ಆ ಹನಿಯಲ್ಲೇನೋ ಭಾವವಿದೆ.ಮೈ ನೆನೆಯದಿದ್ದರೂ ಮನಸ್ಸು ಪ್ರತೀಕ್ಷಣವೂ ತೋಯ್ದಾಡುವಂತೆ ಮಾಡುವ ವಿಪರೀತ ಶಕ್ತಿಯಿದೆ.ಗೊತ್ತಿಲ್ಲ,ಅಂದೇಕೋ ಮಳೆಯನ್ನು ನೋಡುತ್ತಲೇ ಇದ್ದುಬಿಡೋಣ ಅನ್ನಿಸುತ್ತಿತ್ತು.ಬಿಡದೇ ಸುರಿಯುತ್ತಿರುವ ಈ ಜಢಿ ಮಳೆಯ ಹನಿಗಳಲ್ಲಿ ಆ ದೇವರು ಮನುಷ್ಯನ ಭಾವನೆಗಳನ್ನು,ಕನಸುಗಳನ್ನು,ನೆನಪುಗಳನ್ನು ತುಂಬಿ ಕಳುಹಿಸಿದ್ದಾನೆನೋ ಅನ್ನಿಸುತ್ತಿದೆ.ನಾ ಕಲಿತ ಶಾಲೆ,ಓಡಾಡಿದ ಹಾದಿ,ಕುಣಿದಾಡಿದ ಬೆಟ್ಟ ಬಯಲುಗಳು,ಹರಿಯುತ್ತಿರುವ ಆ ನೀರಿನಲ್ಲಿ ಆಡುತ್ತಿದ್ದ ಬಗೆಬಗೆಯ ಆಟಗಳು ಅದೇಕೋ ವಿಪರೀತ ಅನ್ನಿಸುವಷ್ಟು ನನ್ನನ್ನು ಹಂತ ಹಂತವಾಗಿ ಆವರಿಸುತ್ತಿದೆ.ಆ ಮಳೆಹನಿ ಇಡೀ ಧರೆಯನ್ನ ಆವರಿಸಿದಂತೆ ಆ ನೆನಪುಗಳು ಆವರಿಸುತ್ತಿದೆ.ದೂರದಲ್ಲಿ ಮಳೆ ಹನಿ ಮತ್ತು ಕೆಸುವಿನೆಲೆಯ ನಡುವಿನ ಆಟ ನೋಡಿದರೆ ಮನಸ್ಸು ಭಾರವಾಗಿತ್ತು.ಆದರೂ ಅದನ್ನ ನೋಡಲೇಕೋ ಚಂದ ಅನ್ನಿಸುತ್ತಿತ್ತು.
ಹೌದು ನೆನಪುಗಳಲ್ಲಿ ನನ್ನೂರು ಇನ್ನೂ ಜೀವಂತವಾಗಿದೆ, ಹಾಗಾಗಿಯೇ ಅದು ಈಗಲು ಸುಂದರ. ನೆನಪುಗಳು ಕಲ್ಲಿನಂತೆಯೋ ಅಥವಾ ಅದೊಂದು ಚಂದದ ನಂಬಿಕೆಯ ಪ್ರತಿಬಿಂಬವೋ ತಿಳಿಯಲಾಗುತ್ತಿಲ್ಲ.ಆ ಹನಿ ಸೃಷ್ಟಿಸಿದ್ದು ದೇವರೇ,ಈ ಮನುಷ್ಯನನ್ನು ಸೃಷ್ಟಿಸಿದ್ದೂ ದೇವರೇ ಆದರೂ ಹನಿಗಳಿಗಿರುವ ಶಕ್ತಿ ಮನುಷ್ಯನಿಗೆ ಕೊಡಲೇ ಇಲ್ಲ.
ಆದರೆ ಅದೇ ನನ್ನ ಮನಸ್ಸು ಸ್ವಲ್ಪ ಬದುಕಿನ ಫಿಲೋಸಫಿಯ ಕಡೆ ವಾಲಿತ್ತು.”ಭಾವಜೀವಿಯಾಗಿ ಬದುಕಬೇಡ ಮನುಷ್ಯ ಪೂರ್ತಿಯಲ್ಲದಿದ್ದರೂ ಸ್ವಲ್ಪವಾದರೂ commercial ಆಗೋ,ನಾಶವಾಗಿಬಿಡುತ್ತೀಯ” ಯಾರೋ ಮಾತಾಡಿದಂತಾಗಿತ್ತು ಆದರೆ ಅದು ಇನ್ನೊಂದು ಸೃಷ್ಟಿಯಲ್ಲ ನನ್ನೊಳಗಿನ ಇನ್ನೊಂದು ಮುಖ ಎಂಬುದನ್ನ ಅರಿಯಲು ತುಂಬ ಸಮಯ ಬೇಕಾಗಲೇ ಇಲ್ಲ.ಇಲ್ಲ, ಭಾವಜೀವಿಯಾಗಿ ಬದುಕುವುವನು ಜೀವನದ ಪ್ರತೀ ಕ್ಷಣವನ್ನೂ ಅನುಭವಿಸುತ್ತಾನೆ,ತೀರ ಚಿಕ್ಕದೆನ್ನಬಹುದಾದ ವಿಷಯವು ಅವರಿಗೆ ಪ್ರಮುಖವಾಗುತ್ತಾ ಸಾಗುತ್ತದೆ.ಹೀಗೆಂದು ನನ್ನಲ್ಲಿ ಪ್ರಶ್ನೆ ಹುಟ್ಟುಹಾಕಿದ್ದ ಆ ‘ನಾನು’ ಎಂಬ ಅಹಂ ಗೆ ಉತ್ತರಿಸಿದಂತೆ ಅನ್ನಿಸಿತ್ತು.ಹೌದು ನನಗೆ ನಾನೇ ಉತ್ತರಿಸಿಕೊಳ್ಳಲಾಗುತ್ತಿಲ್ಲವಲ್ಲ ಎಂದು ಒಂದು conclusion ಗೆ ಬಂದುಬಿಡಲಾ?ಏನೂ ಬಗೆಹರಿಯುತ್ತಿರಲಿಲ್ಲ.ವಿಚಿತ್ರ ಎನ್ನುವಂತೆ ಬದುಕಲು ಸಂಬಂದಗಳು,ಹೇರಿಕೆಗಳು,ಒತ್ತಡಗಳು,ಜವಾಬ್ದಾರಿಗಳು ಇವೆಲ್ಲವೂ ನಮ್ಮನ್ನ ಹಂತ ಹಂತವಾಗಿ ಬಂಧಿಸಿರುತ್ತದೆ.ನಾವು ನಮ್ಮದೆಂದುಕೊಂಡಿರುವ ಈ ಜೀವನದಲ್ಲಿ ಅದೆಷ್ಟೋ ಪಾತ್ರಗಳು ನಮ್ಮನ್ನು ಪ್ರತೀಕ್ಷಣವೂ ಅವರಿಸಿಕೊಳ್ಳುತ್ತಾ ಸಾಗುತ್ತದೆ.ಪಕ್ಕಾ ನಾಟಕವೇ ಜೀವನ.ಅವಶ್ಯಕತೆ ಮತ್ತು ಅನಿವಾರ್ಯತೆ ಅಧಮ್ಯ ಉತ್ಸಾಹವನ್ನ ಅಡಗಿಸಿಬಿಡುತ್ತದೆ, ಹೌದು ಆಗ commercial ಆಗಿ ಬದುಕಲೇ ಬೇಕು.’ಯಾರು ನನ್ನವರು’ಎಂಬ ಫಿಲೋಸೊಫಿಕಲ್ ಪ್ರಶ್ನೆಗಳನ್ನು ಮನಸ್ಸಿನೊಳಗೆ ತೂರಿಸಿ ಕಣ್ಮುಚ್ಚಿ ಕುಳಿತರೆ ಮತ್ತೆ ಭವದ ಯೋಚನೆಗಳೇ ಗಿರಕಿ ಹೊಡೆಯಲು ಶುರುಮಾಡೀ ಬಿಡುತ್ತದೆ.
ಅಲ್ಲಿಗೆ ನನ್ನನ್ನು ನಾನು ಅರಿಯುವ ಪ್ರಯತ್ನವೇ ಶುರುವಾಗಲೇ ಇಲ್ಲ ಅಂತಾಯಿತು. ಸಂಬಂದಗಳನ್ನ ಮೀರಿ ನಿಂತರೆ ಸಾಧಕಾನಾಗಿಬಿಡಲು ಸಾಧ್ಯವೇ?ಗೊತ್ತಿಲ್ಲ.ಹೀಗೆ ಚಿತ್ರ ವಿಚಿತ್ರ ಎನ್ನುವ ಪ್ರಶ್ನೆಗಳು ಸುಳಿಯತೊಡಗಿದಾಗ ಮನುಷ್ಯನ ಜೀವನ ಬದಲಾಗುತ್ತಿದೆ ಎಂದರ್ಥವೇ?ಸುಮ್ಮನೇ ಕೂತಾಗ ಸುಮ್ಮನಿರದ ಮನಸ್ಸು ಎಲ್ಲೆಲ್ಲಿಗೋ ಓಡಾಡುತ್ತದೆ,ಅಬ್ಬಾ!ಅನ್ನುವಷ್ಟು ಒದ್ದಾಡುತ್ತಿರುತ್ತದೆ.”ಸಾಕು ನಿಲ್ಲಿಸು ಮನವೇ ಹೀಗೆ ಚಿತ್ರ ವಿಚಿತ್ರ ಪ್ರಶ್ನೆಗಳನ್ನೆಸೆಯುತ್ತ ನನ್ನ ಭಾವನೆ,ನೆನಪುಗಳನ್ನ ಕೊಂದು ಬಿಡಬೇಡ”ಮತ್ಯಾರೋ ಹೀಗಂದ ಹಾಗೆ ಅನ್ನಿಸಿತು.ಅದೂ ಕೂಡ ನನ್ನದೇ ಮನಸ್ಸು ಭಾವಜೀವಿಯಾಗಿ ಬದುಕುತ್ತಿರುವ ಮನಸ್ಸು.
ಆ ಮಳೆ ಹನಿಗಳನ್ನ ನೋಡುತ್ತ ಮತ್ತೆ ಮನಸ್ಸು ನೆನಪಿನ ಲೋಕಕ್ಕೆ ಹೊರಾಳಿತು. ಆ ನನ್ನ ಹಳ್ಳಿಯ ಚಂದದ ಮಳೆಗಾಲದ ಆ ದಿನಗಳ ನೆನಪು ಸುಳಿಯತೊಡಗಿತ್ತು.ಅಂದು ಕದ್ದು ತಿಂದ ಕಬ್ಬಿನ ಸಿಪ್ಪೆ ಮಣ್ಣಾಗಿದೆ,ತೆಂಗಿನ ಮರ ಹತ್ತಲು ನಾವೇ ಮಾಡಿದ್ದ ಬಾಳೆಯ ‘ತಳೆ’ಗೆ ಗೆದ್ದಲು ಹಿಡಿದು ಮಣ್ಣಾಗಿರಬಹುದು ಆದರೆ ಆ ನೆನಪುಗಳು?ಸತ್ತಿಲ್ಲ,ಮಣ್ಣಾಗಲಿಲ್ಲ.ಹಾಗಾದರೆ ನೆನಪು ಕಲ್ಲೇ ಸರಿ ಎಂದು ತೀರ್ಮಾನ ಮಾಡಿಬಿಡಲೇ?ಆಗೆಲ್ಲ ಅದೊಂದು ಚಂದದ ಮಳೆಗಾಲಕ್ಕೆ ನಾವೆಲ್ಲ ಕಾದು ಕೂರುತ್ತಿದ್ದೆವು.ಅಂದು ಬಯ್ಯುತ್ತಿದ್ದ ಅಮ್ಮ ಇಂದು ಮೌನಿಯಾಗಿದ್ದಾಳೆ.ಅಂದು ಒಂಚೂರು ಸಮಯವನ್ನು ಹಾಳು ಮಾಡದೆ ತೋಟದಲ್ಲೇ ಕೆಲಸ ಮಾಡುತ್ತಿರುತ್ತಿದ್ದ ಅಪ್ಪ ದುಡಿದು ದುಡಿದು ಸೋತಿದ್ದಾನೆ.ಅಂದು ಮಳೆಗಾಲ ಶುರುವಾಯಿತೆಂದರೆ ನಮಗೆ ‘ಹೊಸತನದ ಹಬ್ಬ’ ಬಂದಂತೆ ಅನ್ನಿಸುತ್ತಿತ್ತು.ಹೊಸ ಹೊಸ ಕೊಡೆಗಳು,ರೈನ್ ಕೋಟ್ ಗಳು,ಮಳೆಗಾಲದ ಚಪ್ಪಲ್ಲಿಗಳು,ಹೊಸದೇ ಬೇಕೆಂದು ಅಪ್ಪನ ರಟ್ಟೆಗೆ ಜೋತು ಬಿದ್ದು ಹಠ ಹಿಡಿದು ತಂದಿದ್ದ ಪಾಟೀಚೀಲಗಳು,ಹೊಸ ನಟರಾಜ ಪೆನ್ಸಿಲ್ಲು,ಒಂದೇ ಇದ್ದರೂ ರೆನೊರ್ಡ್ಸ ಪೆನ್ನೆ ಇರಬೇಕೆಂದು ತರಿಸಿಕೊಂಡಿದ್ದು ಹೀಗೆ ಎಲ್ಲವೂ ಹೊಸದು.ಹಾಗಾಗಿಯೇ ಅದು ಹೊಸತನದ ಹಬ್ಬವಾಗಿತ್ತು.ಶಾಲೆಗೆ ನಾವು ಹಾದುಹೋಗುತ್ತಿದ್ದ ಗದ್ದೆ,ತೋಟ,ಬೆಟ್ಟ ಎಲ್ಲವೂ ಈಗಲೂ ಹಾಗೇ ಇದೆ ಆದರೆ ನಮ್ಮಂತೆ ಕುಣಿದಾಡುತ್ತಿರುವವರು ಕಾಣಿಸುತ್ತಿಲ್ಲ.ಯಾರದ್ದೋ ತೋಟದಲ್ಲಿ ನಮ್ಮದೇ ಎನ್ನುವಂತೆ ಕದ್ದು ಸೀಬೆ ಹಣ್ಣು ತಿನ್ನುತ್ತಿರುವವರು ಕಾಣಿಸುತ್ತಿಲ್ಲ.ಅಪ್ಪ ಹಾಡುತ್ತಿದ್ದ ಯಕ್ಷಗಾನ ಪದ್ಯ ನಂಗೇ ಗೊತ್ತಿಲ್ಲದೇ ನಾ ಗುನುಗುತ್ತಿದ್ದೆ.ಅಮ್ಮ ಮಾಡುತ್ತಿದ್ದ ಭಜನೆಗೆ ಇಷ್ಟವಿಲ್ಲದಿದ್ದರೂ ಅಂದು ದನಿಗೂಡಿಸಲೇ ಬೇಕಿತ್ತು.ನೆನಪಿದೆ ಅಮ್ನ ನಂಗೆ ಅ ಆ ಇ ಈ ಹೇಳಿಕೊಟ್ಟಿದ್ದು.ಅಪ್ಪನ ಹೆಗಲೇರಿ ಯಕ್ಷಗಾನಕ್ಕೆ ಹೊರಟಾಗ ಅಪ್ಪ ಹೇಳಿದ್ದ ಭೀಮ ಬಕಾಸುರರ ಯುದ್ಧ ಕಥೆ ಅದೂ ನೆನಪಿದೆ.ಹಗಲಿರುಳು ಅಪ್ಪನಂತೆಯೇ ಅಪ್ಪನ ಜೊತೆಯಾಗಿ ದುಡಿಯುತ್ತಿದ್ದ ಅಮ್ಮ ಸಂಜೆಯಾಗುತ್ತಿದ್ದಂತೆ ನಂಗೆ ಅಕ್ಕಂಗೆ ‘ಬಾಯಿಪಾಠ’ಮಾಡಿಸಲು ಮರೆಯುತ್ತಿರಲಿಲ್ಲ .ಅಮ್ಮ ಪಂಡಿತೆ,ದೊಡ್ಡ ಹಾಡುಗಾರ್ತಿಯಲ್ಲದಿದ್ದರೂ ‘ಗಜಮುಖನೆ ಗಣಪತಿಯೇ ನಿನಗೆ ವಂದನೆ’ ಭಜನೆಯನ್ನ ದಿನವೂ ಹಾಡುತ್ತಿದ್ದಳು ಮತ್ತು ಹಾಡಿಸುತ್ತಿದ್ದಳು.ಋತು,ಮಾಸ,ಪಕ್ಷ,ರಾಶಿಗಳ ಜ್ಞಾನ ಅದಾಗಲೇ ತುಂಬಿದ್ದನು ನನ್ನಪ್ಪ.ಎಲ್ಲಕ್ಕಿಂತ ಮುಖ್ಯವಾಗಿ ‘ಒಂದ್ ಕಾಲ್ ಕಾಲು,ಎರಡ್ ಕಾಲ್ ಅರ್ಧ,ಮೂರ್ ಕಾಲ್ ಮುಕ್ಕಾಲ್’ ಎಂದು ಅಪ್ಪ ಹೇಳಿಕೊಟ್ಟಿದ್ದ ಗಣೀತ ಪಾಠದ ಎದುರು ಅದ್ಯಾಕೋ ಈಗಿನ ಅಬಾಕಸ್ ಕೂಡ ಇಂಟರೆಸ್ಟಿಂಗ್ ಅನ್ನಿಸುತ್ತಿಲ್ಲ.ಶಾಲೆಲಿ ಅಕ್ಕೋರು ಹೇಳಿಕೊಟ್ಟಿದ್ದ ‘ಒಂದು ಎರಡು ಬಾಳೆ ಎಲೆ ಹರಡು,ಮೂರು ನಾಲ್ಕು ಅನ್ನವ ಹಾಕು’ ಈ ಪದ್ಯವ ನೀವು ಮರೆತಿದ್ದೀರಾ?ಅಂದು ಶಾಲೆ ಎಂದರೆ ನಾವೆಲ್ಲ ಬೆಳಿಗ್ಗೆ ಬೇಗ ಹೋಗಿ ಕೈ ತೋಟದಲ್ಲಿ ಬೆಳೆದ ಕಳೆ ಕಿಳುತ್ತಿದ್ದೇವಲ್ಲ ಆಗ ಯಾರ ಮನೆಯ ಅಪ್ಪ ಅಮ್ಮ ಕೂಡ ‘ಥೂ ಅಲ್ಲೋಗಿ ಎನ್ಮಾಡ್ತೀಯಾ ಅದನ್ನ ಬೇಕಾರೆ ಅವರೇ ಮಾಡ್ಕೋತಾರೆ’ಎಂದು ಹೇಳಲೇ ಇಲ್ಲ.ನೆನಪುಗಳೇ ಹಾಗೆ ಕಣ್ಣಂಚಿನ ಹನಿ ನೀರಿಗೆ ಕಾರಣವಾಗಿಬಿಡುತ್ತದೆ.ಅಳಲೇ ಬಾರದು ಎಂಬ ಧೋರಣೆಯೊಂದಿಗೆ ಗಟ್ಟಿ ಮನಸ್ಸು ಮಾಡಿ ಕೂತರೂ ಮರುಕ್ಷಣವೇ ಕರಗಿಹೋಗುತ್ತೇವಲ್ಲ.ವಿದ್ಯುತ್ ಇಲ್ಲದೇ ಹದಿನೈದು ದಿನವಾದರೂ ದೇಹದೊಳಗಿನ ಶಕ್ತಿ ಚೂರು ಕುಂದುತ್ತಿರಲಿಲ್ಲ.ಕಂಬಳಿ ಕೊಪ್ಪೆ ಸೂಡಿದ ಜನರು,ಬಿಡದೇ ಕೂಗುತ್ತಿರುವ ಮರಜರಲೆ,ಅದೆಲ್ಲಿದೆ ಎಂದು ಹುಡುಕಲು ಸಾಧ್ಯವಾಗದಿದ್ದರೂ ವಟಗುಟ್ಟುತ್ತಲೇ ಇರುವ ಕಪ್ಪೆಗಳು,ಪವರ್ ಟಿಲ್ಲರ್ ಗಳ ಸದ್ದು,ಗದ್ದೆಯ ಮದ್ಯೆ ಕೆಲಸ ಮಾಡುತ್ತಿರುವ ನನ್ನಪ್ಪ ಚಿಕ್ಕಪ್ಪಂದಿರು ಇವನ್ನೆಲ್ಲ ನೆನೆಸಿಕೊಂಡರೇ ಅದ್ಭುತ ಅನ್ನಿಸಿಬಿಡುತ್ತದೆ.ಅಕ್ಕಪಕ್ಕದ ಮನೆಯವರನ್ನೆಲ್ಲ ಕರೆದು ಅಮ್ಮ ಬಡಿಸುತ್ತಿದ್ದ ಹಲಸಿನ ಹಣ್ಣಿನ ಕಡುಬು,ಸಂಡಿಗೆಯ ನೆನೆದರೆ ನನ್ನೂರು ನನ್ನಮ್ಮ ಎಷ್ಟು ಚಂದ ಅನ್ನಿಸುತ್ತದೆ.ಅಕ್ಕನ ಪೆನ್ನು ಕದ್ದು ಜಾಸ್ತಿ ಖಾಲಿಯಾದ ನನ್ನ ಪೆನ್ನು ಇಡುತ್ತಿದ್ದೆನಲ್ಲ ಆಗ ಅಳುತ್ತಿದ್ದ ಅಕ್ಕನನ್ನ ನೋಡಿ ಖುಷಿಪಡುತ್ತಿದ್ದೆನಲ್ಲ.ಆದರೀಗ ಅದೇ ಅಕ್ಕ ಅಕ್ಕರೆಯ ಮಾತಾಡಿ ‘ಬಾ ತಮ್ಮಾ’ ಎಂದು ಕರೆದಾಗ ನಿನ್ನೆಷ್ಟು ಕಾಡಿಸಿದ್ದೆ ಅಂದು ಕ್ಷಮಿಸಿಬಿಡು ಎಂದು ಮನಸ್ಸು ಹೇಳುತ್ತದೆ.ಅಮ್ಮ ಹಾಡುತ್ತಿದ್ದ ಹಾಡು ಈಗಲೂ ಜಾರಿಯಿದೆ ಆದರೆ ಕೇಳಲು ಅಪ್ಪ ಮಾತ್ರ ಇದ್ದಾನೆ.ಅಂದು ಚಿಕ್ಕವನಿದ್ದಾಗ ಕೇಳಬೇಕು ಅಂತ ಅನ್ನಿಸುತ್ತಿರಲೇ ಇಲ್ಲ ಆದರೀಗ ಬಿಡದೇ ಅಮ್ಮ ಹಾಡುತ್ತಲಿರಬೇಕು ನಾನು ಕೇಳುತ್ತಿರಬೇಕು ಅನ್ನಿಸುತ್ತಿದೆ.ಅಪ್ಪ ಅಂದು ಬಾ ಮಗನೆ ನನಗೆ ಕೈಲಾದಷ್ಟು ಸಹಾಯಮಾಡು ಎಂದು ಕರೆದರೆ ನಿಲ್ಲದೇ ಓಡುತ್ತಿದ್ದ ನಾನು ಇಂದು ತೀರ ಅವಶ್ಯವೆನ್ನುವ ಕೆಲಸಕ್ಕೆ ಅಪ್ಪ ಕರೆಯದಿದ್ದರೂ ಸಿಟಿ ಜೀವನಕ್ಕೆ ಸ್ವಲ್ಪ ಸಮಯ ಗುಡ್ ಬೈ ಹೇಳಿ ಮನೆ ಬಸ್ ಹತ್ತಿದ್ದಿದೆ ಆದರೆ ಅಪ್ಪ ಕೆಲಸ ಮಾಡಲೇ ಕೊಡಲಿಲ್ಲವಲ್ಲ. ಸುರಿಯುತ್ತಿರುವ ಮಳೆಯೇ ನಿಲ್ಲಿಸಬೇಡ ಜೋರಾಗಿ ಸುರಿ.ನಿನ್ನ ನೋಡುತ್ತಲೇ ಇರುತ್ತೇನೆ.
ಭಾವನೆಗಳು ಆವರಿಸಿದಷ್ಟು ಬದುಕು ಸುಂದರ ಎನಿಸುತ್ತದೆಯ? ತಿಳಿಸಂಜೆಯಲ್ಲಿ ಒಂಟಿಯಾಗಿ ಕುಳಿತು ಬಣ್ಣದ ಬಿಲ್ಲನ್ನು ಸ್ರಷ್ಟಿಸಿದ ಮಳೆಯ ಮತ್ತು ಬಿಸಿಲಿನ ಗೆಳೆತನದ ಭಾವವನ್ನು ಅರಿಯುವ ಪ್ರಯತ್ನ ಮಾಡುತ್ತಲೆ ಜೀವನ ಸಾಗುತ್ತಿದೆ..ನಿರಂತರ ಎನ್ನಿಸುವ ಬದುಕಿನಲ್ಲಿ ಒಂದು ಕ್ಷಣದ ಸಂತೋಷಕ್ಕೆ ಹಪಹಪಿಸಿತ್ತಿರುವ ನಾವುಗಳು ಭಾವನೆಗಳಿಗೆ ಬೆಲೆ ಕೊಟ್ಟರೆ ‘ಇನ್ನೆಷ್ಟು ದಿನ ಬದುಕ ಬೇಕು? ‘ಎಂಬ ಅಸಂಬದ್ದ ಯೋಚನೆಯನ್ನೂ ಮಾಡುತ್ತಿರಲಿಲ್ಲವೇನೊ.. this time is the only reality ಎಂಬ ಮಾತು ಈ ಕ್ಷಣ ನಮ್ಮನ್ನು ಸಮಾದಾನಿಸಬಹುದು ಆದರೆ ಸ್ಮೃತಿ ಪಟಲದಿಂದ ಥಟ್ಟನೆ ಬರುವ ಅದೆಷ್ಟೊ ನೆನಪುಗಳು ನಮ್ಮನ್ನು ನಾವು ಗೌರವಿಸುವಷ್ಟು,ಪ್ರೀತಿಸುವಷ್ಟು ಭಾವನೆಗಳನ್ನಂತು ಸ್ರಷ್ಟಿವಿದರಲ್ಲಿ ಅನುಮಾನವೇ ಇಲ್ಲ…..
ವಿಪರೀತ ಎನಿಸಿದ ಅನವಷ್ಯಕ ಯೋಚನೆಗಳು ನಮ್ಮನ್ನು ಸುತ್ತುವರಿದಾಗ ಭಾವನೆಗಳು ಸತ್ತು ಹೋಗುತ್ತವೆ.ಒಂದು ಕ್ಷಣದ ಸುಖವನ್ನು ಪರಿಪರಿಯಾಗಿ ಹುಡುಕುತ್ತಿರುವ ನಾವುಗಳು ವಿಮರ್ಷಿಸಿಕೊಳ್ಳಬೇಕಿರುವುದು ನಮ್ಮ ಆತ್ಮವನ್ಮೇ ಹೊರತು ನಮ್ಮನ್ನು ಪರೀಕ್ಷಿಸಿದ ಆ ಅಮೂಲ್ಯ ಕ್ಷಣವನ್ನಲ್ಲ.ನಾನು,ನನ್ನದು,ನನ್ನವರು ಎಂಬ ಅಹಂಕಾರದ ಹಲವು ರೂಪಗಳು ನಮ್ಮ ಅಂತಃಶಕ್ತಿ ಯನ್ನು ಸುತ್ತುವರಿದುಬಿಟ್ಟಿವೆ. ಇವುಗಳನ್ನು ನಮಗ್ಯಾರು ಬಳುವಳಿಯನ್ನಿತ್ತರು? ‘ನಾನು’ ಯಾರು? ‘ನನ್ನದು’ ಏನು?’ನನ್ನವರು’ಎಲ್ಲಿಹರು? ಎಂಬ ಪ್ರಶ್ನೆಗಳನ್ನು ನಮ್ಮೊಳಗಿನ ಸುಪ್ತ ಶಕ್ತಿಗೆ ಕೇಳುವ ಪ್ರಯತ್ನವನ್ನೇ ಮಾಡದ ನಮಗೆ ಬೇರೆಯವರ ವ್ಯಕ್ತಿತ್ವವನ್ನು ಪ್ರಶ್ನಿಸುವ ಅಧಿಕಾರ ನೀಡಿದವರ್ಯಾರು?..
ಭಾವನೆಗಳ ಸ್ರಷ್ಟಿಗೆ ನಮ್ಮ ಜೊತೆ ಯಾರೂ ಇರಬೇಕಿಲ್ಲ, ನಮ್ಮನ್ನು ಯಾರೂ ಹೊಗಳಬೇಕಿಲ್ಲ,ನಮ್ಮನ್ನು ಯಾರೂ ಕಾಡಬೇಕಿಲ್ಲ..ಭಾವಗಳ ಸ್ರಷ್ಟಿ ಪರಮಾತ್ಮನದಗೇ ಆಗಿದೆಯೇನೋ ಎಂದು ನಂಬೋಣ..ಆ ಪರಮಾತ್ಮ ನಮ್ಮೊಳಗಿನ ಸುಪ್ತ ಶಕ್ತಿಯೇ ಆಗಿರಬಹುದು ಅಥವಾ,,’ನಾನು’ ಎನ್ನುವುದರ ಕೊನೆಗಾಣಿಸಿದ ನನ್ನೊಳಗಿನ ಗುರುವಾಗಿರಬಹುದು.
“ತಿಳಿಸಂಜೆ,ಹನಿಮಳೆ,ಸಿಹಿಬಿಸಿಲು
ವಿಸ್ತಾರ ಆಗಸದಿ ಬಣ್ಣದ ಬಿಲ್ಲು.
ನೆನಪುಗಳು,ಭಾವಗಳು ,ಕಣ್ಣಂಚಿನ ನೀರು
ಕನಸುಗಳ ಹುಡುಕಾಟದಿ ಆಸೆಗಳ ಚಿಗುರು
ನಾನು,ನನ್ನದು,ನನ್ನವರು ನಿರಂತರ
ನನ್ನ ತನವ ಮೀರಿ ನಿಂತ ಅಹಂಕಾರ.
ನಿನ್ನೆ,ಇಂದು,ನಾಳೆ ಮುಗಿಯದು
ಅನನುಭವಿ ಜೀವನ ಸಾಗಲಿ ಎಂದೆಂದು.”
ನಾನು ಎಲ್ಲಿರುವೆನೋ ಅಲ್ಲೇ ನಾನು ಸಂಪೂರ್ಣವಾಗಿ ತ್ರಪ್ತ.ಯಾರೊಂದಿಗೂ ಹೋಲಿಸಿಕೊಳ್ಳುವ ಸವಾಲೇ ಇಲ್ಲ. ನಾನೇನೋ ಅದು ಪೂರ್ಣ ರೀತಿಯಲ್ಲಾದರೆ ಬೇಕಾದಷ್ಟಾಯಿತು.ನಾನೇನೋ ಅದರಲ್ಲಿ ಅಪೂರ್ಣನಾಗದಿದ್ದರೆ ಸಾಕು.ನನ್ನಲ್ಲಿರುವ ಹೂವು ಪೂರ್ಣರೀತಿಯಲ್ಲಿ ಅರಳಿದರೆ ಸಾಕು. ಅದು ಯಾವ ಹೂವೆ ಆಗಿರಲಿ.ಹುಲ್ಲಿನ ಹೂವು ಅದರೂ ಸರಿಯೆ. ಆ ಹೂವು ಪೂರ್ಣವಾಗಿ ಅರಳಿದರೆ ಸಾಕು.ಪರಮಾತ್ಮ ನನ್ನನ್ನು ಏನಾಗಲು ನಿರ್ಮಿಸಿರುವನೋ ಅದೇ ಪೂರ್ಣವಾಗಿ ಆದರೆ ಸಾಕು ಎಂಬ ರಜನೀಶರ ಮಾತನ್ನು ಬಾಳಿಗೆ ಅಳವಡಿಸಿಕೊಳ್ಳುವ ಪ್ರಯತ್ನ ಮಾಡೋಣ. ಸಾಗಲಿ ಬದುಕು……