದಲೆ ಎದುರಿಸಬೇಕು ಎಂದು ಹೇಳಿದ ಸುಭಾಸ್ ಚಂದ್ರ ಬೋಸ್ ಸಿದ್ಧಾಂತಕ್ಕೂ ಗಾಂಧಿಯ ಅಹಿಂಸೆಯ ಮಾರ್ಗದಷ್ಟೇ ಬೆಲೆ ಇದೆ ಎನ್ನುವುದನ್ನುಮರೆಯುವಂತಿಲ್ಲ. ತಮಾಷೆಯ ವಿಷಯವೆಂದರೆ, ನಮ್ಮ ದೇಶದ ಹೋರಾಟಕ್ಕೆ ಇಲ್ಲಿನ ದೇಶಭಕ್ತರು ಮಾತ್ರವಲ್ಲ; ದೂರದ ಜರ್ಮನಿಯ ಹಿಟ್ಲರ್ ಕೂಡ ಸಹಾಯ ಮಾಡಿದ! ಹೇಗೆಂದರೆ, 1945ರಲ್ಲಿ ಎರಡನೆ ಮಹಾಯುದ್ಧ ಮುಗಿಯುವ ಹೊತ್ತಿಗೆ ಯುರೋಪಿನ ದೇಶಗಳು ಜರ್ಜರಿತವಾಗಿದ್ದವು. ಮುಖ್ಯವಾಗಿ ಹಿಟ್ಲರನನಾಝಿ ಪಡೆ ಇಂಗ್ಲೆಂಡ್ ಮತ್ತು ಫ್ರಾನ್ಸ್’ಗಳನ್ನು ಕಾಡಿದ ಬಗೆ ಇದೆಯಲ್ಲ; ಅಸದೃಶ! ಎರಡೂ ದೇಶಗಳು ಯುದ್ಧೋನ್ಮಾದ ಇಳಿದು ಬಸವಳಿದು ನೆಲಕಚ್ಚಿದ್ದವು. ಇಂಗ್ಲೆಂಡ್ ಆರ್ಥಿಕವಾಗಿ ದಿವಾಳಿಯಾಗಿತ್ತು. ಯುದ್ಧದಲ್ಲಿ ಮಡಿದವರ ಪೈಕಿ ನಾಲ್ಕನೇ ಒಂದರಷ್ಟು ಜನ ಇಂಗ್ಲೀಷರು ಅಥವಾ ಅವರನ್ನು ಬೆಂಬಲಿಸಿಹೋರಾಡಿದ್ದ ವಸಾಹತು ದೇಶಗಳ ಸೈನಿಕರು. ಈ ನಷ್ಟವನ್ನು ಅರಗಿಸಿಕೊಳ್ಳಲಾರದಂಥ ಸ್ಥಿತಿಯಲ್ಲಿದ್ದ ಇಂಗ್ಲೆಂಡಿಗೆ ತನ್ನ ವಸಾಹತುಗಳನ್ನು ಬಿಟ್ಟುಕೊಡುವುದು ಮತ್ತು ಅಷ್ಟರಮಟ್ಟಿಗಾದರೂ ಸಾಲಬಾಧೆಯಿಂದ ತಪ್ಪಿಸಿಕೊಳ್ಳುವುದು ಅನಿವಾರ್ಯವಾಗಿತ್ತು. 1945ರಲ್ಲಿ ಅಧಿಕಾರಕ್ಕೆ ಬಂದ ಲೇಬರ್ ಪಕ್ಷ ಕೂಡ ಬ್ರಿಟಿಷ್ಅಧಿಪತ್ಯದಲ್ಲಿರುವ ದೇಶಗಳನ್ನು ಸ್ವತಂತ್ರಗೊಳಿಸುವ ಮಾತಾಡಿತ್ತು. ಇಂಗ್ಲೆಂಡ್ ಮತ್ತು ಫ್ರಾನ್ಸ್ – ಎರಡೂ ದೇಶಗಳು ಮುಂದಿನ ಏಳೆಂಟು ವರ್ಷಗಳಲ್ಲಿ ತಮ್ಮ ಬಹುಪಾಲು ವಸಾಹತು ಪ್ರದೇಶಗಳನ್ನು ಬಿಟ್ಟುಕೊಟ್ಟವು. ಇಂಗ್ಲೆಂಡಿನ ಕೈಕೆಳಗಿದ್ದ ಜೋರ್ಡಾನ್ 1946ರಲ್ಲಿ, ಪ್ಯಾಲೆಸ್ಟೈನ್ 1947ರಲ್ಲಿ, ಶ್ರೀಲಂಕ ಮತ್ತುಮ್ಯಾನ್ಮಾರ್ 1948ರಲ್ಲಿ, ಈಜಿಪ್ಟ್ 1952ರಲ್ಲಿ ಮತ್ತು ಮಲೇಶ್ಯ 1957ರಲ್ಲಿ ಸ್ವಾತಂತ್ರ್ಯ ಪಡೆದವು. ಫ್ರೆಂಚ್ ಆಡಳಿತವಿದ್ದ ಲಾವೋಸ್ 1949ರಲ್ಲಿ, ಕಾಂಬೋಡಿಯ 1953ರಲ್ಲಿ, ವಿಯೆಟ್ನಾಮ್ 1954ರಲ್ಲಿ ಸ್ವತಂತ್ರವಾದವು. ಇವಿಷ್ಟು ದೇಶಗಳು ಅಹಿಂಸಾಮಾರ್ಗವನ್ನು ಹಿಡಿಯದಿದ್ದರೂ ಸ್ವಾತಂತ್ರ್ಯ ಪಡೆದವು ಎನ್ನುವುದುವಿಶೇಷ!

ಭಾರತದಲ್ಲಿ ಬ್ರಿಟಿಷರ ದರ್ಪ, ದಬ್ಬಾಳಿಕೆಗೆ ಇನ್ನೊಂದು ದೊಡ್ಡ ಆಘಾತ ನೀಡಿದ್ದು, ಯಾವ ಇತಿಹಾಸ ಪುಸ್ತಕದಲ್ಲೂ ದಾಖಲಾಗದೆ ಹೋದ “ರಾಯಲ್ ಇಂಡಿಯನ್ ನೇವಿ”ಯ ಭಾರತೀಯ ನಾವಿಕರು. ಮೊದಲಿಂದಲೂ ತಮ್ಮ ಮೇಲಿನ ದೌರ್ಜನ್ಯಕ್ಕಾಗಿ ಬೇಸತ್ತಿದ್ದ ರಾಯಲ್ ನೇವಿಯ ಭಾರತೀಯರು ಬಿಳಿಯರ ಮೇಲೆಮುಗಿಬೀಳಲು ಸುಸಂದರ್ಭಕ್ಕಾಗಿ ಕಾಯುತ್ತಿದ್ದರು. 1946ರ ಫೆಬ್ರವರಿ 18ರಂದು ಮುಂಬಯಿ ಬಂದರಿನಲ್ಲಿ ಇದ್ದಕ್ಕಿದ್ದಂತೆ ತಮ್ಮ ಮುಷ್ಕರ ಶುರುಮಾಡಿಬಿಟ್ಟರು. ನಾವಿಕರ ಪ್ರತಿಭಟನೆ ಎಷ್ಟು ವ್ಯವಸ್ಥಿತವಾಗಿತ್ತೆಂದರೆ ಮುಂದಿನ ಒಂದೆರಡು ವಾರಗಳಲ್ಲೇ ಆ ಸುದ್ದಿ ಹರಡಿ ಕರಾಚಿಯಿಂದ ಕಲಕತ್ತಾವರೆಗಿನ ಎಲ್ಲಬಂದರುಗಳೂ ಸ್ತಬ್ಧವಾದವು! ಕರಾವಳಿಗುಂಟ ಹರಡಿದ್ದ ಸುಮಾರು ಮೂವತ್ತು ದೊಡ್ಡ ಬಂದರುಗಳಲ್ಲಿ ಕೆಲಸ ಮಾಡುತ್ತಿದ್ದ 20,000 ನಾವಿಕರು ಸ್ವಾತಂತ್ರ್ಯಹೋರಾಟಕ್ಕೆ ಬೆಂಬಲ ಘೋಷಿಸಿ ತಮ್ಮ ಕೆಲಸವನ್ನು ಖೈದುಮಾಡಿ ಕೂತರು. ನೀರ ಮೇಲೆ ನಡೆದ ಯುದ್ಧದಲ್ಲಿ 78 ಹಡಗುಗಳು ಭಾಗವಹಿಸಿದವು. ಇವರನ್ನುಬಗ್ಗುಬಡಿಯಲು ಬ್ರಿಟಿಷ್ ರಾಯಲ್ ನೇವಿಯ ಸೇನಾದಳ ಇಂಗ್ಲೆಂಡಿನಿಂದ ಬರಬೇಕಾಯಿತು. ಯುದ್ಧದಲ್ಲಿ 7 ಜನ ತೀರಿಕೊಂಡರು. ಆದರೆ, ಮುಂಬಯಿಯಲ್ಲಿ ಮಾತ್ರ ಈ ಗಲಾಟೆ ತೀವ್ರ ಸ್ವರೂಪ ಪಡೆದು 200 ಜನ ಬಲಿಯಾದರು. ಕೊನೆಗೆ ನಾವಿಕರ ಯುದ್ಧವನ್ನು ನಿಲ್ಲಿಸಲು ಸರ್ದಾರ್ ಪಟೇಲರು ಮಧ್ಯಪ್ರವೇಶಿಸಿಸಂಧಾನ ನಡೆಸಬೇಕಾಯಿತು. ಎರಡನೇ ಮಹಾಯುದ್ಧದಿಂದ ಹೈರಾಣಾಗಿದ್ದ ಬ್ರಿಟಿಷರು, ಭಾರತೀಯ ಸೈನಿಕರು ದಾಳಿ ನಿಲ್ಲಿಸಿದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟದ್ದು ಸುಳ್ಳಲ್ಲ. ತಮ್ಮ ಬಲ ಕುಂದಿದೆ; ದೇಶಭಕ್ತರನ್ನು ಎದುರು ಹಾಕಿಕೊಂಡು ಆಳ್ವಿಕೆ ಮಾಡುವುದು ಸುಲಭವಲ್ಲ ಎಂಬ ಸ್ಪಷ್ಟಸಂದೇಶ ಇದರಿಂದ ಅವರಿಗೆಹೋಯಿತು.

1947ರ ಮಾರ್ಚ್’ನಲ್ಲಿ ಭಾರತಕ್ಕೆ ಬಂದಿಳಿದ ಹೊಸ ವೈಸರಾಯ್ ಮೌಂಟ್ ಬ್ಯಾಟನ್’ಗಿದ್ದ ಮುಖ್ಯ ಜವಾಬ್ದಾರಿ ಭಾರತದಲ್ಲಿ ಅಧಿಕಾರದ ಹಸ್ತಾಂತರ ಸುಲಭವಾಗುವಂತೆ ನೋಡಿಕೊಳ್ಳುವುದು. ಅಂದರೆ ಆ ಕಾಲಕ್ಕಾಗಲೇ ಬ್ರಿಟಿಷರು ತಮ್ಮ ಗಂಟುಮೂಟೆ ಕಟ್ಟಿ ಹೊರಟಾಗಿತ್ತು ಎನ್ನುವುದು ಸ್ಪಷ್ಟ. ಮೊದಲಿಗೆ ಬ್ರಿಟಿಷರು1948ರ ಜೂನ್ ಹೊತ್ತಿಗೆ ಭಾರತದಿಂದ ಪೂರ್ತಿಯಾಗಿ ನಿರ್ಗಮಿಸಿ ಅಧಿಕಾರವನ್ನು ಬಿಟ್ಟುಕೊಡುವುದೆಂದು ತೀರ್ಮಾನವಾಗಿತ್ತು. ಆದರೆ, ಅಷ್ಟು ದೂರದವರೆಗೆ ಕಾಯಲು ಸರ್ವಥಾ ಸಿದ್ಧವಿಲ್ಲದಿದ್ದ ಜಿನ್ನಾ ದಿನಕ್ಕೊಂದು ವರಾತ ಶುರುಮಾಡಿದರು. ಅಧಿಕಾರ ಹಸ್ತಾಂತರ ತಡವಾದರೆ ದೇಶದಲ್ಲಿ ರಕ್ತಪಾತವಾಗುತ್ತದೆಂದುಹೆದರಿಸಿದರು. ಕೊನೆಗೆ ಅವರ ರಗಳೆಗಳಿಗೆ ಬೇಸತ್ತು ಸ್ವಾತಂತ್ರ್ಯದಿನವನ್ನು ಒಂದು ವರ್ಷದಷ್ಟು ಹಿಂದಕ್ಕೆ ಹಾಕಬೇಕಾಯಿತು. 1947ರ ಆಗಸ್ಟ್ ಹದಿನೈದರಂದೇ ಬ್ರಿಟಿಷರು ಭಾರತವನ್ನು ಮುಕ್ತಗೊಳಿಸುವುದೆಂದು ಮುಹೂರ್ತ ಫಿಕ್ಸ್ ಆಯಿತು. ಈ ಘೋಷಣೆ ಹೊರಬಿದ್ದದ್ದು ಜೂನ್ 3ರಂದು. ಅಲ್ಲಿಂದ ಮುಂದೆಭರ್ತಿಯಾಗಿ ಎರಡೂವರೆ ತಿಂಗಳುಗಳೂ ಇರಲಿಲ್ಲ. ದೇಶವನ್ನು ಇಬ್ಭಾಗ ಮಾಡುವುದಾದರೆ ಹೇಗೆ? ಯಾವ ಆಧಾರದಲ್ಲಿ? ಯಾರು ಮಾಡಬೇಕು – ಇತ್ಯಾದಿ ಹಲವು ಗೊಂದಲಗಳಿದ್ದವು. ಮೇಲಾಗಿ ಇದು ದೇಶದ ಕೋಟ್ಯಂತರ ಜನರ ಬದುಕಿನ ಪ್ರಶ್ನೆ. ಎರಡು ತಿಂಗಳಲ್ಲಿ ಜನ ತಮ್ಮ ಮನೆಮಠ ಬಿಟ್ಟು ನೂರಾರುಮೈಲಿ ದೂರದ ಗುರುತುಪರಿಚಯ ಇಲ್ಲದ ಜಾಗದಲ್ಲಿ ಹೊಸಬದುಕು ಕಟ್ಟಿಕೊಳ್ಳಬೇಕೆಂದರೆ ಸಹಿಸುವುದು ಹೇಗೆ? ಯೋಚಿಸುವಷ್ಟೂ ಪುರುಸೊತ್ತಿರಲಿಲ್ಲ. ಆಗಸ್ಟ್ ಹದಿನೈದರಂದು ಎಡೆಬಿಡದೆ ಓಡಾಡಿದ ರೈಲುಗಳಲ್ಲಿ ಅತ್ತಲಿಂದ ಒಂದಷ್ಟು ಲಕ್ಷ ಇತ್ತ ಬಂದು ಬಿದ್ದರು. ಇತ್ತಲಿನ ಒಂದಷ್ಟು ಲಕ್ಷ ಜನ ಅತ್ತ ಹೋದರು.ಊಹಿಸಿದ್ದಂತೆಯೇ ಇದು ಮತವೈಷಮ್ಯಕ್ಕೆ ಕಾರಣವಾಯಿತು. ಅದುವರೆಗೆ ಅರೆಹೊಟ್ಟೆಯಲ್ಲಿ ಆಡುತ್ತಿದ್ದ ಬೆಂಕಿಯ ಕಿಡಿಗೆ ಭರಪೂರ ಪೆಟ್ರೋಲ್ ಸುರಿದಂತಾಯಿತು. ಕಂಡುಕೇಳರಿಯದ ಹತ್ಯಾಕಾಂಡಗಳಾದವು. ಬ್ರಿಟಿಷರು ಬಯಸಿದ್ದೂ ಇದನ್ನೇ ಎಂದು ಕೆಲವು ದಾಖಲೆಗಳು ಹೇಳುತ್ತವೆ.

ನಮ್ಮ ದೇಶ ನಡುರಾತ್ರಿ ಸ್ವಾತಂತ್ರ್ಯ ಪಡೆದದ್ದು ಯಾಕೆ ಎಂಬ ಬಗ್ಗೆ ಹಲವರಿಗೆ ಕುತೂಹಲ ಇದೆ. ಸ್ವತಂತ್ರಭಾರತದ ಪ್ರಧಾನಿಯಾಗಿ ನೆಹರೂ ಮಾಡಿದ ಮೊದಲ ಭಾಷಣದಲ್ಲಿ “ಇಡೀ ವಿಶ್ವ ಮಲಗಿ ನಿದ್ರಿಸುತ್ತಿರುವಾಗ ನಾವು ಸ್ವಾತಂತ್ರ್ಯದ ಸುಖ ಅನುಭವಿಸುತ್ತಿದ್ದೇವೆ” ಎಂಬ ಮಾತು ಬಂದಿದೆ. ಹೌದು, ನಡುರಾತ್ರಿಯಾಕೆ? ನಿಗದಿಪಡಿಸಿದ ದಿನಾಂಕ ಆಗಸ್ಟ್ 15 ಎಂದು ವೈಸರಾಯ್ ಮೌಂಟ್ ಬ್ಯಾಟನ್ ಹೇಳಿದ್ದು ಪತ್ರಿಕೆಗಳಲ್ಲಿ ಬಂತು. ಅವನು ಆ ದಿನವನ್ನೇ ಆಯ್ದುಕೊಳ್ಳಲು ಒಂದು ಮುಖ್ಯ ಕಾರಣ ಇತ್ತು. ಮೌಂಟ್ ಬ್ಯಾಟನ್ ಮೂಲತಃ ನೌಕಾದಳದ ಅಧಿಕಾರಿ. ಎರಡನೇ ಮಹಾಯುದ್ಧದಲ್ಲಿ ಸೆಣಸಿದವನು. ಜಪಾನ್ ಸೇನೆಯನ್ನುಸಿಂಗಪುರದಲ್ಲಿ ಅಡ್ಡಗಟ್ಟಿ ಹಿಡಿದು ಅವರಿಂದ ವಿಜಯಪತ್ರ ಬರೆಸಿಕೊಂಡು ವಾಪಸು ಓಡಿಸಿದವನು. 1945ರಲ್ಲಿ ಹಿರೊಷಿಮ, ನಾಗಾಸಕಿಗಳ ಮೇಲೆ ಬಾಂಬ್ ಬಿದ್ದು ಜಪಾನ್ ದೇಶವೇ ಛಿದ್ರವಾಗಿ ಹೋದಮೇಲೆ, ಅದು ಮಿತ್ರಪಕ್ಷಗಳಿಗೆ ಶರಣಾದದ್ದು ಆ ವರ್ಷದ ಆಗಸ್ಟ್ 15ರಂದು. ಹಾಗಾಗಿ, ಜಪಾನೀಯರ ಜೊತೆದೀರ್ಘಹೋರಾಟ ನಡೆಸಿದ್ದ ಮೌಂಟ್ ಬ್ಯಾಟನ್, ಭಾರತವನ್ನು ಸ್ವತಂತ್ರಗೊಳಿಸುವ ದಿನವನ್ನಾಗಿಯೂ ಅದನ್ನೇ ಆರಿಸಿಕೊಂಡ. ಅಲ್ಲದೆ, ಆತ ರಾಯಲ್ ನೇವಿಯ ಮುಖ್ಯಸ್ಥನಾಗಿ ಆಯ್ಕೆಯಾಗಿದ್ದು ಕೂಡ ಆಗಸ್ಟ್ ಹದಿನೈದರಂದೇ. ಹಾಗಾಗಿ, ಅದು ತನಗೆ ಬಹಳ ಅದೃಷ್ಟವಂತ ದಿನ ಎನ್ನುವುದು ಬ್ಯಾಟನ್ಲೆಕ್ಕಾಚಾರವಾಗಿತ್ತು. ಆಗಸ್ಟ್ 15ರಂದು ಜಪಾನೀಯರು ತಮ್ಮ ಶರಣಾಗತಿಯ ನೆನಪಲ್ಲಿ ಕುದಿಯುವಾಗ ಭಾರತೀಯರು ಸ್ವಾತಂತ್ರ್ಯದ ಸಂಭ್ರಮವನ್ನು ಆಚರಿಸಲಿ ಎಂಬ ಲೆಕ್ಕಾಚಾರವೂ ಇದ್ದಿರಬಹುದು! ಈ ರೀತಿಯಾದರೂ ಭಾರತವನ್ನು ಜಪಾನೀಯರಿಂದ ದೂರ ಇಡಬೇಕು; ಅವರಿಬ್ಬರ ನಡುವೆ ಮುಂದೆಂದೂಮೈತ್ರಿ ಏರ್ಪಡದಂತೆ ಮಾಡಬೇಕು ಎಂಬ ದೂರಾಲೋಚನೆಯಿಂದ, ಬ್ಯಾಟನ್ ಅದೇ ದಿನವನ್ನು ಹುಡುಕಿತೆಗೆದಿರುವುದು ಸಾಧ್ಯವಿದೆ. ಸುಭಾಸ್ ಚಂದ್ರ ಬೋಸ್ ಜಪಾನಿನೊಡನೆ ಸಖ್ಯ ಮಾಡಿಕೊಂಡಾಗಿನಿಂದ ಬ್ರಿಟಿಷರಿಗೆ ಅವರ ಮೇಲೊಂದು ಕಣ್ಣು ಇದ್ದೇಇತ್ತಲ್ಲ! ಸರಿ, ಅವನೇನೋ ದಿನ ಗೊತ್ತುಪಡಿಸಿದ್ದಾಯಿತು;ಆದರೆ ನಮ್ಮ ದೇಶದ ಜ್ಯೋತಿಷಿಗಳು ಕೇಳಬೇಕಲ್ಲ! ಆಗಸ್ಟ್ ಹದಿನೈದು ಅಮಂಗಳ, ಎಷ್ಟು ಮಾತ್ರಕ್ಕೂ ಅಂದು ಯಾವ ಪವಿತ್ರ ಕೆಲಸಗಳೂ ನಡೆಯಬಾರದು; ಬೇಕಾದರೆ ಬೇರೆ ದಿನ ಇಡೋಣ ಎಂದರು ಅವರು. ಬ್ಯಾಟನ್ ಕೇಳಲಿಲ್ಲ. ಹಗ್ಗಜಗ್ಗಾಟ ಶುರುವಾಯಿತು. ಯಾರೇನೇ ಗೋಗರೆದರೂ ತನ್ನ ನಿರ್ಧಾರವನ್ನುಬದಲಿಸುವುದಿಲ್ಲ ಎಂದು ವೈಸರಾಯ್ ಪಟ್ಟುಹಿಡಿದು ಕೂತ ಮೇಲೆ, ಜ್ಯೋತಿಷಿಗಳು ಒಂದು ಅನುಕೂಲಶಾಸ್ತ್ರ ತೋರಿಸಿದರು. ಆಗಸ್ಟ್ 15ರ ರಾತ್ರಿ 12:15ಕ್ಕೆ ಅಭಿಜಿತ್ ಮುಹೂರ್ತ ಇದೆ; ಅದರ ಆಚೀಚಿನ ಸಮಯದಲ್ಲಿ ನಮ್ಮ ಕೆಲಸ ಮುಗಿಸಿಕೊಳ್ಳಬಹುದು. 11:51ರಿಂದ 12:39ರವರೆಗೆ ಒಳ್ಳೆಯ ಸಮಯ. ಆಸಮಯದೊಳಗೆ ನೆಹರೂ ಭಾಷಣ ಮಾಡಲಿ; ಸರಿಯಾಗಿ ಹನ್ನೆರಡು ಗಂಟೆಗೆ ಶಂಖ ಊದುವ ಮೂಲಕ ಹೊಸ ರಾಷ್ಟ್ರದ ಉದಯವನ್ನೂ ಸಾರೋಣ ಎಂಬ ಸಲಹೆ ಕೊಟ್ಟು ಬ್ಯಾಟನ್ನನ್ನು ಒಪ್ಪಿಸಿದರು. ಹೀಗಾಗಿ, ಉದಯವಾಯಿತು ನಮ್ಮ ಚೆಲುವ ಭಾರತದೇಶ ನಟ್ಟನಡುರಾತ್ರಿಯಲ್ಲಿ!

ಸ್ವಾತಂತ್ರ್ಯ ಹೇಗೋ ಬಂತು; ಆದರೆ ಅದನ್ನು ಉಳಿಸಿಕೊಳ್ಳುವುದಕ್ಕೆ ನಮಗೆ ನಿಜಕ್ಕೂ ಆಸಕ್ತಿ ಇದೆಯೇ ಎನ್ನುವುದು ಸಂಶಯಾಸ್ಪದವಾಗಿದೆ. ಎಪ್ಪತ್ತು ವಸಂತಗಳು ಕಳೆದಮೇಲೂ ನಾವು ಕೆಂಪುಕೋಟೆಯ ಭಾಷಣದಲ್ಲಿ ಮತ್ತೆ ಅನಕ್ಷರತೆ, ಬಡತನ, ನಿರುದ್ಯೋಗ, ಕೋಮುಸಂಘರ್ಷಗಳ ಬಗ್ಗೆಯೇಮಾತಾಡುತ್ತಿದ್ದೇವಾದರೆ ನಮ್ಮ ಸ್ವಾತಂತ್ರ್ಯಕ್ಕೆ ಬೆಲೆ ಏನು? ನಮ್ಮ ದೇಶದ ಗಡಿ ಕಾಯುವ ಸೈನಿಕರನ್ನು ದಿನನಿತ್ಯ ಇನ್ನೂ ಭಯೋತ್ಪಾದಕರು ಗೋಳಾಡಿಸುತ್ತಿದ್ದಾರೆಂದರೆ ನಮ್ಮ ಸ್ವಾತಂತ್ರ್ಯ ಎಷ್ಟು ಭದ್ರ? ವಿವೇಕ ಶಾನಭಾಗರ “ಊರು ಭಂಗ” ಕಾದಂಬರಿಯಲ್ಲಿ ಪ್ರತಿ ಸ್ವಾತಂತ್ರ್ಯ ದಿನಾಚರಣೆಗೂ ಶಾಲೆಗೆ ಹೋಗಿಮಕ್ಕಳಿಗೆ ದೇಶಾಭಿಮಾನದ ಕತೆಗಳನ್ನು ಹೇಳುವ ಕಿಮಾನಿ ಮಾಸ್ತರರ ಕತೆ ಬರುತ್ತದೆ. ಒಂದು ವರ್ಷ ಮಾತ್ರ ಅವರ ಬದಲಿಗೆ ರಾಜಕೀಯ ಪುಡಾರಿಯೊಬ್ಬ ಬಂದು ಭಾಷಣ ಮಾಡುತ್ತಾನೆ. ಈ ದೇಶದಲ್ಲಿ ಯಾರು ಬೇಕಾದರೂ ಸ್ವಾತಂತ್ರ್ಯದಿನದ ಭಾಷಣ ಮಾಡಬಹುದು; ಅದಕ್ಕಾಗಿ ಜೀವನಪೂರ್ತಿ ತಪಸ್ಸು, ನಿಷ್ಠೆ,ವ್ಯಕ್ತಿತ್ವಶುದ್ಧಿ ಇವೆಲ್ಲ ಇರಬೇಕಿಲ್ಲ ಎಂಬ ಸಂದೇಶ ಕಿಮಾನಿ ಮಾಸ್ತರರಿಗೆ ಹೋಗುತ್ತದೆ. ಅಂಥ ಪರಿಸ್ಥಿತಿ ಬಂದ ದಿನ ದೇಶದ ಆತ್ಮ ಸತ್ತ ಹಾಗೆ. ಕಲಾಂ, ಕಯ್ಯಾರರಂಥ ಹಿರಿಯ ಜೀವಗಳು ಕಣ್ಮರೆಯಾಗುತ್ತಿರುವಾಗ, ಆದರ್ಶಗಳಿಗಾಗಿ ನಾವು ಪರದೇಶಗಳತ್ತ ನೋಡುವ ಪರಿಸ್ಥಿತಿ ಬರದಿರಲಿ. ಒಂದು ದೇಶದಸ್ವಾತಂತ್ರ್ಯದ ಇತಿಹಾಸದಲ್ಲಿ 69 ಅಷ್ಟೇನೂ ದೊಡ್ಡ ವೃದ್ಧಾಪ್ಯವಲ್ಲ; ಆದ್ದರಿಂದ ಈ ದೇಶ ಹೊಸ ಆದರ್ಶಮೂರ್ತಿಗಳನ್ನು ಹಡೆಯಲಿ. ಭಾರತೀಯ ಮೌಲ್ಯಗಳ ಫಲವತ್ತು ನೆಲದಲ್ಲಿ ಹೊಸ ಆರೋಗ್ಯಪೂರ್ಣ ಚಿಗುರುಗಳು ಮೊಳೆಯಲಿ ಎಂದು ಆಶಿಸೋಣ!

Rohit Chakrathirtha

ಓದಿದ್ದು ವಿಜ್ಞಾನ,  ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗ.ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ.  ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳಪ್ರಕಟಣೆಯಾಗಿವೆ.  ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!