ನಟ್ಟ ನಡು ರಾತ್ರಿ. ಕಡುಗತ್ತಲಲ್ಲೂ ಹೊಳೆಯುತ್ತಿದೆ ಮಂದಾಸನದಲಿ ಮಂಡಿಸಿ ಮಂದಹಾಸ ಬೀರುತಿರುವ ಭವತಾರಿಣಿಯ ಭವ್ಯ ವಿಗ್ರಹ. ನೀಲಾಂಜನದಲ್ಲಿ ಮಂದ ಪ್ರಕಾಶದಿಂದ ಪ್ರಶಾಂತವಾಗಿ ಬೆಳಗುತ್ತಿದೆ ತುಪ್ಪದ ದೀಪ. ಹದಿಮೂರು ವರ್ಷದ ಪೋರನೊಬ್ಬ ಪದ್ಮಾಸನ ಹಾಕಿ ಕುಳಿತು ಧ್ಯಾನಸ್ಥನಾಗಿದ್ದಾನೆ. ಹಾಲುಗಲ್ಲದ ಹುಡುಗ ತಾಯಿಯನ್ನು ಪ್ರಶ್ನಿಸುತ್ತಿದ್ದಾನೆ “ಅಮ್ಮಾ, ಛಾಪೇಕರ್ ಸಹೋದರರನ್ನು ಕೊಲೆಗಡುಕರು ಅಂತಾ ಜನ ಹೇಳುತ್ತಿದ್ದಾರೆ! ಅದನ್ನು ನೀನು ಒಪ್ಪುತ್ತೀಯಾ? ನನಗ್ಗೊತ್ತು. ನೀನಿದನ್ನು ಖಂಡಿತಾ ಒಪ್ಪಲಾರೆ. ರಕ್ಕಸ ಪ್ಲೇಗಿನಿಂದ, ಕ್ಷಾಮದಿಂದ ಜನ ತತ್ತರಿಸಿರುವಾಗ ನಿನ್ನನ್ನು ಸಂಕಲೆಗಳಿಂದ ಬಂಧಿಸಿರುವ ಮಹಾರಕ್ಕಸರು ನಿನ್ನ ಮಕ್ಕಳನ್ನು ಬದುಕಿದವರು ಸತ್ತವರು ಎನ್ನದೇ ಜೀವಂತ ಸುಡುತ್ತಿರುವಾಗ, ಮನೆ ಮನೆ ದೋಚಿ ನಿನ್ನದೇ ಬಾಲೆಯರನ್ನು ಬಲಾತ್ಕರಿಸುತ್ತಿರುವಾಗ, ಮನೆಗಳನ್ನೆಲ್ಲಾ ಸುಟ್ಟು ವಿಕೃತ ಆನಂದ ಪಡುತ್ತಿರುವಾಗ ನಿನ್ನ ಕಣ್ಣೀರನ್ನು ಒರೆಸ ಬಂದವರ ಕಾರ್ಯವನ್ನು ತಪ್ಪೆಂದು ಹೇಗೆ ಹೇಳಬಲ್ಲೆ? ಅಮ್ಮಾ…ಸ್ವಂತದ ಸುಖಕ್ಕಾಗಿ ಒಬ್ಬನನ್ನು ಕೊಂದರೆ ಅದು ಕೊಲೆ. ಸಮಾಜದ, ದೇಶದ ಹಿತಕ್ಕಾಗಿ ಒಬ್ಬನನ್ನು ಕೊಂದರೆ ಅದು ಕೊಲೆಯಲ್ಲ. ವಧೆ! ಸಂಹಾರ! ಅದು ರಾಮ ರಾವಣನನ್ನು ವಧಿಸಿದಂತೆ, ಕೃಷ್ಣ ಕಂಸಾದ್ಯರನ್ನು ಸಂಹರಿಸಿದಂತೆ. ಸ್ವತಃ ನೀನೆ ಶುಂಭ ನಿಶುಂಭಾದ್ಯರನ್ನು ಸಂಹರಿಸಿಲ್ಲವೆ. ಅದೇ ರೀತಿ ಇದು.ಅಮ್ಮಾ ಫಡಕೆ ಆರಂಭಿಸಿದ ಕಾರ್ಯ ಮುಂದುವರೆಸುವವರ್ಯಾರೆಂದು ಚಿಂತಿಸಬೇಡ. ಇನ್ನು ಮುಂದೆ ನನ್ನೀ ಜೀವನ ನಿನಗಾಗಿ ಸಮರ್ಪಿತ.” ಚೈತನ್ಯದ ಸ್ತ್ರೋತವೊಂದು ಭವತಾರಿಣಿಯ ಪಾದ ಹಿಡಿದ ಆ ಪುಟ್ಟ ಹಸ್ತಗಳ ಮೂಲಕ ತನುವಿನಾದ್ಯಂತ ಸಂಚರಿಸಿ ಅಂತಃಕರಣವನ್ನು ಪುಳಕಿತಗೊಳಿಸಿತು.
ಏಡನ್ನಿನಲ್ಲೊಂದು ಸ್ವಾತಂತ್ರ್ಯದ ಕಿಡಿ ಆರಿತ್ತು. ಅದೇ ಕಿಡಿ ಭಗೂರಿನಲ್ಲಿ ಸ್ವಾತಂತ್ರ್ಯದ ಅಗ್ನಿದಿವ್ಯವಾಗಿ ಮೊರೆಯಿತು! ವೀರ…ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್! ಸಾಹಿತ್ಯಾಸಕ್ತರ ಪಾಲಿಗೆ ಭಗವತುಲ್ಯ ಕವಿ; ಬರಹಗಾರ, ಆಂಗ್ಲರಿಗೆ ಯಮಸದೃಶ ಕ್ರಾಂತಿಕಾರಿ, ವಿರೋಧಿಗಳ ನಾಲಿಗೆಯಲಿ ಕೋಮುವಾದಿ, ಸಮಾಜ ಸುಧಾರಕರಿಗೆ ಗುರು, ದೇಶ ಭಕ್ತರ ಪಾಲಿಗೆ ಜೀವನದ ಕ್ಷಣ ಕ್ಷಣ ರಕ್ತದ ಕಣ ಕಣವನ್ನೂ ರಾಷ್ಟ್ರಕ್ಕಾಗಿ ಸಮರ್ಪಿಸಿ ಆತ್ಮಾಹುತಿಗೈದ ಅಭಿನವ ಶಿವಾಜಿ, ಆಧುನಿಕ ಜಗತ್ತಿಗೆ ಹಿಂದುತ್ವವೇನೆಂದು ಸಮರ್ಥವಾಗಿ ಮಂಡಿಸಿ ಇಡೀ ಸನಾತನ ಸಂಸ್ಕೃತಿಗೆ ಭಾಷ್ಯ ಬರೆದ ಮಹಾದೃಷ್ಟಾರ.
ದಾರಣಾ ನದಿಯ ತಟದಲ್ಲಿ 1883ರ ಮೇ 28ರ ವೈಶಾಖ ಕೃಷ್ಣ ಷಷ್ಠಿಯ ಶುಭ ದಿನ ಸೃಷ್ಟಿ. ಜನಿಸಿದೊಡನೆ ತನ್ನತ್ತ ಸೆಳೆಯಿತು ಊರವರ ದೃಷ್ಟಿ. ದೊಡ್ಡಪ್ಪ ಮಹಾದೇವ ಪಂತರಿಂದ ಇತಿಹಾಸದ ಪಾಠ. ಶಿವಾಜಿಯೇ ಆದರ್ಶನಾದ, ಮನಸ್ಸು ಮಹಾರಾಣಾ ಪ್ರತಾಪನನ್ನನುಕರಿಸಿತು, ಝಾನ್ಸಿಯ ರಣದುಂದುಭಿ ಕಿವಿಯಲ್ಲಿ ಮೊಳಗಿತು. ತಂದೆ, ತಾಯಿ, ಸೋದರ ಮಾವನಿಂದ ಕಾವ್ಯ, ಸಾಹಿತ್ಯದ ಸಮೃದ್ಧಿ. ಮಾರಕವಾಗೆರಗಿದ ಪ್ಲೇಗ್ ಮೊದಲೇ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಸೋದರರ ತಂದೆಯನ್ನೂ, ದೊಡ್ಡಪ್ಪನನ್ನೂ ಬಲಿತೆಗೆದುಕೊಂಡಿತು. ಗದ್ದೆ ತೋಟಗಳು ಅನ್ಯರ ವಶವಾದವು. ಶ್ರೀಮಂತ ಜಮೀನುದಾರರ ಮಕ್ಕಳಾಗಿದ್ದವರು ಕೇವಲ ಒಂದು ವಾರದೊಳಗೆ ಮನೆಯ ಹಿರಿಯರನ್ನೂ, ವಂಶದ ಸಂಪತ್ತನ್ನೂ ಕಳೆದುಕೊಂಡು ಅನಾಥರಾಗಿದ್ದರು. ತನ್ನದೇ ಔಷಧ ಕ್ರಮದಿಂದ ತನ್ನನ್ನೂ ಅತ್ತಿಗೆಯನ್ನೂ ಪ್ಲೇಗಿನಿಂದ ಉಳಿಸಿಕೊಂಡು, ಅಣ್ಣ ಬಾಬಾ ಹಾಗೂ ತಮ್ಮ ಬಾಳಾನನ್ನು ಬದುಕಿಸಿಕೊಂಡ ದಿಟ್ಟ. ದಿನವೂ ನಾಟಕ, ಹರಟೆ, ಇಸ್ಪೀಟು, ತಂಬಾಕು ತಿನ್ನುತ್ತಾ, ಸ್ತ್ರೀ ಪುರುಷರನ್ನು ರೇಗಿಸುತ್ತಾ ಕುಚೇಷ್ಟೆ ಮಾಡುತ್ತಾ ಕಾಲಕಳೆಯುತ್ತಿದ್ದ ಉಂಡಾಡಿಗಳೆಲ್ಲಾ ತಾತ್ಯಾ ಸಹವಾಸದಿಂದ “ರಾಷ್ಟ್ರಭಕ್ತ ಸಮೂಹ”ದ (ರಾಮ ಹರಿ) ಸದಸ್ಯರಾದರು. ಪಡ್ಡೆ ಹುಡುಗರ ನಾಯಕ ಹೆಳವ ಗೋವಿಂದ ದರೇಕರ್(ಆಬಾ ಪಾಂಗಳೆ) ಸಾವರ್ಕರ್ ಸಹವಾಸದಿಂದ “ಸ್ವಾತಂತ್ರ್ಯ ಕವಿ ಗೋವಿಂದ” ನಾಗಿ ಬಿರುದಾಂಕಿತನಾದ. ಪುಂಡು ಪೋಕರಿಗಳನ್ನು ಹಿಂಡು ಹಿಂಡಾಗೆ ದೇಶಭಕ್ತರನ್ನಾಗಿಸಿದಾಗ ಸಾವರ್ಕರರಿಗಿನ್ನೂ ಹದಿನಾರು ವರ್ಷ.
“ರಾಮಹರಿ” “ಮಿತ್ರಮೇಳ”ವಾಯಿತು. ಶಿವಾಜಿ ಜಯಂತಿ, ಗಣೇಶ ಉತ್ಸವ, ಪ್ಲೇಗ್ ರೋಗಿಗಳ ಆರೈಕೆ , ಅನಾಥ ರೋಗಿಗಳ ಶವ ಸುಡುವುದು…ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಮಿತ್ರಮೇಳ ಬೃಹದಾಕಾರವಾಗಿ ಬೆಳೆಯಿತು. ಯಾವ ಸತ್ಯದಿಂದ ಜನಹಿತ ಆಗುತ್ತದೆಯೋ ಅದೇ ಸತ್ಯ, ಧರ್ಮ. ಆದರೆ ಯಾವ ಸತ್ಯದಿಂದ ಕಳ್ಳನಿಗೆ ರಕ್ಷಣೆಯಾಗಿ ಸನ್ಯಾಸಿಗೆ ಶಿಕ್ಷೆಯಾಗುತ್ತದೋ ಅದು ಅಸತ್ಯ, ಅಧರ್ಮ. ಹೇಗೆ ರಾವಣ, ಕಂಸರ ಕೈಗಳಲ್ಲಿದ್ದ ಶಸ್ತ್ರಗಳು ರಾಮ, ಕೃಷ್ಣರ ಕೈಯಲ್ಲಿ ಪಾವನವಾಗಿ ಪೂಜಾರ್ಹವಾಗಿದ್ದವೋ ಅದೇ ರೀತಿ ಅಧಿಕಾಧಿಕ ಜನಹಿತಕ್ಕಾಗಿ ರಾಷ್ಟ್ರೀಯ ಅಧಿಕಾರಗಳ ರಕ್ಷಣೆ ಹಾಗೂ ವಿಕಾಸಕ್ಕಾಗಿ ಹೋರಾಡಲು ಪ್ರೇರಣೆ ನೀಡುವ ದೇಶಾಭಿಮಾನ ನಿಜಕ್ಕೂ ಧರ್ಮಸಮ್ಮತ, ಪ್ರಶಂಸನೀಯ. ಪರದೇಶಗಳನ್ನಾಕ್ರಮಿಸಿ ಜನಕ್ಷೋಭೆ ನಿರ್ಮಿಸುವ ಶೋಷಣೆ ನಡೆಸುವ ದೇಶಾಭಿಮಾನ ಅಧರ್ಮ, ದಂಡನೀಯ ಎಂಬುದು ಸಾವರ್ಕರ್ ಅಭಿಮತವಾಗಿತ್ತು, ಮಿತ್ರಮೇಳದ ತತ್ವವಾಯಿತು. ಮುಂದೆ ಅಸಂಖ್ಯ ಕ್ರಾಂತಿಕಾರಿಗಳ ನೀತಿಯಾಗಿ ಬೆಳೆಯಿತು. ಮಿತ್ರಮೇಳ ಬೆಳೆಯುತ್ತಾ ಬೆಳೆಯುತ್ತಾ “ಅಭಿನವ ಭಾರತ”ವಾಯಿತು. ಮಹಾರಾಷ್ಟ್ರದಾದ್ಯಂತ ಹೆಮ್ಮರವಾಗಿ ಬೆಳೆಯಿತು. ವಂಗಭಂಗವನ್ನು ವಿರೋಧಿಸಿ ಸ್ವಾತಂತ್ರ್ಯ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ವಿದೇಶೀ ವಸ್ತುಗಳ ದಹನ(ಹೋಳಿ) ನಡೆಸಿದರು ಸಾವರ್ಕರ್. ತತ್ಪರಿಣಾಮ ಸಿಕ್ಕಿದ್ದು ದೇಶಭಕ್ತಿಯ ಅಪರಾಧಕ್ಕಾಗಿ ವಿದ್ಯಾಲಯದ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊದಲ ವಿದ್ಯಾರ್ಥಿ ಎಂಬ ಶ್ರೇಯ! ಅಷ್ಟರಲ್ಲೇ ಸಾವರ್ಕರ್ ಬರೆದ ಕವನ, ಲಾವಣಿಗಳು ಮನೆ ಮನೆಯಲ್ಲಿ ನಿತ್ಯಗಾಯನಗಳಾಗಿದ್ದವು. ಅವರ ಲೇಖನಗಳನ್ನೋದಲು ಜನ ಕಾತರಿಸುತ್ತಿದ್ದರು. ಅವರ ವಾಗ್ವೈಭವಕ್ಕೆ ಮರುಳಾಗುತ್ತಿದ್ದರು. ಯುವಕರು ಅವರ ಮಾತು, ವೈಖರಿಗಳಿಂದ ಪ್ರಭಾವಿತರಾಗಿ ಅಭಿನವ ಭಾರತ ಸೇರುತ್ತಿದ್ದರು. ಭವ್ಯ ಭಾರತದ ಭಾವೀ ಸೂರ್ಯ ಮಹಾರಾಷ್ಟ್ರದ ಮನೆಯಂಗಳದಲ್ಲಿ ಉದಯಿಸುತ್ತಿದ್ದ! ಅಷ್ಟರಲ್ಲಾಗಲೇ ಲಂಡನ್ನಿನ ಭಾರತ ಭವನದ ಶ್ಯಾಮಜೀ ಕೃಷ್ಣವರ್ಮರ “ಶಿವಾಜಿ ವಿದ್ಯಾರ್ಥಿ ವೇತನ” ಅರಸಿ ಬಂದಿತ್ತು. ಸಿಂಹದ ಗುಹೆಗೆ ನರಸಿಂಹನ ಆಗಮನ!
೧೮೫೭ರಲ್ಲಿ ನಡೆದದ್ದು ದಂಗೆಯಲ್ಲ; ಆಂಗ್ಲರನ್ನು ಒದ್ದೋಡಿಸುವ ಸಲುವಾಗಿ ನಡೆದ ಮಹಾಸಂಗ್ರಾಮ ಎಂದು ಹೇಳಿ ಸಾಕ್ಷಿ ಸಮೇತ ರಚಿಸಿದ “೧೮೫೭ರ ಮಹಾಸಂಗ್ರಾಮ” ಬ್ರಿಟಿಷರ ಢವಗುಟ್ಟಿಸಿ, ಪ್ರಕಟಣೆಗೆ ಮೊದಲೇ ಎರಡೆರಡು ದೇಶಗಳಲ್ಲಿ ನಿಷೇಧಕ್ಕೊಳಪಟ್ಟರೂ ಲಕ್ಷ ಲಕ್ಷ ಸ್ವಾತಂತ್ರ್ಯ ಯೋಧರಿಗೆ ಭಗವದ್ಗೀತೆಯಾಯಿತು. ಶೋಕಿಲಾಲ ಧಿಂಗ್ರಾ ದೀಕ್ಷೆ ಪಡೆದ. ಕರ್ಜನ್ ವಾಯಿಲಿಯ ವಧೆಯಾಯಿತು. ಸ್ವಾತಂತ್ರ್ಯದ ಪ್ರಯತ್ನಕ್ಕಾಗಿ ಸಾವರ್ಕರರಿಗೆ ಸಿಕ್ಕಿದ್ದು ಎರಡೆರಡು ಜೀವಾವಧಿ(ಕರಿನೀರ) ಶಿಕ್ಷೆ. ಜೊತೆಗೆ ಬಿಎ, ಬ್ಯಾರಿಸ್ಟರ್ ಪದವಿಗಳ ನಿರಾಕರಣೆ. 1910 ಜುಲೈ 8ರಂದು ನಡೆದದ್ದು ಇತಿಹಾಸ ಹಿಂದೆಂದೂ ಕಂಡಿರದ ಅದ್ಭುತ ಸಾಗರ ಸಾಹಸ. ತನ್ನನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಹಡಗು ಮಾರ್ಸಿಲೆಸ್ ತಲುಪಿದಾಗ ಶರೀರಬಾಧೆಯ ನೆಪದಲ್ಲಿ ಶೌಚಾಲಯ ಹೊಕ್ಕವರು ಯೋಗಬಲದಿಂದ ಶರೀರವನ್ನು ಸಂಕುಚಿಸಿ ಸಣ್ಣಕಿಂಡಿಯ ಮೂಲಕ ಸಮುದ್ರಕ್ಕೆ ಧುಮುಕಿ ಗುಂಡಿನ ದಾಳಿಯ ಮಧ್ಯೆ ಈಜಿ ದಡ ಸೇರಿದರು. ಆದರೆ ಲಂಚದಾಸೆಗೆ ಬಲಿಯಾದ ಪ್ರೆಂಚ್ ಸಿಬ್ಬಂದಿಯಿಂದಾಗಿ ಮತ್ತೆ ಬಂಧಿಸಲ್ಪಟ್ಟರು. ಮುಂದೆ ಅಂಡಮಾನ್! ಕೇಳಿದರೇ ಮೈಜುಮ್ಮೆನಿಸುವ ಕರಿನೀರ ಶಿಕ್ಷೆ! ಆದರೇನು ಅಲ್ಲಿನ ಕತ್ತಲೆಕೋಣೆಯಲ್ಲಿ ಮೊಳೆಯಿಂದ ೧೦ ಸಾವಿರ ಸಾಲಿನ ಕಾವ್ಯ ರಾಶಿಯನ್ನು ಗೋಡೆಯ ಮೇಲೆ ಮೂಡಿಸಿ ತನ್ನ ಕಾವ್ಯರಸದಿಂದ ತಾಯಿ ಭಾರತಿಗೆ ಅಭಿಷೇಕಗೈದರು. ಕೈದಿಗಳಿಗೆ ಉತ್ತಮ ಆಹಾರ, ಆರೋಗ್ಯ ಹಾಗೂ ಗೌರವ ದೊರಕಿಸಿಕೊಡುವ ಸಲುವಾಗಿ ಚಳವಳಿ ಆರಂಬಿಸಿದರು. ಹಿಂದೂಗಳನ್ನು ಕಾರಾಗೃಹದಲ್ಲಿ ಅನಾಯಾಸವಾಗಿ ಮತಾಂತರ ಮಾಡುತ್ತಿದ್ದ ಮುಸಲ್ಮಾನರ ವಿರುದ್ಧ ತೊಡೆತಟ್ಟಿ ಶುದ್ಧಿ ಚಳವಳಿ ನಡೆಸಿದರು. ತನ್ನನ್ನೂ ಇತರರಿಂದ ಪ್ರತ್ಯೇಕವಾಗಿ ಇರಿಸಿದಾಗ್ಯೂ ಕೈದಿಗಳಿಗೆ ಶಿಕ್ಷಣ ದೊರಕುವಂತೆ ಮಾಡಿ ಜೈಲಿನಲ್ಲಿ ಸಮಗ್ರ ಸುಧಾರಣೆ ತಂದರು.
ಅಖಂಡ ಭಾರತದ ಪರಿಕಲ್ಪನೆಯನ್ನು ಕೊಟ್ಟಿದ್ದಲ್ಲದೆ ಸಿಖ್, ಬೌದ್ಧ, ಜೈನರು ಹಿಂದೂಗಳೇ ಎಂದು ಸಾರಿದ ಸಾವರ್ಕರ್ ಮುಸ್ಲಿಮರ ವಿಭಜನಾವಾದಿ ಮನಸ್ಥಿತಿಯನ್ನು ಖಂಡಿಸಿದರು. ಬಯಸಿದ್ದರೆ ಜನಪ್ರಿಯತೆಯ ಅಲೆಯಲ್ಲಿ ಚುನಾವಣೆ ಗೆಲ್ಲಬಹುದಾಗಿದ್ದ ಸಾವರ್ಕರ್ ಹಿಂದೂಗಳ ಐಕ್ಯತೆ, ದೇಶದ ಸಮಗ್ರತೆಗೆಗಾಗಿಯೇ ತಮ್ಮ ಜೀವ ತೇಯ್ದರು. ಮೊಟ್ಟಮದಲ ಬಾರಿ ಹರಿಜನೋದ್ಧಾರದ ಬಗ್ಗೆ ಧ್ವನಿ ಎತ್ತಿ ರತ್ನಗಿರಿಯ ಪತಿತ ಪಾವನ ಮಂದಿರದ ಮೂಲಕ ಅವರಿಗೆ ದೇವಾಲಯ ಪ್ರವೇಶ ಕಲ್ಪಿಸಿದ ಸಮಾಜ ಸುಧಾರಕನಾತ. ಆತ ಕೇವಲ ಕ್ರಾಂತಿಕಾರಿಯಲ್ಲ. ಇತಿಹಾಸಕಾರ, ಅಪ್ರತಿಮ ವಾಗ್ಮಿ, ಭಾಷಾ ಶುದ್ಧಿಕಾರ, ಶುದ್ಧಿ ಚಳುವಳಿಯ ನೇತಾರ, ಪಂಚಾಂಗದ ಸುಧಾರಕ, ಕಾದಂಬರಿಕಾರ, ಕಾವ್ಯ ಸುಧಾರಕ, ನಾಟಕಕಾರ, ನಿಬಂಧಕ, ಧರ್ಮ ಸುಧಾರಕನೂ ಹೌದು. “ರಾಜಕೀಯವನ್ನು ಹಿಂದೂಕರಣಗೊಳಿಸಿ ಮತ್ತು ರಾಷ್ಟ್ರವನ್ನು ಸೈನಿಕೀಕರಣಗೊಳಿಸಿ. ನೀವು ಬಲವಾಗಿದ್ದರೆ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಕ್ರುಶ್ಚೇವ್ ಬೂಟು ತೋರಿಸಿದಂತೆ ನೀವೂ ತೋರಿಸಬಹುದು. ಆದರೆ ನೀವು ದುರ್ಬಲರಾಗಿದ್ದರೆ ನಿಮ್ಮ ಹಣೆಬರಹ ಶಕ್ತಿಯುತ ಆಕ್ರಮಣಕಾರಿಯ ಕೈಯಲ್ಲಿರುತ್ತದೆ” ಎಂದ ಅವರು ಸೈನ್ಯದಲ್ಲಿ ಹಿಂದೂಗಳು ಹೆಚ್ಚು ಹೆಚ್ಚು ಸೇರಿಕೊಳ್ಳಬೇಕೆಂದು ಕರೆಯಿತ್ತರು.
ಯಾವ ಭಾರತಕ್ಕಾಗಿ ಸಾವರ್ಕರ್ ತಾನು, ತನ್ನ ಪರಿವಾರ, ಬಂಧುಬಳಗ, ಸ್ನೇಹಿತ ವರ್ಗ ಮಾತ್ರವಲ್ಲ ತನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸಹಸ್ರ ಸಹಸ್ರ ಭಾರತೀಯರನ್ನು ಕ್ರಾಂತಿಕಾರಿಗಳನ್ನಾಗಿಸಿ ಸ್ವಾತಂತ್ರ್ಯ ಯಜ್ಞಕ್ಕೆ ಹವಿಸ್ಸನ್ನಾಗಿಸಿದರೋ, ಯಾವ ಭಾರತಕ್ಕಾಗಿ ಸಾಲು ಸಾಲು ಗುಂಡಿನ ಮಳೆಯನ್ನೂ ಲಿಕ್ಕಿಸದೆ ಅಗಾಧ ಸಾಗರವನ್ನು ಈಜಿ ಸ್ವಾತಂತ್ರ್ಯಕ್ಕಾಗಿ ತಹತಹಿಸಿದರೋ, ಯಾವ ಭಾರತಕ್ಕಾಗಿ ೫೦ ವರ್ಷಗಳ ಕರಿ ನೀರಿನ ಶಿಕ್ಷೆಯನ್ನು ಎದುರಿಸಿ ನಿರ್ಲಿಪ್ತರಾಗಿ ಅಂಡಮಾನಿಗೆ ಹೆಜ್ಜೆ ಹಾಕಿದರೋ, ಯಾವ ಭಾರತಕ್ಕಾಗಿ ಸಾವರ್ಕರ್ ಎತ್ತಿನ ಹಾಗೆ ಗಾಣ ಸುತ್ತಿ, ತೆಂಗಿನ ನಾರು ಸುಲಿದು ಛಡಿ ಏಟು ತಿಂದರೋ… ಆ ಭಾರತ ಅವರಿಗೆ ಕೊನೆಗೆ ಕೊಟ್ಟಿದ್ದಾದರೂ ಏನು…? ಸಾವರ್ಕರ್ ಬಿಡುಗಡೆಯಾದ ಸಂದರ್ಭದಲ್ಲಿ ಏರ್ಪಡಿಸಿದ್ದ ಮೆರವಣಿಗೆಯ ಮೇಲೆ ಕಾಂಗ್ರೆಸ್ಸಿಗರು ಕಲ್ಲುತೂರಿದರು. ಬ್ರಿಟಿಷರು ಮುಟ್ಟುಗೋಲು ಹಾಕಿಕೊಂಡಿದ್ದ ಸಾವರ್ಕರರ ಮನೆಯನ್ನು ಹಿಂದಿರುಗಿಸುವುದಕ್ಕೂ ನೆಹರೂ ಒಲ್ಲೆ ಎಂದರು. ಆಂಗ್ಲರ ವಿರುದ್ದ ನಿರಂತರ ಬಡಿದಾಡಿ ಬೆಂಡಾದ ಆ ಮುದಿ ಜೀವವನ್ನು ಸ್ವತಂತ್ರ ಭಾರತ ಎರಡೆರಡು ಬಾರಿ ಜೈಲಿಗೆ ನೂಕಿತು. ಗಾಂಧಿ ಹತ್ಯೆಯ ಸುಳ್ಳು ಆರೋಪ ಹೊರಿಸಿ ಒಮ್ಮೆ, ಪಾಕಿಸ್ಥಾನದ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದಾಗ ಆತನಿಗೆ ತೊಂದರೆಯಾಗಬಾರದೆಂದು ಮತ್ತೊಮ್ಮೆ. ಕಾಂಗ್ರೇಸ್ಸಿನ ದೇಶದ್ರೋಹಿ ನೀತಿಗಳನ್ನು ಖಂಡಿಸುತ್ತಿದ್ದರು ಎಂಬ ಒಂದೇ ಒಂದು ಕಾರಣಕ್ಕಾಗಿ ಅವರ ಮೇಲೆ ದ್ವೇಷ ಸಾಧಿಸಲಾಯಿತು. ಕೊನೆಗೊಮ್ಮೆ ಅವರು ತೀರಿಕೊಂಡಾಗ ಅವರ ಹೆಣ ಇಡಲು ಗನ್ ಕ್ಯಾರೇಜ್ ಕೂಡ ಸಿಗದಂತೆ ನೆಹರು ಮಾಡಿ ಬಿಟ್ಟರು. ಸ್ಟಾಲಿನ್ ಗೆ ಶೃದ್ಧಾಂಜಲಿ ಸಲ್ಲಿಸಿದ ಭಾರತದ ಸಂಸತ್ತಿಗೆ ಸಾವರ್ಕರ್ ನೆನಪೇ ಆಗಲಿಲ್ಲ. ಮಣಿಶಂಕರ್ ಅಯ್ಯರ್ ಎಂಬ ದೇಶದ್ರೋಹಿ ಸಾವರ್ಕರ್ ಅಂಡಮಾನಿನ ಕಲ್ಲಿನ ಗೋಡೆಯ ಮೇಲೆ ಬರೆದ ಕಾವ್ಯಗಳನ್ನು ಅಳಿಸಿ ಹಾಕಿ ಬಿಟ್ಟ. ಅಲ್ಲಿದ್ದ ಸಾವರ್ಕರ್ ಫಲಕವನ್ನೂ ಕಿತ್ತೊಗೆದ. ಎನ್.ಡಿ.ಎ ಸರ್ಕಾರ ಸಾವರ್ಕರ್ ಮೂರ್ತಿಯನ್ನು ಸಂಸತ್ ಭವನದಲ್ಲಿ ಸ್ಥಾಪಿಸಲು ಮುಂದಾದಾಗ ಕಾಂಗ್ರೆಸ್ಸಿಗರು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ದೂರ ಉಳಿದರು. ಇಂದಿಗೂ ವಿದ್ಯಾಲಯಗಳಲ್ಲಿ ಸಾವರ್ಕರ್ ಮೇಲೆ ಪ್ರಶ್ನೆ ಕೇಳಬಾರದೆಂಬ ‘ಅಲಿಖಿತ ಆಜ್ಞೆ’ ಹಾಗೂ ‘ಅಘೋಷಿತ ನಿರ್ಧಾರ’ಗಳಿವೆ.
ಹೌದು. ಸೋತೆನೆಂಬ ಭಾವ ಕಾಡಿದಾಗ, ಕಷ್ಟ ಕೈ ಜಗ್ಗಿದಾಗ, ಪ್ರಯತ್ನ ವಿಫ಼ಲವಾದಾಗ, ಮಾನಸಿಕವಾಗಿ ಜರ್ಜರಿತನಾದಾಗ ದೇಹವಿಡೀ ಒಮ್ಮೆ ಮಿಂಚಿನ ಸಂಚಾರವಾಗುವಂತೆ ಮಾಡಿ ಚೈತನ್ಯ ತುಂಬುವ ಹೆಸರೇ “ವೀರ ಸಾವರ್ಕರ್”. ವೀರ ಸಾವರ್ಕರ್ ಅಂದಾಕ್ಷಣ ಹೃದಯ ತುಂಬಿ ಭಾವ ಲಹರಿ ಮೀಟ ತೊಡಗುತ್ತದೆ. ಅದು ಹಿಮಾಲಯದಂತೆ ಹಬ್ಬಿ ನಿಂತ ಎತ್ತರದ ವ್ಯಕ್ತಿತ್ವ. ನಿರಂತರ ಅಂತರ್ಗಂಗೆಯಂತೆ ದಶದಿಕ್ಕುಗಳಿಗೂ ಹರಿದ ಪ್ರತಿಭೆ ಕರ್ತೃತ್ವ. ಅಪಾರ ವಿದ್ವತ್ತಿನ ಅನುಪಮ ಸತ್ವ. ವಿದ್ವತ್ತಿನ ನಿರ್ಘಾತದಂತೆ ಅಡಿಗಡಿಗೂ ಸಿಡಿಯುವ ಪ್ರಖರ ಸ್ವತ್ವ! ಅದು ದೇಶಪ್ರೇಮದ ಖಜಾನೆ. ಸಾಹಿತ್ಯದ ಖನಿ. ಕಾವ್ಯ, ವಾಕ್ಚಾತುರ್ಯ, ಸಂಘಟನಾ ಶಕ್ತಿಯ ಗಣಿ. ಭವ್ಯ ಭಾರತದ ಮುಕುಟಮಣಿ!