ಅಂಕಣ

ಬೌದ್ಧಿಕ ಮೀಸಲಾತಿ…?

ಮೀಸಲಾತಿ… ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರನ್ನು ಸಬಲರನ್ನಾಗಿಸುವ ಸಲುವಾಗಿ ಜನ್ಮತಳೆದ ವ್ಯವಸ್ಥೆಯೇ ಈ ಮೀಸಲಾತಿ. ಆಗಸ್ಟ್ 1932 ರಲ್ಲಿ ಬ್ರಿಟನ್  ಪ್ರಧಾನಿಯ ಒಂದು ಯೋಜನೆಯ ಫಲವಾಗಿ ಜನ್ಮ ತಳೆದ ಈ ವ್ಯವಸ್ಥೆಯು ಜಾತಿ, ಧರ್ಮಗಳ ಮೇಲೆ ಅವಲಂಬಿತವಾಗಿದ್ದ ಕಾರಣ ಇದನ್ನು ಬ್ರಿಟಿಷರ ಒಡೆದು ಆಳುವ ನೀತಿಯ ಮುಂದುವರಿದ ಭಾಗ ಎಂದೇ ವಿಶ್ಲೇಷಿಸಲಾಗುತ್ತದೆ.  ಆರಂಭದಲ್ಲಿ ಮಹಾತ್ಮಾ ಗಾಂಧೀಜಿಯವರು ಇದನ್ನು ವಿರೋಧಿಸಿದ್ದರೂ, ನಂತರ ಡಾ. ಬಿ. ಆರ್ ಅಂಬೇಡ್ಕರ್ ಅವರ ಜೊತೆಗೆ ನಡೆಸಿದ ಮಾತುಕತೆಯ ಪರಿಣಾಮವಾಗಿ ‘ಪೂನಾ ಪ್ಯಾಕ್ಟ್’ ಎನ್ನುವ ಒಪ್ಪಂದಕ್ಕೆ ಬಂದರು. ಇದಾದ ನಂತರ 1950 ರಲ್ಲಿ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಭಾರತದ ಸಂವಿಧಾನ ರಚನೆಯಾದಾಗ ಅದರಲ್ಲಿ ಮೀಸಲಾತಿಯನ್ನು ಸೇರಿಸಲಾಯಿತು. ಇದರ ಅವಧಿಯನ್ನು ಮುಂದಿನ 10 ವರ್ಷಗಳಿಗೆ ಅಂದರೆ 1960ರ ವರೆಗೆ ನಿಗದಿಪಡಿಸಲಾಯಿತು. ಮಗದೊಮ್ಮೆ ಈ ಅವಧಿಯನ್ನು 2010ರ ವರೆಗೆ ವಿಸ್ತರಿಸಲಾಯಿತು. ಹೀಗೆ ಸ್ವಾತಂತ್ರ್ಯಾ ಪೂರ್ವದಲ್ಲೇ ಭಾರತದಲ್ಲಿ ಮೀಸಲಾತಿಯೆಂಬ ಕಲ್ಪನೆ ಹುಟ್ಟಿಕೊಂಡು, ಸ್ವಾತಂತ್ರ್ಯಾ ನಂತರ ಹಲವು ಮಾರ್ಪಾಡುಗಳನ್ನು ಹೊಂದಿ ಇಂದಿನ ಪ್ರಸ್ತುತ ಪದ್ಧತಿ ಜಾರಿಯಲ್ಲಿದೆ. ಇದರ ಮೂಲ ಉದ್ದೇಶವು, ನಿಗದಿತ ಅವಧಿಯಲ್ಲಿ ಜನರನ್ನು ಸಮಾನತೆಯತ್ತ ಕೊಂಡೊಯ್ಯುವುದಾಗಿತ್ತು. ‘ಮೀಸಲಾತಿ’ ಇಂದು ದೇಶದಲ್ಲಿ ಅತೀ ಹೆಚ್ಚು ಚಾಲನೆಯಲ್ಲಿರುವ ಪದ ಎಂದರೆ ಅತಿಶಯೋಕ್ತಿಯಾಗಲಾರದು. ಆಟ, ಪಾಠ, ಊಟ, ಉದ್ಯೋಗ ಎಲ್ಲೆಂದರಲ್ಲೂ ಚಾಲ್ತಿಯಲ್ಲಿರುವ ವಿಷಯವಿದು. ಈ ವ್ಯವಸ್ಥೆಯನ್ನು ಸರಿಯಾದ ಕ್ರಮದಲ್ಲಿ ಜಾರಿಗೆ ತಂದರೆ ಇದೊಂದು ಅತ್ಯುತ್ತಮ ವ್ಯವಸ್ಥೆ ಅನ್ನುವುದರಲ್ಲಿ ಸಂಶಯವಿಲ್ಲ. ಆರ್ಥಿಕವಾಗಿ ಜರ್ಜರಿತವಾಗಿರುವ ಕುಟುಂಬಗಳಿಗೆ ಇದೊಂದು ವರದಾನ. ದೇಶವನ್ನು ಆರ್ಥಿಕ ಸಮಾನತೆಯತ್ತ ಕೊಂಡೊಯ್ಯಬಲ್ಲ ಉತ್ತಮ ಮಾರ್ಗ.

ಇಂತಹ ಕಲ್ಪನೆಯೊಂದಿಗೆ ಹುಟ್ಟಿಕೊಂಡ ಈ ವ್ಯವಸ್ಥೆಯು ದಿನೇ ದಿನೇ ತನ್ನ ಸ್ವರೂಪವನ್ನು ಬದಲಿಸುತ್ತ ತನ್ನ ಮೂಲ ಉದ್ದೇಶವನ್ನು ಮರೆತು ವಿವಿಧ ರೀತಿಯಲ್ಲಿ ವ್ಯಾಪಿಸಿದೆ. ನಿಗದಿತ ಅವಧಿಗಾಗಿ ರಚನೆಯಾದ ಈ ವ್ಯವಸ್ಥೆಯು ತನ್ನ ಅವಧಿಯನ್ನು ಮೀರಿದರೂ, ಪುನಃ ಪುನಃ ವಿಸ್ತರಣೆಯಾಗುತ್ತಿದೆಯೇ ಹೊರತು ಇನ್ನು ಇದನ್ನು ಹಿಂಪಡೆಯುವುದು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ತಲುಪಿದೆ. ಇಂದು ಎಲ್ಲಾ ತರಹದ ಅರ್ಜಿಗಳನ್ನೂ ಮೀಸಲಾತಿಯ ಪೂರ್ಣ ವಿವರಗಳನ್ನು ನೀಡುವುದು ಕಡ್ಡಾಯ. ಅಲ್ಲದೇ ಮೀಸಲಾತಿಗಾಗಿ ಎಲ್ಲರೂ ಪರದಾಡುವವರೇ. ತಾವು ಮೀಸಲಾತಿಗೆ ಅರ್ಹರೆಂದು ಹೇಳಿಕೊಂಡು ಬೀಗುವವರೇ. ಅದಕ್ಕಾಗಿ ಯಾವುದೇ ರೀತಿಯ ಸರ್ಕಸ್ಗಳನ್ನು ಮಾಡಲು ತಯಾರಿರುತ್ತಾರೆ. ಒಟ್ಟಾರೆಯಾಗಿ ಅದರ ಹೊರತು ಭಾರತದಲ್ಲಿ ಯಾವುದೇ ಕೆಲಸಗಳು ನಡೆಯುವುದು ಕಷ್ಟ.

ನಮ್ಮ ದೇಶದಲ್ಲಿ ಇಂದು ಹಲವಾರು ರೀತಿಯ ಮೀಸಲಾತಿಗಳನ್ನು ನೀಡಲಾಗುತ್ತದೆ. ಇದು ಜನರಿಂದಲೇ ಆರಿಸಿ ಬಂದ ‘ಜನಪ್ರತಿನಿಧಿ’ಗಳೆಂದು (ನಿಜವಾಗಿ ಪ್ರತಿನಿಧಿಸುವುದಿಲ್ಲವಾದರೂ) ಹೇಳಿಕೊಳ್ಳುವವರ ಉಡುಗೊರೆ. ಇವರು ತಮ್ಮ ಸ್ವಾರ್ಥಕ್ಕಾಗಿ, ತಮ್ಮ ಜೇಬು ತುಂಬಿಸಿಕೊಳ್ಳುವ ಸಲುವಾಗಿ ‘ಮೀಸಲಾತಿ’ ಎಂಬ ಪದದ ವ್ಯಾಖ್ಯೆಯನ್ನೇ ಬದಲಿಸಿದ್ದಾರೆ (ಕೆಲವು ಉತ್ತಮ ಜನಪ್ರತಿನಿಧಿಗಳು, ರಾಜಕಾರಣಿಗಳೂ ಇದ್ದಾರೆ). ಇದರ ಮೂಲಕ ಜನರನ್ನು ಆಲಸಿಗಳನ್ನಾಗಿ ಮಾಡಿ, ದೇಶವನ್ನು ಒಂದು ರೀತಿಯಲ್ಲಿ ಅಧೋಗತಿಗೆ ತಳ್ಳುತ್ತಿದ್ದಾರೆ. ಅದರ ಮೇಲಾಗಿ ‘ದೇಶ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ’ ಎನ್ನುವ ಘೋಷಣೆಗಳು ಬೇರೆ.

ಇರಲಿ… ಅಂತೂ ಇಂತೂ ಇಷ್ಟೊಂದು ವಿಸ್ತಾರವಾಗಿ ತನ್ನ ಕಬಂಧ ಬಾಹುವನ್ನು ಚಾಚಿರುವ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ ದಾರಿಗೆ ತರುವುದು ಬಹಳ ಕಷ್ಟ. ಅದು ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡಿದರೆ ಉತ್ತಮವೇ. ಅದಕ್ಕೆ ಯಾವುದೇ ತಕರಾರಿಲ್ಲ. ಪ್ರಸ್ತುತ ಜಾರಿಯಲ್ಲಿರುವ ಕೆಲವು ಮೀಸಲಾತಿಗಳಲ್ಲಿ, ಉದಾಹರಣೆಗೆ ಆದಾಯ ಆಧಾರಿತ, ಜಾತಿ ಆಧಾರಿತ, ಧರ್ಮ ಆಧಾರಿತ, ಪಂಗಡಗಳ ಜನಸಂಖ್ಯೆ ಆಧಾರಿತ… ಇವುಗಳಲ್ಲಿ ಕೆಲವನ್ನು ಒಪ್ಪಬಹುದು. ಆದರೆ, ಕೆಲವೊಂದು ವಿಷಯಗಳಲ್ಲಿ ಮೀಸಲಾತಿ ನೀಡುವುದರಿಂದ ಉಪಯೋಗಕ್ಕಿಂತ ತೊಂದರೆಗಳೇ ಹೆಚ್ಚು. ಅಂತಹ ಒಂದು ಅರ್ಥಹೀನ ಹಾಗೂ ಅಭಿವೃದ್ಧಿಗೆ ಮಾರಕವಾದ ‘ಸೌಲಭ್ಯ’ವೊಂದಿದೆ.

ಅದೇನೆಂದರೆ, ಉದ್ಯೋಗಕ್ಕಾಗಿ ಅಥವಾ ಬೇರೆ ಕೆಲವು ವಿಷಯಗಳಿಗಾಗಿ ನಡೆಸಲಾಗುವ ಪರೀಕ್ಷೆಗಳಲ್ಲಿ, ಉತ್ತೀರ್ಣರಾಗಲು ಅಗತ್ಯವಾಗಿರುವ ಅಂಕಗಳಲ್ಲಿಯೂ ಜಾತಿ ಆಧಾರಿತ ಮೀಸಲಾತಿಯನ್ನು ನೀಡಲಾಗುತ್ತಿದೆ. ಉದಾಹರಣೆಗೆ, ಅಂಚೆ ಕಛೇರಿಗಳ, ಕೆಲವೊಂದು ಬ್ಯಾಂಕ್ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಾಮಾನ್ಯ ಅಭ್ಯರ್ಥಿಗಳಿಗೆ 10 ಅಂಕ(ಉದಾಹರಣೆಗೆ) ನಿಗದಿಪಡಿಸಿದರೆ, ಕೆಲವು ಪಂಗಡಗಳ ಅಭ್ಯರ್ಥಿಗಳಿಗೆ 8 ಅಂಕಗಳನ್ನು ನಿಗದಿಪಡಿಸಿರುತ್ತಾರೆ. ಇದ್ಯಾವ ನ್ಯಾಯ ಸ್ವಾಮೀ?… ಒಂದು ವರ್ಗದ ಜನರ ಮೆದುಳು ಹೆಚ್ಚು ಕೆಲಸ ಮಾಡುತ್ತದೆ ಹಾಗೂ ಇನ್ನೊಂದು ವರ್ಗದ ಜನರ ಮೆದುಳು ಕಡಿಮೆ ಅಂತಲೇ? ದೇವರು ಮನುಷ್ಯನ ಸೃಷ್ಠಿಯಲ್ಲಿ, ದೇಹದ ಅಂಗಾಗಗಳಲ್ಲಿ ಯಾವುದೇ ತರಹದ ‘ಮೀಸಲಾತಿ’ಯನ್ನು ನೀಡಲಿಲ್ಲವೆಂದಾದ ಮೇಲೆ ಇಂತಹ ಕಾನೂನನ್ನು ತರಲು ನಾವ್ಯಾರು? ಪರೀಕ್ಷೆಗೆ ತೆರೆಬೇಕಾದ ಶುಲ್ಕದಲ್ಲಿ, ಲಭ್ಯವಿರುವ ಖಾಲಿ ಸೀಟುಗಳಲ್ಲಿ ಮೀಸಲಾತಿ ಇರಲಿ. ಕೊನೇಪಕ್ಷ ಅಂಕದಲ್ಲಾದರೂ ಸಮಾನ ನೀತಿ ಅನುಸರಿಸಬಹುದಲ್ಲವೇ?

ಇಂತಹ ಅರ್ಥಹೀನ ನೀತಿಗಳಿಂದ ಎಷ್ಟು ಅರ್ಹ ಅಭ್ಯರ್ಥಿಗಳು ಉದ್ಯೋಗ ವಂಚಿತರಾಗುತ್ತಾರೆ, ಎಷ್ಟು ದಿನಗಳ ಪರಿಶ್ರಮ ವ್ಯರ್ಥವಾಗುತ್ತದೆ, ಎಷ್ಟು ಕುಟುಂಬಗಳು ಬೀದಿಗೆ ಬೀಳುತ್ತವೆ ಗೊತ್ತೇ? ಹೀಗೆ ಪದೇ ಪದೇ ಪರೀಕ್ಷೆ ಬರೆದು ನಿರಾಶರಾದಾಗ ಅವರ ಆತ್ಮವಿಶ್ವಾಸ ಕುಂಠಿತವಾಗುತ್ತದೆ. ಉದಾಹರಣೆಗೆ, ಪ್ರಥಮ ಪಿಯುಸಿಯ ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿನಿ ತರಗತಿಯಲ್ಲಿ ಯಾವಾಗಲೂ ಗರಿಷ್ಠ ಅಂಕ ಪಡೆಯುವವಳು. ಹಾಗೆಂದ ಮಾತ್ರಕ್ಕೆ ಪುಸ್ತಕದ ಹುಳು ಅಲ್ಲ. ಎಲ್ಲಾ ರೀತಿಯ ಜ್ಙಾನ ಸಂಪಾದಿಸುವ ಆಸಕ್ತಿ ಹೊಂದಿದವಳು. ಉನ್ನತ ವ್ಯಾಸಂಗ ಮಾಡುವ ಇಚ್ಛೆ. ಹೆತ್ತವರ ಆದಾಯ ಇದಕ್ಕೆ ಪೂರಕವಾಗಿಲ್ಲ. ಯಾವುದೇ ರೀತಿಯ ಮೀಸಲಾತಿಗೆ ಒಳಪಡುವುದಿಲ್ಲ. (ಹಾಗೆಂದ ಮಾತ್ರಕ್ಕೆ ಸ್ಥಿತಿವಂತರೆಂದು ಷರಾ ಬರೆಯುವುದು ಅಸಾಧ್ಯ, ದೇಶದ ಅವ್ಯವಸ್ಥೆಯ ಪ್ರತೀಕವಾಗಿ). ಈಕೆ ವಿದ್ಯಾರ್ಥಿ ವೇತನಕ್ಕಾಗಿ ನಡೆಸಲ್ಪಡುವ ಒಂದು ಪ್ರಮುಖ ಹಾಗೂ ಪ್ರತಿಷ್ಠಿತ ಪರೀಕ್ಷೆಗೆ ಕಳೆದ ಕೆಲವು ವರ್ಷಗಳಿಂದ ಸತತ ಅಭ್ಯಾಸ ನಡೆಸಿದವಳು. ಆದರೆ ಇದರಲ್ಲಿ ಉತ್ತೀರ್ಣರಾಗಲು ರಾಷ್ಟ್ರ ಮಟ್ಟದ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದವರಿಗೆ 40 ಹಾಗೂ ಮೀಸಲಾತಿಗೆ ಒಳಪಡುವ ಕೆಲ ವರ್ಗಗಳ ಅಭ್ಯರ್ಥಿಗಳಿಗೆ 26 ಅಂಕಗಳನ್ನು ನಿಗದಿಪಡಿಸಲಾಗಿದೆ. ಹಾಗೂ ರಾಜ್ಯ ಮಟ್ಟದ ಪರೀಕ್ಷೆಯಲ್ಲಿ ಕ್ರಮವಾಗಿ 86 ಹಾಗೂ 66 ಅಂಕಗಳನ್ನು ನಿಗದಿಪಡಿಸಲಾಗಿದೆ. ಎಷ್ಟೊಂದು ಅಂತರ…??? ಇದರ ಪರಿಣಾಮವಾಗಿ ಈ ಹುಡುಗಿ ವಿದ್ಯಾರ್ಥಿ ವೇತನದಿಂದ ವಂಚಿತಳಾಗಿದ್ದಾಳೆ. ಹಾಗೂ ತನ್ನ ಪದವಿ ಹಾಗೂ ಉನ್ನತ ವ್ಯಾಸಂಗದವರೆಗಿನ ಶುಲ್ಕವನ್ನು ತಾನೇ ಭರಿಸಬೇಕಾದ ಪರಿಸ್ಥಿತಿ. ಕೆಲವರು ಹೇಳಬಹುದು… ಅವಳು ಇನ್ನೂ ಚೆನ್ನಾಗಿ ಅಭ್ಯಾಸ ಮಾಡಬೇಕಿತ್ತೆಂದು. ಆದರೆ, ನನ್ನ ಪ್ರಶ್ನೆ… ಹಾಗಾದರೆ ಆ ಅಂಕಗಳ ಮೀಸಲಾತಿಗೆ ಒಳಪಡುವವರು ಕಠಿಣ ಅಭ್ಯಾಸ ನಡೆಸುವುದು ಬೇಡವೇ? ಅವರು ಸ್ವಲ್ಪ ಮಾತ್ರ ಓದಿದರೆ ಸಾಕೇ? ಈ ಹುಡುಗಿ ಮಾತ್ರ ಯಾವಾಗಲೂ ಪರಿಶ್ರಮ ಪಟ್ಟೇ ಫಲ ಪಡೆಯಬೇಕೇ? ಕೆಲವರಿಗೆ ಮಾತ್ರ ತುಂಬಾ ಸುಲಭವಾಗಿ ಫಲ ಸಿಗಲಿ ಎನ್ನುವುದು ಯಾವ ನ್ಯಾಯ? ಈ ನೀತಿಯ ಅರ್ಥವೇನು? ಆ ಮೀಸಲಾತಿಗೊಳಪಡುವವರು ಕಠಿಣ ಪರಿಶ್ರಮ ಪಟ್ಟರೂ 40 ಅಂಕ ಗಳಿಸಲು ಅಸಾಧ್ಯ ಎಂದು ಸುತ್ತಿ ಬಳಸಿ ಹೇಳುವ ವಿಧಾನವೇ? ಅದೂ ಕೂಡ ಜಾತಿ ಆಧಾರಿತವಾಗಿ… ಅಥವಾ ಈ ಪಂಗಡಗಳ ಜನರು ಆಲಸಿಗಳಾಗಲಿ, ಅವರ ಜ್ಞಾನ 26 ಅಂಕಗಳಿಗೇ ‘ಮೀಸಲಾ’ಗಿರಲಿ, ಹೀಗಾದಾಗ ಮಾತ್ರ ನಾವು ಅವರಿಗೆ ಅರಿವಾಗದಂತೆ ಹೊಸ ಹೊಸ ರೀತಿಯ ಜನಪ್ರಿಯ ಘೋಷಣೆಗಳನ್ನು ಮಾಡುತ್ತಾ, ಹಲವಾರು ರೀತಿಯ ‘ಭಾಗ್ಯ’ಗಳನ್ನು ನೀಡುತ್ತಾ ನಮ್ಮ ಓಟನ್ನು ಭದ್ರಮಾಡಿಕೊಳ್ಳೋಣ ಎಂಬ ದೂ(ದು)ರಾಲೋಚನೆಯೇ?

ಯಾವುದೇ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಇದು ಸರಿಯಾದ ಮಾರ್ಗವೇ? ನಿಜವಾಗಿಯೂ ಇದರಿಂದ ಆರ್ಥಿಕವಾಗಿ ಅಥವಾ ಯಾವುದೇ ರೀತಿಯಲ್ಲಾದರೂ ಸಮಾನತೆ ಮೂಡಲು ಸಾಧ್ಯವೇ? ಈ ಪ್ರಶ್ನೆಗಳಿಗೆಲ್ಲಾ ಉತ್ತರಿಸುವವರಾರು? ಆದರೆ ಇವೆಲ್ಲದರ ಪರಿಣಾಮವನ್ನು ಅನುಭವಿಸುವವರು ಮಾತ್ರ ಅಂತಹ ಪ್ರತಿಭಾನ್ವಿತ ಮಕ್ಕಳು ಹಾಗೂ ಉತ್ತಮ ಪ್ರಜೆಗಳಾಗುವ, ಶಿಕ್ಷಿತರಾಗುವ ಕನಸು ಕಂಡಿರುವ, ಕಠಿಣ ಪರಿಶ್ರಮ ಪಡುವ ಜನರು. ಮುಗ್ಧ ಮನಸ್ಸಿನ ಮಕ್ಕಳಲ್ಲಿ, ಅವರ ಪ್ರತಿಭೆಯಲ್ಲಿ ಇಂತಹ ಮೀಸಲಾತಿಯೆನ್ನುವ ವಿಷಬೀಜ ಬಿತ್ತುತ್ತಿರುವ ರಾಜಕಾರಣಿಗಳನ್ನು ಕ್ಷಮಿಸಬಹುದೇ? ಅಂಕಗಳು ಅಥವಾ ಜ್ಞಾನದಲ್ಲಿ ಮೀಸಲಾತಿ ಕೊಡುವುದಾದರೆ ವಿಮಾನ, ಹೆಲಿಕಾಪ್ಟರ್, ರಾಕೆಟ್, ಯುದ್ಧ ಸಲಕರಣೆಗಳ ತಯಾರಿಗೆ ನೇಮಿಸಲ್ಪಡುವ ತಾಂತ್ರಿಕ ಎಂಜಿನಿಯರುಗಳ ನೇಮಕಾತಿಯಲ್ಲಿ ಕೊಟ್ಟು ನೋಡಿ… ಅದರ ಭೀಕರ ಪರಿಣಾಮ ನೋಡಿದಾಗ ಜ್ಞಾನ ಮತ್ತು ಅರೆಜ್ಞಾನದ ನಡುವಿನ ವ್ಯತ್ಯಾಸ ಅರ್ಥವಾದೀತು. ರಾಜಕಾರಿಣಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಇಂತಹ ಯೋಜನೆಗಳ ಘೋಷಣೆ ಮಾಡುತ್ತಾರೆಯೇ ಹೊರತು, ಜನರ ಅಭಿವೃದ್ಧಿಗಾಗಿ ಖಂಡಿತಾ ಅಲ್ಲ. ಇಂತಹ ಜನಪ್ರಿಯ ಘೋಷಣೆಗಳಿಗೆ ಜನರು ಮರುಳಾಗುತ್ತಾರೆ. ಅವರಿಗೆ ಓಟು ಹಾಕುತ್ತಾರೆ. ಇದರಿಂದ ರಾಜಕಾರಿಣಿಗಳ ಆರ್ಥಿಕ ಅಭಿವೃದ್ಧಿಯಾಗುತ್ತದೆಯೇ ಹೊರತು ಜನರದ್ದಲ್ಲ. ಅವರ ಮಕ್ಕಳು, ಮೊಮ್ಮಕ್ಕಳು ಉನ್ನತ ವ್ಯಾಸಂಗ ಪಡೆದು ಸುಖವಾಗಿ ಜೀವನ ಮಾಡುತ್ತರೆಯೇ ವಿನಃ, ಜನರ ಜೀವನ ಮಟ್ಟದಲ್ಲಿ ಭಾರೀ ಬದಲಾವಣೆಯೇನೂ ಆಗುವುದಿಲ್ಲ. ಮೀಸಲಾತಿಗೊಳಪಡುವವರಿಗೆ ಈ ದುರುಳರ ಸ್ವಾರ್ಥದ ಅರಿವಾಗುವುದೇ ಇಲ್ಲ. ಈ ಜನಪ್ರತಿನಿಧಿಗಳೆನ್ನುವವರು ತಮ್ಮನ್ನು ಆಟದ ದಾಳವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಎನ್ನುವ ಯೋಚನೆಯೂ ಇವರತ್ತ ಸುಳಿಯುವುದಿಲ್ಲ.

ಇಂತಹ ಸುಲಭವಾಗಿ ಸಿಗುವ ಲಾಭದಾಯಕವೆನಿಸುವ ಯೋಜನೆಗಳಿಂದ ಜನರು ಆಲಸಿಗಳಾಗುತ್ತಿದ್ದಾರೆ. ಮಕ್ಕಳು ಕಠಿಣ ಅಭ್ಯಾಸ ಮಾಡಲು ಮನಸ್ಸು ಮಾಡುವುದಿಲ್ಲ. ಎಲ್ಲಾ ರೀತಿಯಲ್ಲೂ ಸುಲಭ ದಾರಿ ಸಿಗುವಾಗ ಕಷ್ಟ ಪಡಲು ಯಾರು ತಾನೇ ಇಷ್ಟ ಪಡುತ್ತಾರೆ? ರಾಜಕಾರಣಿಗಳ ಉದ್ದೇಶವೇ ಹಾಗಿರುತ್ತದೆ. ಘೋಷಣೆಗಳನ್ನು ಮಾಡಲೂ ಬೇಕು, ಕುರ್ಚಿ ಭದ್ರವಾಗಿರಬೇಕು, ಆದರೆ ಹಿಂದುಳಿದವರು ಹಿಂದುಳಿದವರಾಗಿಯೇ ಇದ್ದು ನಮಗೆ ಓಟು ನೀಡುವ ಮಷೀನುಗಳಾಗಬೇಕು. ಇವೆಲ್ಲದರ ಮುಂದಿನ ಪರಿಣಾಮವನ್ನು ಮಾತ್ರ ಎಲ್ಲರೂ ಅನುಭವಿಸಬೇಕಾಗುತ್ತದೆ. ಇಂತಹ ‘ಭಾಗ್ಯ’ಗಳು ಎಲ್ಲಿಯವರೆಗೆ? ಸ್ವಾರ್ಥ ರಾಜಕಾರಿಣಿಗಳು ಇರುವವರೆಗೆ? ಮುಂದೆ??? ಇದನ್ನೆಲ್ಲಾ ಜನ ಅರ್ಥ ಮಾಡಿಕೊಳ್ಳುವುದು ಯಾವಾಗ?

ಯಾವುದೇ ರೀತಿಯ ಅಭಿವೃದ್ಧಿಗೆ ಪೂರಕವಾದ ಮೀಸಲಾತಿ ಯೋಜನೆಗಳನ್ನು ಸ್ವೀಕರಿಸೋಣ, ಗೌರವಿಸೋಣ. ಆದರೆ ಗಳಿಸಬೇಕಾದ ಅಂಕಗಳಲ್ಲಿ, ಪ್ರತಿಭೆಗಳಲ್ಲಿ ಮೀಸಲಾತಿ ಖಂಡಿತಾ ಬೇಡ. ಎಲ್ಲಾ ಜನರೂ ಶ್ರಮ ಪಟ್ಟು ಓದಿ, ಅತ್ಯುತ್ತಮ ಅಂಕ ಗಳಿಸಿ, ಅರ್ಹರಾಗಿಯೇ ವಿದ್ಯಾರ್ಥಿ ವೇತನ ಹಾಗೂ ಉದ್ಯೋಗಗಳನ್ನು ಪಡೆಯಲಿ. ಬೇಕಾದರೆ ಶುಲ್ಕದಲ್ಲಿ ರಿಯಾಯಿತಿ ಇರಲಿ. ಅದೂ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ನಿಗದಿ ಪಡಿಸಿದರೆ ಉತ್ತಮ. ಎಲ್ಲಾ ವರ್ಗಗಳಲ್ಲಿಯೂ, ಜಾತಿಗಳಲ್ಲಿಯೂ, ಧರ್ಮಗಳಲ್ಲಿಯೂ ಪ್ರತಿಭಾನ್ವಿತರಿದ್ದಾರೆ. ಯಾರಿಗೂ ಅನ್ಯಾಯವಾಗುವುದು ಬೇಡ. ಯಾರು ಇಂತಹ ಮೀಸಲಾತಿಗಳಿಲ್ಲದೇ ಹೆಚ್ಚಿನ ಸಾಧನೆ ಮಾಡುತ್ತಾರೋ, ದೇಶದ ಅಭಿವೃದ್ಧಿಗೆ ಸಹಕರಿಸುತ್ತಾರೋ ಅಂತಹವರು ನಿಜವಾದ ಸ್ವಾಭಿಮಾನಿಗಳು. ಇನ್ನಾದರೂ ಜನ ಎಚ್ಚೆತ್ತುಕೊಳ್ಳಲಿ ಎಂದು ಹಾರೈಸೋಣ. ವ್ಯವಸ್ಥೆಯಲ್ಲಿ ಉತ್ತಮ ಬದಲಾವಣೆ ತರಲು ಎಲ್ಲರೂ ಪ್ರಯತ್ನಿಸೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Namratha K

Resident of Puttur. Graduate in Civil Engineering from VTU. Worked as Civil Engineer in Bengaluru for two years. Presently in an attempt to persue Photography, a long term passion, as her career.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!