ಅಂಕಣ

ನಾನು ಏಕೆ ಹೀಗೆ….?

ಮಾನವ ಜಗದ ಒಂದು ಹಗಳಿರುಳ ಜೀವನದಲ್ಲಿ ಅನೇಕ ಅನುಭವಗಳನ್ನು ಪಡೆಯುತ್ತಾನೆ. ಕೆಲವು ಒಳ್ಳೆಯ ಅನುಭವಗಳಾದರೆ, ಕೆಲವು ಕೆಟ್ಟ ಅನುಭವಗಳು. ಹಲವು ಸಲ ಅನುಮಾನ, ಅವಮಾನಗಳೇ ಅನುಭವವಾಗಿ ರೂಪಾಂತರವಾಗುತ್ತದೆ. ಕತ್ತಲ ಜೀವದ ಹೃದಯ ಕವಾಟಕ್ಕೆ ಇವುಗಳೇ ದಾರಿದೀಪವಾಗುತ್ತದೆ. ಜಗದಲ್ಲಿ ಉಚಿತವಾಗಿ ದೊರೆಯುವುದೆಂದರೆ ಅದು ಉಚಿತ ಸಲಹೆಗಳು, ಪರಪದೇಶಗಳು, ಹಿತೋಪದೇಶಗಳು ಎಲ್ಲರ ಮನದಲ್ಲೂ ಮನೆಯಲ್ಲೂ ಹರಿದಾಡುತ್ತವೆ, ಕೆಲವು ಮತ್ತೆ ಮತ್ತೆ ಪೀಡಿಸುತ್ತವೆ, ಮಾನಸವನ್ನು ಕಾಡುತ್ತವೆ, ಒಂದಷ್ಟು ಸಮಯವನ್ನು ನುಂಗುತ್ತವೆ.

ನಾನು ಏಕೆ ಹೀಗೆ ಎಂಬ ಯೋಚನೆಯಲ್ಲಿ ಮಗ್ನನಾಗಿದ್ದಾಗ ಜಗದ ಡೊಂಕ ಕಳೆಯಲು ಈ ಗೋಲಕ್ಕೆ ಬಾಗಿಲೇ ಇಲ್ಲ, ಅದುದರಿಂದಾಗಿ ಡೊಂಕ ಕಳೆಯುವ ಬದಲು ನನ್ನನ್ನೇ ಬದಲಾಯಿಸುವವನಂತಾದರೆ ಜಗದ ಒಂದು ಹುಳು ಒಳಿತಾಗುತ್ತದೆಯಲ್ಲವೇ… ಹೌದು, ಐನ್‌ಸ್ಟೀನ್ ಹೇಳುವಂತೆ “ಮಿಥ್ಯ ಪ್ರಪಂಚದಲ್ಲಿ ಸತ್ಯದ ಹುಡುಕಾಟಕ್ಕೆ ಅರ್ಥವಿಲ್ಲ” ಈ ಸಂಸ್ಕಾರ ಸಂಸ್ಕೃತಿಗಳು ನದಿಯ ತಟದಲ್ಲಿ ಸಣ್ಣನೆಯ ಒಸರಿನ ರೂಪದಲ್ಲಿ, ಆವಿರ್ಭಾವಿಸುವುದು. ಅದು ಅಲ್ಲಿಂದ ನಿಧಾನವಾಗಿ ತನ್ನ ವ್ಯಾಪ್ತಿಯನ್ನು ಹಿಗ್ಗಿಸುತ್ತಾ, ಹರಿಸುತ್ತಾ, ಒಂದು ಪ್ರಬುದ್ಧ ಸುಸಂಸ್ಕೃತರನ್ನಾಗಿ ಮಾಡುವುದು. ಆ ಸುಸುಂಸ್ಕೃತರು ನಾಡಿನ, ದೇಶದ ಆಸ್ತಿ. ಇವು ಮುಂದಿನ ಜನಾಂಗಕ್ಕೆ ಹರಿದರೆ ಅದು ಸಂಪತ್ತು ಅದರ ದಡದಲ್ಲಿ ಅದನ್ನು ಅನುಭವಿಸಿದರೆ ಅಪ್ಪಿಕೊಳ್ಳುತ್ತದೆ, ಇಲ್ಲದಿದ್ದರೆ ಫಲವತ್ತಾದ ಸಂಸ್ಕೃತಿಯನ್ನು ಬಿಟ್ಟು ಮುಂದೆ ಹರಿಯುತ್ತದೆ ಅದುದರಿಂದ ಎಲ್ಲರೂ ಸುಸಂಸ್ಕೃತರೇ. ಇದರಿಂದಲೇ ಸಂಸ್ಕೃತಿಯೆಂಬುವುದು ರಿಯಾಲಿಟಿ ಶೋಗಳಿಂದ ಬರುವುದಿಲ್ಲ  ಆ ಪವಿತ್ರ ಮಣ್ಣಿನಿಂದ ಮಾತ್ರ  ಎಂಬ ಮಾತು ಚಾಲ್ತಿಯಲ್ಲಿದೆ. ಹೀಗಿದ್ದು ನಾನು ಏಕೆ ಹೀಗೆ ಎಂಬ ಚಿಂತೆ ನನನ್ನು ಕಾಡುತ್ತಿದೆ. ಹೌದು, ಕಂಡ ಕಂಡಲ್ಲಿ ಉಗುಳಬಾರದು ಎಂದು ಗೊತ್ತಿದ್ದರೂ ಎಲೆಅಡಿಕೆ, ಗುಟ್ಕಾಗಳನ್ನು ತಿಂದು ರೋಗಗ್ರಸ್ತ ಕೋಳಿಯಂತೆ ಪಿಚಕಾರಿಯ ಮೂಲಕ ವೇಗೋತ್ಕರ್ಷವಾಗಿ ಉಗುಳಿ ಸುಂದರ ಮಂಟಪ ತುಂಬಾ ಚಿತ್ತಾರ ಬಿಡಿಸುತ್ತೇನೆ. ಚಾಕಲೇಟುಗಳ ಹೊರಕವಚ “ಟುಸ್” ಎಂಬ ಶಬ್ದದಿಂದ ಹೊಡೆಸಿ ತೆಗೆದು ಚಾಕೋಲೇಟ್‌ನ್ನು ಎತ್ತಿ ಸೀಲ್ ಪ್ರಾಣಿಯಂತೆ ಹಾರಿಸಿ ಬಾಯಿಗೆ ಹಾಕುತ್ತೇನೆ. ರ್ಯಾ ಪರನ್ನು ಎಡಕೈಯಿಂದ ಹಿಂದಕ್ಕೆ ಗುರಿಯಿಲ್ಲದ ಗರಿಯಂತೆ ಹಾರಿಸಿ ನಾನು ಮುಂದಕ್ಕೆ ಹೋಗುತ್ತೇನೆ. ಅದು ಚಳಿಗಾಲವಿರಲಿ, ಬೇಸಿಗೆಯಾಗಿರಲಿ, ಮಳೆಗಾಲ ಆಗಿರಲಿ, ಆದರೆ ನನ್ನ ಫ್ಯಾನ್ ಮಾತ್ರ ಸರ್ವಋತುಗಳಲ್ಲೂ ನನಗಾಗಿ ತನ್ನ ಪಂಖಗಳನ್ನು ಸವೆಸಿ ಗಾಳಿಯನ್ನು ನೀಡುತ್ತದೆ. ಫ್ಯಾನ್ ಗಾಳಿಯಿಲ್ಲದೇ ನನಗೆ ನಿದ್ದೆ ಬಂದದ್ದೇ ಇಲ್ಲ, ಆ ಕುಡುಕನ ಹಾಗೇ ನಾನು ದಾಸನೇ….? ಸೂರ್ಯಲನ ಶ್ವೇತ ಬೆಳಕು ಹರಿದಿದ್ದರೂ ಓದಲು ಬರೆಯಲು ಕೃತಕ ಬಲ್ಬ್ ಬೇಕೆ ಬೇಕು. ಇನ್ನೂ ನಾನು ಪ್ರವಾಸಿ ತಾಣಕ್ಕೊ, ಪರ್ವತ ಅರೋಹಣಕ್ಕೆ ಹೋದರೆ ಮೊದಲೇ ಇದ್ದ ಪ್ಲಾಸ್ಟಿಕ್ ರಾಜನಿಗೆ ನನ್ನದ್ದು ಒಂದಷ್ಟು ಬಾಟಲ್‌ಗಳು, ಪ್ಲಾಸ್ಟಿಕ್‌ಚೀಲಗಳ ಮೂಲಕ ಕಪ್ಪಕಾಣಿಕೆ ಸಮರ್ಪಿಸಿಯೇ ಹಿಂದಿರುಗುವುದು, ಮೇಲೆನದುದನೆಲ್ಲ ಮಾಡಬಾರದು ಎಂದು ನನ್ನ ಪ್ರಾಥಮಿಕ ತರಗತಿಯ ಪಾಠಗಳಲ್ಲಿ ಓದಿದ್ದೆ ಅದು ಕಂಡಕಂಡಲ್ಲಿ ಉಗುಳಬಾರದು. ಪ್ಲಾಸ್ಟಿಕ್‌ಗಳನ್ನು ಅನಿವಾರ್ಯ ವಿದ್ದಾಗ ಮಾತ್ರ ಬಳಸಬೇಕು, ವಿದ್ಯುತ್‌ನು ಮಿತವಾಗಿ ಬಳಸಿ ಹೀಗೆ ಆದರೆ ಇದನ್ನೆಲ್ಲ ಅಭಾಸದಿಂದ ಆಭ್ಯಾಸ ಮಾಡಿಕೊಂಡಿದ್ದೇನೆ. ಇತ್ತೀಚೇಗೆ ನನ್ನ ಗೆಳೆಯ ಕುಂಭದ್ರೋಣ ಮಳೆಯ ಸಮಯದಲ್ಲಿ ನಾನು ಶೀತವಾಹಕವನ್ನು ಚಾಲು ಮಾಡಿದುದರ ಬಗೆಗೆ ಚಕಾರವೆತ್ತಿದಾಗ ನಾನೆಂದೇ ನೀನಗೇಕೆ ಅದು? ನನ್ನ ಸಂಸ್ಥೆಯು ಕೆ.ಇ.ಬಿ.ಗೆ ಹಣ ಜಮೆ ಮಾಡುತ್ತದೆ ಎಂದು….!! ಮತ್ತೆ ನನ್ನ ಗೆಳೆಯ ಲೈಟು, ಫ್ಯಾನ್‌ಗಳ ಬಗೆಗೆ ಮಾತೇ ತೆಗೆದಿಲ್ಲ.

ಇನ್ನೂ ನನ್ನ ವೈಯಕ್ತಿಕ ವಿಚಾರಗಳ ಬಗೆಗೆ ಬಂದರೆ, ಯಾವುದೋ ಒತ್ತಡದಿಂದ ಸ್ವಾಭಾವಿಕವಾಗಿ ಬೆಳೆದ ಕೆದರಿದ ಕೂದಲು ಗಾಳಿಗೆ ಹಾರಾಡುತ್ತಿದ್ದರೆ ಫಲವತ್ತಾದ ಮಣ್ಣಲ್ಲಿ ದಟ್ಟವಾಗಿ ಬೆಳೆದ ಗಡ್ಡ ಮೀಸೆಗಳನ್ನು ತೆಗೆಯಲು ಮರೆತಿದ್ದರೆ ಏನು ನಿನ್ನ ಹೆಂಡತಿ ಗರ್ಭಿಣಿಯೋ..?, ಏನು ದೇವದಾಸನಾಗ ಹೊರಟಿದಿಯೋ.? ಅಥವಾ ಸನ್ಯಾಸಿಯೋ.? ಎಂದು ಪ್ರಶ್ನಿಸುತ್ತಾರೆ. ಕತ್ತಿಗೆ ಚೈನು, ಕೈಗೆ ಕಡಗವೋ, ಒಂದಷ್ಟು ನೂಲುಗಳ ಪಟ್ಟಿಯನ್ನೂ ದಪ್ಪವಾಗಿ ಕಟ್ಟಿ, ಮುಖಾರವಿಂದಕ್ಕೆ ಸ್ವಲ್ಪ ವಿಕಾರದ ಆಕಾರ ಮತ್ತು ಕೂದಲ ಚರ್ಯೆಯನ್ನು ಬದಲಾಯಿಸಿದರೆ ನನ್ನನ್ನು ರೌಡಿಸಂ ಮಾಡಹೊರಟಿದ್ದಾನೆ ಎಂದು ಸಾಗ ಹಾಕುತ್ತಾರೆ. ಅವರಿಗೇನು ಗೊತ್ತು..? ನನ್ನ ಪಾಪದ ಹುಳುಗಳನ್ನು ಹೆದರಿಸಲು ಈ ಆಕಾರ ತಳೆದೆನೆಂದು ಯಾವುದೇ ವ್ಯವಸ್ಥೆಯ ಲೋಪವನ್ನು ಎತ್ತಿಹಿಡಿದರೆ, ಪ್ರಶ್ನಿಸಿದರೆ ನನ್ನನ್ನು ಹುಚ್ಚನೆನ್ನುವರು, ಇಲ್ಲ ಮುಂಜಾನೆಯೇ ಕುಡುಕನೆನ್ನುವರು. ಖಂಡಿತ ನಾನೂ ಏನನ್ನೂ ಮಾಡುವುದಿಲ್ಲ ಯಾರಾದರೂ ಮಾಡಿದರೆ ಅವರಲ್ಲಿ ತಪ್ಪು ಹುಡುಕುತ್ತೇನೆ. ಇನ್ನೂ ಅಭ್ಯುದಯ ಕಂಡರೆ ಸ್ತುತ್ಯ ಮಾಡುವುದರ ಬಿಟ್ಟು ಏನೋ ಗೋಲ್‌ಮಾಲ್ ಮಾಡಿ ಬಂದಿದ್ದಾನೆ ಎಂದು ಎಲ್ಲರಲ್ಲೂ ಮಾತಾನಾಡುತ್ತೇನೆ. ಮದುವೆಯ ಮಧುರ ಬಂಧನಕ್ಕೆ ಒಳಗಾಗದೇ ದೇಶದ ಒಳಿತಿಗಾಗಿ ದೇಶಸೇವೆಯೆಂಬಂತೆ ಮಕ್ಕಳು(ಮಗು) ತಯಾರಿಸುವ ಯಂತ್ರವಾಗುವುದು ಬೇಡವೆಂದು ಬ್ರಹ್ಮಚಾರಿಯಾಗ ಹೊರಟರೆ ಬೇರೆ ಸಂಬಂಧಗಳ ಪಟ್ಟವ ಕಟ್ಟಿ ಸಂಬಂಧವನ್ನೇ ಬಗೆಯುತ್ತಾರೆ.

ಇನ್ನೂ ಮದುವೆಯಾದರೆ ಒಂದು ವರುಷದೊಳಗೆ ಎಲ್ಲರಿಗೂ ಸಿಹಿತಿನ್ನಿಸುವವನಾಗಬೇಕು ಇಲ್ಲದಿದ್ದರೆ ಏನಾದ್ರೂ ವಿಶೇಷ ಇಲ್ವಾ..!! ಎಂದು ಎಂಟು ದಿಕ್ಕುಗಳಿಂದಲೂ ಧ್ವನಿರ್ಧಗಳು ಶುರುವಿಡುತ್ತವೆ. ಇನ್ನೂ ಸಮಯ ಮುಂದೆ ಹೋದರೆ ನಾನು ಹೇಳಬೇಕಿಲ್ಲ…… ಆಧುನಿಕ ಜಂಗಮವಾಣಿಯ ಮೂಲಕ ಮಾತೆತ್ತದ್ದರೆ ಓಹೋ ಯಾವುದೋ ಹುಡುಗಿ ಇರಬೇಕು ಹುಡುಗ ಪುಂಡಿ ಬೇಯಿಸುತ್ತಾ ಇದ್ದಾನೆ… ಎಂದೋ ಮಕ್ಕಳು ಹಾಳಾಗಿ ಹೋಗಿದ್ದಾರೆ. ಹಾಳಾಗಿ ಹೋಗಲಿ ಎಂದೋ ಆರ್ಶಿವಾದಿಸುತ್ತಾರೆ. ಅವರಿಗೇನು ಗೊತ್ತು ಈ ಹಕ್ಕಿಗೂ ರೆಕ್ಕೆ ಬಳಿತಿದೆ ಹಾರಲು ಪ್ರಯತ್ನಿಸುತ್ತಿದೆ ಎಂಬ ಕನಿಷ್ಠ ಜ್ಞಾನವೂ ಇಲ್ಲವೇ…
ನಾನು ಸಂದರ್ಶನಕ್ಕೆ ಹೊರಡುವಾಗ ಫಾರ್ಮಲಿಟಿ ಎಂಬ ನೆಪದಲ್ಲಿ ನನ್ನ ಪಾರದರ್ಶಕ ವ್ಯಕ್ತಿತ್ವನ್ನು ಎಲ್ಲೊ ಅಡವಿಟ್ಟು, ಬಾಡಿಗೆಯ ವ್ಯಕ್ತಿತ್ವವನ್ನು ಕ್ಷಣಕಾಲಕ್ಕೆ ತಂದು ನಾನು ಇರುವಂತೆ ಇರುವವನಾಗದೇ ಹೊಸ ಅಂಗಿ, ಹೊಸ ಪ್ಯಾಂಟ್, ಅಫೀಸ್ ಶೂಗಳನ್ನು ಧರಿಸಿ ಅದೇ ಹಳೆಯ ಕೊಳಕು ಮನಸ್ಸಿಗೆ ಒಂದಷ್ಟು ಸುಗಂಧ ಪೂಸುವ ದ್ರವ್ಯಗಳನ್ನು ಚಿಮುಕಿಸಿ, ಹೃದಯದ ಬಡಿತವನ್ನು ಹೆಚ್ಚಿಸಿಕೊಂಡು ಒದರುಸನ್ನಿಯವನಂತೆ ಸಂದರ್ಶಕನಿಗೆ ಸಂದರ್ಶನವನ್ನಿತು ಬರುವುದು. ನಾನು ಇದ್ದಂತೆ ಇದ್ದರೆ ನನಗಾರು ಕೆಲಸವೇ ನೀಡರು ನೇರವ್ಯಕ್ತಿತ್ವಕ್ಕೂ ದಕ್ಕದು ಏನೂ ವಿಪರ್ಯಾಸವಲ್ಲವೇ…! ಅದೇ ನನ್ನ ಹೆಂಡತಿ ಮಗುವನ್ನು ಎತ್ತಿಕೊಂಡಿದ್ದರೆ ಬಸ್ಸಿನಲ್ಲಿರುವವರು ಸೀಟು ನೀಡದಿದ್ದರೆ ಎಲ್ಲರ ಮೇಲೂ ರೇಗಿ ಮಾನವೀಯತೆಯ ಬಗೆಗಿನ ಭಾಷಣದ ಸಾಲುಗಳನ್ನು ಒದರುತ್ತೇನೆ. ಆದರೆ ಬೇರೊಬ್ಬನ ಹೆಂಡತಿ ಅದೇ ರೀತಿ ಮಗುವನ್ನು ಎತ್ತಿಕೊಂಡಿದ್ದರೆ ಅದೇ ಮೇಲಿನ ವದನವನ್ನು ಬೆಕ್ಕಿನಂತೆ ಪೆಚ್ಚು ಮೋರೆ ಹಾಕಿ ನೋಡಿ ನೋಡದವರಂತೆ ಕುಳಿತಿರುತ್ತೇನೆ. ಮತ್ತೆ ಆ ಮಾನವೀಯತೆಯ ಭಾಷಣವೂ ಅಚ್ಚಾಗಿದ್ದ ಮೆದುಳಿನ ಭಾಗಕ್ಕೆ ಕೀಲಿಕೈಯಿಂದ ಭದ್ರಮಾಡಿರುತ್ತೇನೆ. ಈಗ ಮಾನವೀಯತೆಯ ಅರ್ಥ ಘಟ್ಟವನ್ನು ಹತ್ತಿತು. ಹೌದು, ನಾನೊಬ್ಬ ಪ್ರತಿಭಾವಂತನಾಗಿದ್ದು, ಉತ್ತಮ ಅಂಕಗಳನ್ನೂ ಗಳಿಸಿದ್ದರೂ ಹಣವೆಂಬ ಹೆಣ ಬೀಳದೇ ಜಗತ್ತೇ ನಡೆಯುವುದೇ ಇಲ್ಲವೆಂದು ತೀರ್ಮಾನಿಸಿ ಬದುಕುತ್ತಿರುವುದು ನನಗೂ ನಿಗೂಢವಾಗಿದೆ. ಇಲ್ಲಿ ಪ್ರಸಿದ್ಧ ವಿಜ್ಞಾನಿ ಐನ್‌ಸ್ಟಿನ್ ಮಾತು ತುಂಬಾ ಅರ್ಥಗರ್ಭಿತವಾಗಿದೆ. “ನಾವು ಸೃಷ್ಟಿಸಿರುವ ಜಗತ್ತು ನಮ್ಮ ಯೋಚನೆಗಳ ಉತ್ಪನ್ನ. ನಮ್ಮ ಯೋಚನೆ ಬದಲಾಯಿಸದೇ ಅದನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಖಂಡಿತ ಇಲ್ಲಿ ಶೇ.೧೦೦ ನಿಜಾಂಶವಿದೆ. ಹೀಗೆ ಮುಂದುವರೆಸುತ್ತಾ ನನ್ನನ್ನು ಯಾರಾದರೂ ಹಿಂದುಳಿದವನ್ನು ಎಂದೂ ಹೀಯಾಲಿಸಿದರೆ ಅವನ ಮೂಗನ್ನು ಕೊಯ್ಯುವಷ್ಟು ಸಿಟ್ಟು ಬರುತ್ತದೆ ಹಾಗೂ ನಾನು, ನಮ್ಮದ್ದು ಮುಂದುವರಿದ ವರ್ಗ, ನಮ್ಮ ಹಿರಿಯರು ಹಾಗೆ ಹೀಗೆ ಅವರಿಗೆ ಅಷ್ಟಿತ್ತು, ಇಷ್ಟಿತ್ತು ಎಂದು ಸಮರ್ಥನೆ ನೀಡುತ್ತೇನೆ, ಸರಕಾರಿ ಕೆಲಸ, ಸೌಲಭ್ಯಗಳಲ್ಲಿ ಮಾತ್ರ ಮೀಸಲಾತಿ ಬೇಕು ನಮ್ಮ ಜಾತಿ ಹಿಂದುಳಿದ ವರ್ಗಕ್ಕೆ ಸೇರಿಸಿ ಎಂದು ಧರಣಿ, ಪ್ರತಿಭಟನೆ ಮಾಡುತ್ತೇನೆ. ಈ ಹಿಂದುಳಿದ ವರ್ಗಕ್ಕೆ ಸೇರಿದರೆ ನನಗೆ ಅವಮಾನ ಅಥವಾ ದುರ್ಬಲನೆನಿಸಿಕೊಳ್ಳಲು ನನಗೆ ಬೇಸರವಾಗುವುದಿಲ್ಲ. ಚಾಲಕನ ಹಿಂದಿನ ಮೂರು ಸೀಟುಗಳಲ್ಲಿ ಎಲ್ಲಿಯಾದರೂ ನಾನು ಕುಳಿತು ಕೊಂಡರೆ ಸುತ್ತಲಿನ ಎಲ್ಲರೂ ನನ್ನ ಮೇಲೇಯೇ ಹರಿಹಾಯಲು ಬರುತ್ತಾರೆ. ಕಾರಣ ಅದು ಮೀಸಲು ಸೀಟುಗಳೆಂದು ಖಂಡಿತ ಸಮಾನತೆಯ ಬಗೆಗೆ ಮಾತಾನಾಡುವ ಎಲ್ಲರೂ ಸಬಲೆಯರನ್ನು ಅಬಲೆಯನ್ನಾಗಿ ಮಾಡಿ ಈ ಪುಟ್ಟ ವಿಷಯದಲ್ಲೇ ಬಲಹೀನರು ಎಂದೂ ಬಿಂಬಿಸಿರುವುದು ಅಪಹಾಸ್ಯ-ಮಾಡಿದಂತೆ. ಹಾಗೆಯೇ ನನ್ನ ಅಂಗಡಿಗೆ ಪೆನ್ನೋ, ಪುಸ್ತಕವೋ ಸಾಮಾನುಗಳನ್ನು ಖರೀದಿಸಲು ಬಂದಿದ್ದರೆ ಚಿಲ್ಲರೆಯ ಬದಲಾಗಿ ಜಾಹೀರಾತುದಾರನಂತೆ ಮೆಂಟೊಸ್, ಸೆಂಟರ್ ಫ್ರೆಶ್‌ಗಳನ್ನು ರಿಸರ್ವ್‌ಬ್ಯಾಂಕಿನಲ್ಲಿ ಚಿಲ್ಲರೆ ರೂ.ಗಳಾಗಿ ತೆಗೆದಿರಿಸದಂತೆ ಕೊಟ್ಟು ಅವರ ಮಕ್ಕಳ ಬಾಯಿ ಚಪ್ಪರಿಸುತ್ತೇನೆ. ನನ್ನ ನೆರೆಮನೆಯ ಮೊಮ್ಮಕ್ಕಳಿಲ್ಲದ ಒಬ್ಬಂಟಿ ಸಕ್ಕರೆ ಖಾಯಿಲೆಯಿರುವ ಅಜ್ಜ ಅದನ್ನು ಮರುದಿನ ಸಾಮಾನಿಗಾಗಿ ಅದೇ ಚಾಕಲೇಟುಗಳನ್ನು ಹಿಂತಿರುಗಿಸಿದಾಗ ನಾನು ದಿನಚರಿ ಬಿಟ್ಟವನಂತೆ ಗೊತ್ತಿರುವ ಎಲ್ಲ ಶಬ್ದಗಳನ್ನು ಹೊರಡಿಸಿ ವಾದವನ್ನೇ ಮಾಡಿ ರಸಮಂಜರಿಯಂತೆ ಒಮ್ಮೆ ನಾನು ಮತ್ತೆ ಅಜ್ಜ ಹೀಗೆ ಮುಂದುವರೆಯುತ್ತದೆ.

ಇನ್ನೂ ನನ್ನ ದೇಶಭಕ್ತಿ, ಅಪೂರ್ವ, ನನ್ನ ನೆರೆಯ ರಾಷ್ಟ್ರ ಪಾಕಿಸ್ತಾನ ಶಬ್ದ ಕೇಳಿದರೆ ಸಾಕು ಸ್ತಂಭನವಾದ ಹೃದಯವೂ ಜೋರಾಗಿ ಬಡಿಯುವುದು, ಮುಖ ಸಿಂಡರಿಸುವುದು, ರೋಮ ಸೆಟೆದು ನಿಲ್ಲುವುದು, ಬದ್ಧ ಶತ್ರು, ಕಟ್ಟಾ ವೈರಿ, ಸಾಂಪ್ರಾದಾಯಿಕ ಎದುರಾಳಿ ಹೀಗೆ ಎಲ್ಲಾ ವಿಧದಿಂದಲೂ ವಿಕರ್ಷಣೆಯೇ ಅದು ಯಾವುದೋ ಅನ್ಯಗ್ರಹದ ದೇಶದಂತೆ ಅಲ್ಲಿನ ಜನರನ್ನು ಬೇರೆ ಗ್ರಹದ ಗಗನಯಾತ್ರಿಗಳಂತೆ ಕಲ್ಪಸಿಕೊಂಡು ಕ್ರಿಕೆಟ್ ಪಂದ್ಯಾಟವಾದರೇ ಇಡೀ ದೇಶವೇ 11 ಜನರ ತಂಡಕ್ಕೆ ಎದುರಾಳಿಯಂತೆ ಬಿಂಬಿಸಿ ನಮ್ಮ ದೇಹದ ಬಿಳಿ ರಕ್ತಕಣಗಳಂತೆ ಜತನದಿಂದ ಕಾಪಾಡಲು ಸಿದ್ಧವಾಗುವುದು ಈ ಬಗೆಗಿನ ಮಿತ್ರನ ಅರುಹು ಏನೂ ವಿಪರ್ಯಾಸವಲ್ಲವೇ…?

ಧರ್ಮ, ಜಾತಿ, ಪಂಗಡ, ಲಿಂಗ, ಪಕ್ಷ ಇವೆಲ್ಲವೂ ನಮ್ಮ ಪರವಾಗಿದ್ದರೆ ಮತ್ತು ನನ್ನದೇ ಆಗಿದ್ದರೆ ಖುಷಿಯಿಂದ ಬಾಚಿ ಅಪ್ಪಿಕೊಂಡು ಮುದ್ದಾಡಿ ಹೊಗಳುತ್ತೇನೆ. ಇಲ್ಲದಿದ್ದರೆ ಆ ಬೋನಿನೊಳಗಿನ ಗರ್ವದ ಹುಲಿಯಂತೆ ಬರೆಗಣ್ಣಿನಿಂದ ಗುರ್ರ್, ಗುರ್, ಎಂದು ಬೋನಿನ ಕಂಬಿಗಳಂತೆ ಅಂತರವನ್ನು ಕಾಯ್ದಿಕೊಳ್ಳುತ್ತೇನೆ. ನಾನು ಹಿಂದೂವಾಗಿದ್ದರೆ ಉಳಿದ ಧರ್ಮ ಅಂದರೆ ಇಸ್ಲಾಂ, ಕ್ರೈಸ್ತ ಧರ್ಮದವರು ಶುಭನಾಮಗಳ ಪೂರ್ವಾಗ್ರಹದಿಂದ ಹಾಗೂ ಅವರ ಮುಖಚರ್ಯೆಯಿಂದ ಗುರುತಿಸಿ ಅವರ ಹೆಜ್ಜೆ ಗುರುತಿನ ಹಾದಿಯನ್ನು ಆಳಿಸದೇ ಅಲ್ಲೂ ಕಲ್ಲು ಮುಳ್ಳುಗಳನ್ನು ಹುಡುಕುವುದು. ಇನ್ನೂ ನನ್ನ ಗೆಳೆಯರಿಗೆ ಅನ್ಯಧರ್ಮಿಯರು ಮಿತ್ರರಾಗಿದ್ದರೆ ನಾನು ನಿಮಗೆ ಅವನನ್ನು ಬಿಟ್ಟು ಬೇರೆ ಯಾರೂ ಗೆಳೆಯರು ಸಿಗಲೇ ಇಲ್ವಾ? ಎಂದು ಪ್ರಶ್ನಿಸಿ ಪಾರದರ್ಶಕ ಶುಭ್ರ ಸ್ನೇಹಕ್ಕೆ ಪರದೆಗಳ ತೆರೆ ಕಾಣುವಂತೆ ಮಾಡಿದೆ. ಒಂದು ಕಡೆ ಮಂಕುತ್ತಿಮ್ಮನ ಕಗ್ಗದಲ್ಲಿ ಡಿ.ವಿ.ಜಿಯವರು

“ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ ǀ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ ǁ
ಬೆಳಕೀನ ಸೂರ್ಯಚಂದ್ರರದೊಂದು ಸದ್ದಿಲ್ಲ ǀ
ಹೊಲಿ ನಿನ್ನ ತುಟಿಗಳನು – ಮಂಕುತಿಮ್ಮǁ”

ಅಂದರೆ “ಭೂಮಿಯಿಂದ ಮೊಳಕೆಯೊಡೆಯುವಾಗ ಯಾರೂ ತಮ್ಮಟೆಗಳನ್ನು ಬಾರಿಸಿ ಸಂಭ್ರಮ ಆಚರಿಸುವುದಿಲ್ಲ; ಸಸ್ಯರಾಶಿಗಳಲ್ಲಿ ಫಲ ಪಕ್ವಾಗಿ ಹಣ್ಣುಗಳಾಗುವಾಗ ಯಾರೂ ತುತ್ತೂರಿ ಊದುವುದಿಲ್ಲ. ಜಗತ್ತಿಗೆ ಬೆಳಕ ನೀಡುವ ಸೂರ್ಯಗ-ಚಂದ್ರರು ಯಾವ ವಿಧವಾದ ಸದ್ದು-ಗದ್ದಲಗಳಿಲ್ಲದೇ ತಮ್ಮ-ತಮ್ಮ ಕೆಲಸಗಳನ್ನು ನಿರ್ವಹಿಸಿಕೊಂಡು ಹೋಗುತ್ತಾರೆ ಆದರೆ ನಾನೇಕೆ ಎಲ್ಲವೂ ನನ್ನಿಂದಾದದು ಎಂಬ ಜಂಭವೇಕೆ..?, ಬದಲಿಗೆ ತುಟಿ ಮುಚ್ಚಿ ಸ್ವಪಾಲಿನ ಕರ್ತವ್ಯ ಮುಖ್ಯವಾದದ್ದು ” ಎಂಬುವುದಾಗಿ ಇದು  ನಿಜ ಇವೆಲ್ಲವೂ ನಮ್ಮೊಳಗಿನ ಪೂರ್ವಾಗ್ರಹ ನಮ್ಮ ಆಯ್ಕೆ, ನಿರ್ಧಾರ, ಯೋಚನೆ ಪ್ರಭಾವಿಸುತ್ತದೆ. ಇದನ್ನು ಇಂದ್ರಿಯ ಮೂಲಕ ಗ್ರಹಿಸಿ ಆದರ ಹೊರಕವಚ ಛೇದಿಸಿ ಬಿಡುಗಡೆಯಾದರೆ ಎಲ್ಲರೊಂದಿಗೆ ಅತಿಯಲ್ಲದಿದ್ದರೂ ವಸ್ತು ನಿಷ್ಠವಾಗಿ ವರ್ತಿಸಬಹುದು. ನಮ್ಮ ಹಿರಿಯ ಕವಿ ಕಯ್ಯಾರ ಕಿಞಣ್ಣ ರೈಯವರ “ಏಕೆ?” ಎಂಬ ಕವನದಲ್ಲಿ ಈ ಚಿಂತೆಗಳ ಸಂತೆಯ ಬಗೆಗೆ ಏಕೆ? ಎಂದು ಪ್ರಶ್ನಿಸುವಂತಿದೆ ಅದು

“ಕಾಣದಿಹ ದಾರಿಯಲಿ
 ಮುಂದಿರುವ ಕಷ್ಟಗಳ
 ಇಂದು ನೆನೆಯುತ್ತಾ
 ನೀನು ಮರುಗಬೇಕೆ?”

ಹೀಗೆ ನಿರೂಪಣೆಯಾಗಿ ರಸವತ್ತಾಗಿ ಏಕೆ? ಯಲ್ಲಿ ವರ್ಣಿಸಿದ್ದಾರೆ.. ಕೆಲವು ಕಡೆ ಇಲ್ಲಿ ನಾವು, ಅವರು, ಇವರು ಎಂಬ ಶಬ್ದ ನಿರೂಪಣೆಯ ಸ್ಥಾನಪಲ್ಲಟದಲ್ಲಿ ವ್ಯತ್ಯಾಸವಾಗಿರಬಹುದು ಅವೆಲ್ಲವೂ ನಾನೇ ಅಂದರೆ ಓದುತ್ತಿರುವ ನೀವಲ್ಲ ಕೆಲವು ಯೋಜನೆಯ ಯೋಚನೆಗಳು ತಮ್ಮದು ಆಗಿರಬಹುದು. ಇವು ನನನ್ನು ಕಾಡುತ್ತಿರುವ ಉತ್ತರಿಸಲಾಗದ ಪ್ರಶ್ನೆಗಳು. ಇಲ್ಲಿನ ಹಲವು ನಿಮ್ಮವೂ ಆಗಿರಬಹುದು, ಆಗಿದ್ದರೆ ಸಾಮೀಪ್ಯದ ಆಸರೆಯಿದೆ ,ಸಮಾಧಾನವಿದೆ ಒಂದಷ್ಟು ದ್ವಂದ್ವ, ವಿಮರ್ಶೆ, ಜಿಜ್ಞಾಸೆಯಿಂದ ಕೆಲವನ್ನು ಉಸಿರಿದ್ದೇನೆ.
ಸಂಸ್ಕೃತದಲ್ಲೊಂದು ಮಾತಿದೆ.
“ಯದ್ವಾನಂ ತದ್ಭವತಿ” ಅಂದರೆ ತಾನು ಏನು  ಅಂದುಕೊಂಡಂತೆ ಹಾಗೆ ಕ್ರಮೇಣ ಆಗುತ್ತಾನೆ ಎಂದರೆ ಹುಚ್ಚನೆಂದರೆ ಹುಚ್ಚ… ಸಜ್ಜನನೆಂದರೆ ಸಜ್ಜನ

ಇನ್ನೂ ನನ್ನನ್ನು ಚುಚ್ಚುವ ಪ್ರಶ್ನೆಯೆಂದರೆ ಒಂದು ನಾಯಿಯನ್ನು ನಾಯಿ ಎನ್ನುತ್ತೇವೆ, ಹಸುವನ್ನು ಹಸು ಆಗಿದೆ ಎನ್ನುತ್ತೇವೆ. ಆದ್ರೆ ಮಾನವನನ್ನು ಮಾನವ ಅಂತಕರೆಯುವುದಿಲ್ಲ, ಮಾನವನಾಗಬೇಕು ಎನ್ನುತ್ತೇವೆ. ಮಾನವ ಹುಟ್ಟು ಪ್ರಾಣಿಯೇ, ಬೆಳೆಯುತ್ತಾ ಮಾನವೀಯತೆಯ ನೆಲೆಯಲ್ಲಿ ಹಾಗೂ ರೂಪದ ಸಾಕಾರದಲ್ಲಿ ಮನುಷತ್ವದ ಮುಂದಾಳತ್ವದಲ್ಲಿ ಮಾನವನಾಗುತ್ತಾನೆ. ಮನದೊಳಗೆ ಮೃಗೀಯ ಧೋರಣೆಯೇ ಇದ್ದರೆ ಮಾನವ ರೂಪಿ ಮೃಗ. ಸಾಧಾರಣ ಕಲ್ಲು ವಜ್ರ ಅದರ ಗಾತ್ರ ನುಣುಪು, ಹೊಳಪುಗಳ ಮೇಲೆ ಬೆಲೆ ನಿರ್ಧಾರವಾಗುವಂತೆ ಮನುಷ್ಯರಿಗೂ ಮೌಲ್ಯ, ಬದುಕಿನ ನೆಲೆ ನಿರ್ಧಾರ ಆ ಒಳ್ಳೆಯತನದಿಂದ……. ಅಲ್ಲವೇ? ಕಟ್ಟಕಡೆಯ ಕಾಡುವ ಪ್ರಶ್ನೆ

ನಾನು ಏಕೆ ಹೀಗೆ….?!!!

Facebook ಕಾಮೆಂಟ್ಸ್

ಲೇಖಕರ ಕುರಿತು

Bharatesha Alasandemajalu

ನಾನೊಬ್ಬ ಹೆಮ್ಮೆಯ ಹ್ಯಾಮ್ - VU3NNV ಕರೆ ಸಂಕೇತ , ರೇಡಿಯೋ ಕೇಳೋದು , ಊರೂರು ಸುತ್ತೋದು , ಬೆಟ್ಟ ಹತ್ತುವುದು , ಚಿತ್ರ ಸೆರೆಹಿಡಿಯುವುದು, ಪುಟಾಣಿ ಮಕ್ಕಳೊಂದಿಗೆ ಆಡೋದು, ಪ್ರಾಯದವರೊಂದಿಗೆ ಹರಟೋದು, ಮತ್ತೆ ತಲೆ ತಿನ್ನೋದು ಇವೆಲ್ಲ ಅಂದ್ರೆ ತುಂಬಾ ಇಷ್ಟ... ಕುಡ್ಲದ ಪುತ್ತೂರಿನವ , ನನ್ನ ತುಳುನಾಡು, ನನ್ನ ಕನ್ನಡ , ನನ್ನ ಭಾರತವನ್ನು ಒಂದಿಚು ಬಿಟ್ಟು ಕೊಡುವವನಲ್ಲ, ನಾಡು , ನುಡಿ , ದೇಶದ ಬಗೆಗೆ ಗರ್ವ , ಅಹಂಕಾರ , ಸ್ವಾರ್ಥಿ ನಾನು . ಯಾಕೋ ಓದಿದ ತಪ್ಪಿಗೆ ದೂರದ ಮಸ್ಕಟ್ ನಲ್ಲಿ ಯಾಂತ್ರಿಕ ತಂತ್ರಜ್ಞನಾಗಿ ನೌಕರಿ.... ಒಟ್ಟಾರೆ ಪಿರಿಪಿರಿ ಜನ !!

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!