ಗೆಜ್ಜೆ ಕಾಲ್ಗಳ ಆ ಪುಟ್ಟ ಪುಟ್ಟ ಹೆಜ್ಜೆಗಳು, ಆ ಮುಗ್ಧ ನಗು, ಆಟ – ತುಂಟಾಟಗಳು, ಮುದ್ದಾದ ತೊದಲು ನುಡಿ… ಮಗುವಿನ ಸುಂದರ ಭವಿಷ್ಯದ ಕನಸನ್ನು ಕಣ್ಣಲ್ಲಿ ಕಟ್ಟಿಕೊಂಡು, ಅದರ ಬಾಲ್ಯದ ಮುಗ್ಧತೆಯನ್ನು ಸವಿಯುತ್ತಿರುವ ತಂದೆ ತಾಯಂದಿರು, ಮಗುವಿನ ಚೇಷ್ಟೆಗಳಲ್ಲಿ ತಮ್ಮನ್ನು ತಾವೇ ಮರೆಯುತ್ತಿರುವ ಆ ಹಿರಿ ಜೀವಗಳು.. ಈಗ್ಗೆ ಕಳೆದ ಕೆಲವು ವರುಷಗಳವರೆಗೂ ಪುಟ್ಟ ಮಕ್ಕಳಿರುವ ಎಲ್ಲಾ ಮನೆಗಳಲ್ಲೂ ಕಾಣಸಿಗುತ್ತಿದ್ದ ಸರ್ವೇಸಾಮಾನ್ಯ ದೃಶ್ಯಗಳು.
ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎನ್ನುವಂತೆ, ಮಗು ಮೂರನೇ ವರ್ಷಕ್ಕೆ ಕಾಲಿಡುತ್ತಿರುವಾಗ ತಾಯಿಯಿಂದ ಶಿಕ್ಷಣ ಪ್ರಾರಂಭ. ಅದು ಜ್ಞಾನ, ಪ್ರೀತಿ, ಧೈರ್ಯ, ಸಲಹೆ ಇವೆಲ್ಲವನ್ನೂ ಒಳಗೊಂಡ ಶಿಕ್ಷಣ. ನಾಲ್ಕನೇ ಅಥವಾ ಐದನೇ ವರ್ಷಕ್ಕೆ ಅಂಗನವಾಡಿಗೆ ಕಾಲಿಟ್ಟು, ಅಲ್ಲಿ ಪದ್ಯ, ಆಟ, ಸ್ವಲ್ಪ ಅಕ್ಷರಾಭ್ಯಾಸ ಇವುಗಳಲ್ಲೆ ಮೈಮರೆಯುತ್ತಿದ್ದ ಮಗು.. ಮಗು ಮಧ್ಯಾಹ್ನ ಮನೆಗೆ ಬರುವಷ್ಟರಲ್ಲಿ ತನ್ನ ಕೆಲಸಗಳನ್ನೆಲ್ಲಾ ಮುಗಿಸಿ ಕಂದಮ್ಮನಿಗಾಗಿ ರುಚಿಯಾದ ಅಡುಗೆ ಮಾಡಿಟ್ಟು ಕಾಯುತ್ತಿದ್ದ ಆ ತಾಯಿ.. ಇನ್ನು ಮಗು ಒಂದನೇ ತರಗತಿಗೆ ಸೇರಿದಾಗ ಮನೆಮಂದಿಯ ಸಡಗರ.. ಜೂನ್ 1 ಬಂತೆಂದರೆ ಹೊಸದಾಗಿ ತೆಗೆದ ಬಣ್ಣ ಬಣ್ಣದ ಕೊಡೆ ಬಿಡಿಸಿ, ಪುಟ್ಟ ಬ್ಯಾಗ್ ಹೆಗಲೇರಿಸಿಕೊಂಡು ಶಾಲೆಗೆ ಹೊರಟು ನಿಂತ ಆ ಮಗುವಿನ ಉತ್ಸಾಹ, ಸಂಭ್ರಮ.. ಇವುಗಳನ್ನೆಲ್ಲಾ ಕಣ್ತುಂಬಿಸಿಕೊಳ್ಳುವುದೇ ಪರಮಾನಂದ.
ಇಂತಹ ದಿನಗಳನ್ನೇ ಕಂಡು ಬೆಳೆದ ನಮಗೆ ಈಗ ಅನಿಸುತ್ತಿರುವುದಿಷ್ಟೇ… ಕಾಲ ಬದಲಾಗಿದೆ. ಅರ್ಥೈಸಿಕೊಳ್ಳಲಾಗದ ಮಟ್ಟಿಗೆ..
‘ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲೆಸಿದ’ ಎನ್ನುವ ಮಾತಿನಂತೆ ಮಗು ಹುಟ್ಟುವ ಮೊದಲೇ ಯಾವ ಶಾಲೆಗೆ ಸೇರಿಸುವುದು, ಶಾಲೆಯಲ್ಲಿ ಸೀಟು ಸಿಗದಿದ್ದರೆ ಏನು ಮಾಡುವುದೆಂದು ಚಿಂತಿಸುವ ತಂದೆ ತಾಯಂದಿರ ಕಾಲ ಇದು. ಮಗು ಹುಟ್ಟಿದ ಮೇಲೆ ಡ್ಯಾಡ್, ಮಾಮ್ ಎಂದು ಯಾವಾಗ ಕರೆಯುತ್ತದೋ ಎಂಬ ಕಾತರ. ಅಪ್ಪ, ಅಮ್ಮ ಎಂದರೆ ಮುಜುಗರ. ತೊದಲು ಮಾತು ಶುರುವಿಟ್ಟುಕೊಂಡಾಗಲೇ ಪ್ರಿ ಕೆಜಿ(ಎಲ್ ಕೆಜಿ ಯ ಮೊದಲಿನ ತರಗತಿ)ಗೆ ಸೇರಿಸುವ ಧಾವಂತ. ಮೂರನೇ ಪ್ರಾಯಕ್ಕೆ ಮಗು ಶಾಲೆಗೆ ಸೇರಿಲ್ಲವೆಂದಾದರೆ ಎಲ್ಲಿ ಮಗುವಿನ ಭವಿಷ್ಯ ಹಾಳಾಗುವುದೋ, ಎಲ್ಲಿ ತಮ್ಮ ಮಗು ಇತರರಿಗಿಂತ ಹಿಂದೆ ಬೀಳುವುದೋ ಎನ್ನುವ ಆತಂಕ. ಹೀಗೆ ಚಿಂತೆಯೋ ಚಿಂತೆ… ಸರಿ, ಮಗುವನ್ನು ಪ್ರಿ ಕೆಜಿ ಗೆ ಸೇರಿಸಲು ನಿರ್ಧಾರ ಮಾಡಿದರೆ ಸಾಕೇ? ಆ ಶಾಲೆ ಹೆಸರುವಾಸಿಯಾಗಿರಬೇಕು. ಪ್ರತಿಷ್ಠಿತ ಎಂಬ ಬಿರುದಿರಬೇಕು. ತನ್ನ ಗೆಳೆಯರ ಮಕ್ಕಳ ಶಾಲೆಗಿಂತ ಹೆಚ್ಚು ಶುಲ್ಕ ಹೊಂದಿರಬೇಕು. ಹೀಗೆ ಪಟ್ಟಿ ಸಾಗುತ್ತದೆ.
ನಾನು ಇಷ್ಟೆಲ್ಲಾ ಪೀಠಿಕೆ ಯಾಕೆ ಹಾಕುತ್ತಿದ್ದೇನೆ ಅಂದುಕೊಳ್ಳುತ್ತಿದ್ದೀರಾ? ಕಾರಣ.. ‘ಶುಲ್ಕ’. ಇಂದು ಮಹಾನಗರಗಳಲ್ಲಿ ಸಾಮಾನ್ಯವಾದ, ಸಣ್ಣ ಪಟ್ಟಣಗಳಿಗೂ ವಿಸ್ತರಿಸುತ್ತಿರುವ ಮಹಾಮಾರಿ ಇದು. ಇಂದು ಪ್ರಿ ಕೆಜಿಗೆ ಶುಲ್ಕ ಎಲ್ಲರಿಗೂ ಗೊತ್ತಿರುವಂತೆ 4೦ ಸಾವಿರದಿಂದ ಪ್ರಾರಂಭವಾಗಿ 2 ಲಕ್ಷದವರೆಗೂ ಇದೆ (ಅದಕ್ಕಿಂತ ಜಾಸ್ತಿಯೂ ಇರಬಹುದು, ಗೊತ್ತಿಲ್ಲ). ತಮ್ಮ ಮಗ/ಮಗಳಿಗೆ ಎಷ್ಟು ಶುಲ್ಕ ಕೊಟ್ಟು ಶಾಲೆಗೆ ಸೇರಿಸಿದ್ದೇವೆ ಎನ್ನುವುದೇ ಈಗ ಪ್ರತಿಷ್ಠೆಯ ವಿಷಯ. ಆದರೆ, ಇದೇ ನನಗೆ ಇನ್ನೂ ಅರ್ಥವಾಗದ ವಿಚಾರ.
ಪ್ರಿ ಕೆಜಿ, ಎಲ್ ಕೆಜಿ, ಯುಕೆಜಿ ಗಳಲ್ಲಿ ಕಲಿಯುವ ಮಕ್ಕಳ ವಯಸ್ಸೆಷ್ಟು? ಖಂಡಿತವಾಗಿಯೂ 6 ವರ್ಷಕ್ಕಿಂತ ಕಡಿಮೆ. ಒಪ್ಪುತ್ತೀರಾ? 6 ವರ್ಷದೊಳಗಿನ ಪ್ರಾಯದ ಮಕ್ಕಳಿಗೆ ನೀವು ಹೆಚ್ಚೆಂದರೆ ಏನನ್ನು ಕಲಿಸಬಹುದು? ಇಂಜಿನಿಯರಿಂಗ್? ಮೆಡಿಕಲ್? ಎಕೊನಾಮಿಕ್ಸ್? ಇಲ್ಲವಲ್ಲಾ.. ಆ ಪುಟಾಣಿಗಳಿಗೆ ಅಕ್ಷರವೆಂದರೇನು, ಭಾಷೆ ಎಂದರೇನು ಎನ್ನುವುದನ್ನು ತಿಳಿಸಬೇಕಾದ ಪ್ರಾಯ ಅದು. ಮೊದಲು ಆ ಮಕ್ಕಳಿಗೆ ಸರಿಯಾದ ಉಚ್ಛಾರ ತಿಳಿಸಿ, ನಂತರ ಅಕ್ಷರಗಳನ್ನು ಕಲಿಸಲು ಪ್ರಾರಂಭಿಸಬೇಕು. ಅ, ಆ, ಇ, ಈ…, ಎ, ಬಿ, ಸಿ, ಡಿ…. ಏನೇ ಇರಬಹುದು, ಯಾವುದೇ ಭಾಷೆಯಿರಬಹುದು. ಆ ಪ್ರಾಯಕ್ಕೆ ಇದೇ ಹೆಚ್ಚು. ಅದರೊಂದಿಗೆ, ಕೆಲವು ಪದ್ಯಗಳು, ಕಥೆಗಳು, ಬಣ್ಣ ಬಣ್ಣದ ಚಿತ್ರಗಳ ಮೂಲಕ ಒಳ್ಳೆಯ ವಿಷಯಗಳನ್ನು, ಆಚಾರ ವಿಚಾರಗಳನ್ನು, ಜೀವನ ಮೌಲ್ಯಗಳನ್ನು ಮನಮುಟ್ಟುವಂತೆ, ಸೂಕ್ಷ್ಮವಾಗಿ ಅಕರ್ಷಕವಾಗಿ ನಿಧಾನವಾಗಿ ಹೇಳಿಕೊಟ್ಟು ಅವರ ಜೀವನಕ್ಕೆ ಭದ್ರವಾದ ಅಡಿಪಾಯ ಕಟ್ಟಿಕೊಡುವ ಸಮಯ. ಈ ಕೆಲಸವನ್ನು ತಾಯಿಯಾದವಳು ಸಮರ್ಥವಾಗಿ ಮಾಡಬಲ್ಲಳು. ಮಾಡಿದ್ದಾಳೆ ಕೂಡಾ. ಇದಕ್ಕಾಗಿ ಮಕ್ಕಳನ್ನು ಎಳವೆಯಲ್ಲಿಯೇ ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿ ಲಕ್ಷಗಟ್ಟಲೆ ಶುಲ್ಕ ತೆರುವ ಅಗತ್ಯವಿದೆಯೇ? 1.5-2ಲಕ್ಷ ಕೊಟ್ಟು ಎ, ಬಿ, ಸಿ, ಡಿ.. ಕಲಿಸುವುದಾದರೆ ಪಿಹೆಚ್.ಡಿ, ಎಮ್.ಡಿ ಇವುಗಳಿಗೆಲ್ಲಾ ಎಷ್ಟು ಶುಲ್ಕ ತೆರಬೇಕು? ಇದೆಲ್ಲಾ ನಿಜವಾಗಿಯೂ ಅರ್ಥಹೀನ ಅನಿಸುವುದಿಲ್ಲವೇ? ಜನರ ಜೀವನ ಮಟ್ಟ, ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ ಎಂದ ಮಾತ್ರಕ್ಕೆ ಅತ್ಯಂತ ಪ್ರಾಥಮಿಕ ಮಟ್ಟದ ಶಿಕ್ಷಣಕ್ಕೂ ಇಷ್ಟೊಂದು ದುಬಾರಿ ಶುಲ್ಕ ತೆರಬೇಕೆನ್ನುವುದು ಎಂತಹಾ ಮೂರ್ಖತನ? ಈ ಥರ ಮಾಡಿದ ಕೆಲವರಲ್ಲಿ ಕಾರಣ ಕೇಳಿದೆ. ಅವರ ಉತ್ತರ ಹೀಗಿತ್ತು… “ ನಾನು ಈಗ ಇಷ್ಟು ಶುಲ್ಕ ಭರಿಸಿ ಈ ಶಾಲೆಗೆ ಸೇರಿಸದಿದ್ದರೆ , ಆಮೇಲೆ ಒಂದನೇ ತರಗತಿಗೆ ಪ್ರವೇಶಾತಿ ಸಿಗುವುದಿಲ್ಲ. ಈಗಲೇ ಸೇರಿಸಿದರೆ ನನ್ನ ಮಗುವಿನ ಸೀಟು 10ನೇ ತರಗತಿಯವರೆಗೆ ಈ ಶಾಲೆಯಲ್ಲಿ ಖಾತ್ರಿಯಾಗುತ್ತದೆ”. ಇಂತಹ ಬಾಲಿಶ ಯೋಚನೆಗಳಿಗೆ ಏನೆನ್ನಬೇಕು?
ಭಾರತ ಪ್ರಾಚೀನ ಕಾಲದಿಂದಲೇ ಅತ್ಯಂತ ಪ್ರತಿಭಾವಂತರನ್ನು, ಜ್ಞಾನಿ-ವಿಜ್ಞಾನಿಗಳನ್ನು, ಪಂಡಿತರನ್ನು ಕಂಡ ದೇಶ. ಭಾರತಮಾತೆ ಅನೇಕಾನೇಕ ಮಹಾಜ್ಞಾನಿಗಳಿಗೆ ಜನ್ಮ ನೀಡಿದ ತಾಯಿ. ಇಂತಹ ನಾಡಲ್ಲಿ ಜ್ಞಾನಕ್ಕೆ ಬರವೇ? ಕನಿಷ್ಟ ಅಕ್ಷರ ಜ್ಞಾನವೇ ಇಷ್ಟೊಂದು ದುಬಾರಿಯಾಯಿತೇ??
ಮಕ್ಕಳಿಗೆ ಅ, ಆ, ಇ, ಈ ಹೇಳಿಕೊಡಲು ಶಾಲೆಗಳು ಇಷ್ಟೊಂದು ಹಣ ವಸೂಲಿ ಮಾಡಿದರೆ, ಅದನ್ನು ಹೇಳಿಕೊಡುವ ಶಿಕ್ಷಕರಿಗೆ ಎಷ್ಟು ಸಂಬಳ ಕೊಡಬೇಕು? ಹಾಗಾದರೆ ನಮಗೆಲ್ಲಾ ಅಕ್ಷರದ ಜೊತೆಗೆ ಜೀವನ ಪಾಠ ಹೇಳಿಕೊಟ್ಟ ನಮ್ಮ ತಾಯಂದಿರಿಗೆ ಎಷ್ಟು ಶುಲ್ಕ ತೆರಬೇಕು? ಬೆಲೆ ಕಟ್ಟಲು ಸಾಧ್ಯವೇ? ಒಬ್ಬ ತಾಯಿಯೋ, ತಂದೆಯೋ ಅತ್ಯಂತ ಪ್ರೀತಿಯಿಂದ ಮಾಡಬಹುದಾದ ಕೆಲಸವೆಂದರೆ ಮಕ್ಕಳ ಉಜ್ವಲ ಭವಿಷ್ಯಕ್ಕೆ ಬುನಾದಿ ಹಾಕುವುದು. ಹಿಂದೂ ಧರ್ಮದಲ್ಲಿ ಮಕ್ಕಳಿಗೆ ಮೊತ್ತಮೊದಲ ಬಾರಿಗೆ ಸರಸ್ವತೀ ದೇವಿಯ ಸ್ಮರಣೆಯೊಂದಿಗೆ ಅಕ್ಕಿಯ ಮೇಲೆ ಅಕ್ಷರ ಬರೆಯಿಸಿ ವಿದ್ಯಾಭ್ಯಾಸಕ್ಕೆ ಮುನ್ನುಡಿ ಬರೆಯುವ ಸಂಪ್ರದಾಯವಿದೆ. ತದ ನಂತರ ಹಿರಿಯರೆನಿಸಿದವರು ಮಗುವಿನ ಆ ಪುಟ್ಟ ಕೈ ಹಿಡಿದು ಬಳಪದಲ್ಲಿ ಅ, ಆ, ಇ, ಈ ಎಂದು ಬರೆದು ಅಕ್ಷರಗಳ ಪರಿಚಯ ಮಾಡಿಸುತ್ತಾರೆ. ಹೀಗೆ ಕಲಿತ ವಿದ್ಯೆಯು ಯಾವುದೇ ಕಾರಣಕ್ಕೂ ಮರೆತು ಹೋಗುವಂಥದ್ದಲ್ಲ. ಇಂತಹ ಮಹತ್ವವಿರುವ ವಿದ್ಯೆಯನ್ನು ವ್ಯಪಾರೀಕರಣ ಮಾಡಿ ಏನು ಸಾಧಿಸಲು ಸಾಧ್ಯವಿದೆ? ಮೊದಲು ಸರ್ಕಾರಿ ಶಾಲೆಗಳಲ್ಲಿ ಕಲಿತವರಲ್ಲಿ ಪ್ರಖ್ಯಾತಿ ಪಡೆದವರು ಹಲವರಿಲ್ಲವೇ? ಈಗ ಯಾಕೆ ಅವುಗಳನ್ನು ಕಡೆಗಣಿಸಿ ದುಬಾರಿಯಾದ ಖಾಸಗಿ ಶಾಲೆಗಳನ್ನೇ ‘ದೇಗುಲ’ಗಳೆಂದು ಪೂಜಿಸಿ ಲಕ್ಷಗಟ್ಟಲೆ ‘ಕಾಣಿಕೆ’ ಹಾಕುವ ಭಂಡ ನಿರ್ಧಾರ? ಸರ್ಕಾರವೂ ಯಾಕೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಸವಲತ್ತುಗಳನ್ನು ನೀಡುವಲ್ಲಿ ಎಡವಿದೆ? ಸ್ವಾರ್ಥಕ್ಕಾಗಿ ರಾಜಕಾರಿಣಿಗಳ ಜಾಣಕುರುಡು ಇದು ಎಂಬುದೇನು ಯಾರೂ ಅರಿಯದ ವಿಷಯವಲ್ಲ.
3,4,5 ನೇ ವಯಸ್ಸಿಗೆ ಲಕ್ಷ ಬೆಲೆಬಾಳುವ ಅದೆಂತಹ ಅಧ್ಭುತ ಪಾಂಡಿತ್ಯವನ್ನು ಮಕ್ಕಳಿಗೆ ಕಲಿಸಬಹುದು? ಆ ಪುಟ್ಟ ಮಿದುಳಲ್ಲಿ ಏನನ್ನೆಲ್ಲಾ ತುಂಬಿಸಬಹುದು? ಏನೇ ಮಾಡಿದರೂ ಆ ವಯಸ್ಸಿಗೆ ಮಿಗಿಲಾದುದನ್ನು ಕಲಿಸಿಕೊಡಲು ಸಾಧ್ಯವಿದೆಯೇ? ಇಲ್ಲವಲ್ಲಾ.. ಮತ್ತೆ ಯಾಕಿಂಥ ಮೂರ್ಖತನದ ನಿಲುವು? ಪಾಲಕರಿಗೆ ಒಣಪ್ರತಿಷ್ಠೆಯೇ? ಪೈಪೋಟಿಯೇ? ಅಂಧ ವಿಶ್ವಾಸವೇ? ಅಥವಾ ಪಾಲಕರು ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಲಾಗದಷ್ಟು ಅಜ್ಞಾನಿಗಳೇ? ಅಶಿಕ್ಷಿತರೇ? ಇದನ್ನೆಲ್ಲಾ ಜನರು ಅರ್ಥ ಮಾಡಿಕೊಳ್ಳದಿದ್ದರೂ ಕನಿಷ್ಟ ಪಕ್ಷ ಸರ್ಕಾರವಾದರೂ ಅರ್ಥ ಮಾಡಿಸಬೇಕು. ಖಾಸಗಿ ಶಾಲೆಗಳ ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕಿ ಆಯಾಯ ತರಗತಿಗಳಿಗೆ ಅರ್ಹ ಶುಲ್ಕ ನಿಗದಿಪಡಿಸುವ ಅಧಿಕಾರ ದೇಶವನ್ನಾಳುವ, ರಾಜ್ಯವನ್ನಾಳುವ ಸರ್ಕಾರಕ್ಕಿದೆ. ಸರ್ಕಾರ ಇಂತಹ ಸಮಸ್ಯೆಗಳಿಗೆ ಪೂರ್ಣವಿರಾಮ ಹಾಕಿ, ಹೆತ್ತವರು ತಮ್ಮ ಆದಾಯ ನಿರೀಕ್ಷಿತ ಮಟ್ಟದಲ್ಲಿಲ್ಲದಿದ್ದರೂ ಸಾಲ-ಸೋಲ ಮಾಡಿ ದುಬಾರಿ ಶುಲ್ಕ ತೆತ್ತು ಮಕ್ಕಳನ್ನು ಇಂತಹ ಶಾಲೆಗಳಿಗೆ ಸೇರಿಸುವುದನ್ನು ತಪ್ಪಿಸಬಹುದು.ಇದೊಂದು ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುವ ವ್ಯವಸ್ಥಿತ ಜಾಲ. ಶಾಲೆಗಳಿಗೆ ಲಾಭಗಳಿಸುವ ಏಕೈಕ ಉದ್ದೇಶ. ಮಕ್ಕಳ ಮುಗ್ಧ ಬಾಲ್ಯವನ್ನು ಲಕ್ಷ್ಗಟ್ಟಲೆ ಹಣತೆತ್ತು ಖಾಸಗಿ ಶಾಲೆಗಳಿಗೆ ಮಾರಾಟ ಮಾಡುವ ಹೆತ್ತವರನ್ನು ಹಾಗೂ ತಮಗಿಷ್ಟ ಬಂದ ಶುಲ್ಕ ನಿಗದಿ ಮಾಡುವ ಶಿಕ್ಷಣ ಸಂಸ್ಥೆಗಳನ್ನು ಆದಷ್ಟು ಬೇಗ ನಿಯಂತ್ರಿಸಬೇಕು. ಜನರು ಇಂತಹ ಅನವಶ್ಯಕ ವಿಷಯಗಳತ್ತ ಆಕರ್ಷಿತರಾಗುವುದನ್ನು ತಪ್ಪಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ಕಾಯ್ದೆ – ಕಾನೂನುಗಳನ್ನು ಸರ್ಕಾರವು ರೂಪಿಸಬೇಕು. ಶಿಕ್ಷಣದ ಪ್ರತಿಯೊಂದು ಹಂತಕ್ಕೂ ತಕ್ಕುದಾದ ಅರ್ಹ ಶುಲ್ಕವನ್ನು ಸರ್ಕಾರವೇ ನಿಗದಿಪಡಿಸಿ, ಅದಕ್ಕಿಂತ ಹೆಚ್ಚಿನ ಶುಲ್ಕ ಪಡೆಯುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಶುಲ್ಕ ನಿಗದಿಪದಿಸುವಾಗ ಖಾಸಗಿ ಶಾಲೆಗಳಿಗಾಗಬಹುದಾದ ಕಷ್ಟ-ನಷ್ಟಗಳನ್ನು ಕಡೆಗಣಿಸದೆ, ಎಲ್ಲವನ್ನು ಅವಲೋಕಿಸಿ ನಿರ್ಧಾರ ಕೈಗೊಳ್ಳಬೇಕು. ಈ ತರಹದ ಕ್ರಮಗಳಿಂದ ಶಿಕ್ಷಣದ ಮೌಲ್ಯವು ಹೆಚ್ಚುತ್ತದೆ. ಜನರ ನಡುವಿನ ಪ್ರತಿಷ್ಠೆಯ ಅಂತರ, ಅನಾರೋಗ್ಯಕರ ಪೈಪೋಟಿ ಕಡಿಮೆಯಾಗಿ ಮಕ್ಕಳ ವಿದ್ಯಾಭ್ಯಾಸದಲ್ಲಿನ ಅಸಮಾನತೆಯು ಸ್ವಲ್ಪ ಮಟ್ಟಿಗೆ ಸುಧಾರಿಸುತ್ತದೆ.
ಆದರೆ, ಇದನ್ನೆಲ್ಲಾ ಸಾಧಿಸಲು ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯಿರಬೇಕು, ಜನರ ಬಗ್ಗೆ ನಿಜವಾದ ಕಾಳಜಿ ಇರಬೇಕು. ಅವರೇ ಖಾಸಗಿ ಶಾಲೆಗಳ ಲಾಬಿಗೆ ಮಣಿದು ಅವುಗಳ ಬೆನ್ನುಲಾಬಿ ನಿಂತು ಹಿತ ಕಾಯಬಾರದು. ವಿದ್ಯಾದಾನ ಇದ್ದದ್ದು ವಿದ್ಯಾವ್ಯಾಪಾರವಾಗುವುದನ್ನು ನೋಡಿಯೂ ನೋಡದಂತೆ ಇರುವ ಸರ್ಕಾರಗಳನ್ನು ಎಚ್ಚರಿಸುವ ಶಕ್ತಿ ಜನರಿಗಿರಬೇಕು.
ಇಷ್ಟೆಲ್ಲಾ ಬರೆಯಬೇಕೆನಿಸಿದ್ದು ಈ ಒಂದು ಘಟನೆಯ ನಂತರ… ಇತ್ತೀಚೆಗಷ್ಟೆ ನಮ್ಮದೇ ಊರಿನಲ್ಲಿ ಹುಟ್ಟಿ ಬೆಳೆದು, ಇಲ್ಲೇ ಕಲಿತು ಇಂದು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸಂಬಂಧಿಯೊಬ್ಬರನ್ನು ಭೇಟಿಯಾಗಿದ್ದೆ. ಅವರ ಮಗುವನ್ನು ಒಂದು ತಿಂಗಳ ಹಿಂದೆ ಪ್ರಿಕೆಜಿಗೆ ಸೇರಿಸಿದ್ದರು. ಹೀಗೆ ಮಾತನಾಡುತ್ತಿರುವಾಗ ಅವರು ಮಗುವಿಗಾಗಿ ಭರಿಸಿದ ಶುಲ್ಕ 1.5 ಲಕ್ಷ ರೂ.ಗಳೆಂದು ತಿಳಿಯಿತು. ಇದು ನನಗೆ ಅತ್ಯಂತ ದುಃಖ ನೀಡಿದ ವಿಚಾರ. ಅವರು ಸರ್ಕಾರಿ ಶಾಲೆಯಲ್ಲಿ ಕಲಿತು, ಈ 1.5 ಲಕ್ಷ ರೂ.ಗಳಲ್ಲಿ ತಮ್ಮ ಪೂರ್ತಿ ಪದವಿ ವಿದ್ಯಾಭಾಸವನ್ನು ಪಡೆದು, ಬಹಳ ಒಳ್ಳೆಯ ಕೆಲಸದಲ್ಲಿರುವವರು. ಇಂತಹವರೂ ಕಿಂಚಿತ್ತೂ ಯೋಚಿಸದೆ ಸಮಾಜದಲ್ಲಿರುವ ಕೆಟ್ಟ ಪೈಪೋಟಿ, ಪ್ರತಿಷ್ಠೆಯ ಹಂಗಿನಲ್ಲಿ ಜೀವನ ನಡೆಸುತ್ತಿದ್ದಾರಲ್ಲ ಎಂದು ಮನಸ್ಸು ಮರುಗುತ್ತದೆ.
ಇದನ್ನೆಲ್ಲಾ ಯೋಚಿಸಿದಾಗ ಮನಸ್ಸನ್ನು ಕಾಡುವ ಪ್ರಶ್ನೆಯೊಂದೇ… ಎ, ಬಿ, ಸಿ, ಡಿ….. ಇಷ್ಟೊಂದು ದುಬಾರಿಯೆ?!!! ನಮಗೇ ಯಾವುದು ಸರಿ, ಯಾವುದು ತಪ್ಪು ಎಂದು ಯೋಚಿಸುವ ಶಕ್ತಿ ಇಲ್ಲವೆಂದಾದ ಮೇಲೆ ಪಾಪ ಆ ಪುಟ್ಟ ಮಕ್ಕಳ ಭವಿಷ್ಯವನ್ನು ರೂಪಿಸಲು ನಾವೆಷ್ಟು ಅರ್ಹರು!!!
Namratha K
Puttur