ಪ್ರಚಲಿತ

ಇಸ್ರೇಲೀಕರಣಗೊಳ್ಳುತ್ತಿದೆ ಭಾರತದ ರಕ್ಷಣಾ ವ್ಯವಸ್ಥೆ

indianarmy_toon

ರಕ್ಷಣಾ ಸಚಿವರಾಗಿ ಮನೋಹರ್ ಪರಿಕ್ಕರ್ ಅವರು ಅಧಿಕಾರ ವಹಿಸಿಕೊಂಡ ಕೆಲವು ದಿನಗಳಲ್ಲೇ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು.ಆ ಸಂದರ್ಶನದಲ್ಲಿ ಅವರನ್ನು “ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಇನ್ನೂ ಕಾದು ನೋಡುವ ತಂತ್ರ ಅನುಸರಿಸುತ್ತದೆಯೋ ಅಥವಾ ಉಗ್ರರ ನೆಲೆಗಳಿಗೇ ತೆರಳಿ ಅಲ್ಲಿಯೇ ಅವರನ್ನು ಹೊಸಕಿ ಹಾಕುವ ಧೈರ್ಯ ತೋರುತ್ತದೆಯೇ” ಎಂದು ಪ್ರಶ್ನೆ ಕೇಳಲಾಗಿತ್ತು.ಅದಕ್ಕೆ ಪರಿಕ್ಕರ್ “ಇದರ ಬಗ್ಗೆ ನಾನು ಮಾತನಾಡುವುದಿಲ್ಲ,ಇನ್ನು ಕೆಲವು ತಿಂಗಳು ಕಾದು ನೋಡಿ ದೇಶದ ರಕ್ಷಣೆಯ ವಿಷಯದಲ್ಲಿ ನಮ್ಮ ನಿಲುವೇನು ಎಂಬುದು ನಿಮಗೇ ತಿಳಿಯುತ್ತದೆ” ಎಂದಿದ್ದರು.ಅವರು ಅಂದು ಹಾಗೆ ಹೇಳಿದ್ದು ಇಂದು ಅನೇಕರಿಗೆ ಅರ್ಥವಾಗಿರಬಹುದು.ಭಾರತೀಯ ಸೇನೆಯ ಇತಿಹಾಸದಲ್ಲೇ ಮೊದಲ ಬಾರಿಗೆ ತಮ್ಮ ಮೇಲೆ ದಾಳಿ ನಡೆಸಿದ ಉಗ್ರರನ್ನು ಒಂದು ವಾರದೊಳಗೆ ಅವರ ನೆಲೆಗೇ ತೆರಳಿ ಭಾರತೀಯ ಸೇನೆ ಹೊಸಕಿ ಹಾಕಿದೆ.

ಜೂನ್ 4ರಂದು ಮಣಿಪುರದ ಚಾಂದೇಲ್ ಜಿಲ್ಲೆಯಲ್ಲಿ ಏಕಾಏಕಿ ಸೇನೆಯ ಮೇಲೆ ಉಗ್ರಗಾಮಿಗಳು ದಾಳಿ ಮಾಡಿದ್ದರಿಂದ 18 ಸೈನಿಕರು ಬಲಿಯಾಗಿದ್ದರು.ಮೃತ ಸೈನಿಕರನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸುವುದಕ್ಕೂ ಮೊದಲೇ ರಕ್ಷಣಾ ಕಾರ್ಯಾಲಯದಲ್ಲಿ ದೇಶದ ಸೈನಿಕರ ಮೇಲೆ ದಾಳಿ ಮಾಡಿದ ಉಗ್ರರ ಮೇಲೆ ಪ್ರತಿದಾಳಿ ಮಾಡಲು ಯೋಜನೆ ರೂಪಿಸಲಾಯಿತು.ಆ ಸಮಯದಲ್ಲಿ ಪ್ರಧಾನಿ ಮೋದಿ ಬಾಂಗ್ಲಾದೇಶ ಪ್ರವಾಸದಲ್ಲಿದ್ದರು.ಅವರ ಅನುಪಸ್ಥಿತಿಯಲ್ಲಿ ಜೂನ್ 4ರಂದೇ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್,ಗೃಹ ಸಚಿವ ರಾಜನಾಥ್ ಸಿಂಗ್,ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಚರ್ಚೆ ನಡೆಸಿ ಮರುದಿನ ಅಂದರೆ ಜೂನ್ 5ರಂದೇ ಪ್ರತಿದಾಳಿ ನಡೆಸಲು ನಿರ್ಧರಿಸಿದರು.ಆದರೆ ಇಷ್ಟು ಕ್ಷಿಪ್ರಗತಿಯಲ್ಲಿ ಮಹತ್ವದ ಕಾರ್ಯಾಚರಣೆಗೆ ಸಜ್ಜಾಗುವುದು ಕಷ್ಟವೆಂದು ಸೇನಾ ಮುಖ್ಯಸ್ಥರು ತಿಳಿಸಿದ್ದರಿಂದ ಜೂನ್ 8 ಸೋಮವಾರದಂದು ದಾಳಿ ನಿಗದಿಪಡಿಸಲಾಯಿತು.ಆದರೆ ಪ್ರಧಾನಿ ಮೋದಿಯವರ ಅನುಮತಿ ಪಡೆಯುವುದು ಒಂದು ದಿನ ತಡವಾದ್ದರಿಂದ ದಾಳಿಯೂ ಒಂದು ದಿನ ತಡವಾಯಿತು.ಪ್ರಧಾನಿ ಬಾಂಗ್ಲಾದಿಂದ ವಾಪಸ್ಸಾಗಿ ಅನುಮತಿ ನೀಡುವುದಕ್ಕೂ ಮೊದಲೇ ದಾಳಿ ಸ್ಥಳಕ್ಕೆ ಸಮೀಪವಿದ್ದ ಸೇನಾನೆಲೆಗೆ ಯೋಧರನ್ನು ಸುಸಜ್ಜಿತ ಶಸ್ತ್ರಾಸ್ತ್ರಗಳೊಂದಿಗೆ ತಲುಪಿಸಲಾಯಿತು.ಮೋದಿ ಬಂದವರೇ ದಾಳಿಗೆ ಹಸಿರು ನಿಶಾನೆ ಕೊಟ್ಟರು.

ಪ್ರಧಾನಿಯವರ ಅನುಮತಿ ಸಿಕ್ಕಿದ ನಂತರ ಸ್ವಲ್ಪವೂ ತಡಮಾಡದ ಸೈನಿಕರು ಮಯನ್ಮಾರ್ ಗಡಿಯಾಚೆ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಪಡೆದು ಜೂನ್ 9 ಮಂಗಳವಾರದಂದು ಬೆಳಗ್ಗೆ ನಾಲ್ಕು ಗಂಟೆಯ ಹೊತ್ತಿಗೆ ಯಾರಿಗೂ ಸ್ವಲ್ಪವೂ ಅನುಮಾನ ಬರದ ರೀತಿಯಲ್ಲಿ ಉಗ್ರರ ಅಡಗುತಾಣಕ್ಕೆ ತೆರಳಿ ದಾಳಿ ನಡೆಸಿ ನೂರಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡರು.ಸಿನಿಮೀಯ ರೀತಿಯಲ್ಲಿ ಸೇನೆ ದಾಳಿ ಮಾಡಿದ್ದರಿಂದ ಉಗ್ರರಿಗೆ ಪ್ರತಿದಾಳಿ ಮಾಡಲು ಅವಕಾಶವೇ ಇರಲಿಲ್ಲ.ಕಾರ್ಯಾಚರಣೆಯುದ್ದಕ್ಕೂ ಪ್ರಧಾನಿ,ರಕ್ಷಣಾ ಸಚಿವರು ನಿರಂತರವಾಗಿ ಸೇನೆಯ ಸಂಪರ್ಕದಲ್ಲಿದ್ದರು.ಅಜಿತ್ ದೋವಲ್ ಮತ್ತು ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಮಾರ್ಗದರ್ಶನ ಮಾಡಲು ಮಯನ್ಮಾರ್ ಗಡಿಯ ಹತ್ತಿರವೇ ಇದ್ದರು.ಒಂದೇ ಒಂದು ಸಾವು-ನೋವುಗಳಿಲ್ಲದೆ ಭಾರತೀಯ ಸೇನೆ ಯಶಸ್ವಿ ಕಾರ್ಯಾಚರಣೆ ನಡೆಸಿ ವಾಪಸ್ಸಾಯಿತು.ಕಾರ್ಯಾಚರಣೆ ನಡೆದಾಗ ನೂರಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆಂದು ಹೇಳಲಾಗಿತ್ತು.ಆದರೆ ಸತ್ತದ್ದು ಏಳು ಜನ ಉಗ್ರರೆಂದು ಈಗ ತಿಳಿದು ಬಂದಿದೆ.ಹತರಾದ ಉಗ್ರರ ಸಂಖ್ಯೆ ಮುಖ್ಯವಲ್ಲ.ಪ್ರತೀಕಾರದಂಥ ದಿಟ್ಟ ನಿರ್ಧಾರಕ್ಕೆ ಭಾರತ ಮುಂದಾಯಿತಲ್ಲ ಅದೇ ಹೆಮ್ಮೆಯ ವಿಷಯ.

ಇಂಥದ್ದೊಂದು ಕ್ಷಿಪ್ರಗತಿಯ ಕಾರ್ಯಾಚರಣೆ ನಡೆಸಿದ್ದಕ್ಕಾಗಿ ಎಲ್ಲರೂ ಸೇನೆ,ರಕ್ಷಣಾ ಸಚಿವರು,ಪ್ರಧಾನಿಯವರನ್ನು ಅಭಿನಂದಿಸುತ್ತಲೇ ಇದ್ದಾರೆ.ರಕ್ಷಣಾ ವ್ಯವಸ್ಥೆಯಲ್ಲಿ ಸದಾ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದ ಭಾರತ ಒಮ್ಮಿಂದೊಮ್ಮೆಲೇ ಕ್ಷಿಪ್ರ ಕಾರ್ಯಾಚರಣೆ ನಡೆಸಿ ತನ್ನ ಸೈನಿಕರನ್ನು ಕೊಂದ ಉಗ್ರರನ್ನು ದಮನಿಸಿ ಪ್ರತೀಕಾರ ತೀರಿಸಿಕೊಂಡಿದ್ದಕ್ಕೆ ಹಲವರು ಹುಬ್ಬೇರಿಸುತ್ತಿದ್ದಾರೆ.ಇಂಥ ಕಾರ್ಯಾಚರಣೆಗಳು ನಡೆದದ್ದು ಇದೇನೂ ಮೊದಲಲ್ಲ.1971 ರ ಬಾಂಗ್ಲಾ ಸ್ವಾತಂತ್ರ್ಯ ಸಮರಕ್ಕೆ ಪೂರಕವಾಗಿ ಅಂದಿನ ಪೂರ್ವ ಪಾಕಿಸ್ಥಾನದಲ್ಲಿ ‘ಮುಕ್ತಿ ವಾಹಿನಿ’ ಜೊತೆಗೂಡಿ ಸೇನೆ ಕಾರ್ಯಾಚರಣೆ ನಡೆಸಿತ್ತು.ಆದರೆ ಸರ್ಕಾರ ಅದನ್ನು ದೃಢೀಕರಿಸಿರಲಿಲ್ಲ.2003ರಲ್ಲಿ ದಕ್ಷಿಣ ಭೂತಾನ್ ನಲ್ಲಿ ಈಶಾನ್ಯ ಉಗ್ರ ಸಂಘಟನೆಗಳ ಮೇಲೆ ‘ಆಪರೇಷನ್ ಆಲ್ ಕ್ಲಿಯರ್’ ಹೆಸರಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿತ್ತು.ಮಯನ್ಮಾರ್ ನಲ್ಲೇ 2006ರಲ್ಲಿ ನುಸುಳಿದ್ದ ಉಗ್ರರನ್ನು ಹೊರಹಾಕಲು ಭಾರತ-ಮಯನ್ಮಾರ್ ಸೇನೆ ಸಣ್ಣ ಪುಟ್ಟ ಕಾರ್ಯಾಚರಣೆ ನಡೆಸಿದ್ದವು.ಆದರೆ ಒಂದು ದೇಶದ ಗಡಿಯನ್ನು ದಾಟಿ ಸ್ವತಂತ್ರವಾಗಿ ಅತೀ ವೇಗವಾಗಿ,ನಿಖರವಾಗಿ ಕಾರ್ಯಾಚರಣೆ ನಡೆಸಿದ್ದು ಇದೇ ಮೊದಲು.ಈ ಕಾರ್ಯಾಚರಣೆಯೊಂದೇ ಅಲ್ಲ,ಮೋದಿ ಪ್ರಧಾನಿಯಾದ ಮೇಲೆ ಮೊದಲ ಬಾರಿಗೆ ಪಾಕಿಸ್ಥಾನ ಕದನ ವಿರಾಮ ಉಲ್ಲಂಘಿಸಿ ಗಡಿಯಲ್ಲಿ ದಾಳಿ ನಡೆಸಿದಾಗ ಭಾರತೀಯ ಸೇನೆಯೂ ತಕ್ಷಣವೇ ಪ್ರತಿದಾಳಿ ನಡೆಸಿ ಪಾಕ್ ಗೆ ಅಪಾರ ಹಾನಿಯುಂಟು ಮಾಡಿತ್ತು.ಹೆದರಿಕೊಂಡ ಪಾಕ್ ವಿಶ್ವಸಂಸ್ಥೆಯ ಬಳಿ ಹೋಗಿ ಭಾರತದ ಮೇಲೆ ದೂರು ಕೊಟ್ಟಿತ್ತು.ಇದನ್ನು ನೋಡಿದರೆ ತಡವಾಗಿಯಾದರೂ ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಇಸ್ರೇಲಿ ನೀತಿ ಅನುಸರಿಸಲು ಆರಂಭಿಸಿದೆ ಅನಿಸುತ್ತದೆ.

 ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳ ಗಡಿಗಳನ್ನು ನಿರ್ಭೀತಿಯಿಂದ ದಾಟಿ ಸೇನಾ ಕಾರ್ಯಾಚರಣೆ ನಡೆಸುವುದಕ್ಕೆ ಇಸ್ರೇಲ್ ಹಾಗೂ ಅಮೇರಿಕಾ ಪ್ರಸಿದ್ಧಿಯಾಗಿವೆ.ಆದರೆ ಅಮೇರಿಕಾಗಿಂತಲೂ ಇಸ್ರೇಲ್ ಅಂಥ ಕಾರ್ಯಾಚರಣೆಗಳನ್ನು ಅತ್ಯಂತ ಚಾಣಾಕ್ಷವಾಗಿ,ತ್ವರಿಗಗತಿಯಲ್ಲಿ ಮಾಡುತ್ತದ.ಸದಾ ಕಾಲು ಕೆರೆದುಕೊಂಡು ಬರುವ ತನ್ನ ಸುತ್ತಮುತ್ತಲಿನ ಮುಸ್ಲಿಂ ರಾಷ್ಟ್ರಗಳಾದ ಲೆಬೆನಾನ್,ಸಿರಿಯಾ,ಜೋರ್ಡಾನ್,ಇರಾಕ್ ಮುಂತಾದ ರಾಷ್ಟ್ರಗಳೊಳಗೇ ನುಗ್ಗಿ ಇಸ್ರೇಲಿ ಸೇನಾಪಡೆಗಳು ಹಲವು ಬಾರಿ ಉಗ್ರರ ದಮನ ಮಾಡಿವೆ.ಉದಾಹರಣೆ ನೋಡುವುದಾದರೆ ಸದಾ ಇಸ್ರೇಲ್ ನ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡು ಮುಸ್ಲಿಂ ರಾಷ್ಟ್ರವನ್ನಾಗಿಸಲು ಹೊಂಚು ಹಾಕುವ ‘ಹಮಾಸ್’ ಉಗ್ರ ಸಂಘಟನೆಯ ಮುಖಂಡ ಯಾಸೀನ್ ಅಹಮ್ಮದ್ ಷೇಕ್ ನನ್ನು ಗಾಜಾ ಪಟ್ಟಿಯೊಳಕ್ಕೇ ನುಗ್ಗಿ ಇಸ್ರೇಲಿ ಪಡೆಗಳು ಆತ ನಮಾಜ್ ಮಾಡುತ್ತಿರುವಾಗಲೇ ದಾಳಿ ನಡೆಸಿ ಕೊಂದುಹಾಕಿದ್ದವು.ಇದು ಒಂದು ಉದಾಹರಣೆ ಮಾತ್ರ.ಪ್ರತೀ ಬಾರಿಯೂ ಇಸ್ರೇಲ್ ತನ್ನ ಮೇಲೆ ದಾಳಿ ಮಾಡಿದವರ ಮೇಲೆ,ತನ್ನ ಅಮಾಯಕ ನಾಗರಿಕರನ್ನು ಕೊಂದವರ ಮೇಲೆ ಪ್ರತಿದಾಳಿ ಮಾಡುತ್ತದೆ.ಇದು ಭಾರತಕ್ಕೆ ತೀರಾ ಹೊಸದು.ಆದರೆ ಈಗ ಭಾರತೀಯ ಸೇನೆ ತಾನೂ ಸಹ ಇಸ್ರೇಲ್ ನಂತೆಯೇ ಕಾರ್ಯಾಚರಣೆ ನಡೆಸಬಲ್ಲೆ ಎಂದು ತೋರಿಸಿದೆ.

ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಯಾವತ್ತೋ ಇಸ್ರೇಲಿ ನೀತಿಯನ್ನು ಅಳವಡಿಸಿಕೊಳ್ಳಬೇಕಿತ್ತು.ಯುಪಿಎ ಸರ್ಕಾರದ ಅವಧಿಯಲ್ಲಿ ಲೆಕ್ಕವಿಲ್ಲದಷ್ಟು ಉಗ್ರರ ದಾಳಿಗಳಾದರೂ,ಪಾಕಿಸ್ಥಾನ ಹಲವು ಬಾರಿ ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡಿದಾಗಲೂ ಅಂದಿನ ಮನಮೋಹನ್ ಸಿಂಗ್ ಸರ್ಕಾರ ಪ್ರತಿ ಬಾರಿಯೂ ‘ಕಾದು ನೋಡುವ’ ತಂತ್ರ ಅನುಸರಿಸಿತು.ಒಂದು ಬಾರಿಯೂ ಪ್ರತಿದಾಳಿ ಮಾಡಿ ವೈರಿಗಳ ದಮನದ ಕುರಿತು ಆಲೋಚಿಸಲೇ ಇಲ್ಲ.ಮುಂಬೈ ದಾಳಿಯಂಥ ದಾಳಿ ಇಸ್ರೇಲ್,ಅಮೇರಿಕಾ ಮೇಲಾಗಿದ್ದಿದ್ದರೆ ಇಷ್ಟು ಹೊತ್ತಿಗೆ ತಮ್ಮ ಮೇಲೆ ದಾಳಿ ಮಾಡಿದವರನ್ನು ಒಬ್ಬರನ್ನೂ ಬಿಡದಂಥೆ ಅವು ನಿರ್ನಾಮ ಮಾಡುತ್ತಿದ್ದವು.ಭಾರತದ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ನನ್ನು ಹಿಡಿಯಲು ರಕ್ಷಣಾ ಸಚಿವಾಲಯ 8 ತಂಡಗಳನ್ನು ಕಳಿಸಿದ್ದರೂ ಕೊನೆಕ್ಷಣದಲ್ಲಿ ಒಂದು ಫೋನ್ ಕರೆ ಮಾಡಿ ದಾಳಿ ನಡೆಸದಂತೆ ಯುಪಿಎ ಸರ್ಕಾರ ಸೂಚಿಸಿತ್ತು.ಪ್ರತಿ ಬಾರಿಯೂ ‘ಇನ್ನು ಸಹಿಸಲಾರೆವು’ ಎಂದು ಹೇಳಿಕೆ ಕೊಡುತ್ತಿತ್ತೇ ವಿನ: ದೇಶದ ರಕ್ಷಣೆಗಾಗಿ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ.

ಯುಪಿಎ ಸರ್ಕಾರದ ಅವಧಿಯಲ್ಲಿ ಎಂಥ ಸೈನಿಕರಿದ್ದರೋ ಅದೇ ಸೈನಿಕರು ಇಂದೂ ಸೇನೆಯಲ್ಲಿದ್ದಾರೆ.ಸೂಕ್ತ ಮಾರ್ಗದರ್ಶನ,ನಾಯಕತ್ವ,ಶಸ್ತ್ರಾಸ್ತ್ರಗಳನ್ನು ಕೊಟ್ಟರೆ ಸದಾ ಕಾಲ ನಮ್ಮ ಸೈನಿಕರು ದೇಶವಾಸಿಗಳ ಹಿತ ಕಾಪಾಡ

ಲು ಬದ್ಧರಾಗಿದ್ದಾರೆ.ಸೈನಿಕರು ಬದಲಾಗಿಲ್ಲ.ಬದಲಾಗಿದ್ದು ಭಾರತದ ನಾಯಕತ್ವ ಮಾತ್ರ.ಮೋದಿಯಂಥ ವಿಶ್ವವಂದ್ಯ ನಾಯಕನ ಜೊತೆ ಪರಿಕ್ಕರ್,ಅಜಿತ್ ದೋವಲ್ ರಂಥವರು ಅತ್ಯಂತ ಪ್ರಭಾವಿಯಾಗಿ ಕೆಲಸ ಮಾಡುತ್ತಿದ್ದಾರೆ.ಯುಪಿಎ ಸರ್ಕಾರದ ಅವಧಿಯಲ್ಲಿ ದಾಳಿ ನಡೆಸಲು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದ ಸೈನಿಕರು ಇಂದು ಇಸ್ರೇಲ್ ಮಾದರಿಯಲ್ಲಿ ಸರ್ವಸನ್ನದ್ಧರಾಗಿ ಕುಳಿತು ನಮ್ಮ ಪ್ರಧಾನಿ ಯಾವತ್ತೂ ನಮ್ಮ ಜೊತೆಗಿದ್ದಾರೆ ಎಂಬ ಆತ್ಮವಿಶ್ವಾಸ ಬೆಳೆಸಿಕೊಂಡಿದ್ದಾರೆ.ಮಯನ್ಮಾರ್ ನಲ್ಲಿ ಸೇನೆ ನಡೆಸಿದ ಕಾರ್ಯಾಚರಣೆ ಪಾಕ್,ಚೀನಾಕ್ಕೂ ನಡುಕ ಹುಟ್ಟಿಸಿದೆ.‘56 ಇಂಚಿನ ಎದೆ’ಯ ಸಾಮರ್ಥ ಅತ್ಯಂತ ಸಮರ್ಥ ರೀತಿಯಲ್ಲಿ ಜಗಜ್ಜಾಹೀರಾಗಿದೆ.

Lakshmisha J Hegade

Facebook ಕಾಮೆಂಟ್ಸ್

ಲೇಖಕರ ಕುರಿತು

Lakshmisha J Hegade

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!