ಸೈನಾ ನೆಹ್ವಾಲ್…. ಬಹುಶಃ ಕ್ರಿಕೆಟನ್ನು ಹೊರಗಿಟ್ಟು ನೋಡಿದಾಗ ಭಾರತೀಯ ಕ್ರೀಡಾರಂಗದಲ್ಲಿ ಬಹುವಾಗಿ ಕೇಳಿಬರುತ್ತಿರುವ ಹೆಸರಿದೊಂದೆ. ಕೆಲವು ವರ್ಷಗಳ ಹಿಂದೆ ಭಾರತೀಯ ಬ್ಯಾಡ್ಮಿಂಟನ್ ಲೋಕದಲ್ಲಿ ಜನಿಸಿದ ಸೈನಾ ಈಚೆಗಿನ ವರ್ಷಗಳಲ್ಲಿ ಗಳಿಸಿದ್ದು ಅಪಾರ. ವಿಶ್ವ ಕಪ್ ಸೆಮಿಫೈನಲ್ ನಲ್ಲಿ ಸೋತು ದೇಶವೇ ದುಃಖದಲ್ಲಿದ್ದಾಗ ನಂ.1 ಸ್ಥಾನಕ್ಕೇರಿ ಮರುದಿನವೇ ನಮ್ಮನ್ನೆಲ್ಲಾ ಖುಷಿಪಡಿಸಿದವಳು ಮುತ್ತಿನ ನಗರಿಯ ಮುದ್ದಿನ ಹುಡುಗಿ ಸೈನಾ ನೆಹ್ವಾಲ್.
ಟೆನಿಸ್ ಕ್ಷೇತ್ರದಲ್ಲಿ ಭಾರತ ಅದ್ಭುತ ಅನ್ನುವಷ್ಟಲ್ಲದಿದ್ದರೂ ಹೆಮ್ಮೆ ಪಡುವ ಸಾಧನೆಯಂತೂ ಮಾಡಿದೆ. ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಮತ್ತು ಸಾನಿಯಾ ಮಿರ್ಜಾ ಮುಂತಾದವರು ಭಾರತದ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ. ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಪ್ರಕಾಶ್ ಪಡುಕೋಣೆಯವರು ಭಾರತದ ‘ಆಲ್ ಟೈಮ್ ಫೇವರಿಟ್’ ಆಗಿದ್ದರೆ, ಪ್ರುಲ್ಲೇಲಾ ಗೋಪಿಚಂದ್ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಪಾರುಪಳ್ಳಿ ಕಶ್ಯಪ್ ಅಲ್ಲೊಂದು ಇಲ್ಲೊಂದು ಪ್ರಶಸ್ತಿ ಗೆಲ್ಲುವ ಮೂಲಕ ಬ್ಯಾಡ್ಮಿಂಟನ್ ಬಗ್ಗೆ ತಮಗಿದ್ದ ಒಲವನ್ನು ಸಾಕಾರಗೊಳಿಸಿದ್ದಾರೆ. ಆದರೆ ಮಹಿಳಾ ವಿಭಾಗದಲ್ಲಿ ಪ್ರಬುದ್ಧ ಆಟಗಾರ್ತಿಯ ಕೊರತೆಯಿತ್ತು. ಜ್ವಾಲಾಗುಟ್ಟ, ಅಶ್ವಿನಿ ಪೊನ್ನಪ್ಪ ಕೆಲವೊಂದು ಪ್ರಶಸ್ತಿಗಳನ್ನು ಗೆದ್ದಿದ್ದು ಬಿಟ್ಟರೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಇದ್ದಿದ್ದರಲ್ಲಿ ಸ್ವಲ್ಪ ಭರವನೆ ಮೂಡಿಸಿದ್ದು ಪಿವಿ ಸಿಂಧು. ಆದ್ರೆ ಒಂದರ ಮೇಲೊಂದು ಪ್ರಶಸ್ತಿಗಳನ್ನು ಜಯಿಸುವ ಮೂಲಕ ಮಹಿಳಾ ವಿಭಾಗದ ಕೊರತೆಯನ್ನು ನೀಗಿದ್ದು ಸೈನಾ ನೆಹವಾಲ್…
ಸೈನಾ ಜನಿಸಿದ್ದು ಮಾರ್ಚ್ 17, 1990 ರಲ್ಲಿ. ಜನಿಸಿದ್ದು ಹರ್ಯಾಣದಲ್ಲಾದರೂ ನೆಲೆಸಿದ್ದು ಹೈದರಾಬಾದಿನಲ್ಲಿ. ಹರ್ವೀರ್ ಸಿಂಗ್ ಮತ್ತು ಉಷಾ ಸಿಂಗ್ ದಂಪತಿಯ ಹೆಮ್ಮೆಯ ಪುತ್ರಿ ಈಗಾಗಲೇ ಸಾಧಿಸಿದ್ದು ಯಾವುದಕ್ಕೂ ಕಮ್ಮಿಯಿಲ್ಲ. ಒಂದೇ, ಎರಡೇ… ಒಲಿಂಪಿಕ್ ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ, ವರ್ಲ್ಡ್ ಜೂನಿಯರ್ ಚಾಂಪಿಯನ್ ಶಿಪ್ ಗೆದ್ದ ಮೊದಲ ಭಾರತೀಯ ಆಟಗಾರ್ತಿ, ಸೂಪರ್ ಸೀರೀಸ್ ಟೂರ್ನಮೆಂಟ್ ಗೆದ್ದ ಮೊದಲ ಆಟಗಾರ್ತಿ ಮತ್ತೀಗ ನಂ.1 ಸ್ಥಾನಕ್ಕೇರಿದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ. ಇಂತಹಾ ಹತ್ತು ಹಲವು ಮೊದಲುಗಳಿಗೆ ತನ್ನ ಹೆಸರು ಬರೆಸಿಕೊಂಡಿದ್ದು ಈಕೆಯ ಹೆಗ್ಗಳಿಕೆ.
ಕ್ರಿಕೆಟ್ ಪ್ರಿಯವಾದ ದೇಶದಲ್ಲಿ ಸೈನಾನಂತೆ ಸಾಧನೆ ಮಾಡುವುದು ಸುಲಭವಲ್ಲ. ನಮ್ಮ ಕೆಲ ರಾಷ್ಟ್ರೀಯ ಕಬಡ್ಡಿ, ಹಾಕಿ ಆಟಗಾರ್ತಿಯರ ಸ್ಥಿತಿ ಏನಾಗಿದೆ ಎಂದು ನಿಮಗೆ ಚೆನ್ನಾಗಿ ಗೊತ್ತಿದೆ. ಕ್ರಿಕೆಟ್ ಅಬ್ಬರದ ಅಲೆಯ ಮುಂದೆ ಎಷ್ಟೋ ಆಟಗಳು, ಆಟಗಾರರು ಕೊಚ್ಚಿ ಹೋಗಿದ್ದಾರೆ. ಅದೆಲ್ಲದರ ನಡುವೆ ಸೈನಾ, ಸಾನಿಯಾ ಅಂತವರು ಸ್ವಲ್ಪ ಸದ್ದು ಮಾಡಿದ್ದಾರೆ ಎಂದರೆ ಅದರ ಹಿಂದೆ ಮಹತ್ತರ ಪರಿಶ್ರಮವಿದೆ. “ಈಸಬೇಕು ಇದ್ದು ಜಯಿಸಬೇಕು” ಎನ್ನುವ ಹಠವಿದೆ. ಸೈನಾ ಸಾಧನೆಯ ಹಿಂದೆ ಸ್ವತಃ ಬ್ಯಾಡ್ಮಿಂಟನ್ ಚಾಂಪಿಯನ್ನರುಗಳಾದ ಆಕೆಯ ತಂದೆ ತಾಯಿಯರಿದ್ದರೂ ಆಕೆಯ ಹಾದಿಯೇನೂ ಹುಲ್ಲುಹಾಸಿನ ಹಾದಿಯಾಗಿರಲಿಲ್ಲ. ದಿನವೂ ಹೆಚ್ಚು ಕಮ್ಮಿ 25ಕಿಮೀ ಪ್ರಯಾಣಿಸಬೇಕಿತ್ತು. ಪ್ರಾಕ್ಟೀಸ್ ಮುಗಿಸಿ ಮನೆಗೆ ಬರುವಷ್ಟರಲ್ಲಿ ಸುಸ್ತಾಗಿಬಿಡುತ್ತಿದ್ದಳು. ಆದರೆ ಸಾಧನೆಯ ಬೆನ್ನೇರಿ ಹೊರಟವರಿಗೆ ಅದೆಲ್ಲ ಯಾವ ಲೆಕ್ಕ ಅಲ್ವಾ? ಕ್ರಿಕೆಟ್ ನಲ್ಲಿ ಆಟಗಾರರು ಪಾದಾರ್ಪಣಾ ಪಂದ್ಯದಲ್ಲೇ ಚಿರಪರಿಚಿತರಾಗುತ್ತಾರೆ. ಉಳಿದವುಗಳಲ್ಲಿ ಹಾಗಲ್ಲ, ಪಾದಾರ್ಪಣೆ ಮಾಡಿದ ಕೆಲವು ವರ್ಷಗಳ ನಂತರ ಒಂದು ಪ್ರತಿಷ್ಠಿತ ಪಂದ್ಯಾವಳಿ ಗೆದ್ದರೆ ಮಾತ್ರ ಪರಿಚಿತರಾಗುತ್ತಾರೆ. ಆದ್ದರಿಂದ ಅಲ್ಲಿ ತಾಳ್ಮೆಯೂ ಇದೆ. 2004 ರ ಯೂತ್ ಕಾಮನ್ ವೆಲ್ತ್ ಗೇಮ್ಸ್ ನಲ್ಲೇ ಬೆಳ್ಳಿ ಪದಕ ಪಡೆದಿದ್ದ ಸೈನಾಳ ನಿಜ ರೂಪ ನಮಗೆಲ್ಲಾ ಗೊತ್ತಾಗಿದ್ದು 2009 ರಲ್ಲಿ ಇಂಡೋನೇಶಿಯಾ ಸೂಪರ್ ಸೀರೀಸ್ ಗೆದ್ದಾಗ. ಇದರ ಮಧ್ಯೆ 2008ರ ಕಾಮನ್ ವೆಲ್ತ್ ಯೂತ್ ಗೇಮ್ಸ್ ನಲ್ಲಿ ಚಿನ್ನ ಬಾಚಿಕೊಂಡ ಸೈನಾ 2012ರ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದು ಎಲ್ಲರ ಹುಬ್ಬೇರುವಂತೆ ಮಾಡಿದಳು. ನೋಡ ನೋಡುತ್ತಲೇ ಅರ್ಜುನ ಪ್ರಶಸ್ತಿ, ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿಗಳನ್ನು ಬಾಚಿಕೊಂಡ ಸೈನಾ ತನ್ನ ಹಿರಿಮೆಗೆ ಮತ್ತಷ್ಟು ಗರಿ ಪಡೆದುಕೊಂಡಳು. ನಂಬಿ, ಇಪ್ಪತ್ತೈದೇ ವರ್ಷದ ಸೈನಾಳ ಆತ್ಮಕತೆಯೂ ಈಗಾಗಲೇ ಬಿಡುಗಡೆಯಾಗಿದೆ !
ಕಳೆದ 2012 ರ ಲಂಡನ್ ಒಲಿಂಪಿಕ್ಸ್ ಸೆಮೀಸ್ ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಳು. ಆವಾಗ ಆಕೆ ಆಡಿದ್ದು ತನಗಿಂತ ಅಗ್ರ ಶ್ರೇಯಾಂಕಿತ ನಂ.1 ಯಿಹಾನ್ ವಾಂಗ್ ವಿರುದ್ಧ, ಆ ಪಂದ್ಯ ನಮ್ಮಲ್ಲಿ ಎಷ್ಟು ಭಯ ಹುಟ್ಟಿಸಿತ್ತೆಂದರೆ, ‘ಯಾಕಾದರೂ ಈ ಚೀನಾದ ಆಟಗಾರ್ತಿ ಎದುರಾಳಿಯಾದಳೋ, ಸೈನಾ ಸುಲಭವಾಗಿ ಪದಕ ಗೆಲ್ಲಬಾರದಿತ್ತಾ’ ಎಂದು ನಾವುಗಳು ಪರಿತಪಿಸಿಕೊಂಡಿದ್ದೆವು. ಎದುರಾಳಿ ನಂ.1 ಆಟಗಾರ್ತಿ ಎಂಬ ಕಾರಣಕ್ಕೆ ನಾವೆಲ್ಲ ಭಯಭೀತರಾಗಿದ್ದು. ಅದಕ್ಕೆ ತಕ್ಕಂತೆ ಸೈನಾ ಸೋತು ನಿರಾಸೆ ಮೂಡಿಸಿದ್ದಳು. ಆದರೀಗ ನೋಡಿ, ಸದ್ಯ ಸೈನಾ ನೆಹವಾಲ್ ನಂ.1 ಸ್ಥಾನ ಕಳೆದುಕೊಂಡಿದ್ದರೂ ಯಾವ ಲೆಕ್ಕದಲ್ಲೂ ನಂ.1 ಗೆ ಕಮ್ಮಿಯಿಲ್ಲ. ನಾವೀಗ ಭಯ ಪಡಬೇಕಿಲ್ಲ, ಭಯ ಪಡಬೇಕಾದುದು ಉಳಿದವರು. ಸೈನಾ ಸಾಧನೆಯೆಂದರೆ ಇದೆ!
ಸೈನಾ ಸಾಧನೆ ಯಾವ ಪರಿ ಜನರಿಗೆ ಸ್ಪೂರ್ತಿ ನೀಡಿದೆ ಎಂದರೆ, ‘ಹೆಣ್ಣು ಮಗುವನ್ನು ಉಳಿಸಿ, ಮುಂದೆ ಸೈನಾಳಂತೆ ಸಾಧನೆ ಮಾಡಬಹುದು’ ಎಂಬ ಸ್ಲೋಗನ್ ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಆ ಮೂಲಕ ಮಹಿಳಾ ಸಬಲಿಕರಣದ ಅಭಿಯಾನವೇ ಸದ್ದಿಲ್ಲದೇ ಶುರುವಾಗಿದೆ. ಆ ಮೂಲಕ ಮಹಿಳೆಯರು ಇನ್ನೂ ಸ್ವಲ್ಪ ಹೆಚ್ಚಿನ ಆತ್ಮಾಭಿಮಾನ ಹೊಂದುವಂತಾಗಿದೆ. ಉಳಿದವರಲ್ಲೂ ಇಂತಹ ಸಾಧನೆ ಮಾಡಬೇಕೆಂಬ ಛಲ ಉಂಟಾಗಿದೆ. ಇತ್ತೀಚೆಗೆ ಬಿಡುಗಡೆಯಾದ ದೀಪಿಕಾ ಪಡುಕೋಣೆ ಅಭಿನಯದ My Choice ವಿಡಿಯೋ ಪ್ರಚಂಡವಾಗಿ ಫ್ಲಾಪ್ ಆಯ್ತು. ಒಂದೆಡೆ ಜನರು ದೀಪಿಕಾಳನ್ನು ಹಿಗ್ಗಾಮುಗ್ಗ ಬೈಯ್ಯತೊಡಗಿದರೆ ಮತ್ತೊಂದೆಡೆ ‘ನಿಮ್ಮ ರೋಲ್ ಮಾಡೆಲ್ ಗಳನ್ನು ಆರಿಸುವಾಗ ಎಚ್ಚರದಿಂದಿರಿ’ ಎನ್ನುತ್ತಾ ಸೈನಾ ಕಡೆಗೆ ಮುಖ ನೆಟ್ಟಿದ್ದರು. ಕ್ರಿಕೆಟ್ಟೇ ಸರ್ವಸ್ವ, ಕ್ರಿಕೆಟಿಗರೇ ದೇವರೆಂದು ಆರಾಧಿಸುವವರ ರಾಷ್ಟ್ರದಲ್ಲಿ, ಸೈನಾ ನೆಹವಾಲ್ ಕ್ರಿಕೆಟಿಗರನ್ನು ಹೊರತುಪಡಿಸಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಆಟಗಾರ್ತಿ, ಬ್ಯಾಡ್ಮಿಂಟನ್ ಆಟವನ್ನು ಉತ್ತುಂಗಕ್ಕೇರಿಸುತ್ತಿರುವ ಸೈನಾರ ಆಟವನ್ನು ಸ್ವತಃ ಕ್ರಿಕೆಟ್ ದೇವರ ಖ್ಯಾತಿಯ ಸಚಿನ್ ತೆಂಡುಲ್ಕರ್ ಮೆಚ್ಚಿಕೊಂಡಿದ್ದಾರೆ, ಪ್ರಧಾನಿ ನರೇಂದ್ರ ಮೋದಿಯೂ ಮೆಚ್ಚಿಕೊಂಡಿದ್ದಾರೆ. ಬಿಡಿ, ಹಿಂದುಸ್ತಾನದ ಕೋಟ್ಯಾಂತರ ಜನರೇ ಫ್ಯಾನ್ ಆಗಿಬಿಟ್ಟಿದ್ದಾರೆ. ಆಕೆ ಯಾವುದೇ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾಳೆಂದರೆ ಅದು ನಮ್ಮಲ್ಲಿ ಸಂಚಲನವನ್ನುಂಟುಮಾಡುತ್ತದೆ. ಪದಕ ಗೆಲ್ಲದೇ ಹೋದರೂ ಅದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಸೈನಾ ಕೆಲವೊಮ್ಮೆ ಸೋತಿದ್ದಾಳೆ, ಯಾವತ್ತೂ ಸುಲಭವಾಗಿ ಸೋತಿಲ್ಲ. ವೀರೋಚಿತವಾಗಿಯೇ ಸೋತಿದ್ದಾಳೆ. ಅಷ್ಟೂ ಬಾರಿ ನಮ್ಮ ಮನ ಗೆದ್ದಿದ್ದಾಳೆ.
ಸೈನಾ ಗೆದ್ದಿದ್ದಾಳೆ.. ಛಲದಿಂದ,ಶ್ರದ್ಧೆಯಿಂದ,ಬೆವರು ಸುರಿಸಿ ಗೆದ್ದಿದ್ದಾಳೆಯೇ ಹೊರತು ಕ್ರಿಕೆಟ್ ಇಂದಾಗಿ ತನಗೆ ಬೆಂಬಲ ಸಿಗುತ್ತಿಲ್ಲ ಎಂದು ಆಕೆ ಯಾವತ್ತೂ ಧೃತಿಗೆಟ್ಟವಳಲ್ಲ. ಕ್ರಿಕೆಟನ್ನೇ ನೋಡುವವರನ್ನೂ ತನ್ನತ್ತ ನೋಡುವಂತೆ ಮಾಡಿದ್ದಾಳೆ ಸೈನಾ. ಮತ್ತೆ ಸೈನಾ ವರ್ಲ್ಡ್ ನೊ.1 ಆಗುವುದರಲ್ಲಿ ಅನುಮಾನವೇ ಇಲ್ಲ. ಆಕೆಯ ಭವಿಷ್ಯದ ಆಟಕ್ಕೆ ನಮ್ಮೆಲ್ಲರ ಹಾರೈಕೆಯಿರಲಿ. ಆಕೆಯ ಸಾಧನೆ ಇತರರಿಗೆ ಸ್ಪೂರ್ತಿಯಾಗಲಿ.