ಪ್ರಚಲಿತ

ವಿರೋಧಿಸುವುದಷ್ಟೇ ವಿರೋಧ ಪಕ್ಷದ ಕೆಲಸವೇ?

‘ಸರಕಾರ ತೆಗೆದುಕೊಳ್ಳುವ ಒಳ್ಳೆಯ ನಿರ್ಧಾರಗಳನ್ನು ಬೆಂಬಲಿಸೋಣ. ಎಲ್ಲವನ್ನು ವಿರೋಧಿಸುವುದು, ಎಲ್ಲದಕ್ಕೂ ಮೋದಿಯನ್ನು ತೆಗಳುವುದುನ್ನು ನಿಲ್ಲಿಸೋಣ’ ಇದು ಇತ್ತೀಚೆಗೆ ದಿಗ್ವಿಜಯ ಸಿಂಗ್, ಅಭಿಷೇಕ್ ಮನು ಸಿಂಗ್ವಿ, ಶಶಿತರೂರು ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿರುವ ಮಾತುಗಳು. ನಿಜಕ್ಕೂ ಇದು ಕಾಂಗ್ರೆಸ್ ಪಕ್ಷದ ಒಳ್ಳೆಯ ಬೆಳವಣಿಗೆಯೇ. ಕಾಂಗ್ರೆಸ್‍ನ ಈ ಹಿರಿತಲೆಗಳಿಗೆ ಕಡೆಗಾದರೂ ಜ್ಞಾನೋದಯವಾಯಿತಲ್ಲ ಎಂಬುದೇ ಇಲ್ಲಿ ಒಂದು ರೀತಿಯ ಸಂತಸದ ವಿಷಯ. ತಾನು ಮಾಡುವುದು ಮಾತ್ರ ಸರಿ ಎನ್ನುತ್ತಾ ಪರರ ಎಲ್ಲಾ ವಿಚಾರಗಳನ್ನು ವಿರೋಧಿಸುವುದು ನಿಜಕ್ಕೂ ಅದು ಕೆಟ್ಟ ರಾಜಕೀಯವೇ. ಸದ್ಯ ದೇಶದ ರಾಜಕೀಯದಲ್ಲಿ ತುರ್ತಾಗಿ ಬದಲಾಗಬೇಕಿರುವುದು ಕೂಡ ಈ ಮನಸ್ಥಿತಿಯೇ.

ಆಡಳಿತ ಪಕ್ಷವರಿಲಿ ಅಥವಾ ವಿರೋಧ ಪಕ್ಷವೇ ಇರಲಿ ಆದರೆ ಅದರ ಹಿತ ಚಿಂತನೆ ಸಮಷ್ಠಿಯದ್ದಾಗಿರಬೇಕು. ರಾಷ್ಟ್ರ ರಕ್ಷಣೆ, ರಾಷ್ಟ್ರದ ಅಭಿವೃದ್ಧಿ ಅದರ ಗುರಿಯಾಗಿರಬೇಕು. ಆಡಳಿತರೂಢ ಪಕ್ಷವು ಒಂದು ಉತ್ತಮ ನಡೆಯನ್ನು ತೆಗೆದುಕೊಂಡಿದೆ ಎಂದರೆ, ಒಂದು ಉತ್ತಮ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದೆ ಎಂದರೆ ಆವಾಗ ಎಲ್ಲಾ ಪಕ್ಷಗಳು ತತ್ವ ಸಿದ್ಧಾಂತ ಮರೆತು ಅದನ್ನು ಪ್ರೋತ್ಸಾಹಿಸುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಆವಾಗಲೇ ದೇಶದ ಪ್ರಗತಿಯ ಗತಿ ಬದಲಾಗುವುದು. ಆದರೆ ಆಗುತ್ತಿರುವುದಾದರೂ ಏನು? ಸ್ವಹಿತ ಹಾಗೂ ದ್ವೇಷ ರಾಜಕಾರಣದಿಂದ ಕೊಳೆತಿರುವ ಪಕ್ಷಗಳು ಇಂದು ಆಡಳಿತ ರೂಡ ಪಕ್ಷವು ಅದೇನೆ ತೀರ್ಮಾನ ತೆಗೆದುಕೊಂಡರೂ,ಅದು ಒಳ್ಳೆಯದಿರಲಿ ಇಲ್ಲವೇ ಕೆಟ್ಟದಿರಲಿ ಅದನ್ನು ವಿರೋಧಿಸುತ್ತಲೇ ಬರುತ್ತಿದೆ ಎಂಬುದು ನಗ್ನ ಸತ್ಯ. ಮೊನ್ನೆ ಮೊನ್ನೆಯಷ್ಟೇ ಕಾಶ್ಮೀರವನ್ನು ಭಾರತದಿಂದ ದೂರವಿರಿಸಿದ್ದ 370ನೇ ವಿಧಿಯನ್ನು ರದ್ಧು ಪಡಿಸಿದಾಗಲೂ ವಿರೋಧಪಕ್ಷಗಳು ಮಾಡಿದ್ದು ಇದನ್ನೇ ಅಲ್ಲವೇ? ಬೇರೆ ಸಣ್ಣ ಪುಟ್ಟ ಪಕ್ಷಗಳ ಮಾತು ಒತ್ತಟ್ಟಿಗಿರಲಿ, ರಾಷ್ಟ್ರವನ್ನು ದೀರ್ಘಕಾಲ ಆಳಿದ, ದೇಶವ್ಯಾಪಿಯಾಗಿ ನೆಲೆಯೂರಿದ್ದ ರಾಷ್ಟ್ರೀಯ ಕಾಂಗ್ರೆಸ್ ಕೂಡ ಈ ಸಂದರ್ಭದಲ್ಲಿ ವಿಚಾರ ವಿಮರ್ಶೆ ಮಾಡದೆ ವಿರೋಧ ಪಕ್ಷವಾಗಿ ಬರೇ ವಿರೋಧೀಸುವುದನ್ನಷ್ಟೇ ತನ್ನ ಕಾಯಕವಾಗಿಸಿದ್ದು ವಿಪರ್ಯಾಸ! ತಮಾಷೆಯೆಂದರೆ ಇದುವೇ ರಾಷ್ಟೀಯ ಕಾಂಗ್ರೆಸ್ 3-4 ತಿಂಗಳುಗಳ ಹಿಂದೆ ಅಂದರೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯನ್ನು ಛೇಡಿಸಲು ಇದೇ 370ನೇ ವಿಧಿಯನ್ನು ಆಯುಧವನ್ನಾಗಿಸಿತ್ತು! ಅಂದರೆ ಬಿಜೆಪಿಯನ್ನು ತೆಗಳುತ್ತಾ ‘370 ನೇ ವಿಧಿಯ ರದ್ಧತಿಯು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿದ್ದರೂ ಅದನ್ನು ರದ್ಧು ಮಾಡದೇ ಹೋಗಿರುವುದು ಅದು ಜನತೆಗೆ ಬಿಜೆಪಿ ಮಾಡಿದ ಮೋಸ’ ಎಂದು ಲೇವಡಿಯಾಡಿಯತ್ತು. ಆದರೆ ಇದೀಗ ತನ್ನ ಎರಡನೇ ಅವಧಿಯಲ್ಲಿ ಬಿಜೆಪಿರದ್ದು ಮಾಡಿದಾಗ ್ರ ಇದೇ ಕಾಂಗ್ರೆಸ್ ಏನೋ ಆಗ ಬಾರದ್ದು ಆಗಿಹೋಯಿತು ಎಂಬಂತೆ ವರ್ತಿಸಲು ಪ್ರಾರಂಭಿಸಿದೆ. 370ನೇ ವಿಧಿಯ ಅವಶ್ಯಕತೆ ಏನು? ಈ ವಿಧಿಯ ರದ್ಧತಿಯಿಂದ ಆಗಬಹುದಾದ ಪ್ರಯೋಜನಗಳೇನು? ತೊಂದರೆಗಳೇನು ಎಂಬುದರ ಬಗೆಗೆ ಒಂದು ಸ್ಪಷ್ಟ ಚಿತ್ರಣವನ್ನು ನೀಡುವಂತಹ ವಿಮರ್ಶೆಗೆ ಕಾಂಗ್ರೆಸ್ ಕೈ ಹಾಕಿರುತ್ತಿದ್ದರೆ ಮೆಚ್ಚಬಹುದಿತ್ತು. ಆದರೆ. ಅದ್ಯಾವುದೂ ಇಲ್ಲ.ಶತ್ರು ಪಕ್ಷ ಬಿಜೆಪಿ ಮಾಡಿತು ಎಂದಾಕ್ಷಣ ಅದನ್ನು ವಿರೋಧಿಸುವ ಕೆಲಸ ಸುರುವಚ್ಚಿತು! ಅದರಲ್ಲೂ ಚಿದಂಬರಂನಂತಾಹ ಹಿರಿಯ ರಾಜಕೀಯ ಮುತ್ಸದ್ದಿ ಅದ್ಯಾವ ಮಟ್ಟದಲ್ಲಿ ವಿರೋಧಿಸಿದರು ಎಂದರೆ ‘ಕಾಶ್ಮೀರದಲ್ಲಿ ಮುಸಲ್ಮಾನರು ಅಧಿಕವಾಗಿರುವುದರಿಂದಲೇ ಬಿಜೆಪಿ ಈ ವಿಧಿಯನ್ನು ರದ್ದುಗೊಳಿಸಿದ್ದು. ಒಂದು ವೇಳೆ ಹಿಂದೂಗಳ ಬಾಹುಳ್ಯ ಇರುತ್ತಿದ್ದರೆ ಖಂಡಿತಾ ರದ್ದು ಮಾಡುತ್ತಿರಲಿಲ್ಲ!’ ಎಂಬ ಕೀಳು ಮಟ್ಟದ ಹೇಳಿಕೆಯನ್ನು ಕೊಟ್ಟು ಬಿಟ್ಟರು! ಇನ್ನು ಕಾಂಗ್ರೆಸ್‍ನ ತುತ್ತ ತುದಿಯ ನಾಯಕ ರಾಹುಲ್ ಅಂತು ‘ರದ್ದು ಮಾಡಿದ್ದು ತೀರಾ ಬೇಗವಾಯಿತು, ಅಲ್ಲಿನ ಜನರೊಡನೆ ಮಾತನಾಡಿ ಬಳಿಕ ತೀರ್ಮಾನ ತೆಗೆದುಕೊಳ್ಳಬೇಕಿತ್ತುಎಂದರು! 5 ವರ್ಷಗಳಲ್ಲಿ ಸರಕಾರ ಮಾಡದೇ ಇದ್ದಾಗ ನೀವ್ಯಾಕೆ ಮಾಡೇ ಇಲ್ಲ ಎಂದು ಎಗರಾಡಿದ್ದ ಇವರುಗಳು ಇಂದು ಮಾಡಿದಾಗ ಬೇಗವಾಯಿತು, ಅವಸರವಾಯಿತು ಎನ್ನುವುದನ್ನು ನೋಡಿದರೆಅದೆಂತಹ ಮಟ್ಟಕ್ಕೆ ಈ ರಾಜಕಾರಣ ಇಳಿದಿದೆ ಎಂದು ಆಶ್ಚರ್ಯವಾಗುತ್ತದೆ. ನಿಜಕ್ಕೂ ಈ 370ನೇ ವಿಧಿಯ ರದ್ದತಿಯನು ದೊಡ್ಡ ಮಟ್ಟದಲ್ಲಿ ವಿರೋಧಿಸಿದ್ದು ಒಂದು ಪಾಕಿಸ್ಥಾನವಾದರೆ ಇನ್ನೊಂದು ಇದೇ ಕಾಂಗ್ರೆಸ್!. ಅದರಲ್ಲೂ ಕಾಶ್ಮೀರ ಕಣಿವೆಯಲ್ಲಿ ರಕ್ತಪಾತ ನಡೆಯುತ್ತಿದೆ, ಅಶಾಂತಿ ಭುಗಿಲೆದ್ದಿದೆ, ಎಂದು ರಾಹುಲ್ ಹೇಳಿಕ ನೀಡಿರುವುದು ಇಂದು ಶತ್ರು ರಾಷ್ಟ್ರ ಪಾಕಿಸ್ಥಾನಕ್ಕ ಬಂಡವಾಳವಾಗಿ ಧಕ್ಕಿದೆ ಎಂಬದು ಸತ್ಯ! ನಮ್ಮದೇ ನೆಲದ ಕಾನೂನನ್ನು, ನಮ್ಮದೇ ನೆಲದ ವಿಚಾರಗಳನ್ನು ಶತ್ರು ರಾಷ್ಟ್ರಕ್ಕೆ ಆಹಾರವಾಗಿಸಿದ್ದು ನಿಜಕ್ಕೂ ದುರಂತ. ಇದೀಗ ರಾಹುಲ್‍ರ ಇದೇ ಹೇಳಿಕಯನ್ನು ಪಾಕಿಸ್ಥಾನ ಯುನ್‍ಓ ಮುಂದೆ ಇರಿಸಿ ಭಾರತವನ್ನು ಜಗ್ಗಲು ಪ್ರಾರಂಭಿಸಿದೆ. ಇನ್ನು ನಾಳೆ ವಿಶ್ವ ಸಂಸ್ಥೆ ಏನಾದರೂ ಸ್ಪಷ್ಟತೆ ಕೇಳಿದರೆ ಈ ರಾಹಲ್ ಗಾಂಧಿ ಏನೆಂದು ಉತ್ತರಿಸಿಯಾರು!? ವಿರೋಧೀ ಪಕ್ಷ ಬಿಜೆಪಿಯನ್ನು ಹಳಿಯುವ ಪ್ರಯತ್ನದಲ್ಲಿ ಇವರ ಉತ್ತರ ಅದೇಗೆ ಇರಬಹುದು ಎಂದು ಊಹಿಸುವುದೇ ಕಷ್ಟ! ಒಂದೇ ಮಾತಿನಲ್ಲಿ ಹೇಳುವುದಾದರೆ 370ನೇ ವಿಧಿಯ ರದ್ಧತಿಯ ಬಗ್ಗೆ ಪಾಕಿಸ್ಥಾನ ಮಾಡಿರುವ, ಮಾಡಬಹುದಾದ ಎಲ್ಲಾ ಟೀಕೆಗಳನ್ನು ಈ ಕಾಂಗ್ರೆಸ್ ಅದಾಗಲೇ ಮಾಡಿಯಾಗಿದೆ!

ಆಡಳಿತರೂಢ ಪಕ್ಷವನ್ನು ವಿರೋಧಿಸಬೇಕು ನಿಜ. ಹಾಗಂತ ಇದ್ದ ಬದ್ಧ ಎಲ್ಲಾ ವಿಚಾರಗಳನ್ನು ಟೀಕಿಸುವುದೇ? ಕೊನೆಪಕ್ಷ ಭ್ರಷ್ಟಾಚಾರದ ವಿಚಾರ ಬಂದಾಗ, ರಾಷ್ಟ್ರದ ಏಕೀಕರಣದ ವಿಚಾರ ಬಂದಾಗ, ರಾಷ್ಟ್ರದ ರಕ್ಷಣೆಯ ವಿಚಾರ ಬಂದಾಗಲಾದರೂ ಒಕ್ಕೊರಲ ಅಭಿಪ್ರಾಯ ಚೆಲ್ಲುವುದು ಉಕ್ತವಲ್ಲವೇ? ಭಾರತದ ಮೇಲೆ ಭಯೋತ್ಪಾದಕರು ದಾಳಿ ಮಾಡಿದಾಗ ಅದು ಭಾರತದ ಭದ್ರತೆಯ ವೈಫಲ್ಯ ಎಂದು ಟೀಕಿಸಲಾಯಿತು. ಅದೇನೋ ಸರಿ. ಆದರೆಅದೇ ಆಕ್ರಮಣಕ್ಕೆ ಪ್ರತಿಆಕ್ರಮಣವೆಂದು ದಾಳಿ ಮಾಡಿದಾಗ ಅದರ ಸತ್ಯಾಸತ್ಯತೆಯ ಪರಾಮರ್ಶೆ ನಡೆಸಿ ವಿರೋಧಿಗಳೇ ನಮ್ಮನ್ನ ನೋಡಿ ನಗುವಂತೆ ಮಾಡಿದರು! ಸರ್ಜಿಕಲ್ ಸ್ಟೈಕ್‍ನಂತಹ ಪರ್‍ಫೆಕ್ಟ್ ಹಿಟ್‍ಗೇನೆ ಈ ನಮ್ಮ ಕಾಂಗ್ರೆಸ್ ಅನುಮಾನದ ಗೆರೆ ಎಳೆದುಬಿಟ್ಟಿತ್ತು! ದಾಳಿಯ ಬಗ್ಗೆ ಸಾಕ್ಷ್ಯ ನೀಡಿ ಎಂದು ಕಾಲೆಳೆಯಿತು!ಬಹುಷಃ ಇಂತಹ ಕೀಳು ಮಟ್ಟದ ರಾಜಕೀಯ ಬೇರಾವ ರಾಷ್ಟ್ರದಲ್ಲೂ ನಡೆಯಲು ಸಾಧ್ಯವಿಲ್ಲ ಬಿಡಿ. ಇಲ್ಲಿ ದೇಶದ ಕತೆ ಹೇಗಾದರೂ ಆಗಲಿ, ವಿರೋಧಿ ರಾಷ್ಟ್ರ ನಮ್ಮ ಎದುರು ಅದೇಗೆ ಬೇಕಾದರೂ ಸವಾರಿ ಮಾಡಲಿ ಆದರೆ ನಮ್ಮ ಆಢಳಿತ ರೂಢ ಪಕ್ಷ ಮಾತ್ರ ಯಾವುದೇ ರಾಜಕೀಯಲಾಭ ಪಡೆಯಬಾರದುಎಂಬುದಷ್ಟೇ ಈ ವಿರೋಧಿ ಪಾಳಯದ ಚಿಂತನೇ!
2014ರಲ್ಲಿ ಕಾಂಗ್ರೆಸ್ ನೆಲಕಚ್ಚಿದಾಗ ಏ.ಕೆ ಆಂಟನಿ ನೇತೃತ್ವದಲ್ಲಿ ಸಮಿತಿಯೊಂದು ನಿರ್ಮಾಣಗೊಂಡು ಸೋಲಿನ ವಿಶ್ಲೇಷಣೆಗೆ ಇಳಿದಿತ್ತು ಎಂಬ ವಿಚಾರ ಗೊತ್ತೇ ಇದೆ. ಅಲ್ಪಸಂಖ್ಯಾತರ ಅತಿಯಾದ ಓಲೈಕೆಯೇ ಅಂದಿನ ಸೋಲಿಗೆ ಕಾರಣವೆಂಬ ಮಾಹಿತಿಯನ್ನೂ ಅದು ಜರಡಿ ಹಿಡಿಯಿತು. ಆದರೆ ಪಕ್ಷ ಮುಂದಿನ ದಿನಗಳಲ್ಲಿ ತನ್ನ ನಿಲುವಿನಲ್ಲಿ ಏನಾದರೂ ಬದಲಾವಣೆಯನ್ನು ಮಾಡಿಕೊಂಡಿತೇ? ಖಂಡಿತಾ ಇಲ್ಲ! ಈ ಬಾರಿಚುನಾವಣೆ ಹತ್ತಿರ ಬಂದಾಗ ರಾಹುಲ್ ಗಾಂಧಿತೋರಿಕೆಯ ಜನಿವಾರ ಹಾಕಿಕೊಂಡು ದೇವಸ್ಥಾನಗಳಿಗೆ ಭೇಟಿ ನೀಡಿದ್ದು ಬಿಟ್ಟರೆ ಉಳಿದಂತೆ ಬರೇ ಶೂನ್ಯ!ಇನ್ನು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜಿಪಿಯನ್ನು, ಮೋದಿಯನ್ನು ಯದ್ವಾತದ್ವ ಹೀಯಾಳಿಸಿದ್ದು ಬಿಟ್ಟರೆ ರಾಷ್ಟ್ರ ಕಟ್ಟುವ ಸಂಕಲ್ಪದ ವಿಚಾರಗಳ ಬಗ್ಗೆ ಧ್ವನಿಯನ್ನೇ ಎತ್ತಿರಲಿಲ್ಲ! ಇದು ಈ ಬಾರಿಯ ಚುನಾವಣಾ ಸೋಲಿಗೆ ಕಾರಣ ಎಂಬುದು ಸ್ಪಷ್ಟ. ಒಂದೆಡೆ ಬಿಜೆಪಿ ರಾಷ್ಟ್ರ ಪ್ರೇಮದ ವಿಚಾರಗಳನ್ನು ಮುಂದಿಟ್ಟುಕೊಂಡು ಯುವ ಸಮುದಾಯವನ್ನು ಬಡಿದೆಬ್ಬಿಸುತತ್ತಿದ್ದರೆ ಇನ್ನೊಂದೆಡೆ ಈ ಕಾಂಗ್ರೆಸ್ ಬಿಜೆಪಿಯ ಸಿದ್ಧಾಂತಗಳನ್ನು ತೆಗಳುವುದಕ್ಕಾಗಿಯೇ ವೇದಿಕೆಗಳನ್ನು ಬಳಸಿಕೊಂಡಿತ್ತು.ರಾಷ್ಟ್ರ ಪ್ರೇಮದ ವಿಚಾರಗಳನ್ನು ಕಡೆಗಣಿಸಿದ್ದು, ವಂದೇ ಮಾತರಂಹಾಡುವುದುಕಡ್ಡಾಯವೆಂದುಸರಕಾರ ಸಾರಿದಾಗ ನಾವು ಒಪ್ಪುವುದಿಲ್ಲ ಎಂದಿದ್ದು, ದೇಶಕ್ಕೆ ಅಡರಿದ್ದ ಭ್ರಷ್ಟಾಚಾರವನ್ನು, ಕಪ್ಪು ಹಣವನ್ನು ಮಟ್ಟಹಾಕಬೇಕು ಎನ್ನುವ ನಿಟ್ಟಿನಲ್ಲಿ ನೋಟುಗಳನ್ನು ಅಮಾನ್ಯಗೊಳಿಸಿದಾಗ ಏನೋ ಆಗ ಬಾರದ್ದು ಆಗಿ ಹೋಯಿತು ಎಂಬಂತೆ ಗೋಳಾಡಿದ್ದು, ಬಡವರು ದುಡ್ಡಿಗಾಗಿ ಪರದಾಡುವಂತಾಯಿತು ಎಂದು ಬಣ್ಣ ಬಣ್ಣದ ಕತೆಯನ್ನು ಕಟ್ಟಿ ಪ್ರಚುರ ಪಡಿಸಿದ್ದು, ಸ್ವತಃ ರಾಹಲ್‍ಗಾಂದಿಯೇ ಎಟಿಮ್ ಮುಂದಿನ ಸರತಿಯಲ್ಲಿ ನಿಂತು ಪೋಸ್ ಕೊಟ್ಟಿದ್ದು ಇಂತವೆಲ್ಲಾ ಅರ್ಥ ರಹಿತ ವಿರೋಧಗಳೇ ಕಾಂಗ್ರೆಸ್‍ಗೆ ಚುನಾವಣಾ ಫಲಿತಾಂಶದಲ್ಲಿ ಮುಳುವಾಗಲು ಕಾರಣವೆಂಬುದು ಸತ್ಯ.

ರಾಜಕೀಯವೆಂದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇದ್ದಿದ್ದೇ. ಆದರೆ ಈ ಮೊದಲೇ ಹೇಳಿದಂತೆ ಯಾವುದನ್ನು ವಿರೋಧಿಸಬೇಕು, ಯಾವುದನ್ನು ಬೆಂಬಲಿಸಬೇಕು ಎಂಬುದು ಪ್ರತೀಯೊಂದು ರಾಜಕೀಯ ಪಕ್ಷಕ್ಕೂ ತಿಳಿದಿರಬೇಕು ಅಷ್ಟೇ.ಭ್ರಷ್ಟಾರದಂತಹ ವಿಚಾರ ಬಂದಾಗ, ರಾಜಕಾರಣಿಯೋರ್ವ ಕಂಬಿಗಳ ಹಿಂದ ಸರಿಯಬೇಕಾದ ಪ್ರಸಂಗ ಬಂದಾಗ ಅದನ್ನೂ ರಾಜಕೀಯ ದ್ವೇಷದ ಬಂಧನ ಎಂದೆನ್ನುತ್ತಾ ಬೀದಿ ಹೋರಾಟ ಮಾಡುವುದು ನಿಜಕ್ಕೂ ತುಚ್ಛ ರಾಜಕಾರಣ ಎನ್ನದೆ ವಿಧಿಯಿಲ್ಲ. ಇವೆಲ್ಲವುಗಳು ಮೊದಲಾಗಿ ನಿಲ್ಲಬೇಕು. ಕಾಂಗ್ರೆಸ್‍ನ ಹಿರಿಯ ನಾಯಕರುಗಳು ಇತ್ತೀಚೆಗೆ ಹೇಳಿದಂತೆ ಎಲ್ಲದಕ್ಕೂ ಮೋದಿಯನ್ನು ವಿರೋಧಿಸುವುದು ತರವಲ್ಲ. ಹಾಗೇನೇ ಎಲ್ಲಾ ಕಾರ್ಯಗಳನ್ನೂ ಮೋದಿಯಿಂದಲೇ ನಿರೀಕ್ಷಿಸುವುದು ಕೂಡ ಸಮ್ಮತವಲ್ಲ. ತಪ್ಪು ಹೆಜ್ಜೆಗಳಿಗೆ ಕಿವಿ ಹಿಂಡುತ್ತಾ ಉತ್ತಮ ನಡೆಗಳಿಗೆ ಬೆನ್ನು ತಟ್ಟುತ್ತಾ ಪ್ರೋತ್ಸಾಹಿಸುವ ಸ್ಪಷ್ಟ ರಾಜಕಾರಣವನ್ನು ಅದ್ಯಾವಾಗ ನಮ್ಮ ವಿರೋಧ ಪಕ್ಷಗಳು ಒಪ್ಪುತ್ತವೋ ಅಂದೇ ನಮ್ಮ ದೇಶದ ದಿಕ್ಕು ಪ್ರಗತಿಯತ್ತ ಮುಖ ಮಾಡೀತು. ಜೊತೆಗೆ ನೆಲಕಚ್ಚಿರುವ ವಿರೋಧ ಪಕ್ಷಗಳ ರಾಜಕೀಯ ಭವಿಷ್ಯ ಕೂಡ ಒಂದಷ್ಟು ಸುಧಾರಿಸೀತು.

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!