ಅಂಕಣ

ನಾನಿದರ ತಾತ್ಕಾಲಿಕ ಒಡೆಯನಷ್ಟೇ

ಸೈರನ್ ಮೊಳಗಿಸುತ್ತಾ ಶರವೇಗದಲ್ಲಿ ಸಾಗುವ ಅಂಬ್ಯುಲೆನ್ಸ್ ಗಳು, ಕೈಕಾಲು ಮುರಿದ ಅಸಹಾಯಕ ಗಾಯಾಳುಗಳನ್ನು ಹೊತ್ತೊಯ್ಯುತ್ತಿರುವ ಗಾಲಿಕುರ್ಚಿಗಳು, ಅಂಗಾಂಗಗಳ ಸ್ವಯಂ ನಿಯಂತ್ರಣ ಕಳೆದುಕೊಂಡು ತುರ್ತುನಿಗಾ ಘಟಕದಲ್ಲಿ ಕೃತಕ ಉಸಿರಾಟ ಯಂತ್ರದಿಂದ ಆಮ್ಲಜನಕವನ್ನು ದೇಹಕ್ಕೆ ಪೂರೈಸಿಕೊಳ್ಳುತ್ತಾ ನಿಸ್ತೇಜ ಕಣ್ಣುಗಳಿಂದ ದೃಷ್ಟಿ ಕದಲಿಸದೆ ಮಲಗಿರುವ ರೋಗಿಗಳು… ಇದಲ್ಲವೇ ನಶ್ವರ ಬದುಕಿನ ಸ್ಪಷ್ಟ ನಿದರ್ಶನಗಳು? ಬದುಕು ನಮಗೆ ಮತ್ತೆ ಮತ್ತೆ ನಶ್ವರತೆಯ ಪಾಠವನ್ನು ಬೋಧಿಸುತ್ತಲೇ ಇದೆ! ಆದರೆ ನಾವು ಮಾತ್ರ ಚಿರಂಜೀವಿಗಳೆಂಬ ಭ್ರಮೆಯಲ್ಲಿ  ನಮ್ಮ ಕೊರತೆಗಳನ್ನು ಪೂರೈಸಿಕೊಳ್ಳುತ್ತಾ ಅಸ್ತಿತ್ವದ ಉಳಿವಿಗಾಗಿ ಹೋರಾಡುತ್ತಲೇ ಇರುತ್ತೇವೆ. ಪ್ರತೀ ಸೆಕುಂಡಿಗೊಮ್ಮೆ ಬಡಿದುಕೊಳ್ಳುತ್ತಿರುವ ಗಡಿಯಾರದ ಮುಳ್ಳಿನ ಟಿಕ್ ಟಿಕ್ ಸದ್ದು ಕೂಡ ಸಾವಿನೆಡೆಗೆ ನಾವಿಡುತ್ತಿರುವ ಹೆಜ್ಜೆಸಪ್ಪಳಗಳು.! ಪ್ರತೀ ಸಂಜೆಯ ಸೂರ್ಯಾಸ್ತದ ಸೊಬಗನ್ನು ಸವಿಯುತ್ತಾ ಸೂರ್ಯ ಮರೆಯಾಗುತ್ತಿದ್ದಂತೆಯೇ ಆಯುಷ್ಯದ ಒಂದು ದಿನ ಕ್ಷಯಿಸಿ ಹೋಗಿ ಸಾವಿಗೆ ಹತ್ತಿರವಾಗುತ್ತಿದ್ದೇವೆ.! ನಗುತ್ತಲೇ ಮನೆಯಿಂದ ಹೊರಟವರು ಶವವಾಗಿ ಮರಳಿದಾಗಲೂ, ನಿದ್ರೆಗೆಂದು ಒರಗಿದವರು ಚಿರನಿದ್ರೆಗೆ ಜಾರಿದಾಗಲೂ, ಸುತ್ತಲೂ ಹತ್ತಾರು ಹೆಣಗಳು ಉರುಳಿದಾಗಲೂ, ಬದುಕು ನಶ್ವರವೆಂಬ ಪ್ರಜ್ಞೆ ನಮ್ಮಲ್ಲಿ ಜಾಗ್ರತವಾಗುವುದೇ ಇಲ್ಲ! ಬಹುಷಃ ಈ ಪ್ರಪಂಚವನ್ನು ಮುಂದುವರಿಸುತ್ತಿರುವ ಕಾಣದ ಶಕ್ತಿಯೊಂದು ಅಂತಹ ಪ್ರಜ್ಞೆ ನಮ್ಮಲ್ಲಿ ಜಾಗ್ರತವಾಗದಂತೆ ತಡೆಯೊಡ್ಡುತ್ತಿರಬಹುದೇನೋ?ಅದಿಲ್ಲದೇ ಹೋದಲ್ಲಿ ಬದುಕಿನ ನಶ್ವರತೆಯನ್ನು ಮನಗಂಡು ಸತ್ಯಶೋಧನೆಗೆ ಹೊರಟ ಬುದ್ಧರೂ, ಮಹಾವೀರರೂ ಎಲ್ಲೆಲ್ಲೂ ತುಂಬಿಕೊಳ್ಳುತ್ತಿದ್ದರು! ಅಥವಾ ಸಂಸಾರದ ಬಂಧನದಿಂದ ಬಿಡುಗಡೆ ಹೊಂದಿ ಹಿಮಾಲಯದ ಗಿರಿ ಕಂದರಗಳಲ್ಲಿ, ಕಾಡುಮೇಡುಗಳಲ್ಲಿ ಅಲೆದಾಡುವ ಸಾಧು, ಸಂನ್ಯಾಸಿ, ವಿರಾಗಿಗಳಲ್ಲಿ ನಾವೂ ಒಬ್ಬರಾಗಿರುತ್ತಿದ್ದೆವು.

ಬದುಕಿನ ನಶ್ವರತೆಯ ಪ್ರಜ್ಞೆ ಮೂಡದಿರುವ ಕಾರಣದಿಂದಲೇ ಹಣದ ಮದ, ಅಧಿಕಾರದ ದರ್ಪ, ಕೀರ್ತಿಯ ವ್ಯಾಮೋಹದಿಂದಾಗಿ ಮನುಷ್ಯ ಅಹಂಕಾರದಿಂದ ಮೆರೆದಾಡುತ್ತಿದ್ದಾನೆ. ದೇವರು ಮನುಷ್ಯನಿಗೆಂದೇ ಒಂದಷ್ಟು ದೈವೀಗುಣಗಳನ್ನು ಬಳುವಳಿಯಾಗಿ ಕೊಟ್ಟಿದ್ದಾನೆ. ಆ ಗುಣಗಳನ್ನೆಲ್ಲಾ ಗಾಳಿಗೆ ತೂರಿ ಅಹಂಕಾರ-ದರ್ಪದ ರಾಕ್ಷಸೀ ಗುಣಗಳಿಂದ ಮನುಷ್ಯ ವರ್ತಿಸುವಾಗ ಅದನ್ನು ಸಮತೋಲನ ಸ್ಥಿತಿಗೆ ತರುವುದಕ್ಕಾಗಿಯೇ ಆಗಾಗ ದೈಹಿಕ, ಮಾನಸಿಕ ಆಘಾತಗಳ ಮೂಲಕವೋ, ಪ್ರಾಕೃತಿಕ ವಿಕೋಪಗಳ ಮೂಲಕವೋ ಅಗೋಚರ ಶಕ್ತಿಯೊಂದು ಮನುಷ್ಯನನ್ನು ಎಚ್ಚರಿಸುತ್ತಲೇ ಆತನ ಹದ್ದುಮೀರಿದ ವರ್ತನೆಗೆ ಕಡಿವಾಣ ಹಾಕುತ್ತಿರುತ್ತದೆ. ಆದರೆ ಮನುಷ್ಯ ಮಾತ್ರ ತಾನು ಆ ಆಘಾತದಿಂದ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳುತ್ತಲೇ ಮತ್ತೆ ಯಥಾಪ್ರಕಾರ ಅಹಂಕಾರ, ದರ್ಪ, ಮತ್ಸರಗಳ ದಾಸನಾಗಿ ತಾನೊಬ್ಬ ಶಾಶ್ವತನೆಂಬ ಭ್ರಮೆಯಲ್ಲಿ ಮುಳುಗಿ ಮೆರೆದಾಡುತ್ತಿರುತ್ತಾನೆ.

ನಶ್ವರತೆಯ ಪರಿಕಲ್ಪನೆಯಲ್ಲಿ ನಾವು ನಿರಾಶಾವಾದಿಗಳಾಗಿ ಬದುಕಬೇಕೆಂಬುದು ನನ್ನ ವಾದವಲ್ಲ. ಸನ್ಮಾರ್ಗದಲ್ಲಿ ಹೆಜ್ಜೆಯಿಟ್ಟು ಸದಾಶೆಯಿಂದ ಬದುಕನ್ನು ರೂಪಿಸಿಕೊಳ್ಳುತ್ತಾ, ಸಂಪತ್ತು, ಕೀರ್ತಿ, ಐಶ್ವರ್ಯ ನಮ್ಮನ್ನು ಅರಸಿ ಬಂದಾಗಲೂ ‘ನಾನಿದರ ತಾತ್ಕಾಲಿಕ ಒಡೆಯನಷ್ಟೇ’ ಅನ್ನುವ ಗೀತೆಯ ಮಾತಿನಂತೆ ಬದುಕಿನ ನಶ್ವರತೆಯ ಪ್ರಜ್ಞೆಯೊಂದು ಸದಾಕಾಲ ಹಸಿರಾಗಿದ್ದಾಗಲಷ್ಟೇ  ಮನುಷ್ಯನ ಹದ್ದು ಮೀರಿದ ಹಾರಾಟ ಹೋರಾಟಕ್ಕೊಂದು ಕೊನೆಯಾಗುತ್ತದೆನ್ನುವುದು ನನ್ನ ಅಭಿಮತ. ಅಧ್ಯಾತ್ಮ ನಮಗೆ ಬೋಧಿಸುವುದು ಕೂಡ ಇದನ್ನೇ.!

-ಉದಯಭಾಸ್ಕರ್ ಸುಳ್ಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Udayabhaskar Sullia

ಮಡಿಕೇರಿ ತಾಲೂಕಿನ ಪೆರಾಜೆಯಲ್ಲಿ ಜನಿಸಿದ್ದು ಪ್ರಸ್ತುತ ಸುಳ್ಯದಲ್ಲಿ ವಾಸ್ತವ್ಯ. ಜೀವನ ನಿರ್ವಹಣೆಗಾಗಿ ಸ್ವ ಉದ್ಯೋಗ ಹೊಂದಿರುತ್ತೇನೆ. ದೇಶಭಕ್ತಿಯ ಭಾಷಣ, ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದು, ಹಳೆಯ ಸಿನೆಮಾ ಹಾಡು, ಭಾವಗೀತೆ, ಭಕ್ತಿಗೀತೆಗಳನ್ನು ಆಲಿಸುವುದು, ಸಮಾಜಸೇವೆ, ಸದ್ವಿಚಾರ ಪ್ರಸಾರ... ಇವು ನನ್ನ ಆಸಕ್ತಿಯ ಕ್ಷೇತ್ರಗಳು. ಭಜನೆ ಹಾಡುವುದು, ಕವನ ರಚನೆ, ಸಾಮಾಜಿಕ-ದೇಶಭಕ್ತಿ- ಸಂಸ್ಕೃತಿಗಳ ಕುರಿತಾದ ಚಿಕ್ಕಪುಟ್ಟ ಲೇಖನಗಳನ್ನು ಬರೆಯುವುದು ಹಾಗೂ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಸದ್ಗ್ರಂಥಗಳ ಅಧ್ಯಯನ.. ಇವು ನನ್ನ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!