ಅಂಕಣ

ಭಾಷೆ – ಸಾಂಸ್ಕೃತಿಕ ಹಾಗೂ ಪಾರಂಪರಿಕ ಏಳ್ಗೆಯ ಅಡಿಪಾಯ

ಇಂದು ಭಾಷೆ ಕೇವಲ ಒಂದು ಸಂವಹನ ಮಾಧ್ಯಮವಾಗಿಯಾಗಲೀ ಅಥವಾ ಪರಸ್ಪರ ವ್ಯಕ್ತಿಗತ ಭಾವನೆಗಳ ವಿನಿಮಯದ ಸಾಧನವಾಗಿಯಷ್ಟೇ ಉಳಿದಿಲ್ಲ. ಕೇವಲ ಮೇಲಿನ ಎರಡು ಸಾಲುಗಳನ್ನು ಮಾತ್ರ ಉಲ್ಲೇಖಿಸಿದರೆ “ಭಾಷೆ” ಎಂಬ ಪದದವಿವರಣೆ ತೀರಾ ಸಂಕುಚಿತವಾಗುವುದೇನೋ. ಭಾಷೆ ಎಂಬುದು ಒಂದು ಜನಾಂಗ ಉಗಮಿಸಿದ ಹಾಗೂ ಬೆಳೆದು ಬಂದ ಪರಿಯನ್ನು ಬಿಂಬಿಸುವ ಕೈಗನ್ನಡಿ. ಅಲ್ಲದೇ ಆ ಜನಾಂಗದ ಭವಿಷ್ಯದ ಪಾರಂಪರಿಕ ಹಾಗೂ ಸಾಂಸ್ಕೃತಿಕ ಏಳ್ಗೆಗೆ ಅಡಿಪಾಯ.

ಕನ್ನಡ ಭಾಷೆ ಪ್ರಪಂಚದ ಅತೀ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು, ಸುಮಾರು 2000 ವರ್ಷಗಳ ದೀರ್ಘ ಇತಿಹಾಸವುಳ್ಳದಾಗಿದೆ. ಆಂಗ್ಲಭಾಷೆಯಂಥ ಹಲವು ಭಾಷೆಗಳು ಇನ್ನೂ ಆಗಷ್ಟೇ ಕಣ್ದೆರೆಯುತ್ತಿದ್ದ ಸಮಯದಲ್ಲಾಗಲೇ ನಮ್ಮ ಕನ್ನಡ ಸಾಹಿತ್ಯಪರಂಪರೆಗೆ ನಾಂದಿ ಹಾಡಿತ್ತು. ತೀರಾ ಇತ್ತೀಚೆಗೆ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದು, ಭಾರತೀಯ ಭಾಷೆಗಳ ಪಟ್ಟಿಯಲ್ಲಿ ಕನ್ನಡದ ಔನ್ನತ್ಯವನ್ನು ನಿರೂಪಿಸಿದೆ. ಅಲ್ಲದೇ ವಿಶ್ವದ ಅತೀ ಸುಂದರ ಲಿಪಿ ಹೊಂದಿರುವ 25 ಭಾಷೆಗಳಲ್ಲಿನಮ್ಮ ಕನ್ನಡ ಸ್ಥಾನ ಪಡೆದಿದೆ. ವಿವಿಧ 18 ಭಿನ್ನ ಪ್ರಾಕಾರಗಳಲ್ಲಿ ಮಾತನಾಡುವ ವಿಶ್ವದ ಏಕೈಕ ಭಾಷೆ ಎಂಬ ಬಿರುದು, ಮನ್ನಣೆ ಕನ್ನಡದ ಶ್ರೀಮುಕುಟಕ್ಕೆ ಮತ್ತೊಂದು ಗರಿಯೇರಿಸಿದೆ. ಕನ್ನಡ ಎಂದರೆ ಅಲ್ಲಿ ಕೇವಲ ಭಾಷೆಯ ಬಿಂಬವಿಲ್ಲ. ಬದಲಾಗಿಸಮಸ್ತ ಕರುನಾಡು ತನ್ನ ಮಣ್ಣಕಣಕಣದಲ್ಲೂ ಒಗ್ಗೂಡಿಸಿಕೊಂಡು ಘನಶ್ರೇಷ್ಠತೆಯ ಶಿಖರವೇರಿದ ಗಾಥೆಯ ರೋಚಕತೆಯಿದೆ. ಮುಳ್ಳಹಾಸನ್ನು ಹೂವಾಗಿಸಿಕೊಂಡು ತನ್ನದೇ ಆದ ಅಸ್ಥಿತ್ವ ಪಡೆಯಲು ಹೋರಾಡಿ ಸುರಿಸಿದ ಕಣ್ಣೀರಿದೆ.ವಿಶ್ವವಿಖ್ಯಾತವಾದ ಉದಾತ್ತ ಸಂಸ್ಕೃತಿ, ಋಜುವ್ಯಕ್ತಿತ್ವ, ಸರಳತೆಯನ್ನು ಪಸರಿಸುತ್ತಿರುವ ವಿಭಿನ್ನ ಜೀವನ ಶೈಲಿಯ ಸೊಬಗಿದೆ. ಕನ್ನಡ- ಕರುನಾಡು ನಡೆದು ಬಂದ ಹಾದಿಯನ್ನು, ಒಳಪಟ್ಟ ಸಾಮಾಜಿಕ ಸ್ಥಿತ್ಯಂತರಗಳನ್ನು ಹಾಗೂ ಭಾರತೀಯಸಂಸ್ಕೃತಿಯ ಶ್ರೇಯೋಭಿವೃದ್ಧಿಗೆ ನೀಡಿರುವ ಅಪಾರವಾದ ಕಲಾತ್ಮಕ ಕೊಡುಗೆಗಳನ್ನು ನಮ್ಮ ಅರಿವಿಗೆ ಉಳಿಸಿಕೊಟ್ಟಿರುವುದು ಕನ್ನಡ ಸಾಹಿತ್ಯ. ಆ ಸಾಹಿತ್ಯದ ಉಗಮಕ್ಕೆ ಮೂಲಧಾತುವೇ ಭಾಷೆ. ಹೀಗೆ ಕನ್ನಡ ಪರಂಪರೆ, ಸಂಸ್ಕೃತಿ, ಮೌಲ್ಯಗಳು,ಭಾಷೆ ಇವು ಪರಸ್ಪರ ಬೇರ್ಪಡಿಸಲಾರದ ಕೊಂಡಿಗಳಾಗಿವೆ.

“ಚಲನಶೀಲತೆ” ಒಂದು ಜೀವಂತ ಹಾಗೂ ಪ್ರಗತಿಪರ ಭಾಷೆಯ ಪ್ರಮುಖ ಲಕ್ಷಣ. ಹರಿವ ನದಿ ಹಲವು ಖನಿಜಗಳನ್ನು, ಪೋಷಕಾಂಶಗಳನ್ನು ತನ್ನೊಳಗೆಆವಾಹಿಸಿಕೊಂಡು, ತಾ ಸವರಿದ ಬರಡು ನೆಲದಲ್ಲಿ ಹಸಿರು ಚಿಗುರಿಸುವಂತೆಯೇ ಹಲವಾರು ಬದಲಾವಣೆಯ ಧಾತುಗಳನ್ನು ಸ್ವೀಕರಿಸುತ್ತಾ ಸಾಗಿದಾಗಲೇ ಒಂದು ಭಾಷೆ ಬೆಳೆಯಲು ಸಾಧ್ಯ. ಬದಲಾಗುತಿರುವ ಕಾಲಘಟ್ಟದ ಸವಾಲುಗಳಿಗೆ ಸರಿಯಾದಉತ್ತರವಾಗಿ, ಅಸ್ಥಿತ್ವ ಸಾಧಿಸಲು ಸಾಧ್ಯ. ಈ ಬದಲಾವಣೆಗೆ ನೆರೆಹೊರೆಯ ಭಾಷೆಗಳಿಂದ ಕೊಳ್ಳು- ಕೊಡುಗೆಯನ್ನು ಸಾಧಿಸುವುದು ಸಹಕಾರಿಯೇ. ಕನ್ನಡ ಸಂಸ್ಕೃತ- ಪ್ರಾಕೃತ ಭಾಷೆಗಳಿಂದ ಸ್ವೀಕರಿಸಿದ ಪದಗಳೇ ಈಗ ತತ್ಸಮ- ತದ್ಭವಗಳಾಗಿ,ಇಂದು ಕನ್ನಡ ಸಾಹಿತ್ಯದಲ್ಲಿ ಕನ್ನಡದೊಳಗೊಂದಾದ ಕನ್ನಡವೇ ಆಗಿ ಹೋಗಿವೆ. ಅಲ್ಲದೇ ಭಾಷೆಯ ಸಿರಿವಂತಿಕೆಯನ್ನು ಹೆಚ್ಚಿಸಿವೆ. ಆದರೆ ಭಾಷೆಗಳ ನಡುವಿನ ಈ ಕೊಳ್ಳು- ಕೊಡುಗೆಗಳು ಸ್ಥಿಮಿತದಲ್ಲಿದ್ದರೆ ಮಾತ್ರವೇ ಒಂದು ಭಾಷೆ ಸಿರಿವಂತಿಕೆಯಿಂದಕೂಡಿ, ಆ ಜನಾಂಗದ ಜೀವದ್ಭಾಷೆಯಾಗಿರಲು ಸಾಧ್ಯ. ಯಾವಾಗ ಈ ಕೊಳ್ಳು- ಕೊಡುಗೆಯ ಹರಿವು ತೀವ್ರವಾಗಿ, ಸಮಸ್ತ ಭಾಷೆಯನ್ನೇ ಪರಿವರ್ತನೆಗೊಳಪಡಿಸುವಂತಾಗುವುದೋ ಆಗ ಭಾಷೆ ಅಳಿವಿನ ಅಂಚಿಗೆ ತಳ್ಳಲ್ಪಡುತ್ತದೆ. ಕನ್ನಡ ನಾಡಿನ ಕೆಲನಗರಪ್ರದೇಶಗಳಲ್ಲಿ ಇಂದು ಹಲವು ಭಾಷೆಗಳು ಕನ್ನಡ ಬಾಷೆಯ ಸ್ಥಾನಪಲ್ಲಟಗೊಳಿಸಿ, ತಾವು ಆ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿವೆ ಹಾಗೂ ಈ ಅನಪೇಕ್ಷಿತ ಬೆಳವಣಿಗೆ ಭಾಷಾಪ್ರೇಮಿಗಳ ಹೃದಯದಲ್ಲಿ ದಿಗ್ಭ್ರಮೆ ಮೂಡಿಸಿದೆ. ಯಾವುದೇ ಭಾಷೆಯಅಳಿವು- ಉಳಿವು ಆ ಭಾಷೆಯಡಿಯಲ್ಲಿ ಬೆಳೆದು ಬಂದ ಜನಾಂಗದ ಜವಾಬ್ದಾರಿ. ಆದರೆ ಕಾಲಚಕ್ರ ಉರುಳುತ್ತಿರುವಂತೆಯೇ ಕನ್ನಡಿಗರು ಔದ್ಯಮೀಕರಣ- ವಾಣಿಜ್ಯೀಕರಣಗಳ ಹರಿವಿನ ಗತಿಯಲ್ಲಿಯೇ ಸಾಗುವ ಸಲುವಾಗಿ ಒಗ್ಗೂಡಿಸಿಕೊಂಡ ಅತಿಯಾದಆಧುನಿಕತೆ, ಅವರನ್ನು ಪರಭಾಷಾ ವ್ಯಾಮೋಹಕ್ಕೊಳಪಡಿಸಿ, ಸ್ವಭಾಷೆಯ ಕುರಿತಾದ ಸಹಜಪ್ರೇಮಕ್ಕೆ ಚ್ಯುತಿಯುಂಟುಮಾಡಿದೆ.

ಕ್ಷಿಪ್ರಗತಿಯಲ್ಲಿ ಔದ್ಯಮೀಕರಣಗೊಳ್ಳುತ್ತಿರುವ ಪ್ರಸ್ತುತ ಜಗತ್ತಿನಲ್ಲಿ ಆಂಗ್ಲಭಾಷೆಯ ತಿಳಿವಿನ ಅಗತ್ಯದ ಕುರಿತು ನನಗೂ ಅರಿವಿದೆ. ಆದರೆ ತಗ್ಗಿರುವ ಕಡೆಗೆ ಸ್ವಇಚ್ಛೆಯಿಂದ ಹರಿವ ನದಿಯಂತೆ, ಹುಟ್ಟಿನಿಂದಲೇ ತನ್ನ ರಕ್ತದಕಣಕಣದಲ್ಲೂ ಬೆರೆತಿರುವ ಕನ್ನಡದ ಸಾಂಗತ್ಯದೆಡೆ ಹರಿವ ಒಂದು ಮಗುವಿನ ಸಹಜ ಬೌದ್ಧಿಕತೆ, ಆಸಕ್ತಿಗಳನ್ನೇ ತನ್ನಿಚ್ಛೆ ಇರುವೆಡೆ ಬಲಾತ್ಕಾರದಿಂದ ತಿರುಗಿಸುವುದು ತೀರಾ ವಿಚಿತ್ರವೆಂದೆನೆಸುವುದಿಲ್ಲವೇ! ಮಗುವಿನ ಸುಪ್ತ ಭಾಷಾಪ್ರೇಮವನ್ನುಮೊಳಕೆಯಲ್ಲಿಯೇ ಚಿವುಟಿ ಹಾಕಿ ಅಲ್ಲಿ ಪರಭಾಷಾವ್ಯಾಮೋಹದ ಬೀಜ ಬಿತ್ತುವುದು ಅತಿ ಅಸಹಜವಲ್ಲವೇ? ಕನ್ನಡದ ನೆಲ, ಜಲ ಹಾಗೂ ವಾಯುವನ್ನು ಆನಂದದಿಂದ ಬಳಸಿಕೊಳ್ಳುವ ನಾವು, ನಮ್ಮ ಭಾಷೆ- ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವಅನಿವಾರ್ಯತೆ ಇರುವ ಸಮಯದಲ್ಲಿ ಮಾತ್ರ ಉದಾಸೀನ ತೋರುವುದು ಎಷ್ಟರ ಮಟ್ಟಿಗೆ ಸರಿ?

ಇತ್ತೀಚಿನ ವರದಿಗಳ ಪ್ರಕಾರ, ರಾಜಧಾನಿ ಬೆಂಗಳೂರಿನಲ್ಲಿ ಕೇವಲ ಶೇಕಡ 48 ರಷ್ಟು ಮಾತ್ರವೇ ಮೂಲಕನ್ನಡಿಗರಿದ್ದಾರೆ ಹಾಗೂ ಉಳಿದವರು ಬೆಂಗಳೂರಿಗೆ ಇನ್ನಿತರ ಪ್ರದೇಶಗಳಿಂದ ವಲಸೆ ಬಂದವರು. ಕನ್ನಡದರಿವಿಲ್ಲದ ಜನಕ್ಕೆ ನೆರವಾಗುವ ಸಲುವಾಗಿ ಅತಿಕಾರುಣ್ಯದ ಪ್ರತೀಕವಾದ ಕನ್ನಡಿಗರು ತಮ್ಮ ಭಾಷಾಬಾಂಧವ್ಯವನ್ನು ನಿರ್ಲಕ್ಷಿಸಿ,ಅವರೊಂದಿಗೆ ಆಂಗ್ಲ ಅಥವಾ ಹಿಂದಿ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ. ಪ್ರಸ್ತುತ ಅತೀ ಕಡಿಮೆ ಕನ್ನಡ ಮಾತನಾಡುವ ಜಿಲ್ಲೆಗಳಲ್ಲಿ ರಾಜಧಾನಿಯೂ ಒಂದಾಗಿರುವುದು ನಿಜಕ್ಕೂ ವಿಪರ್ಯಾಸ. ಭೂ ವಿಕಸನಗೊಂಡ ಪರಿಯನ್ನು ಪರಿಶೀಲಿಸಿದರೆ, ಅಲ್ಲಿಬದಲಾಗುತ್ತಿರುವ ವಾತಾವರಣಕ್ಕನುಗುಣವಾಗಿ ಹೊಸ- ಹೊಸ ಜೀವಿಗಳು ಮಾರ್ಪಾಡಾದುದನ್ನು ಕಾಣಬಹುದು ಹಾಗೂ ಹಾಗೆ ಮಾರ್ಪಾಡಾದದ್ದೇ ಅವುಗಳ ಉಳಿವಿಗೆ ಏಕಮಾತ್ರ ಹೇತು. ಬದಲಿಗೆ ಪರಿವರ್ತಿತವಾಗುತ್ತಿರುವಜೀವಿಗಳಿಗನುಗುಣವಾಗಿ ಪರಿಸರವೇ ಮಾರ್ಪಾಡಾಗಿದ್ದಿದ್ದರೆ, ಅದರಿಂದ ಉಂಟಾಗುವ ಅಸಮತೋಲನದಿಂದಾಗಿ ಸಮಸ್ತ ಸೃಷ್ಟಿಯೇ ಭ್ರಂಶನಗೊಳ್ಳುತ್ತಿತ್ತು. ಅಂತೆಯೇ ಹೊರಗಿನಿಂದ ಬರುವವರು ಕನ್ನಡತನಕ್ಕೆ ಒಗ್ಗಿಕೊಳ್ಳಬೇಕೇ ವಿನಃ ಕನ್ನಡಿಗರೇಬಾಗಿ ಬೆಂಡಾದರೆ, ಕನ್ನಡತನ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುವುದಾದರೂ ಹೇಗೆ?

ಹೀಗೆಂದು ನಾನೇನೂ ಆಂಗ್ಲ ಅಥವಾ ಇನ್ನ್ಯಾವುದೇ ಪರಭಾಷಾ ದ್ವೇಷಿಯಲ್ಲ. ಮೊದಲೇ ಹೇಳಿದಂತೆಬದಲಾಗುತ್ತಿರುವ ಆಧುನಿಕ ವ್ಯವಸ್ಥೆಯಲ್ಲಿ ಅಂಗ್ಲಭಾಷೆಯ ಅಗತ್ಯತೆಯನ್ನು ನಾನೂ ಒಪ್ಪಿಕೊಳ್ಳುತ್ತೇನೆ. ಹಾಗೆಂದು ಅದು ನಮ್ಮ ಜನಾಂಗದ ಮೂಲಉಸಿರನ್ನೇ ಕಿತ್ತುಕೊಳ್ಳುವುದನ್ನು ನಾನು ಖಂಡಿತಾ ಸಹಿಸಲಾರೆ. ಎಳವೆಯಿಂದ ಕಂದನಿಗೆ ಆಂಗ್ಲಮಾಧ್ಯಮಿಕ ಭಾಷೆಯಾಗುವುದು ಸರಿ, ಆದರೆ ಅದೇ ಮನೆಮಾತಾಗುವುದು ನಿಜಕ್ಕೂ ಅಪಾಯಕಾರಿ. ಭಾಷೆಯೊಂದು ಅಳಿಯುತ್ತಿದೆಯೆಂದರೆ ಅದು ಕೇವಲ ಆ ಭಾಷೆಯ ಸಾವಲ್ಲ. ಬದಲಿಗೆ ಆ ಭಾಷೆಯೊಂದಿಗೆ ಬೆರೆತು ಹೋದ ಒಂದು ಜನಾಂಗದಸಂಸ್ಕೃತಿ, ಪರಂಪರೆ, ಮೂಲಸೊಗಡು ಇವೆಲ್ಲವುಗಳ ಅಡಿಪಾಯವನ್ನೇ ಅಲುಗಿಸಿದಂತೆ. ವಿಶ್ವದ ಹಲವಾರು ವಿದ್ವಾಂಸರಿಂದ ಬಗೆಬಗೆಯಾಗಿ ಪ್ರಶಂಸೆಗೊಳಗಾದ ಕನ್ನಡ, ತನ್ನವರಿಂದಲೇ ಉದಾಸೀನಕ್ಕೊಳಗಾಗುತ್ತಿರುವುದು ನಿಜಕ್ಕೂವಿಷಾದನೀಯ. ಅಷ್ಟಕ್ಕೂ ಆಂಗ್ಲಭಾಷೆ ಕೂಡ ಜಗತ್ತಿನ ಎಲ್ಲಾ ಭಾಷೆಗಳಂತೆಯೇ ಒಂದು ಭಾಷೆಯಷ್ಟೇ. ಆದರೂ ಅದು ಈ ಮಟ್ಟಿಗೆ ಪ್ರಪಂಚದೆಲ್ಲೆಡೆ ತನ್ನ ಪ್ರಭಾವಿ ಬಾಹುಗಳನ್ನು ಚಾಚಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರವೂಗತಚರಿತ್ರೆಯಲ್ಲಿಯೇ ಸಿಗುತ್ತದೆ. ಆಂಗ್ಲರು ತಾವು ಅತಿಕ್ರಮಿಸಿದ  ಪ್ರದೇಶಗಳಲ್ಲಿಯೆಲ್ಲಾ ತಮ್ಮ ಭಾಷೆಗೆ ಮಹತ್ವ ನೀಡಿದರು, ಅದನ್ನು ಆಡಳಿತ ಭಾಷೆಯಾಗಿಸಿದರು. ಅದನ್ನು ಅರಿಯಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದರು ಮತ್ತು ಆಅನಿವಾರ್ಯತೆಯೇ ಇಂದು ಆಂಗ್ಲಭಾಷೆಯನ್ನು ಈ ಮಟ್ಟಿಗೆ ಜಗದ್ವ್ಯಾಪಿಯಾಗಿಸಿರುವುದು.

ಹರಿವ ರಕ್ತದಂತೆಯೇ ನುಡಿವ ಭಾಷೆಗಳ ನಡುವೆಯೂ ಯಾವುದೇ ವ್ಯತ್ಯಾಸವಿಲ್ಲ. ಭಾಷೆಗಳಲ್ಲಿ ಮೇಲು- ಕೀಳೆಂಬುದಿಲ್ಲ.ಪ್ರತಿಯೊಂದು ಭಾಷೆಯೂ ಸಹಜಸುಂದರವೂ ಚಿತ್ತೋಲಾಸಕವೂ ಆದುದೇ ಆಗಿದೆ. ಆದರೆ ಆ ಭಾಷೆಯ ಅಸ್ಥಿತ್ವ ಮಾತ್ರವೇ ಅದನ್ನು ಪೊರೆವ ಜನಾಂಗದ ಪ್ರೇಮ- ಪ್ರಾಬಲ್ಯದ ಮೇಲೆಯೇ ಅವಲಂಬಿತವಾಗಿದೆ. ಕನ್ನಡ ಪರಂಪರೆ ಸರಳತೆ, ವಿಧೇಯತೆ ಹಾಗೂ ಪ್ರಾವೀಣ್ಯವನ್ನುಪೊರೆಯುವ ಉದಾತ್ತ ಪರಂಪರೆಯಾಗಿದೆ. ಅದನ್ನು ಕನ್ನಡಿಗರಾದ ನಾವು ಅರಿತುಕೊಳ್ಳಬೇಕಾದ ಅಗತ್ಯತೆಯಿದೆ. ವೈಜ್ಙಾನಿಕ ಅಧ್ಯಯನಗಳ ಪ್ರಕಾರ ಒಂದು ಭಾಷೆಗಿಂತಲೂ ಹೆಚ್ಚು ಭಾಷೆಯನ್ನು ಕಲಿಯುವುದು ನರವ್ಯೂಹವನ್ನು ಜಾಗೃತಗೊಳಿಸಿ,ಬುದ್ಧಿಯನ್ನು, ಸೃಜನಶೀಲತೆಯನ್ನು ಚುರುಕುಗೊಳಿಸುತ್ತದೆ.ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಪ್ರಬಲ ಪೈಪೋಟಿಯೊಡ್ಡಲು ಪರಭಾಷಾ ಕಲಿಕೆ ಅಗತ್ಯವೇ. ಆದರೆ ಅದು ಕೇವಲ ಆಸಕ್ತಿಯಾಗಿರಬೇಕೇ ವಿನಃ ವ್ಯಾಮೋಹವಾಗಬಾರದು.

” ಇತರ ಭಾಷೆಗಳನ್ನು ಪ್ರೀತಿಸು, ಆದರೆ ನಿನ್ನ ಭಾಷೆಯಲ್ಲಿ ಜೀವಿಸು” ಎಂದು ಗಾಂಧೀಜಿ ಹೇಳಿದ್ದಾರೆ. ಈ ಮಾತು ಮಾರ್ದನಿಸುತ್ತಾ  ನಮ್ಮಮನದ ದನಿಯಾಗಲಿ. ಮಕ್ಕಳ ಮೊದಲ ತೊದಲು ನುಡಿ ಕನ್ನಡವಾಗಿರಲಿ. ಅವುಗಳ ಕೈಯಿಂದ ಬರೆಯಲ್ಪಡುವ ಮೊದಲ ಹೊನ್ನಕ್ಷರ ಕನ್ನಡವಾಗಿರಲಿ. ಎಲ್ಲೇ ಇದ್ದರೂ ಹೇಗೇ ಇದ್ದರೂ ಕನ್ನಡ ಭಾಷೆಯನ್ನು ಕೇಳಿದಾಗ, ಅದು ತನ್ನ ಅಸ್ಥಿತ್ವದ ಜನಕ ಎಂಬ ಅಭಿಮಾನ ಚಿಗುರಲಿ. ಅಷ್ಟೇ ಕನ್ನಡ ಸಂಸ್ಕೃತಿ, ಕರ್ನಾಟಕ ಬಯಸುವುದು. ಕನ್ನಡತನವೇ ನಮ್ಮ ತನವಾಗಿರಬೇಕಷ್ಟೆ. ಎರಗಿದ ಜೀವವನ್ನು ಕರುನಾಡು ಯಾವತ್ತೂ ಮಡಿಲಲ್ಲಿ ಪೊರೆದಿದೆ. ಮನೆಮಾತು ಮರಾಠಿಯಾದರೂ ಕನ್ನಡತಾಯಿಯಸೇವೆ ಮಾಡಿ, ಕೋಟಿ ಹೃದಯಗಳಲ್ಲಿ ಪರಮಪೂಜ್ಯರಾಗುಳಿದ ಬೇಂದ್ರೆ ನಮಗೆ ಸ್ಫೂರ್ತಿಯಾಗುತ್ತಾರೆ. ಟಾಗೋರರಂಥ ಉದಾತ್ತ ಲೇಖಕರಿಂದ “ಲಿಪಿಗಳ ರಾಣಿ” ಎಂದು ಕರೆಸಿಕೊಂಡ ಕನ್ನಡದ ಕುವರರಾದ ನಾವು ನಿಜಕ್ಕೂ ಧನ್ಯರು. ನಾವು ಕುಡಿವನೆಲ, ಇರುವ ಜಲ, ಸೇವಿಸುವ ವಾಯು ಎಲ್ಲವೂ ಈ ಕನ್ನಡತಾಯಿಯ ವರದಾನ. ಅವಳಿಂದ ಬೆಳಗುತ್ತಿರುವ ಈ ಪ್ರಾಣಜ್ಯೋತಿ ಅವಳ ಸೇವೆಗೆಂದೇ ಸದಾ ಸಮರ್ಪಿತವಾಗಿರಲಿ. ಆ ಮೂಲಕ ಕನ್ನಡಕೇತನ ಮುಗಿಲೆತ್ತರಕ್ಕೇರಿ ಕೋಟಿ ನಿಜಪ್ರಜರಜೀವಕ್ಕೆ ನೆರಳಾಗಲಿ. ಸಂಸ್ಕೃತಿಯ ಜೀವಂತಿಕೆಗೆ ಕೊರಳಾಗಲಿ……

ಕನ್ನಡಂ ಗೆಲ್ಗೆ- ಕನ್ನಡಂ ಬಾಳ್ಗೆ   

ಕವನ ವಿ ವಸಿಷ್ಠ

Facebook ಕಾಮೆಂಟ್ಸ್

ಲೇಖಕರ ಕುರಿತು

Kavana V Vasishta

An Akashavani artist, loves reading novels and have published a book "Anthargami"

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!