ಅಂಕಣ

ಅಪ್ಪ ಮತ್ತು ಯಕ್ಷಗಾನ

ನೆನಪಿದೆ ಅಪ್ಪನ ಹೆಗಲ ಮೇಲೆ ಹತ್ತಿ ಕುಳಿತು ಯಕ್ಷಗಾನ ನೋಡಲು ಹೊರಟಿದ್ದು, ಅಪ್ಪ ಹಾಡುತಿದ್ದ ಯಕ್ಷಗಾನದ ಹಾಡುಗಳಿಗೆ ಗೊತ್ತಿಲ್ಲದೇ ದನಿಯಾಗುತ್ತಿದ್ದುದು,ಅರ್ಥವಾಗದಿದ್ದರೂ ಕಣ್ಮುಚ್ಚದೇ ನೋಡುತ್ತಿದ್ದ ಚಿಟ್ಟಾಣಿ ಅಜ್ಜನ ಪಾತ್ರ,ಕನಸಿನಲ್ಲೂ ಗುನುಗಬೇಕೆಂಬಂತೆ ಅನ್ನಿಸುತ್ತಿದ್ದ ನೆಬ್ಬೂರು ಭಾಗವತರ ಹಾಡು,ನಕ್ಕು ನಕ್ಕು ಸುಸ್ತಾಗುವಂತಿದ್ದ ರಮೇಶ್ ಭಂಡಾರಿಯವರ ಹಾಸ್ಯ, ಮೃದಂಗವನ್ನೇ ನೋಡುತ್ತಿರುವಂತೆ ಮಾಡುತ್ತಿದ್ದ ದುರ್ಗಪ್ಪ ಗುಡಿಗಾರ ಮೃದಂಗ ವಾದನ.ಇದು ಕೇವಲ ನನಗೆ ಮಾತ್ರ ನೆನಪಿಗೆ ಬರುವುದಲ್ಲ ಬಹುಶ: ಅದೆಷ್ಟೋ ಮಲೆನಾಡಿನ ಹುಡುಗರಿಗೆ ಆ ದಿನಗಳು ನೆನಪಿನ ಚಿತ್ತದಲ್ಲಿ ಹಾದು ಹೋಗುತ್ತಿರಬಹುದು.ಹೌದು “ಯಕ್ಷಗಾನ”ಕ್ಕೆ ಆ ತಾಕತ್ತು ಇದೆ.ಅದೊಂದು ಅದ್ಭುತ ಕಲೆ,ಕಲಾವಿದ ಸಂಪೂರ್ಣವಾಗಿ ತನ್ನನ್ನ ತಾನು ಈ ಕಲೆಗೆ ಅರ್ಪಿಸಿಕೊಂಡರೆ ಮಾತ್ರ ಯಶಸ್ವೀ ಯಕ್ಷಗಾನ ಕಲಾವಿದನಾಗಲು ಸಾಧ್ಯ. ನನ್ನಜ್ಜ ಹೇಳುತ್ತಿದ್ದರು ಸುಮಾರು ೫೦ ವರ್ಷದ ಹಿಂದೆ ಅಂದರೆ ಅವರ ಪ್ರಾಯ ಕಾಲದಲ್ಲಿ ಅವರೂ ಯಕ್ಷಗಾನದ ಪಾತ್ರಧಾರಿಯಾಗಿದ್ದರಂತೆ.ಅಂದರೆ ಈ ಕಲೆ ಮಲೆನಾಡಿನ ಎಲ್ಲರ ಮನೆಯಲ್ಲೂ ಜೀವಂತವಾಗಿತ್ತು ,ಕೇವಲ ಮನೆಯಲ್ಲಲ್ಲ ಮನಸ್ಸಿನಲ್ಲಿ ಜೀವಂತವಾಗಿತ್ತು ಎಂಬುದು ಚಿರಂತನ ಸತ್ಯ.”ಆಗೆಲ್ಲ ಈಗಿನಷ್ಟು ವ್ಯವಸ್ಥೆಗಳಿರುತ್ತಿರಲಿಲ್ಲ, ದೀಪದ ವ್ಯವಸ್ಥೆಗೆ ‘ಲಾಟೀನು’ಗಳನ್ನು ಬಳಸುತ್ತಿದ್ದೆವು,ಚಂದದ ರಂಗಸ್ಥಲಳವನ್ನು ನಮ್ಮನೆ ಬೇಟ್ಟದಲ್ಲಿ ಖಾಯಂ ಆಗಿ ನಿರ್ಮಿಸಿಟ್ಟಿದ್ದೆವು,ಹಗಲಿಡಿ ಬಿಡುವಿಲ್ಲದ ಕೆಲಸ ಸಂಜೆ ಆಗುತ್ತಿದ್ದಂತೆ ‘ಚಿಮಣಿ’ದೀಪದಲಿ ಯಕ್ಷಗಾನ ತಯಾರಿ, ತಮ್ಮ ಆ ಕಾಲ ಅದೆಷ್ಟು ಚಂದವಾಗಿತ್ತು ಗೊತ್ತ”ಅಪ್ಪ ಹೀಗ ಹೇಳಿದಾಗ ಖುಷಿ ಒಂದುಕಡೆ ಆದರೆ ನಮ್ಮ ಈ ಕಾಲದ(Generation) ಬಗ್ಗೆ ಅಸಹ್ಯ ಅನ್ನಿಸಿಬಿಟ್ಟಿತ್ತು.ಕಲ್ಪಿಸಿಕೊಳ್ಳಿ ಈಗ ಎಷ್ಟೊಂದು ವ್ಯವಸ್ಥೆಗಳಿವೆ ಆದರೆ ‘ಯಕ್ಷಗಾನ’ಎನ್ನೋ ಕಲೆಯನ್ನು ಉಳಿಸಿಕೊಳ್ಳುವ ಯೋಚನೆಯನ್ನೂ ಮಾಡದೇ ಅದ್ಯಾವುದೋ ವ್ಯಾಪಾರೀಕರಣದ ಸೆರೆಯಲ್ಲಿ ಬಂಧಿಯಾಗಿಬಿಟ್ಟೆವಲ್ಲ,ನಮಗೇ ಮನಸ್ಸು ಬಾರವಾಗುತ್ತೆ ಅಂದರೆ ಯಕ್ಷಗಾನದ ಸುವರ್ಣಯುಗ ಕಂಡಿದ್ದ ಅದೆಷ್ಟೋ ಹಿರಿಯ ಜೀವಗಳ ಮನಸ್ಸು ಎಷ್ಟು ಪರಿತಪಿಸುತ್ತಿರಬಹುದು.ಅಗೆಲ್ಲ ವರ್ಷಪೂರ್ತಿ ಒಂದಿಲ್ಲೊಂದುಕಡೆ ಯಕ್ಷಗಾನಗಳು ನಡೆಯುತ್ತಲೇ ಇರುತ್ತಿತ್ತು.ಈಗ ವರ್ಷದಲ್ಲಿ ಒಮ್ಮೆ ನನ್ನೂರಿನಲ್ಲಿ ಯಕ್ಷಗಾನ ನಡೆದರೆ ಆಶ್ಚರ್ಯವಾಗಿಬಿಡುತ್ತೆ. ಹೌದು ಅಪ್ಪ ಹೇಳಿದ ಮಾತು ನಿಜ ಆ ಕಾಲವೇ ಚಂದ.

ಕಲೆ ಮನುಷ್ಯನ ಜೀವನದ ಪ್ರಮುಖ ಭಾಗವಾದಾಗ ಆತನಲ್ಲಿ ಮಾನಸಿಕ ಬೆಳವಣಿಗೆಯಾಗುತ್ತದೆ. ಮನಸ್ಸು ಓರೆಗೆ ಹಚ್ಚಿದಂತೆ ಭಾಸವಾಗುತ್ತದೆ. ನೆನಪಿದೆಯ ನಿಮಗೆ ಚಿಟ್ಟಣಿ ಅಜ್ಜನ ‘ದುಷ್ಟಬುದ್ಧಿಯ’ ಪಾತ್ರ? ನೆನಪಿದೆಯ ನಿಮ್ಮ ಮನೆಯವರ ಜೊತೆ ದೂರದೂರುಗಳಿಗೆ ಯಕ್ಷಗಾನ ನೋಡಲು ತೆರಳಿದ್ದು? ನೆನಪಿದೆಯ ಯಕ್ಷಗಾನ ಪ್ರಸಂಗ ಅರ್ಥವಾಗದಿದ್ದರೂ ಅದರಲ್ಲಿ ಬರುವ ಹಾಸ್ಯ ನೋಡಲು ಹಾತೊರೆಯಿತ್ತಿದ್ದುದು? ನೆನಪಿರಲೇ ಬೇಕು. ಇದೆಲ್ಲ ಮರೆಯುವ ನೆನಪಲ್ಲ, ಮನಸ್ಸನ್ನ ಹಾಗೆ ಉಲ್ಲಸಿತವಾಗುವಂತೆ ಮಾಡುವ ನೆನಪು. ಅಪ್ಪ ಗದ್ದೆ ಹಾಳಿ ಕಡಿಯುವಾಗ ಬಿಡದೇ ಹಾಡುತ್ತಿದ್ದ ಹಾಡು ಇದೇ ಯಕ್ಷಗಾನದ್ದು,ಅಜ್ಜ ಮನೆ ಜಗುಲಿಯ ಮಂಚದ ಮೇಲೆ ಎಲೆಅಡಿಕೆ ತಿನ್ನುತ್ತ ಗುನುಗುತ್ತಿದ್ದ ಹಾಡು ಇದೇ ಯಕ್ಷಗಾನದ್ದು,ಪಾತ್ರಧಾರಿ ಯಾರಾದರೇನು ಯಕ್ಷಗಾನವೆಂದರೆ ನಡೆ ಹೋಗೋಣ ಅನ್ನುತ್ತಿದ್ದ ಅಜ್ಜಿ ಅದ್ಯಾಕೋ ನೆನಪಾಗುತ್ತಾರೆ,ಇಂದು ಯಕ್ಷಗಾನವಿದೆ ಅಂದರೆ ನಿನ್ನೆಯಿಂದಲೇ ನಿದ್ದೆಗೆಡಲು ತಯಾರಾಉತ್ತಿದ್ದ ಅಮ್ಮ ನೆನಪಾಗುತ್ತಾಳೆ.ಗೊತ್ತಿದ್ದೋ ಗೊತ್ತಿಲ್ಲದೆಯೇ ನಮ್ಮ ಮನೆಗಳ ಒಂದು ಭಾಗವಾಗಿಬಿಟ್ಟಿತ್ತಲ್ಲ, ಅದೂ ಯಕ್ಷಗಾನ.’ಕರದೊಳು ಪರಶು ಪಾಶಾಂಕುಶ ಧರಗೆ ‘ ಭಾಗವತರ ಈ ಹಾಡು ಕೇಳಲು ಮನಸ್ಸು ಹಾತೊರೆಯುತ್ತಿತ್ತು.ಅನುಮಾನವೇ ಬೇಡ ಅದೊಂದು ಅದ್ಭುತ ಕಲೆ.ಅಂದು ನಮ್ಮನ್ನೆಲ್ಲ ಆವರಿಸುತ್ತಿದ್ದ ಚಿಟ್ಟಾಣಿ ಅಜ್ಜ,ಶಂಬು ಹೆಗಡೆ,ನಾರಾಯಣ ಹೆಗಡೆ ಗೋಡೆ,ಕೊಂಡದಕುಳಿ ಹೀಗೆ ಅದೆಷ್ಟೋ ಕಲಾವಿದರು ಬಡಗುತಿಟ್ಟಿನ ಯಕ್ಷಗಾನದಲ್ಲ ಯಾವತ್ತೂ ಅಜರಾಮರವೇ ಸರಿ.ಮನೆಯ ಪರಿಸ್ಥಿತಿ ಸರಿಯಾಗಿಲ್ಲದಿದ್ದರೂ ಊರೂರಿಗೆ ತಿರುಗಿ ಯಕ್ಷಗಾನ ಮಾಡುತ್ತಾ,ಬದುಕ ಕಟ್ಟಿಕಳ್ಳುವ ಪ್ರಯತ್ನ ಮಾಡಿದ ಇವರೆಲ್ಲ ಯಾವ ಸಿನಿಮಾ ನಟರಿಗೂ ಕಡಿಮೆಯಿಲ್ಲ. ಇಂದೂ ಕೂಡ ಅನೇಕ ಯುವ ಯಕ್ಷಗಾನ ಕಲಾವಿದರು ಇದೇ ರೀತಿ ಬದುಕುತ್ತಿದ್ದಾರೆ.ಆದರೆ ಯಕ್ಷಗಾನ ನೋಡುವವರು ಕಡಿಮೆಯಾದರೇ?

ಯಕ್ಷಗಾನದ ಸುಂದರ ರಂಗಸ್ಥಳ,ಮತ್ತೆ ಮತ್ತೆ ನೋಡುತ್ತಲೇ ನಿಂತುಬಿಡಬೇಕೆನಿಸುವ ಚೌಕೀಮನೆ,ಬಣ್ಣವನ್ನ ಕೇವಲ ಮುಖಕ್ಕೊಂದೇ ಅಲ್ಲದೆ ಮನಸ್ಸಿಗೂ ಬಡಿದುಕೊಂಡು ಪಾತ್ರಗಳಿಗೆ ಜೀವ ತುಂಬಿತ್ತಿದ್ದ ಆ ಕಲಾವಿದರುಗಳ ತಯಾರಿ.

“ಯಕ್ಷಗಾನದ ಉಗಮ ಮತ್ತು ವಿಧಗಳು”

ಯಕ್ಷಗಾನದ ಹುಟ್ಟಿನ ಬಗ್ಗೆ ಓದಿದರೇ ಅಬ್ಬ!!ಅನ್ನಿಸುವುದಂತೂ ನಿಜ. ಯಕ್ಷಗಾನದ ಮೊದಲ ಉಲ್ಲೇಖ ಸಾರ್ಣದೇವನ “ಸ೦ಗೀತ ರತ್ನಾಕರ”ದಲ್ಲಿ (೧೨೧೦ ಕ್ರಿಶ) “ಜಕ್ಕ” ಎ೦ದು ಆಗಿದ್ದು ಮು೦ದೆ “ಯಕ್ಕಲಗಾನ” ಎ೦ದು ಕರೆಯಲ್ಪಟ್ಟಿತ್ತು ಎ೦ಬುದು ಒ೦ದು ಅಭಿಪ್ರಾಯ. ಗ೦ಧರ್ವ ಗ್ರಾಮ ಎ೦ಬ ಈಗ ನಶಿಸಿ ಹೋಗಿರುವ ಗಾನ ಪದ್ದತಿಯಿ೦ದ ಗಾನ ಮತ್ತು ಸ್ವತ೦ತ್ರ ಜಾನಪದ ಶೈಲಿಗಳಿ೦ದ ನೃತ್ಯ ರೂಪು ಗೊ೦ಡಿತೆ೦ದು ಶಿವರಾಮ ಕಾರ೦ತರು “ಯಕ್ಷಗಾನ ಬಯಲಾಟ” ಎ೦ಬ ಸ೦ಶೋಧನಾ ಪ್ರಬಂದಗಳ ಸಂಕಲನದಲ್ಲಿ ಹೇಳಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರು ಯಕ್ಷಗಾನಪಟುವಾಗಿದ್ದರು.ಯಕ್ಷಗಾನದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು.೧೫೦೦ ರಷ್ಟರಲ್ಲಿ ವ್ಯವಸ್ತಿತವಾಗಿ ಯಕ್ಷಗಾನ ರೂಢಿಯಲ್ಲಿತ್ತು ಎ೦ಬುದು ಬಹಳ ವಿದ್ವಾ೦ಸರು ಒಪ್ಪುವ ವಿಚಾರ.
ಯಕ್ಷಗಾನದಲ್ಲಿ ಅನೇಕ ರೀತಿಯ ಪ್ರಭೇದಗಳಿದ್ದು ಅವುಗಳಲ್ಲಿ ಯಕ್ಷಗಾನ ಬಯಲಾಟವು ಅತ್ಯಂತ ಜನಪ್ರಿಯವಾದುದು. ಬಯಲಾಟವೆಂದರೆ ವೇಷಭೂಷಣಗಳೊಂದಿಗೆ ರಂಗಭೂಮಿಯಲ್ಲಿ ಆಡುವ ಯಕ್ಷಗಾನ ಪ್ರಭೇದ.ಬಯಲಾಟವೇ ಹಳ್ಳಿಗಳಲ್ಲಿ ತುಂಬಾ ಜನಪ್ರಿಯತೆಯನ್ನು ಪಡೆದಿತ್ತು. ಕುಣಿತ ಎಂಬ ಹೆಸರು ಇದಕ್ಕಿದೆ. ಮೊದ ಮೊದಲು ಹಬ್ಬ ಹರಿದಿನಗಳಂದು ಊರಿನ ಬಯಲಿನಲ್ಲಿ ರಾತ್ರಿಯಿಡೀ ಈ ಬಯಲಾಟ ಹೆಚ್ಚಾಗಿ ನಡೆಯುತ್ತಿದ್ದ ಕಾರಣ “ಬಯಲಾಟ” ಎಂಬ ಹೆಸರು ರೂಢಿಯಲ್ಲಿದೆ. ಜನರು ಇದನ್ನು ಸರಳವಾಗಿ “ಆಟ” ಎಂದೂ ಕರೆಯುತ್ತಾರೆ.ಮಲೆನಾಡ ಜನರ ಬದುಕಿನ ಅವಿಬಾಜ್ಯ ಅಂಗವಾಗಿತ್ತು ಈ ಬಯಲಾಟ. ಇರುವಷ್ಟೇ ವ್ಯವಸ್ಥೆಯಲ್ಲಿ ಚಂದದ ಬಯಲಾಟವನ್ನ ಸ್ಥಳೀಯರು ಆಯೋಜಿಸುತ್ತಿದ್ದರು. ಆದರೆ ಈಗೀಗ ರಾತ್ರಿಯಿಡೀ ನಡೆಯುವ ಬಯಲಾಟದೊಂದಿಗೆ ೨-೩ ಘಂಟೆಗಳ ಕಾಲ ನಡೆಯುವ ಯಕ್ಷಗಾನವೂ ಬಳಕೆಯಲ್ಲಿದೆ.ಅದಕ್ಕೆ ಕಾರಣ ಕೂಡ ಜನರೇ ಆಗಿದ್ದಾರೆ,ತಮ್ಮ ಬಿಡುವಿಲ್ಲದ ಸಮಯದಲ್ಲಿ ೨ ತಾಸನ್ನು ಯಕ್ಷಗಾನಕ್ಕೆ ನೀಡಿದರೆ ಅದೇ ದೊಡ್ಡದು ಅನ್ನುವ ಮನಸ್ಥಿತಿ ನಮ್ಮಾದಾಗಿಬಿಟ್ಟಿದೆ. ಬಯಲಾಟದಲ್ಲಿ ವೇಷಭೂಷಣ, ರಂಗಸ್ಥಳ, ಭಾಗವಂತಿಕೆ (ಹಾಡುಗಾರಿಕೆ), ಅಭಿನಯ, ಮಾತುಗಾರಿಕೆ, ನೃತ್ಯ – ಹೀಗೆ ಸಾಂಪ್ರದಾಯಿಕ ಯಕ್ಷಗಾನದ ಎಲ್ಲ ಮಜಲುಗಳನ್ನೂ ಕಾಣಬಹುದು. ಯಕ್ಷಗಾನದಲ್ಲಿ ಮೂಡಲಪಾಯ ಮತ್ತು ಪಡುವಲಪಾಯ ಎಂಬ ಎರಡು ಮ್ರಮುಖ ಪ್ರಭೇದಗಳಿವೆ. ಪಶ್ಚಿಮ ಘಟ್ಟದ ಪೂರ್ವಕ್ಕೆ ಪ್ರಚಲಿತವಿರುವದು ಮೂಡಲಪಾಯ.ಉತ್ತರ ಕರ್ನಾಟಕದಲ್ಲಿ ಬಹು ಜನಪ್ರಿಯವಾಗಿರುವ ಶ್ರೀಕೃಷ್ಣ ಪಾರಿಜಾತ ಮೂಡಲ ಪಾಯದಲ್ಲಿ ಗಮನಾರ್ಹ. ಮಲೆನಾಡು ಮತ್ತು ಕರಾವಳಿಯಲ್ಲಿ ಪ್ರಚಲಿತವಿರುವುದು ಪಡುವಲಪಾಯ. ಪಡುವಲಪಾಯದಲ್ಲಿ ೩ ವಿಭಾಗಗಳಿವೆ.ಅವು ತೆಂಕುತಿಟ್ಟು ಮತ್ತು ಬಡಗುತಿಟ್ಟು ಮತ್ತು ಉತ್ತರದ ತಿಟ್ಟು (ಬಡಾಬಡಗು).ಉತ್ತರಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತರದ ತಿಟ್ಟು ಶೈಲಿಯ ಬಯಲಾಟಗಳು ಕಂಡು ಬಂದರೆ,ಉಡುಪಿ ಯಲ್ಲಿ ಬಡಗುತಿಟ್ಟು,ದಕ್ಷಿಣ ಕನ್ನಡದಲ್ಲಿ ಹಾಗು ಕಾಸರಗೋಡು  ಜಿಲ್ಲೆಗಳಲ್ಲಿ ತೆಂಕುತಿಟ್ಟು ಶೈಲಿಯ ಯಕ್ಷಗಾನವನ್ನು ಕಾಣಬಹುದು. ವೇಷಭೂಷಣಗಳ ವಿನ್ಯಾಸ, ನೃತ್ಯದ ಶೈಲಿ, ಭಾಗವತಿಕೆ ಮತ್ತು ಹಿಮ್ಮೇಳಗಳಲ್ಲಿ ಕಂಡುಬರುವ ಕೆಲವು ವ್ಯತ್ಯಾಸಗಳ ಆಧಾರದ ಮೇಲೆ ಈ ವಿಂಗಡಣೆಯನ್ನು ಮಾಡಲಾಗಿದೆಯೇ ಹೊರತು ಯಕ್ಷಗಾನದ ಮೂಲ ತತ್ವ, ಆಶಯಗಳು ೩ ಶೈಲಿಗಳಲ್ಲಿಯೂ ಒಂದೇ ಆಗಿರುತ್ತದೆ.ಯಕ್ಷಗಾನದ ವಿಧಗಳು ಅನೇಕವಾಗಿರಬಹುದು ಆದರೆ ಅದನ್ನ ನೋಡಿದ ಮೇಲೆ ಸಿಗುವ ಅನುಭವ ಒಂದೇ ಆಗಿದೆ.

ಅಂದಿನಿಂದ ಶುರುವಾದ ಯಕ್ಷಗಾನದ ಪಯಣ ಮುಂದುವರಿದೇ ಇದೆ.ಅಪ್ಪನ ಹಾಡು ಬದಲಾಗಲಿಲ್ಲ,ಅಜ್ಜ ಇಲ್ಲ ಆದರೆ ಅಜ್ಜ ಹಾಡುತ್ತಿದ್ದ ಹಾಡು ಮತ್ತು ಹಂಚಿಕೊಂಡಿದ್ದ ಅನುಭವ ಯಾವತ್ತೂ ಜೀವಂತ.ನಿರಂತರವಾಗಿ ಸ್ಮೃತಿಪಟಲದಲ್ಲಿ ಜೀವಂತವಾಗಿರುವುದು ಕಲೆಯೊಂದೇ ಸರಿ.

ಯಕ್ಷಗಾನದ ಇನ್ನೊಂದು ಪ್ರಮುಖ ವಿಭಾಗವೆಂದರೆ “ತಾಳಮದ್ದಲೆ”.ಇದೊಂದು ವಾದಗಳ ಸರಣಿ,ಪೌರಾಣಿಕ ಕಥನಗಳ ಶುದ್ಧ ವಿಮರ್ಶೆ. ಬಣ್ಣ ಹಚ್ಚದಿದ್ದರೂ ಮಾತಿನಲ್ಲಿಯೇ ಪಾತ್ರಗಳ ಕಲ್ಪನೆಯನ್ನ ಸೃಷ್ಟಿಸಿಬಿಡುವ ಅಗಾಧ ಶಕ್ತಿ ಹೊಂದಿರುವ ಕಲೆ. ಬಯಲಾಟಗಳಿಗಿಂತ ಇವು ವಿಭಿನ್ನವಾದವುಗಳು.ಇಲ್ಲಿ ವೇಷಭೂಷಣ, ನೃತ್ಯ ಮತ್ತು ಭಾವಾಭಿನಯಗಳು ಕಂಡು ಬರುವುದಿಲ್ಲ.ಭಾಗವತಿಕೆ, ಹಿಮ್ಮೇಳ ಹಾಗೂ ಮಾತುಗಾರಿಕೆಗಳು ಮಾತ್ರ ಇಲ್ಲಿರುತ್ತವೆ. ಬಯಲಾಟದಂತೆ ಇಲ್ಲಿಯೂ ಒಂದು ಪ್ರಸಂಗವನ್ನು ಆಯ್ದುಕೊಳ್ಳಲಾಗುತ್ತದೆ.ಭಾಗವತರು ಹಾಡುಗಾರಿಕೆಯ ಮೂಲಕ ಕಥಾನಕವನ್ನು ಹೇಳುತ್ತಾ ಹೋಗುತ್ತಾರೆ. ಇಲ್ಲಿ ಪಾತ್ರಧಾರಿಗಳ ಬದಲು ಅರ್ಥಧಾರಿಗಳಿರುತ್ತಾರೆ. ಅರ್ಥಧಾರಿಗಳು ಹಾಡುಗಾರಿಕೆಯಲ್ಲಿ ಹೇಳಲ್ಪಟ್ಟ ಕಥೆಯ ಭಾಗವನ್ನು ಮಾತುಗಾರಿಕೆಯ ಮೂಲಕ ಚರ್ಚಿಸುತ್ತಾರೆ. ಬಯಲಾಟಕ್ಕೂ ತಾಳ ಮದ್ದಲೆಗೂ ಪ್ರಮುಖ ವ್ಯತ್ಯಾಸವಿರುವುದೇ ಈ ಮಾತುಗಾರಿಕೆಯಲ್ಲಿ.ಬಯಲಾಟಗಳಲ್ಲಿ ನೃತ್ಯ ಮತ್ತು ಅಭಿನಯಗಳೇ ಪ್ರಧಾನ. ಮಾತುಗಾರಿಕೆ ಇದ್ದರೂ ಅದು ಕೇವಲ ಹಾಡುಗಾರಿಕೆಯಲ್ಲಿ ಹೇಳಲ್ಪಟ್ಟ ಕಥಾನಕದ ಸಾರಾಂಶವಷ್ಟೇ ಆಗಿರುತ್ತದೆಯೇ ವಿನಃ ವಾದ ಮಂಡನೆಗೆ ಹೆಚ್ಚು ಅವಕಾಶವಿರುವುದಿಲ್ಲ.ಅದೂ ಅಲ್ಲದೇ ಬಯಲಾಟದಲ್ಲಿ ಬರುವ ಸಂಭಾಷಣೆಗಳನ್ನು ಸಾಮಾನ್ಯವಾಗಿ ಮೊದಲೇ ಸಿಧ್ಧಪಡಿಸಿರುತ್ತಾರೆ. ಹಾಗಾಗಿ ಈ ಮಾತುಗಾರಿಕೆಯು ಭಾಗವತಿಕೆಯಲ್ಲಿ ಹೇಳಲ್ಪಟ್ಟ ಕಥೆಯ ಚೌಕಟ್ಟನ್ನು ದಾಟಿ ಆಚೆ ಹೋಗುವುದಿಲ್ಲ.ಆದರೆ ತಾಳ ಮದ್ದಲೆಗಳು ಹಾಗಲ್ಲ.ಚಂದದ ವಿಮರ್ಷೆ ಮತ್ತು ವಾದವೇ ತಾಳಮದ್ದಲೆಯಲ್ಲಿ ಪ್ರಮುಖವಾದದ್ದು.ಇಲ್ಲಿ ಈ ಭಾಗವತರು ಹೇಳುವ ಒಂದು ಹಾಡಿಗೆ ಇಂತಿಷ್ಟೇ ಸಂಭಾಷಣೆಗಳನ್ನು ಹೇಳಬೇಕು ಎಂದು ಪೂರ್ವ ನಿರ್ಧಾರವಾಗಿರುವುದಿಲ್ಲ. ಭಾಗವತರು ಹಾಡುಗಾರಿಕೆಯ ಮೂಲಕ ವಾದಕ್ಕೆ ಒಂದು ಪೀಠಿಕೆ ಹಾಕಿ ಕೊಡುತ್ತಾರೆ.ನೀವು ಒಂದು ತಾಳಮದ್ದಲೆ ನೋಡಿದರೆ ನಿಮಗೆ ಅಲ್ಲಿ ಭಾಗವತರ ಪ್ರಾಮುಖ್ಯತೆ ಅರ್ಥವಾಗುತ್ತದೆ. ಆಮೇಲೆ ಆ ಕಥಾನಕದ ಭಾಗದ ಮೇಲೆ ಅರ್ಥಧಾರಿಗಳಿಂದ ವಾದ ಆರಂಭವಾಗು ತ್ತದೆ. ಈ ವಾದ ಸಂಧರ್ಭಕ್ಕನುಗುಣವಾಗಿ ಪ್ರಸಂಗದಿಂದ ಪ್ರಸಂಗಕ್ಕೆ ಬದಲಾಗುತ್ತಲೂ ಹೋಗಬಹುದು. ವಾದವೇ ತಾಳ ಮದ್ದಲೆಗಳ ಜೀವಾಳವಾಗಿರುತ್ತದೆ. ಬಹುಚಂದದ ವಾದಗಳ ಸರಣಿಯೇ ತಾಳಮದ್ದಲೆ.ಮಲೆನಾಡು ಮತ್ತು ಕರಾವಳಿಯಲ್ಲಿ ತಾಳಮದ್ದಲೆ ಮತ್ತು ಯಕ್ಷಗಾನಕ್ಕೆ ಸಮನಾದ ಪ್ರೇಕ್ಷಕರಿದ್ದಾರೆ.ಉಮಾಕಾಂತ ಬಟ್ಟರು,ಜಬ್ಬಾರ್ ಸುಮೊ,ವಾಸುದೇವ ರಂಗ ಬಟ್ಟರು ಹೀಗೆ ಅನೇಕಾನೇಕರು ಪ್ರಮುಖ ಅರ್ಥಧಾರಿಗಳಾಗಿದ್ದಾರೆ.ಬಯಲಾಟಗಳಲ್ಲಿ ಬಣ್ಣ ಹಚ್ಚುವವರೂ ಕೂಡ ಅರ್ಥಧಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ.ಹಗಲಿಡೀ ದುಡಿದ ಮನಸ್ಸುಗಳಿಗೆ ರಾತ್ರಿಯಿಡಿ ನೆಮ್ಮದಿ ನೀಡುತ್ತಿದ್ದುದು ಇದೇ ಯಕ್ಷಗಾನ ಬಯಲಾಟ ಮತ್ತು ತಾಳಮದ್ದಲೆ.

ಒಟ್ಟಿನಲ್ಲಿ ಮತ್ತೆ ಮತ್ತೆ ನೆನಪಾಗುವುದು ಅಪ್ಪನ ಹೆಗಲು, ಅಮ್ಮನ ಮಡಿಲು ಮತ್ತು ಯಕ್ಷಗಾನ.ದೂರ ಎಷ್ಟೇ ಆದರೂ ನಡೆದೇ ನನ್ನನ್ನ ಹೆಗಲ ಮೇಲೆಯೇ ಹೊತ್ತು ಕರೆದುಕೊಂಡು ಹೋಗುತ್ತಿದ್ದೆಯಲ್ಲ ಅಪ್ಪ,ನಿನಗೆ ಹೆಗಲು ನೋಯುತ್ತಿರಲಿಲ್ಲವೇ?ಆದರೆ ನನಗೊಂದು ಅಮೂಲ್ಯ ನೆನಪನ್ನ ಸೃಷ್ಟಿಸಿದೆ.ಬದುಕಿನ ಅದೆಷ್ಟೋ ಕಷ್ಟಗಳನ್ನ ಬದಿಗೊತ್ತಿ ನನಗೊಂದು ಯಕ್ಷಗಾನ ತೋರಿಸುತ್ತದ್ದೆ ನೀನು.ನಿನ್ನ ಹೆಗಲೇರಿ ಹೋಗಿ ಅದೆಷ್ಟೋ ಯಕ್ಷಗಾನಗಳಲ್ಲಿ ಕೇವಲ ಹಾಸ್ಯದೃಷ್ಯ ನೋಡಿ ನಿದ್ರಿಸಿಬಿಡುತ್ತಿದ್ದೆನಲ್ಲ ಆಗಲೂ ನಿನಗೆ ಬೇಜಾರಾಗಲೇ ಇಲ್ಲವೇನೋ.’ಈ ಭೂತೆನ್ಮ ಸ್ವರಂಗೇಳ್ದೊಡೆ ಪೊರಮಡುವನಲ್ಲಂ ‘ಎಂಬ ಭೀಮಸೇನನ ಗತ್ತಿನ ಸ್ವರದ ಹಳಗನ್ನಡ ಪದ್ಯ  ನಿನ್ನ ಕಂಠದಿಂದ ಬಂದರೇ ಚಂದ.ಅಂದು ಹೇಳಿದ್ದೆಯಲ್ಲ ಭೀಮ ಬಕಾಸುರನ ಯುದ್ಧ ಕಥೆ ಅದಿನ್ನೂ ಜೀವಂತ ಅಪ್ಪ..ಅದೊಂದು ಚಂದದ ಕಲ್ಪನೆಯನ್ನ ಯಕ್ಷಗಾನದ ಬಗ್ಗೆ ನೀಡಿ ಕಲ್ಪನೆಗೂ ಮೀರಿದ್ದನ್ನ ನನಗೆ ತೋರಿಸಿದ್ದಕ್ಕೆ ನಿನಗೆಷ್ಟು ಧನ್ಯವಾದ ಸಲ್ಲಿಸಲಿ.ನೀ ಯಕ್ಷಗಾನವನ್ನ ಬಿಡದೇ’ ಆಸ್ವಾದಿಸುತ್ತಿದ್ದರೇ ರಂಗದ ಮೇಲೆ ಬರುತ್ತಿದ್ದ ಪಾತ್ರಗಳ ಬಗ್ಗೆ ಸ್ವಲ್ಪವೂ ತಿಳಿಯದ ನಾನು ಪದೇ ಪದೇ “ಅಪ್ಪ ಅವ್ಯಾರ?” ಎಂಬ ಪ್ರಶ್ನೆಯನ್ನ ಕೇಳುತ್ತಿದ್ದರೆ ನೀನು ಸ್ವಲ್ಪವೂ ಸಿಟ್ಟುಮಾಡದೇ ಪಾತ್ರ ಪರಿಚಯ ಮಾಡಿಸುತ್ತಿದ್ದೆಯಲ್ಲ ಅದಿನ್ನೂ ನೆನಪಿದೆ ಅಪ್ಪಾ. ಒಟ್ಟಿನಲ್ಲಿ ಚಂದದ ಬಾಲ್ಯವನ್ನ ನನಗೆ ನಿರ್ಮಿಸಿಕೊಟ್ಟಿದ್ದಕ್ಕೆ ಪ್ರಣಾಮಗಳು ನಿಮಗೆ.

ಯಕ್ಷರಂಗವಿದು ಉನ್ನತ ಕಲೆಯ ಪ್ರತಿಫಲನವು ಸವಿದು ಅನುಭವಿಸಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!