ಅಂಕಣ

ಸೋಲಿಲ್ಲದ ಸರದಾರ ಆ ವಿಕ್ರಮಾದಿತ್ಯ

Samrat_Hem_Chandra_Vikramadityaಆ ವಿಕ್ರಮಾದಿತ್ಯನ ಗಜಪಡೆ ಯುದ್ಧಕ್ಕೆ ಅಣಿಯಾಯಿತೆಂದರೆ ಶತ್ರುಪಡೆ ಥರಗುಟ್ಟುತ್ತಿತ್ತು. ಬೆಟ್ಟಗಳನ್ನೇ ತಮ್ಮ ಸೊಂಡಿಲುಗಳಿಂದ ಕಿತ್ತು ಶತ್ರು ಸೈನ್ಯದ ಮೇಲೆ ಪ್ರಹಾರ ಮಾಡುತ್ತಿದ್ದ ಆ ಆನೆಗಳು ನೆಲ ಅದುರುವಂತೆ ರಭಸದಿಂದ ಶತ್ರುಸೈನ್ಯದ ಮೇಲೇರಿ ಹೋಗುವಾಗ ತಮ್ಮ ಸೊಂಡಿಲಿಗೆ ಕಟ್ಟಲಾದ ಖಡ್ಗ, ಭಲ್ಲೆಗಳಿಂದ ಶತ್ರುಗಳನ್ನು ತರಿಯುತ್ತಾ ಎಂತಹಾ ಮಹಾಸೈನ್ಯವನ್ನಾದರೂ ಧೂಳೀಪಟ ಮಾಡುತ್ತಿದ್ದವು. ಅಂತಹ ಆನೆಗಳ ಪೈಕಿ ಅದ್ಭುತ ಹೋರಾಟಗಾರನೆಂದರೆ ಗಜರಾಜ “ಹವಾಯಿ”. ಆ ವಿಕ್ರಮಾದಿತ್ಯ “ಹವಾಯಿ”ಯನ್ನು ಹತ್ತಿ ಯುದ್ಧಕ್ಕೆ ಹೊರಟನೆಂದರೆ ಆತನಿಗೆ ಜಯ ಕಟ್ಟಿಟ್ಟ ಬುತ್ತಿ. ಆತ ಸೋಲಿಲ್ಲದ ಸರದಾರನಾಗಿದ್ದ. ಅಂದು ಕೂಡಾ ಶತ್ರುಪಡೆಯನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿ ಅವರನ್ನು ಹಿಗ್ಗಾಮುಗ್ಗ ಬಡಿಯುತ್ತಿದ್ದಾಗ ಶತ್ರು ಸೇನೆ ಇನ್ನೇನು ತಮ್ಮ ಕಥೆ ಮುಗಿಯಿತು ಪಲಾಯನ ಮಾಡುವುದೇ ಸರಿ ಎಂದು ಯೋಚಿಸುತ್ತಿದ್ದ ಆ ವೇಳೆಯಲ್ಲಿ ಅಚಾನಕ್ಕಾಗಿ ಶತ್ರು ಸೈನಿಕನೊಬ್ಬ ಬಿಟ್ಟ ಬಾಣವೊಂದು ಪ್ರಮಾದವಶಾತ್ ಆ ಸೋಲಿಲ್ಲದ ಸರದಾರನ ಕಣ್ಣಿನಲ್ಲಿ ನೆಟ್ಟಿತು. ಆ ಮಹಾವೀರ ಅದನ್ನು ಲೆಕ್ಕಿಸದೆ ತನ್ನ ಕೈಯಿಂದ ಆ ಬಾಣವನ್ನು ಕಿತ್ತು ಧಾರಾಕಾರವಾಗಿ ರಕ್ತಸುರಿಯುತ್ತಿದ್ದ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೈನ್ಯವನ್ನು ಹುರಿದುಂಬಿಸುತ್ತಾ ಮುನ್ನಡೆಸಿದ. ಆದರೆ ಕೆಲವೇ ನಿಮಿಷಗಳಲ್ಲಿ ಜ್ಞಾನತಪ್ಪಿ ಕುಸಿದು ಬಿದ್ದ. ಮಹಾನಾಯಕ ನೆಲಕ್ಕೊರಗಿದ ಕೂಡಲೇ ಸೇನೆ ಕಂಗಾಲಾಯಿತು. ಪಲಾಯನ ಮಂತ್ರ ಪಠಿಸಲು ತುದಿಗಾಲಲ್ಲಿ ನಿಂತಿದ್ದ ಶತ್ರು ಸೇನೆ ಅನಿರೀಕ್ಷಿತ ಘಟನೆಯಿಂದ ಗೆದ್ದುಬಿಟ್ಟಿತು. ಜ್ಞಾನ ತಪ್ಪಿ ಬಿದ್ದಿದ್ದ ಆ ಮಹಾವೀರನ ತಲೆಯನ್ನು, ತನ್ನ ಚೋರ ಗುರುವಿನ ಆಜ್ಞೆಯಂತೆ ಶತ್ರು ರಾಜ ಕತ್ತರಿಸಿಬಿಟ್ಟ!

ಯಾರೀ ವಿಕ್ರಮಾದಿತ್ಯ? ಒಬ್ಬ ಸಾಮಾನ್ಯ ಮನುಷ್ಯ. ಇಂದ್ರಪ್ರಸ್ಥದ ನೈರುತ್ಯ ಭಾಗದ ರೇವಾರಿ ಎಂಬ ಪಟ್ಟಣದಲ್ಲಿ ಉಪ್ಪು-ತರಕಾರಿಗಳನ್ನು ಮಾರುತ್ತಿದ್ದ ವೈಶ್ಯಕುಲ ಸಂಜಾತ. ಹೆಚ್ಚು ಜ್ಞಾನ-ಹಣ-ಜನಬಲವೂ ಇರಲಿಲ್ಲ. ಆದರೂ ಸ್ವಶಕ್ತಿಯಿಂದ ಮೇಲಕ್ಕೆ ಬಂದ. ಹಂತಹಂತವಾಗಿ ಬೆಳೆದ. ಒಂದು ಸಾಮ್ರಾಜ್ಯಕ್ಕೇ ಮಂತ್ರಿಯಾದ. ಒಂದೆರಡಲ್ಲ, ಇಪ್ಪತ್ತೆರಡು ಮಹಾಯುದ್ಧಗಳನ್ನು ಮಾಡಿದ. ಪ್ರತಿಯೊಂದರಲ್ಲೂ ಗೆದ್ದು ಮಧ್ಯ ಯುಗದ ನೆಪೋಲಿಯನ್ ಎನ್ನಿಸಿಕೊಂಡ. ಫಲವಾಗಿ ಪ್ರತಿಷ್ಠೆಯ ಇಂದ್ರಪ್ರಸ್ಥದ ಸಿಂಹಾಸನವನ್ನೇರಿ ಪಟ್ಟಾಭಿಷಿಕ್ತನಾಗಿ ಮಹಾರಾಜನಾದ. ಹೇಮು…ಹೇಮಚಂದ್ರ….ಹೇಮಚಂದ್ರ ವಿಕ್ರಮಾದಿತ್ಯನಾದ!

ಘಜನಿ-ಘೋರಿ-ಬಾಬರ್ ಗಳಿಂದ ಅಡಿಗಡಿಗೆ ನಾಶವಾಗಿ ಮತ್ತದೇ ಸಕಲ ವೈಭವಗಳಿಂದ ಎದ್ದು ನಿಲ್ಲುತ್ತಿದ್ದ ಭಾರತ ಮೊಘಲರ ಬರ್ಬರತೆಗೆ ಬಲಿಯಾಗುತ್ತಿದ್ದ ವಿಷಮ ಘಳಿಗೆಯದು. ಬಾಬರನ ಮರಣಾನಂತರ ಆತನ ಮಗ ಹುಮಾಯೂನನನ್ನು ದೇಶದಿಂದ ಹೊರಗೋಡಿಸಿ ಸಿಂಹಾಸನವೇರಿದ್ದ ಷೇರ್ ಷಾನ ಮಗ ಇಸ್ಲಾಂಷಾ ಆಗ ದೆಹಲಿಯನ್ನಾಳುತ್ತಿದ್ದ. ತಾಯಿ ಭಾರತಿ ಕಣ್ಣೀರ್ಗರೆಯುತ್ತಿದ್ದ ಅಂತಹ ವಿಪ್ಲವ ಸನ್ನಿವೇಶದಲ್ಲಿ ಹೇಮು ಪ್ರಸ್ತುತ ಹರಿಯಾಣದಲ್ಲಿರುವ ರೇವಾರಿ ಪಟ್ಟಣದಲ್ಲಿ ಪುರಾಣ್ ಮಲ್ ಎಂಬ ಬಡ ವೈಶ್ಯನ ಮನೆಯಲ್ಲಿ 1501ರಲ್ಲಿ ಜನಿಸಿದ. ಕೌಟುಂಬಿಕ ಪರಿಸ್ಥಿತಿಯ ಕಾರಣದಿಂದ ಹೆಚ್ಚಿನ ಜ್ಞಾನಾರ್ಜನೆ ಸಿಗಲಿಲ್ಲವಾದರೂ ಸಂಸ್ಕೃತ, ಹಿಂದಿ, ಪರ್ಷಿಯನ್ ಭಾಷೆಗಳಲ್ಲಿ ತಕ್ಕಮಟ್ಟಿನ ಪಾಂಡಿತ್ಯವನ್ನು ಗಳಿಸಿಕೊಂಡಿದ್ದ ಆತ ಬೀದಿಗಳಲ್ಲಿ ಪೆಟ್ಲುಪ್ಪು ಹಾಗೂ ತರಕಾರಿ ಮಾರುತ್ತಾ ಜೀವನ ಸಾಗಿಸಿಕೊಂಡಿದ್ದ. ಕೆಲದಿನಗಳಲ್ಲಿ ಮಾರುಕಟ್ಟೆಯಲ್ಲಿ ಸರಕುಗಳನ್ನು ತೂಕ ಮಾಡುವ ಸರಕಾರೀ ಕಛೇರಿಯಲ್ಲಿ ಕೆಲಸಕ್ಕೆ ಸೇರಿದ. ತನ್ನ ಪ್ರತಿಭೆಯಿಂದ ಅಧಿಕಾರಿಗಳನ್ನು ಮೆಚ್ಚಿಸಿ ಹಂತಹಂತವಾಗಿ ಮೇಲೇರಿದ ಆತನಿಗೆ ಅಂಗಡಿಗಳನ್ನು ತಪಾಸಿಸಿ ಅಪರಾಧಿಗಳನ್ನು ಶಿಕ್ಷಿಸುವ ಉನ್ನತ ಪದವಿ ಸಿಕ್ಕಿತು. ತನ್ನ ಚಾತುರ್ಯ ಹಾಗೂ ಸಾಮರ್ಥ್ಯತೆಯಿಂದ ರಾಜನ ಕಣ್ಣಿಗೆ ಬಿದ್ದ. ತನ್ನ ಕಾರ್ಯದಕ್ಷತೆಯಿಂದ ಅಂಚೆ ಇಲಾಖೆಯ ಗೂಢಚಾರ ದಳದ ಅಧಿಪತಿಯಾಗಿ ರಾಜಕೀಯ ಹಾಗೂ ಸೈನ್ಯಕ್ಕೆ ಸಂಬಂಧಿಸಿದ ಕೆಲಸಗಳನ್ನು ಸ್ವತಃ ರಾಜ ತನಗೇ ಒಪ್ಪಿಸುವ ಮಟ್ಟಿಗೆ ಬೆಳೆದ. ಆಸ್ಥಾನಿಕರು ಹಾಗೂ ಅಧಿಕಾರಿಗಳೊಂದಿಗೆ ಕಲೆತು ಮಲೆತು ವ್ಯವಹರಿಸುತ್ತಿದ್ದ ಹೇಮು ಅವರಿಗೆಲ್ಲಾ ಪ್ರೀತಿಪಾತ್ರನಾದ.

ಇಸ್ಲಾಂ ಷಾ ಸತ್ತ ನಂತರ ಸಿಂಹಾಸನವನ್ನೇರಿದ ಆತನ ಹನ್ನೆರಡು ವರ್ಷದ ಮಗ ಫಿರೋಜ್ ಷಾ ಸಿಂಹಾಸನವನ್ನೇರಿದರೂ ಆತನ ಸೋದರಮಾವ ಮುಬಾರಿಜ್ ಖಾನ್ ಮಹ್ಮದ್ ಆದಿಲ್ ಷಾ ಆತನ ಕೊಲೆ ಮಾಡಿ ತಾನೇ ರಾಜನಾದ. ಸಕಲ ದುರ್ಗುಣಗಳನ್ನು ಮೈಗೂಡಿಸಿಕೊಂಡಿದ್ದ ಆತ ಮಾಡಿದ ಒಂದು ಒಳ್ಳೆಯ ಕೆಲಸವೆಂದರೆ ಹೇಮುವನ್ನು ತನ್ನ ಪ್ರಧಾನ ಮಂತ್ರಿಯನ್ನಾಗಿ ಮಾಡಿ ಸಕಲ ಅಧಿಕಾರವನ್ನು ಆತನಿಗೆ ನೀಡಿದ್ದು. ಹೇಮು ತನ್ನೆಲ್ಲಾ ಶಕ್ತಿಗಳನ್ನು ಪಣವಾಗಿಟ್ಟು ಅಪ್ಘನ್ ಸರ್ದಾರರ ಕುತಂತ್ರ ವಂಚನೆಗಳನ್ನು ನಿರರ್ಥಕಗೊಳಿಸಿ ಆಗ್ರಾ, ಲಾಹೋರ್, ಬಂಗಾಳ, ಮಾಳವಗಳ ಗವರ್ನರುಗಳನ್ನು ಮಟ್ಟ ಹಾಕಿದ. ಸಂಗೀತ ನೃತ್ಯ ಗೋಷ್ಠಿಗಳಲ್ಲಿ ಮುಳುಗಿ ವಿಲಾಸೀ ಜೀವನ ನಡೆಸುತ್ತಿದ್ದ ಸುಲ್ತಾನನ ರಾಜ್ಯವನ್ನು, ರಾಜವ್ಯವಹಾರಗಳನ್ನು ಜಾಣತನದಿಂದ ನಿಭಾಯಿಸಿದ. ಅದಕ್ಕಾಗಿ ಅವನು ಇಪ್ಪತ್ತು ಯುದ್ಧಗಳನ್ನು ಮಾಡಬೇಕಾಯಿತು. ಎಲ್ಲವನ್ನೂ ಗೆದ್ದ. ಅವೇನು ಸೇನಾಪತಿಗಳನ್ನು ರಣರಂಗಕ್ಕೆ ಕಳುಹಿ ತಾನು ಅರಮನೆಯಲ್ಲಿ ಸುಖದಲ್ಲಿ ಕುಳಿತು ಸಾಧಿಸಿದ ಗೆಲುವುಗಳಲ್ಲ. ಪ್ರತೀ ಯುದ್ಧದಲ್ಲಿ ಸ್ವಯಂ ಸೇನಾಧಿಪತಿಯಾಗಿ, ರಣರಂಗದಲ್ಲಿ ಸ್ವಯಂ ಸೇನೆಯನ್ನು ನಡೆಸಿ ಸಾಧಿಸಿದ ಅತ್ಯದ್ಭುತ ವಿಜಯಗಳು. ಅರೇ ಕ್ಷತ್ರಿಯನಲ್ಲದಿದ್ದ, ಯುದ್ಧ ವಿದ್ಯೆ ಕಲಿಯದಿದ್ದ, ಅಷ್ಟೇನೂ ವಿದ್ಯಾರ್ಜನೆಯೂ ಇಲ್ಲದ, ಬಡಕಲು ಶರೀರದ, ಬಡ ವೈಶ್ಯನೊಬ್ಬ ಯುದ್ಧ ಮಾಡಿ ಗೆದ್ದನೇ ಎಂದು ಆಶ್ಚರ್ಯವಾದೀತು. ಆತ ಖಡ್ಗ ಝಳಪಿಸಲಿಲ್ಲ, ಬಾಣ ಪ್ರಯೋಗಿಸಲಿಲ್ಲ. ಇಡೀ ರಣವ್ಯೂಹವನ್ನು ತನ್ನ ಪ್ರಿಯ “ಹವಾಯಿ” ಆನೆಯ ಮೇಲೆ ಕುಳಿತು ಚಲಾಯಿಸುತ್ತಿದ್ದ. ಸೂಕ್ತ ವ್ಯೂಹ ರಚಿಸಿ ಚತುರಂಗ ಬಲಗಳನ್ನೂ, ಸೈನ್ಯದ ಎಲ್ಲಾ ಪಾರ್ಶ್ವಗಳನ್ನು ಸಮನ್ವಯಗೊಳಿಸಿ ಪಡೆಗಳನ್ನು ನಡೆಸುತ್ತಿದ್ದ. ಅವನಿದ್ದನೆಂದರೆ ಸೇನೆಗೆ ಆನೆ ಬಲ. ಅವನಿದ್ದ ಕಡೆಗೇ ಜಯ. ಹೇಮುವನ್ನು ಸೈತಾನನಂತೆ ಚಿತ್ರಿಸಿದ ಅಬುಲ್ ಫಜಲ್’ನಂತಹವನೂ ಆತನ ಶೌರ್ಯ ಧೈರ್ಯ, ಆತ ಪರಾಕ್ರಮದಿಂದ ಇಪ್ಪತ್ತೆರಡು ಯುದ್ಧಗಳನ್ನು ಗೆದ್ದ ಪರಿಯನ್ನು ಅಮೋಘವಾಗಿ ವರ್ಣಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಹಿಂದೂಗಳನ್ನು ತುಚ್ಛವಾಗಿ ಕಾಣುತ್ತಿದ್ದ ಸೊಕ್ಕಿನ ಅಪ್ಘನ್ ಸರ್ದಾರರು ಹೇಮುವಿನ ಮುಂದೆ ಬೆಕ್ಕಿನ ಮರಿಗಳಂತಿದ್ದು ಆತನ ಆಜ್ಞೆಯನ್ನು ಶಿರಸಾವಹಿಸಿ ಮಾಡುತ್ತಿದ್ದರು. ಸೈನಿಕರ ನಡುವೆ ಒಂದಾಗಿ ಅವರ ಕಷ್ಟಸುಖಗಳನ್ನು ವಿಚಾರಿಸುವುದು, ಯುದ್ಧದಲ್ಲಿ ಗೆದ್ದ ವಸ್ತುಗಳನ್ನು ಸೈನಿಕರಿಗೆ ಧಾರಾಳವಾಗಿ ವಿತರಿಸುವುದು ಇವುಗಳಿಂದ ಸೈನಿಕರ ಮನದಲ್ಲಿ ಸದಾ ಆತನ ಬಗೆಗೆ ಪ್ರೀತಿ-ಗೌರವಗಳು ತುಂಬಿರುತ್ತಿತ್ತು.

Fort_Gwalior

ಹೇಮುವಿನ ಸಾಮರ್ಥ್ಯವೇ ಆದಿಲ್ ಷಾ ಆತನ ಮೇಲೆ ಅಪಾರ ನಂಬಿಕೆ ಇರಿಸಲು ಕಾರಣವಾಗಿತ್ತು. ಅಪಾಯ ಒದಗಿದಾಗ ಹೇಮು ಎಲ್ಲೇ ಯಾರ ಜೊತೆಯೇ ಯುದ್ಧ ಮಾಡುತ್ತಿದ್ದರೂ ಅದನ್ನು ನಿಲ್ಲಿಸಿ ತನ್ನನ್ನು ರಕ್ಷಿಸೆಂದು ಗೋಗರೆಯುತ್ತಿದ್ದ. ಹುಮಾಯೂನ್ ದೆಹಲಿಯನ್ನು ಆಕ್ರಮಿಸಿದಾಗ ಆತನನ್ನು ಎದುರಿಸಲು ಹೇಮುವನ್ನೇ ಕಳುಹಿದ. ಆದರೆ ಹುಮಾಯೂನ ಅರಮನೆಯ ಮೇಲಿಂದ ಕಾಲುಜಾರಿ ಬಿದ್ದು ಸತ್ತ ಕಾರಣ ಆತನೊಡನೆ ಯುದ್ಧ ಮಾಡುವ ಪ್ರಮೇಯವೇ ಬರಲಿಲ್ಲ. ಆಗ ಯುವರಾಜ ಅಕ್ಬರನಿಗೆ 14 ವರ್ಷ. ಆತ 300 ಮೈಲಿ ದೂರದಲ್ಲಿದ್ದ ಕಾರಣ ಹುಮಾಯೂನನ ತದ್ರೂಪಿಯೊಬ್ಬನನ್ನು ತೋರಿಸಿ ರಾಜ ಜೀವಂತವಾಗಿದ್ದಾನೆಂದು ಹದಿನೇಳು ದಿವಸಗಳ ಕಾಲ ನಾಟಕವಾಡಿತು ಮೊಘಲ್ ಪಡೆ. ದಿಲ್ಲಿಗೆ ಬರುತ್ತಿದ್ದ ಅಕ್ಬರನಿಗೆ ಕಲ್ನೂರಿನ ಚಿಕ್ಕ ತೋಟವೊಂದರಲ್ಲಿ ಪಟ್ಟಾಭಿಷೇಕ ಮಾಡಲಾಯಿತು. ಆದರೆ ಅಷ್ಟರಲ್ಲಿ ಹೇಮು ಅತ್ಯುತ್ತಮ ವ್ಯೂಹ ರಚಿಸಿ  ಜೌಢ್’ನಿಂದ ಸಾವಿರ ಆನೆ, ಐವತ್ತು ಸಾವಿರ ಕುದುರೆಗಳು, 51 ತೋಪುಗಳ ಸೈನ್ಯದೊಂದಿಗೆ ದಿಲ್ಲಿಯ ಮೇಲೆ ಏರಿ ಬಂದಾಗ ಮೊಘಲರ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಯಿತು. ಹೇಮುವಿನ ದಾಳಿಯನ್ನು ತಾಳಲಾರದೆ ಮೊಘಲ್ ಸೈನ್ಯ ಪಲಾಯನ ಮಾಡಿತು. 1556ರ ಅಕ್ಟೋಬರ್ 7ರಂದು ಹೇಮು ದಿಲ್ಲಿ ಪ್ರವೇಶಿಸಿ ವಿಜಯಪತಾಕೆ ಹಾರಿಸಿದ. ರಾಜಾ ವಿಕ್ರಮಾದಿತ್ಯ ಎಂಬ ಬಿರುದಿನೊಂದಿಗೆ ಹೇಮಚಂದ್ರ ಇಂದ್ರಪ್ರಸ್ಥದ ಸಿಂಹಾಸನವನ್ನೇರಿದ. ಹೀಗೆ ಅಫ್ಘನ್ ಹಾಗೂ ಮೊಘಲರ ಬರ್ಬರತೆಯ ಮಧ್ಯೆಯೇ ಇಂದ್ರಪ್ರಸ್ಥದಲ್ಲಿ ಕೇಸರಿ ಧ್ವಜ ಮತ್ತೊಮ್ಮೆ ಸ್ವತಂತ್ರವಾಗಿ ಹಾರಾಡಿತು. ಅವನ ಹಿಂದಿದ್ದ ಅಫ್ಘನ್ ಸರ್ದಾರರು, ರಜಪೂತ ವೀರರೂ ಅವನನ್ನು ಸಮರ್ಥಿಸಿದರು. ತನ್ನ ಹೆಸರಿನಲ್ಲಿ ನಾಣ್ಯಗಳನ್ನು ಮುದ್ರಿಸಿ ರಾಜ್ಯದ ಸುವ್ಯವಸ್ಥೆಗೆ ಅತ್ಯಗತ್ಯ ಆಜ್ಞೆಗಳನ್ನು ಹೊರಡಿಸಿದ. ಆದರೆ ಆತ ತನ್ನ ಅಧಿಕಾರವನ್ನು ಸುಭದ್ರಗೊಳಿಸುವ ಪ್ರಯತ್ನದಲ್ಲಿರುವಾಗಲೇ ವಿಧಿ ಬೇರೊಂದು ಬಗೆಯಿತು.

ಇತ್ತ ತನ್ನ ಸರ್ದಾರರ ಮಾತಿನನ್ವಯ ಕಾಬೂಲಿಗೆ ಪರಾರಿಯಾಗಲು ಸಿದ್ಧತೆ ನಡೆಸುತ್ತಿದ್ದ ಹುಡುಗ ಅಕ್ಬರನಿಗೆ ಆತನ ಸಂರಕ್ಷಕ ಭೈರಾಂಖಾನ್ ಧೈರ್ಯ ತುಂಬಿ ಯುದ್ಧಕ್ಕೆ ಅಣಿಯಾದ. ಇಪ್ಪತ್ತೈದು ಸಾವಿರ ಕುದುರೆಗಳು, ಹನ್ನೆರಡು ಸಾವಿರ ಸೈನಿಕರ ಸೇನೆಯೊಂದಿಗೆ ಪಾಣಿಪತ್ತಿನಲ್ಲೇ ಹೇಮುವನ್ನು ಎದುರಿಸುವುದೆಂದು ನಿಶ್ಚಯಿಸಿದ. 1500 ಆನೆಗಳು 50 ಸಾವಿರ ಕುದುರೆಗಳ ಬಲಿಷ್ಟ ಸೈನ್ಯದೊಂದಿಗೆ ಧಾವಿಸಿ ಬರುತ್ತಿರುವ ಹೇಮಚಂದ್ರನನ್ನು ಎದುರಿಸಿ ನಿಲ್ಲಬಲ್ಲೆವೆಂಬ ನಂಬಿಕೆ ಅಕ್ಬರನಿಗೂ ಇರಲಿಲ್ಲ. ಹಾಗಾಗಿ ಭೈರಾಂಖಾನ್ ಅಕ್ಬರನನ್ನು ಕುತ್ಬುಲ್ ಅಕ್ತಾಬ್ ಸಯ್ಯದ್ ಜಲಾಲ್ ಎಂಬ ಸಂತನ ಪಾದಕ್ಕೆರಗಿಸಿ “ಇರುವೆಗಳಂತೆ, ಮಿಡತೆಗಳಂತೆ ಅಸಂಖ್ಯ ಸೈನಿಕರೊಡಗೂಡಿ ಆ ನೀಚ ಕಾಫಿರ ನಮ್ಮನ್ನು ಮುಗಿಸಲು ಬರುತ್ತಿದ್ದಾನೆ. ಇಸ್ಲಾಮಿನ ರಕ್ಷಣೆಗಾಗಿ ಯುವರಾಜನನ್ನು ತಾವೇ ರಕ್ಷಿಸಬೇಕು” ಎಂದು ಪ್ರಾರ್ಥಿಸಿದ. ಯುದ್ಧಕ್ಕೆ ಮೂರು ದಿನಗಳಿರುವಾಗ ಮೊಘಲ್ ಸರದಾರರನ್ನು ಭೋಜನ ಕೂಟಕ್ಕೆ ಆಹ್ವಾನಿಸಿ ಉಡುಗೊರೆಗಳನ್ನು ನೀಡಿ “ಮನಸ್ಸಿಟ್ಟು ಯುದ್ಧ ಮಾಡಿದರೆ ಹಿಂದೂಸ್ಥಾನ ನಿಮ್ಮದಾಗುತ್ತದೆ. ವಿಫಲವಾದರೆ 500 ಕ್ರೋಸು ದೂರದಿಂದ ಮನೆಬಿಟ್ಟು ಬಂದಿರುವ  ನಿಮಗೆ ಆಶ್ರಯವೆಲ್ಲೂ ಸಿಗಲಾರದು” ಎಂದು ಎಚ್ಚರಿಸಿದ. ಅಂದರೆ ಮೊಘಲ್ ಪಡೆ ಎಷ್ಟು ಹೆದರಿತ್ತು ಎನ್ನುವುದನ್ನು ಅರ್ಥೈಸಿಕೊಳ್ಳಬಹುದು. ಮಾತ್ರವಲ್ಲ ಅಕ್ಬರನನ್ನು ರಣರಂಗದ ಸಮೀಪ ಹೋಗಗೊಡದೆ 8 ಮೈಲಿ ದೂರದಲ್ಲೇ ಐನೂರು ಸೈನಿಕರ ಕಾವಲಿನಲ್ಲಿ ತನ್ನ ಬಳಿಯೇ ಇರಿಸಿಕೊಂಡು, ಸೋಲುವ ವರ್ತಮಾನ ಸಿಕ್ಕಲ್ಲಿ ಕಾಬೂಲಿಗೆ ಓಡಿಹೋಗುವ ಸಿದ್ಧತೆಯನ್ನು ಮಾಡಿದ್ದ.

ಆದರೆ ಹೇಮುವಿನ ಆತ್ಮವಿಶ್ವಾಸವೇ ಆತನಿಗೆ ಮುಳುವಾಯಿತೇನೋ. ಆತನ ಫಿರಂಗಿ ದಳ ಮೊಘಲರೆದುರು ನೆಲಕಚ್ಚಿತು. ಅದರಿಂದೇನು ಹೇಮು ಅಧೈರ್ಯಗೊಳ್ಳಲಿಲ್ಲ. ತನ್ನ ಬಲಿಷ್ಟ ಗಜಪಡೆಯೊಂದಿಗೆ ಮೊಘಲರನ್ನು ತರಿಯುತ್ತಾ ಮುಂದುವರೆದ. 1556ರ ನವೆಂಬರ್ 5ರ ಪಾಣಿಪತ್ತಿನ ಆ ಮಹಾ ಸಂಗ್ರಾಮದಲ್ಲಿ ಮೊಘಲರನ್ನು ಚಕ್ರವ್ಯೂಹದೊಳಗೆ ಸಿಲುಕಿಸಿ ಹಿಗ್ಗಾಮುಗ್ಗಾ ಸಾಯಬಡಿಯುತ್ತಿದ್ದಾಗ, ಮೊಘಲರು ತಮ್ಮ ಕಥೆ ಮುಗಿಯಿತೆಂದು ಕಂಪಿಸುತ್ತಿದ್ದಾಗ, ಇನ್ನೇನು ಗೆದ್ದೇ ಬಿಟ್ಟೆವು ಎನ್ನುವಷ್ಟರಲ್ಲಿ ಕಣ್ಣಿನೊಳಗೆ ಅಚಾನಕ್ಕಾಗಿ ಹೊಕ್ಕ ಶತ್ರು ಸೈನಿಕನ ಬಾಣ ದುರದೃಷ್ಟಕರವಾಗಿ ಪರಿಣಮಿಸಿತು. ನಾಯಕ ಮೂರ್ಛೆ ಹೋದೊಡನೆ ಸೈನ್ಯವೂ ಕಂಗಾಲಾಯಿತು. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡ ಮೊಘಲರು ಹೇಮಚಂದ್ರನ ಸೇನೆಯನ್ನು ಕೊಚ್ಚಿ ಹಾಕಿದರು. ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಹೇಮುವಿನ ತಲೆಯನ್ನು ಭೈರಾಂಖಾನನ ಆಜ್ಞೆಯಂತೆ ಅಕ್ಬರ್ ಕತ್ತರಿಸಿ ಹಾಕಿದ. ಅಭಿನವ ವಿಕ್ರಮಾದಿತ್ಯನ ರುಂಡವನ್ನು ಕಾಬೂಲಿಗೆ ಕಳುಹಿಸಲಾಯಿತು. ಮುಂಡವನ್ನು ಸಾರ್ವಜನಿಕ ಪ್ರದರ್ಶನಕ್ಕೆಂದು ದೆಹಲಿಯ ಕೋಟೆಯ ಹೆಬ್ಬಾಗಿಲಿಗೆ ತೂಗು ಹಾಕಲಾಯಿತು. ಯುದ್ಧ ಮುಗಿದ ನಂತರ ಶಾಂತಿ ನೆಲೆಸಬೇಕಿತ್ತು. ಆದರೆ ಬಾಬರನ ಸಂತತಿಯವರ ಪಠ್ಯದಲ್ಲಿ ಶಾಂತಿ ಎಂಬುದಕ್ಕೆ ಅರ್ಥವೇ ಬೇರೆ. ಸೆರೆ ಸಿಕ್ಕ ಶತ್ರು ಸೇನೆಯ ಜೊತೆಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹಿಂದೂಗಳ ಮಾರಣ ಹೋಮವೂ ನಡೆಯಿತು. ಅಷ್ಟಕ್ಕೆ ಸಮಧಾನಗೊಳ್ಳದ ಅಕ್ಬರ್ ಹೇಮುವಿನ ಹಳ್ಳಿಗೂ ದಾಳಿ ಮಾಡಿ ಅವನ ಕುಟುಂಬವನ್ನು ಸರ್ವನಾಶ ಮಾಡಿದ. ಹೇಮಚಂದ್ರನ, ಎಂಬತ್ತು ವರ್ಷ ಪ್ರಾಯದ ವಯೋವೃದ್ಧ ತಂದೆಯನ್ನು  “ಮತಾಂತರಗೊಳ್ಳುತ್ತೀಯಾ ಇಲ್ಲಾ ಸಾಯುತ್ತೀಯಾ?” ಎಂದು ಕೇಳಿ, ಆತ ಪ್ರಾಣ ಹೋದರೂ ಮತಾಂತರಗೊಳ್ಳಲಾರೆ ಎಂದಾಗ ಆತನ ತಲೆಯನ್ನು ಕಡಿದು ಹಾಕಲಾಯಿತು.

ಅತ್ತ ದೈವವಾಗಲೀ ಇತ್ತ ಇತಿಹಾಸಕಾರರಾಗಲೀ ಹೇಮುವಿನ ಮೇಲೆ ಕರುಣೆ ತೋರಲಿಲ್ಲ. ಭಾರತದಲ್ಲಿ ಮುಸ್ಲಿಂ ಪಾಶವೀಯತೆ ಉಚ್ಛ್ರಾಯ ಸ್ಥಿತಿಯನ್ನು ತಲುಪಿದ್ದ ವೇಳೆಯಲ್ಲಿ ಕಿರಾಣಿ ಅಂಗಡಿಯಿಂದ ಇಂದ್ರಪ್ರಸ್ಥದ ಗದ್ದುಗೆಯವರೆಗೆ ದಾರಿ ಮಾಡಿಕೊಂಡು ಹೋಗಿ ಸೋಲಿಲ್ಲದ ಸರದಾರನಾಗಿ ವಿಕ್ರಮಾದಿತ್ಯನಾಗಿ ಸಿಂಹಾಸನವನ್ನೇರಿ ಧರ್ಮ ಪತಾಕೆಯನ್ನು, ಹಿಂದೂ ಸಾಮ್ರಾಜ್ಯವನ್ನು ಮರುಸ್ಥಾಪಿಸಿದ ಹಿಂದೂ ವೀರನಿಗೆ ಸಿಗಬೇಕಾದ ಗೌರವ ಸಿಗಲಿಲ್ಲ. ಅತ್ತ ಅಫ್ಘನ್ನರಿಗೂ ಇತ್ತ ಮೊಘಲರಿಗೂ ಆಸ್ಪದವಿಲ್ಲದಂತೆ ದಿಲ್ಲಿಯಲ್ಲಿ ಸ್ವತಂತ್ರ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿ ಇಡೀ ರಾಷ್ಟ್ರವನ್ನೇ ಏಕಛತ್ರದೊಳಗೆ ಸೇರಿಸಲು ಉದ್ದೇಶಿಸಿದ ಸಾಮಾನ್ಯ ವ್ಯಕ್ತಿಯೊಬ್ಬನ ಸಾಧನೆ ಅಸಾಮಾನ್ಯವಾದುದಲ್ಲವೇ? ಬೇರೆ ದೇಶದಲ್ಲಾಗಿದ್ದರೆ ಇಂತಹ ರಾಷ್ಟ್ರವೀರನನ್ನು  ಭಾವಚಿತ್ರವಿಟ್ಟು ಪೂಜಿಸಿ ತಮ್ಮ ಭಾವೀ ಜನಾಂಗಕ್ಕೆ ಆತನ ಪರಾಕ್ರಮವನ್ನು ಹೆಮ್ಮೆಯಿಂದ ತೋರಿಸುತ್ತಿದ್ದರು. ಆದರೆ ನಮ್ಮ ಚರಿತ್ರಕಾರರು ಉದ್ದೇಶಪೂರ್ವಕವಾಗಿ ಮರೆತುಬಿಟ್ಟರು. ರಣಭೂಮಿಯಲ್ಲಿ ಆಕಸ್ಮಿಕವಾಗಿ ಜಯ ಅಪಜಯವಾಗಿ ಪರಿಣಮಿಸದೇ ಇರುತ್ತಿದ್ದರೆ ಆತ ದಿಲ್ಲಿಯಲ್ಲೊಂದು ಹಿಂದೂ ರಾಜವಂಶವನ್ನು ಸ್ಥಾಪಿಸುತ್ತಿದ್ದ.

Facebook ಕಾಮೆಂಟ್ಸ್

ಲೇಖಕರ ಕುರಿತು

Rajesh Rao

ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್
ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!