ಪ್ರಚಲಿತ

ನಮ್ಮತನವನ್ನು ಮಾರಿಕೊಂಡು ಫೋರ್ಡ್ ನಿಂದ ಹಣ ಪಡೆಯಬೇಕೆ?

ford

ಗ್ರೀನ್ ಪೀಸ್ ಸಂಸ್ಥೆಯ ಭಾರತೀಯ ನೋಂದಣಿ ಭಾರತ ಗೃಹ ಸಚಿವಾಲಯದಿಂದ ಅಮಾನತು, ಫೋರ್ಡ್ ಫ಼ೌಂಡೇಶನ್ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡುವಂತೆ ಆರ್ ಬಿ ಐ ಗೆ ತಾಕೀತು.  ವಾರದ ಹಿಂದೆ ಚರ್ಚೆಗೆ ಗ್ರಾಸವಾದ ವಿಷಯವಿದು. ಫೋರ್ಡ್ ಫ಼ೌಂಡೇಶನ್ ಮೇಲೆ ಇರುವ ಆರೋಪ ಇಂದು ನಿನ್ನೆಯದಲ್ಲ, ಈ ಕುರಿತು ನಡೆದ ಚರ್ಚೆಗಳು ಲೆಕ್ಕಕ್ಕೆ ಸಿಗದು. ಆದರೆ ಈಗ ಫೋರ್ಡ್ ಫ಼ೌಂಡೇಶನ್ ನ ಎಲ್ಲಾ ಆಟಗಳಿಗೂ ಒಂದು ಕೊನೆ ಹಾಡುವ ಸುಂಸಂದರ್ಭ ಸೃಷ್ಟಿ ಆಗಲಿದೆ ಎನಿಸುತ್ತಿದೆ. ಆದ್ದರಿಂದ ಫೋರ್ಡ್ ನಿಂದ ಹಣ ಪಡೆಯುತ್ತಿರುವವರೆಲ್ಲಾ ಬೊಬ್ಬಿಡಲು ಶುರು ಹಚ್ಚಿಕೊಂಡಿದ್ದಾರೆ.

ಫೋರ್ಡ್ ಫೌಂಡೇಶನ್ ಸ್ಥಾಪನೆಯಾಗಿದ್ದು ಅಮೆರಿಕದಲ್ಲಿ. ಅಮೆರಿಕದ ಮೋಟರ್ ಉದ್ಯಮದ ಜನಕ ಹೆನ್ರಿ ಫೋರ್ಡ್ ಅಪಾರ ಸಂಪತ್ತು ಗಳಿಸಿದರು. ಆ ಸಂಪತ್ತಿನ ಫೌಂಡೇಶನ್ ಇದು. 1950ರ ವರೆಗೆ ಫೋರ್ಡ್ ಫೌಂಡೇಶನ್ನಿನ ಸಂಪತ್ತು ಮೂರು ದಶಕೋಟಿ ಡಾಲರ್ ಇತ್ತು.

ಭಾರತಕ್ಕೆ ಹೇಗೆ ಬಂತು ಫೋರ್ಡ್??
ನೆಹರು ಅವರ ಆಹ್ವಾನದಂತೆ 1952 ರಲ್ಲಿ ಫೋರ್ಡ್ ಫೌಂಡೇಶನ್ ದಿಲ್ಲಿಯಲ್ಲಿ ತನ್ನ ಕಚೇರಿಯನ್ನು ತೆರೆಯಿತು.  ಆಗ ಭಾರತ, ಚೀನಾ ಕಮ್ಯುನಿಸ್ಟ್ ಆಗಿದ್ದುದೇ ಅಮೆರಿಕದ ಚಿಂತೆಗೆ ಕಾರಣವಾಗಿತ್ತು. ಭಾರತದಲ್ಲಿ ಕಮ್ಯುನಿಸ್ಟರು ಅಧಿಕಾರ ಕಬಳಿಸುವರೆಂದು ಅಮೆರಿಕಕ್ಕೆ ಭಯವಿತ್ತು. ಭಾರತದಲ್ಲಿ ಪ್ರಬಲ ಕೇಂದ್ರಾಡಳಿತ ಬೇಕು ಮತ್ತು ಕಮ್ಯುನಿಸ್ಟರನ್ನು ಅಧಿಕಾರದಿಂದ ದೂರವಿಡಬೇಕು. ಅದೇ ಸಮಯದಲ್ಲಿ ಭಾರತದ ರೈತರಲ್ಲಿ ಅಸಂತೋಷ ಮನೆ ಮಾಡಿತ್ತು. ಜಮೀನು ಕಾಯ್ದೆಯಲ್ಲಿ ಸುಧಾರಣೆಯಾಗಬೇಕಿತ್ತು. ಜನರನ್ನು ತೃಪ್ತಿ ಪಡಿಸುವ ಬಗೆ, ಇದಕ್ಕಾಗಿ ಯಾವ ಸುಧಾರಣೆಗಳನ್ನು ಮಾಡಬೇಕು, ಎಂಬ ಸಲಹೆಗಳನ್ನು ನೀಡುವ ಕಾರ್ಯವನ್ನು ಸಿಐಎಯು ಫೋರ್ಡ್ ಫೌಂಡೇಶನ್ನಿಗೆ ವಹಿಸಿತು. 1971ರ ವರೆಗೆ ಫೋರ್ಡ್ ಫೌಂಡೇಶನ್ ಈ ಕಾರ್ಯಕ್ಕೆ 104 ದಶಲಕ್ಷ ಡಾಲರ್ ಖರ್ಚು ಮಾಡಿತು. ಫೋರ್ಡ್ ಫೌಂಡೇಶನ್ ಭಾರತದ ಆಹಾರಧಾನ್ಯಗಳ ಸಮಸ್ಯೆ ಮತ್ತು ಅದನ್ನು ನಿವಾರಿಸುವ ವಿಧಾನ, ಅದಕ್ಕಾಗಿ ಮಾಡಬೇಕಾದ ಪರಿವರ್ತನೆಯನ್ನು ಸೂಚಿಸುವ ದೊಡ್ಡ ವರದಿಯನ್ನು ತಯಾರಿಸಿತು.  1972ರ ನಂತರ ಫೋರ್ಡ್ ಫೌಂಡೇಶನ್ ಹಣ ಹಂಚಿಕೆಯ ಧೋರಣೆಯನ್ನು ಬದಲಾಯಿಸಿತು. ಅವರು ‘ಶಾಂತಿ ಮತ್ತು ಸಾಮಾಜಿಕ ನ್ಯಾಯ’ ಹಾಗೂ ‘ಶಿಕ್ಷಣ ಮಾಧ್ಯಮಗಳು, ಕಲೆ ಮತ್ತು ಸಂಸ್ಕೃತಿ’ ಎಂಬ ವಿಷಯವನ್ನು ಆಯ್ಕೆಮಾಡಿ ಅದರಲ್ಲಿ ಹಣ ತೊಡಗಿಸಲು ನಿರ್ಧರಿಸಿದರು. ಈ ಕಾರ್ಯಗಳನ್ನು ಎನ್ ಜಿ ಒಗಳ ಮೂಲಕ ಮಾಡಿಸುವ ಧೋರಣೆಯನ್ನು ಅವರು ನಿಶ್ಚಯಿಸಿದರು. ಅದೇ ಸಮಯದಲ್ಲಿ ಭವಿಷ್ಯ ರೂಪಿಸಲು ಸಿವಿಲ್ ಸೊಸೈಟಿ ಮತ್ತು ಜನರು ಅದರಲ್ಲಿ ಪಾಲ್ಗೊಳ್ಳುವಂತೆಯೂ ಒತ್ತು ನೀಡಲು ನಿರ್ಧರಿಸಲಾಯಿತು. ಸಿವಿಲ್ ಸೊಸೈಟಿ ಮತ್ತು ಅವುಗಳ ಮೂಲಕ ನಡೆಯುವ ವಿವಿಧ ವಿಷಯಗಳ ರಚನೆಯನ್ನು 1972 ರಿಂದಲೇ ಫೋರ್ಡ್ ಫೌಂಡೇಶನ್ ಮಾಡಿದೆ. ಅಲ್ಲದೆ ಅದರ ಫಲಗಳು 2000ದಲ್ಲಿ ಕಾಣಿಸತೊಡಗಿದವು. ಭಾರತದಲ್ಲಿ ತನ್ನ ಕಾರ್ಯಕ್ಕೆ 50 ವರ್ಷವಾಯಿತೆಂದು, ಫೋರ್ಡ್ ಫೌಂಡೇಶನ್ ಪತ್ರಿಕಾಗೋಷ್ಠಿ ನಡೆಸಿ, ತಾನು ಭಾರತದಲ್ಲಿ ವಿವಿಧ ಎನ್ ಜಿ ಒಗಳ ಮೂಲಕ 220 ಕೋಟಿ ಖರ್ಚುಮಾಡಿದೆಯೆಂದು ಘೋಷಿಸಿತು.

ಮುಂದೆ ಜಾಗತೀಕರಣದಿಂದ ಆಗುತ್ತಿರುವ ಆರ್ಥಿಕ ದುಷ್ಪರಿಣಾಮಗಳಿಂದ ಹೊರಬೀಳಲು ಕೆಲಸ ಮಾಡುತ್ತಿರುವ ಎನ್ಜಿಒಗಳ ಮೂಲಕ ಈ ಹಣವನ್ನು ಖರ್ಚುಮಾಡಲು ನಿಶ್ಚಯಿಸಿತು. ಈ ಕಾರ್ಯ ಮಾಡುವಾಗ ಈ ಸಂಸ್ಥೆಗಳು ಸರ್ಕಾರಿ ಧೋರಣೆಗಳ ವಿರುದ್ಧ ಕೆಲಸ ಮಾಡಬೇಕಾಗುತ್ತದೆ. ಫೋರ್ಡ್ ಫೌಂಡೇಶನ್ ಇದನ್ನು ಊಹಿಸಿತ್ತು.
ಇಲ್ಲಿಂದ ಆರಂಭ ನೋಡಿ ಹಲವು ಪ್ರಹಸನಗಳು…

ಶುರು ಆಯಿತು ಜನ ಸಾಮಾನ್ಯ(?)ರಿಗೆ ಸಂಸ್ಥೆಗಳಿಗೆ ಧನ ಸಹಾಯ…
ಫೋರ್ಡ್ ಫೌಂಡೇಶನ್ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಶೋಧನೆ ಮಾಡಿ ಅವರಿಗೆ ಹಣ ಹಂಚುವ ಕಾರ್ಯ ಆರಂಭಿಸಿತು. ಫೋರ್ಡ್ ಫೌಂಡೇಶನ್ ಅರವಿಂದ ಕೇಜ್ರಿವಾಲ್ ಮತ್ತು ಅವರು ಸ್ಥಾಪಿಸಿರುವ ವಿವಿಧ ಸಂಸ್ಥೆಗಳಿಗೆ ಇದುವರೆಗೆ ಕೋಟ್ಯಂತರ ರೂಪಾಯಿ ಪೂರೈಸಿದೆ. ಅರವಿಂದ ಕೇಜ್ರಿವಾಲ್ ಮತ್ತು ಮನೋಜ್ ಸಿಸೋದಿಯಾ ಅವರು ‘ಕಬೀರ್’ಎಂಬ ಒಂದು ಎನ್ಜಿಒ ಆರಂಭಿಸಿದರು. ಈ ಎನ್ಜಿಒಗೆ ಒಂದು ಲಕ್ಷ 72 ಸಾವಿರ ಡಾಲರ್ ನೀಡಲಾಯಿತು. ಅಲ್ಲದೆ 2008ರಲ್ಲಿ 1 ಲಕ್ಷ 97ಸಾವಿರ ಡಾಲರ್ ನೀಡಲಾಯಿತು.
ಫೋರ್ಡ್ ಫೌಂಡೇಶನ್ ವತಿಯಿಂದ ತನಗೆಷ್ಟು ಹಣ ಸಿಕ್ಕಿದೆಯೆಂದು ಕಬೀರ್ ಸಂಸ್ಥೆಯು ನೀಡಿದ ಉತ್ತರ ಹೀಗಿದೆ: ಅವರಿಗೆ ರೂ.86,61,742 ದೊರಕಿದೆ. ದೂತವಾಸದಿಂದ ರೂ.19,71,138 ದೊರಕಿದೆ. ಕೇಜ್ರಿವಾಲ್ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಇಳಿದಿದ್ದಾರೆ. ಅವರ ಮುಖ್ಯ ವಿಷಯವಾದರೂ ಇದೇ.  ಪ್ರಶ್ನೆಯಿಷ್ಟೆ: ಸಿಐಎಯು ನಡೆಸುತ್ತಿರುವ ಫೋರ್ಡ್ ಫೌಂಡೇಶನ್ನಿನ ಹಣ ಪಡೆದು ಭ್ರಷ್ಟಾಚಾರ ವಿರೋಧಿಹೋರಾಟ ನಡೆಸುವುದಾದರೂ ಹೇಗೆ? ಕೇಜ್ರಿವಾಲ ರಿಗೆ ವಿದೇಶಗಳಿಂದ ಧಾರಾಳ ಹಣ ದೊರಕಿದೆ. ಸಿಗುತ್ತಿರುವುದು ಭಾರತ ಸರ್ಕಾರಕ್ಕೆ ಗೊತ್ತಿತ್ತು. ಕೇಜ್ರಿವಾಲರ ಹಣದ ಮೂಲಗಳನ್ನು ತಪಾಸಣೆ ಮಾಡಿ ನೋಡಬೇಕೆಂದು ದಿಲ್ಲಿ ಉಚ್ಚ ನ್ಯಾಯಾಲಯವು ಸರ್ಕಾರಕ್ಕೆ ಸೂಚಿಸಿದೆ. ಅಂದು, ಕೇಂದ್ರ ಗೃಹಮಂತ್ರಿಯಾಗಿದ್ದ ಸುಶೀಲಕುಮಾರ ಶಿಂದೆಯವರು 11 ನವೆಂಬರ್ 2013ರಂದು ಹೇಳಿದರು: ‘‘ನಾವು ಆಮ್ ಆದ್ಮೀ ಪಕ್ಷಕ್ಕೆ ವಿದೇಶಗಳಿಂದ ಬರುವ ಹಣದ ಶೋಧನೆ ಮಾಡುವೆವು. ಯಾವ ದೇಶದಿಂದ ಎಷ್ಟು ಹಣ ಬಂದಿದೆಯೆಂಬ ಮಾಹಿತಿ ಪಡೆಯುವೆವು. ಸಂಬಂಧಿತ ಖಾತೆಗಳಿಗೆ ಈ ರೀತಿಯ ಸೂಚನೆಗಳನ್ನು ನೀಡಲಾಗಿದೆ.’’ ಕೇಂದ್ರ ಸರ್ಕಾರವು ಪ್ರಾಮಾಣಿಕವಾಗಿ ಇವೆಲ್ಲ ವಿಷಯಗಳ ಬಗ್ಗೆ ತನಿಖೆ ಮಾಡಿ ಅರವಿಂದ ಕೇಜ್ರಿವಾಲರ ವಿದೇಶಿ ಹಣದ ಮೂಲಗಳನ್ನು ಶೋಧಿಸಿ ತೆಗೆಯುವುದೇ? ಎಂಬೆಲ್ಲಾ ಪ್ರಶ್ನೆಗಳು ಅಂದು ಮನದಲ್ಲಿ ಮೂಡಿತ್ತು, ಆದರೆ ಇಂದು ಮೋದಿ ಇವೆಲ್ಲದಕ್ಕೂ ಉತ್ತರ ನೀಡಿದ್ದಾರೆ ಎಂಬುದೇ ಸಂತಸದ ವಿಷಯ.

ಆಂತರಿಕ ಕಲಹಗಳಿಗೆ ಮುನ್ನುಡಿ…
ಅಮೆರಿಕದ ಗುಪ್ತಚರ ಸಂಸ್ಥೆಯಾದ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿ (ಸಿಐಎ)ಯ ಮುಖವಾಡವಾಗಿ ಫೋರ್ಡ್ ಫೌಂಡೇಷನ್ ಅನ್ನು ಸ್ಥಾಪಿಸಲಾಗಿದೆ. ಇವರ ಮುಖ್ಯ ಚಟುವಟಿಕೆಯೆಂದರೆ ಒಂದು ದೇಶದ ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳಿಗೆ ಹಣ ನೀಡುವುದು. ಈ ಎಲ್ಲಾ ಅನುಮಾನಕ್ಕೆ ಪುಷ್ಟಿ ನೀಡುವ ಇನ್ನೊಂದಿಷ್ಟು ವಿಚಾರ ಇಲ್ಲಿದೆ.
1. ಆಗಲೇ ಹೇಳಿದಂತೆ , ಅರವಿಂದ್ ಕೇಜ್ರೀವಾಲ್ ಮತ್ತು ಮನೀಶ್ ಸಿಸೋಡಿಯಾ ಅವರ ಎನ್‌ಜಿಒ (ಕಬೀರ್)
2. ಯೋಗೇಂದ್ರ ಯಾದವ್ ಅವರಿಗೆ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ ಐಸಿಎಸ್‌ಎಸ್‌ಆರ್‌ನಿಂದ ಹಣ ಬಂದಿತ್ತು. ಆದರೆ ಐಸಿಎಸ್‌ಎಸ್‌ಆರ್‌ಗೆ ಹಣ ಬಂದಿದ್ದು ಫೋರ್ಡ್ ಫೌಂಡೇಷನ್‌ನಿಂದ.
3. ತೀಸ್ತಾ ಸೇತಲ್ವಾಡ್ ಮತ್ತು ಜಾವೇದ್ ಆನಂದ್‌ರ ‘ಸಬ್ರಂಗ್ ಕಮ್ಯುನಿಕೇಷನ್ಸ್’ (ಇವರಿಬ್ಬರೂ ನರೇಂದ್ರ ಮೋದಿಯವರ ವಿರುದ್ಧ ಹೋರಾಡುತ್ತಲೇ ಬಂದವರು)
4.  ನೋಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರ, “ಐಡಿಯಾಸ್ ಆಫ್ ಜಸ್ಟಿಸ್‌” ಪುಸ್ತಕಕ್ಕೆ.
ಇವರಲ್ಲಿ ಹಲವರು ಆಮ್ ಆದ್ಮಿ ಪಕ್ಷದ ಬೆಂಬಲಿಗರು. ನಿಜವಾಗಿಯೂ ಫೋರ್ಡ್ ಫೌಂಡೇಶನ್ ಉದ್ದೇಶ ಜನರ ಉದ್ಧಾರ ಎಂದಾದರೆ ಭಾರತದ ರಾಜಕಾರಣದಲ್ಲಿ ಏಕಿಷ್ಟು ಆಸಕ್ತಿ ವಹಿಸುತ್ತಿದೆ ಎನ್ನುವ ಪ್ರಮುಖ ಪ್ರಶ್ನೆಯೊಂದು ಉದ್ಭವವಾಗುತ್ತದೆ. ಇದರ ನಿಜವಾದ ಉದ್ದೇಶ ಬಿಟ್ಟು ರಾಜಕಾರಣ, ಆಂತರಿಕ ವಿಷಯಗಳಲ್ಲಿ ಮೂಗು ತೂರಿಸುತ್ತಿರುವುದೇಕೆ??

ಇದರ ಜೊತೆಗೇ, ಕಳೆದ ವರ್ಷ ‘ಎಕನಾಮಿಕ್ ಟೈಮ್ಸ್‌’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು  ಸಿಐಎಗೆ ಭಾರತದ ಮೇಲೆ ಹೆಚ್ಚುತ್ತಿರುವ ಆಸಕ್ತಿಯನ್ನು ತಿಳಿಸಿತ್ತು. ಭಾರತ ಸರ್ಕಾರ ‘ಆಧಾರ್‌’ನ ಆರಂಭಿಕ ಕಾರ್ಯಚಟುವಟಿಕೆಗಳನ್ನು MongoDB ಎನ್ನುವ ದಾಖಲೆ ಆಧಾರಿತ ಡಾಟಾಬೇಸ್ ವ್ಯವಸ್ಥೆಗೆ ಕೊಡಲು ನಿರ್ಧರಿಸಿದೆ ಎನ್ನುವ ವರದಿಯದು. ಆದರೆ ಈ MongoDB ಸ್ಥಾಪನೆಯಾಗಿದ್ದು ಮತ್ತೆ ಪುನಃ ಅದೇ ಅಮೆರಿಕದ ಸಿಐಎ ಸಂಸ್ಥೆಯ ನಿಧಿಯಿಂದ ಎನ್ನುವುದು ನೆನಪಿಸಿಕೊಳ್ಳಬೇಕಾದ ಅಂಶ. ( )

ಒಂದು ಕ್ಷಣ  ಯೋಚಿಸೋಣ, ನಮ್ಮ ದೇಶದಲ್ಲೇ ಇಷ್ಟರ ಮಟ್ಟಿಗೆ ರಾಷ್ಟ್ರ ವಿರೋಧಿ ಶಕ್ತಿಗಳಿವೆ. ನೆರೆ ಹೊರೆಯ ರಾಷ್ಟ್ರಗಳನ್ನು ಹೇಗೋ ನಿಭಾಯಿಸಬಹುದು, ಆದರೆ ನಮ್ಮೊಳಗಿರುವ ಅಪಾಯಗಳನ್ನು??? ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ರಾಜಿ ಏಕೆ ಬೇಕು?? ಹೌದು, ನಮ್ಮಲ್ಲಿ ಎಲ್ಲಾ ಸ್ಥರದ ಜನರು ಚಂದದ ಜೀವನ ಸಾಗಿಸಬೇಕು, ಪ್ರತಿಯೊಬ್ಬನೂ ಮೂಲಭೂತ ಸೌಕರ್ಯಗಳ ವಂಚಿತನಾಗದೇ ಸುಖೀ ಜೀವನ ನಡೆಸಬೇಕು, ಭ್ರಷ್ಟಾಚಾರ ಮುಕ್ತ ಭಾರತ ಬೇಕು. ಇವೆಲ್ಲದರ ಮುಖವಾಡ ಹೊತ್ತ ಸಿಐಎ ಏಜೆಂಟ್ ಎನ್ನಲಾಗುವ ದೇಶದ ಭದ್ರತೆಯ ಬುನಾದಿಯನ್ನೇ ಅಲುಗಾಡಿಸಲು ಹೊರಟಿರುವ ಫೋರ್ಡ್ ಫ಼ೌಂಡೇಶನ್ ನ ಧನ ಸಹಾಯ ನಮಗೇಕೆ ಬೇಕು? ನಮ್ಮತನವನ್ನು ಮಾರಿಕೊಂಡು ಫೋರ್ಡ್ ನಿಂದ ಹಣ ಪಡೆಯಬೇಕೆ?

ಭಾರತ ಸರ್ಕಾರ ಇಂತಹಾ ಫೌಂಡೇಶನ್ ಚಟುವಟಿಕೆಯನ್ನು ಗಮನಿಸುವಂತೆ ಆರ್ ಬಿ ಐ ಗೆ ಆರ್ಡರ್ ಮಾಡಿದ ಕೂಡಲೇ ಹಲವರ ಮನದಲ್ಲಿ ಆತಂಕ ಶುರುವಾಗಿದೆ, ಕಾದು ನೋಡೋಣ ಎಷ್ಟು ಜನರ ದೇಶ ಭಕ್ತಿ ಮುಖವಾಡ ಕಳಚಿ ಬೀಳಲಿದೆ ಎಂದು!

Facebook ಕಾಮೆಂಟ್ಸ್

ಲೇಖಕರ ಕುರಿತು

Sumana Mullunja

Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!