“ಮೂದೇವಿ … ಈಗ ಅಳುವಂತದ್ದು ಏನ್ ಆಗೈತೆ ಅಂತ … ಯಾಕ್ ಹಿಂಗ್ ಸಾಯ್ತಿ ನೀನು…” ಬುಡ್ಡಿ ದೀಪದಬೆಳಕಲ್ಲಿ ಕಾಕಿ ಅಳುದ್ ಕಂಡ ಮಾದ ಅವಳ ಮೇಲೆ ಉರಿದು ಬಿದ್ದ.. . ಆದರೆ ಕಾಕಿ ಗೆ ಇದೇನುಹೊಸತಲ್ಲವಲ್ಲ … ಪ್ರತಿದಿನದ ಗೋಳು … ಕಾಕಿ ಗುಡಿಸಿಲಿನ ಮೂಲೇಲಿ ಕುಳಿತು ಒಲೆಗೆ ಸೌದೆ ಹಾಕಿ “ಉಫ್” ಅಂತ ಊದ್ತಾ … ಕಣ್ಣು ಒರೆಸಿಕೊಳ್ಳುತ್ತಾ ಗಂಜಿ ಕಾಯಿಸುತ್ತಾ ಕುಳಿತಿದ್ದಾಳೆ. “ ಇವತ್ತೂ ಕುಡ್ಕಂಡ್ ಬಂದೀ… ಇವತ್ತ್ ಉಗಾದಿ ಅಂತ ಗೊತ್ತಿಲ್ಲ ನಿಂಗ … ಸೂರ್ಯ ಹುಟ್ಟಕ್ ಮುಂಚೆ ಓದೋನು ಈಗ ಕಂಠ ಪೂರ್ತಿಕುಡ್ದು ಬಂದಿದಿಯಲ್ಲ .. ಹೆಂಡ್ತಿ ಮಕ್ಕಳ ಗೆಪ್ತಿ ಬರಲ್ವಾ… ಆ ಮಗೀಗೆ ಇವತ್ತಾದ್ರೂ ಓಳಿಗೆ ಊಟ ಹಾಕಣಅಂದ್ರೆ ಮನೆಯಾಗೆ ಬಿಡಿಗಾಸಿಲ್ಲ …” ಎನ್ನುವಾಗ ಮಗಳು ಚಿನ್ನು ಕೇಳಿದ ಮಾತು ನೆನಪಿಗೆ ಬಂದು ದುಃಖತಡೆಯಲಾರದೆ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದಳು ಕಾಕಿ….
ಹೌದು .. ಅವತ್ತು ಯುಗಾದಿ.. ಊರಲ್ಲೆಲ್ಲ ಸಂಭ್ರಮ. ಕಾಕಿಗೆ ಮಗಳಿಗೆ ಹೊಸ ಬಟ್ಟೆಯಂತೂಕೊಡಿಸಲಾಗಲಿಲ್ಲ, ಹೋಳಿಗೆ ಊಟ ಆದರೂ ಹಾಕೋಣ ಅನ್ನುವ ಹಂಬಲ. ಬೆಳಗ್ಗೆ ಎದ್ದವಳೇ ಗೋಲಕನೋಡಿದಳು… ನಿನ್ನೆಯೇ ರಾಗಿಗೆ ಎಂದು ಅಷ್ಟೂ ದುಡ್ಡು ತೆಗೆದಿದ್ದು ಗೊತ್ತಿದ್ದರೂ ಸಣ್ಣ ಆಸೆ… ಏನಾದರೂಸಿಕ್ಕೀತು ಎಂದು… ಗೊಲಕದಲ್ಲಿ ಬಿಡಿಗಾಸಿರಲಿಲ್ಲ … ಪಕ್ಕದಲ್ಲೇ ಮಲಗಿದ್ದ ಗಂಡನ ಸುದ್ದಿಯೇ ಇರಲಿಲ್ಲ … “ಇನ್ಯಾವ ಪಂಚಾಯ್ತಿ ಮಾಡಾಕ್ ಹೋದ್ನೋ…” ಎಂದುಕೊಂಡು ಗಂಗನ್ನಾದ್ರೂ ಕೇಳೋಣ ಎಂದುಕೆದರಿದ್ದ ತಲೆಗೂದಲನ್ನು ಗಂಟು ಹಾಕಿ ಹೊರಟಳು. ಗಂಗಾ ಕಾಕಿಯ ಗೆಳತಿ.. ಇಬ್ಬರೂ ಒಟ್ಟಿಗೆ ಬೆಳೆದವರು..ಆದರೆ ಗಂಗಾ ಮೇಲಿನವಳು.. ಅವಳನ್ನೂ ಕೂಡ ಇದೇ ಊರಿಗೆ ಕೊಟ್ಟಿದ್ದರು. ಮನೆ ಊರೊಳಗಿತ್ತು… ಕಾಕಿಗುಡಿಸಲಿನ ಬಾಗಿಲು ಎಳೆದುಕೊಂಡು ಗಂಗಾನ ಮನೆಯ ಕಡೆ ಹೊರಟಳು… ಅಲ್ಲಿಗೆ ಹೋದವಳೇ,”ಗಂಗಾ …” ಎಂದು ಕೂಗಿದಳು… ಈ ಹಿಂದೆ ಗಂಗಾಳ ಹತ್ತಿರ ಜಾತ್ರೆಗೆ ದುಡ್ಡು ಇಸಿದುಕೊಂಡಿದ್ದೆ ವಾಪಸ್ಕೊಟ್ಟಿಲ್ಲ ಎನ್ನುವ ಕಸಿವಿಸಿ ಇತ್ತು… ಕಾಲು ಹಿಂದೆ ಎಳಿಯುತ್ತಿತ್ತು.. ವಾಪಸ್ ಹೋಗಿಬಿಡೋಣ ಎಂದು ಎನಿಸಿಹಿಂದಕ್ಕೆ ತಿರುಗಿದಳು. ಮನಸ್ಸಿನ ಮುಂದೆ ಮಗಳ ಮುಖ ಒಮ್ಮೆ ಹಾದು ಹೋಯಿತು. ಮಗಳಿಗಾಗಿ,ಅವಳಸಂತೋಷಕ್ಕಾಗಿ ತನ್ನ ಸ್ವಾಭಿಮಾನ ಬದಿಗಿರಿಸಿ ಕೇಳೇ ಬಿಡೋಣ ಎಂದು ಗಂಗಾಳ ಮನೆಯ ಬಾಗಿಲಬಳಿ ಬಂದಳು… ಮತ್ತೆ “ಗಂಗಾ …” ಎಂದು ಕೂಗಿದಳು… ಹೊರಗೆ ಬಂದ ಗಂಗಾಳ ಬಳಿ ಮನಸ್ಸಿನ್ನು ಹಿಡಿಮುಷ್ಟಿಯಷ್ಟು ಚಿಕ್ಕದು ಮಾಡಿಕೊಂಡು, ಮೆಲುದನಿಯಲ್ಲಿ, “ ವಸಿ ಕಾಸಿದ್ರೆ ಕೊಟ್ಟಿರ್ತಿಯ … ನಾಳಿಕ್ಕೊಡ್ತೀನಿ …” ಎಂದಳು… ಗಂಗಾಳಿಗೆ ದುಡ್ಡು ಕೊಡಬೇಕು ಎನ್ನುವ ಮನಸಿದ್ದರೂ, ಹಿಂದೆ ಕಾಕಿಗೆ ಕದ್ದುಮುಚ್ಚಿ ದುಡ್ಡು ಕೊಟ್ಟು ಸಿಕ್ಕಿಹಾಕಿಕೊಂಡು ಗಂಡನ ಕೈಯಲ್ಲಿ ಬೈಸಿಕೊಂಡಿದ್ದ ನೆನಪು ಹಸಿರಾಗಿತ್ತು. ಗಂಗಾ , “ಈಗ ನಂತಾವ ಕಾಸಿಲ್ಲವಲ್ಲ ಕಾಕೀ … ನನ್ ಯಜಮಾನ್ರು ಏಗೆ ಅಂತ ನಿಂಗೆ ಗೊತ್ತಲ್ಲ.. ನಂತಾವ ಈಗಬಿಡಿಗಾಸನು ಕೊಡಕ್ಕಿಲ್ಲ .. ಬ್ಯಾಜಾರ್ ಮಾಡ್ಕಬೇಡ ಕಣೇ …” ಎಂದಳು. ಕಾಕಿಗೆ ಏನು ಹೇಳಬೇಕು ಎಂದೇತೋಚಲಿಲ್ಲ .. “ಓಗ್ಲಿ ಬುಡು …” ಎಂದು ಕಣ್ಣಲ್ಲಿ ಬಂದ ನೀರನ್ನು ಮರೆಮಾಚಲು ಬೇಗನೆ ಹಿಂದೆ ತಿರುಗಿಅವಳ ಮನೆಯಿಂದ ಹೊರಬಂದಳು…
ಈಗ ಕಾಕಿಗೆ ಉಳಿದಿದ್ದು ಒಂದೇ ಉಪಾಯ… ಊರ “ಯಜಮಾನರ” ಕಸ ಮುಸರೆ ಮಾಡಿದರೆ ನಾಲ್ಕುಕಾಸು ದೊರೆಯಬಹುದು ಎಂಬುದು… ಹಾಗೆ ಯಜಮಾನರ ಮನೆಯ ಬಳಿ ಬಂದು “ಯಜಮಾನರೆ…”ಎಂದು ಕೂಗಿದಳು… ಮನೆ ಒಳಗಿಂದ ಬಂದ ಯಜಮಾನ್ತಿ , “ಏನ್ ಕಾಕಿ… ಇಷ್ಟ್ ದೂರ .. ಸಾಲ ಕೊಡಲ್ಲಅಂತ ಆಗ್ಲೇ ಹೇಳಿದ್ನಲ್ಲ ..” ಎಂದಳು … ಕಾಕಿ “ಹಾಗಲ್ಲ ಕಣವ್ವ … ಮನ್ಯಾಗೆ ಬಿಡಿಗಾಸು ಇಲ್ಲ .. ಒಸಿ ಕಸಮುಸರೆ ಮಾಡ್ಕೊಡ್ತೀನಿ.. ಕಾಸು ಕೊಡಿ ನನವ್ವ ..” ಎಂದಳು … ಅದಕ್ಕೆ ಯಜಮಾನ್ತಿ , “ ಲೇ ಇವತ್ತುಉಗಾದಿ ಕಣೇ … ಎಲ್ಲ ಮಡಿಲಿ ಮಾಡ್ತಾ ಇರ್ತೀವಿ .. ಇವಳನ್ ಮನೇಗ್ ಸೇರಸ್ಬೇಕಂತೆ … ಹೋಗ್ ಹೋಗು…” ಎಂದು ಹೇಳಿ ಮರು ಮಾತಾಡದೆ ಬಾಗಿಲು ಮುಚ್ಚಿದಳು.. ಕಾಕಿಗೆ ದುಃಖ ತಡಿಯಲಾಗಲಿಲ್ಲ…ನನ್ ಗಂಡ ಸರಿ ಇದ್ದಿದ್ರೆ ಹಿಂಗೆಲ್ಲ ಆಗ್ತಾ ಇತ್ತ ಎಂದು ಮನಸ್ಸಿನಲ್ಲೇ ಶಪಿಸುತ್ತ ಗುಡಿಸಿಲಿನ ದಾರಿ ಹಿಡಿದಳು….
ಗುಡಿಸಿಲಿನ ಬಳಿ ಕುಳಿತಿದ್ದ ಅವಳ ಪುಟ್ಟ ಕಂದ ಚಿನ್ನು ಅವಳನ್ನು ಕಂಡೊಡನೆ “ಅವ್ವ .. ಅವ್ವ ..ಈ ಓಳಿಗೆಅಂದ್ರೆ ಏನವ್ವ … ರಾಜು ತಿಂತ ಇದ್ದ .. ಏನು ಅಂತ ಕೇಳಿದ್ದುಕ್ಕೆ ಓಳಿಗೆ ಅಂತ ಅಂದ.. ಚನ್ನಾಗಿರ್ತದಂತೆ.. ನಂಗೂ ಮಾಡ್ಕೋಡವ್ವ ..” ಅಂದಳು .. ಕಾಕಿಯ ಮನಸ್ಸು ಕದಡಿತು .. ಅವಳು ತಡವರಿಸುತ್ತಲೇ “ಪುಟ್ಟ ..ನಾನು ರೊಟ್ಟಿ ಮಾಡಕಿಲ್ವಾ .. ಅದ್ಕೆ ಸಕ್ಕರೆ ಆಕುದ್ರೆ .. ಓಳಿಗೆ ಅಂತಾರೆ ಕಣವ್ವ ..” ಎಂದಳು …. ಮಗಳಿಗೆಹಬ್ಬದ ದಿನವೂ ಒಳ್ಳೆಯ ತಿನಿಸು ಕೊಡಲಾಗದ ತನ್ನ ಸ್ಥಿತಿಯ ಬಗ್ಗೆ ಅವಳಿಗೆ ಅಸಹ್ಯ ಮೂಡಿತು …..ಮಗಳನ್ನು ಗಟ್ಟಿಯಾಗಿ ತಬ್ಬಿ ಮೋಡ ತುಂಬಿದ ಆಕಾಶ ನೋಡುತ್ತಾ ಕುಳಿತಳು …
ಮಾದ ಅಳುತಿದ್ದ ಕಾಕಿಯ ಬೆನ್ನಿಗೆ ಜೋರಾಗಿ ಗುದ್ದಿದ.. “ಗಂಡ ಸುಸ್ತಾಗ್ ಮನಿಗ್ ಬಂದ್ರೆ ಈ ಹಾಳ್ ಮುಖಹಾಕಂಡ್ ಕುಂತಿದ್ದಿಯ …” ಎಂದು ಜೋರಾಗಿ ಚೀರಿ ಕುಡಿದ ಮತ್ತಲ್ಲಿ ಅವಳ ಬಳಿಯೇ ನೆಲಕ್ಕೊರಗಿದ…ಕಾಕಿ ತನ್ನ ಗಂಡನ್ನ ಮುಖ ನೋಡುತ್ತಾ ಕುಳಿತಳು… ಸ್ಮಶಾನ ಮೌನ ಅವಳ ಮನಸ್ಸಿಗೆ ಆವರಿಸಿತ್ತು….