ಅಂಕಣ

ಹಳ್ಳಿಯೆಂದರೆ…ಪಟ್ಟಣಿಗರ ಅನ್ನದ ಬಟ್ಟಲು.!

ಆ ಅಂಗಡಿಯಾತ ತೀರಾ ಕೆಟ್ಟು ಹೋಗಿದ್ದ ಮೊಬೈಲ್ ಒಂದಕ್ಕೆ ತೇಪೆ ಹಾಕಿ ‘ಯಾರಾದರೂ ಹಳ್ಳಿಯವರು ಬಂದರೆ ಹಿಡಿಸಿಬಿಟ್ಟರಾಯಿತು’ ಎಂದು ತನ್ನ ಶೊಕೇಶ್ ನಲ್ಲಿಟ್ಟುಬಿಟ್ಟ.! ಆಕೆ ನೀಟಾಗಿ ತಲೆಬಾಚಿ, ಹೂ ಮುಡಿದು, ಕೈತುಂಬಾ ಬಳೆಯಿಟ್ಟು ಲಜ್ಜೆಯಿಂದ ಹೆಜ್ಜೆಯಿಡುತ್ತಿದ್ದರೆ ಆಕೆಯ ಪಟ್ಟಣದ ಗೆಳತಿಯರು ಸುತ್ತುವರಿದು ‘ಛೀ… ಇದೇನಿದು ಹಳೆಯ ಕಾಲದ ಹಳ್ಳಿಯವರ ತರಹ.. ನಿನ್ನದೊಂದು ಅವಸ್ಥೆ?’ ಎಂದು ಗೇಲಿ ಮಾಡಿಬಿಟ್ಟರು.! ಆತ ಅಪರೂಪಕ್ಕೊಮ್ಮೆ ಪಟ್ಟಣದ ಗೆಳೆಯರನ್ನೆಲ್ಲಾ ತನ್ನ ಹಳ್ಳಿಯ ಮನೆಗೆ ಕರೆದೊಯ್ದಿದ್ದ, ಹಳ್ಳಿಯ ಕಾಡಿನ ನಡುವೆ ಉಬ್ಬುತಗ್ಗಿನ ರಸ್ತೆಯನ್ನೆಲ್ಲಾ ಹತ್ತಿಳಿದ ಅವನ ಮಿತ್ರರು ‘ಅಯ್ಯೋ.. ಇದೆಂತಹ ಅಂಡಮಾನ್.!’ ಅಂತ ಉದ್ಗರಿಸಿ ಮೂದಲಿಸಿಬಿಟ್ಟರು.! ಅವರೆಲ್ಲರ ಮಾತಿನ ವರಸೆಯಲ್ಲಿ ಹಳ್ಳಿಯ ಬಗ್ಗೆ ಅಸಡ್ಡೆಯಿತ್ತು.!

ಯಾಕೆ ಹೀಗೆ..? ಹಳ್ಳಿ ಮತ್ತು ಪೇಟೆಯ ವಿಚಾರ ಬಂದಾಗ ಹಳ್ಳಿಯನ್ನು ಮತ್ತು ಹಳ್ಳಿಗರನ್ನು ತಾತ್ಸಾರ ಭಾವದಿಂದ ಕಾಣುವುದು ಬಹುತೇಕ ಪೇಟೆಯ ಮಂದಿಯ ಅಭ್ಯಾಸ. ಇಂತಹ ಅಸಡ್ಡೆಯ ಮನೋಭಾವದಿಂದಲೇ ಹಳ್ಳಿಯ ಯುವಕರು ಉದ್ಯೋಗದ ನೆಪದಲ್ಲಿ ಪೇಟೆಯತ್ತ ಮುಖ ಮಾಡುತ್ತಿದ್ದಾರೆ. ಅಥವಾ ವಿದ್ಯಾವಂತರೆನಿಸಿಕೊಂಡವರು ಹಳ್ಳಿಯಲ್ಲಿ ಉಳಿದುಬಿಡುವುದು ತಮ್ಮ ಘನತೆಗೆ ಕುಂದೆಂಬ ಕೀಳರಿಮೆಯ ಭಾವನೆ ಅವರಲ್ಲಿ ಬಲವಾಗಿ ಬೇರೂರುತ್ತಿದೆ. ಮನೆಯಲ್ಲಿ ಕೊಳೆತು ಹೋಗುವಷ್ಟು ಆಸ್ತಿಯಿದ್ದರೂ ಕೂಡ ತಾಂತ್ರಿಕ-ವೈದ್ಯಕೀಯ ಪದವಿ ಗಳಿಸಿದವರಿಂದ ಹಿಡಿದು ಅರ್ಧದಲ್ಲೇ ಶಾಲೆಗೆ ಬೆನ್ನು ಹಾಕಿದವರ ತನಕ ಉದ್ಯೋಗಕ್ಕಾಗಿ ಕಣ್ಣು ಹಾಯಿಸುವುದು ಬೆಂಗಳೂರಿನಂತಹ ಮಹಾನಗರಕ್ಕೆ. ತನ್ನ ಮಗನೋ ಮಗಳೋ ಪೇಟೆಯಲ್ಲಿ ಉದ್ಯೋಗದಲ್ಲಿದ್ದಾರೆಂದರೆ ಆ ತಂದೆ ತಾಯಿಗೆ ಅದೇನೋ ಘನತೆಯ ಸಂಕೇತ. ಆದರೆ ಪೇಟೆ ಮತ್ತು ಹಳ್ಳಿಯ ಜೀವನವನ್ನು ತುಲನೆ ಮಾಡಿದಾಗ ಕೇವಲ ಉದ್ಯೋಗಕ್ಕಾಗಿ ಪಟ್ಟಣದಲ್ಲಿ ನೆಲೆಸಿರುವಂತಹ ಕೆಲವು ನಗರವಾಸಿಗಳ ಸಂಪಾದನೆ ಅವರ ನಗರಜೀವನದ ಖರ್ಚುವೆಚ್ಚಕ್ಕೆ, ಊಟ ತಿಂಡಿಗೇ ಸರಿಹೊಂದುತ್ತದೆ. ಹಾಗೆ ನೋಡಿದರೆ ನೆಮ್ಮದಿಗೆಂದು ಅತ್ಯಾಧುನಿಕ ಸೌಕರ್ಯವನ್ನು ಹೊಂದಿಸಿಕೊಂಡಂತಹ ಯಾವ ಪಟ್ಟಣಿಗರಲ್ಲೂ ನೀವು ನೆಮ್ಮದಿಯಿಂದ ಬದುಕುತ್ತಿದ್ದೀರಾ ಎಂದರೆ ನಕಾರಾತ್ಮಕ ಉತ್ತರಗಳೇ ಹೆಚ್ಚು. ಪ್ರತಿಷ್ಟೆಯ ಬೆನ್ನು ಹಿಡಿದು ಪೇಟೆಯತ್ತ ಆಕರ್ಷಿತರಾಗುವ ಜನ ಒಂದರ್ಥದಲ್ಲಿ ತಮ್ಮ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ದಿನಬೆಳಗಾದರೆ ಕಿವಿ ತಮ್ಮಟೆಯನ್ನು ತೂರಿ ಬರುವಂತಹ ಕರ್ಕಶ ಶಬ್ದವನ್ನು ಹೊರಡಿಸುವ ವಾಹನಗಳು ಹಾಗೂ ಯಂತ್ರಗಳು, ಸ್ವಚ್ಛಂದವಾಗಿ ಉಸಿರಾಡುವುದಕ್ಕೂ ಬಿಡದ ವಿಷಪೂರಿತ ವಾಯು, ಶುಭ್ರ ನೀರನ್ನು ಕುಡಿಯೋಣವೆಂದರೆ ಕಲುಷಿತಗೊಂಡ ನೀರು, ಆಗಿಂದಾಗ್ಗೆ ತಲೆತಿನ್ನುವ ನಾನಾ ಒತ್ತಡಗಳು, ಆ ಮೂಲಕ ಒತ್ತಡದ ದಿನಚರಿಯ ನಡುವೆ ಸಾಗಿಸುವ ಯಾಂತ್ರೀಕೃತ ಬದುಕು, ಇನ್ಯಾರದೋ ಖುಶಿಗೋಸ್ಕರ ತಮ್ಮತನವನ್ನು ಒತ್ತೆಯಿಟ್ಟು ಮುಖವಾಡ ತೊಟ್ಟಂತಿರುವ ಮನುಷ್ಯರು, ದಿನದಿನವೂ ಹುಟ್ಟಿಕೊಳ್ಳುವ ಹೊಸ ಹೊಸ ಕಾಯಿಲೆಗಳು..!

ಆದರೆ ಹಳ್ಳಿಯ ಹಸಿರು ಕಾನನದ ಸ್ವಚ್ಛಂದ ಪರಿಸರದಲ್ಲಿ ಶಾಂತಿಯಿದೆ, ಸೌಹಾರ್ದತೆಯಿದೆ, ನೆಮ್ಮದಿಯಿದೆ. ತುಂಬಿ ಹರಿವ ತೊರೆ, ಬೆಟ್ಟದಿಂದ ಧುಮ್ಮಿಕ್ಕಿ ಭೂಮಿತಾಯಿಗೆ ಮುತ್ತಿಕ್ಕುವ ಜಲಪಾತಗಳು, ಹಕ್ಕಿಗಳ ಕಂಠದಿಂದ ಹೊರಹೊಮ್ಮುವ ಸಂಗೀತದ ಸುಧೆ, ನೆಲಕ್ಕೆ ಹಬ್ಬಿರುವ ವಿಶಾಲವಾದ ವೃಕ್ಷವಲ್ಲಿಗಳ ಹಸಿರು ಹೊದಿಕೆ.. ಹೀಗೆ ಪ್ರಕೃತಿಯ ಸಹಜ ಸೌಂದರ್ಯವೆಲ್ಲವೂ ನಿಸರ್ಗದ ಮಡಿಲಲ್ಲಿ ಬದುಕುವ ಹಳ್ಳಿಗನೊಬ್ಬನ ಮನಸ್ಸಿಗೂ ದೇಹಕ್ಕೂ ಮುದನೀಡುತ್ತವೆ. ಪಟ್ಟಣದಲ್ಲಾದರೆ ಇಂತಹ ಪ್ರಕೃತಿ ಸೌಂದರ್ಯ ಗೋಡೆಯ ಮೇಲೆ ಚಿತ್ರಿಸಿದ ನಿಸರ್ಗದ ಚಿತ್ರಪಟಕ್ಕೋ, ಅಥವಾ ಮನೆಮುಂದೆ ಕೃತಕವಾಗಿ ನಿರ್ಮಿಸಿದ ಹೂದೋಟ, ಕಾರಂಜಿಗಳಿಗೋ ಸೀಮಿತವಾಗಿಬಿಡುತ್ತದೆ. ಮಾನವ ಪ್ರಕೃತಿಯಿಂದ ನಕಲು ಮಾಡಿ ಅದೆಷ್ಟೇ ಕೃತಕ ಸೌಂದರ್ಯವನ್ನು ಸೃಷ್ಟಿ ಮಾಡಿದರೂ ಕೂಡ ಹಳ್ಳಿಯ ಪ್ರಶಾಂತ ಪರಿಸರದ ಚೆಲುವಿಗೆ, ಸೃಷ್ಟಿಯ ನೈಜ ಸೊಬಗಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲ.!

ಆಹಾರದ ವಿಚಾರಕ್ಕೆ ಬರುವುದಾದರೆ ಕೆಲವು ವಾಣಿಜ್ಯ ಉದ್ದೇಶಗಳಿಗಾಗಿ ಅಧಿಕ ಇಳುವರಿಯ ಆಸೆಯಿಂದ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಸುತ್ತಾರಾದರೂ ತಮ್ಮ ಸ್ವಂತಕ್ಕಾಗಿ ಹಳ್ಳಿಗಳಲ್ಲಿ ಇಂದಿಗೂ ಕೂಡ ಪರಿಶುದ್ಧ ಹಾಗೂ ಸ್ವಾದಿಷ್ಟವಾದ ಹಣ್ಣು, ಸೊಪ್ಪು, ತರಕಾರಿ, ಧಾನ್ಯಗಳನ್ನೇ ಬೆಳೆಸುತ್ತಿದ್ದಾರೆ. ಆದರೆ ಪಟ್ಟಣಕ್ಕೆ ಬಂದಾಗ ಆ ಆಹಾರ ಕೆಡದಂತೆ ಅದಕ್ಕೆ ವಿಷಪೂರಿತ ರಾಸಾಯನಿಕಗಳನ್ನು ಬೆರೆಸಿ ಅಥವಾ ಆಧುನಿಕ ತಿಂಡಿ ತಿನಿಸುಗಳನ್ನಾಗಿ ಪರಿವರ್ತಿಸಿ ವಿಷವನ್ನೇ ಸೇವಿಸುವ ಮಂದಿಯನ್ನು ಕಾಣಬಹುದು. ಅತೀ ಹೆಚ್ಚು ಖಾಯಿಲೆಗಳು ಹುಟ್ಟಿಕೊಳ್ಳುವುದೇ ನಗರಪ್ರದೇಶದ ವಿಷಯುಕ್ತ ಆಹಾರದಿಂದ.

ನಗರೀಕರಣದ ಪ್ರಭಾವದಿಂದಾಗಿ ಮಾನವೀಯ ಸಂಬಂಧಗಳು ಮಾನವೀಯ ಮೌಲ್ಯಗಳು ಕೂಡ ಅಧಃಪತನದತ್ತ ಸಾಗುತ್ತಿದೆ. ಪ್ರೀತಿ, ಆತ್ಮೀಯತೆ, ಸ್ನೇಹ, ಭಾಂಧವ್ಯಗಳು ವ್ಯಾವಹಾರಿಕ ಹಾಗೂ ಪ್ರತಿಷ್ಟೆಯ ಆಧಾರದಲ್ಲಿ ಬದಲಾಗುತ್ತಿದೆ. ತನ್ನ ಮನೆಯ ಗೋಡೆಯ ಆ ಬದಿಗಿರುವ ವ್ಯಕ್ತಿಯ ಪರಿಚಯ ಬಿಡಿ, ಕನಿಷ್ಟ ಹೆಸರೂ ಕೂಡ ನಮಗೆ ತಿಳಿದಿರುವುದಿಲ್ಲ. ಪಕ್ಕದ ಮನೆಯವರಲ್ಲಿ ನಗಬೇಕಿದ್ದರೂ, ಮಾತನಾಡಬೇಕಿದ್ದರೂ ಅದಕ್ಕೆ ಏನಾದರೂ ಕಾರಣವಿರಬೇಕು.! ಅಥವಾ ತಮ್ಮ ಅಂತಸ್ತಿಗೆ ಸರಿಸಮಾನರಾಗಿರಬೇಕು. ಅಂತಃಕರಣದಿಂದ ಹೊರಹೊಮ್ಮುವ ನೈಜ ಸಂಬಂಧಗಳಿಗೆ ಅಲ್ಲಿ ಬೆಲೆಯಿಲ್ಲ. ಆದರೆ ಹಳ್ಳಿಗಳ ವಿಚಾರ ಹಾಗಲ್ಲ. ಹತ್ತಾರು ಮೈಲಿಗಳ ದೂರದಲ್ಲಿರುವ ವ್ಯಕ್ತಿಯೊಬ್ಬನ ಹೆಸರು, ಪರಿಚಯ, ಉದ್ಯೋಗ ಇತ್ಯಾದಿ ಮಾಹಿತಿಗಳು ಪ್ರತೀ ಹಳ್ಳಿಗನಿಗೂ ತಿಳಿದಿರುತ್ತದೆ. ಪೇಟೆಯ ಒತ್ತಡದ ಜೀವನದಲ್ಲಿ ಯಾರೊಂದಿಗೂ ತಾಳ್ಮೆಯಿಂದ ಆತ್ಮೀಯತೆಯಿಂದ ಮಾತನಾಡುವ ಸೌಜನ್ಯ ಯಾರಿಗೂ ಕೂಡ ಇರುವುದಿಲ್ಲ. ನಗರೀಕರಣದ ಪ್ರಭಾವದಿಂದಾಗಿಯೇ ದೊಡ್ಡಮಟ್ಟದ ಕಳ್ಳತನ, ಅವ್ಯವಹಾರದ ಜಾಲ ಬೆಳೆಯುತ್ತಿದೆ. ಅದರ ಪರಿಣಾಮವಾಗಿಯೇ ಅಪರಿಚಿತರನ್ನೆಲ್ಲಾ ಸಂಶಯದ ದೃಷ್ಟಿಯಿಂದಲೇ ನೋಡುತ್ತಾ ಭಯಭೀತರಾಗಿ ಬದುಕುವಂತಹ ಧಾರುಣ ಸ್ಥಿತಿ ಪಟ್ಟಣಿಗರದ್ದಾಗಿದೆ. ಆದರೆ ಹಳ್ಳಿಗಳಲ್ಲಿ ಇವತ್ತಿಗೂ ಕೂಡ ಅಪರಿಚಿತರನ್ನು ಆತ್ಮೀಯತೆಯಿಂದ ಮಾತನಾಡಿಸಿ ಮನೆಗೆ ಬಂದವರನ್ನು ಸತ್ಕರಿಸುವ ದೊಡ್ಡಗುಣ ಉಳಿದುಕೊಂಡಿದೆ. ಇದಕ್ಕೆ ಹೊರತಾಗಿ ಹಳ್ಳಿ ಜನರೂ ಕೂಡ ಬದಲಾಗಿದ್ದಾರೆಂದರೆ ಅದು ಪಟ್ಟಣದ ಕೊಡುಗೆಯೇ ಸರಿ.

ಪೇಟೆ ಅದೆಷ್ಟು ಬೆಳೆದರೂ ಕೂಡ ಹಳ್ಳಿಯ ಆಧಾರವಿಲ್ಲದೆ ಅದಕ್ಕೆ ಅಸ್ತಿತ್ವವಿಲ್ಲ. ಅದೆಷ್ಟು ಬೃಹತ್ತಾದ ಕಾರ್ಖಾನೆಗಳಿದ್ದರೂ ಕೂಡ ಅದರಲ್ಲಿ ನಾವು ತಿನ್ನುವ ಆಹಾರವನ್ನು ಸಂಸ್ಕರಿಸಬಹುದೇ ಹೊರತು ಬೆಳೆ ತೆಗೆಯಲು ಸಾಧ್ಯವಿಲ್ಲ. ಕಂಪ್ಯೂಟರ್ ತಂತ್ರಜ್ಞಾನ ಅದೆಷ್ಟೇ ಮುಂದುವರಿದಿದ್ದರೂ ಕೂಡ ಕಂಪ್ಯೂಟರ್ ಗುಂಡಿಯನ್ನು ಒತ್ತುವ ಮೂಲಕ ಅದರ ಪರದೆಯ ಮೇಲೆ ನಾವು ತಿನ್ನುವ ಆಹಾರವನ್ನು ಉತ್ಪಾದಿಸಲು ಸಾಧ್ಯವಿಲ್ಲ.! ಅದಕ್ಕೆ ಹಳ್ಳಿಯ ಹಸನಾದ ನೆಲ ಬೇಕು. ಆ ನೆಲಕ್ಕೆ ಹಳ್ಳಿಯ ರೈತನೊಬ್ಬನ ಬೆವರಹನಿಯ ಸ್ಪರ್ಶವಾಗಬೇಕು. ಪೇಟೆ ಬೆಳೆದಂತೆಲ್ಲ ನಮ್ಮ ದೇಶೀಯ ಸಂಸ್ಕೃತಿಯ ಜಾಗವನ್ನು ಪಾಶ್ಚಾತ್ಯ ಸಂಸ್ಕೃತಿ ಆಕ್ರಮಿಸಿಕೊಳ್ಳುತ್ತಿದೆ. ಆಧುನಿಕತೆಯ ಸ್ಪರ್ಶದಿಂದ ಪ್ರತೀ ಹಬ್ಬಗಳು ಸಾಂಪ್ರದಾಯಿಕ ಮೌಲ್ಯ ಕಳೆದುಕೊಳ್ಳುತ್ತಿವೆ. ಹಳ್ಳಿಯ ಎಲ್ಲಾ ಆಚರಣೆಗಳ ಹಿಂದಿರುವ ನಂಬಿಕೆಗಳನ್ನು ಮೂಢನಂಬಿಕೆಯೆಂದು ಜರೆಯುವಂತಿಲ್ಲ, ಅದರ ಹಿಂದೆ ವಿಜ್ಞಾನವಿದೆ. ಮುಖ್ಯವಾಗಿ ಒಂದು ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಹಳ್ಳಿಗಳ ಕೊಡುಗೆ ಅತ್ಯಂತ ಅಮೂಲ್ಯ. ಇಷ್ಟೆಲ್ಲಾ ಬಹುವಿಶೇಷತೆಗಳಿಂದ ಕೂಡಿದ ಕೊಡುಗೆಯನ್ನು ಕೊಡುವ ಹಳ್ಳಿಗರನ್ನು ನಿಕೃಷ್ಟವಾಗಿ ಕಾಣುತ್ತಾ ನಾವೇ ತಿಳಿದವರು ಮುಂದುವರಿದವರು ನಾಗರಿಕರು ಎಂದೆಲ್ಲಾ ಬೀಗುವ ಪಟ್ಟಣಿಗರ ಮನಸ್ಥಿತಿಗೆ ಏನೆನ್ನೋಣ.? ಎಲ್ಲರೂ ವೈದ್ಯರು, ಇಂಜಿನಿಯರುಗಳಾಗಿ ಪಟ್ಟಣದಲ್ಲಿ ಕುಳಿತುಬಿಟ್ಟರೆ ಅನ್ನ ನೀಡುವ ಹಳ್ಳಿಯ ನೆಲದ ಅಕ್ಷಯ ಪಾತ್ರೆ ಬರಡಾಗದೇ.? ಎತ್ತರೆತ್ತರ ಕಟ್ಟಡದಲ್ಲಿ, ಹವಾ ನಿಯಂತ್ರಿತ ಕೊಠಡಿಯೊಳಗೆ ಕುಬ್ಜ ಮನಸ್ಕರಾಗಿ ಕುಳಿತಿರುವ ನಗರವಾಸಿಗಳಿಗೂ ಅನ್ನದಾತನಾಗಿರುವ ಹಳ್ಳಿಗನೊಬ್ಬ ಅಜ್ಞಾನಿಯಲ್ಲ, ಆತ ನಿಜಕ್ಕೂ ಕಾಯಕಯೋಗಿ.! ಪಟ್ಟಣದ ಸ್ಪರ್ಶವಿಲ್ಲದೆಯೂ ಹಳ್ಳಿಯಲ್ಲಿ ಜೀವನ ಸಾಗಿಸಬಹುದು. ಆದರೆ ಹಳ್ಳಿಗಳ ಅಸ್ಥಿತ್ವವಿಲ್ಲದೆ ಪೇಟೆ ಉಳಿದೀತೆ.? ಹಳ್ಳಿಯೆಂದರೆ ಬರೀ ಮೂಢನಂಬಿಕೆ, ಕುಂದುಕೊರತೆಗಳಿಂದ ತುಂಬಿಕೊಂಡು ಆಧುನಿಕತೆಯ ಗಂಧಗಾಳಿಯಿಲ್ಲದ ಭೂಪ್ರದೇಶವಲ್ಲ, ಬದಲಾಗಿ ಅದು ಪಟ್ಟಣಿಗರ ಅನ್ನದ ಬಟ್ಟಲು…! ದೇಶದ ಸಂಸ್ಕೃತಿಯ ತೊಟ್ಟಿಲು..!

ಹಳ್ಳಿ ಮತ್ತು ಹಳ್ಳಿಗರನ್ನು ಅಪಹಾಸ್ಯ ಮಾಡಿದರೆ ನಾವು ಉಣ್ಣುವ ಬಟ್ಟಲನ್ನು ಅಪಮಾನಿಸಿದಂತೆ..!

Facebook ಕಾಮೆಂಟ್ಸ್

ಲೇಖಕರ ಕುರಿತು

Udayabhaskar Sullia

ಮಡಿಕೇರಿ ತಾಲೂಕಿನ ಪೆರಾಜೆಯಲ್ಲಿ ಜನಿಸಿದ್ದು ಪ್ರಸ್ತುತ ಸುಳ್ಯದಲ್ಲಿ ವಾಸ್ತವ್ಯ. ಜೀವನ ನಿರ್ವಹಣೆಗಾಗಿ ಸ್ವ ಉದ್ಯೋಗ ಹೊಂದಿರುತ್ತೇನೆ. ದೇಶಭಕ್ತಿಯ ಭಾಷಣ, ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದು, ಹಳೆಯ ಸಿನೆಮಾ ಹಾಡು, ಭಾವಗೀತೆ, ಭಕ್ತಿಗೀತೆಗಳನ್ನು ಆಲಿಸುವುದು, ಸಮಾಜಸೇವೆ, ಸದ್ವಿಚಾರ ಪ್ರಸಾರ... ಇವು ನನ್ನ ಆಸಕ್ತಿಯ ಕ್ಷೇತ್ರಗಳು. ಭಜನೆ ಹಾಡುವುದು, ಕವನ ರಚನೆ, ಸಾಮಾಜಿಕ-ದೇಶಭಕ್ತಿ- ಸಂಸ್ಕೃತಿಗಳ ಕುರಿತಾದ ಚಿಕ್ಕಪುಟ್ಟ ಲೇಖನಗಳನ್ನು ಬರೆಯುವುದು ಹಾಗೂ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಸದ್ಗ್ರಂಥಗಳ ಅಧ್ಯಯನ.. ಇವು ನನ್ನ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!