ಪ್ರಚಲಿತ

ಮೋ(ದಿ) ಡಿಫೈಡ್ ಭಾರತ- ಸಾಧನೆಗಳು ಹಲವು, ವಿಫಲತೆಗಳು ಕೆಲವು

Modi_PTI

ಭಾರತದ ಇತಿಹಾಸದಲ್ಲೇ ಅಭೂತಪೂರ್ವ ಜಯ ಸಾಧಿಸಿದ ನರೇಂದ್ರ ಮೋದಿಯವರು ಏಕಮೇವಾದ್ವಿತೀಯರಾಗಿ ಪ್ರಧಾನಿ ಪಟ್ಟ ಅಲಂಕರಿಸಿ ವರುಷ ಒಂದು ಸಂದಿದೆ. ಅಯೋಗ್ಯರು ಹಾಗೂ ಹಗರಣಗಳಿಂದ ತುಂಬಿತುಳುಕುತ್ತಿದ್ದ ಹಿಂದಿನ ಕಚಡಾ ಕಿಚಿಡಿ ಯುಪಿಎ ಸರಕಾರದಿಂದ ಮೋದಿ ಸರಕಾರ ಸಾವಿರ ಪಾಲು ವಾಸಿ. ಅನೇಕ ಒಳ್ಳೆಯ ಜನಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎನ್ಡಿಎ ಸರಕಾರ. ಹಲವೊಂದು ವಿಷಯಗಳಲ್ಲಿ ಗೆದ್ದಿದೆ, ಕೆಲವೊಂದು ವಿಷಯಗಳಲ್ಲಿ ಎಡವಿದೆ. ಸರಕಾರದ ವಿಫಲತೆ ಹಾಗೂ ಸಾಧನೆ ಎರಡನ್ನೂ ಇಲ್ಲಿ ವಿಶ್ಲೇಷಿಸಲಾಗಿದೆ.

ನೇತಾಜಿ ಸುಭಾಷ್‌ಚಂದ್ರ ಭೋಸ್ ಸಾವಿನ ಸತ್ಯ ಹೊರಗೆ ಹಾಕಿ ಎಂದಾಗ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅದನ್ನು ನಯವಾಗಿಯೇ ತಿರಸ್ಕರಿಸಿ ಆ ಸತ್ಯವನ್ನು ಹೊರಹಾಕಿದರೆ ಅಂತರಾಷ್ಟ್ರೀಯ ಸಂಬಂಧಗಳು ಹದಗೆಡುತ್ತವೆ ಎಂದು ಹೇಳಿ ಜಾಣ್ಮೆಯಿಂದ ಜಾರಿಕೊಂಡಿದ್ದರು. ಆಗ ಮೋದಿ ಸಾರ್ವಜನಿಕವಾಗಿ ಯುಪಿಎ ಸರಕಾರಕ್ಕೆ ಛೀಮಾರಿ ಹಾಕಿದ್ದರು. ನೇತಾಜಿ ಸಾವಿನ ರಹಸ್ಯವನ್ನು ದೇಶದ ಜನತೆ ಮುಂದೆ ತೆರೆದಿಡುತ್ತೇನೆ ಎಂದು ಘಂಟಾಘೋಷವಾಗಿ ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದು ವರುಷ ಕಳೆದರೂ ಆ ಸಾವಿನ ನಿಗೂಢತೆಯನ್ನ ದೇಶದ ಜನತೆ ತಿಳಿಯಲು ಸಾಧ್ಯವಾಗಿಲ್ಲ. ಕಾಶ್ಮೀರ ಪಂಡಿತರ ಕಲ್ಯಾಣಕ್ಕಾಗಿ ಯೋಜನೆ ಪ್ರಕಟಿಸುವುದನ್ನು ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದ ಮೋದಿ ಈವರೆಗೆ ಅದರ ಕಾರ್ಯಯೋಜನೆ ತಯಾರಿಸಿಲ್ಲ. ಕಾಶ್ಮೀರದ ಬ್ರಾಹ್ಮಣ ಪಂಡಿತರು ಇಂದಿಗೂ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾರೆ. ಇನ್ನು ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸಿದ್ಧಾಂತಗಳನ್ನು ಬದಿಗಿಟ್ಟು ಪಿ.ಡಿ.ಪಿ ಯಂತ ದೇಶದ್ರೋಹಿ ಪಕ್ಷದ ಜೊತೆ ಅಧಿಕಾರಕ್ಕಾಗಿ ಕೈಜೋಡಿಸಿದೆ ಬಿಜೆಪಿ. ಪಕ್ಕಾ ರಾಷ್ಟ್ರೀಯ ಹಿತಾಸಕ್ತಿ ಉಳ್ಳಂತಹ ಬಿಜೆಪಿ ಅಧಿಕಾರಕ್ಕಾಗಿ ಮೋದಿಯ ಮುಂದಾಳತ್ವದಲ್ಲಿ ಪಿಡಿಪಿ ಜೊತೆ ಸೇರಿದ್ದು ಪ್ರಶ್ನಾರ್ಹ ವಿಷಯವೇ. ಇದಕ್ಕೆ ಪೂರಕವೆಂಬಂತೆ ಕಾಶ್ಮೀರದಲ್ಲಿ ಗಲಭೆಯೆಬ್ಬಿಸಿ ನೂರಾರು ಜನರ ಸಾವಿಗೆ ಕಾರಣನಾಗಿದ್ದ ಹುರಿಯತ್ ಕಾನ್ಫರೆನ್ಸ್ ನಾಯಕ ಹಾಗೂ ಸಮಾಜದ್ರೋಹಿ ಮಸರತ್ ಆಲಂನನ್ನು ಮುಖ್ಯಮಂತ್ರಿ ಸಯೀದ್ ಬಿಡುಗಡೆ ಮಾಡಿದಾಗ ತೀವ್ರ ಇರಿಸು ಮುರಿಸುಗೊಳಗಾಗಿದ್ದರು ಬಿಜೆಪಿ ನಾಯಕರು. ಸದ್ಯಕ್ಕೆ ಪಿಡಿಪಿ ಪಕ್ಷಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿ ಸುಮ್ಮನಾಗಿದೆ ಬಿಜೆಪಿ ಅಷ್ಟೇ. ಕಾಶ್ಮೀರದ ಸರ್ಕಾರಕ್ಕೆ ಸ್ಪಷ್ಟ ಮಾರ್ಗದರ್ಶನ ಮಾಡುವಲ್ಲಿ ಮೋದಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ವಿಫಲರಾಗಿದ್ದಾರೆ. ದೇಶಕ್ಕಾಗಿ ಹೋರಾಡಿದ ವೀರಯೋಧನ ಶಿರಚ್ಚೇಧನ ಮಾಡಿ ಗಡಿಯಲ್ಲಿ ತಂದಿಟ್ಟ ಪಾಪಿ(ಕಿ)ಸ್ತಾನ ವಿರುದ್ಧ ದೇಶಪ್ರೇಮಿಯಾದವನಿಗೆ ರಕ್ತ ಕುದಿಯುವುದು ಸಹಜ. ಆ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರವನ್ನು ಕೈಲಾಗದ ಹೇಡಿ ಎಂದು ಮೋದಿಯವರು ಜರೆದಾಗ ಇಡೀ ದೇಶವೇ ಚಪ್ಪಾಳೆ ಹೊಡೆದಿತ್ತು. ಉಗ್ರರ ಬಗ್ಗೆ ಮೃಧು ಸ್ವಭಾವ ಹೊಂದಿರದ ವ್ಯಕ್ತಿಯೊಬ್ಬ ನಮ್ಮ ಪ್ರಧಾನಿಯಾಗುತ್ತಾನೆ ಎಂದು ಹೆಮ್ಮೆಪಟ್ಟಿತ್ತು. ಆದರೆ ಪ್ರಧಾನಿಯಾದ ಮೇಲೆ ಭಯೋತ್ಪಾದನೆಯ ಬಗ್ಗೆ ಮೃಧು ಧೋರಣೆ ತಾಳಲಿಲ್ಲವಾದರೂ ಸೂಕ್ತ ಕ್ರಮ ಕೈಗೊಂಡು ದೇಶದ್ರೋಹಿಗಳಿಗೆ ತಕ್ಕ ಶಾಸ್ತಿ ಮಾಡುವುದರಲ್ಲಿ ಮೋದಿಯವರ ದೂರದೃಷ್ಟಿ ಅಷ್ಟೇನೂ ಕಾಣುತ್ತಿಲ್ಲ. ಗಡಿಯಲ್ಲಿ ಉಗ್ರರ ಒಳ ನುಸುಳುವಿಕೆ ಹಾಗೂ ಗುಂಡಿನ ಮೊರೆತ ಇನ್ನೂ ಮುಂದುವರೆದಿದೆ. ಬಾಂಗ್ಲಾ ನುಸುಳುಕೋರರ ಸಮಸ್ಯೆ ಇಂದು ನಿನ್ನೆಯದಲ್ಲ. ದಶಕಗಳಿಂದ ಬಾಂಗ್ಲಾದಿಂದ ಭಾರತಕ್ಕೆ ಸಾವಿರಾರು ನುಸುಳುಕೋರರು ನುಸುಳುತ್ತಲೇ ಇದ್ದಾರೆ. ಅಸ್ಸಾಂ, ಪಶ್ಚಿಮ ಬಂಗಾಳ ನುಸುಳುಕೋರರಿಗೆ ರಹದಾರಿಯಾಗಿದೆ. ಇಲ್ಲಿ ಅವರಿಗೆ ಆಧಾರ್ ಕಾರ್ಡು ಕೂಡಾ ದೊರೆಯುತ್ತದೆ. ಬಂಗಾಳದ ಬುರ್ದ್ವಾನ್ ಸ್ಪೋಟದಲ್ಲಿ ಬಾಂಗ್ಲಾ ಪ್ರಜೆಯ ಕೈವಾಡ ಇರುವುದು ಸ್ಪಷ್ಟವಾಗಿತ್ತು. ವೋಟ್ ಬ್ಯಾಂಕ್ ಗಾಗಿ ಇವರ ಬಗ್ಗೆ ಮೃಧು ಧೋರಣೆ ತಳೆದಿದ್ದ ಕಾಂಗ್ರೆಸ್ ಬಗ್ಗೆ ಮೋದಿ ಟೀಕಾಪ್ರಹಾರ ಮಾಡಿದ್ದರು. ಅದರೆ ಎನ್‌ಡಿಎ ಸರಕಾರ ಬಂದ ಮೇಲೂ ಅಕ್ರಮ ನುಸುಳುವಿಕೆ ಅವ್ಯಾಹತವಾಗಿ ನಡೆಯುತ್ತಿದೆ.

ಗೋವು ನಮ್ಮ ತಾಯಿ, ಗೋಹತ್ಯೆ ಖಂಡಿತಾ ನಿಷೇಧಿಸುತ್ತೇನೆ ಎಂದು ಚುನಾವಣಾ ಪ್ರಚಾರದುದ್ದಕ್ಕೂ ಹೇಳುತ್ತಾ ಬಂದರೂ ಅಧಿಕಾರಕ್ಕೆ ಬಂದ ಮೇಲೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ  ಮೋದಿಯವರ ನಡೆಯೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತಮ್ಮದೇ ಪಕ್ಷ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ಗೋಹತ್ಯಾ ನಿಷೇಧದ ವಿಧೇಯಕ ಜಾರಿಗೆ ಬಂದಿದ್ದರೂ ಇಡೀ ದೇಶದಲ್ಲಿ ಇನ್ನೂ ಜಾರಿಗೆ ಬಂದಿಲ್ಲ. ಹಿಂದಿನ ಯುಪಿಎ ಸರಕಾರ ಮಂಡಿಸಿದ್ದ ಲ್ಯಾಂಡ್ ಅಕ್ವಿಜಿಷನ್ ಕಾಯಿದೆಗೆ ಸುಗ್ರೀವಾಜ್ಞೆ ಹೊರಡಿಸಿ ದೇಶದ ಅನ್ನದಾತ ರೈತನ ಒಡಲಿಗೆ ಕೊಳ್ಳಿಯಿಡುತ್ತಿದ್ದಾರೆಯೇ ಎಂಬ ಸಂಶಯ ನಾಗರೀಕರಲ್ಲಿ ಮೂಡುತ್ತಿದೆ. ಕೈಗಾರೀಕರಣ ಮತ್ತು ಆಧುನೀಕತೆಗೆ ಭೂಸ್ವಾಧೀನ ಅತ್ಯಾವಶ್ಯಕ. ಆದರೆ ವಿಪಕ್ಷಗಳ ಹುಸಿ ಪ್ರಚಾರವನ್ನು ಜನರ ಮನಸ್ಸಿನಿಂದ ತೆಗೆದುಹಾಕಿ, ಕಾಯಿದೆಯಲ್ಲೇನಿದೆ, ಅದರ ಸಾಧಕ ಬಾಧಕಗಳೇನು ಎಂಬುದನ್ನು ಸಾಮಾನ್ಯ ರೈತರಿಗೆ ಮನವರಿಕೆ ಮಾಡಲು ಮೋದಿ ಸರಕಾರ ವಿಫಲವಾಗಿದೆ. ಇನ್ನು ೨೦೧೪ರ ಲೋಕಸಭಾ ಚುನಾವಣೆಯ ಪ್ರಮುಖ ವಿಷಯವಾಗಿದ್ದು ಕಪ್ಪು ಹಣ. ಸ್ವಿಸ್ ಬ್ಯಾಂಕ್‌ನಲ್ಲಿರುವ ಲಕ್ಷಾಂತರ ಕೋಟಿ ಕಪ್ಪು ಹಣವನ್ನು ಭಾರತಕ್ಕೆ ತಂದೇ ಸಿದ್ಧ ಎಂದು ಘೋಷಿಸಿ ಬಿಟ್ಟಿದ್ದ ಮೋದಿ  ಅಧಿಕಾರಕ್ಕೆ ಬಂದ ತಕ್ಷಣವೇ ಈ ಕುರಿತು ಕಾರ್ಯಯೋಜನೆ ತಯಾರಿಸಿದರಾದರೂ, ಬಳಿಕ ಕಪ್ಪು ಹಣದ ವಿಚಾರ ಸಧನದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತಷ್ಟೇ ಹೊರತು ಕಪ್ಪು ಹಣ ವಾಪಸಾಗಲಿಲ್ಲ. ಅಂತಾರಾಷ್ಟ್ರೀಯ ವ್ಯವಹಾರವಾದ ಕಾರಣ ಕಪ್ಪು ಹಣ ವಾಪಾಸು ತರುವುದು ಸುಲಭದ ಮಾತಲ್ಲ. ಇದು ವಿಪಕ್ಷಗಳಿಗೂ ಗೊತ್ತಿರದ ಸಂಗತಿಯೇನಲ್ಲ. ಆದರೂ ದರಿದ್ರ ರಾಜಕಾರಣದಿಂದಾಗಿ ವಿಪಕ್ಷಗಳು ಅವ್ಯಾಹತವಾಗಿ ಅಪಪ್ರಚಾರ ಮಾಡಿದವು. ಇದಕ್ಕೆ ಸ್ಪಷ್ಟ ತಿರುಗೇಟು ನೀಡಲು ಸರ್ಕಾರ ವಿಫಲವಾಗಿದೆ. ಹೇಳಿದ ಕೆಲಸವನ್ನು ಮಾಡಿ ನಂತರವೇ ಉತ್ತರ ಕೊಡುತ್ತೇವೆ ಎಂಬ ಧೋರಣೆಯೂ ಇರಬಹುದು.

ಹಾಗೆಂದರೆ ಮೋದಿ ಸರಕಾರವನ್ನು ತೆಗಳುವುದಕ್ಕಾಗಿಯೇ ಈ ಲೇಖನ ಮೀಸಲಿಡಲಾಗಿದೆಯೆಂದರೆ ಖಂಡಿತಾ ತಪ್ಪು. ಮೋದಿ ಸರಕಾರ ಒಳ್ಳೆ ಕೆಲಸ ಮಾಡುತ್ತಿಲ್ಲ ಎಂದು ನನ್ನ ಅಭಿಪ್ರಾಯ ಅಲ್ಲವೇ ಅಲ್ಲ. ತಮ್ಮ ವಿಶಿಷ್ಟವಾದ ವಿದೇಶಾಂಗ ನೀತಿಗಳಿಂದ ಭಾರತವನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ತಾತ್ಸಾರದಿಂದ ನೋಡುತ್ತಿದ್ದ ಕೆಲ ದೇಶಗಳು ನಮ್ಮನ್ನು ಗಂಭೀರವಾಗಿ ಪರಿಗಣಿಸಲು ಆರಂಭ ಮಾಡಿದ್ದರ ಶ್ರೇಯಸ್ಸು ಮೋದಿಗೆ ಸಲ್ಲಲೇಬೇಕು. ಅಮೆರಿಕಾ, ಯುರೋಪ್, ಸೇಶಲ್ಸ್, ಫಿಜಿ, ಮಾರಿಷಸ್, ಕೆನಡಾ, ಜರ್ಮನಿ, ಬ್ರೆಜಿಲ್, ಜಪಾನ್, ಆಸ್ಟ್ರೇಲಿಯಾ ರಾಷ್ಟ್ರಗಳಲ್ಲಿ ದಿಗ್ವಿಜಯ ಯಾತ್ರೆ ಮಾಡಿ ಬಂದ ಮೋದಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಪ್ರಾಶಸ್ತ್ಯವನ್ನು ತಂದುಕೊಟ್ಟರು. ಶ್ರೀಲಂಕಾ,ಮಾಯನ್ಮಾರ್, ಭೂತಾನ್, ನೇಪಾಳದಂತಹ ನೆರೆ ರಾಷ್ಟ್ರಗಳ ಜೊತೆ ಸಂಬಂಧ ವೃದ್ಧಿ ಜೊತೆ ಸಹಾಯದ ಹಸ್ತ ಚಾಚಲಾಗಿದೆ. ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಮೋದಿ ೩೦೦ ಕೋಟಿಗೂ ಅಧಿಕ ಹಣವನ್ನು ವಿದೇಶ ಪ್ರವಾಸಕ್ಕಾಗಿ ವಿನಿಯೋಗಿಸಿದ್ದಾರೆ. ಆದರೆ ಇದರ ಹತ್ತರಷ್ಟು ಬಂಡವಾಳ ಸರಕಾರಿ ಹಾಗೂ ಖಾಸಗಿ ವಲಯದಲ್ಲಿ ಭಾರತಕ್ಕೆ ತರುವುದು ಮೋದಿಯವರ ಲೆಕ್ಕಾಚಾರ. ಜಾಗತಿಕ ಮಟ್ಟದಲ್ಲಿ ಭಾರತದ ಹಿಡಿತವನ್ನು ಹೆಚ್ಚಿಸುವ ಕನಸು ಮೋದಿಯವರದ್ದು. ಪ್ರವಾಸೋದ್ಯಮ, ಭದ್ರತೆ, ಭಯೋತ್ಪಾದನೆ, ವಿದ್ಯುತ್, ಆರ್ಥಿಕ ಸ್ವಾವಲಂಬನೆ ಮುಂತಾದ ವಿಷಯಗಳಲ್ಲಿ ಬೇರೆ ದೇಶಗಳ ಸಹಕಾರವಿಲ್ಲದೇ ಮುಂದುವರೆಯುವುದು ಬಹಳ ಕಷ್ಟ. ಇದನ್ನರಿತೇ ಮೋದಿ ವಿಶ್ವದ ಎಲ್ಲಾ ರಾಷ್ಟಗಳ ಜೊತೆಯೂ ಉತ್ತಮ ಭಾಂದವ್ಯವನ್ನು ಹೊಂದಲು ಎಲ್ಲಾ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಬೇರೆ ದೇಶಗಳ ಹೂಡಿಕೆ ಪ್ರಮಾಣ ಹೆಚ್ಚಾಗುವುದು ಕಟ್ಟಿಟ್ಟ ಬುತ್ತಿ. ಹೀಗಾದಲ್ಲಿ ತಂತ್ರಜ್ನಾನ ಹಾಗೂ ಐಟಿ ಕ್ಷೇತ್ರದಲ್ಲಿ ಭಾರತ ಮುಂಚೂಣಿಗೆ ಬರುವುದು ನಿಶ್ಚಿತ. ಬಂಡವಾಳ ಹರಿದು ಬಂದು ಭಾರತದಲ್ಲಿ ಉದ್ಯೋಗಾವಕಾಶಗಳು ಹೆಚ್ಚಲು ಮೋದಿಯವರ ವಿದೇಶಿ ಪ್ರವಾಸ ಕಾರಣವಾಗುವುದು ಖಡಾಖಂಡಿತ.

ಎಲ್ಲಾ ಸರಕಾರಿ ಕಛೇರಿಗಳು ಡಿಜಿಟಲ್ ಮಯ ವಾಗುವ ಯೋಜನೆ ಡಿಜಿಟಲ್ ಇಂಡಿಯ, ಸ್ವಚ್ಛ ಭಾರತ ಅಭಿಯಾನ, ಗಂಗಾ ಶುದ್ಧೀಕರಣ, ವಸ್ತುಗಳನ್ನು ಭಾರತದಲ್ಲೇ ತಯಾರಿಸುವ ಯೋಜನೆ ಮೇಕ್ ಇನ್ ಇಂಡಿಯಾ, ಸಂಸದರ ಆದರ್ಶ ಗ್ರಾಮ ಯೋಜನೆ, ಇಂಧನ ಉಳಿತಾಯಕ್ಕಾಗಿ ಬೀದಿದೀಪಗಳಲ್ಲಿ ಎಲ್ಈಡಿ ಬಲ್ಬ್ ಬಳಕೆ ಹೀಗೆ ಹಲವು ಒಳ್ಳೆಯ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಸುಕನ್ಯಾ ಸಮೃದ್ಧಿ ಯೋಜನೆ, ನಾಗರಿಕರಿಗೆ ಕಡಿಮೆ ಪ್ರೀಮಿಯಮ್ ನಲ್ಲಿ ವಿಮಾ ಸೌಲಭ್ಯ ಒದಗಿಸಿಕೊಡುವ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಇದೆಲ್ಲವೂ ಮೋದಿ ಸರಕಾರದ ಜನಪ್ರಿಯ ಯೋಜನೆಗಳು. ಕೈಗಾರಿಕಾ ಉತ್ಪಾದನೆ, ಆಮದು ಮತ್ತು ರಫ್ತು, ವಿದ್ಯುತ್ ಮತ್ತು ಪರಮಾಣು ವಿದ್ಯುತ್ ಉತ್ಪಾದನೆಯಲ್ಲಿ ಮೋದಿ ಸರಕಾರದ ಸಾಧನೆ ಗಮನಾರ್ಹವಾಗಿದೆ. ಬಹುಪಾಲು ಜನರ ಪಾಲಿನ ಉದ್ಯೋಗವಾದ ಕೃಷಿ ಕ್ಷೇತ್ರದಲ್ಲಿನ ಬೆಳವಣಿಗೆಯೂ ಹಿಂದಿನ ಯುಪಿಎ ಸರಕಾರದ ಕಾಲದಿಂದ ಬಹಳ ಸೊಂಪಾಗಿದೆ.

ಸಾಧನೆಗಳು ಬಹಳ ಇರುವಾಗ ಒಂದಷ್ಟು ವಿಫಲತೆಗಳು ಇರುವುದು ಸಹಜ. ಕಾಲವಿನ್ನೂ ಮಿಂಚಿಲ್ಲ. ಭಾರತದ ಜನತೆ ತನ್ನ ಮೇಲಿಟ್ಟ ನಂಬಿಕೆಯನ್ನು ಹುಸಿಮಾಡೋಲ್ಲ ಮೋದಿ ಎನ್ನುವುದು ಬಹುತೇಕರ ಅಭಿಪ್ರಾಯ. ಇನ್ನೂ ನಾಲ್ಕು ವರ್ಷಗಳು ಮೋದಿ ಸರಕಾರದ ಬಳಿಯಿದೆ. ಕಪ್ಪುಹಣ, ಗೋಹತ್ಯಾ ನಿಷೇಧಕ್ಕೆ ಸ್ವಲ್ಪ ಸಮಯ ಬೇಕಾಗಿರುವುದು ಖಂಡಿತ. ಅಭಿವೃದ್ಧಿ ವೇಗ ಇದೇ ತರಹ ಮುಂದುವರಿದು ಕೊಟ್ಟ ಕೆಲವೊಂದು ವಾಗ್ದಾನಗಳನ್ನೂ ಪೂರೈಸಿದರೆ ೨೦೧೯ರಲ್ಲೂ ಮೋದಿ ಸರ್ಕಾರ ಬರುವುದರಲ್ಲಿ ಸಂಶಯವೇ ಇಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!