ಅಂಕಣ

ಕಾಲನೊಳಗೊಂದು ಪಯಣ

ಕಾಲ ಎನ್ನುವುದೇ ಇಲ್ಲ. ಅದೊಂದು ಭ್ರಮೆ. ಇದೇನು ಹೀಗನ್ನುತ್ತಿದ್ದಾನೆ? ಇವನಿಗೇನು ಮರುಳೇ ಎಂದು ಹುಬ್ಬೇರಿಸಬೇಡಿ! ಅನಂತವೂ ಸರ್ವವ್ಯಾಪಿಯೂ ಗತಿಶೀಲವೂ ಆದ ಆತ್ಮತತ್ವದಲ್ಲಿ ಜಗತ್ತಿನ ಸೃಷ್ಟಿಗೆ ಕಾರಣವಾಗಬಹುದಾದ ಶೃದ್ಧಾವಲಯಗಳು ಕಾಣಿಸಿಕೊಂಡು ಅಲ್ಲಿ ಶುಕ್ರ ಸ್ಫೋಟವುಂಟಾದಾಗ ಉದ್ಗೀಥ(“ಓಂ” ಕಾರ) ಎನ್ನುವ ಮಹಾಕಂಪನ ಹಾಗೂ ಅದಕ್ಕೆ ಪೂರಕವಾಗಿ ಅಹಸ್ ಎನ್ನುವ ಭ್ರಾಮಕದ್ರವ್ಯ ಎಂಬೆರಡು ಸ್ತ್ರೀ-ಪುರುಷ ತತ್ವಗಳು ಉಂಟಾಗಿ ಈ ಜಗತ್ತೆನ್ನುವ ಭ್ರಾಮಕತೆಯೊಂದು ಅಸ್ತಿತ್ವವನ್ನು ಪಡೆಯಲು ಕಾರಣವಾಗುತ್ತವೆ. ಈ ಶುಕ್ರಸ್ಫೋಟದ ಸಮಯದಲ್ಲಿ ಆತ್ಮತತ್ವ(ಏಕತ್ವ ಅಥವಾ ಪರಬ್ರಹ್ಮತತ್ವ)ದಿಂದ ಸಿಡಿದ ಕಿಡಿಗಳಿಗೆ ಅಹಸ್ ದ್ರವ್ಯವು ಅಹಂ ದ್ರವ್ಯದ ರೂಪದಲ್ಲಿ ಆವರಿಸಿದಾಗ ಆತ್ಮಗಳು ಮೂಡುತ್ತವೆ. ಇದನ್ನು ಆತ್ಮವೊಂದರ ಜನ್ಮ ಎನ್ನಬಹುದು. ಅಂತಹ ಆತ್ಮ ಆಹಾರದ ಮೂಲಕ ಗಂಡು ಪ್ರಾಣಿಯ ದೇಹವನ್ನು ಸೇರಿ, ಗಂಡು ಪ್ರಾಣಿಯ ರೇತಸ್ಸಿನ ಮೂಲಕ ಹೆಣ್ಣು ಪ್ರಾಣಿಯ ಆತ್ಮಭೂಯವನ್ನು ಪ್ರವೇಶಿಸಿ ಎಲ್ಲಾ ವಿಶ್ವದೇವತೆಗಳ ಹಾಗೂ ಅವುಗಳ ಪ್ರತಿದೇವತೆಗಳ ನೆರವಿನಿಂದ ದೇಹಧಾರಣೆಯಲ್ಲಿ ತೊಡಗಿ ಕೆಲವೇ ಸಮಯದಲ್ಲಿ ಭೂಮಿಗಿಳಿಯುತ್ತದೆ. ವಿಶ್ವ ಚೈತನ್ಯರೂಪ ಚಿತ್ತ, ವಿಶ್ವದ ಆಗುಹೋಗುಗಳನ್ನೆಲ್ಲಾ ದಾಖಲಿಸುವ ಮಹಾಪ್ರಜ್ಞೆ ಬುದ್ಧಿ, ಹಾಗೂ ಅಹಂದ್ರವ್ಯಗಳು ಒಟ್ಟಾಗಿ ದೇಹದಲ್ಲಿ ನೆಲೆಸಿ ಹೃದಯ ಎಂದು ಕರೆಯಲ್ಪಡುತ್ತವೆ. ಇಲ್ಲಿ ಹೃದಯವೆಂದರೆ ದೇಹದಲ್ಲಿರುವ ರಕ್ತವನ್ನು ಪಂಪು ಮಾಡುವ ಲೋಹಿತಪಿಂಡವಲ್ಲ; ಇದು ಸೂಕ್ಷ್ಮರೂಪದಲ್ಲಿ ಎದೆಗುಂಡಿಗೆಯಲ್ಲಿ ನೆಲೆಸಿರುವ ಸ್ತ್ರೀತತ್ವ. ಹೃದಯ ಹಾಗೂ ಪುರುಷ ತತ್ವವಾದ ಆತ್ಮ ಸೇರಿ ಜೀವಿಯ ದೇಹದಲ್ಲಿ ಜೀವಾತ್ಮ ಎನಿಸಿಕೊಳ್ಳುತ್ತವೆ.

ದೇಹವು ಶಿಥಿಲಗೊಂಡಾಗ ಅನ್ನವು ಲಭಿಸದೆ ಪ್ರಾಣವು ದೇಹದಿಂದ ಹೊರನಡೆಯುತ್ತದೆ. ಅಂತಹ ದೇಹದಲ್ಲಿ ಆತ್ಮವುಳಿಯದು. ಅದು ಮತ್ತೊಂದು ದೇಹವನ್ನು ಹುಡುಕಲಾರಂಭಿಸುತ್ತದೆ. ಸಿಕ್ಕಿದ ದೇಹ ಶಿಥಿಲವಾದೊಡನೆ ಅದನ್ನು ತೊರೆದು ಇನ್ನೊಂದು ಹೀಗೆ ಪುನರಪಿ ಜನನಂ ಪುನರಪಿ ಮರಣಂ ನಡೆಯುತ್ತಲೇ ಇರುತ್ತದೆ. ತನ್ನ ಸಂಚಿತ-ಪ್ರಾರಬ್ಧ ಕರ್ಮಗಳೆಲ್ಲಾ ಕಳೆದ ಮೇಲೆ ಆತ್ಮ ಮತ್ತೆ ಏಕತ್ವದೊಡನೆ ಒಂದಾಗುತ್ತದೆ. ಅಂತಹ ಭಾಗ್ಯವಿಲ್ಲದ ಆತ್ಮಗಳೂ ಕೂಡಾ ಉದ್ಗೀಥ ಕಂಪನವು ಕ್ಷೀಣಿಸಿ ಅಹಸ್ ದ್ರವ್ಯವು ಏಕತ್ವದಲ್ಲಿ ಸೇರಿ ಹೋದಾಗ ತಾವೂ ಏಕತ್ವದಲ್ಲೇ ಮಿಳಿತವಾಗುತ್ತವೆ. ಮತ್ತೆ ಶೃದ್ಧಾವಲಯಗಳು-ಶುಕ್ರಸ್ಫೋಟ-ಓಂಕಾರ+ಅಹಸ್ ದ್ರವ್ಯ-ಆತ್ಮಗಳು-ಜೀವಿ ಹೀಗೆ ಪುನರಪಿ ಚಕ್ರ ತಿರುಗುತ್ತಲೇ ಇರುತ್ತದೆ. ಇದೊಂದು ಅನಂತ-ಅನವರತ ಪ್ರಕ್ರಿಯೆ. ಯಾವುದೇ ಒಂದು ಬಿಂದುವಿನಲ್ಲಿ ನಿಂತು ನೋಡಿ…ಎಲ್ಲಿದೆ ಕಾಲ? ಅದೇ ರೀತಿ ಇಡೀ ಸೃಷ್ಟಿಯೆನ್ನುವುದೇ ಒಂದು ಮಾಯೆ ಅಥವಾ ಭ್ರಮೆ ಆಗಿರುವಾಗ ಇನ್ನೂ ಸೂಕ್ಷ್ಮವಾಗಿ ಹೇಳಬೇಕಾದರೆ ಏಕತ್ವವೆನ್ನುವುದೇ ದೇಶ-ಕಾಲವನ್ನು ಮೀರಿದ ಸ್ಥಿತಿಯಾಗಿರುವಾಗ ದೇಶವೆಲ್ಲಿಯದು?

ಇರಲಿ. ಈಗ ಲೌಕಿಕ ವಿಷಯಕ್ಕೆ ಬರೋಣ. ಇತಿಹಾಸಕ್ಕೆ ಕಾಲ ಒಂದು ಮಾಪಕ ಅಥವಾ ಪ್ರಮಾಣ. ವಿದೇಶೀ-ದೇಶೀ ಇತಿಹಾಸಕಾರರು ಮಾತ್ರವಲ್ಲ, ಸಾಮಾನ್ಯ ಭಾರತೀಯನ ಆರೋಪ ನಮ್ಮ ಪೂರ್ವಜರು ಕಾಲಗಣನೆಯನ್ನು ಸರಿಯಾಗಿ ಮಾಡಿಲ್ಲ; ಇತಿಹಾಸವನ್ನು ಬರೆದಿಟ್ಟಿಲ್ಲಾ; ಬರೆದ ಪುರಾಣಗಳಲ್ಲೂ ಕಾಲದ ಉಲ್ಲೇಖವನ್ನು ಮಾಡಿಲ್ಲ ಎನ್ನುವುದು. ಇದಕ್ಕಿಂತ ಮೂರ್ಖತನದ ವಿಚಾರ ಬೇರೊಂದಿಲ್ಲ. ನಮ್ಮ ಪೂರ್ವಜರು ಪ್ರತಿಯೊಂದು ಪ್ರಮುಖ ಘಟನೆಗಳ ಕಾಲವನ್ನು ಸೂಚಿಸಲು ಆ ಸಮಯದ ಗ್ರಹಗತಿಗಳ ವಿವರವನ್ನು ಕೊಟ್ಟರು. ನಮಗೆ ಅರಿವಾಗದ ಮಾತ್ರಕ್ಕೆ ಅವರಿಗೆ ಕಾಲಗಣನೆಯ ಪರಿಜ್ಞಾನವಿರಲಿಲ್ಲ ಎನ್ನುವುದು ಎಷ್ಟು ಸರಿ? ಪ್ರಪಂಚದ ಈಗಿನ ಕಾಲದ ಲೆಕ್ಕ ಕ್ರಿಸ್ತನ ಕಾಲವನ್ನವಲಂಬಿಸಿದೆ. ಆದರೆ ಈ ನಾಗರೀಕತೆ ನಶಿಸಿದ ಮೇಲೆ ಮುಂದಿನ ನಾಗರೀಕತೆಗೆ ಈ ಕ್ರಿಸ್ತ; ಅವನನ್ನವಲಂಬಿಸಿದ ಅವೈಜ್ಞಾನಿಕ ಕಾಲಗಣನೆ ಎಷ್ಟು ಅರ್ಥವಾದೀತು? ಯಾಕೆಂದರೆ ಈ ಕಾಲಗಣನೆಗೆ ವೈಜ್ಞಾನಿಕ ತಳಪಾಯವೇ ಇಲ್ಲ. ಪ್ರಕೃತಿಯೊಂದಿಗೆ ಅದಕ್ಕೆ ಸಂಬಂಧವೇ ಇಲ್ಲ. ಅಕ್ಷರಜ್ಞಾನವಿರದ ನಮ್ಮ ಹಿರಿಯರಿಗೂ ಹುಣ್ಣಿಮೆ-ಅಮವಾಸ್ಯೆ-ಸಂಕ್ರಾಂತಿಗಳು ಎಂದು ಸಂಭವಿಸುತ್ತವೆಯೆಂದು ಕರಾರುವಕ್ಕಾಗಿ ತಿಳಿದಿರುತ್ತದೆ. ಅದು ಪ್ರಕೃತಿಯೊಂದಿಗಿನ ಒಡನಾಟದ-ಮಿಳಿತದ ಫಲ. ನಮ್ಮ ಪೂರ್ವಜರು ಆಕಾಶಕಾಯಗಳ ಗತಿ-ತನ್ಮೂಲಕ ಪ್ರಕೃತಿಯಲ್ಲುಂಟಾಗುವ ಬದಲಾವಣೆಯನ್ನನುಸರಿಸಿ ಕಾಲ ನಿರ್ಣಯ ಮಾಡುತ್ತಿದ್ದರು. ತಮ್ಮ ಚಲನೆಯ ಕಾರಣದಿಂದಾಗಿ ಆಕಾಶಕಾಯಗಳ ಒಂದು ನಿರ್ದಿಷ್ಟ ಬಿಂದುವಿಗೆ ಸಂಬಂಧಿಸಿ ಆಗುವ ಸ್ಥಾನಪಲ್ಲಟಗಳು ಮುಂದೆ ಒಂದು ದಿನ ಪುನಾರಾವರ್ತನೆ ಆಗಬಹುದು. ಅದಾಗದಿದ್ದರೂ ಆಕಾಶಕಾಯಗಳ ಗತಿಯನ್ನಾಧರಿಸಿ ಒಂದು ವಿದ್ಯಮಾನ ಎಷ್ಟು ಕಾಲ ಹಿಂದೆ ನಡೆದಿತ್ತು ಎನ್ನುವುದನ್ನು ತಿಳಿಯಬಹುದು. ಈಗ ಅದಕ್ಕೆ ಬೇಕಾದ ಸಾಫ್ಟ್ ವೇರುಗಳೂ ಅಭಿವೃದ್ಧಿ ಹೊಂದಿವೆ. ಇರಲಿ, ಮುಂದಿನ ನವ ನಾಗರೀಕತೆಯೊಂದು ಗ್ರಹಗತಿಗಳ ಸ್ಥಾನಗಳ ದಾಖಲೆ ದೊರೆತಾಗ ಆ ಘಟನೆಯ ಕಾಲವನ್ನು ಕರಾರುವಕ್ಕಾಗಿ ನಿರ್ಣಯಿಸಬಲ್ಲುದು. ಆದರೆ ನಮ್ಮ ಈ “ಮತಾಂತರಿತ” ಅವೈಜ್ಞಾನಿಕ ಲೆಕ್ಕಾಚಾರ ಅವರಿಗೆ ತಿಳಿಯುವ ಸಾಧ್ಯತೆ ಕಡಿಮೆ. ಯಾಕೆಂದರೆ ಆ ಸಮಯದ ಪ್ರಕೃತಿಯ ಗತಿ ಬದಲಾಗಿ, ಅವರ ಅಳತೆಯ ಮಾನವೂ ಬದಲಾಗುವ ನಿಚ್ಚಳ ಸಾಧ್ಯತೆಗಳಿರುವಾಗ ಜೂಲಿಯಸ್ ಸೀಜರನ ಹೆಸರಿನಲ್ಲಿ ಸೇರಿಸಿದ ಜುಲೈ ಆಗಲೀ, ಸಂತ ಆಗಸ್ಟಸ್ ಹೆಸರಿನ ಆಗಸ್ಟ್, ನಾಲ್ಕು ವರ್ಷಗಳಿಗೊಮ್ಮೆ ಬರುವ ಫೆಬ್ರವರಿ 29 ಇವೆಲ್ಲಾ ಹಾಸ್ಯಾಸ್ಪದವಾಗಿ ಕಂಡೀತು. ಅದಕ್ಕಿಂತಲೂ ಮುಖ್ಯವಾಗಿ ಕ್ರಿಸ್ತ ಹುಟ್ಟಿದ ಸಮಯದ ಗ್ರಹಗತಿಗಳ ವಿವರಗಳಾವುವೂ ಇಲ್ಲದಿರುವುದರಿಂದ, ಕ್ರಿಸ್ತನ ಹುಟ್ಟಿನ ಬಗ್ಗೆ; ಕ್ರಿಸ್ತನೆಂಬುವವನೊಬ್ಬ ಇದ್ದುದರ ಬಗ್ಗೆಯೇ ಸಂಶಯಗಳಿರುವುದರಿಂದ ಈ ಕ್ರಿಸ್ತ ಪೂರ್ವ/ಶಕೆಗಳು ಗೊಂದಲಗಳ ಗೋಜಲಾದೀತೇ ಹೊರತು ಅವುಗಳ ಕಾಲ ನಿರ್ಣಯ ಮಾಡಲು ಸಾಧ್ಯವಾಗಲಿಕ್ಕಿಲ್ಲ.

ಚರಿತ್ರೆಯ ಗತಿಯಿಂದ ಹಿಡಿದು ಕಾಲಚಕ್ರದ ಚಲನೆಗೆ ಸಂಬಂಧಿಸಿದವರೆಗೆ ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ಅಸ್ಪಷ್ಟತೆಗೆ ಅವಕಾಶವೇ ಇಲ್ಲ. ಕ್ಷಣದಲ್ಲಿ 1/300 ಭಾಗವಾದ ವೇಧದಿಂದ 30ಕೋಟಿ ಅರವತ್ತೇಳು ಲಕ್ಷ ಸಂವತ್ಸರಗಳಿರುವ ಮನ್ವಂತರದವರೆಗೆ, ಅದಕ್ಕೂ ಮೀರಿ ಆಧುನಿಕ ಕಂಪ್ಯೂಟರುಗಳಿಗೂ ನಿಲುಕದ ಸೂಕ್ಷ್ಮಾತಿ ಸೂಕ್ಷ್ಮ, ಸ್ಥೂಲಾತಿ ಸ್ಥೂಲ ಕಾಲಗಣನೆಯ ವಿಧಾನ ಭಾರತೀಯರಿಗೆ ಸಿದ್ಧಿಸಿತ್ತು. ಒಂದು ಸೆಕೆಂಡಿನ ಅವಧಿಯಲ್ಲಿ 34,000 ಸ್ಥಿರವಿಶ್ವವನ್ನು(ಕ್ರಾಂತಿ)ಯನ್ನು ನಾವು ಅನುಭವಿಸುವುದರಿಂದ ನಮಗೆ ವಿಶ್ವವು ಚಲನೆಯಲ್ಲಿರುವಂತೆ ಭಾಸವಾಗುತ್ತದೆ. ಅಂದರೆ ಸೆಕೆಂಡಿನ 34,000ನೇ ಒಂದು ಭಾಗದವರೆಗಿನ ಸೂಕ್ಷ ಗಣನೆಯನ್ನು ಕಂಡುಹಿಡಿದು(ದರ್ಶಿಸಿ) ಅದನ್ನು ಕ್ರಾಂತಿ ಎಂದು ಕರೆದ ಭಾರತೀಯ ಋಷಿಗಳಿಗೆ ಕಾಲಗಣನೆಯ ಸೂಕ್ಷ್ಮ ಗೊತ್ತಿಲ್ಲ ಎಂದವರು ಮೂರ್ಖರಲ್ಲದೆ ಇನ್ನೇನು?

 ಮಹಾಭಾರತ ಯುದ್ಧದ ಬಳಿಕ ಪರೀಕ್ಷಿತನ ಜನನದ ವೇಳೆಗೆ ಸಪ್ತರ್ಷಿ ಮಂಡಲ ಮಘ ನಕ್ಷತ್ರದಲ್ಲಿತ್ತು. ನೂರು ವರ್ಷಕ್ಕೆ ಒಂದು ನಕ್ಷತ್ರದಂತೆ ಅದು ಹಿಂದೆ ಸರಿಯುತ್ತಾ 2700 ವರ್ಷಗಳಿಗೆ ಮತ್ತೆ ಅದೇ ಸ್ಥಾನಕ್ಕೆ ಬರುತ್ತದೆ. ಆಗ ದೇಶದಲ್ಲಿ ಪ್ರಾಬಲ್ಯ ಪಡೆದಿದ್ದವರು ಆಂಧ್ರರಾಜರು. ಮತ್ಸ್ಯ ಪುರಾಣ ಇದನ್ನೇ ಆಧಾರವಾಗಿಟ್ಟು ಮಹಾಭಾರತದ ಕಾಲ, ಬೃಹದ್ರಥ ವಂಶಕ್ಕೆ ಸೇರಿದ ಮಗಧ ರಾಜರ ಕಾಲಾವಧಿ ಹಾಗೂ ಆಂಧ್ರ ರಾಜರ ಸಮಯವನ್ನು ನಿಖರವಾಗಿ ಹೇಳಿದೆ. ಮಾತ್ರವಲ್ಲ ಪ್ರತಿ ನೂರು ವರ್ಷಗಳ ಅವಧಿಯಲ್ಲಿ ಹಾಗೂ ಅವುಗಳ ನಡುವೆ ಇದ್ದ ರಾಜರ ಅನುಕ್ರಮಣಿಕೆಯನ್ನೂ ಉಲ್ಲೇಖಿಸಿದೆ.  ಕಲಿ ಶಕೆ ಆರಂಭವಾದದ್ದು ಕ್ರಿ.ಪೂ. 3102ರಲ್ಲಿ. ಅದು ಶ್ರೀಕೃಷ್ಣನ ನಿರ್ಯಾಣದ ಸಮಯವೂ ಹೌದು. ಅದಕ್ಕಿಂತ ಮೊದಲಿನ 36 ವರ್ಷ ಧರ್ಮರಾಯನ ಆಳ್ವಿಕೆ ನಡೆಯಿತು. ಅಂದರೆ ಮಹಾಭಾರತ ಯುದ್ಧದ ಅವಧಿ ಕ್ರಿ.ಪೂ. 3138! ಇದಕ್ಕೆ ಇನ್ನೊಂದು ಆಧಾರವೂ ಇದೆ. ಕಲಿ ಪ್ರವೇಶಿಸಿದ್ದು ಪ್ರಮಾದಿ ನಾಮ ಸಂವತ್ಸರದ ಚೈತ್ರ ಶುದ್ಧ ಪಾಡ್ಯಮಿಯ ದಿನ. ಆ ದಿವಸ ಮೇಷ ರಾಶಿಯಲ್ಲಿ ಏಳು ಗ್ರಹಗಳು ಸೇರಿದ್ದವೆಂದು ನಮ್ಮ ಪುರಾಣಗಳಲ್ಲಿ ದಾಖಲಿಸಿದ್ದಾರೆ. ಆಧುನಿಕ ಖಗೋಳ ಶಾಸ್ತ್ರಜ್ಞರು ಅಂತಹ ಗ್ರಹಸ್ಥಿತಿ ಸರಿಯಾಗಿ ಕ್ರಿ.ಪೂ. 3102ರಲ್ಲೇ ಇತ್ತೆಂದು ಹೇಳುವುದರೊಂದಿಗೆ ನಮ್ಮ ಪೂರ್ವಜರ ಕಾಲಗಣನೆಯೂ ಅದಕ್ಕೆ ಸರಿ ಹೊಂದಿತು. ಅಂದರೆ ಈಗ ನಡೆಯುತ್ತಿರುವುದು 5117ನೇ ಕಲಿವರ್ಷ! ಶತಸಂವತ್ಸರಗಳ ಕಾಲ ದೇಶವನ್ನು ಏಕಛತ್ರಾಧಿಪತ್ಯದಲ್ಲಿ ಆಳಿದ ಪ್ರಮರ ವಂಶಜ ವಿಶ್ವವಿಖ್ಯಾತ ವಿಕ್ರಮಾದಿತ್ಯನ ಪರಾಕ್ರಮಕ್ಕೆ ಹೆಗ್ಗುರುತಾಗಿ  ಕ್ರಿ.ಪೂ 57ರಲ್ಲಿ ವಿಕ್ರಮಶಕೆ ಆರಂಭವಾಯಿತು. ವಿಕ್ರಮಾದಿತ್ಯನ ಮರಿಮಗ ಶಾಲಿವಾಹನ ಶಕರು, ಟಾರ್ಟರರು, ಮ್ಲೇಚ್ಛರನ್ನು ಒದ್ದೋಡಿಸಿ ಕ್ರಿ.ಶ. 78ರಲ್ಲಿ ಉಜ್ಜಯಿನಿಯ ಸಿಂಹಾಸನ ಏರಿದುದರ ಕುರುಹಾಗಿ ಆರಂಭವಾದದ್ದೇ ಶಾಲಿವಾಹನ ಶಕೆ. ಆದರೆ ದೇಶವಾಸಿಗಳು ಚಾಚೂತಪ್ಪದೆ ಅನುಸರಿಸುತ್ತಾ ಬಂದಿರುವ ಈ ಎರಡು ಶಕೆಗಳ ಶಕಪುರುಷರ ಅಸ್ತಿತ್ವ ಮೂರ್ಖ ಇತಿಹಾಸಕಾರರಿಗೆ ಮಿಥ್ಯೆಯಾಗಿ ಕಂಡದ್ದು ಚೋದ್ಯ. ಹಾಗೆಯೇ ಇಷ್ಟು ಕರಾರುವಕ್ಕಾದ ನಮ್ಮವರ ಕಾಲಗಣನೆ ಪರಿಹಾಸಕ್ಕೀಡಾದುದು ದುರಂತ.

Facebook ಕಾಮೆಂಟ್ಸ್

ಲೇಖಕರ ಕುರಿತು

Rajesh Rao

ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್
ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!